ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Tuesday, February 2, 2010

ಭೀಷ್ಮಪರ್ವ: ೦೨. ಎರಡನೆಯ ಸಂಧಿ

ಸೂ: ಸಾಮದಲಿ ಪರಬಲದ ಸುಭಟ
ಸ್ತೋಮವನು ತನ್ನೊಳಗು ಮಾಡಿಯೆ
ಭೂಮಿಪತಿ ಯಮನಂದನನು ಸಂಗ್ರಾಮಕನುವಾದ

ಕೇಳು ಜನಮೇಜಯ ಧರಿತ್ರೀ
ಪಾಲ ಧೃಷ್ಟದ್ಯುಮ್ನ ಭೀಷ್ಮರ
ಪಾಳಯದೊಳಂದಮಮ ಕೈಗೈದಿಳೆಗೆ ಹೊಸತೆನಿಸಿ
ಕಾಳೆಗಕ್ಕುನುವಾಗಿ ರಥತುರ
ಗಾಳಿ ಕರಿ ಕಾಲಾಳು ದೊರೆಗಳ
ಮೇಲುಗೈಚಮರಿಗಳನೀಕ್ಷಿಸುತಿದ್ದುದುಭಯಬಲ ೧

ಮಡದ ಸೋಂಕಿಂ ಮುನ್ನ ಗಗನವ
ತುಡುಕ ಬಗೆದವು ತೇಜಿಗಳು ನಸು
ಸಡಿಲಬಿಡೆ ವಾಘೆಯಲಿ ಚಿಗಿದವು ರಥದ ವಾಜಿಗಳು
ತುಡುಕುವಂಕುಶದಿಂದ ಮುನ್ನಿಳೆ
ಯೊಡೆಯ ಗಜ ಗಾಢಿಸಿದವರಸರ
ಬಿಡುಹು ತಡೆದೆಡಗಲಸಬಗೆದುವು ವಿಗಡ ಪಾಯದಳ ೨

ಗಜದ ಬಲುಗರ್ಜನೆಯ ವಾಜಿ
ವ್ರಜದ ಹೇಷಿತರವದ ತೇರಿನ
ಗಜಬಜದ ಕಾಲಾಳು ಕಡುಹಿನ ಬೊಬ್ಬೆಯಬ್ಬರದ
ಗಜರುವಗ್ಗದ ಬೊಗ್ಗುಗಳ ದಿ
ಗ್ವ್ರಜವ ನುಡಿಸುವ ರಾಯಗಿಡಿಗನ
ವಿಜಯಬಲ ತೊಡರಿಕ್ಕಿತೈ ಕಲ್ಪಾಂತ ಸಾಗರಕೆ ೩

ತಿಗಡಲೊದರುವ ಹರಿಗೆಗಳ ಗೌ
ರಗಿವ ಹೆಗ್ಗಹಳೆಗಳ ಹೊನ್ನಾ
ಯುಗದ ಖಡುಗದ ಗಜರು ಡೊಂಕಣಿಗಳ ಝಣತ್ಕೃತಿಯ
ಬಿಗಿದ ಬಿಲು ಬೊಬ್ಬೆಗಳ ಬಿರುದರ
ವಿಗಡ ಮೂದಲೆಗಳ ಮಹಾಧ್ವನಿ
ಬಿಗಿದುದೈ ತಾವರೆಯ ತನಯನ ಕರ್ಣ ಕೋಟರವ ೪

ಕುಣಿವ ಕುದುರೆಯ ಮದದ ಬಲುಭಾ
ರಣೆಯಲೊಲೆವಾನೆಗಳ ತುರಗವ
ಕೆಣಕಿ ಸರಳಿಸಿ ಹಿಡಿವ ತೇರಿನ ಸೂತರೋಜೆಗಳ
ಅಣೆವ ಹರಿಗೆಯನೊಬ್ಬನೊಬ್ಬರ
ನಣಸಿನಲಿ ತಿವಿದಗಿವ ಭಟರೊ
ಡ್ಡಣೆ ಸಘಾಡಿಸಿತೆರಡುಬಲದಲಿ ಭೂಪ ಕೇಳೆಂದ ೫

