ಸೂ: ಕುಸುಮಶರನುರವಣೆಯ ಗಾಯದ
ಲೆಸುಗೆವಡೆದನು ಕೀಚಕನು ತ
ನ್ನಸುವಿನಳತೆಯ ನೋಡದೆಯೆ ತುಡುಕಿದನು ದ್ರೌಪದಿಯ
ಕೇಳು ಜನಮೇಜಯ ಧರಿತ್ರೀ
ಪಾಲ ನಿಮ್ಮಯ ಪೂರ್ವ ಪೃಥ್ವೀ
ಪಾಲರಿದ್ದರು ಗುಪುತದಿಂದ ವಿರಾಟನಗರಿಯಲಿ
ಕಾಲ ಸವೆದುದು ಹತ್ತು ತಿಂಗಳ
ಮೇಲೆ ಮತ್ತೊಂದತಿಶಯೋಕ್ತಿಯ
ನಾಲಿಸೈ ವಿಸ್ತರದೊಳರುಪುವೆನೆಂದನಾ ಮುನಿಪ ೧
ಆ ವಿರಾಟನ ರಾಜಧಾನಿಯೊ
ಳೀ ವಿಳಾಸದಿ ಮುಸುಕಿ ತಾವ್ ಪರ
ಸೇವೆಯಲಿ ಪಾಂಡವರು ಕಳೆದರು ಹತ್ತು ಮಾಸವನು
ರಾವಣನು ಮುನ್ನಂದು ಸೀತಾ
ದೇವಿಗಳುಪಿದ ಕಥೆಯವೋಲ್ ಸಂ
ಭಾವಿಸಿದ ಕೀಚಕವಿಡಂಬವ ಕೇಳು ಭೂಪಾಲ ೨
ಒಂದು ದಿವಸ ವಿರಾಟನರಸಿಯ
ಮಂದಿರಕ್ಕೋಲೈಸಲೆಂದೈ
ತಂದನಾಕೆಯ ತಮ್ಮ ಕೀಚಕನತುಳ ಭುಜಬಲನು
ಹಿಂದೆ ಮುಂದಿಕ್ಕೆಲದ ಸತಿಯರ
ಸಂದಣಿಯ ಮಧ್ಯದಲಿ ಮೆರೆವರ
ವಿಂದವದನೆಯ ಕಂಡು ಕಾಣಿಕೆಗೊಟ್ಟು ಪೊಡಮಟ್ಟ ೩
ಅನುಜನನು ತೆಗೆದಪ್ಪಿ ಸಿಂಹಾ
ಸನದ ಕೆಲದಲಿ ಕುಳ್ಳಿರಿಸಿ ಮನ
ದಣಿಯಲಂಗನೆ ಮನ್ನಿಸಿದಳೈ ತತ್ಸಹೋದರನ
ತನುಪುಳಕ ತಲೆದೋರಲವನು
ಬ್ಬಿನಲಿ ಸತ್ಕೃತನಾಗಿ ಕಮಳಾ
ನನೆಯರನು ಕಂಡನು ಸುದೇಷ್ಣೆಯ ಮೇಳದಬಲೆಯರ ೪
ಅವರ ಮಧ್ಯದಲಮಲ ತಾರಾ
ನಿವಹದಲಿ ರೋಹಿಣಿಯವೋಲ್ ಸುರ
ಯುವತಿಯರಲೂರ್ವಶಿಯವೋಲ್ ನದಿಗಳೊಳು ಜಾಹ್ನವಿಯ
ಅವಯವದ ಪರಿಮಳಕೆ ಪಸರಕೆ
ಕವಿವ ತುಂಬಿಯ ಸಾರ ಸಂಗೀ
ತವನು ಕೇಳುತ ಕಂಡನವ ಪಾಂಚಾಲ ನಂದನೆಯ ೫
ಮೊದಲೊಳವನವಳಂಗವಟ್ಟವ
ನೊದವಿ ನೋಡಿದೊಡಲ್ಲಿಯೇ ಗಾ
ಢದಲಿ ನಟ್ಟವು ಕೀಳಲರಿದಾಯ್ತಾಲಿಗಳನಲುಗಿ
ಮದನ ಮಸೆದೋರಿದನು ಹೂಗಣೆ
ಹೃದಯವನು ತಾಗಿದುದು ಹರ ಹರ
ಹೆದರಿದನು ಹಮ್ಮೈಸಿದನು ಖಳನೊಂದು ನಿಮಿಷದಲಿ ೬
ನಿಂದು ನೋಡಿದ ದ್ರೌಪದಿಯ ಮೊಗ
ದಂದವನು ಕಂಡಾಗ ಕೀಚಕ
ನೊಂದನೆನೆ ಮೊಗ ತೆಗೆಯಲೆಚ್ಚನು ಕಾಮ ಕೈಗೂಡಿ
ಅಂದು ಬೆರಗಾದನು ವಿಳಾಸಿನಿ
ಯಿಂದು ತಳೆದಳು ಮನವನಿವಳಾ
ರೆಂದು ಭಾವಿಸಿ ಚಾಚಿದನು ಕದಪಿನಲಿ ಕರತಳವ ೭
ತಿಳಿಯಿವಳು ಮೂಜಗವ ಮೋಹಿಪ
ತಿಲಕವೋ ಕಾಮಂಗೆ ಕಟ್ಟಿದ
ಕಳನ ಭಾಷೆಗೆ ನಿಂದ ಮಾಸಾಳೋ ಮಹಾದೇವ
ಕೊಲೆಗಡಿಗ ಕಂದರ್ಪಕನ ಕೂ
ರಲಗೊ ಮದನನ ಸೊಕ್ಕಿದಾನೆಯೊ
ನಳಿನಮುಖಿಯಿವಳಾರ ಸತಿಯೆಂದಳುಪಿ ನೋಡಿದನು ೮
ಜಗವ ಕೆಡಹಲು ಜಲಜವಿಶಿಖನು
ಬಿಗಿದ ಬಲೆಯಿವಳಲ್ಲಲೇ ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗು
ಮುಗುದನಾದನು ಕಾಮನಂಬುಗ
ಳುಗಿದವೆದೆಯಲಿ ನಟ್ಟ ದೃಷ್ಟಿಯ
ತೆಗೆಯಲಾರದೆ ಸೋತು ಕೀಚಕ ಪಾತಕವ ನೆನೆದ ೯
ಸೂರೆವೋಯಿತು ಚಿತ್ತ ಕಂಗಳು
ಮಾರುವೋದವು ಖಳನ ಧೈರ್ಯವು
ತೂರಿ ಪೋದದು ಕರಣದಲಿ ಕಳವಳದ ಬೀಡಾಯ್ತು
ಮೀರಿ ಪೊಗುವಂಗಜನ ಶರದಲಿ
ದೋರುವೋಯಿತು ಹೃದಯ ಕಣ್ಣಿರಿ
ಗಾರೆಯಿವಳಾರೆನುತ ಗಜಬಜಿಸಿದನು ನಿಮಿಷದಲಿ ೧೦
ರತಿಯ ಚೆಲುವಂತಿರಲಿ ಸಿರಿ ಪಾ
ರ್ವತಿಯ ರೂಪಂತಿರಲಿ ಬೊಮ್ಮನ
ಸತಿಯ ಸೊಬಗಂತಿರಲಿಯೀ ಬಾಲಕಿಯ ರೂಪಿಂಗೆ
ಪ್ರತಿಯ ಕಾಣೆನು ಪಾಂಡವರ ದುರು
ಪತಿಯ ರೂಪಿಂಗೈದು ಮಡಿಯೀ
ಸತಿಯ ವಿಭ್ರಮವೈದಿತೆನ್ನಯ ಮನವನೆನುತಿರ್ದ ೧೧
ಅರಿವು ತಲೆಕೆಳಗಾಯ್ತು ಧೈರ್ಯದ
ನಿರಿಗೆ ನಗೆಗೆಡೆಯಾಯ್ತು ಲಜ್ಜೆಯ
ಹೊರಿಗೆ ಬರಿದೊರೆಯಾಯ್ತು ಕರಿಮೊಳೆಯೋಯ್ತು ಭಯಬೀಜ
ಮರವೆ ಗರಿಗಟ್ಟಿತು ಮನೋಭವ
ನಿರಿಗೆಲಸ ಬಲುಹಾಯ್ತು ಹೊಗಳುವ
ಡರಿಯನಾತನ ತನುವಿನಂತಸ್ತಾಪದೇಳ್ಗೆಯನು ೧೨
ಬೀಳುಗೊಂಡದು ಲಜ್ಜೆ ಮಹಿಮೆಯ
ಕೀಲು ಕಳಚಿತು ದ್ರುಪದ ತನುಜೆಯ
ನಾಲಿಯಲಿ ನುಂಗಿದನು ಮನದಲಿ ಸತಿಯ ಸೆರೆವಿಡಿದು
ಕೇಳು ಬಿನ್ನಹವಕ್ಕ ನಿಮ್ಮಡಿ
ಯೋಲೆಕಾತಿಯರೊಳಗೆ ಮೀಟಿನ
ಮೇಲುಗೈಯಿವಳಾವಳೆಂದಗ್ರಜೆಯ ಬೆಸುಗೊಂಡ ೧೩
ಈಕೆ ಗಂಧರ್ವರ ರಮಣಿ ನ
ಮ್ಮಾಕೆಯಾಗಿರೆ ಮಾನ್ಯವೃತ್ತಿಯೊ
ಳೀಕೆಯನು ಸಲಹುವೆವು ಬಲ್ಲಿದರಿವಳ ವಲ್ಲಭರು
ಸಾಕು ಬೀಡಾರಕ್ಕೆ ನೀ ಹೋ
ಗೀಕೆ ನಿನಗಹಳಲ್ಲ ನಿಂದಿರು
ಕಾಕನಾಡದಿರೆನುತ ಬೀಳ್ಕೊಟ್ಟಳು ನಿಜಾನುಜನ ೧೪
ತಾರಿತಂತಃಕ್ಕರಣ ಕಾಮನ
ಕೂರುಗಣೆ ಕಾಲಿಕ್ಕಿದವು ಮನ
