ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Friday, February 26, 2010

ವಿರಾಟಪರ್ವ: ೦೬ ಆರನೆಯ ಸಂಧಿ

ಸೂ: ಚಂಡ ರಿಪುಬಲ ವಿಲಯ ಹರನು
ದ್ದಂಡ ಬಲ ಶಸ್ತ್ರಾಸ್ತ್ರವನು ಕೈ
ಕೊಂಡು ಸುರಪನ ಸೂನು ನಡೆದನು ವೈರಿ ಮೋಹರವ

ಎಲೆ ಪರೀಕ್ಷಿತ ತನಯ ಕೇಳ್ ನೃಪ
ತಿಲಕನತಿ ವೇಗದಲಿ ರಥವನು
ಕೊಳುಗುಳಕೆ ತರೆ ಕಂಡನುತ್ತರ ಮುಂದೆ ದೂರದಲಿ
ತಳಿತ ಕುಂತದ ಬಾಯಿ ಧಾರೆಯ
ಹೊಳವುಗಳ ಹೊದರೆದ್ದ ಸಿಂಧದ
ಸೆಳೆಯ ಸೀಗುರಿಗಳ ಸುರಂಭದ ಸಕಲ ಮೋಹರವ ೧

ಕರಿಘಟಾವಳಿಯೊಡ್ಡುಗಲ್ಲಿನ
ತುರಗ ನಿಕರದ ತೆರೆಯ ತೇರಿನ
ಹೊರಳಿಗಳ ಸುಳಿಯಾತಪತ್ರದ ಬಹಳ ಬುದ್ಬುದದ
ನರನಿಕಾಯದ ಜಲಚರೌಘದ
ತರದ ವಾದ್ಯಧ್ವನಿಯ ರವದು
ಬ್ಬರದೊಳಿದ್ದುದು ಬಹಳ ಜಲನಿಧಿಯಂತೆ ಕುರುಸೇನೆ ೨

ಜಡಿವ ಖಡ್ಗದ ಕಿಡಿಯ ಸೇನೆಯ
ಕಡುಹುಗಳ ಕೇಸುರಿಯ ಬಲದು
ಗ್ಗಡದ ರಭಸದ ರೌದ್ರರವ ಛಟಛಟಿತ ನಿಸ್ವನದ
ಇಡಿದ ಧೂಳಿಯ ಧೂಮ ರಾಶಿಯ
ಪಡೆ ವಿರಾಟನ ಮಗನ ಕಂಗಳಿ
ಗೊಡನೊಡನೆ ದಾವಾಗ್ನಿಯಂತಿರೆ ತೋರಿತಿದಿರಿನಲಿ ೩

ಪ್ರಳಯ ಮೇಘದ ಮಾತೃಕೆಯೊ ಕರಿ
ಕುಲವೊ ಸಿಡಿಲಿನ ಗರುಡಿಯೊ ಕಳ
ಕಳವೊ ಕಲ್ಪಾನಲನ ಧೂಮಾವಳಿಯೊ ಕೈದುಗಳೊ
ನೆಲನ ದಡ್ಡಿಯ ಬೆಟ್ಟದಡವಿಯೊ
ತಳಿತ ಟೆಕ್ಕೆಯವೋ ಜಗಂಗಳ
ನಳಿವ ಜಲಧಿಯೊ ಸೇನೆಯೋ ನಾವರಿಯೆವಿದನೆಂದ ೪

ಕಾಲಕೂಟದ ತೊರೆಯೊ ಮಾರಿಯ
ಗೂಳೆಯವೊ ಮೃತ್ಯುವಿನ ಗಂಟಲ
ತಾಳಿಗೆಯೊ ಭೈರವನ ಥಟ್ಟೋ ಜವನ ಜಂಗುಳಿಯೊ
ಕಾಲರುದ್ರನ ನೊಸಲ ವಹ್ನಿ
ಜ್ವಾಲೆಯೋ ಕೌರವನ ಸೇನಾ
ಜಾಲವೋ ಶಿವಯೆನುತ ಹೆದರಿದನಂದು ಸುಕುಮಾರ ೫

ಕಡೆಗೆ ಹಾಯವು ಕಂಗಳೀ ಬಲ
ಗಡಲ ಮನವೀಸಾಡಲಾರದು
ವೊಡಲುವಿಡಿದಿರಲೇನ ಕಾಣಲು ಬಾರದದ್ಭುತವ
ಪೊಡವಿಯೀದುದೊ ಮೋಹರವನಿದ
ರೊಡನೆ ಕಾದುವನಾವನಾತನೆ
ಮೃಡನು ಶಿವ ಶಿವ ಕಾದಿ ಗೆಲಿದೆವು ಬಲಕೆ ನಮೊಯೆಂದ ೬

ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾದೆನು ಬೃಹನ್ನಳೆ
ಯೆಸಗದಿರು ತೇಜಿಗಳ ತಡೆ ಚಿಮ್ಮಟಿಗೆಯನು ಬಿಸುಡು
ಮಿಸುಕಬಾರದು ಪ್ರಳಯ ಕಾಲನ
ಮುಸುಕನುಗಿವವನಾರು ಕೌರವ
ನಸಮ ಬಲನೈ ರಥವ ಮರಳಿಚು ಜಾಳಿಸುವೆನೆಂದ ೭

ಎಲೆ ಕುಮಾರಕ ಮೊದಲ ಚುಂಬನ
ದೊಳಗೆ ಹಲು ಬಿದ್ದಂತೆ ಕಾಳಗ
ದೊಳಗೆ ಬೆರೆಯದ ಮುನ್ನ ಹಿಡಿದೈ ಸಮರ ಭೀತಿಯನು
ಅಳುಕಲಾಗದು ನಿಮ್ಮ ತಂದೆಯ
ಕುಲಕೆ ಕುಂದನು ತಾರದಿರು ಮನ
ಗೆಲವಿನಲಿ ಕಾದೆನುತ ರಥವನು ಬೇಗ ಹರಿಸಿದನು ೮

