ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Wednesday, May 19, 2010

ವಿರಾಟಪರ್ವ: ೦೯. ಒಂಬತ್ತನೆಯ ಸಂಧಿ

ಸೂ.ರಾಯ ಕೌರವ ಸೈನ್ಯ ಕದಳೀ
ವಾಯುವುತ್ತರ ಸಹಿತ ನಿಜಪರ
ರಾಯ ನಂದನ ಬಂದು ಹೊಕ್ಕನು ಮತ್ಸ್ಯಪುರವರವ

ಕೇಳು ಜನಮೇಜಯ ಧರಿತ್ರೀ
ಪಾಲ ಭಂಗದಲಖಿಳ ಕೌರವ
ಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು
ಮೇಲು ಮುಸುಕಿನ ಮೊಗದ ವಾದ್ಯದ
ಮೇಳ ಮೋನದಲಖಿಳ ನೃಪರು ನಿ
ಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ ೦೧

ಬಳಿಕ ಫಲುಗುಣನತ್ತಲಾ ಮರ
ದೊಳಗೆ ಕೈದುವನಿರಿಸಿ ಮುನ್ನಿನ
ಹುಲು ರಥವ ಮೇಳೈಸಿ ಸಾರಥಿತನವನಳವಡಿಸೆ
ಇಳಿದು ಪಾರ್ಥನ ಮೈದಡವಿ ಕಪಿ
ಕುಲಲಲಾಮನು ವನಕೆ ಹಾಯ್ದನು
ಹೊಳಲ ಹೊರೆಯಲಿ ನಿಂದು ನಗುತುತ್ತರನೊಳಿಂತೆಂದ ೦೨

ಕರೆದು ದೂತರಿಗರುಹು ನೀನೇ
ಧುರವ ಜಯಿಸಿದೆನೆನ್ನು ನಾವಿ
ದ್ದಿರವನರುಹದಿರಿಂದು ಪಸರಿಸು ನಿನ್ನ ವಿಕ್ರಮವ
ಅರಸ ನಿನ್ನನೆ ಮನ್ನಿಸಲಿ ಪುರ
ಪರಿಜನಂಗಳು ನಿನ್ನ ವಿಜಯದ
ಹರುಷದಲಿ ಹೆಚ್ಚಿರಲಿ ನೇಮಿಸಿದಂತೆ ಮಾಡೆಂದ ೦೩

ಎನಲು ನೀನೇ ಬಲ್ಲ ಕರ ಲೇ
ಸೆನುತ ದೂತರ ಕರೆದು ಮತ್ಸ್ಯನ
ತನಯ ಕೌರವ ಬಲವ ಜಯಿಸಿದನೆಂದು ಪೇಳುವುದು
ಜನಕನಲ್ಲಿಗೆ ಪೋಗಿಯೆಂದಾ
ತನು ನಿಯಾಮಿಸುತಿರ್ದನತ್ತಲು
ಜನಪ ಕುಂತೀಸುತನು ಸಹಿತೈತಂದನರಮನೆಗೆ ೦೪

ಅರಮನೆಯ ಹೊಕ್ಕವನಿಪತಿಯು
ತ್ತರನ ಕಾಣದೆ ಕಂದನೆತ್ತಲು
ಸರಿದನೆನೆ ರಾಣಿಯರು ಬಿನ್ನವಿಸಿದರು ಭೂಪತಿಗೆ
ಕುರು ಬಲವನಂಗೈಸೆ ಮಿಗೆಯು
ತ್ತರೆಯ ಗುರು ಸಾರಥಿತನವನನು
ಕರಿಸಿದನು ಕೆಲಬಲನ ಹಾರದೆ ಕದನಕೈದಿದನು ೦೫

ಎಂದರೊಡಲೊಳು ಕೂರಲಗು ಮುರಿ
ದಂದದಲಿ ಕಳವಳಿಸಿದನು ಮನ
ನೊಂದನಕಟ ಕುಮಾರನೆತ್ತಲು ರಾಯ ದಳವೆತ್ತ
ಬಂದವರು ಭೀಷ್ಮಾದಿಗಳು ತಾ
ನಿಂದು ತರಹರಿಸುವೊಡೆ ತಾನೇ
ನಿಂದುಧರನೇ ಮರುಳಲಾ ಮಗನೆನುತ ಚಿಂತಿಸಿದ ೦೬

ಮಗಗೆ ಪಡಿಬಲವಾಗಿ ಬಲು ಮಂ
ತ್ರಿಗಳನವನಿಪ ಬೀಳುಗೊಟ್ಟನು
ದುಗುಡದಿಂದಿರೆ ಹೊಳಲ ಕೈಸೂರೆಗಳ ಕಳಕಳದ
ಮೊಗದ ಹರುಷದಲಖಿಳ ದೂತಾ
ಳಿಗಳು ಬಂದುದು ಗುಡಿಯ ಕಟ್ಟಿಸು
ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ ೦೭

ರಾಯ ಕುವರ ಪಿತಾಮಹನು ರಿಪು
ರಾಯ ಕುವರ ಕುಠಾರ ಕೌರವ
ರಾಯ ಥಟ್ಟು ವಿಭಾಡ ಕುರುಕುಲ ಗಜಕೆ ಪಂಚಾಸ್ಯ
ಜೀಯ ಬಿನ್ನಹ ಕರ್ಣ ಗುರು ಗಾಂ
ಗೇಯ ಮೊದಲಾದಖಿಳ ಕೌರವ
ರಾಯ ದಳವನು ಗೆಲಿದು ಉತ್ತರ ತುರುವ ಮರಳಿಚಿದ ೦೮

ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಬಹಳ ಹರುಷದ
ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು
ಲಾಲಿಸುತ ಸರ್ವಾಂಗ ಹರುಷದೊ
ಳಾಳೆ ಜನಪ ಪಸಾಯಿತವ ದೂ
ತಾಳಿಗಿತ್ತನು ಸುಲಿದರವದಿರು ರಾಯನೋಲಗವ ೦೯

ಇದಿರುಗೊಳ ಹೇಳೆನಲು ಸರ್ವಾಂ
ಗದಲಿ ಮಣಿ ಮೌಕ್ತಿಕದ ಸಿಂಗಾ
ರದ ಸುರೇಖೆಯ ಲಲಿತ ಚಿತ್ರಾವಳಿಯ ಮುಸುಕುಗಳ
ಸುದತಿಯರು ಹೊರವಂಟರೊಗ್ಗಿನ
ಮೃದು ಮೃದಂಗದ ಕಹಳೆಗಳು ಸಂ
ಪದದ ಸೊಂಪಿನಲೆಸೆಯೆ ರಾಜಾಂಗನೆಯರನುವಾಯ್ತು ೧೦

ಕವಿದು ನೂಕುವ ಹರುಷವನು ಸಂ
ತವಿಸಲರಿಯೆನು ಕಂಕ ನಿನ್ನೊಡ
ನೆವಗೆ ವಿಮಳ ದ್ಯೂತಕೇಳಿಗೆ ಚಿತ್ತವಾಯ್ತೆನಲು
ಅವನಿಪತಿ ಕೇಳ್ ಜೂಜಿನಲಿ ಪಾಂ
ಡವರು ಸಿಲುಕಿದರವರ ವಿಧಿಯನು
ಭುವನದಲಿ ಬಲ್ಲವರದಾರೆಂದನು ವಿರಾಟಂಗೆ ೧೧

ಅವರು ರಾಜ್ಯವನೊಡ್ಡಿ ಸೋತವೊ
ಲೆವಗೆ ಪಣ ಬೇರಿಲ್ಲ ಹರ್ಷೋ
ತ್ಸವ ಕುಮಾರಾಭ್ಯುದಯ ವಿಜಯಶ್ರವಣ ಸುಖ ಮಿಗಲು
ಎವಗೆ ಮನವಾಯ್ತೊಡ್ಡು ಸಾರಿಯ
ನಿವಹವನು ಹೂಡೆನಲು ಹೂಡಿದ
ನವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು ೧೨

ಕೇಳಿ ಸಮತಳಿಸಿತ್ತು ಮತ್ಸ್ಯ ನೃ
ಪಾಲನೆಂದನು ಕಂಕ ನೋಡೈ
ಕಾಳಗವನುತ್ತರನು ಗೆಲಿದನು ರಾಯ ಥಟ್ಟಿನಲಿ
ಶೂಲಪಾಣಿಗೆ ಸೆಡೆಯದಹಿತ ಭ
ಟಾಳಿ ಸೋತುದು ದಿವಿಜ ನರರೊಳು
ಹೋಲುವವರುಂಟೇ ಕುಮಾರನನೇನ ಹೇಳೆಂದ ೧೩

ಸೋತುದುಂಟರಿ ಸೇನೆ ಸುರಭಿ
ವ್ರಾತ ಮರಳಿದುದುಂಟು ಗೆಲವಿದು
ಕೌತುಕವಲೇ ಬಗೆಯಲದ್ಭುತವೆಮ್ಮ ಚಿತ್ತದಲಿ
ಮಾತು ಹೋಲುವೆಯಹುದು ಜಗ ವಿ
ಖ್ಯಾತ ಸಾರಥಿಯಿರೆ ಕುಮಾರಗೆ
ಭೀತಿ ಬಳಿಕೆಲ್ಲಿಯದು ತಪ್ಪೇನೆಂದನಾ ಕಂಕ ೧೪

ಎಲೆ ಮರುಳೆ ಸನ್ಯಾಸಿ ಮತ್ಸರ
ದೊಳಗೆ ಮುಳುಗಿದ ಚಿತ್ತ ನಿನ್ನದು
ಗೆಲವಿನಲಿ ಸಂದೇಹವೇ ಹೇಳಾವುದದ್ಭುತವು
ಅಳುಕುವನೆ ಸುಕುಮಾರ ಸಾರಥಿ
ಬಲುಹನುಳ್ಳವನೇ ನಪುಂಸಕ
ನಲಿ ನಿರಂತರ ಪಕ್ಷವೆಂದು ವಿರಾಟ ಖತಿಗೊಂಡ ೧೫

ನಾರಿಯರ ಮೈಗುರುಹು ಪುರುಷರ
ಚಾರು ಚಿಹ್ನವ ಕೂಡಿಕೊಂಡಿಹ
ಸಾರಥಿಯ ದೆಸೆಯಿಂದ ಕುವರನು ಗೆಲಿದನೆಂಬುದನು
ಸೈರಿಸಿದೆ ನಾನಿನ್ನವರೆ ಮ
ತ್ತಾರೊಡನೆ ಮಾತಾಡದಿರು ನಿ
ಸ್ಸಾರ ಹೃದಯನು ಕಂಕ ನೀ ದುಷ್ಟಾತ್ಮ ಹೋಗೆಂದ ೧೬

ಖತಿಯ ಹಿಡಿಯದಿರರಸ ದಿಟ ನೀ
ನತಿಶಯವ ಬಯಸುವರೆ ಜನ ಸ
ಮ್ಮತವು ಸಾರಥಿ ಗೆಲಿದನೆಂದೇ ಹೊಯಿಸು ಡಂಗುರವ
ಸುತನು ಸಾರಥಿಯೆಂದು ಸಾರಿಸು
ವಿತಥವಲ್ಲಿದು ಪಕ್ಷಪಾತ
ಸ್ಥಿತಿಯನಾಡೆವು ಕವಲು ನಾಲಗೆಯಿಲ್ಲ ತನಗೆಂದ ೧೭

ನಿನ್ನ ಮೋಹದ ಕಂಗಳಿಗೆ ಮಗ
ನುನ್ನತೋನ್ನತ ಸತ್ವನೆಂದೇ
ಮುನ್ನ ತೋರಿತು ಹೊಲ್ಲೆಹವೆ ಸಂಸಾರಕ ಭ್ರಮೆಗೆ
ಇನ್ನು ಗೆಲಿದವನಾ ಬೃಹನ್ನಳೆ
ನಿನ್ನ ಮಗಗಳುಕುವರೆ ಭೀಷ್ಮನು
ಕರ್ಣ ಕೃಪ ಗುರು ಗುರುತನೂಭವರೆಂದನಾ ಕಂಕ ೧೮

ಎನಲು ಖತಿ ಬಿಗುಹೇರಿ ಹಲು ಹಲು
ದಿನುತೆ ಕಂಗಳಲುರಿಯನುಗುಳುತ
ಕನಲಿ ಬಿಗಿದೌಡೊತ್ತಿ ಕನಕದ ಸಾರಿಯನು ನೆಗಹಿ
ಜನಪತಿಯ ಹಣೆಯೊಡೆಯಲಿಡೆ ಜಾ
ಜಿನ ಗಿರಿಯ ನಿರ್ಜರದವೊಲು ಭೋಂ
ಕೆನಲು ರುಧಿರದ ಧಾರೆ ಸಿಡಿದುದು ಶಿರದ ಸೆಲೆಯೊಡೆದು ೧೯

ಸೈರಿಸುತ ಕೈಯೊಡ್ಡಿ ರಕುತದ
ಧಾರೆಯನು ಕೈತುಂಬ ಹಿಡಿದತಿ
ಧೀರನೋರೆಯ ನೋಟದಲಿ ಸೈರಂಧ್ರಿಯನು ಕರೆಯೆ
ನಾರಿ ಹರಿತಂದಕಟ ನೊಂದನು
ಕಾರುಣಿಕ ಸನ್ಯಾಸಿಯೆನುತ ವಿ
ಕಾರಿಸದೆ ಸೆರಗಿನಲಿ ತೋದಳು ಬಹಳ ಶೋಣಿತವ ೨೦

ಮಡದಿ ಕರಪಲ್ಲವದಲೊರೆಸಿದ
ಳಡಿಗಡಿಗೆ ಹಣೆಯನು ಕಪೋಲವ
ತೊಡೆದು ತೊಳೆದಳು ಮುಖವನದನವ ಕಂಡು ಬೆರಗಾಗಿ
ಹಿಡಿದೆ ರಕುತವನೇಕೆ ಕಾಮಿನಿ
ನುಡಿ ನಿಧಾನವನಿವರು ನೊಂದರೆ
ಮಿಡುಕಲೇತಕೆ ನೀನೆನುತ ದುರುಪದಿಯ ಬೆಸಗೊಂಡ ೨೧

ಉರಿದು ಹೋಹುದು ನಿನ್ನ ರಾಜ್ಯದ
ಸಿರಿಯು ಬದುಕಿದೆಯೊಂದು ಕಣೆಯಕೆ
ಪರಮ ಯತಿ ಕಾಯಿದನು ಕೈಯಲಿ ತುಂಬಿ ಶೋಣಿತವ
ಅರಸ ಕೇಳೀ ಮುನಿಯ ನೆತ್ತರು
ಧರೆಯೊಳೊಕ್ಕೊಡೆಯಾ ಪ್ರದೇಶವ
ನೊರಸಿ ಕಳೆವುದು ದಿಟ ಬೃಹನ್ನಳೆಗೇರಿಸಿದ ಬಿರುದು ೨೨

ಈಕೆ ಯಾರಿವರಾರು ನಾಟ್ಯ
ವ್ಯಾಕರಣ ಪಂಡಿತ ಬೃಹನ್ನಳೆ
ಯೀಕೆಗೇನಹನರಿಯ ಬಾರದು ಕಾಲು ಕೀಲುಗಳ
ಏಕೆ ನನಗದರರಿತವೆಂದವಿ
ವೇಕಿಯಿರೆ ಬಳಿಕಿತ್ತ ಪುರದಲಿ
ನೂಕು ನೂಕಾಯಿತ್ತು ನೋಡುವ ನೆರವಿಯುತ್ತರನ ೨೩

ಇದಿರು ಬಂದರು ಮಂತ್ರಿಗಳು ವರ
ಸುದತಿಯರು ಸೂಸಿದರು ಸೇಸೆಯ
ನುದಿತ ಮಂಗಳ ಘೋಷ ವಾದ್ಯ ವಿತಾನ ರಭಸದಲಿ
ವದನವಿದೆ ಕಳೆಗುಂದಿ ಜಯದ
ಭ್ಯುದಯ ತಾನೆಂತೆನುತ ವರ ಕೋ
ವಿದರು ತಮ್ಮೊಳಗಾಡುತಿರ್ದರು ಕೂಡೆ ಗುಜುಗುಜಿಸಿ ೨೪

ಎಂದಿನವನುತ್ತರನು ಗಂಗಾ
ನಂದನನನೀ (ಪಾ: ನಂದನನೀ) ಹೂಹೆ ಗೆಲಿದನು
ಸಂದ ಸುಭಟ ದ್ರೋಣ ಕರ್ಣಾದಿಗಳನೋಡಿಸಿದ
ಎಂದು ಕೆಲಬರು ಕೆಲಬರಿವ ಗೆಲಿ
ದಂದವಾಗಿರದೀ ಬೃಹನ್ನಳೆ
ಯಿಂದ ಸಂಭಾವಿಸುವುದೆಂದುದು ಮಂದಿ ತಮತಮಗೆ ೨೫

ಲೀಲೆ ಮಿಗಲುತ್ತರನು ಪುರಜನ
ಜಾಲ ಜೀಯೆನಲಿದಿರು ಬಂದ ನಿ
ವಾಳಿಗಳ ನೂಕಿದನು ಕೈವಾರಿಗಳ ಕೋಪಿಸುತ
ಆಲಿಯವನಿಯ ಬರೆಯೆ ಮುಸುಕಿನ
ಮೇಲು ದುಗುಡದ ಭಾರದಲಿ ರಾ
ಜಾಲಯಕೆ ಬರಲಿದಿರು ಬಂದಪ್ಪಿದನು ನಂದನನ ೨೬

ಬಾ ಮಗನೆ ವಸುಕುಲದ ನೃಪ ಚಿಂ
ತಾಮಣಿಯೆ ಕುರುರಾಯ ಮೋಹರ
ಧೂಮಕೇತುವೆ ಕಂದ ಬಾಯೆಂದಪ್ಪಿ ಕುಳ್ಳಿರಿಸೆ
ಕಾಮಿನಿಯರುಪ್ಪಾರತಿಗಳಭಿ
ರಾಮ ವಸ್ತ್ರ ನಿವಾಳಿ ರತ್ನ
ಸ್ತೋಮ ಬಣ್ಣದ ಸೊಡರು ಸುಳಿದವು ಹರುಷದೊಗ್ಗಿನಲಿ ೨೭

ಬೊಪ್ಪ ಸಾಕೀ ಬಯಲ ಡೊಂಬೆನ
ಗೊಪ್ಪುವುದೆ ವೀರೋಪಚಾರವಿ
ದೊಪ್ಪುವರಿಗೊಪ್ಪುವುದು ತೆಗೆಸೆನಲರಸ ನಸುನಗುತ
ದರ್ಪವುಳ್ಳಂಗೀಸು ಮಂಗಳ
ವೊಪ್ಪದೇನೈ ಜಗದೊಳಾವಂ
ಗಪ್ಪುದೀ ಬಲವೀ ನಿಗರ್ವಿತೆಯೆಂದನಾ ಮತ್ಸ್ಯ ೨೮

ಮಗನೆ ಕರ್ಣ ದ್ರೋಣ ಭೀಷ್ಮಾ
ದಿಗಳನೊಬ್ಬನೆ ಗೆಲಿದೆಯೀ ಕಾ
ಳಗದ ಕಡುಗಲಿತನಗಳುಂಟೇ ಪೂರ್ವ ಪುರುಷರಲಿ
ದುಗುಡವೇಕೆನ್ನಾಣೆ ಹೆತ್ತರ
ಮೊಗಕೆ ಹರುಷವ ತಂದೆಲಾ ಹಂ
ಗಿಗನೆ ನೀ ತಲೆ ಗುತ್ತಲೇಕೆಂದೆತ್ತಿದನು ಮುಖವ ೨೯

ಕಾದಿ ಗೆಲಿದವ ಬೇರೆ ಸಾರಥಿ
ಯಾದ ತನಗೀಸೇಕೆ ನಿಮ್ಮಡಿ
ಯಾದರಿಸಲೊಡೆಮುರಿಚ ಬಲ್ಲನೆ ನಾಚಿಸದಿರೆನಲು
ಕಾದಿದಾತನು ನೀನು ಸಾರಥಿ
ಯಾದವನು ತಂಗಿಯ ಬೃಹನ್ನಳೆ
ವಾದ ಬೇಡಲೆ ಮಗನೆ ಬಲ್ಲೆನು ನಿನ್ನ ವಿಕ್ರಮವ ೩೦

ಅದಟುತನವೆನಗುಂಟೆ ಬೆಂದುದ
ಬೆದಕಿ ನೋಯಿಸಬೇಡ ಹಗಲಿನ
ಕದನವನು ಗೆಲಿದಾತ ಬೇರಿಹ ಬೊಪ್ಪ ನುಡಿಯದಿರು
ಉದಯದಲಿ ಗೆಲಿದಾತನನು ನಿ
ಮ್ಮಿದಿರಿನಲಿ ತೋರುವೆನು ಬೀಳ್ಕೊಡಿ
ಸದನಕೆಂದು ಕುಮಾರ ಕಳುಹಿಸಿಕೊಂಡನರಮನೆಗೆ ೩೧

ಇತ್ತಲರ್ಜುನ ದೇವ ಸಾರಿದ
ನುತ್ತರೆಯ ಭವನವನು ತಾ ತಂ
ದುತ್ತಮಾಂಬರ ವಿವಿಧ ರತ್ನಾಭರಣ ವಸ್ತುಗಳ
ಇತ್ತನಾ ಕನ್ನಿಕೆಗೆ ಮುದ ಮಿಗ
ಲುತ್ತರೆಯ ಮನೆಯಿಂದ ಶಶಿಕುಲ
ಮತ್ತವಾರಣ ಬಂದನಾ ಭೀಮಾಗ್ರಜನ ಹೊರೆಗೆ ೩೨

ಬಳಿಕ ಸಂಕೇತದಲಿ ಭೂಪನ
ನಿಳಯವನು ಕಲಿಭೀಮ ಹೊಕ್ಕನು
ನಳಿನಮುಖಿ ಸಹದೇವ ನಕುಲರು ಬಂದರಾ ಕ್ಷಣಕೆ
ಫಲುಗುಣನು ಹೊಡವಂಟನಿಬ್ಬರಿ
ಗುಳಿದವರು ಪಾರ್ಥಂಗೆ ವಂದಿಸ
ಲೊಲಿದು ಬಿಗಿಯಪ್ಪಿದನು ಪರಿತೋಷದಲಿ ಸಮಬಲರ ೩೩

ಉಳಿದ ನಾಲ್ವರು ಕಲಿ ತ್ರಿಗರ್ತರ
ಗೆಲಿದ ಪರಿಯನು ಪಾರ್ಥ ಕೌರವ
ಬಲವ ಭಂಗಕೆ ತಂದ ಪರಿಯನು ಹೇಳುತಿರುತಿರಲು
ನಿಲುಕಿ ರಾಯನ ಹಣೆಯ ಗಾಯವ
ಬಳಿಕ ಕಂಡನಿದೇನು ನೊಸಲಿಂ
ದಿಳಿವುತಿದೆ ನಸು ರಕ್ತಬಿಂದುಗಳೆಂದನಾ ಪಾರ್ಥ ೩೪

ಅನವಧಾನದೊಳಾಯ್ತು ಸಾಕದ
ನೆನೆಯಲೇತಕೆ ಮಾಣೆನಲು ಮಿಗೆ
ಕನಲುತರ್ಜುನನರಿದನಾ ದ್ರೌಪದಿಯ ಸೂರುಳಿಸಿ
ಮನದಲುರಿದೆದ್ದನು ವಿರಾಟನ
ತನುವ ಹೊಳ್ಳಿಸಿ ರಕುತವನು ಶಾ
ಕಿನಿಯರಿಗೆ ಹೊಯಿಸುವೆನು ಹೊಲ್ಲೆಹವೇನು ಹೇಳೆಂದ ೩೫

ಕಳುಹಬೇಕೇ ಕೀಚಕೇಂದ್ರನ
ಬಳಗವಿದ್ದಲ್ಲಿಗೆ ವಿರಾಟನ
ತಲೆಯ ಋಣ ಸಾಲಿಗನಲೇ ಶಿವ ಶಿವ ಮಹಾದೇವ
ನೆಲದೊಳೊಕ್ಕುದೆ ರಕ್ತವವದಿರ
ಕುಲವ ಸವರುವೆನಿವನ ಸೀಳಿದು
ಬಲಿಯ ಕೊಡುವೆನು ಭೂತಗಣಕೆನುತೆದ್ದನಾ ಭೀಮ ೩೬

ಕಾಕ ಬಳಸಲು ಬೇಡ ಹೋ ಹೋ
ಸಾಕು ಸಾಕೈ ತಮ್ಮ ಮಾಣು
ದ್ರೇಕವನು ನೆಲ ರಕ್ತ ಕಂಡರೆ ನನ್ನ ಮೇಲಾಣೆ
ಈ ಕಮಲಲೋಚನೆಯ ಸೆರಗಿಗೆ
ಸೇಕವಾಯಿತು ರಕುತವತಿ ಸ
ವ್ಯಾಕುಲತೆ ಬೇಡೆಂದು ಗಲ್ಲವ ಹಿಡಿದನನಿಲಜನ ೩೭

ಕೊಂಬೆನಾತನ ಜೀವವನು ಪತಿ
ಯೆಂಬ ಗರ್ವವನವನ ನೆತ್ತಿಯ
ತುಂಬಿ ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ
ಅಂಬುಜಾಕ್ಷಿಯ ಕೀಚಕನ ಬೇ
ಳಂಬವೀತನ ಕೂಟ ಭೂತ ಕ
ದಂಬ ತುಷ್ಟಿಯ ಮಾಡಬೇಹುದು ಸೆರಗ ಬಿಡಿಯೆಂದ ೩೮

ಇವನ ನಾವೋಲೈಸಿ ಕೈಯೊಡ
ನಿವಗೆ ಮುನಿದೊಡೆಯೇನನೆಂಬುದು
ಭುವನ ಜನವು ಭ್ರಮಿಸದಿರು ಸೈರಣೆಗೆ ಮನ ಮಾಡು
ಎವಗೆ ನೋವಿನ ಹೊತ್ತು ದುಷ್ಕೃತ
ವಿವರಣದ ಫಲವಿದಕೆ ಲೋಗರ
ನವಗಡಿಸಿದೊಡೆ ಹಾನಿಯೆಮಗೆನೆ ಭೀಮನಿಂತೆಂದ ೩೯

ಬರಿಯ ಧರ್ಮದ ಜಾಡ್ಯದಲಿ ಮೈ
ಮರೆದು ವನದಲಿ ಬೇವು ಬಿಕ್ಕೆಯ
ನರಸಿ ತೊಳಲಿದು ಸಾಲದೇ ಹದಿಮೂರು ವತ್ಸರದಿ
ಉರುಕುಗೊಂಡೊಡೆ ರಾಜ ತೇಜವ
ಮೆರೆವ ದಿನವೆಂದಿಹುದು ನೀವಿ
ನ್ನರಿಯಿರೆಮ್ಮನು ಹರಿಯ ಬಿಡಿ ಸಾಕೆಂದನಾ ಭೀಮ ೪೦

ಉದಯದಲಿ ನಾವಿನಿಬರಾತನ
ಸದನದಲಿ ನೃಪಪೀಠವನು ಗ
ರ್ವದಲಿ ನೆಮ್ಮುವೆವಾತ ನಮ್ಮಲಿ ಖೋಡಿಯನು ಹಿಡಿಯೆ
ಮದಮುಖನನೊರಸುವೆವು ಹರುಷದ
ಲಿದಿರುಗೊಂಡೊಡೆ ಮನ್ನಿಸುವ ಮಾ
ತಿದುವೆ ಸನ್ಮತವೆಂದು ಸಂತೈಸಿದನು ಪವನಜನ ೪೧

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)
(ಕರಡು ತಿದ್ದಿದ್ದು: ಸಂದೀಪ ನಡಹಳ್ಳಿ)

Tuesday, May 18, 2010

ವಿರಾಟಪರ್ವ: ೦೮. ಎಂಟನೆಯ ಸಂಧಿ

ಸೂ: ರಾಯ ರಿಪುಬಲಜಲಧಿ ವಡಬನ
ಜೇಯನರ್ಜುನನಖಿಳ ಕೌರವ
ರಾಯ ದಳವನು ಜಯಿಸಿದನು ಸಮ್ಮೋಹನಾಸ್ತ್ರದಲಿ

ಮರಳಿದವು ತುರು ಮಾರಿಗೌತಣ
ಮರಳಿ ಹೇಳಿತು ಹಸಿದ ಹೆಬ್ಬುಲಿ
ಮೊರೆಯ ದನಿದೋರಿದವು ಹುಲುಮೃಗವೇನನುಸುರುವೆನು
ಧರಣಿಪನ ಹಿಂದಿಕ್ಕಿ ಸೌಬಲ
ದುರುಳ ದುಶ್ಶಾಸನ ಜಯದ್ರಥ
ರುರುಬಿದರು ತರುಬಿದರು ಪರಬಲ ಕಾಲಭೈರವನ ೧

ಹತ್ತುಸಾವಿರ ರಥ ಸಹಿತ ಭಟ
ರೊತ್ತಿ ಕವಿದರು ಲಗ್ಗೆವರೆಯಲಿ
ಬಿತ್ತರಿಸಿ ಬೈಬೈದು ಸಾರುವ ಗೌರುಗಹಳೆಗಳ
ಸತ್ತಿಗೆಯ ಸಾಲುಗಳೊಳಂಬರ
ಕೆತ್ತುದೆನೆ ಕುಲಶೈಲ ನಿಚಯದ
ನೆತ್ತಿ ಬಿರಿಯಲು ಮೊಳಗಿದವು ನಿಸ್ಸಾಳಕೋಟಿಗಳು ೨

