ಸೂ: ರಿಪುಕುಮಾರ ಕುಠಾರ ಧೀರನು
ಚಪಳ ನೃಪಸಂಹಾರ ಕಾಲನು
ವಿಪುಳ ಸಂಗ್ರಾಮದಲಿ ಮಡಿದನು ಫಲುಗುಣನ ತನಯ
ಮೇರೆದಪ್ಪಿತು ಕೌರವನ ಪರಿ
ವಾರದಲಿ ಬೇಹವರು ಮಕುಟದ
ಬಾರಿಯಾಳುಗಳಾಂತುಕೊಂಡರು ಪಾರ್ಥನಂದನನ
ಸೂರಿಯನಸುತ ಶಲ್ಯ ಗೌತಮ
ಕೌರವಾನುಜನುಭಯ ಕಟಕಾ
ಚಾರ್ಯನಶ್ವತ್ಥಾಮನಿವರೊಗ್ಗಾಯ್ತು ಷಡುರಥರು ೧
ಹೊಳೆವ ಸಿಂಧದ ಜಡಿವ ಕಹಳಾ
ವಳಿಯ ಲಗ್ಗೆಯ ವಿವಿಧ ವಾದ್ಯದ
ಕಳಕಳದ ಕಾಲಾಳ ಬೊಬ್ಬೆಯ ಬಹಳ ರಭಸದಲಿ
ಕಲಶ ಪಲ್ಲವ ಚೌಕದಲಿ ಮಂ
ಡಳಿಸಿದವು ಸತ್ತಿಗೆಗಳೊದರುವ
ಕೆಲಬಲದ ಶಂಖಾಳಿಯಲಿ ಸಂದಣಿಸಿತತಿರಥರು ೨
ಅಳವಿಗೊಟ್ಟುದು ಮತ್ತೆ ಕೌರವ
ಬಲಪಯೋನಿಧಿ ವೈರಿ ಬಡಬನ
ಬಿಲು ಸರಳು ಬಿರುಗಿಡಿಯಲೌಕಿತು ಚಾತುರಂಗದಲಿ
ಎಲೆಲೆ ಬೆಂಗಾಹಿನಲಿ ನೂಕುವ
ಬಲ ಸಮರ್ಥರ ಜೋಕೆಯಲಿ ಕುರು
ಬಲಕೆ ಕದನಾಳಾಪವಾಯ್ತೆನುತೆಚ್ಚನಭಿಮನ್ಯು ೩
ಎಸಲು ತಲೆವರಿಗೆಯಲಿ ಕವಿದುದು
ದೆಸೆಯ ಹಳುವಿಂಗೌಕುವತಿರಥ
ರುಸುರುಮಾರಿಗಳೇರಿ ಹೊಯ್ದರು ರಾಯ ರಾವುತರು
ನುಸುಳಿದರು ನಾಚಿಕೆಯಲಾತನ
ವಿಶಿಖ ಜಲದಲಿ ತೊಳೆದರತಿರಥ
ರಸಮ ಸಂಗರವಾಯ್ತು ಮತ್ತಭಿಮನ್ಯುವಿದಿರಿನಲಿ ೪
ಹಳಚಿ ಮುರಿದುದು ವೀರ ಕರ್ಣನ
ಬಲ ಕೃಪಾಚಾರಿಯರ ಸೇನೆಗೆ
ತಲೆಯ ಋಣ ಸಂಬಂಧ ಸವೆದುದು ಕಾತರಿಸಿ ಕವಿವ
ಬಲದ ಬಿರುದರಿಗಮರ ನಾರಿಯ
ರೊಳಗೆ ಸೇರುವೆಯಾಯ್ತು ಶಲ್ಯನ
ಬಲದಡಗು ಸವಿಯಾಯ್ತು ಜಂಬುಕ ಕಾಕ ಸಂತತಿಗೆ ೫
ಕೆಡೆದ ರಥ ಸಲೆ ಕಾಂಚನಾದ್ರಿಯ
ನಡಸಿದವು ನಾಚಿಕೆಯನಭ್ರದೊ
ಳಿಡಿಯೆ ತಲೆ ಬೀರಿದವು ಭಂಗವನನುಪಮಾಂಬರಕೆ
ಕಡಲುವರಿವರುಣಾಂಬು ಜಲಧಿಗೆ
ಬಿಡಿಸಿದವು ಬಿಂಕವನು ಶಿವ ಶಿವ
ನುಡಿವ ಕವಿ ಯಾರಿನ್ನು ಪಾರ್ಥ ಕುಮಾರನಾಹವವ ೬
ಪಡೆಯ ತೆಗೆ ತರುವಲಿಯ ಕೊಲ್ಲದೆ
ಹಿಡಿಯೆನುತ ಬಿರುಸರಳ ತಿರುವಿನ
ಲಡಸಿ ಸೂತರಿಗರುಹಿ ಕೆಲಬಲದವರ ಕೈವೀಸಿ
ಕಡುಮನದ ಕೈಚಳಕಿಗರು ಮುಂ
ಗುಡಿಯಲೈತರೆ ರವಿಸುತಾದಿಗ
ಳೊಡನೊಡನೆ ಕೈಕೊಂಡರಿಂದ್ರಕುಮಾರ ನಂದನನ ೭
ಶಿಶುತನದ ಸಾಮರ್ಥ್ಯ ಸಾಕಿ
ನ್ನೆಸದಿರೆಲವೋ ಮರಳು ಮರಳೆಂ
ದಸಮ ಬಲರೈದಿದರು ಷಡುರಥರೊಂದು ಮುಖವಾಗಿ
ಎಸುಗೆ ನಿಮಗೆಂದಾಯ್ತು ನಿದ್ರೆಯ
ಮುಸುಕಿನಲಿ ಗೋಗ್ರಹಣದಲಿ ಜೀ
ವಿಸಿದ ಜಾಣರು ನೀವೆನುತ್ತಿದಿರಾದನಭಿಮನ್ಯು ೮
ತರಳತನದಲಿ ನುಡಿಯದಿರು ಸಂ
ಗರಕೆ ಕರೆ ನಿಮ್ಮಯ್ಯನನು ಹೊಸ