ಝಳಪದಲಿ ಬೊಬ್ಬಿಡುವಡಾಯುಧ
ಹೊಳವುಗಳ ಡೊಂಕಣಿಯ ತಳಪದ
ಬೆಳಗುಗಳ ಬಟ್ಟೇರ ಧಾರೆಯ ಬಳ್ಳಿಮಿಂಚುಗಳ
ಅಲಗಿನುಬ್ಬರಗಿಡಿಯ ಹಬ್ಬುಗೆ
ಥಳಥಳಿಸಿ ಸೈಗರೆದುದೈ ಹೆ
ಬ್ಬಲ ದಿವಾಕರಶತವನೆನೆ ಹೆಸರಿಡುವನಾರೆಂದ ೬

ಕೇಳು ಜನಮೇಜಯ ಧರಿತ್ರೀ
ಪಾಲ ಭೀಷ್ಮನ ಹೊರೆಗೆ ಕುರುಭೂ
ಪಾಲ ಬಂದನು ಬಿನ್ನವಿಸಿದನು ಮುಕುಳಕರನಾಗಿ
ಮೇಳದಲಿ ಮಂಡಳಿಸಿದರಿನೃಪ
ಜಾಲದಲಿ ಯಮಸೂನುವಾವನು
ಮೇಲೆ ಭೀಮಾರ್ಜುನರ ವಿವರಿಸಿ ತೋರಬೇಕೆಂದ ೭

ನಸುನಗೆಯ ಚೂಣಿಯಲಿ ವದನದ
ರಸುಮೆ ಝಳಪಿಸೆ ಕೌರವೇಂದ್ರಂ
ಗುಸುರಿದನು ಕಲಿಭೀಷ್ಮನವಧರಿಸೈ ಮಹೀಪತಿಯೆ
ಪಸರಿಸಿದ ಮುಗಿಲೊಡ್ಡಿನಲಿ ಮಿಂ
ಚೆಸವವೊಲು ಗಜದಳದ ಮಧ್ಯದೊ
ಳೆಸೆವನಾತನು ವೀರಧೃಷ್ಟದ್ಯುಮ್ನ ನೋಡೆಂದ ೮

ಇವ ಕಣಾ ಪಾಂಡವರ ಸೇನಾ
ರ್ಣವಕೆ ನಾಯಕನಿವನ ಕೆಲಬಲ
ದವರು ತೆಕ್ಕೆಯ ತೇರ ತೇಜಿಯ ಥಟ್ಟಿನುನ್ನತಿಯ
ಬವರಿಗರು ಪಾಂಚಾಲಕುಲ ಸಂ
ಭವರು ದ್ರುಪದ ಸಹೋದರರು ಮ
ತ್ತಿವರು ಸೃಂಜಯ ವರ ಯುಧಾಮನ್ಯೂತ್ತಮೌಂಜಸರು ೯

ಡೊಂಕಣಿಯ ಹೊದರುಗಳಲೆಡಬಲ
ವಂಕದಾನೆಯ ಥಟ್ಟುಗಳ ನಿ
ಶ್ಶಂಕಮಲ್ಲನು ದ್ರುಪದನೀತ ವಿರಾಟನೃಪನೀತ
ಮುಂಕುಡಿಯ ನಾಯಕರಿವರು ಪತಿ
ಯಂಕಕಾರರು ಇವರ ಬಳಿಯಲಿ
ಬಿಂಕದೆರಡಕ್ಷೋಣಿ ಬಲವದೆ ರಾಯ ನೋಡೆಂದ ೧೦

ಅವರ ಮೋಹರದಾಚೆಯಲಿ ನಿಂ
ತವರು ಕೊಂತೀಭೋಜ ಕೇಕಯ
ರವರ ಬಳಿಯಲಿ ತಳಿತುದೆರಡಕ್ಷೋಹಿಣೀ ಸೇನೆ
ಅವರ ಹತ್ತಿರೆ ಮೋಹರಿಸಿ ನಿಂ
ದವರು ಪಾಂಡ್ಯ ಶಿಖಂಡಿ ಸೋಮಕ
ರವರ ಮೋಹರದೊಳಗೆ ನೋಡಕ್ಷೋಹಿಣೀ ಸೇನೆ ೧೧

