ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Tuesday, February 23, 2010

ವಿರಾಟಪರ್ವ: ೦೫ ಐದನೆಯ ಸಂಧಿ

ಸೂ: ವೈರಿಭಟ ಸಂವರ್ತನೂತನ
ಭೈರವನು ಕಲಿಪಾರ್ಥ ಸಮರೋ
ದ್ಧಾರ ಸಾರಥಿಯಾದನಂದು ವಿರಾಟನಂದನಗೆ

ಕೇಳು ಜನಮೇಜಯ ಸುಯೋಧನ
ನಾಳು ಮುತ್ತಿತು ತುರುಗಳನು ಮೇ
ಲಾಳು ಕವಿದುದು ಭೀಷ್ಮ ಕರ್ಣ ದ್ರೋಣ ಮೊದಲಾಗಿ
ಕೋಲ ಸೂಟಿಯ ಸರಿವಳೆಗೆ ಗೋ
ಪಾಲ ಪಡೆ ಮುಗ್ಗಿದುದು ಗೋವರ
ಸಾಲ ಹೊಯ್ದರು ಕರ್ಣ ದುಶ್ಶಾಸನ ಜಯದ್ರಥರು ೧

ರಾಯ ಚೂಣಿಯ ಚಾತುರಂಗದ
ನಾಯಕರು ಮೇಳವಿಸಿ ಸಮರೋ
ಪಾಯದಲಿ ಹಿಂದಿಕ್ಕಿ ಕವಿದರು ಕೋಡಕೈಯವರು
ಸಾಯಲಲಸದ ಗೋವರನು ಕೈ
ಗಾಯದೆಸುತವ ಸೆರೆಯ ಕೊಂಡರು
ಮಾಯವಾಯಿತು ಹರಿಬಕಾರರ ಸೇನೆ ರಣದೊಳಗೆ ೨

ಮೇಲುದಳಕಿದಿರಾಗಿ ಬರೆ ಹರಿ
ಗಾಳಗದೊಳೊಡೆಮುರಿದು ಗೋವರು
ಧೂಳಿಗೋಟೆಯಗೊಂಡರಮರರ ರಾಜಧಾನಿಗಳ
ಸಾಲರಿದು ಕೆಟ್ಟೋಡಿದರು ಗೋ
ಪಾಲನೊಬ್ಬನ ಹಿಡಿದು ಮೂಗಿನ
ಮೇಲೆ ಸುಣ್ಣವ ಬರೆದು ಬಿಟ್ಟರು ಹಗೆಯ ಪಟ್ಟಣಕೆ ೩

ಗರುವ ಗೋವರು ಹುಯ್ಯಲಿಗೆ ಹರಿ
ಹರಿದು ಕೆಡೆದರು ರಾಯ ಮೋಹರ
ತೆರಳಿ ತುರುಗಳ ಹಿಡಿದು ಹಿಂದಿಕ್ಕಿದರು ಕಾಳಗಕೆ
ಬಿರುದರನು ಬರಹೇಳು ಹೋಗೆನೆ
ಕರದ ಬಿಲ್ಲನು ಬಿಸುಟು ಬದುಕಿದ
ಶಿರವ ತಡವುತ ಗೋವನೊಬ್ಬನು ಪುರಕೆ ಹರಿತಂದ ೪

ಗಣನೆಯಿಲ್ಲದು ಮತ್ತೆ ಮೇಲಂ
ಕಣದ ಭಾರಣಿ ನೂಕಿತೆಲವೋ
ರಣದ ವಾರ್ತೆಯದೇನೆನುತ ಜನವೆಲ್ಲ ಗಜಬಜಿಸೆ
ರಣವು ಕಿರಿದಲ್ಲೆನುತ ಢಗೆ ಸಂ
ದಣಿಸಲವನೈತಂದು ಮೇಳದ
ಗಣಿಕೆಯರ ಮಧ್ಯದಲಿ ಮೆರೆದಿರೆ ಕಂಡನುತ್ತರನ ೫