ಸರಳು ನಾಚುವವಲ್ಲ ಶಿಶುವಧೆಯೆಂಬುದಪವಾದ
ಮರಳುವುದು ಲೇಸೆನುತ ಷಡುರಥ
ರುರವಣಿಸಿದರು ಬಿಗಿದಬಿಲ್ಲಿನ
ಗರುಡಿಕಾರನ ಕೂಡ ನೂಕಿತು ರವಿಸುತಾದಿಗಳು ೯
ಪಾರ್ಥ ಪರಿಯಂತೇಕೆ ಸಮರ
ವ್ಯರ್ಥಜೀವರು ನೀವು ಕೌರವ
ನರ್ಥವನು ಸಲೆ ತಿಂಬುದಲ್ಲದೆ ಸಮರ ನಿಮಗೇಕೆ
ಸ್ವಾರ್ಥ ಲೋಲುಪ್ತಿಯಲಿ ನಿಲುವ ಸ
ಮರ್ಥರಾದರೆ ಬಾಣ ಧಾರಾ
ತೀರ್ಥದೊಳಗೋಲಾಡಿಸುವೆನೆಂದೆಚ್ಚನಭಿಮನ್ಯು ೧೦
ಮನದ ಕೆಚ್ಚುಳ್ಳದಟನಹೆ ಮಾ
ತಿನ ಸಘಾಡಿಕೆ ಲೇಸು ಪಾರ್ಥನ
ತನಯನಲ್ಲಾ ಪೂತು ಪಾಯಿಕು ಎನುತ ಷಡುರಥರು
ತನತನಗೆ ಕೆಂಗೋಲಿನಲಿ ಮು
ಮ್ಮೊನೆಯ ಬೋಳೆಯ ಸರಳಿನಲಿ ಸಾ
ಧನ ಸಮಗ್ರರು ಶಿಶುವನೆಚ್ಚರು ದೆಸೆದೆಸೆಗೆ ಕವಿದು ೧೧
ಮಸಗಿ ಮದದಾನೆಗಳು ಸಿಂಹದ
ಶಿಶುವ ಮುತ್ತುವವೋಲು ಕವಿಕವಿ
ದೆಸುತ ಬಂದರು ಮಕುಟವರ್ಧನರಸಮಬಾಲಕನ
ನುಸುಳದವರವರಸ್ತ್ರವನು ಖಂ
ಡಿಸುತ ಸನ್ನಾಹದಲಿ ಘನ ಪೌ
ರುಷದಲೆಚ್ಚಾಡಿದನು ಹಲಬರ ಕೂಡೆ ಸುಕುಮಾರ ೧೨
ಕೋಡಿದನೆ ಕೊಂಕಿದನೆ ನಾಯಕ
ವಾಡಿಗಳು ಹಲರೆಂದು ಬೆಂಗೊ
ಟ್ಟೋಡಿದನೆ ಕೈಗಾಯದೆಚ್ಚನು ನಚ್ಚಿದಂಬಿನಲಿ
ತೋಡು ಬೀಡಿನ ಹವಣನಾತನ
ಮಾಡಿದಾತನೆ ಬಲ್ಲನೆನೆ ಕೈ
ಮಾಡಿ ಸುರಿದನು ಸರಳ ಮಳೆಯ ಮಹಾರಥರ ಮೇಲೆ ೧೩
ಪೂತು ಮಝ ಬಿಲ್ಲಾಳುತನವಿದು
ಭೂತನಾಥಂಗಿಲ್ಲ ಸುಭಟ
ವ್ರಾತವೀಕ್ಷಿಸಲರಿದೆನುತ ಕಣೆಗೆದರಿದನು ದ್ರೋಣ
ಏತಕಿದು ಹಿಮ್ಮೆಟ್ಟು ದಿಟ ನೀ
ಸೋತಡೆಯು ಜಯವಿಲ್ಲೆಮಗೆ ಮೃಗ
ಪೋತನನು ಹರಿಹೊಯ್ವುದುಚಿತವೆ ಮಗನೆ ಕೇಳೆಂದ ೧೪
ವಿನಯವೇಕಿದು ನಿಮ್ಮ ಭುಜಬಲ
ದನುವ ಬಲ್ಲೆನು ನಿಮ್ಮ ಕೈ ಮೈ
ತನದ ಹವಣನು ಕಾಬೆನೆನ್ನೊಳು ಸೆಣಸಿ ಜಯಿಸಿದರೆ
ಧನುವ ಹಿಡಿಯೆನು ಸಾಕು ಡೊಂಬನ
ಬಿನುಗು ನುಡಿಯಂತಿರಲಿ ಬಲ್ಲಡೆ
ಮೊನೆಗಣೆಯಲೇ ಮಾತನಾಡೆಂದೆಚ್ಚನಭಿಮನ್ಯು ೧೫
ಎಡದೊಳೌಕುವ ಕೃಪನನೆಚ್ಚನು
ತಡೆಯಲಶ್ವತ್ಥಾಮನನು ರಥ
ಕೆಡೆಯಲೆಚ್ಚನು ತೊಡಚಿ ಕೈಯಲಿ ಕೌರವಾನುಜನ
ಮಿಡುಕಲೆಚ್ಚನು ಹಿಂದು ಮುಂದವ
ಗಡಿಸಿದಾ ಮಾದ್ರೇಯ ರವಿಸುತ
ರೊಡಲೊಳಂಬನು ಹೂಳಿದನು ಸೀಳಿದನು ಸಮರಥರ ೧೬
ಅಡಸಿ ಹೊಕ್ಕರೆ ಕೃಪನ ರಥವನು
ಕಡಿದು ಬಿಸುಟನು ಗುರುಸುತನನಡಿ
ಮಿಡುಕಲೀಯದೆ ಬಿಗಿದು ಕರ್ಣನ ಧನುವ ಖಂಡಿಸಿದ
ಕೊಡಹಿದನು ಕೌರವನ ರಥವನು
ತುಡುಕಲೀಯದೆ ದ್ರೋಣನನು ಜವ
ಗೆಡಿಸಿದನು ಜೋಡಿಸಿದ ಷಡುರಥರೊಗ್ಗನೊಡೆ ಹೊಯ್ದ ೧೭