ಅರೆನೆಲೆಯ ದಳದತ್ತ ದೃಷ್ಟಿಯ
ಹರಿಯಬಿಡು ನೋಡಲ್ಲಿ ಕೌಂತೇ
ಯರ ಕುಮಾರರನಮಲ ಪಂಚ ದ್ರೌಪದೀಸುತರ
ಉರಿಯ ಕರುವಿಟ್ಟಂತೆ ವಿಲಯದ
ಹರನ ಖತಿ ಹೊಗೆವಂತೆ ಸಿಡಿಲಿನ
ಹೊರಳಿ ಹೊದರೆದ್ದಂತೆ ನಿಂದವನವ ಘಟೋತ್ಕಚನು ೧೨

ಭೀಮಸೇನನ ಮಗನವನು ಸಂ
ಗ್ರಾಮ ಚಾಪಟನವನ ಬಳಿಯಲಿ
ತಾಮಸದ ಬಲುಮೊಗದ ಹೊಗರಿನ ಹೊಳೆವ ದಾಡೆಗಳ
ಕಾಮರೂಪಿಗಳೊಂದು ಕೋಟಿ ಸ
ನಾಮದೈತ್ಯರು ಕುಂಭಕರ್ಣ
ಸ್ತೋಮವೆನಲದೆ ಲಯಕೃತಾಂತನ ಕ್ರೂರ ಪರಿವಾರ ೧೩

ಅವರ ಹೊರೆಯಲಿ ಫಲುಗುಣಗೆ ಮಲೆ
ವವರ ಗಂಡನು ರಿಪುಕುಮಾರಕ
ನಿವಹ ಕಾಳಾನಳನು ನೋಡಭಿಮನ್ಯುವರ್ಜುನನ
ಕುವರನಿವ ಮಗುವಲ್ಲ ಬಲುಗೆ
ಯ್ಯವನ ಮೋಹರದೊತ್ತಿನಲಿ ನಿಂ
ದವರು ಸಾತ್ಯಕಿ ಚೇಕಿತಾನ ಪ್ರಮುಖ ನಾಯಕರು ೧೪

ಅವರೊಳೊಂದಕ್ಷೋಹಿಣಿಯು (ಪಾ: ಯದು) ಮಾ
ಧವನ ಮನೆಯದು ಧೃಷ್ಟಕೇತು
ಪ್ರವರನಾತನು ಚೈದ್ಯನಂದನನವರ ಕಂಡಿಹನು
ಅವರ ಹೊರೆಯಲಿ ವೀರ ಸೇನಾ
ನಿವಹದೊಳು ಸಹದೇವನಾತನ
ಸವಹರೆಯ ನಕುಲಾಂಕನಿವರಾಹವ ಧುರಂಧರರು ೧೫

ಇತ್ತಲಿದು ಕಲ್ಪಾಂತರುದ್ರನ
ಮೊತ್ತ ಕಾಳೋಗರನ ಜಂಗುಳಿ
ಮತ್ಯುವಿನ ಮೋಹರ ಕೃತಾಂತನ ಥಟ್ಟು ಭೈರವನ
ತೆತ್ತಿಗರ ದಾವಣಿಯೊಳಣ್ಣನ
ಮತ್ತವಾರಣ ಭೀಮಸೇನನ
ನಿತ್ತ ನೋಡೈ ಮಗನೆ ಕುರುಕುಲ ಕೇಣಿಕಾರನನು ೧೬

ಕೆಲದಲಾ ತರುವಾಯಲಾಹವ
ದಳಲಿಗರ ಮೇಳದಲಿ ಮುಕುಟದ
ಲಲಿತರತ್ನ ಪ್ರಭೆಯ ಲಹರಿಯ ಲಾವಣಿಗೆ ಮಿಗಲು
ಚಲತುರಂಗದ ಭಾರಿಯಾನೆಯ
ದಳದ ರಥದ ಪದಾತಿಮಧ್ಯದ
ಹೊಳಹಿನಲಿ ನಿಂದಾತನಾತ ಮಹೀಶ ಧರ್ಮಜನು ೧೭

ಆತನೆಡವಂಕದಲಿ ಹನುಮನ
ಕೇತನದ ಗರುವಾಯಿಯಲಿ ನವ
ಶಾಂತಕುಂಭವರೂಥದಲಿ ನೆರೆ ತೀವಿದಸ್ತ್ರದಲಿ
ನೂತನಾಶ್ವ ನಿಕಾಯ ಖುರಪುಟ
ಧೂತಧೂಳೀಪಟಲವಿಹಿತ ನಿ
ಶಾತಘನ ಜಯಯುವತಿವಿಟನರ್ಜುನನ ನೋಡೆಂದ ೧೮

ತಿಳಿಯಲೊಬ್ಬನ ರೋಮರೋಮದ
ಕುಳಿಯೊಳಗೆ ಬ್ರಹ್ಮಾಂಡಕೋಟಿಯ
ಸುಳಿವು ಗಡ ಶ್ರುತಿನಿಕರವೊರಲಿದರೊಳಗುದೋರ ಗಡ
ಹಲವು ಮಾತೇನಾತನೀತನ
ಬಳಿಯ ಬಂಡಿಯ ಬೋವನಾಗಿಯೆ
ಸುಳಿವನಾತನ ನೋಡು ಮಗನೇ ವೀರನರಯಣನ ೧೯

ಅದೆ ದುರಂತದ ದುರುಳ ದೊದ್ದೆಯ
ಹದನ ಬಣ್ಣಿಸಲೆನಗೆ ನೂಕದು
ತುದಿಯಲರಿವೆನು ದಳದ ಮನ್ನೆಯ ಮಂಡಲೀಕರಲಿ
ಕದನವಿದು ಭಾರಂಕವಾರ
ಭ್ಯುದಯ ತಲೆದೋರುವುದೊ ನಮಗೇ
ಕಿದರ ಚಿಂತೆ ಮುರಾರಿ ಬಲ್ಲನು ಕಂದ ಕೇಳೆಂದ ೨೦

ಅವರೊಳೇಳಕಕ್ಷೋಣಿಬಲ ನ
ಮ್ಮವರೊಳಗೆ ಹನ್ನೊಂದು ಮತ್ತವ
ರಿವರ ಸಖ್ಯಕೆ ನೆರೆದುದೇಕಾದಶಶತಕ್ಷೋಣಿ
ತವಿಸುವರೆ ನನಗೊಂದು ದಿನ ಮೂ
ದಿವಸದಲಿ ಗುರುವೈದು ದಿವಸಕೆ
ರವಿಜ ನಿಮಿಷಕೆ ದ್ರೌಣಿ ನಿಮಿಷಾರ್ಧಕೆ ಧನಂಜಯನು ೨೧

ಎನಲು ಗುರುತನಯನ ಸಘಾಟಕೆ
ಕೊನರಿತಾತನ ಮನವಜಾಂಡಕೆ
ತನುಪುಲಕದುಬ್ಬಿನಲಿ ಪಾರ್ಥನ ಪಟುಪರಾಕ್ರಮಕೆ
ಮೊನೆಗಣೆಯ ನುಡಿ ಸೋಂಕೆ ಕರ್ಣವ
ನಿನಿತು ಕುಸಿದ ರಸಾತಳಕೆ ಕುರು
ಜನಪನನಿಬದ್ಧ ಪ್ರಲಾಪವ ಬಿಡಿಸಿದನು ಭೀಷ್ಮ ೨೨

ತಾಗಲನುಗೈದುಭಯಬಲ ಕೈ
ಲಾಗನೀಕ್ಷಿಸುತಿರಲು ರಿಪುಬಲ
ಸಾಗರದ ಸೌರಂಭವನು ಮಿಗೆ ನೋಡಿ ಧರ್ಮಜನು
ತೂಗಿದನು ಶಿರವನು ಮಹಾಹವ
ಮೀಗಲಾಗದ ಮುನ್ನ ಭೇದದ
ಲಾಗಿನಲಿ ಭೀಷ್ಮಾದಿಗಳ ಮನವೊಲಿಸಬೇಕೆಂದ ೨೩

ಬಂದು ಭೀಷ್ಮನ ಚರಣ ಕಮಲ
ದ್ವಂದ್ವದಲಿ ಚಾಚಿದನು ಮಕುಟವ
ನಿಂದಿನಾಹವದೊಳಗೆ ನಮಗಿನ್ನೇನು ನಿರ್ವಾಹ
ನಿಂದು ನೀವ್ ಕಾದುವರೆ ನಮಗಿ
ನ್ನೆಂದು ಹರಿವುದು ಬವರವೆಮಗೇ
ನೆಂದು ಬೆಸಸಿದಿರೆನುತ ಕರುಣವ ತೋರಿದನು ಭೂಪ ೨೪

ನೀವರಿಯಲಾವುತ್ತರಾಯಿಗ
ಳಾವ ಪರಿಯಲು ಕೌರವರು ಬಹ
ಳಾವಮಾನವನೆಮಗೆ ನೆಗಳಿದರೆಮ್ಮ ಸತ್ಯವನು
ನೀವು ಮೆಚ್ಚಲು ನಡೆಸಿದೆವು ತಲೆ
ಗಾವುದುಂಟೇ ಕರುಣಿಸಲ್ಲದ
ಡಾವ ಹದನೆಂದವಗೆ ನೇಮವ ಕೊಟ್ಟು ಕಳುಹೆಂದ ೨೫

ಏಳು ಮಗನೇ ನಮ್ಮ ಮತಿಯನು
ಕೇಳೆನುತ ಭೂಪಾಲ ತಿಲಕನ
ಮೌಳಿಯನು ನೆಗಹಿದನು ಗಂಗಾಸೂನು ನಸುನಗುತ
ಆಳುಗೊಂಡನು ಕೌರವನು ಪರ
ರಾಳುತನವೆಮಗಾಯ್ತು ಪರಸೇ
ವಾ ಲಘುಸ್ಥಿತರೆಮ್ಮನೇತಕೆ ನುಡಿಸಿದಪೆಯೆಂದ ೨೬

ಹಿರಿಯನಾಗಲಿ ಸುಜನನಾಗಲಿ
ಗರುವನಾಗಲಿ ಅರ್ಥವುಳ್ಳನ
ಚರಣಸೇವಾಪರರು ಜಗದಲಿ ವರ್ತಮಾನವಿದು
ಪರರ ಭಜಕರೊಳಾವಗುಣವಾ
ವಿರವದಾವಗ್ಗಳಿಕೆ ಯಾವುದು
ಗರುವತನವೈ ತಂದೆ ಪುರುಷಾಧಮನು ತಾನೆಂದ ೨೭

ಕೌರವನ ಧನವೆಂಬ ಘನಸಂ
ಸಾರಗುಣದೊಳು ಬದ್ಧನಾದೆನು
ಧೀರ ನಾನೇಗೈವೆನೆನೆ ಯಮಸೂನು ಕೈಮುಗಿದು
ವೈರವೃತ್ತಿಯ ರಣದೊಳೆಮಗಿ
ನ್ನಾರು ಗತಿ ನೀನುಭಯನೃಪರಿಗೆ
ಕಾರುಣಿಕ ನೀ ಮುನಿದಡೆಮಗಿನ್ನಾಸೆಯಿಲ್ಲೆಂದ ೨೮