ಬೆಗಡು ಮುಸುಕಿದ ಮುಖದ ಭೀತಿಯ
ಢಗೆಯ ಹೊಯ್ಲಿನ ಹೃದಯ ತುದಿ ನಾ
ಲಗೆಯ ತೊದಳಿನ ನುಡಿಯ ಬೆರಗಿನ ಬರತ ತಾಳಿಗೆಯ
ಅಗಿವ ಹುಯ್ಯಲುಗಾರ ಬಹಳೋ
ಲಗಕೆ ಬಂದನು ನೃಪ ವಿರಾಟನ
ಮಗನ ಕಾಲಿಂಗೆರಗಿದನು ದೂರಿದನು ಕಳಕಳವ ೬

ಏಳು ಮನ್ನೆಯ ಗಂಡನಾಗು ನೃ
ಪಾಲ ಕೌರವ ರಾಯ ತುರುಗಳ
ಕೋಳ ಹಿಡಿದನು ಸೇನೆ ಬಂದುದು ಧರಣಿಯಗಲದಲಿ
ದಾಳಿ ಬರುತಿದೆ ಕರೆಸಿಕೋ ನಿ
ನ್ನಾಳು ಕುದುರೆಯ ರಾಣಿವಾಸದ
ಗೂಳೆಯವ ತೆಗೆಸೆಂದು ನುಡಿದನು ಬಿನ್ನಹದ ಬಿರುಬ ೭

ಏನೆಲವೊ ತುದಿ ಮೂಗಿನಲಿ ಬಿಳು
ಪೇನು ಢಗೆ ಹೊಯ್ದೇಕೆ ಬಂದೆಯಿ
ದೇನು ನಿನ್ನಿನ ರಣವನಯ್ಯನು ಗೆಲಿದುದೇನಾಯ್ತು
ಏನು ಭಯ ಬೇಡಿನ್ನು ಕಲಹನಿ
ಧಾನ ವಾರ್ತೆಯದೇನೆನಲು ಕುರು
ಸೇನೆ ಬಂದುದು ತುರುವ ಹಿಡಿದರು ಬಡಗ ದಿಕ್ಕಿನಲಿ ೮

ರಾಯ ತಾನೈತಂದನಾತನ
ನಾಯಕರು ಗುರುಸುತನು ಗುರು ಗಾಂ
ಗೇಯ ಶಕುನಿ ವಿಕರ್ಣ ಕರ್ಣ ಜಯದ್ರಥಾದಿಗಳು
ಜೀಯ ಬಿನ್ನಹ ದಳದ ತೆರಳಿಕೆ
ತಾಯಿಮಳಲಂಬುಧಿಗೆ ಮೋಹರ
ದಾಯತವ ನಾನೆತ್ತು ಬಲ್ಲೆನು ಹೊಕ್ಕು ಹೊಗಳುವರೆ ೯

ಎತ್ತ ದುವ್ವಾಳಿಸುವಡಾಲಿಗ
ಳತ್ತಲಾನೆಯ ಥಟ್ಟು ಕಾಲಾ
ಳೊತ್ತರದ ರಥವಾಜಿ (ಪಾ: ರಣವಾಜಿ) ರೂಢಿಯ ರಾಯ ರಾವುತರು
ಸುತ್ತ ಬಳಸಿಹುದೆತ್ತ ಮನ ಹರಿ
ವತ್ತ ಮೋಹರವಲ್ಲದನ್ಯವ
ಮತ್ತೆ ಕಾಣೆನು ಜೀಯ ಹದನಿದು ವೈರಿ ವಾಹಿನಿಯ ೧೦

ಒಡ್ಡಿದರೊ ಪಡಿನೆಲನನವನಿಯ
ದಡ್ಡಿಯೋ ಮೇಣೆನಲು ಝಲ್ಲರಿ
ಯೊಡ್ಡು ತಳಿತುದು ಚಮರ ಸೀಗುರಿಗಳ ಪತಾಕೆಯಲಿ
ಅಡ್ಡ ಹಾಯ್ದಿನ ಕಿರಣ ಪವನನ
ಖಡ್ಡತನ ನಗೆಯಾಯ್ತು ಕೌರವ
ನೊಡ್ಡನಭಿವರ್ಣಿಸುವಡರಿಯೆನು ಜೀಯ ಕೇಳೆಂದ ೧೧