ಮುರಿಮುರಿದು ಹಿಯ್ಯಾಳಿಯಲಿ ಮ
ತ್ತುರವಣಿಸಿ ಗರಿಗಟ್ಟಿ ರಥಿಕರು
ಹುರಿಬಿಡದೆ ಬಿಗುಹಿನಲಿ ಭಾಷೆಯ ಮಾಡಿ ತಮ್ಮೊಳಗೆ
ಸರಳ ಸೂಸಿದರೆಡಬಲದಲ
ಬ್ಬರವ ಮಾಡಿದರೋಡಿದರು ಹಗೆ
ಯರುಣ ಜಲದಲಿ ನಾದಿದರು ನಿಶಿತಾಸ್ತ್ರ ಸಂತತಿಯ ೧೮
ವಡಬಗೌತಣವಿಕ್ಕುವರೆ ಕಡ
ಲೊಡೆಯಗಹುದು ಸಮರ್ಥನಲ್ಲಾ
ಬಿಡುಗಣೆಯ ಬೀರುವರೆ ಕಟಕಾಚಾರ್ಯನೆಂದೆನುತ
ಕಡುಮೊನೆಯ ಕೂರಂಬುಗಳ ಮಿಗೆ
ಗಡಣಿಸಿದನೊಗ್ಗೊಡೆದ ಷಡುರಥ
ರೊಡಲೊಳಂಬನು ಹೂಳಿದನು ಕಾರಿದರು ಶೋಣಿತವ ೧೯
ಹೂಸಕದ ಶೌರಿಯದ ಬಾಳಿಕೆ
ಯೇಸು ದಿನವೈ ಕರ್ಣ ಕೃಪ ದು
ಶ್ಶಾಸನರ ಕೊಂಬನೆ ಕುಮಾರಕ ಸುರರಿಗಲಿಗಣಸು
ಘಾಸಿಯಾದರು ಘಾಯವಡೆದು ವಿ
ಳಾಸವಳಿದುದು ರಿಪುಭಟನ ಗೆಲು
ವಾಸೆ ಬೀತುದು ಧಾತುಗೆಟ್ಟುದು ಸರಳ ಸಾರದಲಿ ೨೦
ವಿರಥನಾದನು ಕರ್ಣನಂಬಿಗೆ
ತಿರುಹಿ ಬಿಲ್ಲನು ತೊಟ್ಟನಾ ಗುರು
ಗುರುತನೂಜನು ತನ್ನ ಸೂತನ ಶಿರವ ಹರಿಯೆಚ್ಚ
ಸುರಗಿಯನು ಬಿಸುಟೊರೆಯ ತಿರುಹಿದ
ನರಸನನುಜನು ಕೃಪನು ಶಲ್ಯನು
ಕೊರಳಲಸುಗಳ ಹಿಡಿದು ಹಂಗಿಗರಾದರೊಡೆಯಂಗೆ ೨೧
ಗನ್ನದಲಿ ಗುರು ಜಾರಿದನು ಕೃಪ
ಮುನ್ನವೇ ಹಿಂಗಿದನು ಕರ್ಣನ
ನಿನ್ನು ಕಂಡವರಾರು ಮೂರ್ಛೆಗೆ ಮೂರು ಬಾರಿಯದು
ಬೆನ್ನ ತೆತ್ತರು ಬಿರುದರಾತಗೆ
ಕೆನ್ನೆಯೆಡೆಗುಗಿದಂಬು ಸಹಿತವೆ
ನಿನ್ನ ಮಗನರನೆಲೆಗೆ ಸರಿದನು ಭೂಪ ಕೇಳೆಂದ ೨೨
ಕೊಂಡು ಬರುತಿದೆ ಭಟರು ಮನ್ನೆಯ
ಗಂಡನಾಗೈ ಜೀಯ ಎನೆ ಖತಿ
ಗೊಂಡು ಕುರುಪತಿ ನೋಡಿದನು ಮೂಗಿನಲಿ ಬೆರಳಿಟ್ಟು
ಭಂಡರೆಂಬೆವೆ ಜಗದ ಗುರುಗಳು
ಗಂಡುಗಲಿಗಳು ವೈರಿ ಭಟರಿಗೆ
ಹೆಂಡಿರಾಗಲು ಹೋಗಿರೈ ದಿಟ ಹೋಗಿ ನೀವೆಂದ ೨೩
ಕಾಲ ವಹಿಲವ ಕಲಿಸಲೋಸುಗ
ಕೋಲಗುರು ಜಾರಿದನು ಶಲ್ಯನ
ಮೇಲುಮುಸುಕನುವಾಯ್ತು ಬಿರುದೇನಾಯ್ತು ಗುರುಸುತನ
ಆಳುವಾಸಿಯ ಕಡುಹು ಕರ್ಣನ
ಬೀಳುಕೊಂಡುದು ಪೂತು ಮಝರೇ
ಬಾಲ ಎಂದವನೀಶ ಮೂದಲಿಸಿದನು ತನ್ನವರ ೨೪
ಇದಿರೊಳೀಶನ ಭಾಳ ನಯನದ
ಕದಹು ತೆಗೆದಿದೆ ಹಿಂದೆ ಮರಳುವ
ಡಿದೆ ಕೃತಾಂತನ ಕೊಂತವರಸನ ಮೂದಲೆಯ ವಚನ
ಅದಟು ಕೊಳ್ಳದು ರಾಜಸೇವೆಯ
ಪದವಿ ಪಾತಕ ಫಲವೆನುತ ನೂ
ಕಿದರು ರಥವನು ಹಳಿವು ದರ್ಪದ ಹೇವ ಮಾರಿಗಳು ೨೫
ರಸದ ಬಂಧದ ಬಿಗುಹು ವಹ್ನಿಯ
ಮುಸುಕನುಗಿದುಳಿವುದೆ ಕುಮಾರನ
ಮುಸುಡ ಮುಂದಕೆ ಬಿದ್ದು ಬದುಕುವರೇ ಮಹಾದೇವ
ಎಸುತ ಹೊಗುವರು ಭಟನ ಘಾಯಕೆ
ಮುಸುಡ ತಿರುಹುವರಡಿಗಡಿಗೆ ಸಾ
ಹಸದ ಸುಂಕಿಗನೊಡನೆ ತಲೆಯೊತ್ತಿದರು ಷಡುರಥರು ೨೬
ಹರಿದು ಬಿದ್ದವು ಜೋಡು ಮೆಯ್ಯಲಿ
ಮುರಿದವಗಣಿತ ಬಾಣದೇರಿನೊ
ಳೊರೆದ ರಕುತದ ಧಾರೆ ನಾದಿತು ರಥದ ಹಲಗೆಗಳ
ಅರಿವು ಮರೆದಪಕೀರ್ತಿನಾರಿಯ
ಸೆರಗ ಹಿಡಿದರು ಹೇಳಲೇನದ
ನರಿಯೆನೇಕಾಂತದಲಿ ಕರ್ಣನ ಕರೆದನಾ ದ್ರೋಣ ೨೭
ಇದಿರೊಳಾನುವುದರಿದು ಹಸುಳೆಯ
ಕದನ ಹಂಗಿಗರಾದೆವಾಳ್ದನ
ವದನಕಮಲಕೆ ನಮ್ಮ ಪೌರುಷವಿಂದು ಹಿಮವಾಯ್ತು
ಇದಿರೊಳಾನಿಹೆ ಶಲ್ಯನೆಡವಂ
ಕದಲಿ ಬಲದಲಿ ಕೃಪನಪರಭಾ
ಗದಲಿ ನೀ ಬಂದೆಸು ಕುಮಾರನ ಕರದ ಕಾರ್ಮುಕವ ೨೮
ಚಾಪವೀತನ ಕೈಯಲಿರಲಿ
ನ್ನಾ ಪಿನಾಕಿಗೆ ಗೆಲವು ಘಟಿಸದು
ವೈಪರೀತ್ಯಕೆ ಬೆದರಲಾಗದು ಸ್ವಾಮಿಕಾರ್ಯವಿದು
ರೂಪುದೋರದೆ ಬಂದು ಸುಭಟನ
ಚಾಪವನು ಖಂಡಿಸುವುದಿದು ಕುರು
ಭೂಪನುಳಿವೆಂದಿನಸುತನನೊಡಬಡಿಸಿದನು ದ್ರೋಣ ೨೯
ಹಿಂದಣಿಗೆ ತಿರುಗಿದನು ಭಾಸ್ಕರ
ನಂದನನು ಬಲವಂಕದಲಿ ಗುರು
ನಂದನನು ಕೃಪ ಶಲ್ಯ ವಾಮದೊಳಿದಿರಲಾ ದ್ರೋಣ
ನಿಂದು ಕದನವ ಕೆಣಕಿದರು ರಿಪು
ಬಂದಿಕಾರನೊಳೇರ ಸೂರೆಗೆ
ಬಂದು ಬಸಿವುತ ಹೋದರನಿಬರು ಬೈದು ರವಿಸುತನ ೩೦
ದಳವು ದಳವುಳವಾಯ್ತು ಕೇಸರ
ದೊಳಗೆ ವಿಸಟಂಬರಿದು ಕರ್ಣಿಕೆ
ಯೊಳಗೆ ರಿಂಗಣಗುಣಿದು ಸಂಗರ ಜಯದ ಮಡುವಿನಲಿ
ಸಲೆ ಸೊಗಸಿ ತನಿ ಸೊಕ್ಕಿ ದೆಸೆ ಪಟ
ದುಳಿದು ಸೌಭದ್ರೇಯ ಭೃಂಗನ
ಬಿಲುದನಿಯ ಭರವಂಜಿಸಿತು ಜಯಯುವತಿ ವಿರಹಿಗಳ ೩೧
ಆರಯಿದು ಮಗನೆನಿಸುವೀ ಮಮ
ಕಾರವೆಮ್ಮೊಳು ಮೊಳೆತಡಾ ದಾ
ತಾರನುಳಿವೆನ್ನಿಂದ ತಪ್ಪುವುದೆನುತ ಮನದೊಳಗೆ
ಕೂರಲಗನಾ ಕರ್ಣ ಬರಸೆಳೆ
ದಾರಿ ಹಿಂದಣಿನೆಚ್ಚು ಪಾರ್ಥಕು
ಮಾರಕನ ಚಾಪವನು ಮುಕ್ಕಡಿಯಾಗಿ ಖಂಡಿಸಿದ ೩೨
ಉರುವ ಜಯವಧುವೊಕ್ಕತನದಲಿ
ಮುರಿದ ಕಡ್ಡಿಯಿದೆನಲು ಕರದಿಂ
ಮುರಿದು ಬಿದ್ದುದು ಚಾಪವಿಂದ್ರಕುಮಾರ ನಂದನನ
ಬೆರಗಡರಿ ಮುಖದಿರುಹಿ ಹಿಂದಣಿ
ನಿರಿದ ಕರ್ಣನ ನೋಡಿ ಮುಖದಲಿ
ಕಿರುನಗೆಯ ಕೇವಣಿಸಿ ನುಡಿದನು ಬೆರಳನೊಲೆದೊಲೆದು ೩೩
ಆವ ಶರಸಂಧಾನ ಲಾಘವ
ದಾವ ಪರಿ ಮಝ ಪೂತು ಪಾಯಿಕು
ದೇವ ಬಿಲ್ಲಾಳೆಂತು ಕಡಿದೈ ಕರ್ಣ ನೀ ಧನುವ
ಈ ವಿವೇಕವಿದಾರ ಸೇರುವೆ
ಯಾವಗಹುದಿದು ಹಿಂದೆ ಬಂದೆಸು
ವೀ ವಿಗಡತನ ನಿನಗೆ ಮೆರೆವುದು ಕರ್ಣ ಕೇಳೆಂದ ೩೪
ಎನಲು ಲಜ್ಜಿತನಾಗಿ ತಿರುಗಿದ
ನನುವರದಲೀ ಕರ್ಣನಾತನ
ಧನು ಮುರಿಯೆ ಕೈಕೊಂಡರೀ ದ್ರೋಣಾದಿ ನಾಯಕರು
ಕನಕ ರಥವನು ದ್ರೋಣನಾ ಗುರು
ತನುಜ ಸಾರಥಿಯನು ಕೃಪಾಚಾ
ರ್ಯನು ತುರುಗವನು ಶಲ್ಯ ಕಡಿದನು ಭಟನ ಠಕ್ಕೆಯವ ೩೫
ತುಡುಕುವರೆ ಧನುವಿಲ್ಲ ಮುಂದಡಿ
ಯಿಡಲು ಸಾರಥಿಯಿಲ್ಲ ರಥ ಕಡಿ
ವಡೆದುದಿನ್ನೆಂತೊದಗುವನೊ ಸುಕುಮಾರ ತಾನೆನುತ
ಪಡೆ ಬಿಡದೆ ಬೊಬ್ಬಿರಿಯೆ ಬೆದರದೆ
ಕಡುಗಿ ಖಡ್ಗವ ಕೊಂಡು ರಿಪುಗಳ
ಕಡಿದು ಹರಹುತ ಬೀದಿವರಿದನು ಕಣನ ಮಧ್ಯದಲಿ ೩೬
ಈತನಿರೆ ಕಲ್ಪಾಂತ ರುದ್ರನ
ಮಾತು ಜಗಕೇಕೆನಲು ವೈರಿ
ವ್ರಾತನನು ಮುಂಕೊಂಡು ಹೊಯ್ದನು ಹೊಳೆವ ಖಡುಗದಲಿ
ಸೋತನೇ ಶಿಶು ಷಡುರಥರ ಕರೆ
ಈತನಾರೈ ಹೇಳಿ ಭಯವಿ
ನ್ನೇತಕೆಂದವನೀಶ ಮೂದಲಿಸಿದನು ತನ್ನವರ ೩೭
ಗೆಲಿದರಭಿಮನ್ಯುವನು ತನ್ನವ
ರೆಲವೊ ತಾ ವೀಳೆಯವನೆನುತವೆ
ಮೆಲುನಗೆಯಲತಿರಥರ ಜರೆದನು ಕೌರವರ ರಾಯ
ಬಳಿಕ ಎಡಬಲವಂಕದಲಿ ಮಂ
ಡಲಿಸಿ ಮೋಹರಿಸಿತ್ತು ರಿಪುಬಲ
ಜಲಧಿ ವಡಬನೊಳಾಂತು ತಾಗಿದರಂದು ಷಡುರಥರು ೩೮
ತುಡುಕಿದವು ತೇಜಿಗಳು ವಾಘೆಯ
ಗಡಣದಲಿ ತೂಳಿದವು ದಂತಿಗ
ಳೆಡಬಲದ ಬವರಿಯಲಿ ಮುತ್ತಿತು ಮತ್ತೆ ರಿಪುನಿಕರ
ಕಡುಮನದ ಕಾಲಾಳು ಕರೆದುದು
ಖಡುಗ ಧಾರೆಯನೀತನಳವಿಯ
ಕೆಡಿಸಿ ತಲೆಯೊತ್ತಿದರು ಭೂಪನ ಮೊನೆಯ ನಾಯಕರು ೩೯
ವಿಷದ ಹುಟ್ಟಿಯೊಳೆರಗಿ ನೊಣ ಜೀ
ವಿಸುವುದೇ ಶಿವ ಶಿವ ಕುಮಾರನ
ಮುಸುಡ ಮುಂದಕೆ ಬಿದ್ದು ಬದುಕುವುದುಂಟೆ ಭಟನಿಕರ
ಕುಸುರಿದರಿದನು ಕರಿಘಟೆಯ ನಿ
ಪ್ಪಸರದಲಿ ಕಾಲಾಳು ಕುದುರೆಗ
ಳಸುವ ಸೂರೆಯ ಬಿಟ್ಟನಂತಕ ದೂತ ಸಂತತಿಗೆ ೪೦
ಅರಿಭಟರ ಬೊಬ್ಬೆಗಳ ಮೊಳಗಿನೊ
ಳರುಣಜಲ ವರುಷದಲಿ ರಿಪುಗಳ
ಕೊರಳ ಬನದಲಿ ಕುಣಿದುವೀತನ ಖಡ್ಗವನಕೇಕಿ
ಸುರಿವ ಖಂಡದ ರಕುತ ಧಾರೆಗೆ
ತರತರದಿ ಬಾಯ್ದೆಗೆದು ಶಾಕಿನಿ
ಯರ ಸಮೂಹವು ಬಳಿಯಲೈದಿತು ಪಾರ್ಥನಂದನನ ೪೧
ಕರುಳ ಹೂಗೊಂಚಲಿನ ಮೂಳೆಯ
ಬಿರಿಮುಗುಳ ನವ ಖಂಡದಿಂಡೆಯ
ಕರತಳದ ತಳಿರೆಲೆಯ ಕಡಿದೋಳುಗಳ ಕೊಂಬುಗಳ
ಬೆರಳ ಕಳಿಕೆಯ ತಲೆಯ ಫಲ ಬಂ
ಧುರದ ಘೂಕಧ್ವಾಂಕ್ಷ ನವ ಮಧು
ಕರದ ರಣವನವೆಸೆದುದೀತನ ಖಡ್ಗಚೈತ್ರದಲಿ ೪೨
ವೈರಿ ವೀರಪ್ರತತಿಗಮರೀ
ನಾರಿಯರಿಗೆ ವಿವಾಹವನು ವಿ
ಸ್ತಾರಿಸುವ ಸಮಯದೊಳಗಾಂತ ಸಿತಾಕ್ಷತಾವಳಿಯ
ತಾರಕಿಗಳೆಸೆದಭ್ರವೆನೆ ರಿಪು
ವಾರಣದ ಮಸ್ತಕದ ಮುತ್ತುಗ
ಳೋರಣಿಸಲೊಪ್ಪಿದುದು ಖಡ್ಗ ಸುರೇಂದ್ರಸುತ ಸುತನ ೪೩
ಶಾಕಿನಿಯರೋಕುಳಿಯ ಧಾರೆಯ
ಜೀಕೊಳವೆಯೋ ಜವನ ಜಳ ಜಂ
ತ್ರಾಕರುಷಣವೊ ರಕುತ ಲತೆಗಳ ಕುಡಿಯ ಕೊನರುಗಳೊ
ನೂಕಿ ಕೊಯ್ಗೊರಳುಗಳ ಮುಂಡದ
ಮೂಕಿನಲಿ ನೆಗೆದೊಗುವ ನೆತ್ತರು
ನಾಕವನು ನಾದಿದುದೆನಲು ಸವರಿದನು ಪರಬಲವ ೪೪
ಅಟ್ಟಿ ಹೊಯ್ದನು ದಂತಿಗಳ ಹುಡಿ
ಗುಟ್ಟಿದನು ವಾಜಿಗಳ ತೇರಿನ
ಥಟ್ಟುಗಳ ಸೀಳಿದನು ಮಿಗೆ ಕಾಲಾಳನಸಿಯರೆದ
ಕೆಟ್ಟು ಬಿಟ್ಟೋಡಿದುದು ಭಟನರೆ
ಯಟ್ಟಿದನು ರಣದೊಳಗೆ ರಾಯ ಘ
ರಟ್ಟ ಪಾರ್ಥನ ತನಯ ಕೊಂದನು ಖಡ್ಗ ಮನ ದಣಿಯೆ ೪೫
ಸೀಳಿದನು ಸೌಬಲನೊಳಿಪ್ಪ
ತ್ತೇಳನಾ ಮಾದ್ರೇಶರೊಳು ಹದಿ
ನೇಳನಗ್ಗದ ರವಿಸುತನ ಮಂತ್ರಿಗಳೊಳೈವರನು
ಮೇಲೆ ಕೇರಳರೊಳಗೆ ಹತ್ತು ನೃ
ಪಾಲರನು ಕೌಸಲ ಯವನ ನೇ
ಪಾಳ ಬರ್ಬರರೊಳಗೆ ಕೊಂದನು ಹತ್ತು ಸಾವಿರವ ೪೬
ಹಸುಳೆಯೆನಬಹುದೇ ಮಹಾದೇ
ವಸಮಬಲ ಬಾಲಕನೆನುತ ಚಾ
ಳಿಸಿತು ಪಡೆಯಲ್ಲಲ್ಲಿ ತಲ್ಲಣಿಸಿದರು ನಾಯಕರು
ಮುಸುಡ ತಿರುಹುತ ಮಕುಟ ವರ್ಧನ
ರುಸುರಲಮ್ಮದೆ ಸಿಕ್ಕಿ ಭೂಪನ
ನುಸುಳುಗಂಡಿಯ ನೋಡುತಿರ್ದರು ಕೂಡೆ ತಮತಮಗೆ ತುಡು ೪೭
ತುಡುಕಲಮ್ಮವರಿಲ್ಲ ಬಲದಲಿ
ಮಿಡುಕಲಮ್ಮುವರಿಲ್ಲ ರಕುತದ
ಕಡಲೊಳಗೆ ಬೆಂಡೆದ್ದು ನೆಗೆದುದು ಕೋಟಿ ಪಾಯದಳ
ಸಿಡಿಲು ಜಂಗಮವಾಯ್ತೊ ಪ್ರಳಯದ
ಮೃಡನು ಬಾಲಕನಾದನೋ ಕೊಲೆ
ಗಡಿಕನಹುದೋ ಕಂದ ಎಂದನು ಕೌರವರ ರಾಯ ೪೮
ಧನು ಮುರಿದ ಬಳಿಕಿಮ್ಮಡಿಸಿತೀ
ತನ ಪರಾಕ್ರಮವೆನುತ ಸೇನಾ
ವನಧಿ ಜರೆದುದು ಭಟರು ಹರಿದರು ಬಿಟ್ಟ ಮಂಡೆಯಲಿ
ಜನಪತಿಯ ಕಟ್ಟಳವಿಯಲಿ ರವಿ
ತನುಜನಡ್ಡೈಸಿದನು ಫಡ ಹೋ
ಗೆನುತ ನಾರಾಚದಲಿ ಮುಸುಕಿದನರ್ಜುನಾತ್ಮಜನ ೪೯
ಎಳೆಯ ರವಿರಶ್ಮಿಗಳು ರಕ್ತೋ
ತ್ಪಲದೊಳಗೆ ಹೊಳೆವಂತೆ ಹೊನ್ನರೆ
ಬಳಿದ ಹಿಳುಕನೆ ಕಾಣಲಾದುದು ಭಟನ ಕಾಯದಲಿ
ಒಲೆದು ಕೇಸರಿ ಹೊಯ್ವವೋಲ
ವ್ವಳಿಸಿ ಕರ್ಣನ ಹಯ ರಥವನ
ಪ್ಪಳಿಸಿ ಮರಳುವ ಲಾಗಿನಲಿ ಖಂಡೆಯವ ಖಂಡಿಸಿದ ೫೦
ಕರದ ಕರವಾಳುಡಿಯೆ ಬಿಡೆ ಹ
ಲ್ಮೊರೆದು ಭರದಲಿ ಗದೆಯ ಕೊಂಡ
ಬ್ಬರಿಸಿ ಕೋಪದಲಗಿದು ಹರಿಗೆಯ ಹಿಡಿದು ಮುಂದಣಿಗೆ
ಅರರೆ ಸಮ್ಮುಖವಾಗೆನುತ ಸಂ
ಗರದೊಳುರವಣಿಸಿದನು ಕರ್ಣನ
ತೆರಳಿಚಿದನೈನೂರು ಹಜ್ಜೆಯಲಿಂದ್ರಸುತ ಸೂನು ೫೧
ಗದೆಯ ಹೊಯ್ಲಲಿ ನೊಂದು ಕೋಪದೊ
ಳದಿರೆನುತ ಸೈಗೆಡೆದ ರೋಮದ
ಹೊದರುಗಳ ಬಿಡುಗಣ್ಣ ಕೆಂಪಿನ ಕುಣಿವ ಮೀಸೆಗಳ
ಕುದಿದ ಹೃದಯದ ಕಾದ ದೇಹದ
ಕದನಗಲಿ ರವಿಸೂನು ಮೇಲಿ
ಕ್ಕಿದನು ಫಡ ಹೋಗದಿರು ಹೋಗದಿರೆನುತ ತೆಗೆದೆಚ್ಚ ೫೨
ಶರಮಯವು ಸರ್ವಾಂಗವಿನ್ನೀ
ಸರಳು ನೆಡಲಿಂಬಿಲ್ಲ ಮೈಗಳೊ
ಳರಿಯನದನಭಿಮನ್ಯು ಕರ್ಣನ ಮೇಲುವಾಯಿದನು
ತರಹರಿಸಿ ಕೆಲಸಿಡಿದು ರಿಪು ಭಟ
ನುರವನುದರವನೆಡಬಲನ ಕಿ
ಬ್ಬರಿಯನೆಚ್ಚನು ಕರ್ಣ ನೂರೈವತ್ತು ಬಾಣದಲಿ ೫೩
ಸರಳು ನೆಡಲುಬ್ಬೆದ್ದು ಬೊಬ್ಬಿರಿ
ದುರವಣಿಸಿ ಬರೆ ದಿವ್ಯ ಶರದಲಿ
ಕರವೆರಡ ಹರಿಯೆಚ್ಚಡಾಗಳೆ ಕೆಡೆದವವನಿಯಲಿ
ಇರದೆ ಗಹಗಹಿಸಿದನು ಕೇಳೆಲೆ
ಮರುಳೆ ಸೂತಜ ಕೈಮುರಿಯೆ ಸಂ
ಗರದ ಸಿರಿ ಹಿಂಗುವಳೆ ತನ್ನನೆನುತ್ತ ಗರ್ಜಿಸಿದ ೫೪
ಸುರಿವ ರಕುತದ ಸರಿಯ ಸೆರಗಿನೊ
ಳೊರಸಿ ರಥದಚ್ಚುಗಳನೊದೆದನು
ತಿರುಹಿ ಗಾಲಿಯ ತೆಗೆದು ಮುಂಗೈಗೊಂಡು ನಡೆನಡೆದು
ಅರಿಬಲವನಿಡೆ ಮುಗ್ಗಿ ಕೆಡೆದುದು
ತುರಗವಜಿಗಿಜಿಯಾದುದಿಭ ತತಿ
ಯುರುಳಿದವು ಹೊರಳಿದವು ಹೂಣಿಗರಟ್ಟೆ ಸಮರದಲಿ ೫೫
ಹರಿಯ ಚಕ್ರದ ಸತ್ವವೀತನ
ಧುರದೊಳಾಯ್ತೆನೆ ರಥದ ಚಕ್ರದೊ
ಳರಿಬಲವನಿಡೆ ಮುಗ್ಗಿ ಕೆಡೆದುದು ಬಹಳ ತಳತಂತ್ರ
ಬಿರುದರಾನುವರಿಲ್ಲ ಷಡುರಥ
ರುರವಣಿಯು ಹಿಂದಾಯ್ತು ರಾಯರ
ಗುರುವ ಕಂಡವರಿಲ್ಲೆನುತ ಕುರುರಾಯ ಚಿಂತಿಸಿದ ೫೬
ಮನದ ಖತಿ ಹೊಗರೇರೆ ದುಶ್ಶಾ
ಸನನ ಮಗನಿದಿರಾಗಿ ಖಡುಗದ
ಮೊನೆಯ ಚೂರಿಸಿ ದಂಡವಲಗೆಯ ತೊಡೆಯೊಳೊದರಿಸುತ
ತನಗೆ ಮೃತ್ಯುವ ಕರೆವವೋಲ
ರ್ಜುನ ಕುಮಾರನ ಕರೆದು ಹಳಚಿದ
ನನಿಮಿಷಾವಳಿ ಪೂತು ಪಾಯ್ಕೆನೆ ಹೆಣಗಿದರು ಭಟರು ೫೭
ಗಾಲಿ ತೀರಿದವೆಂದು ಬಂದನೆ
ಕಾಳೆಗಕೆ ತಪ್ಪೇನೆನುತ ಕರ
ವಾಳಿನಾತನ ಬಗೆಯದೊಳಹೊಕ್ಕೆರಗಿದನು ಶಿರವ
ಮೇಲುವಲಗೆಯಲಣೆದು ಹಾಯ್ದನು
ಬಾಲಕನ ಘಾಯವನು ನಸು ನಗು
ತೇಳಿಸುತ ದಂಡೆಯಲಿ ಕಳೆದನು ತಿವಿದನವನುರವ ೫೮
ಕರಹತಿಗೆ ಧಡಧಡಿಸಿ ತಿರ್ರನೆ
ತಿರುಗಿ ಬೀಳುತ ಧೈರ್ಯದಲಿ ಹೊಡ
ಕರಿಸಿ ಹೊರಬಿನೊಳೆದ್ದು ಹೊಯ್ದನು ಪಾರ್ಥನಂದನನ
ಅರಿ ಕೃಪಾಣದ ಘಾಯವನು ತರ
ಹರಿಸಲರಿಯದೆ ಬೀಳುತಹಿತನ
ನೆರಗಿದನು ಬಳಿಕವನಿಗೊರಗಿದರಾ ಕುಮಾರಕರು ೫೯
ಕಾಳುಕಿಚ್ಚೆದ್ದಡವಿಯನು ಕುಡಿ
ನಾಲಗೆಯೊಳಳವಡಿಸಿ ದಳ್ಳುರಿ
ಜ್ವಾಲೆ ತಗ್ಗಿದವೋಲು ಗಗನದ ಮುಗಿಲ ಮೋಹರವ
ದಾಳಿಯಲಿಯರೆಯಟ್ಟಿ ಸುಂಟರು
ಗಾಳಿಯುರವಣೆ ನಿಂದವೊಲು ಸುರ
ಪಾಲ ತನಯನ ತನಯನಸ್ತಮಿಸಿದನು ರಣದೊಳಗೆ ೬೦
ತೋಳ ತಲೆಗಿಂಬಿನಲಿ ಕೈದುಗ
ಳೋಳಿಗಳ ಹಾಸಿನಲಿ ತನ್ನಯ
ಕಾಲ ದೆಸೆಯಲಿ ಕೆಡೆದ ಕೌರವ ಸುತರು ನೂರ್ವರಲಿ
ಬಾಲಕನು ಬಳಲಿದನು ಸಮರದ
ಲೀಲೆಯಲಿ ಕುಣಿಕುಣಿದು ಬಸವಳಿ
ದಾಳುಗಳ ದೇವನು ಮಹಾಹವದೊಳಗೆ ಪವಡಿಸಿದ ೬೧
ಬಿಗಿದ ಹುಬ್ಬಿನ ಬಿಟ್ಟ ಕಂಗಳ
ಹೊಗರು ಮೋರೆಯ ಹಿಣಿಲ ಮಂಡೆಯ
ಜಿಗಿಯ ರಕುತದ ಜೋರಿನೊಡಲಿನ ತುರುಗಿದಂಬುಗಳ
ಹೆಗಲ ಕೊಯ್ಲಿನ ತಗ್ಗಿನಲಿ ಸೈ
ನೆಗೆದ ರೋಮದ ವಿಕ್ರಮಾಗ್ನಿಯ
ತಗಹು ಬಿಡದಭಿಮನ್ಯು ಮೆರೆದನು ಶಸ್ತ್ರ ಶಯನದಲಿ ೬೨
ಸಾವ ಹರಯವೆ ಎನುತ ಗಗನದ
ದೇವತತಿ ಮರುಗಿತ್ತು ಶಕ್ರನ
ಸಾವಿರಾಲಿಯೊಳೊರತೆ ಮಸಗಿತು ಪೌತ್ರಶೋಕದಲಿ
ತಾವು ಷಡುರಥರೊಬ್ಬ ಹಸುಳೆಯ
ಹೇವವಿಲ್ಲದೆ ಕೊಂದರೋ ಸುಡ
ಲಾವ ವೀರರು ಕೌರವಾದಿಗಳೆಂದುದಮರಗಣ ೬೩
ಮಗುವು ವೇಷವ ಧರಿಸಿ ದೂರದ
ಲಗಲಿ ಹೋಗಲು ತನ್ನ ಚಿತ್ತಕೆ
ಢಗೆಯ ಡಾವರವಾಯ್ತು ತನಗೊಳಗಾಯ್ತು ಪರಿತಾಪ
ಮಗನ ಮರಣದಲೆಂತು ಜೀವವ
ಬಗೆವಳಕಟ ಸುಭದ್ರೆಯೆನುತವೆ
ದೃಗುಜಲವ ಬೆರಳಿಂದ ಮಿಡಿದರು ಗೌರಿ ದೇವಿಯರು ೬೪
ಹಲವು ಗಜಗಳು ಸಿಂಹ ಶಿಶುವನು
ಗೆಲಿದ ಪರಿಯಂತಾಯ್ತು ಹಾವಿನ
ಬಳಗ ಗರುಡನ ಮರಿಯ ಮುರಿದವೊಲಾಯಿತಕಟೆನುತ
ಅಳಲಿದುದು ಸುರ ಕಟಕವವನಿಯೊ
ಳಿಳಿದರಪ್ಸರ ಗಣಿಕೆಯರು ಕೋ
ಮಳನ ತಂದರು ವಾಸವನ ಸಿಂಹಾಸನದ ಹೊರೆಗೆ ೬೫
ಧುರದ ಪ್ರಳಯಕೃತಾಂತನನು ಪರಿ
ಹರಿಸಿದೆವು ಮೃತ್ಯುವಿನ ಪಾಶದ
ಕೊರಳ ಬಳಚಿದೆವೆನುತ ಕೌರವ ಬಲದ ನಾಯಕರು
ಶಿರವ ತಡಹುತ ತಮ್ಮ ಶಿಬಿರಕೆ
ತಿರುಗಿದರು ಬಾಲಕನನೀಕ್ಷಿಸ
ಲರಿದು ತನಗೆಂಬಂತೆ ರವಿ ಜಾರಿದನು ಪಶ್ಚಿಮಕೆ ೬೬
ಸೋಲವರಿಗಳಿಗೆಂದು ಹರುಷವ
ತಾಳದಿರು ಧೃತರಾಷ್ಟ್ರ ಕೃಷ್ಣನ
ಸೋಲವದು ಪಾಂಡವರು ಸೋತವರಲ್ಲ ನಂಬುವುದು
ಸೋಲವಿದು ನಾಳಿನಲಿ ಪ್ರಳಯದ
ಕಾಲ ಕೌರವ ಕುಲಕೆ ದಿಟವಿದು
ಸೋಲವುಂಟೇ ವೀರ ನಾರಾಯಣನ ಭಕ್ತರಿಗೆ ೬೭
(ಸಂಗ್ರಹ: ಸತ್ಯ,ಶೈಲ,ಮೋಹನ ಮತ್ತು ಪ್ರಿಯ - ಹಾಸನ)
ಶೀರ್ಷಿಕೆಗಳು
- ೦೦. ಪೀಠಿಕೆ (1)
- ೦೧. ಆದಿಪರ್ವ (3)
- ೦೨. ಸಭಾಪರ್ವ (4)
- ೦೩. ಅರಣ್ಯಪರ್ವ (4)
- ೦೪. ವಿರಾಟಪರ್ವ (10)
- ೦೫. ಉದ್ಯೋಗಪರ್ವ (1)
- ೦೬. ಭೀಷ್ಮಪರ್ವ (2)
- ೦೭. ದ್ರೋಣಪರ್ವ (6)
- ೦೮. ಕರ್ಣಪರ್ವ (5)
- ೦೯. ಶಲ್ಯಪರ್ವ (1)
- ೧೦. ಗದಾಪರ್ವ (3)
Monday, June 29, 2015
Subscribe to:
Posts (Atom)