ಚಂಬಕನ ಹರೆ ಡಕ್ಕೆ ಡಮರುಗ
ಬೊಂಬುಳಿಯ ಗೋಮುಖದ ಡೌಡೆಯ
ಕೊಂಬು ಕಹಳೆಯ ರಾಯ ಗಿಡಿಮಿಡಿ ಪಟಹ ಡಿಂಡಿಮದ
ತಂಬಟದ ನಿಸ್ಸಾಳವಂಬರ
ತುಂಬಿದುದು ನೆಲ ಕುಸಿಯೆ ಬಲವಾ
ಡಂಬರದಲರ್ಜುನನ ಮುಸುಕಿತು ದೊರೆಯ ಸನ್ನೆಯಲಿ ೩

ಮರಳಿದವು ತುರುವೆಂಬ ಗರ್ವದ
ಗಿರಿಗೆ ಕೋ ಕುಲಿಶವನು ಸೇನೆಯ
ನೊರೆಸಿದುತ್ಸವ ಜಲಧಿಗಿದೆ ಕೋ ವಾಡಬಾನಲನ
ಅರಸನಲುಕಿದನೆಂಬ ಜಯದು
ಬ್ಬರದ ಬೆಳೆಸಿರಿಗಿದೆ ನಿದಾಘದ
ಬಿರುಬಿಸಿಲು ಕೊಳ್ಳೆಂದು ಕೈಗೊಂಡೆಚ್ಚರತಿರಥರು ೪

ಮೊಗಕೆ ಹರಿಗೆಯನೊಡ್ಡಿ ಕಾಲಾ
ಳಗಿದು ಕವಿದುದು ಸರಳ ಪರಿಯಲಿ
ಬಿಗಿದು ಬಿಲ್ಲಾಳೌಕಿತುರವಣಿಸಿದರು ಸಬಳಿಗರು
ಉಗಿದಡಾಯುಧದಲಿರಿದರು ಭಾ
ಷೆಗಳ ರಾವ್ತರು ಕೆಂಗರಿಯ ಕೋ
ಲುಗಳ ಹೆಮ್ಮಳೆಗರೆದು ಕವಿದರು ಜೋದರುರವಣಿಸಿ ೫

ಅರರೆ ರಾವುತು ರಾವುತೆಂಬ
ಬ್ಬರಣೆ ಮಸಗಿದುದೊಂದು ದೆಸೆಯಲಿ
ಸರಿಸ ಸಬಳಿಗ ಪೂತು ಪಾಯಕುಯೆಂಬ ಕಳಕಳಿಕೆ
ಧಿರುರೆ ಸಾರಥಿ ಹಳು ಹಳೆಂಬ
ಬ್ಬರಣೆ ಮಸಗಿದುದೊಂದು ಕಡೆಯಲಿ
ಕರಿಘಟೆಯ ಕಡುಹೊಂದು ಕಡೆಯಲಿ ಮುಸುಕಿತರ್ಜುನನ ೬

ಸುರಪನಡವಿಯ ಚುಚ್ಚಿದೊಡೆ ಸುರ
ರರಮನೆಯ ಗಾಯಕರ ಗೆಲಿದೊಡೆ
ಜರಡು ತಂತ್ರದ ಮೀನನೆಚ್ಚೊಡೆ ರಾಯ ಕಟಕದಲಿ
ಗೊರವನೊಳು ಕಾದಿದೊಡೆ ಹೆಂಗುಸ
ನಿರುಳು ಕದ್ದೋಡಿದೊಡೆ ದಿಟ
ನೀ ಧುರಕೆ ಧೀರನೆ ಪಾರ್ಥ ಫಡಯೆನುತೆಚ್ಚರತಿರಥರು ೭

ಭಂಡರುಲಿದೊಡೆ ಗರುವರದ ಮಾ
ರ್ಕೊಂಡು ನುಡಿವರೆ ಸಾಕಿದೇತಕೆ
ದಿಂಡುದರಿವೆನು ನಿಮಿಷ ಸೈರಿಸಿ ನಿಂದು ಕಾದುವೊಡೆ
ಕೊಂಡ ಹೆಜ್ಜೆಗೆ ಹಂಗಿಗರು ಮಿಗೆ
ಗಂಡುಗೆಡದಿರಿ ನಿಮ್ಮ ಬಗೆಗಳ
ಕಂಡು ಬಲ್ಲೆನೆನುತ್ತ ಫಲುಗುಣನೆಚ್ಚನತಿರಥರ ೮

ಗುರುಸುತನ ಬಳಿ ರಥವನೈಸಾ
ವಿರವ ಕೊಂದನು ಕರ್ಣನೊಡೆನೆಯ
ವರ ಮಹಾರಥರೆಂಟು ಸಾವಿರವನು ರಣಾಗ್ರದಲಿ
ಗುರು ನದೀಜರ ಬಳಿ ರಥವ ಸಾ
ವಿರವ ಕೃಪ ಸೈಂಧವ ಸುಯೋಧನ
ರರಸು ಥಟ್ಟಿನ ರಥವ ಮುರಿದನು ಹತ್ತು ಸಾವಿರವ ೯

ತುರಗ ದಳವೆಂಬತ್ತು ಸಾವಿರ
ಕರಿಘಟೆಯನೈವತ್ತು ಸಾವಿರ
ವರರಥವ ಹುಡಿ ಮಾಡಿದನು ಹನ್ನೆರಡು ಸಾವಿರವ
ಧುರಕೆ ವೆಗ್ಗಳವಾದ ರಥಿಕರ
ಶಿರವ ತರಿದನು ಮೂರು ಕೋಟಿಯ
ನರಸು ಕಾಲಾಳುಗಳ ಗಣನೆಯನರಿಯೆ ನಾನೆಂದ ೧೦

ಸವಗ ಸೀಳಿತು ಕೃಪನ ಭೀಷ್ಮನ
ಕವಚ ಹರಿದುದು ದ್ರೋಣ ನೊಂದನು
ರವಿಯ ಮಗ ಮಸೆಗಂಡನಶ್ವತ್ಥಾಮ ಮೈಮರೆದ
ಅವನಿಪತಿಗೇರಾಯ್ತು ಸಲೆ ಸೈಂ
ಧವ ಶಕುನಿ ದುಶ್ಶಾಸನಾದಿಗ
ಳವಯವದಲಂಬುಗಳನಾಯ್ದರು ತೋದ ರಕುತದಲಿ ೧೧

ಕದಿವಡೆದುದಾ ಚೂಣಿಬಲ ಬೆಂ
ಗೊಡದ ನಾಯಕರಾಂತು ತಮಗಿ
ನ್ನೊಡಲುಗಳ ಮೇಲಾಶೆಯೇಕಿನ್ನೆನುತ ಮಿಗೆ ಮಸಗಿ
ಸೆಡೆದು ಸೊಪ್ಪಾದಖಿಳ ಸುಭಟರ
ಗಡಣವನು ಮೇಳೈಸಿ ಮಗುಳವ
ಗಡಿಸಿ ನೂಕಿತು ಸೇನೆ ಭೀಷ್ಮ ದ್ರೋಣರಾಜ್ಞೆಯಲಿ ೧೨


ಖತಿಯಲಶ್ವತ್ಥಾಮನೀ ರವಿ
ಸುತನ ಜರೆದನು ಗಾಯವಡೆದೈ
ಪ್ರತಿಭಟನ ಭಾರವಣೆ ಲೇಸೇ ಕರ್ಣ ನೀನರಿವೈ
ಅತಿಬಲನು ನೀನಹಿತ ಬಲ ವನ
ಹುತವಹನು ನೀನಿರಲು ಕುರು ಭೂ
ಪತಿಯ ಬಲ ನುಗ್ಗಾಯ್ತಲಾ ನಿಷ್ಕರುಣಿ ನೀನೆಂದ ೧೩

ಭಟನು ನಾನಿರಲುಭಯ ರಾಯರ
ಕಟಕದೊಳಗಿನ್ನಾವನೆಂದು
ಬ್ಬಟೆಯ ನುಡಿಗಳ ನುಡಿದು ಬಾಚಿದೆ ಕೌರವನ ಧನವ
ಭಟನು ಫಲುಗುಣನಹನು ತೋರಾ
ಪಟುತನವನೆಲೆಯಪಜಯ ಸ್ತ್ರೀ
ವಿಟನೆ ವಿಹ್ವಲನಾದೆಯೆಂದನು ದ್ರೋಣಸುತ ನಗುತ ೧೪

ಆಗಲೇರಿಸಿ ನುಡಿದ ನುಡಿ ತಾ
ನೀಗಳೇನಾಯಿತ್ತು ನುಡಿಗಳ
ತಾಗನರಿಯದೆ ತರಿಚುಗೆಡೆವರೆ ಗರುವರಾದವರು
ಈಗಳಾವ್ ಹಾರುವರು ಕ್ಷತ್ರಿಯ
ನಾಗಿ ನೀನರ್ಜುನನ ತುರುಗಳ
ಬೇಗ ಮರಳಿಚಿ ತಂದು ತೋರದೆ ಮಾಣೆ ದಿಟವೆಂದ ೧೫

ಎಲವೊ ಗರುಡಿಯ ಕಟ್ಟಿ ಸಾಮವ
ಕಲಿಸಿ ಬಳಿಕಾ ಕೋಲ ಮಕ್ಕಳ
ಬಲದಿ ಬದುಕುವ ಕೃಪಣ ವೃತ್ತಿಯ ನಿಮ್ಮ ಕೂಡೆಮಗೆ
ಕಲಹವೇತಕೆ ಕಾಣ ಬಹುದೆಂ
ದಲಘು ಭುಜಬಲ ಭಾನುಸುತ ಕಡು
ಮುಳಿದು ಫಡ ಫಡ ಪಾರ್ಥ ಮೈದೋರೆನುತ ಮಾರಾಂತ ೧೬

ಇತ್ತಲಿತ್ತಲು ಪಾರ್ಥ ನಿಲು ನಿಲು
ಮುತ್ತಯನ ಹಾರುವರನಂಜಿಸಿ
ಹೊತ್ತುಗಳೆದೊಡೆ ಹೋಹುದೇ ಕೈದೋರು ಮೈದೋರು
ತೆತ್ತಿಗರ ಕರೆ ನಿನ್ನ ಬೇರನು
ಕಿತ್ತು ಕಡಲೊಳು ತೊಳೆವ ರಿಪುಭಟ
ಮೃತ್ಯುವರಿಯಾ ಕರ್ಣನೆನುತಿದಿರಾಗಿ ನಡೆತಂದ ೧೭

ಉಂಟು ನೀನಾಹವದೊಳಗೆ ಗೆಲ
ಲೆಂಟೆದೆಯಲಾ ನಿನ್ನ ಹೋಲುವ
ರುಂಟೆ ವೀರರು ಕೌರವೇಂದ್ರನ ಬಹಳ ಕಟಕದಲಿ
ಟೆಂಟಣಿಸದಿದಿರಾಗು ನಿನ್ನಯ
ಸುಂಟಿಗೆಯನಿತ್ತಖಿಳ ಭೂತದ
ನಂಟನರ್ಜುನನೆನಿಸಿಕೊಂಬೆನು ಕರ್ಣ ಕೇಳೆಂದ ೧೮

ಚಕಿತಚಾಪರು ಗಾಢ ಬದ್ಧ
ಭ್ರುಕುಟಿ ಭೀಷಣಮುಖರು ರೋಷ
ಪ್ರಕಟ ಪಾವಕ ವಿಸ್ಫುಲಿಂಗರು ಹೊಕ್ಕು ಸಮತಳಿಸಿ
ವಿಕಟ ಶೌರ್ಯೋತ್ಕಟ ಮಹಾ ನಾ
ಯಕರು ನಿಷ್ಠುರ ಸಿಂಹ ಗರ್ಜನೆ
ವಿಕಳಿತಾಚಲ ಸನ್ನಿವೇಶರು ಹೊಕ್ಕು ತರುಬಿದರು ೧೯

ಪೂತುರೇ ಬಿಲುಗಾರ ಮಝರೇ
ಸೂತನಂದನ ಬಾಣ ರಚನಾ
ನೂತನದ ಬಿಲುವಿದ್ಯೆ ಭಾರ್ಗವ ಸಂಪ್ರದಾಯವಲ
ಆತುಕೊಳ್ಳೈ ನಮ್ಮ ಬಲುಮೆಗ
ಳೇತರತಿಶಯವೆನುತ ಸರಳಿನ
ಸೇತುವನು ಕಟ್ಟಿದನು ಗಗನಾಂಗಣಕೆ ಕಲಿಪಾರ್ಥ ೨೦

ಮೇಲುಗೈಯಹೆ ಬಿರುದರೊಳು ಬಿ
ಲ್ಲಾಳು ನೀನಹೆ ಚಾಪವಿದ್ಯಾ
ಭಾಳನೇತ್ರನ ಗರುಡಿಯಲ್ಲಾ ಕಲಿತ ಮನೆ ನಿನಗೆ
ಕೋಲು ನಮ್ಮವು ಕೆಲವು ಸಮಗೈ
ಯಾಳೆ ನಿಮಗಾವೆನುತ ನೋಟಕ
ರಾಲಿ ಝೋಂಮಿಡೆ ಕರ್ಣ ತುಳುಕಿದನಂಬಿನಂಬುಧಿಯ ೨೧

ಅಹಹ ಫಲುಗುಣ ನೋಡಲಮ್ಮೆನು
ಬಹಳ ಬಾಣಾದ್ವೈತವಾದುದು
ಮಹಿ ಮಹಾದೇವೆನುತ ಸಾರಥಿ ಮುಚ್ಚಿದನು ಮುಖವ
ರಹವ ಮಾಡದಿರೆಲವೊ ತನಗಿದು
ಗಹನವೇ ನೋಡೆನುತ ನರನತಿ
ಸಹಸದಲಿ ಕೆದರಿದನು ಕರ್ಣನ ಬಾಣಪಂಜರವ ೨೨

ವೀರನಲ್ಲಾ ಬನದ ರಾಜ ಕು
ಮಾರನಲ್ಲಾ ಕೌರವನ ಬಡಿ
ಹೋರಿಯಲ್ಲಾ ತಿರಿದಿರೈ ದಿಟವೇಕಚಕ್ರದಲಿ
ನಾರಿಯರ ನಾಟಕದ ಚೋಹವ
ನಾರು ತೆಗೆದರು ಪಾರ್ಥ ನಿನಗೀ
ಶೌರಿಯದ ಸಿರಿಯೆಂತೆನುತ ತೆಗೆದೆಚ್ಚನಾ ಕರ್ಣ ೨೩

ಬಲುಗಡಿಯನಹೆ ಬೇಟೆಗಾರರ
ಬಳಗವುಳ್ಳವನಹೆ ವಿರೋಧಿಯ
ದಳಕೆ ನೀನೊಡ್ಡುಳ್ಳ ಭಟನಹೆ ಸ್ವಾಮಿ ಕಾರ್ಯದಲಿ
ತಲೆಯ ತೆರುವವನಹೆ ಕುಭಾಷೆಗೆ
ಮುಳಿವವರು ನಾವಲ್ಲ ಸೈರಿಸು
ಬಳಿಕೆನುತ ಕಲಿಪಾರ್ಥ ಸುರಿದನು ಸರಳ ಸರಿವಳೆಯ ೨೪

ಅದ್ದನೋ ಬಾಣಾಂಬುಧಿಯಲೊಡೆ
ಬಿದ್ದನೋ ವಿತಳದಲಿ ಮೇಣ್ವಿಧಿ
ಕದ್ದನೋ ಕೈವಾರವೇತಕೆ ಕಾಣೆನಿನಸುತನ
ತಿದ್ದಿತಾತನ ದೆಸೆ ನದೀಸುತ
ನಿದ್ದನಾದೊಡೆ ಕೌರವೇಂದ್ರನ
ಹೊದ್ದ ಹೇಳೆಂದೊದರುತಿರ್ದುದು ಕೂಡೆ ಕುರುಸೇನೆ ೨೫

ಇಡಿದ ಮೋಡದ ಮುತ್ತಿಗೆಯ ಮೇ
ಲೊಡೆದು ಮೂಡುವ ರವಿಯವೋಲ್ ನೆರೆ
ಕಡಿದು ಶರಪಂಜರವ ಮುಸುಕಿದನರ್ಜುನನ ರಥವ
ನಡುಗಿದನು ವೈರಾಟ ಹಯವಡಿ
ಗಡಿಗೆ ನೊಂದವು ಹನುಮನಂಬರ
ವೊಡೆಯೆ ಬೊಬ್ಬಿರಿದನು ಮಹಾದ್ಭುತವಾಯ್ತು ನಿಮಿಷದಲಿ ೨೬

ಸೋಲವಾಯಿತು ಕರ್ಣಗೆಂಬರ
ನಾಲಗೆಯ ಕೊಯ್ಯೆಲವೊ ಬಿಡು ಬಿ
ಲ್ಲಾಳು ರಾಯನ ಪಟ್ಟದಾನೆ ವಿರೋಧಿ ಭೂಪತಿಯ
ಭಾಳದಕ್ಕರ ತೊಡೆಯಿತೋ ತೆಗೆ
ಕಾಳಗವನೆಂದಖಿಳ ಕುರುಬಲ
ಜಾಲ ಬೊಬ್ಬಿಡೆ ಕರ್ಣ ಮೆರೆದನು ಬಿಲ್ಲ ಬಲುಮೆಯಲಿ ೨೭

ಅರಿಭಟನ ಶಿರಜಾಲವನು ಸಂ
ಹರಿಸಿದನು ನಿಮಿಷದಲಿ ಫಲುಗುಣ
ನೆರಡು ಶರದಲಿ ಸಾರಥಿಯನೈದಂಬಿನಲಿ ಹಯವ
ಶರಚತುಷ್ಟಯದಿಂದ ಕರ್ಣನ
ಕರದ ಬಿಲ್ಲನು ಕಡಿಯೆ ಭಗ್ನೋ
ತ್ಕರುಷ ಭಂಗಿತನಾಗಿ ಮುರಿದನು ಮೌನದಲಿ ಕರ್ಣ ೨೮

ಓಟವೇ ಅಪಜಯದ ಬೊಡ್ಡಿಯ
ಬೇಟವೇ ಬೆಸಗೊಳ್ಳಿರೈ ಒಳ
ತೋಟಿಗೊತ್ತಾಳಹುದು ನಾಲಗೆಯೀಗಳೇನಾಯ್ತು
ಆಟವಿಕ ಭೂಪತಿಯ ಕೀರ್ತಿಯ
ಕೂಟಣಿಗರೊಗ್ಗಾಯ್ತು ತೆಗೆ ಮರು
ಳಾಟವಿನ್ನೇಕೆನುತ ಪಾರ್ಥನ ತಾಗಿದನು ದ್ರೋಣ ೨೯

ಇದಿರುಗೊಳ್ಳೈ ಪಾರ್ಥ ವಿಪ್ರರಿ
ಗದಟುತನವೆಲ್ಲಿಯದು ಕರ್ಣನ
ಸದೆಬಡಿದ ಸಾಹಸಕೆ ಹಿಗ್ಗದಿರೆಮ್ಮ ಕೈಗುಣವ
ಕದನದಲಿ ನೀ ನೋಡು ಕೈ ಸಾ
ರಿದವು ಗಡ ಕಾಮಾರಿ ಹಿಡಿವ
ಗ್ಗದ ಶರಾವಳಿಯದರ ಪರಿಯೆಂತೆಮಗೆ ತೋರೆಂದ ೩೦

ಇದಿರುಗೊಂಡೆನು ವಂದಿಸಿದೆನೆ
ಮ್ಮುದಯ ನಿಮ್ಮದು ನಿಮ್ಮ ಕೃಪೆಯಲಿ
ವಿದಿತವೆನಗೀ ವಿದ್ಯೆ ನೀವ್ ಕಾಮಾರಿ ಮುರವೈರಿ
ಹೃದಯ ನಿಮ್ಮದು ಕಾಳಗಕೆ ನಿ
ಮ್ಮಿದಿರೊಳಾಳೇ ತಾನು ಕರುಣಾ
ಸ್ಪದರು ನೀವೆಂದೆಚ್ಚನರ್ಜುನನವರ ಸಿರಿಪದಕೆ ೩೧

ವಿನಯವುಚಿತವೆ ತತ್ತ ಸಮರದ
ಮೊನೆಯೊಳಾರಿದಿರಾದಡಿರಿವುದು
ಜನಪರಿಗೆ ಕರ್ತವ್ಯವದು ಸಾಕುಳಿದ ಮಾತೇನು
ತನುಜ ಸೈರಿಸು ಸೈರಿಸೆಂದೆ
ಚ್ಚನು ನಿರಂತರ ಬಾಣ ವರುಷವ
ನನಿಮಿಷಾವಳಿ ಪೂತುರೆನೆ ಕೈದೋರಿದನು ದ್ರೋಣ ೩೨

ಭಾವಿಸಲು ಪ್ರತಿಬಿಂಬದಲಿ ಬೇ
ರಾವುದತಿಶಯವುಂಟು ನೀವೆನ
ಗಾವ ಪರಿಯನು ಕಲಿಸಿದಿರಿ ನಿಮಗೊಪ್ಪಿಸುವೆನದನು
ನೀವು ನೋಡುವದೆನುತ ನರನೆಸ
ಲಾವುದಂಬರವಾವುದವನಿಯ
ದಾವುದರಿ ಬಲವೆನಲು ಹಬ್ಬಿತು ಪಾರ್ಥ ಶರಜಾಲ ೩೩

ವಿಷಯ ಲಂಪಟತನದಲಾವ್ ನಿ
ರ್ಮಿಸಿದೆವಶ್ವತ್ಥಾಮನನು ನ
ಮ್ಮೆಸೆವ ಮೋಹದ ಕಂದನೈಯೆಲೆಪಾರ್ಥ ನೀನೆಮಗೆ
ಎಸುಗೆಗಾರರದಾರಿಗೀ ಶರ
ವಿಸರ ಸಂಭವಿಸುವುದಿದಾರಿಗೆ
ವಿಷಮ ವೀರನ ಕೈಯ ಚಳಕವಿದೆಂದನಾ ದ್ರೋಣ ೩೪

ಎನುತ ಸುರಿದನು ಸರಳ ಸಾರವ
ನನಲ ಗರ್ಭದ ಬಾಯ ಧಾರೆಗ
ಳನಿಲ ಗರ್ಭದ ಗರಿಗಳಶನಿಯ ಗರ್ಭ ಮಿಂಟೆಗಳ
ಮೊನೆಯ ಬಂಬಲುಗಿಡಿಯ ಹೊರಗಿನ
ತನಿಹೊಗೆಯ ಹೊದರುಗಳ ಪುಂಖ
ಧ್ವನಿಯ ದಟ್ಟಣೆ ಮಿಗಲು ಕವಿದವು ದ್ರೋಣನಂಬುಗಳು ೩೫

ದೇವ ಭಾರದ್ವಾಜ ಬಲು ವಿ
ದ್ಯಾ ವಿಷಯ ನವರುದ್ರ ಘನ ಶ
ಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ
ಕೋವಿದನು ಶರತಿಮಿರವನು ಗಾಂ
ಡೀವಿಯಗಣಿತ ಬಾಣ ಭಾನು ಕ
ರಾವಳಿಯಲಪಹರಿಸಿದನು ಸುರರಾಜಸುತ ನಗುತ ೩೬

ಹಿಳುಕನೀದುದೊ ಗಗನವಂಬಿನ
ಜಲಧಿ ಜರಿದುದೊ ಪಾರ್ಥನೆಂಬ
ಗ್ಗಳ ವಿರಿಂಚನ ಬಾಣ ಸೃಷ್ಟಿಯೊ ಬಲ್ಲನಾವವನು
ಇಳೆಯ ಮರ್ತ್ಯರು ಶಿವ ಶಿವಾ ತೆಗೆ
ಫಲುಗುಣಗೆ ಸರಿಯೆಂಬವರ ಬಾಯ್
ಹುಳಿವುದೋ ಗುಣಕೇಕೆ ಮತ್ಸರವೆಂದುದಮರಗಣ ೩೭

ಬಳಿಕ ಪಾರ್ಥನ ಬಾಣದಲಿ ಬಸ
ವಳಿಯೆ ಸಾರಥಿ ಮೆಲ್ಲ ಮೆಲ್ಲನೆ
ತೊಲಗಿಸಿದನಾ ರಥವನಿತ್ತಲು ಕರ್ಣನೀಕ್ಷಿಸಿದ
ಎಲೆಲೆ ಕಟಕಾಚಾರ್ಯ ಗೆಲಿದನು
ಫಲುಗುಣನನಿನ್ನೇನು ಕೌರವ
ಬಲದ ಹಗೆ ಹರಿವಾಯ್ತು ರಾಜಾಭ್ಯುದಯವಿನ್ನೆಂದ ೩೮

ಫಡ ಫಡೆಲವೊ ಕರ್ಣ ಸಾರಥಿ
ಮಡಿದರೇನದು ಸೋಲವೇ ಕಾ
ಳ್ಗೆಡೆಯದಿರು ನೋಡಾದಡಯ್ಯನ ಹರಿಬದಾಹವವ
ನುಡಿಗೆ ತೆರನಾಯ್ತೆಂಬ ಖುಲ್ಲರ
ಬೆಡಗ ನೋಡೆನುತುಗ್ರ ಚಾಪವ
ಮಿಡಿದು ಮಂಡಿಸಿ ಹರನ ಹೋಲುವ ಸುಭಟ ಮಾರಾಂತ ೩೯

ಆವುದೈ ನೀನರಿದ ಬಿಲು ವಿ
ದ್ಯಾ ವಿಷಯ ಘನ ಚಾಪ ವೇದಾ
ರ್ಥಾವಳಿಯು ಶರಮೌಕ್ತಿಕೋಪನ್ಯಾಸವೆಂತೆಂತು
ಕೋವಿದರ ಭೂಸುರರ ಯುಕ್ತಿಯ
ನೀವು ಕೊಂಡಿರೆ ಶಸ್ತ್ರವಿದ್ಯಾ
ಭಾವ ಗೋಷ್ಠಿಯ ಬಲ್ಲಡರಿಯೆಂದೆಚ್ಚನರ್ಜುನನ ೪೦

ಅಕ್ರಮವ ತಿರಿಭುವನ ವಿದ್ಯಾ
ಚಕ್ರವರ್ತಿಗಳೆಂದು ನೀವೀ
ವಿಕ್ರಮದ ಮಾತಿನಲಿ ಮೇಗರೆ ಮೆರೆವ ಭಟರುಗಳೆ
ಶಕ್ರನಳುಕುವ ಬಾಹುಬಲ ರಿಪು
ಚಕ್ರದೊಳಗಿನ್ನಾರಿಗುಂಟದು
ವಕ್ರ ಭಣಿತೆಗೆ ಸಲುವುದಶ್ವತ್ಥಾಮನೆನುತೆಚ್ಚ ೪೧

ಅರ್ಜುನನ ಶರವಿದ್ಯೆ ವಿವರಿಸೆ
ದುರ್ಜಯವಲಾ ಗರುವತನದಲಿ
ಗರ್ಜಿಸಿದೊಡೇನಹುದೆನುತ ಗುರುಸೂನು ಹರುಷದಲಿ
ನಿರ್ಜರರು ಮಝ ಭಾಪುರೆನಲಾ
ವರ್ಜಿಸಿದ ತಿರುವಿನಲಿ ಸಂಗರ
ನಿರ್ಜಿತೇಂದ್ರಿಯನೆಸಲು ಕಣೆಗಳು ಕವಿದವಂಬರಕೆ ೪೨

ಗುರುತನೂಜನಲಾ ವಿಭಾಡಿಸಿ
ಹುರುಳುಗೆಡಿಸಲು ಬಹುದೆ ನೋಡು
ತ್ತರ ಸುಯೋಧನ ಸೈನ್ಯಶರಧಿಯ ಗುಂಪಿನತಿಬಲರ
ಹರನ ಸರಿದೊರೆಯಸ್ತ್ರ ವಿದ್ಯಾ
ಧರರು ಮರ್ತ್ಯರೊಳಾರು ಲೇಸೆಂ
ದುರುಳೆಗಡಿದನು ಪಾರ್ಥನಶ್ವತ್ಥಾಮನಂಬುಗಳ ೪೩

ಗುರುಸುತನ ಶರಜಾಲವನು ಸಂ
ಹರಿಸಿ ಮಗುಳಸ್ತ್ರೌಘವನು ವಿ
ಸ್ತರಿಸಿದನು ಕಲಿಪಾರ್ಥನೀತನ ಸರಳುಗಳ ಸವರಿ
ತರಣಿ ಬಿಂಬವ ನಭವ ಹೂಳ್ದುದು
ಗುರುಸುತನ ಸಾಮರ್ಥ್ಯವಿಂತಿ
ಬ್ಬರಿಗೆ ಸಮಬಲವಾಗಿ ಸಮತಳಿಸಿತ್ತು ರಣಕೇಳಿ ೪೪

ತೀರವರ್ಜುನನಂಬು ರಣದಲಿ
ತೀರಿದವು ಗುರುಸುತನ ಶರ ಕೈ
ವಾರವೇ ಕೈಗುಂದಿ ನಿಂದನು ದ್ರೋಣನಂದನನು
ಮೇರು ಮೊಗದಿರುಹಿತ್ತಲಾ ರಣ
ಧೀರನಶ್ವತ್ಥಾಮ ಸೋತನು
ಸಾರೆನುತ ಕೃಪನುರುಬಿದನು ತರುಬಿದನು ಫಲುಗುಣನ ೪೫