ಮಾನನಿಧಿ ಕೇಳ್ ಕೌರವಂಗಾ
ಧೀನವೆನ್ನಯ ತನು ವಿಧಾತ್ರಾ
ಧೀನವೆನ್ನಯ ಜೀವವದು ಕಾರಣದಿನಾವಹಕೆ
ನೀನು ಚಿಂತಿಸಬೇಡ ನನ್ನವ
ಸಾನಕಾಲಕೆ ಮತ್ತೆ ಬರಲು ನಿ
ದಾನವನು ನೆರೆ ಬುದ್ಧಿಗಲಿಸುವೆನೀಗ ಮರಳೆಂದ ೨೯

ಎನೆ ಹಸಾದವೆನುತ್ತ ಯಮನಂ
ದನನು ಕಳುಹಿಸಿಕೊಂಡು ಗಂಗಾ
ತನುಜ(ನು)ಚಿತೋಕ್ತಿಗಳ ನೆನೆದಡಿಗಡಿಗೆ ಪುಳಕಿಸುತ
ವಿನುತಮತಿ ನಡೆತರಲು ಸುಭಟರು
ತನತನಗೆ ತೊಲಗಿದರು ಪಾಂಡವ
ಜನಪ ಮೈಯಿಕ್ಕಿದನು ದ್ರೋಣನ ಚರಣ ಕಮಲದಲಿ ೩೦

ಅರಸ ಬಂದನಪೂರ್ವವಾಯಿತು
ದರುಶನವು ತನಗೆನುತ ಗರುಡಿಯ
ಗುರು ಮಹೀಪಾಲಕನ ಮಕುಟವನೆತ್ತಿದನು ಬಳಿಕ
ಬರಸೆಳೆದು ಬಿಗಿಯಪ್ಪಿದನು ಸಂ
ಗರದ ಸಮಯದಲೇಕೆ ಬಂದಿರಿ
ಭರವಸದ ಬಗೆಯೇನು ಬಿನ್ನಹ ಮಾಡು ಸಾಕೆಂದ ೩೧

ಎವಗೆ ದೈವವು ನೀನು ಗುರು ನೀ
ನೆವಗೆ ತಾತನು ನೀನು ಮಹದಾ
ಹವದೊಳಗೆ ಪತಿಕರಿಸಿ ರಕ್ಷಿಸಲೊಡೆಯ ನೀನೆಮಗೆ
ಅವನಿಯಭಿಲಾಷೆಯಲಿ ತೆತ್ತುದು
ಬವರವೆಮಗಿನ್ನೇನು ಗತಿ ಕೌ
ರವ ಜಯೋಪಾಯಕ್ಕೆ ಹದನೇನೆಂದು ನೃಪ ನುಡಿದ ೩೨

ಅರಸ ಕೇಳರ್ಥಕ್ಕೆ ಧರಣೀ
ಶ್ವರರ ಕಿಂಕರರರ್ಥ ತಾ ಕಿಂ
ಕರತೆಯನು ಮಾಡುವುದು ಜಗದಲಿ ವರ್ತಮಾನವಿದು
ನಿರುತ ಕೌರವನರ್ಥದಲಿ ಕಿಂ
ಕರತೆ(ಯೆ)ಮಗಾಯಿತ್ತು ರಾಜ್ಯೈ
ಶ್ವರಿಯ ಸೇವಾಪರರಿಗೀ ಸ್ವಾತಂತ್ರ್ಯವಿಲ್ಲೆಂದ ೩೩

ಆದರೆಮಗಿನ್ನೇನು ಗತಿ ರಣ
ವಾದಸಿದ್ಧಿಯದೆಂತು ಜಯಸಂ
ಪಾದಕರು ನಮಗಾರೆನಲು ಗುರು ಕೇಳಿ ನಸುನಗುತ
ಕಾದುವಾ ಸಮಯದೊಳಗಪ್ರಿಯ
ವಾದ ನುಡಿಗಳ ಕೇಳಿದಾಕ್ಷಣ
ಮೇದಿನಿಯೊಳಾವಿರೆವು ಚಿಂತಿಸಬೇಡ ಹೋಗೆಂದ ೩೪

ಎನಲು ಪರಿತೋಷದಲಿ ಯಮನಂದ
ನನು ಕಳುಹಿಸಿಕೊಂಡು ನಡೆತಂ
ದನು ಮಹಾಹವರಂಗಮಧ್ಯದ ಕೃಪನ ಹೊರೆಗಾಗಿ
ವಿನಯದಲಿ ಬಿನ್ನಯಿಸೆ ಕೃಪನೆಂ
ದನು ನಿಧಾನಿಸಲಾವವಧ್ಯರು
ಜನಪ ನಿನ್ನನು ನಾವು ಕೊಲ್ಲೆವು ಮರಳು ನೀನೆಂದ ೩೫

ಕೃಪನ ಬೀಳ್ಕೊಂಡತುಳಜಯಲೋ
ಲುಪನು ಶಲ್ಯನ ಬಂದು ಕಂಡನು
ವಿಪುಳಮತಿ ಮಾತಾಡಿದನು ನಿಜರಾಜಕಾರಿಯವ
ಕೃಪೆಯ ಮಾಡುವುದೆವಗೆ ರಣದಲಿ
ತಪನತನಯನ ತೇಜವನು ನಿ
ಷ್ಕೃಪೆಯೊಳವಗಡಿಸೆಂದು ಶಲ್ಯನೊಳಭಯವನು ಪಡೆದ ೩೬

ಬಲದೊಳಗೆ ಬೇಹವರ ನಾಲ್ವರ
ನೊಳಗುಮಾಡಿ ಧರಾಧಿಪನು ಮನ
ಗೆಲವಿನಲಿ ಮರಳಿದನು ಕೌರವ ಮೋಹರವನುಳಿದು
ತಿಳಿದು ತನ್ನೊಳು ಭೀಮಸೇನನ
ಬಲು ಗದಾಘಾತದಲಿ ಕುರುಕುಲ
ವಳಿವುದೆಂದು ಯುಯುತ್ಸು ರಥದಿಂದಿಳಿದು ನಡೆತಂದ ೩೭

ಎರಡು ಬಲ ಬೆರಗಾಗಿ ನೋಡು
ತ್ತಿರೆ ಯುಯುತ್ಸು ಮಹೀಶನಂಘ್ರಿಗೆ
ಕರವ ಮುಗಿದೆರಗಿದರೆ ಹಿಡಿದೆತ್ತಿದನು ಕರುಣದಲಿ
ಧರಣಿಪತಿ ನೀನಾರೆನಲು ಕೇ
ಳರಸ ಕೌರವನನುಜ ನಿಮ್ಮನು
ಶರಣುವೊಗಲೈತಂದೆಯಭಯವನಿತ್ತು ಸಲಹೆಂದ ೩೮

ಹಿಂದೆ ರಾವಣನನುಜನಿರದೈ
ತಂದು ಶರಣಾಗತರ ರಕ್ಷಿಪ
ನೆಂದು ರಾಘವನಂಘ್ರಿಕಮಲವ ಕಂಡು ಬದುಕಿದನು
ಇಂದು ನಿಮ್ಮಂಘ್ರಿಗಳ ಮರೆವೊಗ
ಬಂದೆನೆನ್ನನು ಪತಿಕರಿಸಬೇ
ಕೆಂದು ಕೌರವನನುಜ ಬಿನ್ನಯಿಸಿದನು ಭೂಪತಿಗೆ ೩೯

ಎನಗೆ ಭೀಮಾರ್ಜುನರವೊಲು ನೀ
ನನುಜನಲ್ಲದೆ ಬೇರೆ ನಿನ್ನಲಿ
ಮನವಿಭೇದವ ಬಲ್ಲೆನೇ ಬಾಯೆನುತ ಕೈವಿಡಿದು
ಜನಪನಭಯವನಿತ್ತು ಕೌರವ
ನನುಜನನುಕೊಂಡೊಯ್ದನಾಹವ
ದನುಕರಣೆಯಲಿ ಸೇನೆ ಗಜಬಜಿಸಿತ್ತು ಬೊಬ್ಬೆಯಲಿ ೪೦

(ಸಂಗ್ರಹ: ಆನಂದ)

No comments: