ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Wednesday, May 19, 2010

ವಿರಾಟಪರ್ವ: ೦೯. ಒಂಬತ್ತನೆಯ ಸಂಧಿ

ಸೂ.ರಾಯ ಕೌರವ ಸೈನ್ಯ ಕದಳೀ
ವಾಯುವುತ್ತರ ಸಹಿತ ನಿಜಪರ
ರಾಯ ನಂದನ ಬಂದು ಹೊಕ್ಕನು ಮತ್ಸ್ಯಪುರವರವ

ಕೇಳು ಜನಮೇಜಯ ಧರಿತ್ರೀ
ಪಾಲ ಭಂಗದಲಖಿಳ ಕೌರವ
ಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು
ಮೇಲು ಮುಸುಕಿನ ಮೊಗದ ವಾದ್ಯದ
ಮೇಳ ಮೋನದಲಖಿಳ ನೃಪರು ನಿ
ಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ ೦೧

ಬಳಿಕ ಫಲುಗುಣನತ್ತಲಾ ಮರ
ದೊಳಗೆ ಕೈದುವನಿರಿಸಿ ಮುನ್ನಿನ
ಹುಲು ರಥವ ಮೇಳೈಸಿ ಸಾರಥಿತನವನಳವಡಿಸೆ
ಇಳಿದು ಪಾರ್ಥನ ಮೈದಡವಿ ಕಪಿ
ಕುಲಲಲಾಮನು ವನಕೆ ಹಾಯ್ದನು
ಹೊಳಲ ಹೊರೆಯಲಿ ನಿಂದು ನಗುತುತ್ತರನೊಳಿಂತೆಂದ ೦೨

ಕರೆದು ದೂತರಿಗರುಹು ನೀನೇ
ಧುರವ ಜಯಿಸಿದೆನೆನ್ನು ನಾವಿ
ದ್ದಿರವನರುಹದಿರಿಂದು ಪಸರಿಸು ನಿನ್ನ ವಿಕ್ರಮವ
ಅರಸ ನಿನ್ನನೆ ಮನ್ನಿಸಲಿ ಪುರ
ಪರಿಜನಂಗಳು ನಿನ್ನ ವಿಜಯದ
ಹರುಷದಲಿ ಹೆಚ್ಚಿರಲಿ ನೇಮಿಸಿದಂತೆ ಮಾಡೆಂದ ೦೩

ಎನಲು ನೀನೇ ಬಲ್ಲ ಕರ ಲೇ
ಸೆನುತ ದೂತರ ಕರೆದು ಮತ್ಸ್ಯನ
ತನಯ ಕೌರವ ಬಲವ ಜಯಿಸಿದನೆಂದು ಪೇಳುವುದು
ಜನಕನಲ್ಲಿಗೆ ಪೋಗಿಯೆಂದಾ
ತನು ನಿಯಾಮಿಸುತಿರ್ದನತ್ತಲು
ಜನಪ ಕುಂತೀಸುತನು ಸಹಿತೈತಂದನರಮನೆಗೆ ೦೪

ಅರಮನೆಯ ಹೊಕ್ಕವನಿಪತಿಯು
ತ್ತರನ ಕಾಣದೆ ಕಂದನೆತ್ತಲು
ಸರಿದನೆನೆ ರಾಣಿಯರು ಬಿನ್ನವಿಸಿದರು ಭೂಪತಿಗೆ
ಕುರು ಬಲವನಂಗೈಸೆ ಮಿಗೆಯು
ತ್ತರೆಯ ಗುರು ಸಾರಥಿತನವನನು
ಕರಿಸಿದನು ಕೆಲಬಲನ ಹಾರದೆ ಕದನಕೈದಿದನು ೦೫

ಎಂದರೊಡಲೊಳು ಕೂರಲಗು ಮುರಿ
ದಂದದಲಿ ಕಳವಳಿಸಿದನು ಮನ
ನೊಂದನಕಟ ಕುಮಾರನೆತ್ತಲು ರಾಯ ದಳವೆತ್ತ
ಬಂದವರು ಭೀಷ್ಮಾದಿಗಳು ತಾ
ನಿಂದು ತರಹರಿಸುವೊಡೆ ತಾನೇ
ನಿಂದುಧರನೇ ಮರುಳಲಾ ಮಗನೆನುತ ಚಿಂತಿಸಿದ ೦೬

ಮಗಗೆ ಪಡಿಬಲವಾಗಿ ಬಲು ಮಂ
ತ್ರಿಗಳನವನಿಪ ಬೀಳುಗೊಟ್ಟನು
ದುಗುಡದಿಂದಿರೆ ಹೊಳಲ ಕೈಸೂರೆಗಳ ಕಳಕಳದ
ಮೊಗದ ಹರುಷದಲಖಿಳ ದೂತಾ
ಳಿಗಳು ಬಂದುದು ಗುಡಿಯ ಕಟ್ಟಿಸು
ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ ೦೭

ರಾಯ ಕುವರ ಪಿತಾಮಹನು ರಿಪು
ರಾಯ ಕುವರ ಕುಠಾರ ಕೌರವ
ರಾಯ ಥಟ್ಟು ವಿಭಾಡ ಕುರುಕುಲ ಗಜಕೆ ಪಂಚಾಸ್ಯ
ಜೀಯ ಬಿನ್ನಹ ಕರ್ಣ ಗುರು ಗಾಂ
ಗೇಯ ಮೊದಲಾದಖಿಳ ಕೌರವ
ರಾಯ ದಳವನು ಗೆಲಿದು ಉತ್ತರ ತುರುವ ಮರಳಿಚಿದ ೦೮

ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಬಹಳ ಹರುಷದ
ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು
ಲಾಲಿಸುತ ಸರ್ವಾಂಗ ಹರುಷದೊ
ಳಾಳೆ ಜನಪ ಪಸಾಯಿತವ ದೂ
ತಾಳಿಗಿತ್ತನು ಸುಲಿದರವದಿರು ರಾಯನೋಲಗವ ೦೯

ಇದಿರುಗೊಳ ಹೇಳೆನಲು ಸರ್ವಾಂ
ಗದಲಿ ಮಣಿ ಮೌಕ್ತಿಕದ ಸಿಂಗಾ
ರದ ಸುರೇಖೆಯ ಲಲಿತ ಚಿತ್ರಾವಳಿಯ ಮುಸುಕುಗಳ
ಸುದತಿಯರು ಹೊರವಂಟರೊಗ್ಗಿನ
ಮೃದು ಮೃದಂಗದ ಕಹಳೆಗಳು ಸಂ
ಪದದ ಸೊಂಪಿನಲೆಸೆಯೆ ರಾಜಾಂಗನೆಯರನುವಾಯ್ತು ೧೦

ಕವಿದು ನೂಕುವ ಹರುಷವನು ಸಂ
ತವಿಸಲರಿಯೆನು ಕಂಕ ನಿನ್ನೊಡ
ನೆವಗೆ ವಿಮಳ ದ್ಯೂತಕೇಳಿಗೆ ಚಿತ್ತವಾಯ್ತೆನಲು
ಅವನಿಪತಿ ಕೇಳ್ ಜೂಜಿನಲಿ ಪಾಂ
ಡವರು ಸಿಲುಕಿದರವರ ವಿಧಿಯನು
ಭುವನದಲಿ ಬಲ್ಲವರದಾರೆಂದನು ವಿರಾಟಂಗೆ ೧೧

ಅವರು ರಾಜ್ಯವನೊಡ್ಡಿ ಸೋತವೊ
ಲೆವಗೆ ಪಣ ಬೇರಿಲ್ಲ ಹರ್ಷೋ
ತ್ಸವ ಕುಮಾರಾಭ್ಯುದಯ ವಿಜಯಶ್ರವಣ ಸುಖ ಮಿಗಲು
ಎವಗೆ ಮನವಾಯ್ತೊಡ್ಡು ಸಾರಿಯ
ನಿವಹವನು ಹೂಡೆನಲು ಹೂಡಿದ
ನವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು ೧೨