ತಂದೆ ಮಕ್ಕಳು ಸೋತರಿನ್ನೇ
ನೆಂದು ಮುಯ್ಯಾನದಿರು ನಿಲು ನಿ
ಲ್ಲೆಂದು ಕೃಪನಡ ಹಾಯ್ದು ಪಾರ್ಥನ ರಥವ ತರುಬಿದನು
ಬಂದ ಪರಿ ಲೇಸೆನುತ ಫಲುಗುಣ
ನೊಂದು ಕನಲಂಬಿನಲಿ ಗುರುಗಳಿ
ಗಿಂದು ವಂದಿಸಬೇಕೆನುತ ಕೀಲಿಸಿದನಾ ರಥವ ೪೬

ತರಹರಿಸಿ ಶರವೈದರಲಿ ಸಂ
ಹರಿಸಿ ಕೊಳ್ಳೆಂದೆಚ್ಚೊಡೀತನ
ತುರಗವನು ತಾಗಿದವು ನೊಂದವು ರಥದ ವಾಜಿಗಳು
ಕೆರಳಿ ಫಲುಗುಣನರ್ಧ ಚಂದ್ರದ
ಸರಳಿನಲಿ ಸಾರಥಿಯ ತುರಗವ
ಕರದ ಬಿಲ್ಲನು ಕಡಿಯೆ ತೊಲಗಿದನಾ ಕೃಪಾಚಾರ್ಯ ೪೭

ಎಲೆಲೆ ಕರ್ಣ ದ್ರೋಣ ಗುರುಸುತ
ರಲಘು ಭುಜಬಲ ಕೃಪನು ಹೊಕ್ಕಿರಿ
ದಳುಕಿದರು ಮಝ ಭಾಪುರೆಂತುಟೊ ಪಾರ್ಥನಗ್ಗಳಿಕೆ
ಗೆಲುವನೊಬ್ಬನೆ ನಮ್ಮ ಬಲದಲಿ
ನಿಲುಕಿ ಹಿಂಗುವ ಸುಭಟರಿನಿಬರು
ಸುಲಭವೆಮಗೀ ಸೋಲವೆಂದುದು ಕೂಡೆ ಕುರುಸೇನೆ ೪೮

ಬಾಯ ಬಿಟ್ಟುದು ಸಕಲ ಕೌರವ
ರಾಯದಳ ವಡಮುಖದಲದಟರು
ಹಾಯಿದರು ತಡವೇನು ತೆರದೆರಸಾಯ್ತು ಕುರುಸೇನೆ
ಕಾಯಬೇಕೆಂದೆನುತ ವರ ಗಾಂ
ಗೇಯ ಚಾಪವ ಮಿಡಿದು ಬೆರಳಲಿ
ಸಾಯಕವ ತೂಗುತ್ತ ತಡೆದನು ಪಾರ್ಥನುರವಣೆಯ ೪೯

ಓಡಿದವರಲ್ಲಲ್ಲಿ ಧೈರ್ಯವ
ಮಾಡಿತಚ್ಚಾಳೊಗ್ಗಿನಲಿ ಹುರಿ
ಗೂಡಿತಬ್ಬರ ಮಗುಳೆ ನಿಬ್ಬರವಾಯ್ತು ನಿಮಿಷದಲಿ
ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ಕವಿದುದೀತನ
ಕೂಡೆ ಘನ ಗಂಭೀರ ಭೇರಿಯ ಬಹಳ ರಭಸದಲಿ ೫೦

ತೊಲಗು ರಾಯ ಪಿತಾಮಹನ ಖತಿ
ಬಲುಹು ತೆತ್ತಿಗರಹರೆ ರುದ್ರನ
ನಳಿನನಾಭನ ಕರೆಸು ನೀ ಶಿಶು ಸಾರು ಸಾರೆನುತ
ಉಲಿವ ಬಳಿಯ ಮಹಾರಥರ ಕಳ
ಕಳದ ಕಹಳೆಯ ಪಾಠಕರ ಗಾ
ವಳಿಯ ಬಿರುದಿನ ಬಹಳತೆಯಲೈತಂದನಾ ಭೀಷ್ಮ ೫೧

ಪೂತುರೇ ಕಲಿ ಪಾರ್ಥ ಭುವನ
ಖ್ಯಾತನಾದೈ ಕಂದ ದ್ರೋಣನ
ಸೂತಸುತ ಕೃಪ ಗುರುತನೂಜರ ಗೆಲಿದೆ ಬಳಿಕೇನು
ಬೀತುದೇ ನಿಮ್ಮವಧಿ ಕುರುಕುಲ
ಜಾತವನು ಹರೆಗಡಿದು ನಿಮ್ಮಯ
ಭೂತಳವನಾಳುವಿರೆ ನೀವೆಂದೆಚ್ಚನಾ ಭೀಷ್ಮ ೫೨

ನಿಮ್ಮ ಕಾರುಣ್ಯಾವಲೋಕನ
ವೆಮ್ಮ ಸಿರಿ ಬೇರೆಮಗೆ ಕಾಳಗ
ದಮ್ಮುಗೆಯ ವಿಕ್ರಮದ ವಿವರಣ ವಿದ್ಯೆ ಫಲಿಸುವುದೆ
ಬಿಮ್ಮು ಬೀಸರವಹುದೆ ನಿಮ್ಮಯ
ಸೊಮ್ಮಿನವರಿಗೆ ಬೇರೆ ರಾಜ್ಯದ
ಹೆಮ್ಮೆ ತಾ ನಮಗೇಕೆನುತ ಕೈಯೊಡನೆ ನರನೆಚ್ಚ ೫೩

ಎಸಲು ಪಾರ್ಥನ ಬಾಣವನು ಖಂ
ಡಿಸುತ ಸೂತನನೆರಡರಲಿ ಕೀ
ಲಿಸಿದನೈದಂಬಿನಲಿ ಹನುಮನ ಹಣೆಯನೊಡೆಯೆಚ್ಚ
ನಿಶಿತ ಶರವೆಂಟರಲಿ ಕವಚವ
ಕುಸುರಿದರಿದನು ನರನ ವಕ್ಷದ
ಬೆಸುಗೆ ಬಿಡೆ ಮೂರಂಬಿನಲಿ ಮುರಿಯೆಚ್ಚು ಬೊಬ್ಬಿರಿದ ೫೪

ಅರಿಯ ಶರಹತಿಗುತ್ತರನ ತನು
ಬಿರಿಯೆ ಬಸವಳಿದನು ಕಪೀಶ್ವರ
ನೊರಲಿದನು ರಾವಣನ ಗಾಯವ ನೆನೆದನಡಿಗಡಿಗೆ
ಮರೆದು ಮಲಗಿದ ಸೂತನನು ನಾ
ಲ್ಕೆರಡು ಗಳಿಗೆಯು ಬೀಸಿ ಮೂಗಿನೊ
ಳೆರಲ ಕಂಡನು ಪಾರ್ಥನೆತ್ತಿದನಳುಕಿದುತ್ತರನ ೫೫

ಕವಳವಿದ ಕೋ ಬಾಣ ಶಸ್ತ್ರಾ
ನಿವಹ ಧಾರಾಸ್ತಂಭವಿನ್ನಾ
ಹವದೊಳಂಜದಿರೆನುತೆ ಕೊಡಲುತ್ತರನು ದುಗುಡದಲಿ
ಬವರದಾದಿಯನರಿಯದನ ಕೊಂ
ದವನು ನೀನೋ ಭೀಷ್ಮನೋಯೆವ
ಲವನ ನುಡಿಗರ್ಜುನನು ನಗುತಪರಾಧವುಂಟೆಂದ ೫೬

ಹದುಳಿಸಿನ್ನಂಜದಿರು ಬಾಣೌ
ಘದ ವಿದಾರಣವಿದು ವಿಚಾರಿಸ
ಲೆದೆ ಬಿರಿದು ತಾ ನೊಂದೆನಿದೆ ನೋಡೆನ್ನ ಗಾಯವನು
ಒದೆದು ಕೊಳುತೈದಾನೆ ಸಿಂಧದ
ತುದಿಯ ಹನುಮನು ವಜ್ರಮಯ ದೇ
ಹದಲಿ ನಟ್ಟವು ಕೋಲು ಮುನಿದೊಡೆ ರುದ್ರನೀ ಭೀಷ್ಮ ೫೭

ಎಂದು ಮೂರಂಬಿನಲಿ ಗಂಗಾ
ನಂದನನ ಮುಸುಕಿದನು ಸಾರಥಿ
ನೊಂದನಾ ಧ್ವಜ ದಂಡವುಡಿದುದು ರಥ ವಿಸಂಚಿಸಿತು
ಮುಂದುಗೆಟ್ಟನು ಭೀಷ್ಮನಹುದೋ
ತಂದೆಯೆನುತಾರಂಬಿನಲಿ ಖತಿ
ಯಿಂದ ಪಾರ್ಥನನೆಸಲು ಥಟ್ಟುಗಿದಂಬು ಹಾರಿದವು ೫೮

ಒರತುದರ್ಜುನನೊಡಲಿನಲಿ ದುರು
ದುರಿಸಿ ಸುರಿದುದು ಅರುಣಮಯ ಜಲ
ನೆರವಣಿಗೆಯಲಿ ನಿಂದು ತೊಟ್ಟನು ನರ ಮಹಾ ಶರವ
ತರಿದನೆಡೆಯಲಿ ಭೀಷ್ಮನುರೆ ಬೊ
ಬ್ಬಿರಿದು ಬಳಿಕಾಗ್ನೇಯ ಬಾಣದ
ಗರಿಯ ಮಂತ್ರಿಸಿ ಹೂಡಿದನು ಕುರುಸೇನೆ ಕಳವಳಿಸೆ ೫೯

ವರುಣ ಬಾಣದಲಸ್ತ್ರವನು ಸಂ
ಹರಿಸಿದನು ಕಲಿ ಭೀಷ್ಮನೊಬ್ಬೊ
ಬ್ಬರು ಪರಾಜಯ ರೋಷಪಾವಕ ವಿಸ್ಫುಲಿಂಗಿತರು
ಹರಿಸಿದರು ಕೌಬೇರ ಮಾರುತ
ನಿರುತಿ ಯಮ ಪುರುಹೂತ ಶಂಕರ
ಪರಿ ಪರಿಯ ಪ್ರತ್ಯಸ್ತ್ರವನು ಗಾಂಗೇಯ ಫಲುಗುಣರು ೬೦

ಮಲೆತು ನಿಲುವೊಡೆ ಭೀಷ್ಮನಲ್ಲದೆ
ಕೆಲರು ಪಾರ್ಥನ ದಿವ್ಯ ಬಾಣಾ
ವಳಿಯ ಗಾರಾಗಾರಿಗಿದಿರೇ ಭೀಷ್ಮನುರವಣೆಗೆ
ಕಲಿ ಧನಂಜಯನಲ್ಲದಿದಿರಲಿ
ನಿಲುವರುಂಟೇ ಭುಜಗ ಸುರ ನರ
ರೊಳಗೆ ಕೆಲರೆಂದಿಂದ್ರ ನುಡಿದನು ಬೆರಳನೊಲೆದೊಲೆದು ೬೧

ಪೂತು ಪಾಯಕು ಪಾರ್ಥ ಬಿಲು ವಿ
ದ್ಯಾತಿಶಯದಲಿ ಭೀಷ್ಮನೀ ಪುರು
ಹೂತನಮರಾರಿಗಳ ಮಿಕ್ಕರಲಾ ಮಹಾದೇವ
ಈತಗಳು ಜನಿಸಿದೊಡೆ ಹಿಂದೆ ಮ
ಹೀತಳವ ಕದ್ದೊಯ್ವನೇ ಖಳ
ಸೀತೆ ಬನದಲಿ ನವೆವಳೇಯೆನುತಿರ್ದುದಮರಗಣ ೬೨

ಹಿಂದೆ ಕರ್ಣನ ಕೈಮೆಯನು ಗುರು
ನಂದನನ ಬಿಲುಗಾರತನವನು
ಮಂದರೋಪಮ ಧೈರ್ಯವಾಚಾರಿಯನ ಪರಿಣತೆಯ
ಇಂದು ಕೃಪನಗ್ಗಳಿಕೆಯನು ನಲ
ವಿಂದ ಕಂಡೆನಿದಾರ ಪರಿಯ
ಲ್ಲೆಂದನುತ್ತರನರ್ಜುನಗೆ ಗಾಂಗೇಯನುರವಣೆಯ ೬೩

ಎನೆ ಕುಮಾರಕ ಕಾರ್ತವೀರ್ಯಾ
ರ್ಜುನನಾತನ ತೋರ ತೋಳಿನ
ಬನವ ಕಡಿದನು ವೀರಭಾರ್ಗವ ರಾಮನತಿ ಬಲನು
ಮುನಿದು ಮಲೆತೊಡೆ ಭೀಷ್ಮನಾತನ
ಮನಕೆ ಭೀತಿಯನಿತ್ತನೀತನೊ
ಳೆನಗೆ ಸರಿನೂಕುವದೆ ಕಾಳಗವೆಂದನಾ ಪಾರ್ಥ ೬೪

ಮತ್ತೆ ಗಂಗಾಸೂನು ಪಾರ್ಥನ
ತೆತ್ತಿಸಿದನೈದಂಬಿನಲಿ ರಥ
ಕಿತ್ತು ಮಗುಚಲು ಮೂರು ವಜ್ರಾಸ್ತ್ರದಲಿ ಕೀಲಿಸಿದ
ಹುತ್ತಕುರಗನು ಬಗಿದು ಹೊಗುವವೊ
ಲುತ್ತರಿಸಿದವು ಸರಳು ಮಿಗೆ ಧೃತಿ
ವೆತ್ತು ಫಲುಗುಣನವರನೆಚ್ಚನು ಹತ್ತು ಬಾಣದಲಿ ೬೫

ನರನ ಶರದಲಿ ಭೀಷ್ಮನೆದೆ ತನು
ಬಿರಿಯೆ ಮೈ ಝೋಂಪಿಸಿತು ಸಲೆ ತರ
ಹರಿಸಲರಿಯದೆ ಮಲಗಿ ನಿಂದನು ರಥದ ಕಂಬುಗೆಯ
ಅರರೆ ಸೋತನು ಭೀಷ್ಮನಿನ್ನೇ
ನುರಿದುದೋ ಕುರುಸೇನೆ ಯಾವೆಡೆ
ದೊರೆಯೆನುತ ಬಾಯ್ಬಿಡಲು ಕೌರವರಾಯ ಮಾರಾಂತ ೬೬

ಸೀಳು ನಾಯ್ಗಳ ಬಾಯ ಕೆಲಬಲ
ದಾಳ ಹಂಗಿನ ದೊರೆಯೆ ಸುಭಟರ
ಸೋಲವದು ರಾಯರಿಗೆ ಸೋಲವೆ ನೂಕು ನೂಕೆನುತ
ಕೋಲ ಹೊದೆಗಳ ಕೆದರಿ ಸಿಂಧದ
ಮೇಲೆ ಹಾವನು ಹಾಯ್ಕಿ ಸಾರಥಿ
ಮೇಳವಿಸಲವನಿಪನ ರಥವನು ನೆರೆದುರತಿರಥರು ೬೭

ಕಲಕಿ ಕೆದರಿದ ಬಲಜಲಧಿಯೊ
ಬ್ಬುಳಿಗೆ ಬಂದುದು ತಳಿತ ಸತ್ತಿಗೆ
ಗಳ ವಿಡಾಯಿಯಲಳ್ಳಿರಿವ ನಿಸ್ಸಾಳ ಕೋಟಿಗಳ
ಉಲಿವ ಕಹಳೆಯ ಬೈಗುಳೆಡಗೈ
ತಳದ ಬಾಯ್ಬಲಗೈಯನೊಲವುತ
ಬಳಿಕ ಭಟ್ಟರು ಹೊಗಳಿದರು ಕೌರವನ ಬಿರುದುಗಳ ೬೮

ಒಗ್ಗು ಮುರಿಯದೆ ಸೇನೆ ಮೊಳಗುವ
ಲಗ್ಗೆವರೆಯಲಿ ಹೆಣನ ತುಳಿದೊಡೆ
ಮುಗ್ಗಿ ಕವಿದುದು ಕೌರವೇಂದ್ರನ ಮೊಗದ ಸನ್ನೆಯಲಿ
ಹುಗ್ಗಿಗರ ಬಲುಹುರಿಯ ನಿಗುಚುವೆ
ನಿಗ್ಗುವೆನು ನಿಲ್ಲೆನುತ ಸೇನೆಯ
ನಗ್ಗಡಲೊಳಿಕ್ಕಿದನು ಫಲುಗುಣನಗಣಿತಾಸ್ತ್ರದಲಿ ೬೯

ವೀರರಿದಿರಹ ಹೊತ್ತು ರಣ ಮೈ
ಲಾರರಾದರು ಮರಳಿ ತೆಗೆವುತ
ಭೈರವನ ಸಾರೂಪ್ಯವಾದರು ಪೂತು ಮಝರೆನುತ
ಕೌರವನು ಕರ್ಣಾದಿಗಳ ನುಡಿ
ಯೋರೆ ಹದರಿನೊಳವಗಡಿಸಿ ಹೊಂ
ದೇರ ದುವ್ವಾಳಿಸುತ ಮೂದಲಿಸಿದನು ಫಲುಗುಣನ ೭೦

ಬಾಲ ವೃದ್ಧರ ವಿಪ್ರರನು ನೀ
ಕಾಳಗದೊಳೋಡಿಸಿದೆನೆಂದೇ
ಮೇಲು ಪೋಗಿನಲಿರಲು ಬೇಡೆಲೆ ಪಾರ್ಥ ಮರುಳಾದೈ
ಆಳಿದಡವಿಯ ರಾಜ್ಯವಲ್ಲದೆ
ಮೇಲೆ ಧರಣಿಯ ಬಯಸಿದೊಡೆ ನಿಮ
ಗಾಳಲೀವೆನೆ ಹೋಗು ಹೋಗಾರಣ್ಯಕೆನುತೆಚ್ಚ ೭೧

ಗಾರುಗೆಡೆಯದಿರೆಲವೊ ಸತ್ಯವ
ಮೀರಲಮ್ಮದೆ ಲೋಕ ನಿನ್ನನು
ದೂರ ಬೇಕೆಂದಡವಿಯೊಕ್ಕೆವು ಹೊಲ್ಲೆಯೇನಿದಕೆ
ಜಾರಿ ಹೋಯಿತ್ತವಧಿಯಿನ್ನೀ
ಮೀರಿ ಗಳಹುವ ನಿನ್ನ ಗಂಟಲ
ನೂರಿ ರಾಜ್ಯವ ತೆಗೆವೆ ಸೈರಿಸೆನ್ನುತ್ತ ನರನೆಚ್ಚ ೭೨

ಅರಿಯೆ ನೀನೆಲೆ ಮರುಳೆ ಗರುಡನ
ತರವಳಿಕೆಯಲಿ ಹಾವು ಕನ್ನವ
ಕೊರೆದು ಬದುಕುವದೇ ವೃಥಾ ಕಕ್ಕುಲಿತೆ ನಿನಗೇಕೆ
ತರಿದು ತಿರಿಕಲ್ಲಾಡುವೆನು ನಿ
ಮ್ಮುರುವರೈವರ ಶಿರವನರ್ಜುನ
ಬರಿದೆ ಗಳಹುದಿರೆನುತ ಕೌರವರಾಯ ತೆಗೆದೆಚ್ಚ ೭೩

ಗರುಡ ನೀನಹೆ ನಿನ್ನ ಪಕ್ಕವ
ಮುರಿದು ಹೆಡತಲೆಗಡರಿ ಬೆನ್ನೆಲು
ಮುರಿಯೆ ದುವ್ವಾಳಿಸುವ ಮುರರಿಪುವೆನ್ನ ನೀನರಿಯೆ
ತರಹರಿಸಿ ಕಲಿಯಾಗುಯೆಂದ
ಬ್ಬರಿಸಿ ಕೌರವನೆದೆಯನುಗುಳಿದ
ನೆರಡು ಬಾಣದೊಳರುಣ ಜಲದೊರೆತೆಗಳ ಕಾಣಿಸಿದ ೭೪

ನವ ನಿಕಾರಿಯ ವಲ್ಲಿ ಸೀರೆಗ
ಳವಯವದ ರಕುತದಲಿ ತೋದವು
ಜವವಳಿದು ಸಾರಥಿಗೆ ಸೂಚಿಸೆ ರಥವ ಮರಳಿಚಿದ
ಕವಿದನರ್ಜುನನೋಡದಿರು ಕೌ
ರವ ಪಲಾಯನವಕಟಕಟ ಪಾ
ರ್ಥಿವರ ಪಂಥವೆ ಮರಳಿ ನಿಂದಿರು ಕೊಲುವದಿಲ್ಲೆಂದ ೭೫

ಮಾತು ಹಳಸದ ಮುನ್ನ ಕೈಗಳು
ಸೋತು ತೆಗೆದವೆ ಹೊಳ್ಳುವಾತಿದು
ನೀತಿಯೇ ನರಪತಿಗಳಿಗೆ ಬಹು ಭಂಗವನ್ವಯಕೆ
ಭೀತನಲ್ಲದೆ ಕಾದಿ ಮಡಿದನ
ಮಾತುಗಳಲಾ ಪುಣ್ಯಕಥನವು
ಭೂತಳಾಧಿಪ ಮರಳಿ ನೋಡೆನ್ನಾಣೆ ನೀನೆಂದ ೭೬

ಹುರುಳುಗೆಟ್ಟುದು ಗರುವತನವೆಂ
ದರಸ ನಾಚಿದನಧಿಕ ಶೌರ್ಯೋ
ತ್ಕರುಷೆಯಲಿ (ಪಾ: ತ್ಕರ್ಷೆಯಲಿ) ಕಲಿಯಾಗಿ ನಿಂದನು ಮತ್ತೆ ಕಾಳಗಕೆ
ದೊರೆಯ ದುಗುಡವ ಕಂಡು ತಮ ತಮ
ಗುರವಣಿಸಿದರು ಸಕಲ ಸುಭಟರು
ಹೊರಳಿಗಟ್ಟಿತು ಸೇನೆ ನಿಚ್ಚಟರಳಿವ ನಿಶ್ಚಯಿಸಿ ೭೭

ನೊಂದನವನಿಪ ನಿಂದು ಪಾರ್ಥನ
ಕೊಂದು ತೋರುವೆನೆಂದು ರವಿಸುತ
ನೊಂದು ಕಡೆಯಲಿ ಮೊಳಗಿದನು ಬಲು ಬಿಲ್ಲ ಜೇವಡೆದು
ಒಂದು ಕಡೆಯಲಿ ಮಸಗಿದರು ಗುರು
ನಂದನನು ವೃಷಸೇನ ಸೈಂಧವ
ರೊಂದು ಕಡೆಯಲಿ ಭೀಷ್ಮ ಕೃಪ ದುಶ್ಶಾಸನಾದಿಗಳು ೭೮

ಗುರು ಚಡಾಳಿಸಿ ಹೊಕ್ಕನೊಮ್ಮಿಂ
ಗುರವಣಿಸಿದನು ಬಾಹ್ಲಿಕನು ಭಾ
ಸುರ ಕಳಿಂಗ ಸುಕೇತು ಭೂರಿಶ್ರವನು ದುಸ್ಸಹನು
ನರನ ಮುತ್ತಿದರೊಂದು ಕಡೆಯಲಿ
ತೆರಳಿಕೆಯ ತೇರಿನಲಿ ಬಲ ಮೋ
ಹರಿಸಿ ಕವಿದುದು ಸುತ್ತ ಮುತ್ತಿತು ಕಲಿ ಧನಂಜಯನ ೭೯

ಅಂಗವಿಸಿತರಿ ಸೇನೆ ಲೋಕವ
ನುಂಗಿ ಕುಣಿಯಲು ಬಗೆವ ಭರ್ಗನ
ರಂಗಭೂಮಿಯ ತೊಳೆವ ಜಲಧಿಯ ಜೋಕೆಯಂದದಲಿ
ಭಂಗಿತರ ಮರುವಲಗೆಯಲಿ ಸ
ರ್ವಾಂಗಬಲ ಜೋಡಿಸಿತು ನಮ್ಮುಳಿ
ವಿಂಗೆ ಹದನೇನೆನುತ ಮತ್ಸ್ಯನ ಸೂನು ಚಿಂತಿಸಿದ ೮೦

ನೆರೆದ ತಿಮಿರದ ಥಟ್ಟು ಸೂರ್ಯನ
ತೆರಳಿಚುವವೊಲ್ ಮೇಘ ಘಟೆಗಳು
ಮುರಿದು ಮೋಹರವೌಕಿ ಪವನನ ಸೆರಗ ಹಿಡಿವಂತೆ
ತೆರಳೊದತ್ತಂಬರಿಸಿ ಕುರುಬಲ
ವೊರಲಿ ಹೆಣನನು ತುಳಿದು ಮೇಲ
ಬ್ಬರಿಸಿ ಬರೆ ಸನ್ಮೋಹನಾಸ್ತ್ರವ ಹೂಡಿದನು ಪಾರ್ಥ ೮೧

ಎಸಲು ಸನ್ಮೋಹನದ ಶರ ಪಸ
ರಿಸಿತು ಬಲದಲಿ ಬಹಳ ನಿದ್ರಾ
ವ್ಯಸನ ವಿಹ್ವಲಿತಾಂತರಂಗರು ಮೈಯ್ಯನೊಲೆದೊಲೆದು
ಉಸುರ ಸಂಚದ ನಾಡಿಯವಗಾ
ಹಿಸಲು ಕೊರೆದರು ಗುರುಕಿಡುತ ತಲೆ
ಮುಸುಕಿನಲಿ ನೆರೆ ತೆಕ್ಕೆಗೆಡೆದುದು ನಿಖಿಳ ಕುರುಸೇನೆ ೮೨

ತನುವನೊಲೆದವು ದಡದಡಿಸಿ ಕಿವಿ
ಗೊನೆಯ ಜೋಲಿಸಲಲ್ಲಿ ಮಡಿಗಾ
ಲಿನಲಿ ಕುಸಿದವು ಕೊರಳ ಮರಳಿಚಿ ಕೈಯ್ಯನೊಳಗಿಟ್ಟು
ತೊನೆದು ಕೆಡೆದವು ಜೋಧರಾಗಳು
ಕನಲಿ ಕೆಡೆದರು ಗುರು ನದೀಜರ
ಘನ ಬಲಂಗಳೊಳಯುತ ಕೋಟಿ ಗಜಂಗಳುರುಳಿದವು ೮೩

ದೃಗುಯುಗಳವರೆದೆರೆಯೆ ರೋಮಾ
ಳಿಗಳು ತೆಕ್ಕೆಯ ಸಾರೆ ಕೊರಳರೆ
ಮುಗುಳೆ ಹಿಂಗಾಲ್ಗೊಂಡು ಖುರವನು ತೂಗಿಯೊಲೆದೊಲೆದು
ಬಿಗುವು ಸಹಿತವೆ ಹೊನ್ನ ಮರಗೋ
ಡುಗಳ ಮೇಲಡಗೆಡೆದು ನಿದ್ರಾ
ಮುಗುದರಾದರು ರಾವುತರು ತೂಕಡಿಸಿದವು ತುರಗ ೮೪

ಬಿಲು ಸೆಳೆಯೆ ಕೈದುಗಳು ಕೈಯಿಂ
ಚಲಿಸಲೊಬ್ಬರನೊಬ್ಬರತ್ತಲು
ಮಲಗಿ ಬೆಂಬತ್ತಳಿಕೆ ಬದಿಯೊಳಗಡಸಿ ತೋಳುಗಳ
ತಲೆಯೊಳಾನಿಸಿ ಗುರುಗುರಿಸಿ ರಥ
ದೊಳಗೆ ಸಾರಥಿವೆರಸಿ ನಿದ್ರಾ
ಕುಳರು ಜೊಮ್ಮಿನ ಮೇಲೆ ಮೈಮರೆದಿರ್ದರತಿರಥರು ೮೫

ಸರಳ ಸೊಕ್ಕವಗಡಿಸಿ ಸಲೆ ಮೈ
ಮರೆದನಿತ್ತಲು ದ್ರೋಣ ರಥದಲಿ
ಪರಮ ನಿದ್ರಾಗುಪ್ತನಾದನು ತನ್ನ ಮಗ ಸಹಿತ
ಕರದ ಬಿಲು ಶರ ಸರಿಯೆ ಕಂಗಳು
ಮುರಿಯೆ ಕರ್ಣನು ಕೆನ್ನೆಗೆದೆಯೊಳು
ದುರುಳ ದುರ್ಯೋಧನ ಸಹಿತ ಮೈಮರೆದುದರಿಸೇನೆ ೮೬

ಸೇನೆ ಮೈಮರೆದೊರಗಿದದಟ ನಿ
ಧಾನವೊಗೆದರುಹಿತ್ತು ನಿದ್ರಾ
ಮಾನ ವಿಭ್ರಮಿಸಿತ್ತು ಬಲು ಸಂಸಾರದಂದದಲಿ
ಏನ ಹೇಳುವೆನದನು ಕದನದ
ಕಾನನದೊಳತಿರಥರು ವಿಜಯ ವಿ
ಹೀನಬಲ ಸನ್ಮೋಹನಾಸ್ತ್ರದ ಬಾಧೆಗೊಳಗಾಯ್ತು ೮೭

ಕನಸು ಮೇಣೆಚ್ಚರು ಸುಷುಪ್ತಿಗ
ಳೆನಿಪವಸ್ಥಾ ತ್ರಿತಯದಲಿ ಜೀ
ವನು ವಿಸಂಚಿಸಿ ಬೀಳ್ವನಲ್ಲದೆ ಶರಕೆ ಸಿಲುಕುವನೆ
ಇನಿತು ಬಲ ತೂಕಡಿಸಿ ಝೋಂಪಿಸಿ
ತನಿಗೆಡೆಯೆ ಭಾಗೀರಥೀ ನಂ
ದನನು ನಿರ್ಮಲನಾಗಿ ತೊಳ ತೊಳಗಿದನು ರಥದೊಳಗೆ ೮೮

ಎಣಿಸುವರೆ ಏಕಾದಶಾಕ್ಷೋ
ಹಿಣಿಯ ಬಲವನು ಪಾರ್ಥನೊಬ್ಬನೆ
ರಣದೊಳಗೆಡಹಿದನು ಮೋಹನ ಮಂತ್ರ ಬಾಣದಲಿ
ಕುಣಿದು ಕುಸುಮದ ಸರಿವುಗಳ ಸಂ
ದಣಿಯನಮರರು ಸೂಸಿದರು ಫಲು
ಗುಣನು ರಥವನು ನೂಕಿದನು ನಿಜ ಮಹಿಪರಿದ್ದೆಡೆಗೆ ೮೯

ಇಳಿದು ದ್ರೋಣನ ಚರಣ ಕಮಲಂ
ಗಳಿಗೆ ತನ್ನಯ ನೊಸಲ ಚಾಚಿದ
ನಳವಿಯಲಿ ಭೀಷ್ಮಂಗೆ ಮೈಯಿಕ್ಕಿದನು ರಥದೊಳಗೆ
ಸುಲಿದು ಕರ್ಣನ ಮುಕುಟ ಪಟ್ಟೆಯ
ಸೆಳೆದು ದುರ್ಯೋಧನನ ವಸ್ತ್ರವ
ಸುಲಲಿತಾಭರಣವನು ನೀ ತೆಗೆಯೆಂದನುತ್ತರಗೆ ೯೦

ಧರಣಿಪಾಲರ ಮುಕುಟವನು ಕ
ತ್ತರಿಸಿ ದುಶ್ಶಾಸನನ ಘನ ಶಿರ
ವರದ ರತ್ನವನುಡಿದು ಭೂರಿಶ್ರವ ಜಯದ್ರಥರ
ಹೊರಳಿಚಿದನು ವಿಶೋಕ ಕುವರರ
ಹುರುಳುಗೆಡಿಸಿದನಖಿಳ ರಾಯರ
ಶಿರಕೆ ಭಂಗವ ಹೊರಿಸಿ ಫಲುಗುಣನಡರಿದನು ರಥವ ೯೧

ಫಲುಗುಣನ ನೇಮದಲಿ ರಥದಿಂ
ದಿಳಿದನುತ್ತರನವನಿಪನ ಕೋ
ಮಲ ಸುವಸ್ತ್ರಾಭರಣ ಕರ್ಣನ ಕೃಪನ ಗುರುಸುತನ
ಸುಲಲಿತಾಂಬರ ರತ್ನಭೂಷಣ
ಗಳನು ಕೊಂಡಡರಿದನು ರಥವನು
ಬಿಲುದುಡುಕಿ ಗಾಂಗೇಯನಡಹಾಯ್ದನು ಧನಂಜಯನ ೯೨

ಎರಡು ಶರದಲಿ ಚಾಪವನು ಕ
ತ್ತರಿಸಿ ಭೀಷ್ಮನ ನಿಲಿಸಿ ಕೌರವ
ಧರಣಿಪಾಲನ ಮುಕುಟವನು ಮೂರಂಬಿನಲಿ ಕಡಿದು
ತಿರುಗಿದನು ಕಲಿಪಾರ್ಥ ನಗುತು
ತ್ತರ ಸಹಿತ ಬನ್ನಿಯಲಿ ಕೈದುವ
ನಿರಿಸಿ ಮುನ್ನಿನ ಹುಲು ರಥದಿ ನಿಜನಗರಿಗೈತಂದ ೯೩

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)
(ಕರಡು ತಿದ್ದಿದ್ದು: ಸಂದೀಪ ನಡಹಳ್ಳಿ)

Thursday, May 13, 2010

ಕರ್ಣಪರ್ವ: ೦೪. ನಾಲ್ಕನೆಯ ಸಂಧಿ

ಸೂ: ರಾಯದಳ ಮಝ ಪೂತುರೆನೆ ರಿಪು
ರಾಯ ಸೇನೆಯ ಮುರಿದು ಪಾಂಡವ
ರಾಯ ಧರ್ಮಕುಮಾರ ಗೆಲಿದನು ಕೌರವೇಶ್ವರನ

ಫಡ ಫಡೆಲವೋ ಶಲ್ಯ ಮಕ್ಕಳ
ಬಡಿದು ಬೆರೆದೈ ಬಾಹುಬಲದಲಿ
ತೊಡರು ನಿನಗೆಡಗಾಲಲಿದೆಯೆನುತೊದೆದು ನಿಜರಥವ
ಘುಡುಘುಡಿಸಿ ರೋಮಾಂಚನದ ಹೊರ
ಗುಡಿಯ ಸೊಂಪಿನ ಮೈಯ್ಯ ಕಡುಗಲಿ
ತಡೆದನೇಕಾಂಗದಲಿ ಸಾತ್ಯಕಿ ಶಲ್ಯ ಭೂಪತಿಯ ೧

ಬಾಯಿ ಬಡಿಕರು ಯಾದವರು ಗರು
ವಾಯಿ ನಿನಗೆಲ್ಲಿಯದು ಸುಭಟರಿ
ಗಾಯುಧದ ಸಿಂಗಾರವೋ ಮೇಣ್ ಕಾಲ ನೇವುರವೊ
ಸಾಯಕವ ಹಿಡಿ ಸಾಕು ಸೋಲದ
ತಾಯಿಮನೆ ನಿನಗಿದಿರಲಿದೆ ನಿ
ನ್ನಾಯತವ ತಾನರಿಯೆನೆನುತೋರಂತೆ ತೆಗೆದೆಚ್ಚ ೨

ಎಲವೋ ಮಾದ್ರಾಬಾಹಿರನೆ ಬಿಡು
ಗಳಹತನವೇ ನಮ್ಮೊಡನೆ ತೊ
ಟ್ಟಳುಕೆ ಗರಿನಾಲಗೆಯ ಕೊಯ್ವೆನು ಮಾಣು ಮಾಣೆನುತ
ಬಿಲುದಿರುವನುಗುಳಿಸಿದನಂಬಿನ
ಬೆಳಸನಾರಳವಡಿಸುವರು ದಿಗು
ವಳೆಯ ನೆರೆಯದಿದೆತ್ತಣದು ಬಿಲುಗಾರತನವೆಂದ ೩

ಬಾಯಿಬಡಿಕರು ನಾವು ನೀ ಗರು
ವಾಯಿಕಾರನು ಬಯ್ವ ಬಿರುದಿನ
ಬಾಯ ನೋಡಾಯೆನುತ ತೋಟಿಗೆ ತೆರಹುಗೊಡದೆಸಲು
ಸಾಯಕದ ಹೊದೆ ಹಲವು ಶಲ್ಯಗೆ
ಬೀಯವಾದವು ಬಳಿಕ ಕೌರವ
ರಾಯನನುಜನು ತರುಬಿ ನಿಂದನು ಸಾತ್ಯಕಿಯ ರಥವ ೪

ಹಳಚಿದವು ರಥವೆರಡು ಬಲುಗೈ
ಗಳಿಗೆ ಬಲಿದುದು ಬವರ ಕೌರವ
ಬಲದ ಭಟರಲಿ ಹತ್ತು ಸಾವಿರ ರಥಿಕರನುವಾಯ್ತು
ಒಳಹೊಗಿಸಿ ಸಾತ್ಯಕಿಯ ಸಿಕ್ಕಿಸಿ
ಗೆಲುವ ತವಕವ ಕಂಡು ಕೆಣಕಿದ
ರಳವಿಯಲಿ ಸಹದೇವ ನಕುಳರು ಕೌರವಾನುಜನ ೫

ತೆಗೆಸಿದನು ಸಾತ್ಯಕಿಯನೀತನ
ಬಿಗಿದನಂಬಿನಲವನ ಬಾಣಾ
ಳಿಗಳ ಕಡಿದನು ಘಾಸಿಮಾಡಿದನವನ ರಥಹಯವ
ಜಗುಳಿದನು ಕಲಿ ನಕುಲ ರಥ ವಾ
ಜಿಗಳ ಜೋಡಣೆ ಬಿಚ್ಚಿ ರಕುತವ
ನೊಗಡಿಸಲು ಸಹದೇವನೆಚ್ಚನು ನಿನ್ನ ನಂದನನ ೬

ಸರಳ ಸೈರಿಸಿ ನಿನ್ನ ಮಗನ
ಬ್ಬರಿಸಿ ಮಾದ್ರೀಸುತನನೆಚ್ಚನು
ತರಹರಿಸಿ ಮಗುಳೆಚ್ಚನಾತನು ಕೌರವಾನುಜನ
ಮರುಳೆ ನೀನೇನಹೆ ಮಹಾ ಸಂ
ಗರಕೆ ಕಳುಹಾ ನಿನ್ನವರನೆನು
ತುರವನೆಚ್ಚನು ಜರಿಯೆ ಜೋಡಿನ ಚಿಪ್ಪು ದೆಸೆದೆಸೆಗೆ ೭

ನೋವನೇ ನೊಣವೂರಿದರೆ ಸಹ
ದೇವನೆಲವೋ ನಿನ್ನ ಕೊಂದಡೆ
ಪಾವಮಾನಿಗೆ ಪಂಥ ತಪ್ಪುವುದೆನುತ ಖಾತಿಯಲಿ
ತಾವಕನ ಸಾರಥಿಯ ರಥ ತುರ
ವಯಳಿಯನಾಯುಧವ ಖಂಡಿಸೆ
ಜೀವಗಳ್ಳರ ದೇವ ಪಸರಿಸಿದನು ಪಲಾಯನವ ೮

ರಾಯನನುಜನ ಹರಿಬದಲಿ ರಾ
ಧೇಯ ಹೊಕ್ಕನು ಸ್ವಾಮಿದ್ರೋಹರ
ಕಾಯಿದರೆ ಕೈಕೊಳ್ಳದೌಷಧವಾವುದಿವದಿರಿಗೆ
ನೋಯಿಸುವೆನೊಮ್ಮೆನುತ ತಿರುವಿನ
ಸಾಯಕದ ಕಿವಿಗಡಿಯ ತೆರಹಿನ
ರಾಯ ದಳಪತಿ ತರುಬಿದನು ಮಾದ್ರೀಸುತನ ರಥವ ೯

ಸಾರು ನೀ ಸಹದೇವ ಜಗದ ವಿ
ಕಾರಿಯಿವನೀ ಕರ್ಣನಿವನ ದೊ
ಠಾರಿಸುವ ನಾಲಗೆಯ ಕೊಯ್ಲಿಗೆ ಶಸ್ತ್ರವಿದೆಯೆನುತ
ಸಾರಥಿಯ ಬೋಳೈಸಿ ಚಾಪದ
ನಾರಿಯನು ದನಿಮಾಡಿ ನಕುಲನು
ದಾರ ಕರ್ಣನ ಮುಟ್ಟಿ ಬಂದನು ಚಾಚಿದನು ರಥವ ೧೦

ಆರಿವರು ನಕುಳಾಂಕರೇ ಜ
ಜ್ಜಾರತನವೇ ನಮ್ಮೊಡನೆ ನೀ
ವಾರು ಪಾಂಡುಕುಮಾರರೋ ಮಾದ್ರೀಕುಮಾರಕರೊ
ಭಾರಿಯಾಹವದೆಡೆಗೆ ನಿಮ್ಮನಿ
ದಾರು ಬಿಟ್ಟರುಪಾಯದಲಿ ನಿಮ
ಗಾರು ಮುನಿದರು ಶಿವ ಶಿವೆಂದನು ಕರ್ಣ ನಸುನಗುತ ೧೧

ತೊಲತೊಲಗು ತರುವಲಿಗೆ ರಣವಿದು
ಸುಲಭವೇ ಲೋಕೈಕವೀರರು
ಹಲಬರಿದರೊಳು ಹೊಕ್ಕು ಹೊದಕುಳಿಗೊಂಡು ಹೋದರಲೆ
ಗೆಲುವ ನಂಬುಗೆ ನಿನ್ನ ತಂದುದು
ಕೊಲೆಗೆ ನೋಡಾದರೆಯೆನುತ ಕೈ
ಚಳಕದಲಿ ಮುಸುಕಿದನು ಮೊನೆಗಣೆಯಿಂದ ರಿಪುಭಟನ ೧೨

ಬಿಗಿದ ಬಾಣದ ದಡ್ಡಿಯನು ತಳ
ಮಗುಚಿದನು ನೂರಂಬಿನಲಿ ಹೇ
ಳಿಗೆಯ ಮುಚ್ಚಳ ತೆಗೆದ ಹಾವಿನವೋಲು ಝೋಂಪಿಸುತ
ಹೊಗರನುಗುಳುವ ಹೊಸ ಮಸೆಯ ಕೋ
ಲುಗಳ ಕವಿಸಿದನಾತನಂಬಿನ
ಝಗೆಯ ಝಳದಲಿ ಮುಳುಗಿ ಮೋನದೊಳಿರ್ದನಾ ಕರ್ಣ ೧೩

ಆಳು ನೀನಹುದೆಲವೊ ಕರ್ಣ ವಿ
ಶಾಲಮತಿ ನೀ ಲೇಸು ಮಾಡಿದೆ
ಬಾಲರಾದಡೆ ಭಂಗವೇ ಜಾವಳನೆ ಅಭಿಮನ್ಯು
ಕೋಲ ಸೈರಿಸು ಸೈರಿಸಾದಡೆ
ಭಾಳಲಿಪಿ ಸಂಕರುಷ ವಿಪುಳ ಶ
ರಾಳಿಯನೆ ಕೊಳ್ಳೆನುತ ನಕುಲನನೆಚ್ಚನಾ ಕರ್ಣ ೧೪

ತಾಗಿದವು ನಾಲ್ಕಂಬು ದೇಹದ
ಬೇಗಡೆಯಲೆಂಟಂಬು ನುಸುಳಿದ
ವಾಗ ಹದಿನಾರಂಬು ಹರಿದವು ಮತ್ತೆ ಬಳಸಲಿಸಿ
ಸೂಗುರಿಸಿ ಝೊಮ್ಮಿನಲಿ ಮುಂದಕೆ
ಬಾಗಿ ಬಿದ್ದನು ಸಾರಥಿಯ ಕೈ
ಲಾಗಿನಲಿ ತಿರುಗಿದನು ನಕುಳನು ರಾಜ ಮೋಹರಕೆ ೧೫

ಹರಿಬದಾಹವವೆನಗೆ ತನಗೆಂ
ದುರವಣಿಸಿದರು ಚೇಕಿತಾನಕ
ದುರುಳ ಧೃಷ್ಟದ್ಯುಮ್ನ ಪಾಂಡ್ಯ ಶಿಖಂಡಿ ಸೃಂಜಯರು
ಬರಲಿ ಬರಲೀ ಹೊಟ್ಟ ತೂರುವ
ಡರಸು ಮೋಹರವೇಕೆ ಸಾಕೆಂ
ದರಿಭಟರು ತರುಬಿದರು ಕೃಪ ಕೃತವರ್ಮ ಸೌಬಲರು ೧೬

ದಳಪತಿಯ ಹಿಂದಿಕ್ಕಿ ಪಾಂಡವ
ಬಲ ಮಹಾರಥರುರವಣಿಸಿ ಮೂ
ದಲಿಸಿ ನಿಂದರು ಕೊಂದರಿದಿರೇರುವ ಚತುರ್ಬಲವ
ಕೊಲೆಗೆ ಬೇಸರರಿವರು ಸಾವುದ
ಕಳುಕದವದಿರು ಹೇಳುವೆಡೆ ನಾ
ವಲಸಿದೆವು ಧೃತರಾಷ್ಟ್ರ ಎಂದನು ಸಂಜಯನು ನೃಪನ ೧೭

ವಿರಥರಾದ ಶಿಖಂಡಿ ಮೊದಲಾ
ದರಿಭಟರು ಜಾರಿದರು ಸುಭಟರ
ನೊರಸಿ ಕೊಂದೇರಿದನು ಕೆದರಿದರವರು ರಿಪುಬಲವ
ದೊರೆಗೆ ಹತ್ತಿರೆಯಾಯ್ತು ಕಾಳೆಗ
ವರಿದೆನಲು ನಿಸ್ಸಾಳಕೋಟಿಯ
ಧರದುರದ ದೆಖ್ಖಾಳದಲಿ ತಲೆದೋರಿದನು ಪಾರ್ಥ ೧೮

ಭಟರ ತೆಗೆತೆಗೆ ಪಾರ್ಥನೋ ರಿಪು
ಕಟಕ ಭೈರವನೋ ವೃಥಾ ಸಂ
ಕಟದ ಸನ್ನಾಹದಲಿ ಸುಭಟರ ಮಾರಬೇಡೆನುತ
ಲಟಕಟಿಸಿ ಬಲವೊದರಲಪ್ರತಿ
ಭಟರು ಬಳಿಕನುವಾಯ್ತು ವಿಜಯೋ
ತ್ಕಟದಲಿಪ್ಪತ್ತೈದು ಸಾವಿರ ವರ ಮಹಾರಥರ ೧೯

ನೂಕಿದರು ಸಂಶಪ್ತಕರು ಬಲ
ದಾಕೆವಾಳರ ತೆಗಸಿ ಬಹಳೋ
ದ್ರೇಕ ಸಾಹಸರೊದಗಿದರು ಕಂಪಿತ ಕುಳಾಚರರು
ತೋಕಿದರು ಶರವಳೆಯಲರ್ಜುನ
ಸಾಕು ಸಾರೈ ನಿನ್ನ ಜೊತ್ತಿನ
ಜೋಕೆಯಾಹವವಲ್ಲೆನುತ ತೆಗೆದೆಚ್ಚದಿರಿರಾಗಿ ೨೦

ಆರಿದಿಪ್ಪತೈದು ಸಾವಿರ
ತೇರು ಸರಿಸದಲೊಂದು ವಾಘೆಯ
ಲೇರಿದವು ನಿಪ್ಪಸರದಲಿ ನಿಲುವಾತನಾರಿದಕೆ
ಸಾರಿಗೆಗೆ ಸಾರಿಗೆಗೆ ಬಾಣಾ
ಸಾರವಿಪ್ಪತೈದು ಸಾವಿರ
ವಾರು ಸೈರಿಸಿ ನಿಲುವರೆನುತಿದ್ದುದು ಸುರಸ್ತೋಮ ೨೧

ಸುರಿದುದತಿವಳೆಯೆಂದು ಕುಲಗಿರಿ
ಕರಗುವುದೆ ಮೇಗರೆಯ ಶಿಲೆಯಿ
ಬ್ಬೆರಳು ನೆನೆವುದೆ ನಾಡ ಹಂತಿಯಲಳುಕುವರ್ಜುನನೆ
ಅರಿ ಮಹಾರಥರನಿಬರೈಸರ
ಸರಳು ಸಂಖ್ಯಾತೀತವದರೊಂ
ದುರವಣೆಗೆ ಪೈಸರಿಸಿತಿಲ್ಲವನೀಶ ಕೇಳೆಂದ ೨೨

ಅವರ ಶರಸಂಘಾತವನು ಕಡಿ
ದವರ ಸಾರಥಿಗಳನು ರಥವಾ
ಹವನು ಧನುವನು ಸಿಂಧವನು ಸೀಗುರಿಯ ಝಲ್ಲರಿಯ
ಅವರ ಪದಕ ಕಿರೀಟ ಕಂಕಣ
ವಿವಿಧ ಕರ್ಣಾಭರಣ ಕೇಯೂ
ರವನು ಕಡಿಕಡಿದೊಟ್ಟಿದನು ಕಲಿಪಾರ್ಥ ನಿಮಿಷದಲಿ ೨೩

ಘಾಯವಡೆದರು ಘಾಸಿಯಾದರು
ಬಾಯಲೊಕ್ಕುದು ಕರುಳು ಮಕ್ಕಳು
ತಾಯಿಗಾಗದೆ ಕೆಟ್ಟರೆಂಬುದ ಕಾಣಲಾಯ್ತಿಲ್ಲಿ
ನಾಯಕರು ಹಲರುಳಿದುದಧಿಕರು
ಹಾಯಿದರು ಹೂಣಿಗರು ಹರಿಹಂ
ಚಾಯಿತಿಪ್ಪತೈದುಸಾವಿರ ವರ ಮಹಾರಥರು ೨೪

ಎಲೆಲೆ ಸಂಶಪ್ತಕರ ಭಾರಿಯ
ಬಲ ಮುರಿದು ಬರುತಿದೆ ವಿಘಾತಿಗೆ
ನಿಲುವರಿಲ್ಲಾ ಸೂರೆವೋಯಿತು ರಾಯನಭಿಮಾನ
ಜಲಧಿ ಬರುತುದು ರಾಜ್ಯಕಾರ್ಯಕೆ
ನಿಲುವಡಿದು ಹೊತ್ತೆನುತ ಮಂತ್ರಿಗ
ಳುಲಿಯೆ ಕೌರವರಾಯ ಕಂಡನು ಪಾರ್ಥನುರವಣೆಯ ೨೫

ಕರವ ನೆಗಹಿದನಕಟ ಹೋಹೋ
ಬಿರುದರಂಜದಿರಂಜದಿರಿ ನಿ
ಮ್ಮರಿಭಟಗೆ ನಾಲ್ಕಿಲ್ಲ ಕೈಕಣ್ಣಿಲ್ಲ ನೊಸಲಿನಲಿ
ದೊರೆಯ ಕೈಯನು ಕಂಡ ಬಳಿಕೋ
ಸರಿಸಿರೈ ಪರಿವಾರ ದೂರದ
ಲಿರಿ ವೃಥಾ ಭಯವೇಕೆನುತ ಕುರುರಾಯನನುವಾದ ೨೬

ಕೂಡೆ ಗರಿಗಟ್ಟಿತು ಚತುರ್ಬಲ
ಜೋಡು ಮಾಡಿತು ರಾಯನಿದಿರಲಿ
ಹೇಡಿ ಕಲಿಯಹರೆಂಬರಿವದಿರು ಹೇವಮಾರಿಗಳೆ
ಜಾಡಿಸುವ ಝಲ್ಲರಿಯ ಮೋರೆಗೆ
ನೀಡಿ ಮರುಳುವ ಸೀಗುರಿಯ ದಳ
ವೇಡಿಸಿತು ಕಲ್ಪಾಂತ ರಂಜಿತ ಮೇಘಡಂಬರವ ೨೭

ಸರಕಟಿಸಿ ದಳ ಸರ್ವಲಗ್ಗೆಯ
ಲುರವಣಿಸೆ ಯಮಸೂನು ಕಂಡನು
ನರನ ತೆಗೆತೆಗೆ ಇಂದಿನಾವಹ ನಮ್ಮ ಮೇಲೆನುತ
ಅರಸ ನಡೆದನು ರಾಜ ಮೋಹರ
ಹೊರಳಿಗಟ್ಟಿತು ಪ್ರಳಯ ಸಮರ
ಸ್ಪುರಿತ ಬಹಳಾರ್ಣವದ ಲಹರಿಯ ಲಳಿಯ ಲಗ್ಗೆಯಲಿ ೨೮

ಎರಡು ದಳ ಗಂಟಿಕ್ಕಿದುದು ನೆಲ
ಬಿರಿಯೆ ಬೆರಸಿತು ಹೊಯ್ದರುರುಳುವ
ಶಿರದ ಬೀಳುವ ಭಟರ ಮೆದೆಗೆಡೆವಾನೆ ಕುದುರೆಗಳ
ಪರಿವಿಡಿಯದಂತಿರಲಿ ದೊರೆದೊರೆ
ಯುರವಣಿಸಿ ಹಳಚಿದರು ಪಾಂಡವ
ರರಸ ಕೌರವರರಸರೆಚ್ಚಾಡಿದರು ಮೂದಲಿಸಿ ೨೯

ಅರಸರಿವರೇ ಶಿವಶಿವಾ ನಿ
ಷ್ಕರುಣರೈ ನೀವೆಮ್ಮವೊಲು ಮೊನೆ
ಸರಳು ಮಾನ್ಯರನರಿವವೇ ನೀವೇಕೆ ರಣವೇಕೆ
ಒರಟರರ್ಜುನ ಭೀಮರತಿ ನಿ
ಷ್ಠುರರು ನಾವಡಿಮೇಲಹೆವು ನೀವ್
ಮರಳಿ ಬಿಜಯಂಗೈವುದೆಂದನು ಕೌರವರರಾಯ ೩೦

ಕೋಲ ಬಲುಹುಂಟಾಗೆ ನಾಲಗೆ
ಹೋಲ ನುಡಿಯದು ಹೊಲ್ಲದೇನಿದು
ಖೂಳ ಕಟಕಿಯ ಮಾತು ಬೇಡಂಬಿನಲಿ ಮಾತಾಡು
ಆಳುತನಕಾಭರಣವೇ ಮಾ
ತಾಳಿತನ ಕೈದೋರದಹಿತನ
ಮೇಲಣೇರಿನ ಬಾಯ ಸುಭಟರ ಹೊಗಳಬೇಡೆಂದ ೩೧

ಖರೆಯರಲ್ಲಾ ನೀವು ಕೊಂತಿಯ
ವರ ಕುಮಾರರು ನಿಮ್ಮೊಡನೆ ಸಂ
ಗರಕೆ ಸರಿಸರೆ ನಾವು ಸಂತೈಸಾದಡೆಂದೆಸಲು
ಸರಳು ಗಹನವ ಹೊದಿಸಿದವು ಹೂಂ
ಕರಿಸಿದವು ಹರೆಗಡಿದವರಿಮೋ
ಹರವ ಮುರಿದವು ಮುಸುಕಿದವು ಮೋದಿದವು ರಿಪುಭಟರ ೩೨

ಎಚ್ಚನೆಂಟಂಬಿನಲಿ ಕೌರವ
ನೆಚ್ಚ ಬಾಣವ ಕಡಿದು ನೂರರ
ಲೆಚ್ಚನೀತನ ರಥವನದ ಪರಿಹರಿಸಿ ಕುರುರಾಯ
ಎಚ್ಚನರಸನನಾ ಶರವ ಕಡಿ
ದೆಚ್ಚನವನಿಪನುಭಯರಾಯರ
ನಿಚ್ಚಟಕೆ ಮಝಪೂತುರೆಂದುದು ಮೇಲೆ ಸುರಕಟಕ ೩೩

ದ್ಯುಮಣಿ ಪಡುವಣ ಕಡಲ ಸಾರುವ
ಸಮಯವಾಯಿತ್ತುಭಯರಾಯರ
ಸಮರ ಸೌರಂಭಾತಿಶಯವಿಮ್ಮಡಿಸಿತಡಿಗಡಿಗೆ
ಆಮಿತ ರೋಷ ವಿಧೂತ ಪಾಣಿ
ಭ್ರಮಿತ ಶರತತಿ ವಿಸ್ಫುಲಿಂಗ
ಭ್ರಮಿತ ಭುವನತ್ರಯರು ಕಾದಿದರರಸ ಕೇಳೆಂದ ೩೪

ಗೆಲುವು ನಮಗಾಯ್ತೆಂದು ಕೌರವ
ರುಲಿದರೆಮಗಗ್ಗಳಿಕೆಯೆಂದವ
ರುಲಿವುತಿರ್ದರು ಕಾದಿದರು ಸಮಜೋಳಿ ಜೋಕೆಯಲಿ
ಬಳಿಕ ಯಮನಂದನನ ಕೈ ವೆ
ಗ್ಗಳಿಸಿ ತಾಗಿತು ನಿನ್ನ ತನುಜನ
ಬಿಲು ಸರಳು ರಥ ಸೂತ ವಾಜಿಗಳೊರಗಿದವು ಧರೆಗೆ ೩೫

ಸೆಳೆದು ಹಿರಿಯುಬ್ಬಣವನವನಿಪ
ಕೆಲಕೆ ಚಿಗಿದನು ಹಾ ಮಹಾದೇ
ವೆಲೆಲೆ ದೊರೆ ದೊರೆ ಹಗೆಗೆ ಸಿಕ್ಕಿದೆನೆನುತ ಬಲ ಬೆದರೆ
ಬಿಲುದುಡುಕಿ ಕೃತವರ್ಮ ಕೃಪ ಸೌ
ಬಲ ಕೃಪಾನುಜ ಶಲ್ಯ ಗುರುಸುತ
ದಳಪತಿಗಳೇರಿದರು ರಾಯನ ಸುತ್ತುವಳಯದಲಿ ೨೬

ದೊರೆಗೆ ಬಿದ್ದುದು ಭಾರಿಯಾವಹ
ವರರೆ ಬರಹೇಳೆನುತ ಕವಿದುದು
ಸರಳ ಹೊದೆಗಳ ಕೆದರಿ ಸಾತ್ಯಕಿ ಭೀಮ ಕೈಕೆಯರು
ಬಿರುದ ಧೃಷ್ಟದ್ಯುಮ್ನ ಮಾದ್ರೇ
ಯರು ಶಿಖಂಡಿ ಯುಯುತ್ಸು ಸೃಂಜಯ
ತರಳ ಪಂಚದ್ರೌಪದೇಯರು ಮುತ್ತಿದರು ನೃಪನ ೩೭

ಬಳಿಕ ಸಂಕುಳ ಸಮರವತಿ ವೆ
ಗ್ಗಳಿಸಿತದನೇನೆಂಬೆನಂಬುಧಿ
ಗಿಳಿದನಂಬುಜಮಿತ್ರ ಬೆನ್ನಲಿ ತಿಮಿರ ಬಳಿಸಲಿಸೆ
ಗೆಲಿದು ಹೋಗದಿರೆಂದು ಕೌರವ
ನಳವಿಗೊಟ್ಟನು ಮತ್ತೆ ಧರ್ಮಜ
ಬಿಲುದಿರುವ ನೇವರಿಸಿ ನಿಂದನು ಸಮರಕನುವಾಗಿ ೩೮

ರಾಯರಿಬ್ಬರ ಮನದ ತಿಮಿರದ
ತಾಯಿಮನೆಯೆಂಬವೊಲು ತಾ ಪೂ
ರಾಯದಲಿ ನುಂಗಿದುದು ಕತ್ತಲೆ ನಿಮಿಷದಲಿ ಜಗವ
ರಾಯ ಮೋಹರ ತೆಗೆದವೆರಡು ವಿ
ಡಾಯಿಯಲಿ ಬಹುವಿಧದ ವಾದ್ಯ ನ
ವಾಯಿ ಮಿಗೆ ನಲವಿನಲಿ ಬಂದರು ಪಾಳೆಯಂಗಳಿಗೆ ೩೯

(ಸಂಗ್ರಹ: ಸುಬ್ರಹ್ಮಣ್ಯ)

Wednesday, May 12, 2010

ಕರ್ಣಪರ್ವ: ೦೩. ಮೂರನೆಯ ಸಂಧಿ

ಸೂ : ರಣಭಯಂಕರನಹಿತ ಸುಭಟರ
ಹಣಿದವನು ಹೊಯ್ದಾಡಿ ಸಾತ್ಯಕಿ
ಕೆಣಕಿದನು ಕಲಕಿದನು ಕುರುಸೇನಾ ಮಹಾರ್ಣವವ

ಬೀಳಲಗ್ಗದ ಕ್ಷೇಮಧೂರ್ತಿ ನೃ
ಪಾಲಕನ ಪರಿವಾರ ರೋಷ ಕ
ರಾಳ ಶಿಖಿಪರಿತಪ್ತ ಕಂಪಿತ ಖಡ್ಗದೊಗ್ಗಿನಲಿ
ಆಳಿದನ ಮರಣದಲಿ ಹಿಂದಣ
ಕೂಳಿನಾಸೆಯ ಕುನ್ನಿಗಳಿರೆನು
ತಾಳು ಕವಿದುದು ಭೀಮ ಫಡ ಫಡ ನಿಲ್ಲು ನಿಲ್ಲೆನುತ ೧

ಕಳೆದು ಮೂದಲಿಸಿದರೆ ಹುಲ್ಲೆಯ
ಮರಿಗಳಿಗೆ ಖತಿಗೊಂಬುದೇ ಮದ
ಕರಿ ಕರೂಪದ ಕೊಬ್ಬಿನವದಿರು ಹಿಂದೆ ಹತ್ತಿದರೆ
ಮರಳಬಲ್ಲನೆ ಭೀಮನಿವರ
ಬ್ಬರಿಸಿ ಕವಿದರು ಹತ್ತು ಸಾವಿರ
ತುರಗ ಸರಿಸದಲೇರಿದವು ಪಡಿಮುಖದ ಬಲ ಬೆದರೆ ೨

ರಾವುತೋ ಎನಿತೊಂದು ಹಂತಿಯ
ಸಾವಿನಾತಗಳೇರಿದರು ಪರಿ
ಧಾವನೋದ್ಗತ ಧೂಳಿ ಮುಸುಕಿತು ತರಣಿ ಮಂಡಲವ
ಆ ವೃಕೋದರ ಗತಿಯ ಕಂಡನು
ರಾವುತರ ದೃಢವಾಘೆ ವಾಘೆಯ
ಲಾವಣಿಗೆ ಲೇಸೆನುತ ಸಾತ್ಯಕಿ ತುಡುಕಿದನು ಧನುವ ೩

ಅರರೆ ರಾವುತು ಜಾಗು ಸ್ವಾಮಿಯ
ಹರಿಬಕೋಸುಗ ಹಗೆಯ ಹೊಯ್ದಿರಿ
ಬಿರುದರಹುದೋ ಎನುತ ಮೀರುವ ಹಯವ ಮುರಿಯೆಸುತ
ಸರಳನೊಂದನೆ ತೊಡಚಿ ತುರಗದ
ಕೊರಳ ವಾಘೆಯ ಕರವ ರಾವ್ತರ
ಶಿರನೆಚ್ಚನು ಕೊಂದನೀಪರಿ ಹತ್ತು ಸಾವಿರವ ೪

ಬಿದ್ದವಗಣಿತ ತುರಗ ದಳ ಕೈ
ಮುದ್ದೆಗೊಂಡನು ಕಾಲನಸುವಿಡಿ
ದಿದ್ದವರ ನಾ ಕಾಣೆ ತೊಡಕಿದ ವೈರಿ ಬಲದೊಳಗೆ
ಹದ್ದು ಕಾಗೆಗೆ ನಿನ್ನವರು ಸಾ
ಲಿದ್ದು ಬೋನವ ಸವಸಿದರು ಬಲ
ವಿದ್ದು ಮಾಡುವುದೇನು ನಿಮಗಿನ್ನರಸ ಕೇಳೆಂದ ೫

ಥಟ್ಟು ಮುರಿದುದು ಕೊಂಡ ನೆಲವನು
ಬಿಟ್ಟು ಹಿಂಗಿತು ನಮ್ಮ ಬಲ ಮೈ
ಬಿಟ್ಟು ತಲೆದೋರಿದನು ಸಾತ್ಯಕಿ ದೊರೆಗಳಿದಿರಿನಲಿ
ದಿಟ್ಟನಾರಿವನೀಸು ಮುಷ್ಟಾ
ಮುಷ್ಟಿಯಲಿ ಬಂದವನೆನುತ ಜಗ
ಜಟ್ಟಿಗಳು ವಿಂದಾನುವಿಂದರು ನಿಂದರಿದಿರಿನಲಿ ೬

ಕವಿದುದಿವದಿರ ಸೇನೆ ಸಾತ್ಯಕಿ
ಹವಣನರಿಯದೆ ಹೊಕ್ಕು ಸಿಕ್ಕಿದ
ನವರೊಳಗೆ ಕಟ್ಟಿದವು ಸುತ್ತಲು ಸಾವಿರಾನೆಗಳು
ನವ ಸಹಸ್ರ ತುರಂಗ ಕಾಲಾ
ಳವಗಡಿಸಿತೈವತ್ತು ಸಾವಿರ
ವವನಿತಳ ನುಗ್ಗಾಯ್ತು ಪದಘಟ್ಟಣೆಯ ಘಲ್ಲಣೆಗೆ ೭

ಕೆಣಕಿದರೆ ಭುಗಿಲೆಂದುದೀತನ
ರಣ ಪರಾಕ್ರಮವಹ್ನಿ ಕರಡದ
ಬಣಬೆ ಸಿಕ್ಕಿತು ಕಾಳುಗಿಚ್ಚಿನ ಬಾಯ ಬಗರಗೆಗೆ
ಕಣೆಯ ಕಾಣೆನು ಸುತ್ತಲೊಟ್ಟುವ
ಹೆಣನ ಕಂಡೆನಿದಾವ ಬಾಳೆಯ
ಹಣೆದವೋ ನಿನ್ನಾಳು ಕುದುರೆಯನರಿಯೆ ನಾನೆಂದ ೮

ದೊರೆಗಳವದಿರು ತಮ್ಮ ಬಲ ಸಂ
ವರಣೆ ನೆಗ್ಗಿದ ಹೇವದಲಿ ಹೊಡ
ಕರಸಿ ಹೊಕ್ಕರು ಹೂಳಿದರು ಸಾತ್ಯಕಿಯನಂಬಿನಲಿ
ಸರಳ ಬರವೊಳ್ಳಿತು ಮಹಾ ದೇ
ವರಸು ಮಕ್ಕಳಲೇ ವಿರೋಧವೆ
ಹರಹರತಿಸಾಹಸಿಕರಹುದಹುದೆನುತ ತೆಗೆದೆಚ್ಚ ೯

ಏನನೆಂಬೆನು ಮೊದಲ ಲಗ್ಗೆಯ
ಲಾ ನಿಶಿತಶರ ದೈತ್ಯಭಟ ವಿಂ
ದಾನುವಿಂದರ ಜೀವ ಧುಮ್ಮಿಕ್ಕಿದುದು ಜವಪುರಿಗೆ
ಚೀನ ಭೋಟ ಕರೂಷ ಖರ್ಪರ
ಸೂನು ಜೋನೆಗ ತುರಕ ಬರ್ಬರ
ಸೇನೆ ತಾಗಿತು ತಾಗಿದಾಗಳೆ ನೀಗಿದುದು ತಲೆಯ ೧೦

ಮುರಿದುದಿದು ನಮ್ಮವರು ಸಾತ್ಯಕಿ
ಯುರುಬೆಗಾನುವರಿಲ್ಲ ದೊರೆ ಕೈ
ಮರೆದನೋ ಕಾಳಾಯ್ತೆನುತ ಕುರುಸೇನೆ ಕಳವಳಿಸೆ
ಜರೆದು ಮೂದಲಿಸಿದನು ಮಾದ್ರೇ
ಶ್ವರನ ದುಶ್ಯಾಸನನ ಸೌಬಲ
ಗುರುಜ ಕೃತವರ್ಮಾದಿ ಪರಿವಾರವನು ಕಲಿಕರ್ಣ ೧೧

ಪೂತು ಮಝ ದಳಪತಿಯ ಚಿತ್ತದ
ಖಾತಿ ಕೊಬ್ಬಿತು ನಮ್ಮ ಭುಜ ಬಲ
ವೇತಕಿದು ಬಳಿಕೇನು ಸಾತ್ಯಕಿ ಸರಸವೇ ತಮಗೆ
ಭೂತನಾಥನ ಕಡುಹ ತಡೆವಭಿ
ಜಾತರಲ್ಲಾ ತಾವೆನುತ ನಿಜ
ಸೂತರನು ಬೋಳೈಸಿ ನೂಕಿತು ಗುರುಸುತಾದಿಗಳು ೧೨

ಮುರಿದ ಬಲ ಗರಿಗಟ್ಟಿತೊಗ್ಗಿನ
ಲೊರಲಿದವು ನಿಸ್ಸಾಳ ಕಹಳೆಯ
ಬಿರುಸರದ ಬಹುವಿಧದ ವಾದ್ಯಧ್ವನಿಯ ಕಳಕಳದ
ತುರುಗಿ ತೂಳುವ ಸಿಂಧ ಸೆಳೆ ಮಡ
ಲಿರಿವ ಝಲ್ಲರಿ ಪಲ್ಲವದ ನಿಡು
ದೆರೆಯ ಧವಳಚ್ಛತ್ರ ಚಮರದೊಳೊದಗಿತತಿರಥರು ೧೩

ಮುಂಕಣಿಯಲಿಟ್ಟಣಿಸಿದರು ಭಾ
ರಂಕದಾಳುಗಳೆಂಟು ಸಾವಿರ
ಬಿಂಕದತಿರಥರೆಂಟು ಕೋಟಿ ತುರಂಗ ಪಾಯದಳ
ಶಂಕಿಸುವನೇ ಬಳಿಕ ಯದುಕುಲ
ದಂಕಕಾರನು ನಿಂದನನಿಬರಿ
ಗಂಕ ಝಂಕೆಯನೇನನೆಂಬೆನು ಸಾತ್ಯಕಿಯ ಮನದ ೧೪

ಭಾರಿಯಾಹವವಾಯ್ತು ಖಿಳದಳ
ಭಾರ ಬಿದ್ದುದು ಸಾತ್ಯಕಿಯ ಸುರ
ನಾರಿಯರ ತೋಳಿನಲಿ ಕಾಬುದು ನೆಲನ ರಿಣ ಹರಿದು
ಹೋರಿದರೆ ಹುರುಳಿಲ್ಲೆನುತ ಪರಿ
ವಾರವೊರಲಿತು ಪಾಂಡ್ಯ ಕೈಕೆಯ
ಕೇರಳರ ಹಿಂದಿಕ್ಕಿ ಪಡಿಬಲವಾದನಾ ಭೀಮ ೧೫

ಮುಂದೆ ಹರಿದರು ಪಾಂಡು ತನಯರ
ನಂದನರು ತಾವೈವರೀತನ
ಹಿಂದುಳುಹಿ ಹಿಂಡಿದರು ಹೇರಾಳದ ಚತುರ್ಬಲವ
ಕೊಂದರಗ್ಗದ ಚಿತ್ರಸೇನನ
ಬಂದ ಹರಿಬದ ಚಿತ್ರನನು ಗುರು
ನಂದನನು ಬಳಿಕವರ ಬೆದರಿಸಿ ನೂಕಿದನು ರಥವ ೧೬

ಹೆರತೆಗೆದು ಕೆಲಸಾರಿ ಮಕ್ಕಳು
ಮರಿಗಳಿಗೆ ರಣವೇಕೆ ಪಾಂಡವ
ರುರುವ ಸಂತತಿ ನೀವಕಟ ಎನುತವರನೊಡಹಾಯ್ಸಿ
ಇರಿವ ಭಟನಹೆ ಯಾದವರ ಬಡ
ಕರುವೆ ಬಾ ಬಾ ಎಂದು ಚಿಟಿಕಿಸಿ
ಕರೆದು ಗುರುಸುತ ಸಾತ್ಯಕಿಯ ತಾಗಿದನು ನಗೆಮಾಡಿ ೧೭

ಸಾರು ನೀ ಸಾರೆಲವೊ ಭೀಮನ
ತೋರಗರುಳಿನ ದಂಡೆಯನು ಕೈ
ಯಾರೆ ಮಾರಿಗೆ ಮುಡಿಸುವೆನು ಫಡ ಭೀಮ ನಿಲ್ಲೆನುತ
ಆರಿದನು ಜಗ ನಡುಗಲಾ ಜಂ
ಭಾರಿ ಜವಗೆಡೆ ಬೊಬ್ಬಿರಿದನಾ
ಭಾರತದ ಭಾರಣೆಯಲೈದಿದನನಿಲ ನಂದನನ ೧೮

ಗುರುತನೂಜ ಕಣಾ ವಿರೋಧಿ
ಸ್ಮರಕಪರ್ದಿ ಕಣಾ ವೃಕೋದರ
ಕರಿ ಮೃಗೇಂದ್ರ ಕಣಾ ಕಣಾಳಿಯ ಕಾಯ್ದುಕೊಳ್ಳೆನುತ
ಸರಳನೆಚ್ಚನು ಸರಳನಾ ಬಳಿ
ಸರಳು ಮುಂಚಿದುದಾ ಸರಳ ಬಳಿ
ಸರಳು ಮುಂಚಿದುದಾವ ಕೈಚಳಕವೊ ಶಿವಾ ಎಂದ ೧೯

ತಿರುಗಿ ನಿಂದನು ಪವನಸುತನೆಲೆ
ಗುರುಜ ನಿನ್ನಗ್ಗಳಿಕೆಗಳ ಜಗ
ವರಿಯದೇ ಫಡ ಭಟ್ಟನಾದೈ ನಿನಗೆ ನೀನೆನುತ
ಸರಳ ಬಳಿಸರಳುಗಳನಾ ಲಘು
ತರದ ಲೆಕ್ಕದಲೆಸೆವ ವಿವರದ
ಪರಿವಿಡಿಯ ವೇಗಾಯ್ಲತನವನು ತೋರಿದನು ಭೀಮ ೨೦

ಜಾಗು ಮಝರೇ ಭೀಮ ಬಲುಗೈ
ಲಾಗು ಮರೆಯದಲಾ ಶರೌಘ
ತ್ಯಾಗದಸ್ತ್ರ ಪ್ರವರ ಬಂಧವ ಮತ್ತೆ ನೋಡೆನುತ
ಆ ಗಗನವಿದು ಧರಣಿಯಿದು ದಿ
ಗ್ಬಾಗವೆಲ್ಲಿಯದೆಂಬ ವಿವರವ
ನಾಗಳರಿಯೆನು ದ್ರೋಣನಂದನನೆಚ್ಚನನಿಲಜನ ೨೧

ಎಲೆಲೆ ಹಾರುವನೇಕೆ ಹರಿಮೇ
ಖಳೆಯ ಕೇಳಿಕೆಯೇಕೆ ಪಡಿಮ
ದ್ದಳೆಯಬಡಿಕರ ಬಿಂಕ ಮೇಳವವಿಲ್ಲಲಾ ನಿನಗೆ
ಹೊಲುಬುಗೆಡುವನೆ ಭೀಮನೀ ಸರ
ಳೊಳಗೆ ಹುಸಿಯೇಕೆನುತ ಬಾಣಾ
ವಳಿಯ ನಿಮಿಷಕೆ ಕಡಿದು ಗುರುಜನನೆಚ್ಚನಾ ಭೀಮ ೨೨

ರಥದ ಮೇಲಂಬುಗಳು ರಿಪು ಸಾ
ರಥಿಯ ಮೈಯಲಿ ಘಾಯ ತುರಗ
ವ್ಯಥೆಯನೇವೇಳುವೆನು ಟೆಕ್ಕೆಯವೈದೆ ಬಾಣಮಯ
ಶಿಥಿಲವಾದುವು ಗಾಲಿಗಳು ಬಳಿ
ರಥಿಕರೀತನ ಬಿಟ್ಟು ಹಾಯ್ದರು
ಪೃಥುಳಬಲನೈ ಭೀಮನೆಚ್ಚನು ಗುರುತನೂಭವನ ೨೩

ನೊಗವನೀಡಾಡಿದನು ಕುದುರೆಗ
ಳೊಗಡಿಸಲು ರಕುತವನು ಸಾರಥಿ
ಬಿಗಿದ ಹಿಳುಕುಗಳೌಕಿದವು ತೇರಿನಲಿ ಸಿಂಧದಲಿ
ಒಗುವ ನೆತ್ತರ ಸುರಿವ ಬಾಣದ
ನುಗುತೆಗಂಡಿಯ ಮೆಯ್ಯ ಭೀಮನ
ಬೆಗಡು ಮೊಳೆತುದು ಗುರುತನೂಭವನೆಚ್ಚನನಿಲಜನ ೨೪

ಈತನೆಚ್ಚನು ಮತ್ತೆ ಶರ ಸಂ
ಘಾತವೋ ಗುರುಸುತನ ತನುವೋ
ಪೂತ ಮುತ್ತವೊ ತಳಿತೆಸೆವ ಕೆಂದಾವರೆಯ ಬನವೊ
ಭೀತಿ ಬಿಗಿದುದು ದಿಟ್ಟತನದನು
ಧಾತುಗೆಟ್ಟುದು ನೋಡಿ ಕಂಗಳು
ಸೋತು ಮರಳಿದನಿತ್ತಲಶ್ವತ್ಥಾಮ ಮೈಮರೆದ ೨೫

ನನೆದ ಜಾಜಿನ ಗಿರಿಯೊ ಭೀಮನ
ತನುವೊ ಖಂಡಿತ ರಕ್ತಚಂದನ
ಬನವೊ ರಥವೋ ತಳಿತಶೋಕೆಯ ಮರನೊ ಸಾರಥಿಯೊ
ಮನ ಹಣುಗಿ ತುಟಿಯೊಣಗಿ ನೋಟದ
ಮೊನೆ ಮುರಿದು ಝೋಂಪಿಸುತ ಮುಂದಣಿ
ಗೊನೆದು ಬಿದ್ದನು ಭೀಮ ಪಾಂಡವ ಸೇನೆ ಕಳವಳಿಸೆ ೨೬

ಅಹಹ ವೈರಿಗೆ ಧರೆಗೆ ಪಾಣಿ
ಗ್ರಹಣವಾಯಿತೆ ಪಾಂಡುಸುತರಿಗೆ
ಬಹ ವಿಪತ್ತುಗಳೊಳಗಿದೊಂದೇ ಕಳಶವಾದುದಲ
ಅಹಿತರಿಗೆ ಗೆಲುವಾಯ್ತು ನಮಗಿ
ಲ್ಲಿಹುದು ಮತವಲ್ಲೆನುತ ಸಾರಥಿ
ಸಹಸಿಗನ ಸಂತೈಸಿ ತಂದನು ರಾಜಮಂದಿರಕೆ ೨೭

ತಂದೆಯಳಿದಾ ಹೊತ್ತು ಹಗೆಯನು
ಕೊಂದು ಸಾಯದೆ ದೇಹ ಮೋಹಕೆ
ನಿಂದು ನೀ ನಿಶ್ಶಂಕನಾದೈ ವೈರಿಶರಹತಿಗೆ
ಎಂದು ಸಾರಥಿ ಶೋಕಿಸುತ ಗುರು
ನಂದನನ ಕೊಂಡೊಯ್ದನಿತ್ತಲು
ಸಂದಣಿಸಿತತಿರಥರು ಸೌಬಲ ಶಲ್ಯ ಮೊದಲಾಗಿ ೨೮

ದೊರೆಗಳಿಬ್ಬರ ಸೋಲವನು ವಿ
ಸ್ತರಿಸಿ ಹೊಕ್ಕದು ಮತ್ತೆ ಮಾದ್ರೇ
ಶ್ವರ ಶಕುನಿ ಕೃತವರ್ಮ ಕೃಪ ದುಶ್ಯಾಸನಾದಿಗಳು
ಅರಿಬಲದಲಾ ದ್ರೌಪದೇಯರು
ಹರಿಯನುಜ ಮಾದ್ರೇಯ ಕೈಕೆಯ
ವರಯುಧಾಮನ್ಯೂತ್ತಮೌಂಜಸ ಪಾಂಡ್ಯ ಸೃಂಜಯರು ೨೯

ಬಲಿದುದಾಹವ ಮತ್ತೆ ಚಾತು
ರ್ಬಲ ಛಡಾಳಿಸಿ ಕಾದುತಿರ್ದುದು
ಮುಳಿದು ಶಲ್ಯನ ಕೊಡೆ ಪಂಚದ್ರೌಪದೀಸುತರು
ಅಳವಿಗೊಟ್ಟಿರಿಯಕಟಕಟ ಮ
ಕ್ಕಳಿರ ನಿಮಗೇಕಿದು ಯುಧಿಷ್ಠಿರ
ಫಲುಗುಣರ ಬರಹೇಳಿರೆನುತೆಚ್ಚನು (ಪಾ: ಬರಹೇಳೆನುತಲೆಚ್ಚನು) ಮಹಾಸ್ತ್ರದಲಿ ೩೦

ಎಚ್ಚನಿವನಿವನೊಡನೆ ಬಾಣವ
ಕೊಚ್ಚಿದರು ಕೊಡಹಿದರು ಶರದಲಿ
ಚುಚ್ಚಿದನು ಜೀಕುಳಿಯ ಬಿಟ್ಟನು ನೆತ್ತರನು ನೆಲಕೆ
ಬೆಚ್ಚಿದವು ರಥವಾಜಿ ಹತ್ತಿಗೆ
ಬಿಚ್ಚಿ ರಥ ನುಗ್ಗಾಯ್ತು ಶೌರ್ಯದ
ಕೆಚ್ಚು ಮುರಿದುದು ಹಿಂಗಿದರು ಪಾಂಡವಕುಮಾರಕರು ೩೧

(ಸಂಗ್ರಹ : ಸುಬ್ರಹ್ಮಣ್ಯ)

Tuesday, May 11, 2010

ಗದಾಪರ್ವ: ೦೩. ಮೂರನೆಯ ಸಂಧಿ

ಸೂ. ರಾಯದಳ ಸಲೆ ಸವೆಯೆ ಸಮರದ
ನಾಯಕರು ನೆರೆ ಮುರಿಯಲಾ ದ್ವೈ
ಪಾಯನ ಸರೋವರವ ಹೊಕ್ಕನು ಕೌರವರ ರಾಯ

ಕೇಳು ಜನಮೇಜಯ ಧರಿತ್ರೀ
ಪಾಲ ಕುರುಪತಿ ಹೆಗಲ ಗದೆಯಲಿ
ಕಾಲುನಡೆಯಲಿ ಹಾಯ್ದನೇಕಾಂಗದಲಿ ಕಳನೊಳಗೆ
ಆಳ ಕಾಣೆನು ಛತ್ರ ಚಮರದ
ವೀಳೆಯದ ವಿಸ್ತಾರವಿಭವವ
ಬೀಳುಕೊಟ್ಟನು ನಡೆದನಿಂದ್ರ ದಿಶಾಭಿಮುಖವಾಗಿ ೧

ಅಕಟ ನಮ್ಮಯ ಪೂರ್ವರಾಜ
ಪ್ರಕರಕೀ ವಿಧಿಯಾಯ್ತಲಾ ಕಂ
ಟಕನಲಾ ಧರ್ಮಪ್ರಭಾವಕೆ ಕೌರವೇಶ್ವರನು
ಶಕುನಿಮತ ವಿಷಬೀಜವೇ ಬಾ
ಧಕವ ತಂದುದಲಾ ಯುಧಿಷ್ಠಿರ
ಸಕಲ ಬಲ ಪರಿಶೇಷವೇನೆಂದರಸ ಬೆಸೆಗೊಂಡ ೨

ಧರಣಿಪತಿ ಕೇಳ್ ಧರ್ಮಜನ ಮೋ
ಹರದೊಳುಳಿದುದು ತೇರು ಸಾವಿರ
ವೆರಡು ಗಜವೇಳ್ನೂರು ಮಿಕ್ಕುದು ಲಕ್ಕ ಪಾಯದಳ
ತುರಗ ಸಾವಿರವೈದು ಸಾತ್ಯಕಿ
ವರ ಯುಧಾಮನ್ಯೂತ್ತಮೌಂಜಸ
ರುರು ಶಿಖಂಡಿ ದ್ರುಪದಸೂನು ದ್ರೌಪದೀಸುತರು ೩

ಆ ಸುಯೋಧನ ಸೇನೆಯಲಿ ಧರ
ಣೀಶ ಕೃಪ ಕೃತವರ್ಮ ಗುರುಸುತ
ರೈಸುಬಲದಲಿ ನಾಲ್ವರುಳಿದರು ಹೇಳಲೇನದನು
ಏಸು ಬಲವೆನಿತೈಶ್ವರಿಯವಿ
ದ್ದೇಸು ಭಟರಿನಿತಗ್ಗಳೆಯರಿ
ದ್ದೇಸರಲಿ ಫಲವೇನು ದೈವವಿಹೀನರಿವರೆಂದ ೪

ಇತ್ತಲೀ ಸಂಜಯನ ತಂದುದು
ಮೃತ್ಯು ಧೃಷ್ಟದ್ಯುಮ್ನನೀತನ
ಕುತ್ತಿ ಕೆಡಹಿದಡಾಗದೇ ಕುರುಡಂಗೆ ರಣರಸವ
ಬಿತ್ತರಿಸುವನು ಕೌರವನ ಜಯ
ದತ್ತಲೆರಕ ದುರಾತ್ಮನನು ಕೈ
ವರ್ತಿಸಾ ಯಮನಗರಿಗೆಂದನು ಸಾತ್ಯಕಿಯ ಕರೆದು ೫

ಸೆಳೆದಡಾಯ್ದವ ಸಂಜಯನ ಹೆಡ
ತಲೆಗೆ ಹೂಡಿದನರಿವ ಸಮಯಕೆ
ಸುಳಿದನಗ್ಗದ ಬಾದರಾಯಣನವನ ಪುಣ್ಯದಲಿ
ಎಲೆಲೆ ಸಾತ್ಯಕಿ ಲೇಸುಮಾಡಿದೆ
ಖಳನೆ ಸಂಜಯನೆಮ್ಮ ಶಿಷ್ಯನ
ಕೊಲುವುದೇ ನೀನೆನುತ ಕೊಂಡನು ಕೊರಳಡಾಯುಧವ ೬

ದೇವ ನಿಮ್ಮಯ ಶಿಷ್ಯನೇ ಪರಿ
ಭಾವಿಸೆನು ತಾನರಿದೆನಾದಡೆ
ದೇವಕೀಸುತನಾಣೆ ಬಿಟ್ಟೆನು ಸಂಜಯನ ವಧೆಯ
ನೀವು ಬಿಜಯಂಗೈವುದೆನೆ ಬದ
ರಾವಳೀಮಂದಿರಕೆ ತಿರುಗಿದ
ನಾ ವಿಗಡಮುನಿ ಖೇದಕಲುಷಿತ ಸಂಜಯನ ತಿಳುಹಿ ೭

ಅರಸ ಕೇಳೈ ಸಂಜಯನು ಬರ
ಬರಲು ಕಂಡನು ದೂರದಲಿ ನಿರಿ
ಗರುಳ ಕಾಲ್ದೊಡಕುಗಳ ಖಂಡದ ಜಿಗಿಯ ಜಾರುಗಳ
ಕರಿಗಳೊಟ್ಟಿಲನೇರಿಳಿದು ಪೈ
ಸರಿಸಿ ಮಿದುಳಿನ ಜೋರು ಜೊಂಡಿನ
ತೊರಳೆಯಲಿ ದಡದಡಿಸಿ ಜಾರುತ ಬೀಳುತೇಳುವನ ೮

ಎಡಹುದಲೆಗಳ ದಾಂಟಿ ರಕುತದ
ಮಡುವಿನಲಿ ಗದೆಯೂರಿ ನೆಲೆಗಳ
ಪಡೆದು ಕಂಪಿಸಿ ಕುಣಿವ ಮುಂಡವ ಗದೆಯಲಪ್ಪಳಿಸಿ
ಅಡಿಗಡಿಗೆ ಹೇರಾನೆಗಳ ಹೇ
ರೊಡಲ ಹತ್ತಿಳಿದೇರಿ ಝೊಂಪಿಸಿ
ಮಿಡುಕಿ ನಿಲುವನು ಬಳಲಿದೂರ್ಧ್ವಶ್ವಾಸ ಲಹರಿಯಲಿ ೯

ಓಡದಿಹ ನರಿ ಹದ್ದು ಕಾಗೆಗೆ
ಕೂಡ ಗದೆಯನು ಬೀಸುವನು ಬಿಡೆ
ನೋಡುವನು ಹೆಣದಿನಿಹಿಗಳ ಹೇರಾಳ ರಕ್ಕಸರ
ತೋಡುಗೈಗಳ ಮಿದುಳ ಬಾಯ್ಗಳ
ಬಾಡುಗರುಳಿನ ಚೀತ್ಕೃತಿಯ ತಲೆ
ಯೋಡುಗಳ ತನಿರಕುತ ಪಾನದ ಶಾಕಿನೀಜನವ ೧೦

ಕಂದ ಪಖ್ಖಲೆಗಳಲಿ ತೀವಿದ
ಮಂದ ರಕುತದ ತೋದ ತಲೆಗಳ
ತಿಂದು ಬಿಸುಡುವ ನೆಣನ ಕಾರುವ ಬಸೆಯ ಬಾಡಿಸುವ
ಸಂದಣಿಸಿ ಹರಿದೇರ ಬಾಯ್ಗಳೊ
ಳೊಂದಿ ಬಾಯ್ಗಳನಿಡುವ ಪೂತನಿ
ವೃಂದವನು ಕಂಡೋಸರಿಸುವನದೊಂದು ದೆಸೆಗಾಗಿ ೧೧

ಕುಣಿವ ಕರಿಗಳ ತಲೆಯ ಮಡುಹಿನ
ಲಣೆದು ಹಜ್ಜೆಯನಿಡುತ ಭೂತದ
ಹೆಣನ ತೀನಿಗೆ ತವಕಿಸುವ ವೇತಾಳ ಸಂತತಿಯ
ರಣದೊಳಗೆ ಕೈಯೂರಿ ಮಿಗೆ ಹಳ
ವೆಣನ ಹೊಲಸಿಗೆ ಹೇಸಿ ಹರಿದಡಿಗಡಿಗೆ ಸುಯ್ವವನ ೧೨

ಕಡಿವಡೆದ ಹಕ್ಕರಿಕೆ ರೆಂಚೆಯ
ತಡಿಗಳಲಿ ಕುಳ್ಳಿರ್ದು ಮೊಣಕಾ
ಲ್ಗಡಿಯ ಗಾಢವ್ರಣದ ನೆಣವಸೆಗೆಸೆರ ಬಳಿಬಳಿದು
ಗಡಣ ಹೆಣದರಹುಗಳೊಳಗೆ ಕಾ
ಲಿಡುತ ಸೋದಿಸಿ ಮುಂದೆ ಹೆಜ್ಜೆಯ
ನಿಡುತ ಪೈಸರವೋಗಿ ಮಾರ್ಗಶ್ರಮಕೆ ಬೆಮರುವನ ೧೩

ಕಡಿದ ಕೈದುಗಳೊಟ್ಟಿಲಲಿ ತನಿ
ಗೆಡೆದ ಗಾಲಿಯ ಹಾಯ್ಕಿ ಮೆಲ್ಲಡಿ
ಯಿಡುತ ಹಜ್ಜೆಯ ನೆಣದ ಕೆಸರಿಗೆ ಛತ್ರಚಮರಿಗಳ
ಅಡಸಿ ಹೆಜ್ಜೆಯನಿಡುತ ರಕುತದ
ಮಡುವನೆಡಬಲಕಿಕ್ಕಿ ಮೆಲ್ಲನೆ
ನಡೆದು ದೈವವ ಬಯ್ದುಬಯ್ದಡಿಗಡಿಗೆ ಸುಯ್ವವನ ೧೪

ಭೂತರವ ಭೇತಾಳ ಕಲಹ ವಿ
ಭೂತ ಜಂಬುಕ ಘೂಕ ಕಾಕ
ರ್ವಾತ ರಭಸಕೆ ಬೆಚ್ಚುವನು ಪಾಂಡವರ ಬಲವೆಂದು
ಅತು ಮರಳಿದು ಹಿಂದು ನೋಡಿ ಪ
ರೇತ ವಿಭವವಲಾ ಎನುತ ಛಲ
ಚೇತನನು ಸಲೆ ಚಂಡಿಯಾದನು ಕಳನ ಚೌಕದಲಿ ೧೫

ಹೇಳುವಡೆ ಕುರುಪತಿಯನೇ ನೆರೆ
ಹೋಲುವನು ಗದೆ ಹೆಗಲಲದೆ ಮೇ
ಲಾಳ ಕಾಣೆನು ಚಮರ ಚಾಹಿಯ ಗಜಹಯಾವಳಿಯ
ಹೋಲುವುದು ಜನವೊಬ್ಬರೊಬ್ಬರ
ನಾಳೊಳೊಬ್ಬನೊ ಮೇಣು ಕುರು ಭೂ
ಪಾಲಕನೊ ನೋಡುವೆನೆನುತ ಸಂಜಯನು ನಡೆತಂದ ೧೬

ಬಂದು ಕಂಡನು ರಾಜವನ ಮಾ
ಕಂದನನು ಧೃತರಾಷ್ಟ್ರ ರಾಯನ
ಕಂದನನು ದೌರ್ಜನ್ಯವಲ್ಲೀ ವಿಪುಳಕಂದನನು
ಮುಂದುವರಿವ ವಿಲೋಚನಾಂಬುಗ
ಳಿಂದ ಸೈರಣೆ ಮಿಗದೆ ಸಂಜಯ
ನಂದು ದೊಪ್ಪನೆ ಕೆಡೆದು ಹೊರಳಿದನರಸನಂಘ್ರಿಯಲಿ ೧೭

ಕಡಲತಡಿ ಪರಿಯಂತ ರಾಯರ
ಗಡಣದಲಿ ನೀನೊಬ್ಬನೆಂಬೀ
ನುಡಿಗೆ ನಿಶ್ಚಯವೀಗಲಾಯಿತು ತಂದೆ ಕುರುರಾಯ
ಬಿಡದೆ ಬಾಗುವ ನೃಪರ ಮಕುಟದೊ
ಳಿಡುವ ಕೋಮಲ ಚರಣವಿದರೊಳು
ನಡೆಯಲೆಂತೈ ಕಲಿತೆ ಎಂದನು ಸಂಜಯನು ನೃಪನ ೧೮

ರಣಮುಖದೊಳೇಕಾದಶಾಕ್ಷೋ
ಹಿಣಿಗೆ ಹರಿವಾಯ್ತೇ ಯುಧಿಷ್ಠಿರ
ನುಣಲಿ ಧರೆಯನು ಗೋತ್ರವಧವಿನ್ಯಸ್ತ ಕಿಲ್ಬಿಷವ
ಸೆಣಸ ಮಾಡಿದೆ ದೈವದಲಿ ಧಾ
ರುಣಿಯ ಹುದುವಿನ ಸಿರಿಗೆ ಸೇರದೆ
ಹಣಿದವಾಡಿದೆ ರಾಜವಂಶದ ಕಲ್ಪತರುವನವ ೧೯

ಶಶಿರುಚಿಗೆ ಸೈರಿಸದ ಸಿರಿಮುಡಿ
ಬಿಸಿಲ ಸೆಕೆಗಾಂತುದೆ ಸುಗಂಧ
ಪ್ರಸರಪೂರ್ಣಘ್ರಾಣವೀ ಹಳೆವೆಣನ ಹೊಲಸಿನಲಿ
ಉಸುರುದೆಗಹಾಹುದೆ ಸುಗೀತದ
ರಸದ ಮಧುವಿಂಗಾಂತ (ಪಾ: ಮಧುವಿಗಾಂತ) ಕಿವಿ ವಾ
ಯಸ ಸೃಗಾಲಧ್ವನಿಗೆ ಸೊಗಸಿತೆ ತಂದೆ ಕುರುರಾಯ ೨೦

ಲಲಿತ ಮೃದುತರ ಹಂಸತೂಳದ
ಲುಳಿತ ಕೋಮಲ ಕಾಯ ಕೈದುಗ
ಳೆಲುಗಳೊಟ್ಟಿಲ ಹಾಸಿನಲಿ ಪೈಸರಿಸಿ ಮಲಗಿತಲಾ
ಸುಳಿಯೆ ಕೈಗೊಡುವರಸುಗಳ ಕೆಲ
ಬಲದ ಪಾಯವಧಾರಿನವರನು
ಕಳುಹಿ ಬಂದೈ ಸಾರ್ವಭೌಮರ ಚಿಹ್ನವಿದೆಯೆಂದ ೨೧

ಎತ್ತಣೇಕಾದಶ ಚಮೂಪತಿ
ಯೆತ್ತಣೀಯೇಕಾಕಿತನ ತಾ
ನೆತ್ತ ಗಜಹಯ ರಥ ಸುಖಾಸನದತಿಶಯದ ಸುಳಿವು
ಎತ್ತಣೀ ಕೊಳಗುಳದ ಕಾಲ್ನಡೆ
ಯೆತ್ತಣಾಹವದಭಿಮುಖತೆ ಬಳಿ
ಕೆತ್ತಣಪಜಯವಿಧಿಯೆ ಘಟನೆ ನೃಪಾಲ ನಿನಗೆಂದ ೨೨

ಮುಳಿದಡಗ್ಗದ ಪರಶುರಾಮನ
ಗೆಲಿದನೊಬ್ಬನೆ ಭೀಷ್ಮ ಪಾಂಡವ
ಬಲದ ಸಕಲ ಮಹಾರಥರ ಸಂಹರಿಸಿದರು ದ್ರೋಣ
ದಳಪತಿಯ ಮಾಡಿದಡೆ ಪಾರ್ಥನ
ತಲೆಗೆ ತಂದನು ಕರ್ಣನೀಯ
ಗ್ಗಳೆಯರಗ್ಗಿತು ಕೆಡೆಯಲೊಬ್ಬನೆ ಕೆಟ್ಟೆ ನೀನೆಂದ ೨೩

ಅವರು ಬದುಕಿದರೈವರೂ ನಿ
ನ್ನವರೊಳಗೆ ನೀನುಳಿಯೆ ನೂರ್ವರು
ಸವರಿತವರೈವರು ಕುಮಾರರು ಸೌಖ್ಯ ಜೀವಿಗಳು
ಜವನ ಸಿವಡಿಗೆ ಹತ್ತಿದರು ನಿ
ನ್ನವರು ಮಕ್ಕಳು ನೂರು ದೈವವ
ನವಗಡಿಸಿ ದುಃಸ್ಥಿತಿಗೆ ಬಂದೈ ತಂದೆ ಕುರುರಾಯ ೨೪

ಗೆಲಿದನರಸನು ಹಸ್ತಿನಾಪುರ
ದೊಳಗೆ ಕಟ್ಟಿಸು ಗುಡಿಯನೆಂಬೆನೊ
ತಲೆಬಳಿಚಿ ತಾನೋಡಿ ಬದುಕಿದನೆಂಬೆನೋ ಮೇಣು
ಲಲನೆಯರಿಗೇನೊಸಗೆ ಕುರುಡನ
ನಳಿಸುವೆನೊ ನಗಿಸುವೆನೊ ತಾಯಿಗೆ
ಕಲಿಸು ಬುದ್ಧಿಯನೇನನೆಂಬೆನು ಭೂಪ ಕೇಳೆಂದ ೨೫

ಏನು ಸಂಜಯ ಕೌರವೇಶ್ವರ
ನೇನ ಮಾಡಿದನಲ್ಲಿ ಕೊಂತೀ
ಸೂನುಗಳೊಳಾರಳಿದರುಳಿದರು ನಮ್ಮ ಥಟ್ಟಿನಲಿ
ಏನು ಹದನೈ ಶಕುನಿ ರಣದೊಳ
ಗೇನ ಮಾಡಿದನೆಂದು ಬೆಸಗೊಳ
ಲೇನನೆಂಬೆನು ತಾಯಿ ಗಾಂಧಾರಿಗೆ ರಣೋತ್ಸವವ ೨೬

ಹಿಂದೆ ರಾಯನ ಪಟ್ಟದರಸಿಯ
ತಂದು ಭಾರಿಯ ಭಂಗಬಡಿಸಿದೆ
ಬಂದು ಹರಿಯೈದೂರ ಬೇಡಿದರವರ ಚಿತ್ತದಲಿ
ಕಂದ ಬಿತ್ತಿದೆ ಕದನದಲಿ ನೀ
ನೊಂದು ನೆಳಲುಳಿಯಲು ಸಹೋದರ
ವೃಂದ ತನುಜ ಜ್ಞಾತಿ ಬಾಂಧವರಳಿದರದರಿಂದ ೨೭

ಕೇಳು ಸಂಜಯ ಪೂರ್ವ ಸುಕೃತದ
ಶಾಳಿವನವೊಣಗಿದೊಡೆ ಭಾರಿಯ
ತೋಳಗುತ್ತಿನ ಜಯಲಕುಮಿ ಜಂಗಳವ ಜಾರಿದಡೆ
ಭಾಳಲಿಪಿಗಳ ಲೆಕ್ಕವನು ಪ್ರತಿ
ಕೂಲವಿಧಿ ಪಲ್ಲಟಿಸಿ ಬರೆದಡೆ
ಹೇಳಿ ಫಲವೇನೆನುತ ತುಂಬಿದನರಸ ಕಂಬನಿಯ ೨೮

ಕದಡಿತಂತಃಕರಣ ವಿಕ್ರಮ
ದುದಧಿ ನೆಲೆಯಾಯಿತು ನಿರರ್ಥತೆ
ಒದರಿದಡೆ ಫಲವೇನು ಸಂಜಯ ಹಿಂದನೆಣಸದಿರು
ಕದನದಲಿ ದುಶ್ಯಾಸನನ ತೇ
ಗಿದನಲಾ ಬಕವೈರಿ ತಮ್ಮನ
ನುದರದಲಿ ತೆಗೆವೆನು ವಿಚಿತ್ರವ ನೋಡು ನೀನೆಂದ ೨೯

ನರನ ಬಸುರಲಿ ಕರ್ಣನನು ಭೂ
ವರನ ಸೀಳಿದು ಶಲ್ಯವನು ಕಾ
ತರಿಸದಿರು ಶಕುನಿಯನುಳೂಕನ ಯಮಳರಿಬ್ಬರಲಿ
ಹರಿಬಕಿದಿರಾಗಲಿ ಮುರಾಂತಕ
ಹರಹಿಕೊಳಲಿ ಮದೀಯಬಾಹು
ಸ್ಫುರಣ ಶಕ್ತಿಗೆ ಭಂಗಬಾರದು ನೋಡು ನೀನೆಂದ ೩೦

ಕಾನನಕೆ ಕೈಯಿಕ್ಕುವರೆ ಪವ
ಮಾನನನು ಪಾವಕನು ಬಯಸುವ
ಭಾನು ಭಾರಿಯ ತಮವ ತಿವಿವನದಾರ ನೆರವಿಯಲಿ
ಈ ನಿಭೃತ ಗದೆಯಿರಲು ಕುಂತೀ
ಸೂನುಗಳ ಕೈಕೊಂಬೆನೇ ಮನ
ಹೀನನೈ ನೀನಕಟ ಸಂಜಯ ಎಂದನಾ ಭೂಪ ೩೧

ಆಳು ಬಿದ್ದುದು ಬೇಹ ನಾಯಕ
ರೋಲಗಿಸಿತಮರಿಯರನೀ ರಣ
ದೂಳಿಗಕೆ ನಾನೊಬ್ಬನೆಂದೇ ನಿನಗೆ ತೋರಿತಲಾ
ಆಳ ಹಂಗನು ನಾಯಕರ ಬಿಲು
ಗೋಲ ಜೋಡಿನ ಬಲವ ಚಿತ್ತದೊ
ಳಾಳಿದೊಡೆ ಧೃತರಾಷ್ಟ್ರರಾಯನ ಕಂದನಲ್ಲೆಂದ ೩೨

ಖಾತಿ ಕಂದದು ಮನದ ಧೈರ್ಯದ
ಧಾತು ಕುಂದದು ಲಜ್ಜೆಯಭಿಮತ
ಜಾತಿಗೆಡದು ವಿರೋಧ ಬಿಡದು ಯುಧಿಷ್ಠಿರಾದ್ಯರಲಿ
ಏತಕಿದು ನಿನ್ನೀ ಪ್ರಳಾಪ ವಿ
ಧೂತರಿಪು ಕುರುರಾಯನೆಂಬೀ
ಖ್ಯಾತಿಯಲ್ಲದೆ ಬೇರೆ ರಾಜ್ಯವನೊಲ್ಲೆ ನಾನೆಂದ ೩೩

ಜೀಯ ನಿಮ್ಮಡಿಗಳಿಗೆ ಗುರು ಗಾಂ
ಗೇಯ ವಿದುರಾದಿಗಳು ಹೇಳಿದ
ಜೋಯಿಸವ ಕೈಕೊಂಡಿರೇ ನಮ್ಮೀ ಪ್ರಳಾಪದಲಿ
ರಾಯ ಫಲವೇನೈ ಯುಧಿಷ್ಠಿರ
ರಾಯನೊಲಿದಂತಿರಲಿ ನಿಮ್ಮಯ
ತಾಯಿತಂದೆಗೆ ಹೇಳ್ವೆನೇನನು ಬುದ್ದಿಗಲಿಸೆಂದ ೩೪

ಇದೆ ಸರೋವರವೊಂದು ಹರಿದೂ
ರದಲಿ ಭುವನಖ್ಯಾತ ತನ್ಮ
ಧ್ಯದಲಿ ಮುಳುಗಿಹೆನೊಂದುದಿನ ಪರಿಯಂತ ಸಲಿಲದಲಿ
ಕದನದಲಿ ಕೌಂತೇಯರನು ಯಮ
ಸದನದಲಿ ತೋರುವೆನು ತಾನೆಂ
ಬುದು ರಹಸ್ಯವು ಜನನಿ ಜನಕಂಗರುಹು ನೀನೆಂದ ೩೫

ತೆಗೆಸು ಪಾಳೆಯವೆಲ್ಲವನು ಗಜ
ನಗರಿಗೈದಿಸು ರಾಣಿಯರ ದಂ
ಡಿಗೆಯ ಕಳುಹಿಸು ಸೂತಸುತ ದುಶ್ಯಾಸನಾದಿಗಳ
ಹಗೆಯ ವಿಜಯವ ಹರಹದಿರು ನಂ
ಬುಗೆಯ ನುಡಿಯಲಿ ಭಾನುಮತಿಯರ
ಬಗೆಯ ಸಂತೈಸೆಂದು ಬೋಳೈಸಿದನು ಸಂಜಯನ ೩೬

ಎನುತ ಸಂಜಯಸಹಿತ ಕೌರವ
ಜನಪ ಬಂದನು ತತ್ಸರೋವರ
ಕನಿಲನಿದಿರಾದನು ಸುಗಂಧದ ಶೈತ್ಯಪೂರದಲಿ
ತನುವಿಗಾಪ್ಯಾಯನದಿನಂತ
ರ್ಮನಕೆ ಪಲ್ಲಟವಾಯ್ತು ಭೀಮನ
ಜನಕನರಿದನು ತನ್ನ ಗುಪ್ತಸ್ಥಾನ ಸಂಗತಿಯ ೩೭

ಉಲಿವ ಕೋಕಿಲ ಪಾಠಕರ ಮೊರೆ
ವಳಿಕುಳದ ಗಾಯಕರ ಹಂಸಾ
ವಳಿಯ ಸುಭಟರ ಜಡಿವ ಕೊಳರ್ವಕ್ಕಿಗಳ ಪಡಿಯರರ
ಅಲರ್ದ ಹೊಂದಾವರೆಯ ನವಪರಿ
ಮಳದ ಸಿಂಹಾಸನದಿ ಲಕ್ಷ್ಮೀ
ಲಲನೆಯೋಲಗಶಾಲೆಯಂತಿರೆ ಮೆರೆದುದಾ ಸರಸಿ ೩೮

ಬಂದು ತಡಿಯಲಿ ಸಂಜಯನ ಕರೆ
ದೆಂದನೀ ಸರಸಿಯಲಿ ತಾನಿಹೆ
ನಿಂದಿನೀ ದಿವಸವನು ಕಳೆವೆನು ಕೊಳನ ಮಧ್ಯದಲಿ
ಮುಂದೆ ಪಾಂಡವರೈವರನು ಗೆಲಿ
ದಂದು ಹೊಗುವೆನು ಗಜಪುರವನಿಂ
ತೆಂದು ಜನನಿಗೆ ಜನಕವಿದುರರಿಗರುಹು ನೀನೆಂದ ೩೯

ಚಾರು ಚಂದ್ರೋಪಲದ ರಮ್ಯಾ
ಗಾರದಲಿ ಮಣಿಮಯದ ಬಹುವಿ
ಸ್ತಾರ ಭದ್ರೋಪರಿಯ ಭವನದ ಚಿತ್ರಶಾಲೆಯಲಿ
ಸಾರಮಣಿ ಪರಿಯಂಕ ಪರಿಸಂ
ಸ್ಕಾರದಲಿ ಮಲಗುವ ಮಹೀಪತಿ
ನೀರೊಳೊರಗುವನೆಂದು ಸಂಜಯನೊರಲಿದನು ಹೊರಳಿ ೪೦

ಒರಲದಿರು ಸಂಜಯ ವಿರೋಧಿಗ
ಳರಿವರಾನಿದ್ದೆಡೆಯನಿಲ್ಲಿಯೆ
ಮರೆದು ಕಳೆ ಪಾಳೆಯವ ತೆಗೆಸಬುಜಾಕ್ಷಿಯರ ಕಳುಹು
ತೆರಹುಗೊಡು ನೀ ಹೋಗೆನುತ ಮುಂ
ಜೆರಗನಳವಡೆ ಸೆಕ್ಕಿ ಪೂರ್ವದ
ಲರಿದ ಸಲಿಲಸ್ತಂಭವಿದ್ಯೆಯನರಸ ಚಿಂತಿಸಿದ ೪೧

ಚರಣವದನಕ್ಷಾಲನಾಂತಃ
ಕರಣಶುದ್ದಿಯಲಾಚಮನವಿ
ಸ್ತರಣದಲಿ ಸತ್ಪ್ರಣವವಂಗನ್ಯಾಸವಿಧಿಗಳಲಿ
ವರುಣ ಮಂತ್ರಾಕ್ಷರದ ಜಪಪರಿ
ಕರಣದಲಿ ನಿರ್ಣಿಕ್ತ ಚೇತಃ
ಸ್ಪುರಣ ಸಲಿಲಸ್ತಂಭನವನವನೀಶ ಮಂತ್ರಿಸಿದ ೪೨

ದ್ಯುಮಣಿ ಮೊದಲಾದಖಿಳ ಸುರರಿಗೆ
ನಮಿಸಿ ವರುಣಧ್ಯಾನವನು ಹೃ
ತ್ಕಮಲದಲಿ ನೆಲೆಗೊಳಿಸಿ ನಾಲುಕು ದೆಸೆಯನಾರೈದು
ಕುಮತಿಯಿಳಿದನು ಜಾನು ಕಟಿ ಹೃ
ತ್ಕಮಲಗಳ ಮುಖ ಮೂರ್ಧ ಪರಿಯಂ
ತಮರಿದುದು ಜಲ ಕೊಳನ ಮಧ್ಯದಲರಸ ಪವಡಿಸಿದ ೪೩

ಕುರುಪತಿಯ ಬೀಳ್ಕೊಂಡು ಸಂಜಯ
ಮರಳಿದನು ತನಗಾದ ಹಿಂದಣ
ಪರಿಭವವ ನೆನೆದಡಿಗಡಿಗೆ ಕಂಪಿಸುತ ಮನದೊಳಗೆ
ಧುರದ ಮಧ್ಯದೊಳೊಬ್ಬನೇ ನಡೆ
ತರುವ ಭೂತಾವಳಿಯನೀಕ್ಷಿಸಿ
ಗುರುವ ನೆನೆದನು ಕೇಳು ಜನಮೇಜಯ ಮಹೀಪಾಲ ೪೪

ಬರುತ ಸಂಜಯ ದೂರದಲಿ ಕೃಪ
ಗುರುಸುತರ ಕೃತವರ್ಮಕನ ಕಂ
ಡರಿರಥಿಗಳಿವರಲ್ಲಲೇ ಶಿವಶಿವ ಮಹಾದೇವ
ಭರತಕುಲ ಮೊದಲೊಂದು ಬಳಿಕಾ
ಯ್ತೆರಡುಕವಲೊಬ್ಬರಿಗೆ ಜಯವಿ
ಸ್ತರಣ ಗದುಗಿನ ವೀರನಾರಾಯಣನ ಕರುಣದಲಿ ೪೫

(ಸಂಗ್ರಹ: ಸಂತೋಷ್ ಮತ್ತು ರಶ್ಮಿ)

Thursday, May 6, 2010

ಗದಾಪರ್ವ: ೦೨ ಎರಡನೆಯ ಸಂಧಿ

ಸೂ. ಸಕಲಬಲ ನುಗ್ಗಾಯ್ತು ಸಮಸ
ಪ್ತಕರು ಮಡಿದರು ಪಾರ್ಥಶರದಲಿ
ಶಕುನಿಯನು ಸಂಗ್ರಾಮದಲಿ ಸೀಳಿದನು ಸಹದೇವ

ಕೇಳು ಜನಮೇಜಯ ಧರಿತ್ರೀ
ಪಾಲ ಸಂಜಯ ಬಂದು ಕುರುಭೂ
ಪಾಲಕನನರಸಿದನು ಸಂಗರ ರಂಗಭೂಮಿಯಲಿ
ಮೇಲುಸುಯಿಧಾನದ ತುರಂಗಮ
ಜಾಲ ಸಹಿತಗಲದಲಿ ಕುರುಭೂ
ಪಾಲನಾವೆಡೆಯೆನುತ ಬೆಸಗೊಳುತರಸಿದನು ನೃಪನ ೧

ವಂದಿಗಳ ನಿಸ್ಸಾಳಬಡಿಕರ
ಮಂದಿ ಹಡಪಿಗ ಚಾಹಿ ಸೂತರ
ಸಂದಣಿಗಳೌಷಧಿಕ ಹಯಗಜಸಂವಿಧಾಯಕರು
ನಿಂದುದದು ಸಂಖ್ಯಾತವಿನಿಬರ
ನಂದು ಸಂಜಯ ಕರೆದು ಕೇಳಿದ
ನಿಂದುಕುಲಸಂಭವನ ಕಂಡಿರೆ ಕೌರವೇಶ್ವರನ ೨

ಕೂಡೆ ಸಂಜಯನರಸಿದನು ನಡೆ
ಜೋಡಿನವು ನಾನೂರು ಕುದುರೆಯ
ಕೂಡಿ ಕೌರವನೃಪನ ಕಾಣದೆ ಕಳನ ಚೌಕದಲಿ
ನೋಡುತಿರೆ ಸಾತ್ಯಕಿ ಚತುರ್ಬಲ
ಗೂಡಿ ಕವಿದನು ಹಯಬಲವ ಹುಡಿ
ಮಾಡಿದನು ನಾನೂರ ಕೊಂದನು ಸರಳ ಸಾರದಲಿ ೩

ಹಿಡಿದು ಸಂಜಯನನು ವಿಭಾಡಿಸಿ
ಕೆಡಹಿದನು ಬಲುರಾವುತರನವ
ಗಡವ ಕೇಳಿದು ದ್ರೋಣಸುತ ಕೃತವರ್ಮ ಗೌತಮರು
ಫಡಫಡೆಲವೊ ಸಂಜಯನ ಬಿಡು
ಬಿಡು ಮದೀಯ ಮಹಾಶರಕೆ ತಲೆ
ಗೊಡುವಡಿದಿರಾಗೆನುತ ತರುಬಿದರಿವರು ಸಾತ್ಯಕಿಯ ೪

ದ್ರೋಣಸುತ ಕುರುಪತಿಯ ಸಮರಕೆ
ಹೂಣಿಗನಲೇ ಬಲ್ಲೆವಿದರಲಿ
ಬಾಣವಿದ್ಯೆಯ ಬೀರಿ ಬಿಡಿಸುವರಿವರು ಸಂಜಯನ
ಕಾಣಲಹುದಂತಿರಲಿ ನಿಮಗೀ
ಕೇಣದಲಿ ಫಲವಿಲ್ಲ ಕೃಪ ತ
ನ್ನಾಣೆ ನೀ ಮರುಳೆಂದು ಸಾತ್ಯಕಿ ಸುರಿದನಂಬುಗಳ ೫

ಕೋಡಕಯ್ಯಲಿ ತಿರುಗಿ ಕೃಪ ಕೈ
ಮಾಡಿದನು ಕೃತವರ್ಮನೆಸುಗೆಯ
ತೋಡುಬೀಡಿನ ಭರವ ಬಲ್ಲವನಾರು ಸಮರದಲಿ
ನೋಡಲೀತನ ಗರುಡಿಯಲಿ ಶ್ರವ
ಮಾಡಿದವರೇ ಮೂರು ಜಗವ ವಿ
ಭಾಡಿಸುವರೆನೆ ಹೊಗಳ್ವನಾವನು ದ್ರೋಣನಂದನನ ೬

ಎಚ್ಚನಶ್ವತ್ಥಾಮನಾ ಕೃಪ
ನೆಚ್ಚನಾ ಕೃತವರ್ಮಕನು ಕವಿ
ದೆಚ್ಚನೀ ಶರಜಾಲ ಜಡಿದವು ಕಿಡಿಯ ಗಡಣದಲಿ
ಬೆಚ್ಚಿದನೆ ಬೆದರಿದನೆ ಕೈಕೊಂ
ಡೆಚ್ಚು ಸಾತ್ಯಕಿ ರಿಪುಶರಾಳಿಯ
ಕೊಚ್ಚಿದನು ಕೊಡಹಿದನು ಮಿಗೆ ಭಂಗಿಸಿ ವಿಭಾಡಿಸಿದ ೭

ಎಲೆಲೆ ಸಾತ್ಯಕಿಗಾಹವದ ಧುರ
ಬಲುಹೆನಲು ಸೃಂಜಯರು ಸೋಮಕ
ಬಲ ಶಿಖಂಡಿ ದ್ರುಪದನಂದನ ಪಾಂಡವಾತ್ಮಜರು
ಚಳಪತಾಕೆಯ ವಿವಿಧವಾದ್ಯದ
ಕಳಕಳದ ಕೈದುಗಳ ಹೊಳಹಿನ
ತಳಪ ಝಳಪಿಸೆ ಜೋಡಿಸಿತು ಸಾತ್ಯಕಿಯ ಬಳಸಿನಲಿ ೮

ಹರಿಯದಿಲ್ಲಿಯ ಬವರ ರಾಯನ
ನರಸಬೇಹುದು ಕುರುಪತಿಯ ಮುಂ
ದಿರಿದು ಮೆರೆವುದು ಕೀರ್ತಿ ನಿಷ್ಫಲವಿಲ್ಲ ಶರರಚನೆ
ಅರಿವೆವೀ ಸಾತ್ಯಕಿಯ ಸಮರದ
ಮುರುಕವನು ಬಳಿಕೆನುತ ಕೌರವ
ನರಿಕೆಯಲಿ ತಿರುಗಿದರು ಕೃಪ ಕೃತವರ್ಮ ಗುರುಸುತರು ೯

ತೆರಳಿದರು ಗುರುನಂದನಾದಿಗ
ಳರಿನೃಪಾಲನ ಕಾಣೆವಾತನ
ನರಸಬೇಹುದು ಶಕುನಿ ದುರ್ಯೋಧನ ಸುಶರ್ಮಕರು
ದೊರೆಗಳಿದು ಪರಿಶಿಷ್ಟರುಪಸಂ
ಹರಣವೇ ಕರ್ತವ್ಯವಿದು ದು
ಸ್ತರಣಶ್ರಮಫಲವೆಂದು ನುಡಿದನು ಧರ್ಮಸುತ ನಗುತ ೧೦

ಮಸಗಿದುದು ಪರಿವಾರ ಕೌರವ
ವಸುಮತೀಶ್ವರನರಕೆಯಲಿ ದಳ
ಪಸಿರಿತು ಬಿಡದರಸಿ ಕಂಡರು ಕಳನ ಮೂಲೆಯಲಿ
ಮಿಸುಪ ಸಿಂಧದ ಸೀಗುರಿಯ ಝಳ
ಪಿಸುವಡಾಯ್ದ ಸಿತಾತಪತ್ರ
ಪ್ರಸರದಲಿ ಹೊಳೆಹೊಳೆವ ಶಕುನಿಯ ಬಹಳ ಮೋಹರವ ೧೧

ಅದೆ ಸುಯೋಧನನೊದ್ಡು ನಸುದೂ
ರದಲಿ ಕವಿಕವಿಯೆನುತ ಧಾಳಿ
ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ
ಹೊದರು ಹಳಚಿತು ಭಟರು ಭುಜಗ
ರ್ವದಲಿ ಗರುವರ ಗಾಢ ಶೌರ್ಯದ
ಮದಕೆ ಮಡುಮುರಿಯಾಯ್ತು ಸಿಲುಕಿತು ಮೌನ ಮೋನದಲಿ ೧೨

ಹೆಗಲ ಹಿರಿಯುಬ್ಬಣದ ಕೈತಳ
ಮಗುಚಲಮ್ಮದ ವಾಘೆಯಲಿ ಕೈ
ಬಿಗಿದುದುದಂಕಣೆದೊಡಕಿನಲಿ ಮರನಾದವಂಘ್ರಿಗಳು
ಬಗೆಯ ಮಡಿ ಮಸಳಿಸಿತು ವೀರಕೆ
ಬೆಗಡು ಹುದುವನೆಯಾಯ್ತು ಕೈನಂ
ಬುಗೆಗೆ ಮರಳಿದರೊಬ್ಬರೊಬ್ಬರು ರಾಯರಾವುತರು ೧೩

ಬಂದುದಾ ಮೋಹರ ಸಘಾಡದಿ
ನಿಂದುದೀ ಬಲ ಸೂಠಿಯಲಿ ಹಯ
ವೃಂದ ಬಿಟ್ಟವು ತೂಳಿದವು ಹೇರಾನೆ ಸರಿಸದಲಿ
ನೊಂದುದಾಚೆಯ ಭಟರು ಘಾಯದೊ
ಳೊಂದಿತೀಚೆಯ ವೀರರುಭಯದ
ಮಂದಿ ಬಿದ್ದುದು ಚೂಣಿಯದ್ದುದು ರುಧಿರಜಲಧಿಯಲಿ ೧೪

ಜಾರಿದನೆ ಕುರುಪತಿಯಕಟ ಮೈ
ದೋರನೇ ನಮಗೂರುಗಳ ಕೊಡ
ಲಾರದೇ ಕಾಳೆಗವ ಕೊಟ್ಟನು ಮತ್ತೆ ಕೊಂಡನಲಾ
ತೋರಿಸನೆ ಖಂಡೆಯದ ಸಿರಿ ಮೈ
ದೋರಹೇಳೋ ಕರೆಯೆನುತ ತಲೆ
ದೋರಿದರು ಭೀಮಾರ್ಜುನರು ಸೌಬಲನ ಥಟ್ಟಿನಲಿ ೧೫

ಫಡಫಡೆಲವೋ ಪಾರ್ಥ ಕುರುಪತಿ
ಯಡಗುವನೆ ನಿನ್ನಡಗ ತರಿದುಣ
ಬಡಿಸನೇ ವೇತಾಳರಿಗೆ ವೈತಾಳಿಕನೆ ನೀನು
ಗಡಬಡಿಸಿ ಪರರುನ್ನತಿಯ ಕೆಡೆ
ನುಡಿದು ಫಲವೇನೆನುತ ಪಾರ್ಥನ
ತಡೆದನಂದು ಸುಶರ್ಮ ಸಮಸಪ್ತಕರ ದಳ ಸಹಿತ ೧೬

ಮುತ್ತಿದವು ರಥವೇಳುನೂರರು
ವತ್ತು ಹಯವೈನೂರು ಸಾವಿರ
ಮತ್ತಗಜವಿಪ್ಪತ್ತು ಸಾವಿರ ಪಾಯದಳ ಸಹಿತ
ತೆತ್ತಿಸದವಂಬುರವಣಿಸಿ ದೂ
ಹತ್ತಿ ಹೊಳೆದವು ಸಮರದಲಿ ಮುಖ
ಕೆತ್ತುದನೆ ಕೈದುಗಳ ರುಚಿ ವೇಢೈಸಿತರ್ಜುನನ ೧೭

ಶಕುನಿ ಸಹದೇವನನುಳೂಕನು
ನಕುಲನನು ಕುರುರಾಯನನುಜರು
ಚಕಿತ ಚಾಪನ ಕೆಣಕಿದರು ಪವಮಾನನಂದನನ
ಅಕಟ ಫಲುಗುಣ ಎನುತ ಸಮಸ
ಪ್ತಕರು ಕವಿದರು ನೂರು ಗಜದಲಿ
ಸಕಲದಳಕೊತ್ತಾಗಿ ನಿಂದನು ಕೌರವರಾಯ ೧೮

ಏರಿದರು ಸಮಸಪ್ತಕರು ಕೈ
ದೋರಿದರು ಫಲುಗುಣನ ಜೋಡಿನೊ
ಳೇರು ತಳಿತುದು ನೊಂದವಡಿಗಡಿಗಾತನಶ್ವಚಯ
ನೂರು ಶರದಲಿ ಬಳಿ ವಿಶಿಖ ನಾ
ನೂರರಲಿ ಬಳಿಶರಕೆ ಬಳಿಶರ
ವಾರು ಸಾವಿರದಿಂದ ತರಿದನು ಪಾರ್ಥನರಿಬಲವ ೧೯

ಕಡಿವಡೆದವೇಳ್ನೂರು ರಥ ಮುರಿ
ವಡೆದವೈನೂರಶ್ವಚಯ ಮುಂ
ಗೆಡೆದವಂದೈನೂರು ಗಜವಿಪ್ಪತ್ತು (ಪಾ: ಗಜವಿಪ್ಪತು) ಸಾವಿರದ
ಕಡುಗಲಿಗಳುದುರಿತು ತ್ರಿಗರ್ತರ
ಪಡೆ ಕುರುಕ್ಷೇತ್ರದಲಿ ಪಾರ್ಥನ
ಬಿಡದೆ ಬಳಲಿಸಿಯನಿಬರಳಿದುದು ಭೂಪ ಕೇಳೆಂದ ೨೦

ದೊರೆಗಳವರಲಿ ಸತ್ಯಕರ್ಮನು
ವರ ಸುಶರ್ಮನು ದ್ರೋಣಸಮರದೊ
ಳೆರಡನೆಯ ದಿವಸದಲಿ ರಚಿಸಿದರಗ್ನಿ ಸಾಕ್ಷಿಕವ
ಧುರದ ಶಪಥದೊಳರ್ಜುನನ ಸಂ
ಗರಕೆ ಬೇಸರಿಸಿದ ಪರಾಕ್ರಮ
ಪರಿಗತರು ಪವಡಿಸಿದರಂದು ಧನಂಜಯಾಸ್ತ್ರದಲಿ ೨೧

ತರಿದನಗ್ಗದ ಸತ್ಯಕರ್ಮನ
ಧುರವ ಸಂತೈಸುವ ತ್ರಿಗರ್ತರ
ದೊರೆ ಸುಶರ್ಮನನವನ ಸಹಭವ ಗೋತ್ರ ಬಾಂಧವರ
ಒರಸಿದನು ಕುರುರಾಯನಾವೆಡೆ
ಬರಲಿ ತನ್ನಾಪ್ತರಿಗೆ ಕೊಟ್ಟೆನು
ಹರುವನಿನ್ನಾಹವ ವಿಲಂಬವ ಮಾಡಬೇಡೆಂದ ೨೨

ಇತ್ತ ಭೀಮನ ಕೂಡೆ ನೂರರು
ವತ್ತು ಗಜ ಸಹಿತರಿಭಟರೊಳು
ದ್ವೃತ್ತನಿದಿರಾದನು ಸುದರ್ಶನನಂಧನೃಪಸೂನು
ಹೆತ್ತಳವ್ವೆ ವಿರೋಧಿಸೇನೆಯ
ಮತ್ತ ಗಜಘಟೆಗೋಸುಗರವಿವು
ಮತ್ತೆ ದೊರಕವು ಕೊಂದಡೆಂದುಮ್ಮಳಿಸಿದನು ಭೀಮ ೨೩

ಸೊಕ್ಕಿದಾನೆಯ ಕೈಯ ಕದಳಿಯ
ನಿಕ್ಕಿ ಬಿಡಿಸುವನಾರು ಪವನಜ
ನೆಕ್ಕತುಳದಲಿ ದಂತಿಘಟೆಗಳ ಮುರಿದನುರವಣಿಸಿ
ಇಕ್ಕಡಿಯ ಬಸುರುಚ್ಚುಗಳ ನರ
ಸುಕ್ಕುಗಳ ನಾಟಕದವೊಲು ಕೈ
ಯಿಕ್ಕಿದಾನೆಯ ಹಿಂಡು ಮುರಿದುದು ನಿಮಿಷಮಾತ್ರದಲಿ ೨೪

ಕೆಡಹಿ ದುರ್ಯೋಧನನ ತಮ್ಮನ
ನಡಗುದರಿ ಮಾಡಿದನುಳೂಕನ
ಕಡಿದು ಬಿಸುಟನು ನಕುಲನಿಪ್ಪತ್ತೈದು ಬಾಣದಲಿ
ತುಡುಕಿದನು ಸಹದೇವನಂಬಿನ
ಗಡಣದಲಿ ಸೌಬಲನ ಸೇನೆಯ
ಕಡಲ ಮೊಗೆದನು ಮೋದಿದನು ಶರಜಾಲ ಝಂಕೃತಿಯ ೨೫

ಎಲವೊ ಕಪಟದ್ಯೂತ ಬಂಧದೊ
ಳಳಲಿಸಿದಲಾ ಪಾಪಿ ಕೌರವ
ಕುಲದ ತಲೆ ಸೆಂಡಾಡಿದವ ನೀನೋ ಮದಗ್ರಜನೊ
ಸಿಲುಕಿದೆಯಲಾ ನಮ್ಮ ಬಾಣದ
ಬಲೆಗೆ ನಿನ್ನನು ಕಾವನಾವವ
ನೆಲೆ ಕುಠಾರ ಎನುತ್ತ ನುಡಿದನು ನಗುತ್ತ ಸಹದೇವ ೨೬

ವ್ಯರ್ಥವಲೆ ಸಹದೇವ ನಿನ್ನ ಕ
ದರ್ಥನಕೆ ಫಲವಿಲ್ಲ ನೀ ಕದ
ನಾರ್ಥಿಯೇ ದಿಟ ತೋರಿಸಾದರೆ ಬಾಹುವಿಕ್ರಮವ
ಪಾರ್ಥ ಭೀಮರ ಮರೆಯೊಳಿರ್ದು ನಿ
ರರ್ಥಕರನಿರಿದಿರಿದು ಜಯವ ಸ
ಮರ್ಥಿಸುವೆ ಫಡ ಹೋಗೆನುತ ತೆಗೆದೆಚ್ಚನಾ ಶಕುನಿ ೨೭

ಮರುಗದಿರು ನಿನ್ನುಭಯ ಪಕ್ಷವ
ತರಿದು ತುಂಡವ ಸೀಳುವೆನು ತಾ
ಮರೆವನೇ ಭವದೀಯ ರಚಿತ ವಿಕಾರ ವಿಭ್ರಮವ
ನೆರೆ ಪತತ್ರಿಗಳಿವೆ ಪತತ್ರಿಯ
ಮರುವೆಸರು ನಿನಗಿವರ ಕೇಣಿಗೆ
ತೆರಹುಗೊಡು ನೀನೆಂದು ಮಾದ್ರೀತನುಜ ಮಗುಳೆಚ್ಚ ೨೮

ಎಸಲು ಸಹದೇವಾಸ್ತ್ರವನು ಖಂ
ಡಿಸಿ ಶರೌಘದಿನಹಿತವೀರನ
ಮುಸುಕಿದನು ಮೊನೆಗಣೆಗಳೀಡಿರಿದವು ರಥಾಗ್ರದಲಿ
ಕುಸುರಿದರಿದತಿರಥನ ಬಾಣ
ಪ್ರಸರವನು ರಥ ತುರುಗವನು ಭಯ
ರಸದೊಳದ್ದಿದನುದ್ದಿದನು ಸಹದೇವ ಸೌಬಲನ ೨೯

ತೇರು ಹುಡಿಹುಡಿಯಾಗೆ ಹೊಯ್ದನು
ವಾರುವನ ಮೇಲುಗಿದಡಾಯುಧ
ದಾರುಭಟೆಯಲಿ ಬಿಟ್ಟನಾ ಸಹದೇವನಭಿಮುಖಕೆ
ವೀರನಹೆಯೋ ಶಕುನಿ ಜೂಜಿನ
ಚೋರವಿದ್ಯೆಯ ಬಿಟ್ಟೆಲಾ ಜು
ಜ್ಝಾರನಹೆ ಮಝ ಪೂತೆನುತ ಖಂಡಿಸಿದನಾ ಹಯವ ೩೦

ಬಳಿಕ ಕಾಲಾಳಾಗಿ ಖಡುಗವ
ಝಳಪಿಸುತ ಬರೆ ಶಕ್ತಿಯಲಿ ಕೈ
ಚಳಕ ಮಿಗೆ ಸಹದೇವನಿಟ್ಟನು ಸುಬಲನಂದನನ
ಖಳನೆದೆಯನನೊದೆದಪರಭಾಗಕೆ
ನಿಲುಕಿತದು ಗಾಂಧಾರಬಲ ಕಳ
ವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ ೩೧

ಕವಿದುದಾ ಪರಿವಾರ ವಡಬನ
ತಿವಿವ ತುಂಬಿಗಳಂತೆ ಶಕುನಿಯ
ಬವರಿಗರು ಮಂಡಳಿಸೆ ಸಹದೇವನ ರಥಾಗ್ರದಲಿ
ತೆವರಿಸಿದನನಿಬರ ಚತುರ್ಬಲ
ನಿವಹವನು ನಿಮಿಷಾರ್ಧದಲಿ ಸಂ
ತವಿಸಿದನು ಸಹದೇವ ಕೊಂದನು ಸೌಬಲನ ಬಲವ ೩೨

ಹರಿಬದಲಿ ಹೊಕ್ಕೆರಡು ಸಾವಿರ
ತುರುಗ ಬಿದ್ದವು ನೂರು ಮದಸಿಂ
ಧುರಕೆ ಗಂಧನವಾಯ್ತು ಪಯದಳವೆಂಟು ಸಾವಿರದ
ಬರಹ ತೊಡೆದುದು ನೂರು ರಥ ರಿಪು
ಶರದೊಳಕ್ಕಾಡಿತು ವಿಡಂಬದ
ಕುರುಬಲಾಂಬುಧಿ ಕೂಡೆ ಬರತುದು ನೃಪತಿ ಕೇಳೆಂದ ೩೩

ಓಡಿದವರಲ್ಲಲ್ಲಿ ಧೈರ್ಯವ
ಮಾಡಿ ಹರಿಹಂಚಾದ ಸುಭಟರು
ಕೂಡಿಕೊಂಡುದು ನೂರು ಮದದಾನೆಯಲಿ ಕುರುಪತಿಯ
ಓಡಲೇಕಿನ್ನೊಂದು ಹಲಗೆಯ
ನಾಡಿ ನೋಡುವೆನೆಂಬವೊಲು ಕೈ
ಮಾಡಿದನು ಕುರುರಾಯನಾ ಸಹದೇವನಿದಿರಿನಲಿ ೩೪

ಧರಣಿಪನ ಥಟ್ಟಣೆಗೆ ನಿಲ್ಲದೆ
ತೆರಳಿದನು ಸಹದೇವನಾತನ
ಹಿರಿಯನಡ್ದೈಸಿದಡೆ ಕೊಟ್ಟನು ಬೋಳೆಯಂಬಿನಲಿ
ಶರಹತಿಗೆ ಸೆಡೆದಾ ನಕುಲ ಪೈ
ಸರಿಸಿದನು ನೂರಾನೆಯಲಿ ಡಾ
ವರಿಸಿದನು ಧರ್ಮಜನ ದಳದಲಿ ಧೀರ ಕುರುರಾಯ ೩೫

ಎಲೆ ನಪುಂಸಕ ಧರ್ಮಸುತ ಫಡ
ತೊಲಗು ಕರೆಯಾ ನಿನಗೆ ಭೀಮನ
ಬಲುಹೆ ಬಲುಹರ್ಜುನನ ವಿಕ್ರಮ ವಿಕ್ರಮವು ನಿನಗೆ
ಮಲೆತು ಮೆರೆಯಾ ಕ್ಷತ್ರಧರ್ಮವ
ನಳುಕದಿರು ನೀ ನಿಲ್ಲೆನುತಲಿ
ಟ್ಟಳಿಸಿ ಬರಲೂಳಿಗದ ಬೊಬ್ಬೆಯ ಕೇಳಿದನು ಭೀಮ ೩೬

ತೂಳಿ ತುಳಿದವು ನೂರು ಗಜ ಭೂ
ಪಾಲಕನ ನೆರೆಗಡಿತದಡವಿಗೆ
ಬಾಳೆ ಹೆಮ್ಮರವಾಯ್ತು ಗಡ ಫಡ ನೂಕು ನೂಕೆನುತ
ಆಲಿ ಕಿಡಿಯೆಡೆ ಕುಣಿವ ಮೀಸೆ ಕ
ರಾಳ ವದನದ ಬಿಗಿದ ಹುಬ್ಬಿನ
ಮೇಲುಗೋಪದ ಭೀಮ ಬಂದನು ಬಿಟ್ಟ ಸೂಠಿಯಲಿ ೩೭

ನೆತ್ತಿಯಗತೆಯೊಳೂರಿದಂಕುಶ
ವೆತ್ತಿದಡೆ ತಲೆಗೊಡಹಿದವು ಬೆರ
ಳೊತ್ತುಗಿವಿಗಳ ಡಾವರಿಪ ಡಾವರದ ಡಬ್ಬುಕದ
ಕುತ್ತುವಾರೆಯ ಬಗೆಯದಾನೆಗ
ಳಿತ್ತ ಮುರಿದವು ಸಿಂಹನಾದಕೆ
ಮತ್ತಗಜ ಮೊಗದಿರುಹಿದವು ದಳವುಳಿಸಿದನು ಭೀಮ ೩೮

ಮೆಟ್ಟಿದನು ಬಲವಂಕವನು ಹೊರ
ಗಟ್ಟಿದನು ವಾಮದ ಗಜಂಗಳ
ನಿಟ್ಟನೊಂದರೊಳೊಂದನಪ್ಪಳಿಸಿದನು ಪರಿಘದಲಿ
ಘಟ್ಟಸಿದನೊಗ್ಗಿನ ಗಜಂಗಳ
ಥಟ್ಟುಗೆಡಹಿದನಮಮ ಹೆಣಸಾ
ಲಿಟ್ಟವೈ ಕುರುನೃಪನ ನೂರಾನೆಗಳು ನಿಮಿಷದಲಿ ೩೯

ಉಳಿದುದಿದಿರಲಿ ಛತ್ರ ಚಮರಾ
ವಳಿಯವರು ಹಡಪಿಗರು ಬಿರುದಾ
ವಳಿಯವರು ಪಾಠಕರು ವಾದ್ಯದ ಮಲ್ಲಗಾಯಕರು
ಸಲಿಲ ಭಕ್ಷ್ಯವಿದಾನಗಜಹಯ
ಕುಲದ ರಕ್ಷವ್ರಣಚಿಕಿತ್ಸಕ
ದಳಿತ ರಥಚಾರಕರು ಕಾರ್ಮುಕಬಾಣದಾಯಕರು ೪೦

ಕುದುರೆ ರಾವ್ತರು ಜೋದಸಂತತಿ
ಮದಗಜವ್ರಜವತಿರಥಾವಳಿ
ಪದಚರರು ಚತುರಂಗಬಲವೊಂದುಳಿಯದಿದರೊಳಗೆ
ಪದದಲೇ ಕೌರವನೃಪತಿ ಜಾ
ರಿದನು ಕುಂತೀಸುತರು ಬಹಳಾ
ಭ್ಯುದಯರಾದರು ವೀರನಾರಾಯಣನ ಕರುಣದಲಿ ೪೧

(ಸಂಗ್ರಹ: ಸಂತೋಷ್ ಮತ್ತು ರಶ್ಮಿ)

ಕರ್ಣಪರ್ವ: ೦೨ ಎರಡನೆಯ ಸಂಧಿ

ಸೂ : ಭೀಮ ವಿಕ್ರಮಕುರುಬಲದೊಳು
ದ್ಧಾಮ ಕರ್ಣಾಹವದೊಳಗ್ಗದ
ಕ್ಷೇಮಧೂರ್ತಿ ನೃಪಾಲಕನ ಕೆಡಹಿದನು ಕಲಿಭೀಮ

ಮಗನು ದಳಪತಿಯಾದ ಗಡ ಕಾ
ಳೆಗವ ನೋಡುವೆನೆಂಬವೊಲು ಜಗ
ದಗಲದಲಿ ನೆರೆ ಕಡಿತವಿಕ್ಕಿತು ತಿಮಿರವನದೊಳಗೆ
ಹೊಗರು ಕುವಳಯಕಳಿಯೆ ಸೊಂಪಿನ
ನಗೆ ಸರೋರುಹಕೊಗೆಯೆ ವಿರಹದ
ಢಗೆ ರಥಾಂಗದೊಳಳಿಯೆ ರವಿಯುದಯಾಚಳಕೆ ಬಂದ ೧

ಸೂಳು ಮಿಗಲಳ್ಳಿರಿದವುರು ನಿ
ಸ್ಸಾಳಕೋಟಿಗಳುದಯದಲಿ ದಿಗು
ಜಾಲ ಜರಿಯಲು ಝಾಡಿಗೆದರುವ ಗೌರುಗಹಳೆಗಳ
ತೂಳುವರೆಗಳ ರಾಯ ಗಿಡಗನ
ಘೋಳ ಘೋರದ ಘೋಷವವನಿಯ
ಸೀಳೆ ನಡೆದುದು ಸೇನೆ ರವಿನಂದನನ ನೇಮದಲಿ ೨

ಮೋಹರಿಸಿತಿದು ನಡೆದು ಮಕರ
ವ್ಯೂಹದಲಿ ಬಳಿಕರ್ಧಚಂದ್ರ
ವ್ಯೂಹದಲಿ ಬಂದೊಡ್ಡಿ ನಿಂದುದು ಪಾಂಡುಸುತಸೇನೆ
ಮೋಹರಿಸಲೊಡವೆರಸಿ ಹೊಯ್ದರು
ಗಾಹುಗತಕವನುಳಿದು ಚೂಣಿಯ
ಸಾಹಸಿಗರು ಸನಾಮರೊದಗಿದರೆರಡು ಥಟ್ಟಿನಲಿ ೩

ಹೊಯ್ದು ಮುಗ್ಗಿತು ಭಟರು ವೆಗ್ಗಳ
ಕೈದುಕಾರರು ತಲೆಗೆ ಸಂದರು
ಮೈದೆಗೆಯದೊಡವೆರಸಿ ಹೊಕ್ಕರು ಬೇಹಬೇಹವರು
ಕೊಯ್ದ ಕೊರಳಿನ ಕೊರೆದ ತೋಳಿನ
ಹಾಯ್ದ ಮೂಳೆಯ ಸುರಿವ ಕರುಳಿನ
ಲೆಯ್ದೆ ಪಡೆಗೇರಾಯ್ತು ಚೂಣಿಯ ಚಾತುರಂಗದಲಿ ೪

ಇಂದು ಬರಹೇಳರ್ಜುನನ ರಣ
ವಿಂದಲೇ ಭೀಮಂಗೆ ಮನದಲಿ
ಕಂದು ಕಸರಿಕೆ ಬೇಡ ಕಾದಲಿ ಧರ್ಮನಂದನನು
ಹಿಂದೆ ನಂಬಿಸಿ ಭೀಷ್ಮಗುರುವನು
ಕೊಂದ ಗೆಲುವಿನಲುಬ್ಬ ಬೇಡೆಮ
ಗಿಂದು ದಳವಾಯ್ ಕರ್ಣನೆಂದುದು ಭಟರು ಬೊಬ್ಬಿರಿದು ೫

ತೇರು ಬಿಟ್ಟವು ಸೂಠಿಯಲಿ ಜ
ಜ್ಝಾರ ರಾವ್ತರು ವಾಘೆ ಸರಿಸದ
ಲೇರಿದರು ಕಾರ್ಮುಗಿಲ ಬಲವೆನೆ ಕವಿದವಾನೆಗಳು
ಆರಿದರೆ ನೆಲ ಬಿರಿಯೆ ಬೆರೆಸಿತು
ಪೌರಕರು ಸಬಳಿಗರು ಬಿಲ್ಲಿನ
ಭೂರಿ ಭಟರಳ್ಳಿರಿದು ಕೆಣಕಿತು ಕೆದರಿ ರಿಪುಬಲವ ೬

ಮುರಿಯದಹಿತರ ಥಟ್ಟು ನಮ್ಮದು
ತೆರಹುಗೊಡದೌಂಕಿತ್ತು ದೊರೆಗಳು
ಹೊರಗೆ ಲಗ್ಗೆಯ ಮಾಡಿ ತೋರಿದರೊಡನೆ ಪಡಿಬಲವ
ಉರುಬಿದರು ವೃಷಸೇನ ಸೌಬಲ
ಗುರುಜ ಕೃಪ ಕೃತವರ್ಮ ದುರ್ಮುಖ
ವರ ವಿಕರ್ಣ ಕ್ಷೇಮಧೂರ್ತಿ ಬೃಹದ್ರಥಾದಿಗಳು ೭

ಸೂತಸುತ ದಳಪತಿಯೆ ಫಡ ಮು
ಯ್ಯಾಂತರೇ ಮುಂಬಿಗರು ಬಿರುದಿನ
ಬೂತುಗಳ ಬೊಬ್ಬಾಟ ಬಿಡದೇ ಕಂಡು ಕಾಣರಲ
ಸೋತ ಸಮರದ ಕೇಣಿಕಾರರು
ಕೂತರೋ ಜಯಸಿರಿಗೆ ಹೊಯ್ ಹೊ
ಯ್ಯೀತಗಳನೆನುತೇರಿದರು ಪಾಂಡವ ಮಹಾರಥರು ೮

ನೂಕಿತೊಂದೇ ವಾಘೆಯಲಿ ರಥ
ನಾಕು ಸಾವಿರ ಬಲುಗುದುರೆ ಹದಿ
ನಾಕು ಸಾವಿರ ನೂರು ಕರಿಘಟೆ ಲಕ್ಕ ಪಾಯದಳ
ಜೋಕೆ ಜವಗೆಡೆ ಮುರಿವಡೆದು ಬಲ
ದಾಕೆವಾಳರು ಸರಿಯೆ ಸೋಲದ
ನೂಕು ನೂಕಾಯಿತ್ತು ಕೌರವರಾಯ ಸೇನೆಯಲಿ ೯

ಫಡಫಡೆತ್ತಲು ಸ್ವಾಮಿದ್ರೋಹರು
ಸಿಡಿದರೋ ನಿಜಕುಲದ ಬೇರ್ಗಳ
ಕಡಿದರೋ ಕುರುಬಲದ ಕಾಹಿನ ಪಟ್ಟದಾನೆಗಳು
ಕೊಡನ ಫಣಿಯಿದು ಪಾಂಡವರ ಬಲ
ತುಡುಕಬಹುದೇ ಎನುತ ಸೇನೆಯ
ತಡೆದು ನಿಂದನು ಕ್ಷೇಮಧೂರ್ತಿ ಸಹಸ್ರಗಜಸಹಿತ ೧೦

ತರಿಸಿ ಲೋಹದ ಜತ್ತರಟ್ಟವ
ಹರಹಿದರು ಸೂಲಿಗೆಯ ಬಂಡಿಯ
ನಿರಿಸಿದರು ಕೆಲಬಲದ ಕಡೆಯಲಿ ಸಬಳಿಗರ ನಿಲಿಸಿ
ತುರಗ ರಥ ಬಿಲ್ಲಾಳನೊತ್ತಾ
ಗಿರಿಸಿ ಲಗ್ಗೆಯ ಲಹರಿಯಲಿ ಮೋ
ಹರಿಸಿದರು ಪಾಂಚಾಲ ಕೈಕೆಯರವರ ಥಟ್ಟಿನಲಿ ೧೧

ನೀಡಿ ಬರಿಕೈಗಳಲಿ ಸೆಳೆದೀ
ಡಾಡಿದವು ಬಂಡಿಗಳನೌಕಿದ
ಕೋಡ ಕೈಯಲಿ ಸಬಳಿಗರ ಸೀಳಿದವು ದೆಸೆದೆಸೆಗೆ
ಹೂಡು ಜಂತ್ರದ ಜತ್ತರಟ್ಟವ
ನಾಡಲೇತಕೆ ಹಿಂದಣೊಡ್ಡನು
ಝಾಡಿಸಿದವೀ ಕ್ಷೇಮಧೂರ್ತಿ ನೃಪಾಲನಾನೆಗಳು ೧೨

ರಾಯದಳ ಕಳವಳಿಸೆ ಗಜಘಟೆ
ಘಾಯಘಾಯಕೆ ನೆಲನ ಕೊಂಡವು
ಹಾಯಿದವು ರಥ ಹಯವ ಸೆಳೆದವು ಹೊದರ ಹರೆಗಡಿದು
ನಾಯಕರ ಕಡೆನುಡಿವ ಬೈಗುಳ
ಬಾಯ ಬೊಬ್ಬೆಯ ಕೈಯ ಹೊಯ್ಗುಳ
ದಾಯಿಗರಲೇ ಎನುತ ಮೂದಲಿಸಿದನು ತಮ್ಮೊಳಗೆ ೧೩

ಕೆದರಿತರನೆಲೆ ರಾಯ ಥಟ್ಟನು
ಕೆದರಿಸಿದವಾನೆಗಳು ಹಗೆಗಳ
ಮದಮುಖಕೆ ಮಾರೊಡ್ಡ ಮೆರೆದರೆ ಪೂತುರೇ ಎನುತ
ತುದಿವೆರೆಳ ತುಟಿಯುಬ್ಬರಕೆ ಗಜ
ಬೆದರೆ ಗಜರೋಹಕರ ಗರ್ಜಿಸಿ
ಗದೆಯ ತಿರುಹುತ ಹೊಕ್ಕನಿವರೊಡ್ಡಿನಲಿ ಕಲಿಭೀಮ ೧೪

ಗರುಡನೂರವರೆರೆವರೇ ನಾ
ಗರಿಗೆ ತನಿಯನು ಭೀಮಸೇನನ
ಬಿರುದಿನೋಲೆಯಕಾರರೇನಂಜುವರೆ ಮಾರ್ಬಲಕೆ
ಕರಿಘಟೆಯ ಕೆದರಿದರು ಕೇಣದ
ಧುರವ ಬಲ್ಲರೆ ಗಜದ ಕರುಳಲಿ
ಕರುಳ ತೊಡಕಲು ಬಿದ್ದುವೈಸಾವಿರ ಮಹಾರಥರು ೧೫

ಮುಂಗುಡಿಯ ಮುರಿದೌಕಿ ಭೀಮಂ
ಗಂಘವಿಸಿದನು ಕ್ಷೇಮಧೂರ್ತಿ ಮ
ತಂಗಜದ ಮೇಲೆಸುತ ಬಲು ನಾರಾಚ ಸೋನೆಯಲಿ
ಅಂಘವಣೆಯಹುದೋ ಮಹಾದೇ
ವಂಗೆ ನೂಕದು ಪೂತು ಮಝರೆಯ
ಭಂಗನೋ ನೀನೆನುತ ಮೂದಲಿಸಿದನು ಕಲಿಭೀಮ ೧೬

ಮೇಲುವಾಯ್ದಾ ರೋಹಕರ ಹಿಂ
ಗಾಲ ಹಿಡಿದೀಡಾಡಿ ರಿಪುಗಜ
ಜಾಲದೊಳಗೊಂದಾನೆಯನು ತಾನೇರಿ ಬೊಬ್ಬಿರಿದು
ಘೀಳಿಡುವ ಕರಿ ಕೆದರಲಂಕುಶ
ವಾಳೆ ನೆತ್ತಿಯನಗೆದು ದಂತಿಯ
ತೂಳಿಸಿದನಾ ಕ್ಷೇಮಧೂರ್ತಿಯ ಗಜದ ಸಮ್ಮುಖಕೆ ೧೭

ಇದು ವಿನೋದವಲೇ ಮದೀಯಾ
ಭ್ಯುದಯವಿದಲೇ (ಪಾ: ಭ್ಯುದಯವಿದಲೆ) ನಮ್ಮ ಕೋಪವ
ನಿದಿರುಗೊಂಡವನಿವನಲೇ ಎನುತೆಚ್ಚನಾ ಭೀಮ
ಸದೆಗ ನೀ ಸಾರೆಲೆವೊ ಭಾರಿಯ
ಮದಗಜದ ಬಡಿಹೋರಿ ಹೋಗೆನು
ತೊದರಿ ಭೀಮನ ಮುಸುಕಿದನು ನಾರಾಚಸೋನೆಯಲಿ ೧೮

ಆಗಲೀ ನಾಲಗೆಯ ಸಾಲವ
ನೀಗ ಕೈಯಲಿ ತಿದ್ದಿ ಕೊಡುವರೆ
ಹೋಗದೇ ಹೊತ್ತಿಹವೆ ಹೇಳೆನುತೆಚ್ಚನಾ ಭೀಮ
ಆಗಳಾವುದು ನೆಲನು ನಭ ದಿಗು
ಭಾಗವೆಲ್ಲಿಯದೆನಲು ಕಣೆಗಳ
ತೂಗಿ ತುರುಗಿದವರಿಭಟನ ಕರಿಘಟೆಯ ಮೈಗಳಲಿ ೧೯

ಸರಳ ಮಳೆಯಲಿ ನನೆದು ಕರಿಘಟೆ
ಯುರುಳಿದವು ಕಲ್ಪಾಂತವರುಷದೊ
ಳುರುಳುವದ್ರಿಗಳಂತೆಯೆಸೆದವು ವೈರಿದಂತಿಗಳು
ಎರಡು ಸೀಳಾಯ್ತವನ ಕರಿ ಧರೆ
ಗಿರದೆ ದೊಪ್ಪನೆ ಹಾಯ್ದು ಖಾತಿಯೊ
ಳುರವಣಿಸಿದನು ಕ್ಷೇಮಧೂರ್ತಕ ಸೆಳೆದಡಾಯುಧದಿ ೨೦

ಕುಣಿದು ಪುಟನೆಗೆದರಿ ಗಜನ ಹೊ
ಯ್ದಣೆದು ಹಿಂಗದ ಮುನ್ನ ತಲೆ ಮೇ
ಲಣಿಗೆ ಚಿಗಿದುದು ಮುಂಡ ನಡೆದುದು ನೂರು ಹಜ್ಜೆಯನು
ಬಣಗು ನೀನಕಟಕಟ ಭೀಮನ
ಕೆಣಕಿ ಬದುಕಿದೆಯೆನುತಲಪ್ಸರ
ಗಣಿಕೆಯರು ನಗುತವನ ಕೊಂಡೊಯ್ದರು ವಿಮಾನದಲಿ ೨೧

(ಸಂಗ್ರಹ : ಸುಬ್ರಹ್ಮಣ್ಯ)

Monday, May 3, 2010

ಕರ್ಣಪರ್ವ: ೦೧. ಒಂದನೆಯ ಸಂಧಿ

ಸೂ : ರಾಯ ಕಟಕಾಚಾರ್ಯನಾ ತರು
ವಾಯ ಸೇನಾಪಟ್ಟವನು ರಾ
ಧೇಯನಲಿ ರಚಿಸಿದನು ಮುದದಲಿ ಕೌರವರ ರಾಯ

ಕೇಳು ಜನಮೇಜಯ ಧರಿತ್ರೀ
ಪಾಲ ತೆಗೆದವು ಬಲವೆರಡು ನಿಜ
ಪಾಳಯಕೆ ಪರಿತೋಷ ಖೇದಸ್ತಿಮಿತವಿಕ್ರಮರು
ಕೋಲಗುರುವಿನ ಮರಣವಾರ್ತಾ
ಕಾಲಸರ್ಪನ ತಂದು ಸಂಜಯ
ಹೇಳಿಗೆಯನೀಡಾಡಿದನು ಧೃತರಾಷ್ಟ್ರನಿದಿರಿನಲಿ ೧

ಬೆದರಿತಾಯಾಸ್ಥಾನ ಧಿಗಿಲೆಂ
ದುದು ಧರಾಧೀಶ್ವರನ ತಂದೆಯ
ಹೃದಯದಲಿ ಹುರುಳೇನು ಬಳಿಕುಳಿದವರ ಮೋರೆಗಳ
ಕದಡಿತಂತಃಕರಣವರಸನ
ಕದಪು ಕೈಯಲಿ ಕೀಲಿಸಿತು ಹೇ
ಳಿದನು ಸಂಜಯ ಮತ್ತೆ ಮೇಲಣ ರಣದ ವಾರ್ತೆಯನು ೨

ಗುಡಿಯ ಕಟ್ಟಿಸು ಜೀಯ ಬರತುದು
ಕಡಲು ಮುರಿದುದು ಮೇರು ತಿರುಗಿತು
ಪೊಡವಿ ಬಿದ್ದುದು ಭಾನುಮಂಡಲವಹಹ ವಿತಳದಲಿ
ಮಡಿದುದೈ ನಿನ್ನಾನೆ ನಿನ್ನು
ಗ್ಗಡದ ಭಟ ಬೀಳ್ಕೊಂಡನೈ ಕಡಿ
ವಡೆದನೈ ಕಲಿ ಕರ್ಣನೊಸಗೆಯ ಮಾಡಹೇಳೆಂದ ೩

ಮೊದಲಲಿದ್ದುದು ಜೀವಕಳೆ ಹೃದ
ಯದಲಿ ಹೃದಯವನೊಡೆದು ಮಿಗೆ ಕಂ
ಠದಲಿ ಕವಿದುದು ಮಂಚದಲಿ ಮೈಮರೆದು ಮಲಗಿದನು
ಕೆದರಿತಲ್ಲಿಯದಲ್ಲಿ ರಾಯನ
ಹದನನರಿದೊಳಗೊಳಗೆ ರಾಣಿಯ
ರೊದರಲಂತಃಪುರದಲುಕ್ಕಿತು ಶೋಕರಸ ಜಲಧಿ ೪

ಬಾಯ ಬಸುರಿನ ನೊಸಲ ಹೊಯ್ಲಿನ
ರಾಯನರಸಿಯರರಸನಿದಿರಲಿ
ಹಾಯಿದರು ಭಿತ್ತಿಗಳನೊದರಿದರೊಡನೆ ದೆಸೆಯೊದರೆ
ರಾಯನಾವೆಡೆ ಜೀಯ ಕಲಿ ರಾ
ಧೇಯನಾವೆಡೆ ನೂರು ಮಕ್ಕಳು
ಬೀಯವಾದರೆ ಮಾವ ಎಂದರು ಸೊಸೆಯರಡಗೆಡೆದು ೫

ರವಕುಳವ ನಾನೇನ ಹೇಳುವೆ
ನವನಿಪತಿಯಾ ಕರ್ಣ ಮೊದಲಾ
ದವರ ರಾಣೀವಾಸ ಬಹಳಾಕ್ರಂದನಧ್ವನಿಯ
ಕವಿದುದೊಳಸೂರೆಗರು ಕೋಟೆಯ
ತವಕಿಗರು ಗುಜುಗುಜಿಸೆ ಬಿಗಿದವು
ಭವನ ಭವನ ಕವಾಟ ತತಿ ಗಾಳಾಯ್ತು ಗಜನಗರ ೬

ನೆರೆದುದಲ್ಲಿಯದಲ್ಲಿ ಸೂರೆಗೆ
ಹರಿದುದಲ್ಲಿಯದಲ್ಲಿ ಮನ ಮ
ತ್ಸರದ ಜಗಳಕೆ ಸೂಳುಬಂಟರು ಹೊಯ್ದರೊಳಗೊಳಗೆ
ಅರಮನೆಯಲಾ ಬೊಬ್ಬೆ ಹಸ್ತಿನ
ಪುರದಲೀ ಬೊಬ್ಬಾಟವಿನ್ನುಳಿ
ದರಸುಗಳ ಪಾಡಾವುದೆಂದನು ಮುನಿ ನೃಪಾಲಂಗೆ ೭

ಸೂರೆ ಹೋದುದು ನಗರಿ ಖಳರಿಗೆ
ಮಾರಿದರು ಪಟ್ಟಣವನಕಟಾ
ಕಾರುಮದ್ದಿಗೆ ಹೋಹುದೇ (ಪಾ: ಹೋಹುದೆ) ಕೈಮಸಕವವನಿಪನ
ನೂರುಮಕ್ಕಳನಿಕ್ಕಿ ಸಾಧಿಸ
ಲಾರನೇ ಜಯಸಿರಿಯನೆಂದುರೆ
ಮೀರಿ ನುಡಿದುದು ಮಂತ್ರಿಗಳು ಧೃತರಾಷ್ಟ್ರನಿದಿರಿನಲಿ ೮

ಎರಡು ಗಲ್ಲದ ನಯನವಾರಿಯ
ಹರಿಕುಣಿಯ ನಿಲಿಸಿದನು ಸಂಜಯ
ನರಸನನು ಕುಳ್ಳಿರಿಸಿ ಬೆನ್ನಿಗೆ ಚಾಚಿದನು ಮಲಗ
ಅರಸ ಹದುಳಿಸು ನಿನ್ನ ಸೊಸೆಯರ
ಕರೆದು ಸಂತೈಸಕಟ ಹಸ್ತಿನ
ಪುರದ ಗಾವಳಿಗಜಬಜಕೆ ಡಂಗುರವ ಹೊಯ್ಸೆಂದ ೯

ಬೀದಿ ಬೀದಿಗಳೊಳಗೆ ಡಂಗುರ
ನಾದವೆಸೆದವು ಕೇರಿ ಕೇರಿಗೆ
ಕೈದುಕಾರರು ನೆರೆದು ನಿಂದರು ಸೂರೆಗರ ಕೆಡಹಿ
ಸುಯ್ಪನಡಿಗಡಿಗೊಲೆದೊಲೆದು ಪರಿ
ಖೇದಶೋಕಜ್ವಲನ ಜನಿತ
ಸ್ವೇದ ಸಲಿಲ ಸ್ತಿಮಿತಕಾಯನು ರಾಯನಿಂತೆಂದ ೧೦

ಹೇಳು ಸಂಜಯ ನಮ್ಮ ಭಾಗ್ಯದ
ಶಾಳಿವನ ಫಲವಾಯ್ತಲಾ ಕೈ
ಮೇಳವಿಸಿದನೆ ಕರ್ಣನಮರಸ್ತ್ರೀ ಕದಂಬದಲಿ
ಹೇಳು ಹೇಳೆನ್ನಾಣೆ ಮಾತಿನ
ಜಾಳಿಗೆಯ ಮರೆ ಬೇಡ ಕುರುಪತಿ
ಕಾಳೆಗದೊಳಸ್ತಮಿಸಿದನೆ ನುಡಿಯಂಜಬೇಡೆಂದ ೧೧

ಸಾವೆನಾನೆಂದಂಜದಿರು ಕ
ರ್ಣಾವಸಾನವ ಕೇಳಿ ತನ್ನಯ
ಜೀವವಿದಲಾ ದೇಹದಲಿ ಬೇರಿನ್ನು ಕೆಲಬರಲಿ
ಸಾವೆನೇ ತಾನಕಟ ಕೌರವ
ಜೀವಿಸಲಿ ಮೇಣಳಿಯಲೆಮಗಿ
ನ್ನಾವ ತೊಡಕಿಲ್ಲಿನ್ನು ವಜ್ರಶರೀರ ತಾನೆಂದ ೧೨

ಘಾಯವಡೆದನು ಭೀಷ್ಮ ಬಳಿಕಿನೊ
ಳಾಯುಧದ ಗುರು ತೊಡಬೆಗಳಚಿದ
ನೀಯವಸ್ಥೆಗೆ ನಮ್ಮ ತಂದನು ಭಾನುನಂದನನು
ಸಾಯನೇ ಮಗನಿನ್ನು ಸಾಕಾ
ನಾಯ ನುಡಿಯಂತಿರಲಿ ಕರ್ಣಂ
ಗಾಯಿತೇ ಕಡೆ ಶೋಕವನು ವಿಸ್ತರಿಸಿ ಹೇಳೆಂದ ೧೩

ಸರಳ ಕೊರತೆಯೊ ಸಾರಥಿಯ ಮ
ತ್ಸರವೊ ರಥದ ವಿಘಾತಿಯೋ ದು
ರ್ಧರ ಧನುರ್ಭಂಗವೊ ಮಹಾಸ್ತ್ರವ್ಯಥೆಯೊ ರವಿಸತನ
ಹುರುಳುಗೆಡಿಸಿದರೆಂತು ರಿಪು ರಾ
ಯರಿಗೆ ನಾವ್ ಗೋಚರವೆ ದುರಿತೋ
ತ್ಕರುಷವೈಸಲೆ ನಮ್ಮ ಕೆಡಿಸಿತು ಶಿವಶಿವಾ ಎಂದ ೧೪

ಹರುಹುಗೆಟ್ಟುದು ತೇರು ಸಾರಥಿ
ಹುರುಳುಗೆಡಿಸಿಯೆ ನುಡಿದನಂಬಿನ
ಕೊರತೆ ತಾ ಮುನ್ನಾಯ್ತು ದೈವದ್ರೋಹಿಗಳು ನಿಮಗೆ
ಅರಿವಿಜಯವೆಲ್ಲಿಯದು ನೀವ್ ಮನ
ಬರಡರೈ ನಿಮ್ಮನ್ವಯವ ಸಂ
ಹರಿಸಿದಿರಿ ಸಾಕೆಂದು ಸಂಜಯ ತೂಗಿದನು ಶಿರವ ೧೫

ಸುರ ನರೋರಗರರಿಯೆ ನಾವ್ ಬಾ
ಹಿರರು ಭಂಗಿಸಬೇಡ ಸಾಕಂ
ತಿರಲಿ ಕರ್ಣಾಹವದ ಕರ್ಣಾಮೃತವ ಸುರಿ ಸಾಕು
ಅರಿಗಳಭ್ಯುದಯವನು ನಮ್ಮಪ
ಸರಣವನು ಕಿವಿಯಾರೆ ಕೇಳುವ
ಪರಮ ಸುಕೃತಿಗಳಾವು ನೀ ಹೇಳಂಜಬೇಡೆಂದ ೧೬

ಹೇಳಿದನು ಬಳಿಕೆರಡು ಥಟ್ಟಿನೊ
ಳಾಳು ಕುದುರೆಯ ಗಜ ರಥವ ಭೂ
ಪಾಲರಳಿದುಳಿದವರ ಲೆಕ್ಕವನೈದೆ ವಿಸ್ತರಿಸಿ
ಕೇಳು ನಿನ್ನಾತನ ವಿನೋದದ
ಖೂಳ ಬೋಳೆಯತನದಲೊದಗಿದ
ಬಾಳಿಕೆಯ ಬೀಸರವನೆಂದನು ಸಂಜಯನು ನಗುತ ೧೭

ತೊಡರ ತೆಗೆದರು ಕೈಯಡಾಯ್ದವ
ಜಡಿಯಲಮ್ಮರು ಹೊತ್ತ ದುಗುಡದ
ನಿಡು ಮುಸುಕುಗಳ ಬಿಗಿದ ಬೆರಗಿನ ಬಿಟ್ಟ ಕಣ್ಣುಗಳ
ಒಡೆಯನಿದಿರಲಿ ಕುಳ್ಳಿರದೆ ಕೆಲ
ಕಡೆಯ ಕೈದೀವಿಗೆಯ ಮರೆಯಲಿ
ಮಿಡುಕದಿರ್ದುದು ರಾಯನೋಲಗದೊಳಗೆ ಪರಿವಾರ ೧೮

ಸಾಲ ಸಾವಿರ ದೀವಿಗೆಯ ಹರಿ
ದಾಳಿಗಳುಕದೆ ನೃಪರ ಮೋರೆಗ
ಳೋಳಿಗಳ ನೆರೆ ಹೊದ್ದಿ ಕತ್ತಲೆ ನಿಂದುದಲ್ಲಲ್ಲಿ
ಹೇಳನೇನದ ಬಹಳ ದುಗುಡದ
ಪಾಳೆಯವೊ ನಿನ್ನಾತನೋಲಗ
ಶಾಲೆಯೋ ನಾವರಿಯೆವೆಂದನು ಸಂಜಯನು ನೃಪಗೆ ೧೯

ಎಲೆ ಮಿಡುಕದಾಸ್ಥಾನ ವೀಳೆಯ
ದೆಲೆಯ ಮಡಿಸುವ ರಭಸವಿಲ್ಲೊಳ
ಗೊಳಗೆ ಸನ್ನೆಗಳೋರೆಗೊರಳುಗಳೌಡುಗಚ್ಚುಗಳ
ಹಳಸಿದಗ್ಗಳಿಕೆಗಳ ಮೀಸಲು
ಗಳೆದ ಬಿರುದಿನ ಮಾನಭಂಗದ
ಕಳವಳದ ಕನಸುಗಳಲಿದ್ದುದು ರಾಯನಾಸ್ಥಾನ ೨೦

ಕೆತ್ತು ಕೊಂಡಿರಲೇಕೆ ನೀವಿ
ನ್ನುತ್ತರಾಯಿಗಳೆಮ್ಮ ಭಾಗ್ಯದ
ಬಿತ್ತು ಹುರಿದಿರೆ ಬಿರುದ ಭಟರಿದ್ದೇನಮಾಡುವರು
ಮೆತ್ತಿದಂಬಿನ ಮೆಯ್ಯ ಭೀಷ್ಮನು
ಹೊತ್ತ ಕೈದುವ ಬಿಸುಟ ಕಳಶಜ
ನುತ್ತಮಿಕೆಗಳ ಮೆರೆದರೆಂದನು ಕೌರವರ ರಾಯ ೨೧

ಬಿಗಿದ ತಿಮಿರದ ಕೆಚ್ಚು ಸೂರ್ಯನ
ಸೊಗಡು ಹೊಯ್ದರೆ ಮುರಿಯದೇ ಕಾ
ಳೆಗಕೆ ಕರ್ಣನ ಕೈದು ಭಂಡಾರಿಸಿದುದಿನ್ನಬರ
ತೆಗೆಸುವೆವು ನಾಳಿನಲಿ ನಿಮ್ಮಯ
ಮೊಗದ ದುಗುಡದ ದಡ್ಡಿಯನು ಮೈ
ದೆಗೆಯದಿರಿ ಕಲಿಯಾಗಿಯೆಂದನು ನೃಪತಿ ಸುಭಟರಿಗೆ ೨೨

ಜೀಯ ಸಂಶಯವಿಲ್ಲ ಗುರು ಗಾಂ
ಗೇಯರಳುಕಿದರೇನು ಕಲಿ ರಾ
ಧೇಯನೇ ವಜ್ರಾಂಗಿಯಲ್ಲಾ ನಮ್ಮ ಮೋಹರಕೆ
ರಾಯ ನೀ ಪತಿಕರಿಸಿದರೆ ಚ
ಕ್ರಾಯುಧನ ಚಾತುರ್ಯ ಕೊಳ್ಳದು
ಜೀಯ ಕರ್ಣನ ಮುಂದೆಯೆಂದುದು ನಿಖಿಳ ಪರಿವಾರ ೨೩

ಬೇರೆ ತನಗಗ್ಗಳಿಕೆಯೋಲೆಯ
ಕಾರತನವೇ ರಾಯ ಮನವೊಲಿ
ದೇರಿಸಿದರೇರುವುದು ದೊರೆ ಮನಮುರಿಯೆ ಕುಂದುವುದು
ತೋರಿ ನುಡಿದರೆ ಭೀಷ್ಮ ದ್ರೋಣರು
ಜಾರಿಸಿದ ರಣವೆಮಗೆ ಸದರವೆ
ದೂರುವವರಾವಲ್ಲವೆಂದನು ಭಾನುಸುತ ನಗುತ ೨೪

ಸಾಕದಂತಿರಲಿನ್ನು ಥಟ್ಟಿಂ
ಗಾಕೆವಾಳರ ಮಾಡು ಸಾಕಾ
ಸ್ತೋಕಪುಣ್ಯರ ಮಾತದೇತಕೆ ಗುರು ನದೀಸುತರ
ಸಾಕಿ ಸಲಹಿದೆ ಕರ್ಣನನು ಹುರು
ಡೇಕೆ ಗುಣದೊಳಗೀತ ಸೇನಾ
ನೀಕಭಾರದ ಹೊರಿಗೆಗಹನೆಂದನು ಕೃಪಾಚಾರ್ಯ ೨೫

ಎಮ್ಮ ತೋರಿಸಬೇಡ ಸುಖದಲಿ
ನಿಮ್ಮ ಚಿತ್ತಕೆ ಬಹುದ ಮಾಡುವು
ದೆಮ್ಮ ಹೃದಯ ವ್ಯಥೆಯ ನಾವಿನ್ನಾಡಿ ಫಲವೇನು
ಎಮ್ಮ ಪುಣ್ಯದ ಬೆಳೆಗಳೊಣಗಿದ
ಡಮ್ಮಿ ಮಾಡುವುದೇನು ಕರ್ಣನು
ನಮ್ಮ ದಳವಾಯೆಂದನಶ್ವತ್ಥಾಮನರಸಂಗೆ ೨೬

ಆ ಮಹಾರಥ ಭೀಷ್ಮನೇ ಸ್ವೇ
ಚ್ಚಾಮರಣಿಯಾಚಾರ್ಯಚಾಪ
ವ್ಯೋಮಕೇಶನು ಹೊಕ್ಕು ಕಾಣರು ಹಗೆಗೆ ಹರಿವುಗಳ
ಆ ಮಹಾನಾರಾಯಣಾಸ್ತ್ರದ
ಸೀಮೆ ಸೀದುದು ಮಿಕ್ಕ ಭಟರು
ದ್ದಾಮರೇ ಸಾಕಿನ್ನು ಸೇನಾಪತಿಯ ಮಾಡೆಂದ ೨೭

ಕರಸಿದನು ಭೂಸುರರನೌದುಂ
ಬರದ ಮಣಿ ಮಡಿವರ್ಗ ದೂರ್ವಾಂ
ಕುರ ಸಿತಾಕ್ಷತ ಧವಳಸರ್ಷಪ ವರಫಲಾವಳಿಯ
ತರಿಸಿದನು ಹೊಂಗಳಶ ತತಿಯಲಿ
ವರ ನದೀವಾರಿಗಳನಾಡಂ
ಬರದ ಲಗ್ಗೆಯಲೊದರಿದವು ನಿಸ್ಸಾಳಕೋಟಗಳು ೨೮

ವಿರಚಿಸಿತು ಪಟ್ಟಾಭಿಷೇಕೋ
ತ್ಕರುಷ ಮಂತ್ರಾಕ್ಷತೆಯ ಮಳೆಗಳ
ಕರೆದರವನೀಸುರರು ಜಯರವ ಮೇಘಘೋಷದಲಿ
ಗುರುಸುತಾದಿ ಮಹಾಪ್ರಧಾನರು
ದರುಶನವ ನೀಡಿದರು ಕರ್ಣನ
ಬಿರುದಿನುಬ್ಬಟೆಲಹರಿ ಮಸಗಿತು ವಂದಿಜಲಧಿಯಲಿ ೨೯

ಅರಳಿತರಸನ ವದನ ಶಕುನಿಯ
ಹರುಷಮಿಗೆ ದುಶ್ಯಾಸನಂಗು
ಬ್ಬರಿಸೆ ರೋಮಾವಳಿ ವಿಕರ್ಣಾದಿಗಳ ಮನ ನಲಿಯೆ
ಗುರುಜ ಕೃಪ ಕೃತವರ್ಮ ಶಲ್ಯಾ
ದ್ಯರಿಗೆ ಹೂಸಕದೊಲಹು ಮಿಗಿಲಾ
ಯ್ತಿರುಳು ಕರ್ಣಗೆ ಪಟ್ಟವಾಯಿತು ಭೂಪ ಕೇಳೆಂದ ೩೦

(ಸಂಗ್ರಹ : ಸುಬ್ರಹ್ಮಣ್ಯ)