ಸಾರಿ ಬರ ಬರಲವನ ತನು ಮಿಗೆ
ಬಾರಿಸಿತು ಮೈ ಮುರಿದು ರೋಮ ವಿ
ಕಾರ ಘನ ಕಾಹೇರಿತವಯವ ನಡುಗಿ ಡೆಂಡಣಿಸಿ
ಭೂರಿ ಭಯ ತಾಪದಲಿ ತಾಳಿಗೆ
ನೀರುದೆಗೆದುದು ತುಟಿಯೊಣಗಿ ಸುಕು
ಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ ೯

ಏಕೆ ಸಾರಥಿ ರಥವ ಮುಂದಕೆ
ನೂಕಿ ಗಂಟಲ ಕೊಯ್ವೆ ಸುಡು ಸುಡು
ಕಾಕಲಾ ಕಣ್ಣೊಡೆದವೇ ಕಾಣಾ ಮಹಾಬಲವ
ನಾಕನಿಳಯರಿಗರಿದು ನಿನಗೆ ವಿ
ವೇಕವೆಳ್ಳನಿತಿಲ್ಲ ತೆಗೆ ತೆಗೆ
ಸಾಕು ವಾಘೆಯ ಮರಳಿ ಹಿಡಿ ತೇಜಿಗಳ ತಿರುಹೆಂದ ೧೦

ನುಡಿಯ ಕೇಳದೆ ಮುಂದೆ ಹತ್ತೆಂ
ಟಡಿಯನರ್ಜುನ ರಥವ ಹರಿಸಲು
ಹಿಡಿದ ಬಿಲ್ಲಂಬುಗಳು ಬಿದ್ದವು ಕೈಯನರೆ ತೆಗೆದು
ಹಿಡಿ ಹಯವನಿರಿಗಾರ ಸಾರಥಿ
ನುಡಿವವರು ನಾವ್ ಹಗೆಗಳೇ ನಿ
ನ್ನೊಡೆಯರಲ್ಲಾ ಸ್ವಾಮಿ ದುರುಹಿಕೆ ಲೇಸು ಲೇಸೆಂದ ೧೧

ಎಂದೊಡರ್ಜುನ ನಗುತ ರಥವನು
ಮುಂದೆ ನಾಲ್ಕೆಂಟಡಿಯ ನೂಕಲು
ಕೊಂದನೀ ಸಾರಥಿಯೆನುತ ಸಂವರಿಸಿ ಮುಂಜೆರಗ
ಬಂದು ಮೆಲ್ಲನೆ ರಥದ ಹಿಂದಕೆ
ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೋಟದಲಿ ಹಾಯ್ದನು ಬಿಟ್ಟ ಮಂಡೆಯಲಿ ೧೨

ನೋಡಿದನು ಕಲಿಪಾರ್ಥನೀ ಕೇ
ಡಾಡಿ ಕೆದರಿದ ಕೇಶದಲಿ ಕೆ
ಟ್ಟೋಡುತಿರಲೆಲೆ ಪಾಪಿ ಹಾಯ್ದನು ಹಿಡಿಯಬೇಕೆನುತ
ಕೂಡೆ ಸೂಟಿಯೊಳಟ್ಟಲಿಳೆಯ
ಲ್ಲಾಡಲಹಿಪತಿ ಹೆದರಲಿತ್ತಲು
ನೋಡಿ ಕೌರವಸೇನೆ ಕೆಡೆದುದು ನಗೆಯ ಕಡಲೊಳಗೆ ೧೩

ಎಲೆಲೆ ಕಾದಲು ಬಂದ ವೀರನ
ಬಲುಹ ನೋಡಾ ಶಿವ ಶಿವಾ ಬೆಂ
ಬಳಿಯಲಟ್ಟುವ ವೀರನಾವನೊ ಸುಭಟನಹನವನು
ತಿಳಿಯಲರಿದಿವನಾವನೋ ವೆ
ಗ್ಗಳೆಯನಹನಾಕಾರದಲಿ ನೆರೆ
ಫಲುಗುಣನ ಹೋಲುವನೆನುತ ಗಜಬಜಿಸಿತರಿ ಸೇನೆ ೧೪

ಈತ ಸಾರಥಿಯಳವಿನಲಿ ಮಿಗು
ವಾತನುತ್ತರನರ್ಜುನಂಗೀ
ಸೂತತನವೆತ್ತಲು ನಪುಂಸಕ ವೇಷ ವೀಕ್ಷಿಸಲು
ಈತನರ್ಜುನನಾಗಲಾ ಪುರು
ಹೂತನಾಗಲಿ ರಾಮನಾಗಲಿ
ಆತಡಿರಿವೆನು ಬರಲಿಯೆಂದನು ಖಾತಿಯಲಿ ಕರ್ಣ ೧೫

ಇತ್ತಲರ್ಜುನನುತ್ತರನ ಬೆಂ
ಬತ್ತಿ ಬಂದನು ಹೋದೆಯಾದರೆ
ಕಿತ್ತು ಬಿಸುಡುವೆ ನಿನ್ನ ತಲೆಯನು ನಿಲ್ಲು ನಿಲ್ಲೆನುತ
ಮೃತ್ಯುವೋ ಸಾರಥಿಯೊ ಪಾಪಿಯ
ನೆತ್ತಣಿಂದವೆ ಮಾಡಿ ಕೊಂಡೆನೆ
ನುತ್ತ ಮರಳಿದು ನೋಡಿ ನಿಲ್ಲದೆ ಮತ್ತೆ ಸೈವರಿದ ೧೬

ಇಟ್ಟಣಿಸಿ ನರ ನೂರು ಹಜ್ಜೆಯೊ
ಳಟ್ಟಿ ಹಿಡಿದನಿದೇನ ಮಾಡಿದೆ
ಹುಟ್ಟಿದೆಯೊ ಹಾದರಕೆ ಕ್ಷತ್ರಿಯ ಬೀಜವೋ ನೀನು
ದಿಟ್ಟತನ ಮಿಗೆ ಹೆಂಗಳಿದಿರಲಿ
ಹೊಟ್ಟುಗುಟ್ಟಿದೆ ಹಗೆಗಳಿದಿರಲಿ
ಬಿಟ್ಟುಕೊಂಡೆ ದುರಾತ್ಮ ಮುರಿದೆ ವಿರಾಟನನ್ವಯವ ೧೭

ಹಲುಗಿರಿದು ಬಾಯೊಳಗೆ ಬೆರಳಿ
ಟ್ಟಳುಕಿ ತಲೆವಾಗಿದನು ಸಾರಥಿ
ಕಳುಹಿ ಕಳೆಯೈ ನಿನ್ನ ಬಸುರಲಿ ಮರಳಿ ಬಂದವನು
ಕೊಳುಗುಳದೊಳೀಯೊಡ್ಡ ಮುರಿವ
ಗ್ಗಳೆಯರುಂಟೇ ಲೋಗರಿಂದವೆ
ಕೊಲಿಸದಿರು ನೀ ಕುತ್ತಿ ಕೆಡಹು ಕಠಾರಿಯಿದೆಯೆಂದ ೧೮

ಮನದಲೊಡಲೊಡೆವಂತೆ ನಗುತ
ರ್ಜುನನು ಗಜರಿದನೆಲವೊ ಸಭೆಯಲಿ
ವನಜಮುಖಿಯರ ಮುಂದೆ ಸೊರಹಿದೆ ಬಾಯ್ಗೆ ಬಂದಂತೆ
ಅನುವರದೊಳೇನಾಯ್ತು ರಿಪು ವಾ
ಹಿನಿಯನಿರಿಯದೆ ನಾಡ ನರಿಯವೊ
ಲೆನೆಗೆ ನೀ ಹಲುಗಿರಿಯೆ ಬಿಡುವೆನೆ ಕಾದು ನಡೆಯೆಂದ ೧೯

ಹೇವ ಬೇಡಾ ವೀರರೀ ಪರಿ
ಜೀವಗಳ್ಳರ ಪಥವ ಹಿಡಿವರೆ
ಸಾವಿಗಂಜಿದೆವೇ ನಪುಂಸಕರೆಮ್ಮ ನೋಡೆನಲು
ನೀವು ವೀರರು ನೆರೆ ನಪುಂಸಕ
ರಾವು ಸಾವವರಲ್ಲ ಲೋಕದ
ಜೀವಗಳ್ಳರಿಗಾವು ಗುರುಗಳು ಬಿಟ್ಟು ಕಳುಹೆಂದ ೨೦

ಹರುಕನೇ ನೀನೆಲವೊ ರಾಯರೊ
ಳುರುವ ನೃಪ ನಿಮ್ಮಯ್ಯ ನೀನಿಂ
ದಿರಿದು ಮೆರೆವವಸರವಲಾ ಜವ್ವನದ ಧುರಭರವು
ಸರಿಗಳೆಯದಪಕೀರ್ತಿ ರವಿ ಶಶಿ
ಮುರಿದು ಬೀಳ್ವನ್ನಬರವೆಲೆ ನರ
ಗುರಿಯೆ ನಡೆ ಕಾಳಗಕೆನುತ ಹಿಡಿದೆಳೆದನುತ್ತರನ ೨೧

ಕೊಳುಗುಳದೊಳೋಡಿದೊಡೆ ಹಜ್ಜೆಗೆ
ಫಲ ಮಹಾಪಾತಕವು ಮುಂದಣಿ
ಗೊಲಿದು ಹಜ್ಜೆಯನಿಡಲು ಹಜ್ಜೆಯೊಳಶ್ವಮೇಧ ಫಲ
ಅಳಿದನಾದೊಡೆ ದೇವಲೋಕದ
ಲಲನೆಯರು ತೊತ್ತಿರು ಸುರೇಂದ್ರನು
ನೆಲವನುಗ್ಗಡಿಸುವನು ವೀರ ಸ್ವರ್ಗವಹುದೆಂದ ೨೨

ಧುರದಲೋಡಿದ ಪಾತಕವ ಭೂ
ಸುರರು ಕಳೆದಪರಶ್ವಮೇಧವ
ಧರಣಿಯಲಿ ಪ್ರತ್ಯಕ್ಷವಾಗಿಯೆ ಮಾಡಬಹುದೆಮಗೆ
ಸುರರ ಸತಿಯರನೊಲ್ಲೆವೆಮಗೆ
ಮ್ಮರಮನೆಯ ನಾರಿಯರೆ ಸಾಕೆ
ಮ್ಮರಸುತನವೆಮಗಿಂದ್ರಪದವಿಯು ಬಿಟ್ಟು ಕಳುಹೆಂದ ೨೩

ಆಳೊಳೊಡ್ಡುಳ್ಳವನು ಭಾರಿಯ
ತೋಳುಗಳ ಹೊತ್ತವನು ಮನೆಯಲಿ
ಸೂಳೆಯರ ಮುಂದೊದರಿ ಭಾಷ್ಕಳಗೆಡೆದು ಬಂದೀಗ
ಕೋಲನಿಕ್ಕದೆ ಗಾಯವಡೆಯದೆ
ಕಾಲು ವೇಗವ ತೋರಿದೊಡೆ ನಿ
ನ್ನೋಲಗದೊಳೆಂತಕಟ ನಾಚದೆ ಕುಳ್ಳಿತಿಹೆಯೆಂದ ೨೪

ಕೆತ್ತುಕೊಂಡಾ ನಾಚಿಕೆಗೆ ನೆರೆ
ಕುತ್ತಿಕೊಳಬೇಕೆಂಬ ಗಾದೆಯ
ನಿತ್ತ ಹೊದ್ದಿಸಬೇಡ ನಾವಂಜುವೆವು ಕಾಳಗಕೆ
ತೆತ್ತಿಗನು ನೀನಹಿತನಂತಿರೆ
ಮಿತ್ತುವಹರೇ ನಿನಗೆ ಬೇಡಿದ
ನಿತ್ತು ಸಲಹುವೆನೆನ್ನ ಕೊಲ್ಲದೆ ಬಿಟ್ಟು ಕಳುಹೆಂದ ೨೫

ವಳಿತವನು ವಾರುವನು ಮುಕ್ತಾ
ವಳಿಯಲಂಕಾರವನು ರಥವನು
ಲಲನೆಯರ ನಾನೀಸಿ ಕೊಡುವೆನು ರಾಜಭವನದಲಿ
ಎಲೆ ಬೃಹನ್ನಳೆ ನಮ್ಮ ಬೊಪ್ಪನು
ಸಲಹಿದಕೆ ಕೈಯೊಡನೆ ತೋರಿದೆ
ಕಲುಮನವಲಾ ನಿನ್ನದೆಂದಡೆ ಪಾರ್ಥನಿಂತೆಂದ ೨೬

ಪೊಡವಿಪತಿಗಳ ಬಸುರ ಬಂದೀ
ಯೊಡಲ ಕಕ್ಕುಲಿತೆಯನು ಕಾಳಗ
ದೆಡೆಗೆ ಮಾಡಿದರಿಲ್ಲ ಭೂತ ಭವಿಷ್ಯಮಾನದಲಿ
ನುಡಿಯಬಹುದೇ ಬಂಜೆವಾತನು
ಸುಡು ಸುಡೆಲವೋ ರಾಜಬಾಹಿರ
ನಡೆ ವರೂಥದ ಹೊರೆಗೆ ಕಾದಲು ಬೇಡ ಬಾಯೆಂದ ೨೭

ಕಾದುವೆನು ಮಾರೊಡ್ಡಿನಲಿ ನೀ
ನೈದಿಸೆನ್ನಯ ರಥವ ಮನದಲಿ
ಭೇದತನವನು ಬಿಟ್ಟು ಸಾರಥಿಯಾಗು ಸಾಕೆನಲು
ಆದಿಯಲಿ ನೀನಾವ ರಾಯರ
ಕಾದಿ ಗೆಲಿದೈ ಹುಲು ಬೃಹನ್ನಳೆ
ಯಾದ ನಿನಗೀ ಕದನ ನಾಟಕ ವಿದ್ಯವಲ್ಲೆಂದ ೨೮

ಎನ್ನವಂದಿಗ ರಾಜಪುತ್ರರಿ
ಗಿನ್ನು ಮೊಗಸಲು ಬಾರದಿದೆ ನೀ
ನೆನ್ನ ಸಾರಥಿ ಮಾಡಿಕೊಂಡೀ ಬಲವ ಜಯಿಸುವೆಯ
ಅನ್ಯರನು ಮನಗಾಂಬರಲ್ಲದೆ
ತನ್ನ ತಾ ಮನಗಾಂಬರೇಯೀ
ಗನ್ನಗತಕವ ನಾವು ಬಲ್ಲೆವು ಬಿಟ್ಟು ಕಳುಹೆಂದ ೨೯

ಎಲವೊ ಸಾರಥಿಯಾಗು ನಡೆ ನೀ
ಗಳಹಿದೊಡೆ ಕಟವಾಯ ಕೊಯ್ವೆನು
ಕೊಲುವೆನೀ ಪ್ರತಿಭಟ ನಿಕಾಯವ ನಿನ್ನ ಸಾಕ್ಷಿಯಲಿ
ಬಳಿಕ ನೀ ನಗು ನಡೆಯೆನುತ ರಿಪು
ಬಲ ಭಯಂಕರನುತ್ತರನ ಹೆಡ
ತಲೆಯ ಹದರಿನೊಳೌಂಕಿ ತಂದನು ರಥವನೇರಿಸಿದ ೩೦

ಖೇಡತನ ಬೇಡೆಲವೊ ರಣದೊಳ
ಗೋಡಿಸುವೆನಹಿತರನು ಹರಣವ
ಹೂಡಿಸುವೆನಂತಕನ ನಗರಿಗೆ ಥಟ್ಟನಡೆಹೊಯ್ದು
ಕೋಡದಿರು ಕೊಂಕದಿರು ಧೈರ್ಯವ
ಮಾಡಿ ಸಾರಥಿಯಾಗೆನುತ ಕಲಿ
ಮಾಡಿ ಕೊಂಡೊಯ್ದನು ಸಮೀಪದ ಶಮಿಯ ಹೊರೆಗಾಗಿ ೩೧

ಮರನನೇರಿದರೊಳಗೆ ಪಾಂಡವ
ರಿರಿಸಿ ಹೋದರು ಕೈದುಗಳ ಮಿಗೆ
ಹರಣ ಭರಣ ಕ್ಷಮೆಗಳಲಿ ನೀನೆನಗೆ ನೀಡೆನಲು
ಅರಸು ಮಕ್ಕಳು ಮುಟ್ಟಲನುಚಿತ
ಮರದ ಮೇಲಣ ಹೆಣನಿದೇನೈ
ವರ ಬೃಹನ್ನಳೆ ಮತ್ತೆ ಕೆಲಸವ ಹೇಳು ತನಗೆಂದ ೩೨

ಹೊರಗೆ ತೊಗಲಲಿ ಬಿಗಿದು ಕೆಲ ಬಲ
ನರಿಯದಂದದಿ ಪಾಂಡು ನಂದನ
ರುರುವ ಕೈದುವ ಕಟ್ಟಿದರು ಹೆಣನಲ್ಲ ತೆಗೆಯೆನಲು
ಸೆರಗನಳವಡಿಸಿಕ್ಕಿ ಭೀತಿಯ
ತೊರೆದು ತುದಿಗೇರಿದನು ನೇಣ್ಗಳ
ಹರಿದು ಕೈದುವ ಬಿಟ್ಟು ಕಂಡಂಜಿದನು ಭಯ ಹೊಡೆದು ೩೩

ಕಾಲ ಭುಜಗನ ನಾಲಿಗೆಯೊ ಶರ
ಜಾಲವೋ ಕಲ್ಪಾಂತ ವಹ್ನಿ
ಜ್ವಾಲೆಯೋ ಕೈದುಗಳೊ ಕಾಲಾಂತಕನ ದಾಡೆಗಳೊ
ತೋಳು ಧರಿಸುವವೆಂತು ನೋಡಿದ
ಡಾಲಿಯುರೆ ಬೆಂದವು ಬೃಹನ್ನಳೆ
ಕಾಳು ಮಾಡಿದೆ ಕೊಂದೆಯೆನುತೋರಂತೆ ಹಲುಬಿದನು ೩೪

ಹೊಗರ ಹೊರಳಿಯ ಹೊಳೆವ ಬಾಯ್ಧಾ
ರೆಗಳ ತಳಪದ ಕಾಂತಿ ಹೊನ್ನಾ
ಯುಗದ ಬಹಳ ಪ್ರಭೆ ಶರೌಘಾನಲನ ಗಹಗಹಿಸಿ
ಝಗಝಗಿಸೆ ಕಣ್ಮುಚ್ಚಿ ಕೈಗಳ
ಮುಗಿದು ಸಾರಥಿಗೆಂದನೆನ್ನನು
ತೆಗೆದುಕೊಳ್ಳೈ ತಂದೆ ಸಿಲುಕಿದೆನಸ್ತ್ರ ಸೀಮೆಯಲಿ ೩೫

ತುಡುಕಬಹುದೇ ದೋಷಿ ಹಾವಿನ
ಕೊಡನ ನಿನಗಿವು ಕೈದುಗಳೆ ಬರ
ಸಿಡಿಲ ದಾವಣಿಯಾಗುತಿವೆ ಕೈಯಿಕ್ಕಲಂಜುವೆನು
ಬಿಡಿಸು ಸಾರಥಿಯೆನ್ನನೆನೆ ಫಡ
ನಡುಗದಿರು ಫಲುಗುಣನ ನೆನೆ ಕೈ
ದುಡುಕು ಕೈವಶವಹವು ತೆಗೆ ಸಾಕೆಂದನಾ ಪಾರ್ಥ ೩೬

ಉಲಿದು ಸತ್ವದೊಳೌಕಿ ಕಾಯವ
ಬಲಿದು ತೆಕ್ಕೆಯೊಳೊತ್ತಿ ಬೆವರಿದು
ಬಳಲಿ ನೀಡಿದನರ್ಜುನನ ಕರತಳಕೆ ಗಾಂಡಿವವ
ಬಲುಹಿನಿಂದವಡೊತ್ತಿ ತೆಗೆ ತೆಗೆ
ದುಳಿದ ಬಿಲುಗಳ ನೀಡಿ ಮರನನು
ಮಲಗಿ ಢಗೆಯಿಂದಳ್ಳೆವೊಯ್ದು ಕುಮಾರನಿಂತೆಂದ ೩೭

ಗಿರಿಯನೆತ್ತಲು ಬಹುದು ಬಿಲುಗಳ
ಕೆರಳಿಚುವಡಾರೆನು ಬೃಹನ್ನಳೆ
ಧರಿಸಲಾಪೈ ನೀ ಸಮರ್ಥನು ನಿನಗೆ ಶರಣೆನುತ
ಸರಳ ಹೊದೆಗಳ ದೇವದತ್ತವ
ಪರಶು ತೋಮರ ಕುಂತವಸಿ ಮು
ದ್ಗರ ಗದಾ ದಂಡಾದಿ ಶಸ್ತ್ರವ ತೆಗೆದು ನೀಡಿದನು ೩೮

ಹೇಳು ಸಾರಥಿ ಬಿಲ್ಲಿದಾವನ
ತೋಳಿಗಳವಡುವುದು ಮಹಾ ಶರ
ಜಾಲ ಬೆಸೆಗೈದಪವಿದಾರಿಗೆ ಮಿಕ್ಕ ಬಿಲ್ಲುಗಳು
ಕಾಳಗದೊಳಿವನಾರು ತೆಗೆವರು
ಮೇಲುಗೈದುಗಳಾರಿಗಿವು ಕೈ
ಮೇಳವಿಸುವವು ಮನದ ಸಂಶಯ ಹಿಂಗೆ ಹೇಳೆಂದ ೩೯

ಇದು ಕಣಾ ಗಾಂಡೀವವೆಂದೆಂ
ಬುದು ಮಹಾಧನು ಪಾರ್ಥನದು ಬಳಿ
ಕಿದು ಯುಧಿಷ್ಠಿರ ಚಾಪವೀ ಧನು ಭೀಮಸೇನನದು
ಇದು ನಕುಲ ಕೋದಂಡ ಬಿಲು ತಾ
ನಿದುವೆ ಸಹದೇವನದು ಭಾರಿಯ
ಗದೆಯಿದನಿಲಜನದು ಕಿರೀಟಿಯ ಬಾಣವಿವುಯೆಂದ ೪೦

ಅವರವರ ಬತ್ತಳಿಕೆ ಚಾಪವ
ನವರ ಶರವನು ಕಂಬು ಖಡುಗವ
ಕವಚ ಸೀಸಕ ಜೋಡುಗಳ ಬಿರುದುಗಳ ಟೆಕ್ಕೆಯವ
ವಿವಿಧ ಶಸ್ತ್ರಾಸ್ತ್ರವನು ಫಲುಗುಣ
ವಿವರಿಸಲು ಬೆರಗಾಗಿ ಸಾರಥಿ
ಯಿವನು ತಾನಾರೆಂದು ಮತ್ಸ್ಯನ ಸೂನು ಬೆಸಗೊಂಡ ೪೧

ಆರು ನೀನರ್ಜುನನೊ ನಕುಲನೊ
ಮಾರುತನ ಸುತನೋ ಯುಧಿಷ್ಠಿರ
ವೀರನೋ ಸಹದೇವನೋ ಮೇಣವರ ಬಾಂಧವನೊ
ಧೀರ ಹೇಳೈ ಬೇಡಿಕೊಂಬೆನು
ಕಾರಣವ ವಿಸ್ತರಿಸು ಪಾಂಡು ಕು
ಮಾರರಾಯುಧ ತತಿಯ ನೀನೆಂತರಿವೆ ಹೇಳೆಂದ ೪೨

ಆದೊಡಾನರ್ಜುನನು ಬಾಣಸಿ
ಯಾದ ವಲಲನು ಭೀಮ ವರ ಯತಿ
ಯಾದ ಕಂಕನು ಧರ್ಮಪುತ್ರನು ನಿಮ್ಮ ಗೋಕುಲವ
ಕಾದವನು ಸಹದೇವ ರಾವುತ
ನಾದವನು ನಕುಲನು ವಿಳಾಸಿನಿ
ಯಾದವಳು ಸೈರಂಧ್ರಿ ರಾಣೀವಾಸವೆಮಗೆಂದ ೪೩

ಅಹುದು ಬಳಿಕೇನುಳಿದವರಿಗೀ
ಮಹಿಮೆ ತಾನೆಲ್ಲಿಯದು ಕಾಣಲು
ಬಹುದಲಾ ಜೀವಿಸಿದರತಿಶಯವನು ಮಹಾದೇವ
ಗಹನ ಮಾಡದೆ ನುಡಿದ ತಪ್ಪಿನ
ಬಹಳತೆಯ ಭಾವಿಸದೆ ತನ್ನನು
ಕುಹಕಿಯೆನ್ನದೆ ಕಾಯಬೇಕೆಂದೆರಗಿದನು ಪದಕೆ ೪೪

ಮೌಳಿಯನು ನೆಗಹಿದನು ನಿನ್ನಯ
ಮೇಲೆ ತಪ್ಪಿಲ್ಲೆನುತ ಫಲುಗುಣ
ಬೋಳವಿಸೆ ನಿಂದಿರ್ದು ಕೈಮುಗಿದುತ್ತರನು ನಗುತ
ಬಾಲಕನ ಬಿನ್ನಪವನೊಂದನು
ಕೇಳಬೇಹುದು ನಿಮ್ಮ ದಶನಾ
ಮಾಳಿಯನು ಪೇಳ್ದಲ್ಪಮತಿಯನು ತಿಳುಹಬೇಕೆಂದ ೪೫

ಎನಲು ನಸುನಗುತರ್ಜುನನು ಫಲು
ಗುಣ ಧನಂಜಯ ಜಿಷ್ಣು ಸಿತ ವಾ
ಹನ ವಿಜಯ ಬೀಭತ್ಸು ಪಾರ್ಥ ಕಿರೀಟಿ ಮೊದಲಾದ
ವಿನುತ ಕೃಷ್ಣನು ಸವ್ಯಸಾಚಿಗ
ಳೆನಿಪ ಪೆಸರನು ತಿಳುಹಿ ಪುನರಪಿ
ತನಗೆ ಬಂದಂದವನು ವಿಸ್ತರವಾಗಿ ವಿರಚಿಸಿದ ೪೬

ನಂಬಿದೆನು ಲೇಸಾಗಿ ನಿಶ್ಚಯ
ವಿಂಬುಗೊಂಡುದು ಪಾರ್ಥ ನಿನಗೀ
ಡೊಂಬಿದೇಕೈ ಹುಲು ಬೃಹನ್ನಳೆತನದ ಬಹು ರೂಪು
ಅಂಬುಜಾಕ್ಷನ ಸಾಹಸ ಪ್ರತಿ
ಬಿಂಬವಲ್ಲಾ ನೀನು ನಿನ್ನ ವಿ
ಡಂಬಿಸಿದ ರೂಹಿಂಗೆ ಕಾರಣವೇನು ಹೇಳೆಂದ ೪೭

ಇದು ಕಣಾ ಧರ್ಮಜನ ಸತ್ಯಾ
ಭ್ಯುದಯಕೋಸುಗ ಊರ್ವಶಿಯ ಶಾ
ಪದಲಿ ಬಂದುದು ಹೊತ್ತು ನೂಕಿದೆನೊಂದು ವತ್ಸರವ
ಇದಕೆ ನಿಜ್ಜೋಡಾಯ್ತು ನಿರ್ವಿ
ಘ್ನದಲಿ ನೂಕಿದೆವವಧಿಯನು ತ
ನ್ನದಟುತನವನು ಭೀತಿಗೊಳ್ಳದೆ ನೋಡು ನೀನೆಂದ ೪೮

ಬಳೆಯ ನೆಗ್ಗೊತ್ತಿದನು ಕೌರವ
ಬಲದ ಗಂಟಲ ಬಳೆಯ ಮುರಿವವೊ
ಲಲಘು ಸಾಹಸಿ ಘಳಿಯನುಟ್ಟನು ಮಲ್ಲಗಂಟಿನಲಿ
ತಲೆ ನವಿರ ಹಿಣಿಲಿರಿದು ತಿಲಕವ
ಗೆಲಿದು ಕಿಗ್ಗಟ್ಟಿನ ಕಠಾರಿಯ
ಹೊಳೆವ ಗೊಂಡೆಯ ಮೆರೆಯೆ ಗಂಡಂದವನು ಕೈಕೊಂಡ ೪೯

ತೇರ ತೆಗೆದನು ತನ್ನ ಮುನ್ನಿನ
ವಾರುವಂಗಳ ಹೂಡಿದನು ಕಪಿ
ವೀರ ನೆನೆಯಲು ಬಂದು ಮಂಡಿಸಿದನು ಧ್ವಜಾಗ್ರದಲಿ
ಚಾರು ಸೀಸಕ ಜೋಡು ಕುಲಿಶದ
ಸಾರ ಕವಚವ ಬಿಗಿದು ಬೊಬ್ಬೆಯ
ಭಾರವಣಿ ಮಿಗೆ ಧನುವ ಕೊಂಡನು ತಿರುವನೇರಿಸಿದ ೫೦

ರಾಯ ಧರ್ಮಜ ಬಾಳುಗೆನುತ ನಿ
ಜಾಯುಧದ ಗುರುವಿಂಗೆರಗಿ ಸುರ
ರಾಯ ನಂದನನೊಲವಿನಲಿ ಗಾಂಡಿವವ ಜೇವಡಿಸಿ
ರಾಯ ಕುವರನ ಸೂತತನದ ವಿ
ಡಾಯಿಯರಿಯಲು ಬಹುದೆನುತ ಸಮ
ರಾಯತಾಸ್ತ್ರನು ಪಾರ್ಥ ಮೈದೋರಿದನು ಪರಬಲಕೆ ೫೧

ಸಡಿಲ ಬಿಡೆ ವಾಘೆಯನು ಚಿಮ್ಮಿದ
ವೊಡನೊಡನೆ ವೇಗಾಯ್ಲ ತೇಜಿಗ
ಳೊಡೆದುದಿಳೆಯನೆ ಗಜರು ಮಿಗೆ ಗರ್ಜಿಸಿದವಳ್ಳಿರಿದು
ಕುಡಿ ನೊರೆಯ ಕಟವಾಯ ಲೋಳೆಯೊ
ಳೊಡಲ ಸಂಚದ ನುಡಿಯ ಘುಡು ಘುಡು
ಘುಡಿಪ ನಾಸಾಪುಟದ ಹುಂಕೃತಿ ಮಸಗೆ ಮುಂಚಿದವು ೫೨

ಆರು ಕೌರವನಲ್ಲಿ ಭೀಷ್ಮನ
ದಾರು ಕೃಪನಾವವನು ದ್ರೋಣನ
ದಾರು ಬಲದೊಳಗಾವನಶ್ವತ್ಥಾಮನೆಂಬವನು
ವೀರ ತಿಳುಹೆನಗಿಲ್ಲಿ ಕರ್ಣನ
ದಾರು ನಾ ಕಂಡರಿಯೆನೆನಲಾ
ವೈರಿದಲ್ಲಣ ಪಾರ್ಥ ನಗುತುತ್ತರನೊಳಿಂತೆಂದ ೫೩

ಉದಯದರುಣನ ಕರುವ ಹಿಡಿದಂ
ದದಲಿ ವರ್ಣಚ್ಛವಿಯಲೊಪ್ಪುವ
ಕುದುರೆಗಳ ತಳತಳಸಿ ಬೆಳಗುವ ಕೊಡನ ಹಳವಿಗೆಯ
ಗದಗದಿಪ ಮಣಿಮಯದ ತೇರಿನ
ಕದನ ಕೋಳಾಹಳನು ಗರುಡಿಯ
ಸದನ ಸರ್ವಜ್ಞನನು ನೋಡೈ ದ್ರೋಣನವನೆಂದ ೫೪

ನವರತುನ ಕೇವಣದ ರಥವತಿ
ಜವದ ತೇಜಿಯ ತೆಕ್ಕೆಗಳ ರೌ
ರವದ ರೌದ್ರಾಯುಧದ ಗಡಣದ ಹರಿಯ ಹಳವಿಗೆಯ
ಬವರ ಭೈರವನಾತನತಿಬಲ
ಶಿವನ ನೊಸಲಂದದಲಿ ಮೆರೆವವ
ನಿವನು ಜಿತಸಂಗ್ರಾಮನಶ್ವತ್ಥಾಮ ನೋಡೆಂದ ೫೫

ಖುರದಲವನಿಯ ಹೊಯ್ದು ಲಹರಿಯ
ಲುರಿ ಮಸಗಲುಬ್ಬೆದ್ದ ತೇಜಿಯ
ಮೆರೆವ ಮುಕ್ತಾವಳಿಯ ತೇರಿನ ನವ ವಿಳಾಸದಲಿ
ಸರಳ ತಿರುಹುತ ನಿಂದು ಧನುವನು
ನಿರುತವನು ನೆರೆ ನೋಡಿ ತಾ ಝೇಂ
ಕರಿಸುವವನತಿಬಲ ಕೃಪಾಚಾರಿಯನು ನೋಡೆಂದ ೫೬

ಲಲಿತ ರತ್ನಪ್ರಭೆಯ ತೇರಿನ
ಲುಲಿವ ಬಹುವಿಧ ವಾದ್ಯ ರಭಸದ
ಕಳಕಳದ ಕಡು ದರ್ಪದಿಂದಳ್ಳಿರಿವ ತೇಜಿಗಳ
ಲಳಿಯ ಲಹರಿಯ ಲಗ್ಗೆಗಳ ಮೋ
ಹಳಿಸಿ ಬಿಲು ಝೇಂಕಾರ ರವದಿಂ
ದುಲಿವವನು ಕಲಿಕರ್ಣನತುಳ ಪರಾಕ್ರಮಾನಲನು ೫೭

ಅತ್ತಲೈದನೆ ಬಹಳ ಬಲದೊ
ತ್ತೊತ್ತೆಯಲಿ ನಮ್ಮುಭಯ ರಾಯರ
ಮುತ್ತಯನು ತಾನೆನಿಸಿ ಹೂಡಿದ ಬಿಳಿಯ ತೇಜಿಗಳ
ತೆತ್ತಿಸಿದ ಹೊಂದಾಳ ಸಿಂಧದ
ಸತ್ತಿಗೆಯ ಸಾಲಿನಲಿ ರಿಪುಕುಲ
ಮೃತ್ಯುವಾತನು ವೀರ ಗಂಗಾಸುತನು ನೋಡೆಂದ ೫೮

ಅಗಿವ ಹಾವಿನ ಹಳವಿಗೆಯ ಮಿಗೆ
ನೆಗಹಿ ಮುಸುಕಿದ ಝಲ್ಲರಿಯ ಜೋ
ಡಿಗಳ ತುಡುಕುವ ತಂಬಟಂಗಳ ಮೊರೆವ ಚಂಬಕದ
ನೆಗಹಿ ನಿಗುರುವ ಟೆಕ್ಕೆಯದ ಮದ
ವೊಗುವ ಕರಿಗಳ ಮಧ್ಯದಲಿ ತಾ
ನಗಡು ದುರಿಯೋಧನನು ಜೂಜಿನ ಜಾಣನವನೆಂದ ೫೯

ಅವನ ಬಲವಂಕದಲಿ ನಿಂದವ
ನವನು ಭೂರಿಶ್ರವನು ಮತ್ತಾ
ಭುವನಪತಿಯೆಡವಂಕದಲಿ ನಿಂದವ ಜಯದ್ರಥನು
ತವತವಗೆ ಬಲುಗೈಗಳೆನಿಸುವ
ಶಿವನ ನೊಸಲಂದದಲಿ ಮೆರೆವವ
ರವನಿಪಾಲಕನನುಜರನು ನೋಡೆಂದನಾ ಪಾರ್ಥ ೬೦

ಹೊಗಳಲನುಪಮ ಸೈನ್ಯವಿಂತೀ
ದ್ವಿಗುಣವಂಧಾಸುರನ ಸೇನೆಗೆ
ತ್ರಿಗುಣವಿದು ರಾವಣನ ಮೋಹರಕೆನುತ ಫಲುಗುಣನು
ಹಗೆಯ ಭುಜದಗ್ಗಳಿಕೆಯನು ನಾ
ಲಗೆ ದಣಿಯೆ ಕೈವಾರಿಸುತ ಮಿಗೆ
ನಿಗುಚಿದನು ಫಲುಗುಣನು ಗಾಂಡಿವವ ಝೇವಡೆದು ೬೧

ಖುರಪುಟದಲಾಕಾಶ ಭಿತ್ತಿಯ
ಬರೆವವೋಲ್ ಸೂರಿಯನ ತುರಗವ
ಕರೆವವೋಲ್ ಕೈಗಟ್ಟಿ ದುವ್ವಾಳಿಸುವಡಾಹವಕೆ
ಅರೆರೆ ಪೂತುರೆ ಹಯವೆನುತೆ ಚ
ಪ್ಪರಿಸಲೊಡೆ ನಿಗುರಿದವು ಕೆಂದೂ
ಳಿರದೆ ನಭಕುಪ್ಪರಿಸಿ ರವಿ ಮಂಡಲವನಂಡಲೆಯೆ ೬೨

ತುರಗ ಗರ್ಜನೆ ರಥದ ಚೀತ್ಕೃತಿ
ವರ ಧನುಷ್ಟಂಕಾರ ಕಪಿಯ
ಬ್ಬರಣೆ ಪಾರ್ಥನ ಬೊಬ್ಬೆ ನಿಷ್ಠುರ ದೇವದತ್ತ ರವ
ಅರರೆ ಹೊದರೆದ್ದವು ಗಿರಿವ್ರಜ
ಬಿರಿಯೆ ಜಲನಿಧಿ ಜರಿಯೆ ತಾರಕಿ
ಸುರಿಯೆ ಸುರಕುಲ ಪರಿಯೆ ಭೀತಿಯ ಲಹಿತ ಬಲ ಹರಿಯೆ ೬೩

ಶಿರವ ಸಿಡಿಲೆರಗಿದವೊಲುತ್ತರ
ತಿರುಗಿ ಬಿದ್ದನು ಮೂರ್ಛೆಯಲಿ ಹೊಡೆ
ಮರಳಿದವು ಕಣ್ಣಾಲಿ ಕಾರಿದವರುಣ ವಾರಿಗಳ
ಹೊರಳುತಿರಲೆಲೆ ಪಾಪಿ ಸೈರಿಸ
ಲರಿಯ ನಿನ್ನೇನೆನುತ ಫಲುಗುಣ
ಸೆರಗಿನಲಿ ಬೀಸಿದನು ಕುಳ್ಳಿರಿಸಿದನು ರಥದೊಳಗೆ ೬೪

ಏನು ಮತ್ಸ್ಯಕುಮಾರ ಭವಣೆಯಿ
ದೇನು ನಿನಗೆಂದೆನಲು ಜಗದವ
ಸಾನದಂದದಿ ಸಿಡಿಲು ಸುಳಿದುದು ಬಿರಿದುದೆನ್ನೊಡಲು
ಆನಲಾಪೆನೆ ನಿನ್ನ ಬಹಳ
ಧ್ವಾನವನು ಸಾಕೆನ್ನ ಕಳುಹು ಮ
ಹಾ ನಿಧಾನವ ಮಾಣು ಮಾಣೆನೆ ಪಾರ್ಥನಿಂತೆಂದ ೬೫

ಖೇಡನಾಗದಿರದುಭುತ ಧ್ವನಿ
ಮಾಡೆನಂಜದಿರಂಜದಿರು ಧೃತಿ
ಮಾಡಿಕೊಂಡೀ ರಥವ ಜೋಡಿಸೆನುತ್ತ ಸಂತೈಸಿ
ಮೂಡಿಗೆಯ ಅಂಬುಗಿದು ತಿರುವಿಗೆ
ಹೂಡಿದನು ಫಲುಗುಣನ ಕದನವ
ನೋಡಲಮರಶ್ರೇಣಿ ಮೇಳೈಸಿತ್ತು ಗಗನದಲಿ ೬೬

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)