ಕೇಳಿ ಸಮತಳಿಸಿತ್ತು ಮತ್ಸ್ಯ ನೃ
ಪಾಲನೆಂದನು ಕಂಕ ನೋಡೈ
ಕಾಳಗವನುತ್ತರನು ಗೆಲಿದನು ರಾಯ ಥಟ್ಟಿನಲಿ
ಶೂಲಪಾಣಿಗೆ ಸೆಡೆಯದಹಿತ ಭ
ಟಾಳಿ ಸೋತುದು ದಿವಿಜ ನರರೊಳು
ಹೋಲುವವರುಂಟೇ ಕುಮಾರನನೇನ ಹೇಳೆಂದ ೧೩

ಸೋತುದುಂಟರಿ ಸೇನೆ ಸುರಭಿ
ವ್ರಾತ ಮರಳಿದುದುಂಟು ಗೆಲವಿದು
ಕೌತುಕವಲೇ ಬಗೆಯಲದ್ಭುತವೆಮ್ಮ ಚಿತ್ತದಲಿ
ಮಾತು ಹೋಲುವೆಯಹುದು ಜಗ ವಿ
ಖ್ಯಾತ ಸಾರಥಿಯಿರೆ ಕುಮಾರಗೆ
ಭೀತಿ ಬಳಿಕೆಲ್ಲಿಯದು ತಪ್ಪೇನೆಂದನಾ ಕಂಕ ೧೪

ಎಲೆ ಮರುಳೆ ಸನ್ಯಾಸಿ ಮತ್ಸರ
ದೊಳಗೆ ಮುಳುಗಿದ ಚಿತ್ತ ನಿನ್ನದು
ಗೆಲವಿನಲಿ ಸಂದೇಹವೇ ಹೇಳಾವುದದ್ಭುತವು
ಅಳುಕುವನೆ ಸುಕುಮಾರ ಸಾರಥಿ
ಬಲುಹನುಳ್ಳವನೇ ನಪುಂಸಕ
ನಲಿ ನಿರಂತರ ಪಕ್ಷವೆಂದು ವಿರಾಟ ಖತಿಗೊಂಡ ೧೫

ನಾರಿಯರ ಮೈಗುರುಹು ಪುರುಷರ
ಚಾರು ಚಿಹ್ನವ ಕೂಡಿಕೊಂಡಿಹ
ಸಾರಥಿಯ ದೆಸೆಯಿಂದ ಕುವರನು ಗೆಲಿದನೆಂಬುದನು
ಸೈರಿಸಿದೆ ನಾನಿನ್ನವರೆ ಮ
ತ್ತಾರೊಡನೆ ಮಾತಾಡದಿರು ನಿ
ಸ್ಸಾರ ಹೃದಯನು ಕಂಕ ನೀ ದುಷ್ಟಾತ್ಮ ಹೋಗೆಂದ ೧೬

ಖತಿಯ ಹಿಡಿಯದಿರರಸ ದಿಟ ನೀ
ನತಿಶಯವ ಬಯಸುವರೆ ಜನ ಸ
ಮ್ಮತವು ಸಾರಥಿ ಗೆಲಿದನೆಂದೇ ಹೊಯಿಸು ಡಂಗುರವ
ಸುತನು ಸಾರಥಿಯೆಂದು ಸಾರಿಸು
ವಿತಥವಲ್ಲಿದು ಪಕ್ಷಪಾತ
ಸ್ಥಿತಿಯನಾಡೆವು ಕವಲು ನಾಲಗೆಯಿಲ್ಲ ತನಗೆಂದ ೧೭

ನಿನ್ನ ಮೋಹದ ಕಂಗಳಿಗೆ ಮಗ
ನುನ್ನತೋನ್ನತ ಸತ್ವನೆಂದೇ
ಮುನ್ನ ತೋರಿತು ಹೊಲ್ಲೆಹವೆ ಸಂಸಾರಕ ಭ್ರಮೆಗೆ
ಇನ್ನು ಗೆಲಿದವನಾ ಬೃಹನ್ನಳೆ
ನಿನ್ನ ಮಗಗಳುಕುವರೆ ಭೀಷ್ಮನು
ಕರ್ಣ ಕೃಪ ಗುರು ಗುರುತನೂಭವರೆಂದನಾ ಕಂಕ ೧೮

ಎನಲು ಖತಿ ಬಿಗುಹೇರಿ ಹಲು ಹಲು
ದಿನುತೆ ಕಂಗಳಲುರಿಯನುಗುಳುತ
ಕನಲಿ ಬಿಗಿದೌಡೊತ್ತಿ ಕನಕದ ಸಾರಿಯನು ನೆಗಹಿ
ಜನಪತಿಯ ಹಣೆಯೊಡೆಯಲಿಡೆ ಜಾ
ಜಿನ ಗಿರಿಯ ನಿರ್ಜರದವೊಲು ಭೋಂ
ಕೆನಲು ರುಧಿರದ ಧಾರೆ ಸಿಡಿದುದು ಶಿರದ ಸೆಲೆಯೊಡೆದು ೧೯

ಸೈರಿಸುತ ಕೈಯೊಡ್ಡಿ ರಕುತದ
ಧಾರೆಯನು ಕೈತುಂಬ ಹಿಡಿದತಿ
ಧೀರನೋರೆಯ ನೋಟದಲಿ ಸೈರಂಧ್ರಿಯನು ಕರೆಯೆ
ನಾರಿ ಹರಿತಂದಕಟ ನೊಂದನು
ಕಾರುಣಿಕ ಸನ್ಯಾಸಿಯೆನುತ ವಿ
ಕಾರಿಸದೆ ಸೆರಗಿನಲಿ ತೋದಳು ಬಹಳ ಶೋಣಿತವ ೨೦

ಮಡದಿ ಕರಪಲ್ಲವದಲೊರೆಸಿದ
ಳಡಿಗಡಿಗೆ ಹಣೆಯನು ಕಪೋಲವ
ತೊಡೆದು ತೊಳೆದಳು ಮುಖವನದನವ ಕಂಡು ಬೆರಗಾಗಿ
ಹಿಡಿದೆ ರಕುತವನೇಕೆ ಕಾಮಿನಿ
ನುಡಿ ನಿಧಾನವನಿವರು ನೊಂದರೆ
ಮಿಡುಕಲೇತಕೆ ನೀನೆನುತ ದುರುಪದಿಯ ಬೆಸಗೊಂಡ ೨೧

ಉರಿದು ಹೋಹುದು ನಿನ್ನ ರಾಜ್ಯದ
ಸಿರಿಯು ಬದುಕಿದೆಯೊಂದು ಕಣೆಯಕೆ
ಪರಮ ಯತಿ ಕಾಯಿದನು ಕೈಯಲಿ ತುಂಬಿ ಶೋಣಿತವ
ಅರಸ ಕೇಳೀ ಮುನಿಯ ನೆತ್ತರು
ಧರೆಯೊಳೊಕ್ಕೊಡೆಯಾ ಪ್ರದೇಶವ
ನೊರಸಿ ಕಳೆವುದು ದಿಟ ಬೃಹನ್ನಳೆಗೇರಿಸಿದ ಬಿರುದು ೨೨

ಈಕೆ ಯಾರಿವರಾರು ನಾಟ್ಯ
ವ್ಯಾಕರಣ ಪಂಡಿತ ಬೃಹನ್ನಳೆ
ಯೀಕೆಗೇನಹನರಿಯ ಬಾರದು ಕಾಲು ಕೀಲುಗಳ
ಏಕೆ ನನಗದರರಿತವೆಂದವಿ
ವೇಕಿಯಿರೆ ಬಳಿಕಿತ್ತ ಪುರದಲಿ
ನೂಕು ನೂಕಾಯಿತ್ತು ನೋಡುವ ನೆರವಿಯುತ್ತರನ ೨೩

ಇದಿರು ಬಂದರು ಮಂತ್ರಿಗಳು ವರ
ಸುದತಿಯರು ಸೂಸಿದರು ಸೇಸೆಯ
ನುದಿತ ಮಂಗಳ ಘೋಷ ವಾದ್ಯ ವಿತಾನ ರಭಸದಲಿ
ವದನವಿದೆ ಕಳೆಗುಂದಿ ಜಯದ
ಭ್ಯುದಯ ತಾನೆಂತೆನುತ ವರ ಕೋ
ವಿದರು ತಮ್ಮೊಳಗಾಡುತಿರ್ದರು ಕೂಡೆ ಗುಜುಗುಜಿಸಿ ೨೪

ಎಂದಿನವನುತ್ತರನು ಗಂಗಾ
ನಂದನನನೀ (ಪಾ: ನಂದನನೀ) ಹೂಹೆ ಗೆಲಿದನು
ಸಂದ ಸುಭಟ ದ್ರೋಣ ಕರ್ಣಾದಿಗಳನೋಡಿಸಿದ
ಎಂದು ಕೆಲಬರು ಕೆಲಬರಿವ ಗೆಲಿ
ದಂದವಾಗಿರದೀ ಬೃಹನ್ನಳೆ
ಯಿಂದ ಸಂಭಾವಿಸುವುದೆಂದುದು ಮಂದಿ ತಮತಮಗೆ ೨೫

ಲೀಲೆ ಮಿಗಲುತ್ತರನು ಪುರಜನ
ಜಾಲ ಜೀಯೆನಲಿದಿರು ಬಂದ ನಿ
ವಾಳಿಗಳ ನೂಕಿದನು ಕೈವಾರಿಗಳ ಕೋಪಿಸುತ
ಆಲಿಯವನಿಯ ಬರೆಯೆ ಮುಸುಕಿನ
ಮೇಲು ದುಗುಡದ ಭಾರದಲಿ ರಾ
ಜಾಲಯಕೆ ಬರಲಿದಿರು ಬಂದಪ್ಪಿದನು ನಂದನನ ೨೬

ಬಾ ಮಗನೆ ವಸುಕುಲದ ನೃಪ ಚಿಂ
ತಾಮಣಿಯೆ ಕುರುರಾಯ ಮೋಹರ
ಧೂಮಕೇತುವೆ ಕಂದ ಬಾಯೆಂದಪ್ಪಿ ಕುಳ್ಳಿರಿಸೆ
ಕಾಮಿನಿಯರುಪ್ಪಾರತಿಗಳಭಿ
ರಾಮ ವಸ್ತ್ರ ನಿವಾಳಿ ರತ್ನ
ಸ್ತೋಮ ಬಣ್ಣದ ಸೊಡರು ಸುಳಿದವು ಹರುಷದೊಗ್ಗಿನಲಿ ೨೭

ಬೊಪ್ಪ ಸಾಕೀ ಬಯಲ ಡೊಂಬೆನ
ಗೊಪ್ಪುವುದೆ ವೀರೋಪಚಾರವಿ
ದೊಪ್ಪುವರಿಗೊಪ್ಪುವುದು ತೆಗೆಸೆನಲರಸ ನಸುನಗುತ
ದರ್ಪವುಳ್ಳಂಗೀಸು ಮಂಗಳ
ವೊಪ್ಪದೇನೈ ಜಗದೊಳಾವಂ
ಗಪ್ಪುದೀ ಬಲವೀ ನಿಗರ್ವಿತೆಯೆಂದನಾ ಮತ್ಸ್ಯ ೨೮

ಮಗನೆ ಕರ್ಣ ದ್ರೋಣ ಭೀಷ್ಮಾ
ದಿಗಳನೊಬ್ಬನೆ ಗೆಲಿದೆಯೀ ಕಾ
ಳಗದ ಕಡುಗಲಿತನಗಳುಂಟೇ ಪೂರ್ವ ಪುರುಷರಲಿ
ದುಗುಡವೇಕೆನ್ನಾಣೆ ಹೆತ್ತರ
ಮೊಗಕೆ ಹರುಷವ ತಂದೆಲಾ ಹಂ
ಗಿಗನೆ ನೀ ತಲೆ ಗುತ್ತಲೇಕೆಂದೆತ್ತಿದನು ಮುಖವ ೨೯

ಕಾದಿ ಗೆಲಿದವ ಬೇರೆ ಸಾರಥಿ
ಯಾದ ತನಗೀಸೇಕೆ ನಿಮ್ಮಡಿ
ಯಾದರಿಸಲೊಡೆಮುರಿಚ ಬಲ್ಲನೆ ನಾಚಿಸದಿರೆನಲು
ಕಾದಿದಾತನು ನೀನು ಸಾರಥಿ
ಯಾದವನು ತಂಗಿಯ ಬೃಹನ್ನಳೆ
ವಾದ ಬೇಡಲೆ ಮಗನೆ ಬಲ್ಲೆನು ನಿನ್ನ ವಿಕ್ರಮವ ೩೦

ಅದಟುತನವೆನಗುಂಟೆ ಬೆಂದುದ
ಬೆದಕಿ ನೋಯಿಸಬೇಡ ಹಗಲಿನ
ಕದನವನು ಗೆಲಿದಾತ ಬೇರಿಹ ಬೊಪ್ಪ ನುಡಿಯದಿರು
ಉದಯದಲಿ ಗೆಲಿದಾತನನು ನಿ
ಮ್ಮಿದಿರಿನಲಿ ತೋರುವೆನು ಬೀಳ್ಕೊಡಿ
ಸದನಕೆಂದು ಕುಮಾರ ಕಳುಹಿಸಿಕೊಂಡನರಮನೆಗೆ ೩೧

ಇತ್ತಲರ್ಜುನ ದೇವ ಸಾರಿದ
ನುತ್ತರೆಯ ಭವನವನು ತಾ ತಂ
ದುತ್ತಮಾಂಬರ ವಿವಿಧ ರತ್ನಾಭರಣ ವಸ್ತುಗಳ
ಇತ್ತನಾ ಕನ್ನಿಕೆಗೆ ಮುದ ಮಿಗ
ಲುತ್ತರೆಯ ಮನೆಯಿಂದ ಶಶಿಕುಲ
ಮತ್ತವಾರಣ ಬಂದನಾ ಭೀಮಾಗ್ರಜನ ಹೊರೆಗೆ ೩೨

ಬಳಿಕ ಸಂಕೇತದಲಿ ಭೂಪನ
ನಿಳಯವನು ಕಲಿಭೀಮ ಹೊಕ್ಕನು
ನಳಿನಮುಖಿ ಸಹದೇವ ನಕುಲರು ಬಂದರಾ ಕ್ಷಣಕೆ
ಫಲುಗುಣನು ಹೊಡವಂಟನಿಬ್ಬರಿ
ಗುಳಿದವರು ಪಾರ್ಥಂಗೆ ವಂದಿಸ
ಲೊಲಿದು ಬಿಗಿಯಪ್ಪಿದನು ಪರಿತೋಷದಲಿ ಸಮಬಲರ ೩೩

ಉಳಿದ ನಾಲ್ವರು ಕಲಿ ತ್ರಿಗರ್ತರ
ಗೆಲಿದ ಪರಿಯನು ಪಾರ್ಥ ಕೌರವ
ಬಲವ ಭಂಗಕೆ ತಂದ ಪರಿಯನು ಹೇಳುತಿರುತಿರಲು
ನಿಲುಕಿ ರಾಯನ ಹಣೆಯ ಗಾಯವ
ಬಳಿಕ ಕಂಡನಿದೇನು ನೊಸಲಿಂ
ದಿಳಿವುತಿದೆ ನಸು ರಕ್ತಬಿಂದುಗಳೆಂದನಾ ಪಾರ್ಥ ೩೪

ಅನವಧಾನದೊಳಾಯ್ತು ಸಾಕದ
ನೆನೆಯಲೇತಕೆ ಮಾಣೆನಲು ಮಿಗೆ
ಕನಲುತರ್ಜುನನರಿದನಾ ದ್ರೌಪದಿಯ ಸೂರುಳಿಸಿ
ಮನದಲುರಿದೆದ್ದನು ವಿರಾಟನ
ತನುವ ಹೊಳ್ಳಿಸಿ ರಕುತವನು ಶಾ
ಕಿನಿಯರಿಗೆ ಹೊಯಿಸುವೆನು ಹೊಲ್ಲೆಹವೇನು ಹೇಳೆಂದ ೩೫

ಕಳುಹಬೇಕೇ ಕೀಚಕೇಂದ್ರನ
ಬಳಗವಿದ್ದಲ್ಲಿಗೆ ವಿರಾಟನ
ತಲೆಯ ಋಣ ಸಾಲಿಗನಲೇ ಶಿವ ಶಿವ ಮಹಾದೇವ
ನೆಲದೊಳೊಕ್ಕುದೆ ರಕ್ತವವದಿರ
ಕುಲವ ಸವರುವೆನಿವನ ಸೀಳಿದು
ಬಲಿಯ ಕೊಡುವೆನು ಭೂತಗಣಕೆನುತೆದ್ದನಾ ಭೀಮ ೩೬

ಕಾಕ ಬಳಸಲು ಬೇಡ ಹೋ ಹೋ
ಸಾಕು ಸಾಕೈ ತಮ್ಮ ಮಾಣು
ದ್ರೇಕವನು ನೆಲ ರಕ್ತ ಕಂಡರೆ ನನ್ನ ಮೇಲಾಣೆ
ಈ ಕಮಲಲೋಚನೆಯ ಸೆರಗಿಗೆ
ಸೇಕವಾಯಿತು ರಕುತವತಿ ಸ
ವ್ಯಾಕುಲತೆ ಬೇಡೆಂದು ಗಲ್ಲವ ಹಿಡಿದನನಿಲಜನ ೩೭

ಕೊಂಬೆನಾತನ ಜೀವವನು ಪತಿ
ಯೆಂಬ ಗರ್ವವನವನ ನೆತ್ತಿಯ
ತುಂಬಿ ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ
ಅಂಬುಜಾಕ್ಷಿಯ ಕೀಚಕನ ಬೇ
ಳಂಬವೀತನ ಕೂಟ ಭೂತ ಕ
ದಂಬ ತುಷ್ಟಿಯ ಮಾಡಬೇಹುದು ಸೆರಗ ಬಿಡಿಯೆಂದ ೩೮

ಇವನ ನಾವೋಲೈಸಿ ಕೈಯೊಡ
ನಿವಗೆ ಮುನಿದೊಡೆಯೇನನೆಂಬುದು
ಭುವನ ಜನವು ಭ್ರಮಿಸದಿರು ಸೈರಣೆಗೆ ಮನ ಮಾಡು
ಎವಗೆ ನೋವಿನ ಹೊತ್ತು ದುಷ್ಕೃತ
ವಿವರಣದ ಫಲವಿದಕೆ ಲೋಗರ
ನವಗಡಿಸಿದೊಡೆ ಹಾನಿಯೆಮಗೆನೆ ಭೀಮನಿಂತೆಂದ ೩೯

ಬರಿಯ ಧರ್ಮದ ಜಾಡ್ಯದಲಿ ಮೈ
ಮರೆದು ವನದಲಿ ಬೇವು ಬಿಕ್ಕೆಯ
ನರಸಿ ತೊಳಲಿದು ಸಾಲದೇ ಹದಿಮೂರು ವತ್ಸರದಿ
ಉರುಕುಗೊಂಡೊಡೆ ರಾಜ ತೇಜವ
ಮೆರೆವ ದಿನವೆಂದಿಹುದು ನೀವಿ
ನ್ನರಿಯಿರೆಮ್ಮನು ಹರಿಯ ಬಿಡಿ ಸಾಕೆಂದನಾ ಭೀಮ ೪೦

ಉದಯದಲಿ ನಾವಿನಿಬರಾತನ
ಸದನದಲಿ ನೃಪಪೀಠವನು ಗ
ರ್ವದಲಿ ನೆಮ್ಮುವೆವಾತ ನಮ್ಮಲಿ ಖೋಡಿಯನು ಹಿಡಿಯೆ
ಮದಮುಖನನೊರಸುವೆವು ಹರುಷದ
ಲಿದಿರುಗೊಂಡೊಡೆ ಮನ್ನಿಸುವ ಮಾ
ತಿದುವೆ ಸನ್ಮತವೆಂದು ಸಂತೈಸಿದನು ಪವನಜನ ೪೧

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)
(ಕರಡು ತಿದ್ದಿದ್ದು: ಸಂದೀಪ ನಡಹಳ್ಳಿ)