ದೇರು ಮುಚ್ಚಿತು ದುಗುಡ ಬಲಿದದು ಮುಸುಕು ಮೋರೆಯಲಿ
ಮೀರಿ ನಿಜಮಂದಿರಕೆ ಢಗೆ ಮೈ
ದೋರೆ ಬಂದನು ಮರುದಿವಸ ತಲೆ
ಮಾರಿ ಕಂಡನು ದ್ರೌಪದಿಯನರಮನೆಯ ಬಾಗಿಲಲಿ ೧೫
ಕಳುಹಿದನು ತನ್ನೊಡನೆ ಬಹ
ಗಾವಳಿಯ ಪರಿವಾರವನು ತನ್ನಯ
ಬಳಿಯ ಹಡಪದ ಬಾಲಕನ ಹಿಂದಿಕ್ಕಿ ನಡೆತಂದು
ಒಲಿದು ಸಿಂಹದ ಸತಿಗೆ ನರಿ ಮನ
ವಳುಪುವಂತಿರೆ ಗರುಡನರಸಿಗೆ
ನಲಿದು ಫಣಿ ಬಯಸುವವೊಲೈದಿದ ಬಾಲಕಿಯ ಬಳಿಗೆ ೧೬
ಖಳನ ಮನವಿಂಗಿತವನಾಗಳೆ
ತಿಳಿದು ಕಾಮಿನಿ ಬೆದರಿದಳು ಕಳ
ವಳಿಗ ಸೋತನು ಕೆಟ್ಟೆನೆಂದಳು ತನ್ನ ಮನದೊಳಗೆ
ತೊಲಗಿ ಹಿಂದಡಿಯಿಡಲು ಕೀಚಕ
ನಳುಕದೈತಂದಬುಜವದನೆಯ
ಬಳಿಗೆ ಬಂದನು ನುಡಿಸಲಾಗದೆ ತರಳೆ ನೀನೆಂದ ೧೭
ಎಲೆ ಮರುಳೆ ಬೇಡಳುಪದಿರು ಕೂ
ರಲಗ ಕೊರಳಿಗೆ ಬಯಸದಿರು ಕಳ
ವಳಿಸದಿರು ಕೈಯೊಡನೆ ನಿನ್ನರಮನೆಗೆ ತೆರಳುವುದು
ಸುಲಭೆ ನಾ ನಿನಗಲ್ಲ ನಿನ್ನನು
ಕೆಲರು ನಗುವರು ಪರದ ಸದ್ಗತಿ
ತೊಲಗುವುದು ಬೇಡಕಟಯೆಂದಳು ಪಾಂಡವರ ರಾಣಿ ೧೮
ನಿಲ್ಲೆಲೆಗೆ ಸೈರಂಧ್ರಿ ಕಾಮನ
ಬಲ್ಲೆಹದ ಬಲುಗಾಯ ತಾಗಿತು
ಬಲ್ಲೆ ನೀನೌಷಧಿಯ ರಕ್ಷಿಸಿಕೊಂಬುದೆನ್ನೊಡಲ
ಮೆಲ್ಲನಡಿಯಿಡು ಮಾತ ಮನ್ನಿಸು
ಚೆಲ್ಲೆಗಂಗಳನೆನ್ನ ಮುಖದಲಿ
ಚೆಲ್ಲಿ ಸಪ್ರಾಣಿಸಲು ಬೇಹುದು ವಿಗತಜೀವನವ ೧೯
ಎಲೆಗೆ ಪಾತಕಿ ನಿನ್ನ ಕಣ್ಣೆಂ
ಬಲಗಿನಲಿ ತನ್ನೆದೆಯ ನೋಯಿಸಿ
ತೊಲಗಬಹುದೇ ಕರುಣವಿಲ್ಲವೆ ನಿನ್ನ ಮನದೊಳಗೆ
ಒಲಿದು ಬಂದೆನು ಕಾಮನೂಳಿಗ
ಬಲುಹು ಎನ್ನವ ಭಯವ ತಗ್ಗಿಸಿ
ತಲೆಯ ಕಾಯಲು ಬೇಕೆನುತ ಕೀಚಕನು ಕೈಮುಗಿದ ೨೦
ಪರರ ಸತಿಗಳುಪಿದೊಡೆ ಪಾತಕ
ದೊರಕುವುದು ನಿಜಲಕ್ಷ್ಮಿ ತೊಲಗುಗು
ಧರೆಯಳೊಗ್ಗದ ಕೀರ್ತಿ ಮಾಸುಗು ಗತಿಗೆ ಕೇಡಹುದು
ಕೊರಳು ಹಲವಾದಸುರನಂತಕ
ಪುರವನೈದಿದ ಕಥೆಯ ನೀ ಕೇ
ಳ್ದರಿಯಲಾ ಕಡುಪಾಪಿ ಹೋಗೆಂದಳು ಸರೋಜಮುಖಿ ೨೧
ಮೇಲೆ ಸದ್ಗತಿ ಬೆಂದು ಹೋಗಲಿ
ಕಾಲನವರೈತರಲಿ ಬಂಧುಗ
ಳೇಳಿಸಲಿ ತನ್ನವರು ತೊಲಗಲಿ ರಾಣಿಯರು ಬಿಡಲಿ
ಬಾಲೆ ನಿನಗಾನೊಲಿದೆ ಕಾಮನ
ಕೋಲು ಎನ್ನನು ಮರಳಲೀಯದು
ಲೋಲಲೋಚನೆ ಬಿರುಬ ನುಡಿಯದೆ ತನ್ನನುಳಹೆಂದ ೨೨
ಎಳೆನಗೆಯ ಬೆಳುದಿಂಗಳನು ನೀ
ತಳಿತು ತಾಪವ ಕೆಡಿಸು ಮಧುರದ
ಮೆಲುನುಡಿಯ ಸುಧೆಯಿಂದ ತೃಷ್ಣೆಯನಕಟ ಪರಿಹರಿಸು
ಅಳಿಮನದ ಬಡತನವ ನಿನ್ನಯ
ಕಳಸ ಕುಚ ಲಕ್ಷ್ಮಿಯಲಿ ಕಳೆ ಮನ
ದೊಲವನಿತ್ತಲು ತಿದ್ದಬೇಹುದು ಕಾಂತೆ ಕೇಳೆಂದ ೨೩
ಕೇಳಿ ಕಿವಿ ಮುಚ್ಚಿದಳು ತನ್ನಯ
ಮೇಳದೈವರ ನೆನೆದು ಹರ ಹರ
ಶೂಲಪಾಣಿ ಮುಕುಂದಯೆನುತವೆ ರವಿಯನೀಕ್ಷಿಸುತ
ಕಾಳು ಮೂಳನಲಾ ಖಳಾಗ್ರಣಿ
ಮೇಲುಗಾಣನಲಾ ಮದಾಂಧನ
ಸೋಲಿಸುವರಾರುಂಟೆನುತ ತಲೆ ಬಾಗಿದಳು ತರಳೆ ೨೪
ಎಲೆ ದುರಾತ್ಮ ಮಹಾಪರಾಧವ
ಬಳಸುವರೆ ಬಯಲಿಂಗೆ ನಿನ್ನಯ
ಕುಲದ ಬೇರನು ಕೊಯ್ವರೇ ಬಹುದಾವುದಿದರಿಂದ
ಹಳಿವು ಹೊದ್ದದೆ ಹೆತ್ತವರು ಮ
ಕ್ಕಳುಗಳೆಂಬೀ ಬದುಕು ಮಾಣದೆ
ಯೆಳಸಿಕೊಂಬಂತಾಯಿತೆಂದಳು ಪಾಂಡವರ ರಾಣಿ ೨೫
ಕಾತರಿಸದಿರು ಮಂದಿವಾಳದ
ಮಾತುಗಳು ಸಾಕಕಟ ತೊಲಗೈ
ಸೋತಡೇನದು ಮನುಜಧರ್ಮದ ಚಿತ್ತಚಪಲವಲ
ಈ ತತುಕ್ಷಣ ಜಾರು ಕೇಳಿದ
ಡಾತಗಳು ಸೈರಿಸರು ದೇವ
ವ್ರಾತದಲಿ ಬಲ್ಲಿದರು ತನ್ನವರೆಂದುಳಿಂದುಮುಖಿ ೨೬
ಸಾವು ತಪ್ಪದು ತನಗೆ ಕಾಮನ
ಡಾವರವು ಘನ ನಿನ್ನ ನೆರೆದೇ
ಸಾವೆನಲ್ಲದೆ ಕಾಮನಂಬಿಂಗೊಡಲನೊಪ್ಪಿಸೆನು
ಭಾವೆ ನೂಕದಿರೆನ್ನ ವರ ರಾ
ಜೀವಮುಖಿ ಕೃಪೆ ಮಾಡು ತನ್ನಯ
ಜೀವನವನುಳುಹೆನುತ ಕಮಲಾನನೆಗೆ ಕೈಮುಗಿದ ೨೭
ಮರುಳತನ ಬೇಡೆಲವೊ ಗಂಧ
ರ್ವರಿಗೆ ಹೆಂಡತಿ ತಾನು ನಿನ್ನಯ
ದುರುಳತನವನು ಸೈರಿಸರು ತನ್ನವರು ಬಲ್ಲಿದರು
ಸೊರಹದಿರು ಅಪಕೀರ್ತಿ ನಾರಿಯ
ನೆರೆಯದಿರು ನೀ ನಿನ್ನ ನಿಳಯಕೆ
ಮರಳುವುದು ಲೇಸೆಂದು ತೃಣವನು ಹಿಡಿದು ಸಾರಿದಳು ೨೮
ದ್ರೌಪದಿಗೆ ಖಳ ನುಡಿದನೆನ್ನಾ
ಟೋಪವನು ನೀನರಿಯೆ ಬಡವರ
ಕೋಪವೌಡಿಗೆ ಮೃತ್ಯು ನಿನ್ನವರೆನ್ನದೇಗುವರು
ಆಪೆನವರಂತಿರಲಿ ನೀನೆನ
ಗೋಪಳಾದರೆ ಸಾಕು ಮಲೆತಡೆ
ಯಾ ಪಿನಾಕಿಗೆ ತೆರಳುವೆನೆ ಬಳಿಕಲ್ಲಿ ನೋಡೆಂದ ೨೯
ಹುಳುಕನಲ್ಲಾ ತುಂಬಿ ಕೋಗಿಲೆ
ಗಳಹನಲ್ಲಾ ಶಶಿ ವಸಂತನ
ಬಲುಹು ಮಾನ್ಯರನಿರಿಯದೇ ತಂಗಾಳಿ ಧಾರ್ಮಿಕನೆ
ಖಳನಲಾ ಮಾಕಂದ ಲೋಕದ
ಕೊಲೆಗಡಿಗನಲ್ಲಾ ಮನೋಭವ
ನಿಳಿಕೆಗೊಂಬರೆ ಪಾಪಿಯೊಲಿಯದೆ ಕೊಲುವರೇಯೆಂದ ೩೦
ಒಲಿದು ನಿನ್ನನು ನಾವು ಕೊಲ್ಲೆವು
ಕೊಲುವ ಸುಭಟರು ಬೇರೆ ಬಯಲಿಗೆ
ಹಲವ ಗಳಹಿದರೇನು ಫಲವಿಲ್ಲಕಟ ಸಾರಿದೆನು
ತಿಳುಪಿದೊಡೆಯೆನ್ನವರು ನಿನ್ನಯ
ತಲೆಯನರಿದೂ ತುಷ್ಟರಾಗರು
ಕಲಕುವರು ನಿನ್ನನ್ವಯಾಬ್ಧಿಯನೆಂದಳಿಂದುಮುಖಿ ೩೧
ಕುಲದೊಳೊಬ್ಬನು ಜನಿಸಿ ವಂಶವ
ನಳಿದನಕಟಕಟೆಂಬ ದುರ್ಯಶ
ವುಳಿವುದಲ್ಲದೆ ಲೇಸಗಾಣೆನು ಬರಿದೆ ಗಳಹದಿರು
ಕೊಲೆಗಡಿಕೆಯೊ ಪಾಪಿ ಹೆಂಗಸು
ಹಲಬರನು ಕೊಲಿಸಿದಳು ಸುಡಲೆಂ
ದಳಲುವರು ನಿನ್ನಖಿಳ ರಾಣಿಯರೆಂದಳಿಂದುಮುಖಿ ೩೨
ಹರಿ ವಿರಂಚಿಗಳಾದೊಡೆಯು ಸಂ
ಗರದೊಳೆನಿಗಿದಿರಿಲ್ಲ ಮರುಳೇ
ತರುಣಿ ನಿನ್ನೊಡನೇನು ತೋರಾ ನಿನ್ನ ವಲ್ಲಭರ
ಪರಸತಿಯ ಸೆರೆಗೈಯೆ ಮುತ್ತಿತು
ನೆರೆದು ಕೋಡಗವಿಂಡು ಸುಭಟನು
ಸರಿದನಂತಕ ನಗರಿಗರಿಯಾಯ್ತೆಂದಳಿಂದುಮುಖಿ ೩೩
ನೀರೆ ನೂಕದಿರೆನ್ನ ಮನ ಮು
ಮ್ಮಾರುವೋದದು ನೀನು ಚಿತ್ತವ
ಸೂರೆಗೊಂಡೀ ಮದನನಂಬಿಂಗೊಡಲ ಹೂಣಿಸುವೆ
ಜಾರದಿರುಯೆನ್ನೆದೆಗೆ ತಾಪವ
ಬೀರದಿರು ಕಾರುಣ್ಯವನು ಕೈ
ದೋರೆನೆಗೆ ಕಮಲಾಕ್ಷಿ ಮರಣವ ಮಾಣಿಸಕಟೆಂದ ೩೪
ಮರುಳೆ ಮನದ ವಿಕಾರ ಮಾರಿಯ
ಸರಸವಾಡುವರುಂಟೆ ಮೃತ್ಯುವ
ನೆರೆವರೇ ದಳ್ಳುರಿಯ ಪ್ರತಿಮೆಯನಪ್ಪುವರೆ ಬಯಸಿ
ಸರಳಕಂಗೈಸುವರೆ ಪಾಪಿಯೆ
ಮರಳು ನಿನ್ನರಮನೆಗೆಯೆನ್ನಯ
ಗರುವ ಗಂಡರು ಕಡಿದು ಹರಹುವರೆಂದಳಿಂದುಮುಖಿ ೩೫
ತೋಳ ತೆಕ್ಕೆಯ ತೊಡಿಸಿ ಕಾಮನ
ಕೋಲ ತಪ್ಪಿಸು ಖಳನ ಕಗ್ಗೊಲೆ
ಯೂಳಿಗವ ಕೇಳುಸುರದಿಹರೆ ಸಮರ್ಥರಾದವರು
ಸೋಲಿಸಿದ ಗೆಲವಿಂದ ಬಲು ಮಾ
ತಾಳಿಯಿವನೆನ್ನದಿರು ಹರಣದ
ಮೇಲೆ ಸರಸವೆ ಕಾಯಬೇಹುದು ಕಾಂತೆ ಕೇಳೆಂದ ೩೬
ಉಳಿದ ತನ್ನರಸಿಯರ ನಿನ್ನಯ
ಬಳಿಯ ತೊತ್ತಿರ ಮಾಡುವೆನು ಕೇ
ಳೆಲೆಗೆ ತನ್ನೊಡಲಿಂಗೆಯೊಡೆತನ ನಿನ್ನದಾಗಿರಲಿ
ಲಲನೆ ನಿನ್ನೊಳು ನಟ್ಟ ಲೋಚನ
ತೊಲಗಲಾರದು ತನ್ನ ಕಾಯವ
ಬಳಲಿಸದೆ ಕೃಪೆ ಮಾಡಬೇಹುದೆನುತ್ತ ಕೈಮುಗಿದ ೩೭
ನ್ಯಾಯವನು ಮಿಗೆ ಗೆಲುವದೀಯ
ನ್ಯಾಯವಧಮನ ಧರ್ಮ ಮಾರ್ಗ
ಸ್ಥಾಯಿಗಳ ತಿಮಿರಕ್ಕೆ ಭಾಸ್ಕರಗಾವುದಂತರವು
ಕಾಯರೆನ್ನವರವರ ಕೈಗುಣ
ದಾಯತವ ಬಲ್ಲನರೆ ಬಲ್ಲರು
ನಾಯಿ ಸಿಂಹಕ್ಕಿದಿರೆ ಫಡ ಹೋಗೆಂದು ತಿರುಗಿದಳು ೩೮
ಹೂಣೆ ಹೊಕ್ಕುದು ವಿರಹದಾಸೆಯ
ಕಾಣೆನಾಕೆಯ ಮಾತಿನಲಿ ಮುಂ
ಗಾಣಿಕೆಯಲೇ ಸೂರೆ ಹೋದದು ಮನದ ಸರ್ವಸ್ವ
ತ್ರಾಣ ಸಡಿಲಿತು ಬುದ್ಧಿ ಕದಡಿ ಕೃ
ಪಾಣಪಾಣಿ ವಿರಾಟ ರಾಯನ
ರಾಣಿಯರಮನೆಗೈದಿದನು ಕಂಡನು ನಿಜಾಗ್ರಜೆಯ ೩೯
ಹಣೆಯನಂಘ್ರಿಗೆ ಚಾಚಲೆತ್ತಿದ
ಳಣಕಿಗನ ತೆಗೆದಪ್ಪಿ ಮದವಾ
ರಣನೆ ಕುಳ್ಳಿರೆನುತ್ತ ನೋಡಿದಳಾ ಸಹೋದರನ
ಹೆಣ ಮುಸುಡು ಬಿದ್ದಿದೆ ಲತಾಂಗಿಯ
ಕೆಣಕಿದನೊ ಕಡುಪಾಪಿ ವಂಶವ
ಹಣಿದವಾಡದೆ ಮಾಣನೇಗುವೆನೆನುತ ಮರುಗಿದಳು ೪೦
ಅಳುಕಿತಗ್ಗದ ಮಹಿಮೆ ಮುಸುಡಿನ
ಬೆಳಕು ಕಂದಿತು ಬಹಳ ಚಿಂತಾ
ಜಲಧಿಯೊಳಗದ್ದಂತೆ ಸೊಂಪಡಗಿತು ನಿಜಾಕಾರ
ಕುಲಶಿರೋಮಣಿ ಹೇಳು ಚಿತ್ತದ
ನೆಲೆಯನೆನೆ ನಸುನಾಚಿ ಮದನನ
ಹಿಳುಕು ಸುಮತಿಯ ಸೀಳೆ ಬಳಿಕಿಂತೆಂದನವ ನಗುತ ೪೧
ಬೇರೆ ಬಿನ್ನಹವೇನು ಸತಿಯರ
ನೂರು ಮಡಿ ಚೆಲುವಿನಲಿ ಚಿತ್ತವ
ಸೂರೆಗೊಂಡಿಹಳವಳು ನಿನ್ನೋಲಗದ ಸತಿಯರಲಿ
ಮಾರಿದಳು ಮದನಂಗೆ ಜೀವಿಸ
ಲಾರೆನಾಕೆಯನೊಳಗು ಮಾಡಿಸಿ
ತೋರಿದೊಡೆ ತನ್ನೊಡಲೊಳಸುವಿಂಗಿಹುದು ನಿರ್ವಾಹ ೪೨
ಕೀರ್ತಿಲತೆ ಕುಡಿಯೊಣಗಿತೈ ಮದ
ನಾರ್ತನಾದೈ ಕುಲಕೆ ಕಾಲನ
ಮೂರ್ತಿ ನೀನವತರಿಸಿದೈ ಸಂಹರಿಸಿದೈ ಕುಲವ
ಸ್ಫೂರ್ತಿಗೆಡೆ ಮನುಜರಿಗೆ ರಾವಣ
ನಾರ್ತಿಯಪ್ಪುದು ಅರಿಯಲಾ ಕಡು
ಧೂರ್ತತನಕಂಜುವೆನೆನುತ ನಡುಗಿದಳು ನಳಿನಾಕ್ಷಿ ೪೩
ಬೇಟವೇ ಪರವಧುವಿನಲಿ ಕೈ
ಮಾಟವೇ ಪರವಿತ್ತದಲಿ ತೆಗೆ
ದೋಟವೇ ಕದನದಲಿ ಗುಣವೇ ರಾಜಪುತ್ರರಿಗೆ
ಆಟವಿಕರೊಡನಾಡಿ ಕಲಿತು ವಿ
ರಾಟನನು ಕೊಲಲೆಣಿಸಿದೈ ನಿ
ನ್ನಾಟಕಂಜುವೆನೆನುತ ಮುಖದಿರುಹಿದಳು ತರಲಾಕ್ಷಿ ೪೪
ಅವಳ ಗಂಡರು ಸುರರು ಸುರರಿಗೆ
ನವಗದಾವಂತರವು ಮುಳಿದೊಡೆ
ದಿವಿಜ ದಳಕಿದಿರಾರು ನಮ್ಮನದಾರು ಕಾವವರು
ಅವಳ ತೊಡಕೇ ಬೇಡ ಸತಿಯರ
ನಿವಹದಲಿ ನೀನಾರ ಬಯಸಿದ
ಡವಳ ನಾ ಮುಂದಿಟ್ಟು ಮದುವೆಯನೊಲಿದು ಮಾಡುವೆನು ೪೫
ಅಕ್ಕ ಮರುಳೌ ಚಿತ್ತವವಳಲಿ
ಸಿಕ್ಕಿ ಬೇರ್ವರಿಯಿತ್ತು ಬರಿದೇ
ಮಿಕ್ಕ ಡಿಂಬಕೆ ಮದುವೆಯುಂಟೇ ಮನವ ಬೇರಿರಿಸಿ
ಮಕ್ಕಳಾಟಿಕೆಯಾದಡಾಗಲಿ
ತಕ್ಕರಲ್ಲೆಂದೆನಲಿ ಸಲಹುವ
ಡಕ್ಕ ಸೈರಂಧ್ರಿಯನು ಸೇರಿಸಬೇಕು ತನಗೆಂದ ೪೬
ಸೊಗಸದಿತರರ ಮಾತು ಕಣ್ಣುಗ
ಳೊಗಡಿಸವು ಮಿಕ್ಕವರ ರೂಹನು
ಹಗೆಗಳಾಗಿಹವುಳಿದವರ ನಾಮಗಳು ನಾಲಿಗೆಗೆ
ಸೆಗಳಿಕೆಯ ಸಸಿಯಾದೆನೆನ್ನಯ
ಬಗೆಯ ಸಲಿಸೌ ಹರಿದ ಕರುಳಿನ
ಮೃಗದ ಮರಿಯನು ಸಲಹಬೇಕೆಂದೆರಗಿದನು ಪದಕೆ ೪೭
ಆಲಿ ನೀರೇರಿದವು ತಮ್ಮನ
ಮೇಲೆ ತಳಿತುದು ಮೋಹ ಕಾಲನ
ಪಾಳಯಕೆ ಕೈಗೊಟ್ಟಳಂಗನೆ ನೆಗಹಿದಳು ಖಳನ
ಏಳು ಭವನಕೆ ಹೋಗು ತರುಣಿಯ
ನಾಳೆ ನಾ ಕಳುಹುವೆನು ಪರಸತಿ
ಮೇಳ ಲೇಸಲ್ಲೆನುತ ಬೀಳ್ಕೊಟ್ಟಳು ನಿಜಾನುಜನ ೪೮
ಮನದೊಳಗೆ ಗುಡಿಗಟ್ಟಿದನು ಮಾ
ನಿನಿಯ ಕರುಣಾಪಾಂಗ ರಸಭಾ
ಜನವು ಪುಣ್ಯವಲಾಯೆನುತ ಬೀಳ್ಕೊಂಡನಗ್ರಜೆಯ
ಮನದೊಳೊದವಿದ ಮರುಳುತನದು
ಬ್ಬಿನಲಿ ಹೊಕ್ಕನು ಮನೆಯನಿತ್ತಲು
ದಿನಕರಂಗಾಯಿತ್ತು ಬೀಡಸ್ತಾಚಲಾದ್ರಿಯಲಿ ೪೯
ವರ ದಿಗಂಗನೆಯಿಟ್ಟ ಚಂದನ
ತಿಲಕವೋ ಮನುಮಥನ ರಾಣಿಯ
ಕರದಿಲಿಹ ಕನ್ನಡಿಯೊ ಮದನನ ಬಿರುದಿನೊಡ್ಡಣವೊ
ಸುರತ ವಿರಹಿಯ ಸುಡುವ ಕೆಂಡದ
ಹೊರಳಿಯೋ ಹೇಳೆನಲು ಮಿಗೆ ಹಿಮ
ಕರನು ಜನಿಸಿದ ರಜನಿ ಮಧ್ಯದಳವನಿ ತಳತಳಿಸೆ ೫೦
ಬೆಚ್ಚಿದವು ಚಕ್ರಾಂಕಯುಗ ತಾವ್
ಕಚ್ಚಿದವು ಮರಿದುಂಬಿ ಕುಮುದವ
ಮುಚ್ಚಿದವು ಮುಸುಡುಗಳನಂಬುಜರಾಜಿ ತವತವಗೆ
ಹೆಚ್ಚಿದವು ಸಾಗರದ ತೆರೆಗಳು
ಬೆಚ್ಚಿದರು ಜಾರೆಯರು ಚಂದ್ರಮ
ಕಿಚ್ಚನಿಕ್ಕಿದನಕಟ ಸಕಲ ವಿಯೋಗಜನ ಮನಕೆ ೫೧
ಖಳನ ವಿರಹದ ತಾಪದುರಿ ವೆ
ಗ್ಗಳಿಸೆ ತನ್ನರಮನೆಗೆ ಬಂದನು
ಕಳವಳಿಗ ಹಾಯೆನುತ ಕೆಡೆದನು ತಳಿರ ಹಾಸಿನಲಿ
ನಳಿನವೈರಿಯ ಸುಳಿವು ತನ್ನಯ
ಕೊಲೆಗೆ ಬಂದುದು ಪಾಪಿ ಕಮಲಜ
ಚಲಿತಲೋಚನೆಗೇಕೆ ಮಾಡಿದನಿನಿತು ಚೆಲುವಿಕೆಯ ೫೨
ಹಾಸಿದೆಳೆದಳಿರೊಣಗಿದವು ಹೊಗೆ
ಸೂಸಿದಾ ಸುಯಿಲಿನಲಿ ಮೆಲ್ಲನೆ
ಬೀಸುತಿಹ ಸುಳಿವಾಳೆಯೆಲೆ ಬಾಡಿದವು ಝಳ ಹೊಯ್ದು
ಆ ಸಸಿಯ ಕೋಗಿಲೆಯ ತುಂಬಿಯ
ನಾ ಸರೋಜವ ಮಲ್ಲಿಗೆಯ ಕೈ
ವೀಸಿದನು ಕುಸುಮಾಸ್ತ್ರನೀ ಕೀಚಕನ ಕಗ್ಗೊಲೆಗೆ ೫೩
ಉರಿದುದೊಡಲೊಳು ವೀಳೆಯದ ಕ
ರ್ಪುರದ ಹಳಕುಗಳಮಳ ಗಂಧದ
ಸರಸ ಕರ್ದಮ ಕರಿಕುವರಿದುದು ಪೂಸಿದಂಗದಲಿ
ಹೊರಳೆ ನೀರಿನ ಪೊಟ್ಟಣವು ದ
ಳ್ಳುರಿಯಲಾದುದು ಬಲಿದ ಚಂದ್ರಿಕೆ
ಕರಗಿ ಕಡುಗಿದ ತವರವಾದುದು ಕೀಚಕನ ದೆಸೆಗೆ ೫೪
ಪರಿಮಳದಿ ಸುಳಿವಾಲವಟ್ಟದೊ
ಳಿರದೆ ಪೂಸಿದ ಗಂಧ ಕರ್ಪುರ
ವರರೆ ಸೀದವು ಕೀಚಕನ ಕಾಮಾಗ್ನಿ ತಾಪದಲಿ
ಪರಮ ಪಾತಿವ್ರತೆಗಳುಪಿ ತಾನ್
ಹರಣದಾಸೆಯ ಮರೆದು ಪಾತಕ
ಹೊರಳುತಿರ್ದನು ಚಂದ್ರಕಾಂತದ ಮೇಲು ಮಚ್ಚಿನಲಿ ೫೫
ಅರೆಗಳಿಗೆ ಯುಗವಾಗಿ ನೂಕಿದ
ನಿರುಳನುದಯಾಚಲದ ಶಿರದಲಿ
ತರಣಿ ತಲೆದೋರಿದನು ತೊಡೆದನು ಭುವನದಂಧತೆಯ
ಪರಿಮಳದ ಪಾವುದದಿನಳಿಗಳ
ಕರೆಸಿದವು ತಾವರೆಗಳೆನೆ ಕಾ
ತರ ಲತಾಂಗಿಯ ಸುಯ್ಲು ತಾಗಿತು ಕುಮುದಿನೀಪತಿಗೆ ೫೬
(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)
ಶೀರ್ಷಿಕೆಗಳು
- ೦೦. ಪೀಠಿಕೆ (1)
- ೦೧. ಆದಿಪರ್ವ (3)
- ೦೨. ಸಭಾಪರ್ವ (4)
- ೦೩. ಅರಣ್ಯಪರ್ವ (4)
- ೦೪. ವಿರಾಟಪರ್ವ (10)
- ೦೫. ಉದ್ಯೋಗಪರ್ವ (1)
- ೦೬. ಭೀಷ್ಮಪರ್ವ (2)
- ೦೭. ದ್ರೋಣಪರ್ವ (6)
- ೦೮. ಕರ್ಣಪರ್ವ (5)
- ೦೯. ಶಲ್ಯಪರ್ವ (1)
- ೧೦. ಗದಾಪರ್ವ (3)
Sunday, January 24, 2010
Subscribe to:
Post Comments (Atom)
No comments:
Post a Comment