ಒಳಗೆ ನೀ ಕಾದುವೊಡೆ ದುರ್ಗವ
ಬಲಿಸು ಬವರಕೆ ಹಿಂದುಗಳೆಯದೆ
ನಿಲುವ ಮನ ನಿನಗೀಗಲುಂಟೇ ನಡೆಯಬೇಕೆನಲು
ಕೆಲಬಲನ ನೋಡಿದನು ಮೀಸೆಯ
ನಲುಗಿದನು ತನ್ನಿದಿರ ಮೇಳದ
ಲಲನೆಯರ ಮೊಗ ನೋಡತುತ್ತರ ಬಿರುದ ಕೆದರಿದನು ೧೨

ನೂಕು ಕುನ್ನಿಯನಾಹವದ ಭೀ
ತಾಕುಳನು ತಾನೀಗ ಹೆಂಡಿರ
ಸಾಕಿ ಬದುಕುವ ಲೌಲ್ಯತೆಯಲೊಟ್ಟೈಸಿ ಬಂದೆನೆಗೆ
ಕಾಕ ಬಳಸುವನಿವನು ತಾನು
ದ್ರೇಕಿಸಿಯೆ ಸಮರದಲಿ ನಿಲಲು ಪಿ
ನಾಕಧರನಿಗೆ ನೂಕದೆಂದನು ಸತಿಯರಿದಿರಿನಲಿ ೧೩

ಎನಿತು ಬಲ ಘನವಾದೊಡೇನದು
ನಿನಗೆ ಗಹನವೆ ಜೀಯ ಜಗದಲಿ
ದಿನಪನಿದಿರಲಿ ದಿಟ್ಟತನವೇ ತಮದ ಗಾವಳಿಗೆ
ಬಿನುಗು ರಾಯರ ಬಿಂಕ ಗೋವರ
ಮೊನೆಗೆ ಮೆರೆದೊಡೆ ಸಾಕು ನಿಂದಿರು
ಜನಪ ತೋರಿಸು ಕೈಗುಣವ ಕೌರವನ ಥಟ್ಟಿನಲಿ ೧೪

ಎಂದಡುಬ್ಬರಿಸಿದನು ತಾ ಕಲಿ
ಯೆಂದು ಬಗೆದನು ಮೀಸೆಯನು ಬೆರ
ಳಿಂದ ತಿರುಹುತ ಮುಗುಳುನಗೆ ಹರುಷದಲಿ ಮೈಮರೆದ
ಸಂದಣಿಸಿ ರೋಮಾಂಚ ಕೆಲಬಲ
ದಿಂದುಮುಖಿಯರ ನೋಡಿದನು ನಲ
ವಿಂದ ನುಡಿದನು ತನ್ನ ಪೌರುಷತನದ ಪರಿಣತೆಯ ೧೫

ಅಹುದಹುದು ತಪ್ಪೇನು ಜೂಜಿನ
ಕುಹಕದಲಿ ಪಾಂಡವರ ಸೋಲಿಸಿ
ಮಹಿಯ ಕೊಂಡಂತೆನ್ನ ಕೆಣಕಿದನೇ ಸುಯೋಧನನು
ಸಹಸದಿಂದವೆ ತುರುವ ಮರಳಿಚಿ
ತಹೆನು ಬಳಿಕಾ ಕೌರವನ ನಿ
ರ್ವಹಿಸಲೀವೆನೆ ಸೂರೆಗೊಂಬೆನು ಹಸ್ತಿನಾಪುರವ ೧೬

ಹಿಡಿದು ರಾಜ್ಯವ ಕೊಂಡು ಹೆಂಗುಸ
ಬಡಿದು ಪಾಂಡವ ರಾಯರನು ಹೊರ
ವಡಿಸಿ ಕೊಬ್ಬಿದ ಭುಜಬಲವನೆನ್ನೊಡನೆ ತೋರಿದನೆ
ಬಡ ಯುಧಿಷ್ಠಿರನೆಂದು ಬಗೆದನೆ
ಕಡುಗಿದೊಡೆ ಕೌರವನ ಕೀರ್ತಿಯ
ತೊಡೆವೆನರಿಯನಲಾಯೆನುತ ಸುಕುಮಾರ ಖತಿಗೊಂಡ ೧೭

ತನಗೆ ಬಡ ಪಾಂಡವರ ತೆವರಿದ
ಮನದ ಗರ್ವದ ಕೊಬ್ಬು ಕಾಲನ
ಮನೆಯನಾಳ್ವಿಪುದಲ್ಲದಿದ್ದೊಡೆ ತನ್ನ ವೈರವನು
ನೆನೆದು ದುರ್ಯೋಧನನು ತಾ ಮೇ
ದಿನಿಯನಾಳ್ವನೆ ಹಾ ಮಹಾ ದೇ
ವೆನತಲುತ್ತರ ಬಿರುದ ನುಡಿದನು ಹೆಂಗಳಿದಿರಿನಲಿ ೧೮

ಜವನ ಮೀಸೆಯ ಮುರಿದನೋ ಭೈ
ರವನ ದಾಡೆಯನಲುಗಿದನೊ ಮೃ
ತ್ಯುವಿನ ಮೇಲುದ ಸೆಳೆದನೋ ಕೇಸರಿಯ ಕೆಣಕಿದನೊ
ಬವರವನು ತೊಡಗಿದನಲಾ ಕೌ
ರವನಕಟ ಮರುಳಾದನೆಂದಾ
ಯುವತಿಯರ ಮೊಗ ನೋಡುತುತ್ತರ ಬಿರುದ ಕೆದರಿದನು ೧೯

ಆರೊಡನೆ ಕಾದುವೆನು ಕೆಲಬರು
ಹಾರುವರು ಕೆಲರಂತಕನ ನೆರೆ
ಯೂರವರು ಕೆಲರಧಮ ಕುಲದಲಿ ಸಂದು ಬಂದವರು
ವೀರರೆಂಬವರಿವರು ಮೇಲಿ
ನ್ನಾರ ಹೆಸರುಂಟವರೊಳೆಂದು ಕು
ಮಾರ ನೆಣಗೊಬ್ಬಿನಲಿ ನುಡಿದನು ಹೆಂಗಳಿದುರಿನಲಿ ೨೦

ಪೊಡವಿಪತಿಗಳು ಬಂದು ತುರುಗಳ
ಹಿಡಿವರೇ ಲೋಕದಲಿ ಅಧಮರ
ಬಡಮನದ ಮನ್ನೆಯರ ಮೈಸಿರಿ ಕೌರವನೊಳಾಯ್ತು
ಕಡೆಗೆ ದುರಿಯತವುಳಿವುದಲ್ಲದೆ
ಬಿಡುವೆನೇ ಗೋಧನವನೆನ್ನೊಳು
ತೊಡಕಿ ಬದಕುವನಾವನೆಂದನು ಖಂಡೆಯವ ಜಡಿದು ೨೧

ಖಳನ ಮುರಿವೆನು ಹಸ್ತಿನಾಪುರ
ದೊಳಗೆ ಠಾಣಾಂತರವನಿಕ್ಕುವೆ
ತೊಲಗಿಸುವೆ ಕೌರವನ ಸೇನೆಯ ಧೂಳಿಪಟ ಮಾಡಿ
ಗೆಲವ ತಹೆನೆಂದುತ್ತರನು ಕೋ
ಮಲೆಯರಿದಿರಲಿ ಬಾಯ್ಗೆ ಬಂದುದ
ಗಳಹುತಿದ್ದನು ಬೇಕು ಬೇಡೆಂಬವರ ನಾ ಕಾಣೆ ೨೨

ಅರಿಯನೇ ಗಾಂಗೇಯನನು ತಾ
ನರಿಯದವನೇ ದ್ರೋಣ ಕುಲದಲಿ
ಕೊರತೆಯೆನಿಸುವ ಕರ್ಣನೆಂಬವನೆನಗೆ ಸಮಬಲನೆ
ಬರಿಯ ಬಯಲಾಡಂಬರದಿ ಬರಿ
ತುರುವ ಹಿಡಿದೊಡೆ ತನ್ನ ಹೆಂಡಿರ
ಸೆರೆಯ ತಾರದೆ ಮಾಣೆನೆಂದನು ನಾರಿಯರ ಮುಂದೆ ೨೩

ನುಡಿದು ಫಲವೇನಿನ್ನು ಸಾರಥಿ
ಮಡಿದ ನಿನ್ನಿನ ಬವರದಲಿ ತಾ
ನುಡುಹನಾದೆನು ಶಿವ ಶಿವಾಯಿಂದೆನ್ನ ಕೈ ಮನಕೆ
ಗಡಣಿಸುವ ಸಾರಥಿಯನೊಬ್ಬನ
ಪಡೆದನಾದೊಡೆ ಕೌರವೇಂದ್ರನ
ಪಡೆಗೆ ಹಬ್ಬವ ಮಾಡುವೆನು ತೋರುವೆನು ಕೈಗುಣವ ೨೪

ಸಾರಥಿಯ ಶಿವ ಕೊಟ್ಟನಾದೊಡೆ
ಮಾರಿಗುಬ್ಬಸವಾಗದಂತಕ
ನೂರು ತುಂಬದೆ ದೊಳ್ಳು ನೂಕದೆ ರಣಪಿಶಾಚರಿಗೆ
ದೋರೆಗರುಳಲಿ ದಾನವಿಯರೊಡ
ಲೇರು ಹತ್ತದೆ ಹಬ್ಬವಾಗದೆ
ಭೂರಿ ಬೇತಾಳರಿಗೆ ಹೋಹುದೆ ಬರಿದೆ ರಣವೆಂದ ೨೫

ಕೇಳಿದನು ಕಲಿಪಾರ್ಥನೀತನ
ಬಾಲ ಭಾಷೆಗಳೆಲ್ಲವನು ಪಾಂ
ಚಾಲೆಗೆಕ್ಕಟಿ ನುಡಿದ ನಾವಿನ್ನಿಹುದು ಮತವಲ್ಲ
ಕಾಲ ಸವೆದುದು ನಮ್ಮ ರಾಜ್ಯದ
ಮೇಲೆ ನಿಲುಕಲು ಬೇಕು ಕೌರವ
ರಾಳು ನಮಗೋಸುಗವೆ ಬಂದುದು ಕಾಂತೆ ಕೇಳೆಂದ ೨೬

ನರನ ಸಾರಥಿಯೆಂದು ನೀನು
ತ್ತರೆಗೆ ಸೂಚಿಸಿ ತನ್ನನೀಗಳೆ
ಕರೆಸೆನಲು ಕೈಕೊಂಡು ದುರುಪದಿ ಬಂದಳೊಲವಿನಲಿ
ತರುಣಿ ಕೇಳರ್ಜುನನ ಸಾರಥಿ
ವರ ಬೃಹನ್ನಳೆ ಖಾಂಡವಾಗ್ನಿಯ
ಹೊರೆದನಿವ ತಾನೆಂದು ಸತಿಯುತ್ತರೆಗೆ ಹೇಳಿದಳು ೨೭

ಕೇಳಿ ಹರುಷಿತೆಯಾದಳುತ್ತರೆ
ಯೋಲಗಕೆ ಬಂದಣ್ಣನಂಘ್ರಿಗೆ
ಲೋಲಲೋಚನೆಯೆರಗಿ ಕೈಮುಗಿದೆಂದಳೀ ಹದನ
ಕೇಳಿದೆನು ಸಾರಥಿಯ ನೆಲೆಯನು
ಕಾಳಗಕೆ ನಡೆಯಣ್ಣ ದೇವ ನೃ
ಪಾಲಕರ ಜಯಿಸೆಂದಡುತ್ತರ ನಗುತ ಬೆಸಗೊಂಡ ೨೮

ತಂಗಿ ಹೇಳೌ ತಾಯೆ ನಿನಗೀ
ಸಂಗತಿಯನಾರೆಂದರಾವವ
ನಂಗವಣೆಯುಳ್ಳವನೆ ಸಾರಥಿತನದ ಕೈಮೆಯಲಿ
ಮಂಗಳವಲೇ ಬಳಿಕ ರಣದೊಳ
ಭಂಗನಹೆ ನಿನ್ನಾಣೆ ತನ್ನಯ
ತುಂಗ ವಿಕ್ರಮತನವನುಳುಹಿದೆ ಹೇಳು ಹೇಳೆಂದ ೨೯

ಎಂದಳೀ ಸೈರೇಂಧ್ರಿ ಸುರಪನ
ನಂದನವ ಸುಡುವಂದು ಪಾರ್ಥನ
ಮುಂದೆ ಸಾರಥಿಯಾದ ಗಡ ನಾವರಿಯೆವೀ ಹದನ
ಹಿಂದುಗಳೆಯದೆ ಕರೆಸು ನಮ್ಮ ಬೃ
ಹನ್ನಳೆಯನೆನೆ ನಗುತ ಲೇಸಾ
ಯ್ತೆಂದು ಪರಮೋತ್ಸಾಹದಲಿ ಸೈರೇಂಧ್ರಿಗಿಂತೆಂದ ೩೦

ಸಾರಥಿಯ ಕೊಟ್ಟೆನ್ನನುಳುಹಿದೆ
ವಾರಿಜಾನನೆ ಲೇಸು ಮಾಡಿದೆ
ಕೌರವನ ತನಿಗರುಳ ಬಗೆವೆನು ತಡವ ಮಾಡಿಸದೆ
ನಾರಿ ನೀನೇ ಹೋಗಿ ಪಾರ್ಥನ
ಸಾರಥಿಯ ತಾಯೆನಲು ನಮ್ಮನು
ವೀರ ಬಗೆಯನು ನಿಮ್ಮ ತಂಗಿಯ ಕಳುಹಿ ಕರೆಸುವದು ೩೧

ತಾಯೆ ನೀನೇ ಹೋಗಿ ಸೂತನ
ತಾಯೆನಲು ಕೈಕೊಂಡು ಕಮಲದ
ಳಾಯತಾಕ್ಷಿ ಮನೋಭವನ ಮರಿಯಾನೆಯಂದದಲಿ
ರಾಯಕುವರಿ ನವಾಯಿ ಗತಿ ಗರು
ವಾಯಿಯಲಿ ಬರೆ ವಿಟರ ಕರಣದ
ಲಾಯ ತೊಡಕಿತು ತೆಗೆದಳಂಗನೆ ಜನರ ಕಣ್ಮನವ ೩೨

ಐದು ಶರವೇಕೊಂದು ಬಾಣವಿ
ದೈದದೇಯಿನ್ನಮಮ ಕಾಮನ
ಕೈದುಗಾರತನಕ್ಕೆ ಕೋಡದೆ ಕೊಂಕದಿಹರಾರು
ಒಯ್ದುಕೊಳ್ಳನೆ ಮುನಿಮನವನಡ
ಹಾಯ್ದು ಹಿಡಿಯನೆ ಹಿರಿಯರನು ವಿಧಿ
ಕೊಯ್ದನಕಟಾ ಕೊರಳನೆಂದುದು ನಗುತ ವಿಟನಿಕರ ೩೩

ಅರಳುಗಂಗಳ ಬೆಳಗು ಹೊಯ್ದ
ಬ್ಬರಿಸೆ ಚಿತ್ತದ ತಿಮಿರ ಹೆಚ್ಚಿತು
ಕುರುಳ ಕಾಳಿಕೆಯಿಂದ ಮುಖ ಬಿಳುಪೇರಿ ವಿಟಜನದ
ಸರಸತರ ಲಾವಣ್ಯ ರಸದಿಂ
ದುರಿ ಮಸಗೆ ಜನ ಹೃದಯದಲಿ ಮೈ
ಪರಿಮಳದ ಪಸರದಲಿ ಪದ್ಮಿನಿ ಬಂದಳೊಲವಿನಲಿ ೩೪

ನಡೆ ನಡೆಯ ಬಂಧಿಸಿತು ನೋಟವ
ನುಡುಗಿಸಿತು ಕುಡಿನೋಟ ಸಖಿಯರ
ನುಡಿ ಸಮೇಳದ ಮಾತು ಮನುಜರ ಮಾತ ಮಾಣಿಸಿತು
ಕೆಡಿಸಿತಧರದ ರಾಗ ರಾಗವ
ಬಡತನವ ಹೆಚ್ಚಿಸಿತು ನಡುವಿನ
ಬಡತನವು ವಿಟಜನಕೆನಲು ನಡೆತಂದಳಿಂದುಮುಖಿ ೩೫

ಕುರುಳ ತಿದ್ದುತ ಮೊಲೆಗೆ ಮೇಲುದ
ಸರಿವುತೇಕಾವಳಿಯ ಮೆಲ್ಲನೆ
ತಿರುಪಿ ಹಾಯ್ಕುತ ಬಿಡುಮುಡಿಯನೆಡಗೈಯೊಳೊಂದಿಸುತ
ವರ ನಿಖಾರಿಯ ನಿರಿಯ ರಭಸದ
ಚರಣದಂದುಗೆ ದನಿಯ ಗಮನದ
ಭರದಿ ಕಿರುಬೆಮರಿಡುತ ನಡೆತರುತಿರ್ದಳಿಂದುಮುಖಿ ೩೬

ಬರವ ಕಂಡನು ಪಾರ್ಥನೇನು
ತ್ತರೆ ಕುಮಾರಿ ಕಠೋರ ಗತಿಯಲಿ
ಬರವು ಭಾರಿಯ ಕಾರಿಯವ ಸೂಚಿಸುವುದೆನೆ ನಗುತ
ಬರವು ಬೇರಿಲ್ಲೆನ್ನ ಮಾತನು
ಹುರುಳುಗೆಡಿಸದೆ ಸಲಿಸುವೊಡೆ ನಿಮ
ಗರುಹಿದಪೆನೆನೆ ಮೀರಬಲ್ಲೆನೆ ಮಗಳೆ ಹೇಳೆಂದ ೩೭

ಪುರಕೆ ಹಾಯ್ದರು ಹಸ್ತಿನಾಪುರ
ದರಸುಗಳು ಹೊಲನೊಳಗೆ ಶತ ಸಾ
ವಿರದ ತುರುಗಳ ಹಿಡಿದರಳಿದುದು ಗೋಪ ಪಡೆ ಕಾದಿ
ಮರಳಿಚುವೊಡೆಮ್ಮಣ್ಣ ದೇವನ
ಧುರಕೆ ಸಾರಥಿಯಿಲ್ಲ ನೀವಾ
ನರನ ಸಾರಥಿಯೆಂದು ಕೇಳಿದೆವೆಂದಳಿಂದುಮುಖಿ ೩೮

ಇನ್ನು ನೀವೇ ಬಲ್ಲಿರೆನೆ ನಡೆ
ನಿನ್ನ ಮಾತನು ಮೀರಬಲ್ಲೆನೆ
ಮುನ್ನ ಸಾರಥಿಯಹೆನು ನೋಡುವೆನೆನುತ ವಹಿಲದಲಿ
ಬೆನ್ನಲಬಲೆಯನೈದಲಾ ಸಂ
ಪನ್ನ ಬಲನೋಲಗಕೆ ಬರೆ ಹರು
ಷೋನ್ನತಿಯಲುತ್ತರ ಕುಮಾರನು ಕರೆದು ಮನ್ನಿಸಿದ ೩೯

ಎಲೆ ಬೃಹನ್ನಳೆ ತೆತ್ತುದೆನಗ
ಗ್ಗಳೆಯರೊಳು ವಿಗ್ರಹವು ಸಾರಥಿ
ಯಳಿದನೆನ್ನವ ನೀನು ಸಾರಥಿಯಾಗಿ ಸಮರದಲಿ
ಉಳುಹ ಬೇಹುದು ನೀ ಸಮರ್ಥನು
ಫಲುಗುಣನ ಸಾರಥಿಯಲೈ ನೀ
ನೊಲಿದು ಮೆಚ್ಚಲು ಕಾದಿ ತೋರುವೆನಹಿತ ಸೇನೆಯಲಿ ೪೦

ಭರತ ವಿದ್ಯಾ ವಿಷಯದಲಿ ಪರಿ
ಚರಿಯತನ ನಮಗಲ್ಲದೀ ಸಂ
ಗರದ ಸಾರಥಿತನವ ಮರೆದೆವು ಹಲವು ಕಾಲದಲಿ
ಅರಿಭಟರು ಭೀಷ್ಮಾದಿಗಳು ನಿಲ
ಲರಿದು ಸಾರಥಿತನದ ಕೈ ಮನ
ಬರಡರಿಗೆ ದೊರಕೊಂಬುದೇ ರಣ ಸೂರೆಯಲ್ಲೆಂದ ೪೧

ಆನಿರಲು ಭೀಷ್ಮಾದಿಗಳು ನಿನ
ಗೇನು ಮಾಡಲು ಬಲ್ಲರಳುಕದೆ
ನೀನು ನಿಲು ಸಾಕೊಂದು ನಿಮಿಷಕೆ ಗೆಲುವೆನವರುಗಳ
ತಾನದಾರೆಂದರಿಯಲಾ ಗುರು
ಸೂನು ಕರ್ಣ ದ್ರೋಣರೆಂಬವ
ರಾನರಿಯದವರಲ್ಲ ಸಾರಥಿಯಾಗು ಸಾಕೆಂದ ೪೨

ವೀರನಹೆ ಬಳಿಕೇನು ರಾಜ ಕು
ಮಾರನಿರಿವೊಡೆ ಹರೆಯವಲ್ಲಾ
ಸಾರಥಿತ್ವವ ಮಾಡಿ ನೋಡುವೆ ರಥವ ತರಿಸೆನಲು
ವಾರುವದ ಮಂದಿರದಲಾಯಿದು
ಚಾರು ತುರಗಾವಳಿಯ ಬಿಗಿದನು
ತೇರ ಸಂವರಿಸಿದನು ರಥವೇರಿದನು ಕಲಿಪಾರ್ಥ ೪೩

ಮಂಗಳಾರತಿಯೆತ್ತಿದರು ನಿಖಿ
ಳಾಂಗನೆಯರುತ್ತರಗೆ ನಿಜ ಸ
ರ್ವಾಂಗ ಶೃಂಗಾರದಲಿ ಹೊಳೆವುತ ಬಂದು ರಥವೇರಿ
ಹೊಂಗೆಲಸಮಯ ಕವಚವನು ಪಾ
ರ್ಥಂಗೆ ಕೊಟ್ಟನು ಜೋಡು ಸೀಸಕ
ದಂಗಿಗಳನಳವಡಿಸಿ ರಾಜಕುಮಾರನನುವಾದ ೪೪

ನರನು ತಲೆ ಕೆಳಗಾಗಿ ಕವಚವ
ಸರಿವುತಿರೆ ಘೊಳ್ಳೆಂದು ಕೈ ಹೊ
ಯ್ದರಸಿಯರು ನಗೆ ನಾಚಿದಂತಿರೆ ಪಾರ್ಥ ತಲೆವಾಗಿ
ತಿರುಗಿ ಮೇಲ್ಮುಖವಾಗಿ ತೊಡಲು
ತ್ತರೆ ಬಳಿಕ ನಸುನಗಲು ಸಾರಥಿ
ಯರಿಯ ತಪ್ಪೇನೆನುತಲುತ್ತರ ತಾನೆ ತೊಡಿಸಿದನು ೪೫

ಕವಚವನು ತೊಡಲರಿಯದವನಾ
ಹವಕೆ ಸಾರಥಿತನವ ಮಾಡುವ
ಹವಣು ತಾನೆಂತೆನುತಲಿದ್ದರು ನಿಖಿಳ ನಾರಿಯರು
ಬವರವನು ನಮ್ಮಣ್ಣ ಗೆಲಿದಪ
ನವರ ಮಣಿ ಪರಿಧಾನವಾಭರ
ಣವನು ಸಾರಥಿ ಕೊಂಡು ಬಾಯೆಂದಳು ಸರೋಜಮುಖಿ ೪೬

ನಸುನಗುತ ಕೈಕೊಂಡನರ್ಜುನ
ನೆಸಗಿದನು ರಥವನು ಸಮೀರನ
ಮಿಸುಕಲೀಯದೆ ಮುಂದೆ ಮಿಕ್ಕವು ವಿಗಡ ವಾಜಿಗಳು
ಹೊಸ ಪರಿಯ ಸಾರಥಿಯಲಾ ನಮ
ಗಸದಳವು ಸಂಗಾತ ಬರಲೆಂ
ದುಸುರದುಳಿದುದು ಹಿಂದೆ ಪುರದಲಿ ಚಾತುರಂಗ ಬಲ ೪೭

ಗತಿಗೆ ಕುಣಿದವು ನಾಸಿಕದ ಹುಂ
ಕೃತಿಯ ಪವನನ ಹಳಿವ ಲುಳಿಯಲಿ
ಗತಿಯ ಸಂಚಿತ ಪಂಚಧಾರಾ ಪ್ರೌಢ ವಾಜಿಗಳು
ವಿತತ ರಥ ಪದದಳಿತ ವಸುಧೋ
ತ್ಪತಿತ ಧೂಳೀಪಟಲ ಪರಿ ಚುಂ
ಬಿತ ದಿಶಾಮುಖನೈದಿದನು ಕುರುರಾಯ ಮೋಹರವ ೪೮

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)

No comments: