ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Sunday, February 21, 2010

ದ್ರೋಣಪರ್ವ: ೦೨. ಎರಡನೆಯ ಸಂಧಿ

ಸೂ: ಉಭಯ ಕಟಕಾಚಾರ್ಯ ಪಾಂಡವ
ವಿಭುವ ಹಿಡಿತಹೆನೆಂದು ಕೌರವ
ಸಭೆಗೆ ಭಾಷೆಯ ಕೊಟ್ಟು ಸಮರಕೆ ದ್ರೋಣನನುವಾದ

ಕೇಳು ಜನಮೇಜಯ ಧರಿತ್ರೀ
ಪಾಲ ತೆಗೆದವು ಬಲವೆರಡು ನಿಜ
ಪಾಳಯಂಗಳಿಗಿರುಳು ಕೌರವನಿತ್ತನೋಲಗವ
ಹೇಳು ಕರ್ಣ ದ್ರೋಣ ರಿಪು ಭೂ
ಪಾಲಕನನರೆಯಟ್ಟಿದನು ಗಡ
ಕಾಳೆಗದ ಹದನೇನೆನುತ ಕುರುರಾಯ ಬೆಸಗೊಂಡ ೧

ಏನ ಹೇಳಲುಬಹುದು ಜೀಯ ಕೃ
ಶಾನುವಡವಿಯಲಾಡಿದಂದದಿ
ನಾ ನಿರೂಢಿಯ ಭಟರ ಮುರಿದನು ಮುರಿದ ಮಾರ್ಗದಲಿ
ಸೇನೆ ಕಲಕಿತು ಬತ್ತಿದುದಧಿಯ
ಮೀನಿನಂತಿರೆ ಮರುಗಿದರು ಭಟ
ರಾ ನರೇಂದ್ರನನಳವಿಯಲಿ ಬೆಂಬತ್ತಿದನು ದ್ರೋಣ ೨

ಅಳವಿಗೊಟ್ಟನು ನೃಪತಿ ಗುರು ಕೈ
ಚಳಕದಲಿ ತೆಗೆದೆಸುತ ನಡೆದಿ
ಟ್ಟಳಿಸಿ ಹಿಡಿಹಿಂಗೊಳಗುಮಾಡಿ ವಿಘಾತಿಯಲಿ ತಡೆಯೆ
ಎಲೆಲೆ ದೊರೆ ಸಿಕ್ಕಿದನು ಸಿಕ್ಕಿದ
ನಳಿದುದೋ ದ್ರೌಪದಿಯ ಸಿರಿಯೆಂ
ಬುಲುಹ ಕೇಳುತ ಪಾರ್ಥ ಬಂದನು ಬಿಟ್ಟ ಸೂಠಿಯಲಿ ೩

ವೀರರಿದ್ದೇಗುವರು ದೈವದ
ಕೂರುಮೆಯ ನೆಲೆ ಬೇರೆ ನಮಗೊಲಿ
ದಾರು ಮಾಡುವುದೇನೆನುತ ಕಲಿಕರ್ಣ ಬಿಸುಸುಯ್ಯೆ
ಭೂರಿ ಭೂಪರು ವಿಸ್ತರದ ಗಂ
ಭೀರ ಸಾಗರದಂತಿರಲು ರಣ
ಧೀರರೆದ್ದರು ವರ ತ್ರಿಗರ್ತರು ರಾಜಸಭೆಯೊಳಗೆ ೪

ಕೇಳು ಸೇನಾನಾಥ ಕುರುಪತಿ
ಕೇಳು ಕೇಳೈ ಕರ್ಣ ಸುಭಟರು
ಕೇಳಿರೈ ದೇಶಾಧಿನಾಥರು ವೀರ ಪರಿವಾರ
ನಾಳೆ ಮೊದಲಾಗರ್ಜುನನ ನಾವ್
ಕಾಳೆಗಕೆ ಬರಲೀಯೆವೆಮ್ಮಯ
ಕಾಳೆಗದಲೇ ಸವೆಯಬೇಹುದು ಪಾರ್ಥನಂಬುಗಳು ೫

ಹಿಂದೆ ಹಿಡಿ ನೀ ಮೇಣು ಬಿಡು ಯಮ
ನಂದನನನೊಲಿದಂತೆ ಮಾಡಿ
ಲ್ಲಿಂದ ಮೇಲರ್ಜುನನ ಭಯ ನಿಮಗಿಲ್ಲ ನಂಬುವುದು
ಎಂದು ಶಪಥವ ತಮ್ಮಿನಿಬರೈ
ತಂದು ವಿಪ್ರರ ಕರೆಸಿ ವೈದಿಕ
ದಿಂದ ರಚಿಸಿದರಗ್ನಿಯನು ಮಾಡಿದರು ಭಾಷೆಗಳ ೬

ನರನ ಬಿಡಲಾಗದು ಮಹಾ ಸಂ
ಗರದೊಳೊಬ್ಬರನೊಬ್ಬರೊಪ್ಪಿಸಿ
ತೆರಳಲಾಗದು ಮುರಿಯಲಾಗದು ಕೊಂಡ ಹಜ್ಜೆಗಳ
ಹೊರಳಿವೆಣನನು ಮೆಟ್ಟಿ ಮುಂದಣಿ
ಗುರುವಣಿಸುವುದು ತಪ್ಪಿದವರಿಗೆ
ನರಕವೀ ಪಾತಕರ ಗತಿ ನಮಗೆಂದು ಸಾರಿದರು ೭

ನುಡಿದ ನುಡಿಗೇಡುಗನ ವಿಪ್ರರ
ಮಡುಹಿದಾತನನಮಳ ಗುರುವಿನ
ಮಡದಿಯರಿಗಳುಪಿದನ ಸಾಕಿದ ಪತಿಗೆ ತಪ್ಪಿದನ
ಹಿಡಿದ ಶರಣಾಗತರ ಕಾಯದೆ
ಬಿಡುವವನ ನಾಸ್ತಿಕನ ವಿಪ್ರರ
ಜಡಿದು ನುಡಿದನ ಗತಿಗಳಾಗಲಿ ರಣದೊಳೋಡಿದರೆ ೮

ಎಂದು ಸಮಸಪ್ತಕರು ತಮ್ಮೊಳ
ಗಂದು ಶಪಥವ ಮಾಡಿ ವಿಪ್ರರ
ಮಂದಿಗಿತ್ತರು ಗೋ ಹಿರಣ್ಯ ಸಮಸ್ತ ವಸ್ತುಗಳ
ಇಂದು ರವಿ ಜಲ ವಹ್ನಿಯನಿಲ ಪು
ರಂದರಾದಿ ಸುರೌಘ ಸಾಕ್ಷಿಗ
ಳೆಂದು ಸೂಳೈಸಿದರು ಭುಜವನು ಸಿಡಿಲು ತನಿಹೆದರೆ ೯

ಇವರ ಮೊದಲಿಗ ಸತ್ಯರಥನಿಂ
ತಿವನ ಬಳಿ ರಥ ಹತ್ತು ಸಾವಿರ
ವಿವನೊಡನೆ ಸೇರುವೆಯ ರಥ ಮೂವತ್ತು ಸಾವಿರದ
ಭುವನವೀರ ಸುಶರ್ಮ ಮಾಳವ
ಯವನರತಿರಥ ಹತ್ತು ಸಾವಿರ
ಬವರಕಿಂತೈವತ್ತು ಸಾವಿರ ರಥಗಳೊಗ್ಗಾಯ್ತು ೧೦

ಸಭೆ ಬೆದರೆ ಕಲ್ಪಾಂತ ಶರಧಿಯ
ರಭಸವಲ್ಲಿಯೆ ಕೇಳಲಾದುದು
ಸುಭಟರಹುದೋ ಜಾಗು ಜಾಗೆನುತೊಲೆದನಾ ದ್ರೋಣ
ಅಭವನಡಹಾಯ್ದಿರಲಿ ಪಾಂಡವ
ವಿಭುವ ಹಿಡಿವೆನು ಪಾರ್ಥನೊಬ್ಬನ
ಪ್ರಭೆಗೆ ಹೆದರುವೆನುಳಿದ ವೀರರ ಬಗೆವನಲ್ಲೆಂದ ೧೧

ನಯವಿದನು ಹೊಂಬಟ್ಟಲಲಿ ವೀ
ಳೆಯವನನಿಬರಿಗಿತ್ತು ಕುರುಸೇ
ನೆಯಲಿ ಮರುಮಾತೇಕೆ ನೀವೇ ವಿಜಯವುಳ್ಳವರು
ಜಯವನಿನ್ನಾಹವದೊಳಗೆ ನಿ
ರ್ಣಯಿಸಬಹುದೆಮಗೆನುತ ಗುರು ಪಾ
ಳಯಕೆ ನೇಮವ ಕೊಟ್ಟನೋಲಗ ಹರೆದುದಾ ಕ್ಷಣಕೆ ೧೨

ಸಸಿ ವರುಣ ದಿಗುವಧುವನಾಲಿಂ
ಗಿಸಲು ಕುಮುದಿನಿ ಖತಿಯ ಹಿಡಿದಳು
ಮಸುಳಿದವು ತಾರೆಗಳು ರಜನೀನಾರಿ ಹಿಂಗಿದಳು
ಒಸೆದು ಕಮಲಿನಿ ನಗಲು ಮಿಗೆ ಹುರು
ಡಿಸುತ ಪೂರ್ವದಿಶಾನಿತಂಬಿನಿ
ನಿಶಿತ ಕೋಪದ ಕಿಡಿಯನುಗುಳಿದಳೆನಲು ರವಿ ಮೆರೆದ ೧೩

ಜೋಡು ಮಾಡಿತು ನೃಪರು ನಿಮಿಷಕೆ
ಹೂಡಿದವು ತೇರುಗಳು ಹಯತತಿ
ಕೂಡೆ ಹಲ್ಲಣಿಸಿದವು ಗುಳದಲಿ ಜಡಿದವಾನೆಗಳು
ಕೂಡೆ ಘಮ್ಮಿಡೆ ದೆಸೆದೆಸೆಗಳ
ಲ್ಲಾಡಿದವು ಗಿರಿನಿಕರ ಬಿರುದನಿ
ಮಾಡಿದವು ನಿಸ್ಸಾಳತತಿ ಸೇನಾಸಮುದ್ರದಲಿ ೧೪

ಉದಯವಾಗದ ಮುನ್ನ ಕಳನೊಳು
ಹೊದರುಗಟ್ಟಿದರೀ ತ್ರಿಗರ್ತರು
ಕದನಕೆಮ್ಮೊಳಗಳವಿಗೊಡುವುದು ಬೇಗ ಬಹುದೆಂದು
ಮದವದರಿಭಟ ಭೈರವಂಗ
ಟ್ಟಿದರು ಭಟ್ಟರನವರು ಬಂದೊದ
ರಿದರು ಪಾರ್ಥನ ಮುಂದೆ ಸಮಸಪ್ತಕರ ಬಿರುದುಗಳ ೧೫

ಏಳು ಫಲುಗುಣ ಕೃಷ್ಣನೇ ಗೋ
ಪಾಲನೇಸರ ಮಾನಿಸನು ಬರ
ಹೇಳಲಾಪರೆ ಕರೆ ಸಹಾಯಕೆ ಭಾಳಲೋಚನನ
ಏಳು ಜಂಜಡವೇನು ಜೊತ್ತಿನ
ಕಾಳೆಗಕೆ ಕಲಿಯಾಗು ನಡೆಯೆನೆ
ಕೇಳುತರ್ಜುನನಿತ್ತನವರಿಗೆ ನಗುತ ವೀಳೆಯವ ೧೬

ನಡೆಯಿ ನೀವಾಹವಕೆ ಮೆಚ್ಚಿಸಿ
ಕೊಡುವೆನೀ ಬಹೆನೆಂದು ಮುರಹರ
ನೊಡನೆ ಮುದದಲಿ ರಥಕೆ ಬಂದನು ಬಿಲ್ಲನೊದರಿಸುತ
ನುಡಿದನಂತಕಸೂನು ಕಳಶಜ
ಹಿಡಿಯಲೆಂದೇರಿಸಿದ ನುಡಿ ತ
ನ್ನೊಡನೆ ನಿಂದಾವವನು ಕಾದುವ ಪಾರ್ಥ ಹೇಳೆಂದ ೧೭

ಕರಸಿದರೆ ಕಾಳೆಗದೊಳೆನಗೆಡೆ
ಮುರಿಯಬಾರದು ನಿಮ್ಮ ಕಾಹಿಂ
ಗಿರಲಿ ನೀಲನು ಸತ್ಯಜಿತು ಕೌಶಲ ಶತಾನೀಕ
ವರ ಘಟೋತ್ಕಚ ದ್ರುಪದ ಕೈಕೆಯ
ರಿರಲಿ ಪವನಜ ನಕುಲ ಸಹದೇವ
ವರಿಗೆ ದ್ರೋಣನ ಬವರವಾಗಲಿ ಎಂದನಾ ಪಾರ್ಥ ೧೮

ಎಂದು ಸಮಸಪ್ತಕರ ಮೋಹರ
ಕಂದು ತಿರುಗಿದ ಪಾರ್ಥನಿತ್ತಲು
ಸಂದಣಿಸಿತರಿ ರಾಯದಳ ಜಲರಾಸಿ ಜರಿವಂತೆ
ಮುಂದೆ ತವಕಿಗ ಭಟರ ತೆರಳಿಕೆ
ಯಿಂದ ಮೊರೆವ ಗಭೀರ ಬೇರಿಯ
ಮಂದರದ ಮುರಿಗಡಲ ಗಜರಿನೊಲೊದರಿತರಿಸೇನೆ ೧೯

ಬಳಿಯ ಸುಮಹಾರಥರ ರಾಜಾ
ವಳಿಯ ಚಮರಚ್ಛತ್ರ ಪಾಳಿಯ
ಸೆಳೆದಡಾಯುಧ ಹೆಗಲ ತೆಕ್ಕೆಯ ರಾಯ ರಾವುತರ
ಹೊಳೆವ ಹೇಮದ ರಥಕೆ ಹೂಡಿದ
ತಿಲಕಗುದುರೆಯ ನೆಗಹಿ ನಿಗುರುವ
ಕಳಶ ಸಿಂಧದ ದ್ರೋಣ ಹೊಕ್ಕನು ಕಾಳೆಗದ ಕಳನ ೨೦

ಗರುಡನಾಕಾರದಲಿ ಬಲವನು
ಸರಿಸ ಮಿಗೆ ಮೋಹಿದನು ವಿಹಗನ
ಶಿರಕೆ ಕೃಪ ಕುರುರಾಯ ದುಶ್ಯಾಸನನ ನಿಲಿಸಿದನು
ಕರೆದು ಭೂರಿಶ್ರವನ ಮಾದ್ರೇ
ಶ್ವರನ ಭಗದತ್ತನ ಸುಬಾಹುವ
ನಿರಿಸಿದನು ಬಲದೆರಕೆಯೊಳಗಕ್ಷೋಹಿಣೀ ಬಲವ ೨೧

ವಿಂದ್ಯನಶ್ವತ್ಥಾಮ ಕರ್ಣನ
ನಂದನರು ಕಾಂಭೋಜ ಕೌಶಲ
ಸಿಂಧು ನೃಪರಕ್ಷೋಹಿಣಿಯ ತಂದೆಡದ ಪಕ್ಕದಲಿ
ನಿಂದುದಲ (ಪಾ: ನಿಂದುದಲಾ) ಮೋಹರದ ಜೋಕೆಯ
ಹಿಂದೆ ಲಕ್ಷ ಕಳಿಂಗ ಘಟೆಗಳು
ಸಂದಣಿಸಿದವು ದ್ರೋಣ ನಿಂದನು ಬಲದ ಕಾಹಿನಲಿ ೨೨

ಆರಿ ಬೊಬ್ಬಿರಿದಖಿಳ ಸೇನೆಯ
ಭೂರಿ ಭಟರಗ್ರದಲಿ ಕಟಕಾ
ಚಾರಿಯನು ಕೈವೀಸಿದನು ಬರಹೇಳು ಪವನಜನ
ವೀರನಾದಡೆ ದೊರೆಯ ಹೊಗ ಹೇ
ಳಾರು ತಡೆದರೆ ತಡೆಯಿ ಹಿಡಿವೆನು
ಧೀರ ಕೌರವನಾಣೆನುತ ಬೊಬ್ಬಿರಿದನಾ ದ್ರೋಣ ೨೩

ಕರಸಿ ಧೃಷ್ಟದ್ಯುಮ್ನ ನಿಜ ಮೋ
ಹರವ ರಚಿಸಿದನರ್ಧ ಚಂದ್ರೋ
ತ್ಕರ ವಿಳಾಸದೊಳಳ್ಳಿರಿವ ನಿಸ್ಸಾಳ ಕೋಟಿಗಳ
ಧುರಕೆ ನಿಗುರುವ ಭಟರ ತೂಳುವ
ಕರಿಘಟೆಯ ಕೆಲಬಲಕೆ ಸೂಸುವ
ತುರುಗ ರಾಜಿಯ ತೇರ ಗಮನದ ಗಜರು ಘಾಡಿಸಿತು ೨೪

ಒದೆದುದಬುಧಿಯನಬುಧಿಯೆನೆ ಹೊ
ಕ್ಕುದು ಚತುರ್ಬಲ ಹೊಯ್ದು ತಲೆಯೊ
ತ್ತಿದುದು ಕೇಶಾಕೇಶಿ ಖಾಡಾಖಾಡಿಯಲಿ ಭಟರು
ಕೆದರಿತರಿಬಲ ಮತ್ತೆ ಹೊದರೆ
ದ್ದುದು ವಿಘಾತಿಯಲಳಿದು ಹುರಿ ಗೊಂ
ಡೊದಗಿ ಹಾಣಾಹಾಣಿಯಲಿ ಹೊಯ್ದಾಡಿತುಭಯಬಲ ೨೫

ಹಳಚುವಸಿಗಳ ಖಣಿಖಟಿಲು ಕಳ
ಕಳಕೆ ಮಿಗೆ ಹೊಯ್ದಾಡಿತುರುಳುವ
ತಲೆಯ ಬೀಳುವ ಹೆಣನ ಧಾರಿಡುವರುಣ ವಾರಿಗಳ
ತಳಿತ ಖಂಡದ ಹರಿದ ಕರುಳಿನ
ಕಳಚಿದೆಲುವಿನ ಕುಣಿವ ಮುಂಡದ
ಕೊಳಗುಳದ ಹೆಬ್ಬೆಳಸು ಹೆಚ್ಚಿಸಿತಂತಕನ ಪುರವ ೨೬

ಉಲಿದು ಸೂಠಿಯೊಳೇರಿದರು ವೆ
ಗ್ಗಳೆಯ ರಾವ್ತರು ಗಜರಿ ಮಸ್ತಕ
ಹಿಳಿಯಲಂಕುಶವಿಕ್ಕಿ ಬಿಟ್ಟರು ಸೊಕ್ಕಿದಾನೆಗಳ
ತಳಪಟವ ತುಂಬಿದವು ತೇರುಗ
ಳಿಳೆ ಜಡಿಯೆ ಕಾಲಾಳು ಹೊಕ್ಕೊಡೆ
ಗಲಿಸಿ ಹೊಯ್ದರು ಚೂಣಿಯರೆದುದು ಕಳನ ಚೌಕದಲಿ ೨೭

ಇತ್ತಲರ್ಜುನನಾ ತ್ರಿಗರ್ತರಿ
ಗಿತ್ತನವಸರವನು ಕೃತಾಂತನ
ತೆತ್ತಿಗರಿಗೌತನವ ಹೇಳಿಸಿದನು ಶರೌಘದಲಿ
ಕುತ್ತಿದವು ಕೂರಂಬು ದೊರೆಗಳ
ಮುತ್ತಿದವು ಕೆದರಿದವು ನಿಮಿಷಕೆ
ಬತ್ತಿಸಿದನಂದಹಿತ ಸುಭಟರ ವೀರ ಶರನಿಧಿಯ ೨೮

ಏನ ಹೇಳುವೆನಿತ್ತಲಾದುದು
ದಾನವಾಮರರದುಭುತಾಹವ
ವಾ ನಿರಂತರ ವಿಕ್ರಮೋನ್ನತ ಭಟರ ಬವರದಲಿ
ಆನಲಾರಿಗೆ ನೂಕುವುದು ತವ
ಸೂನುವಿನ ಸುಭಟರು ಪರಾಕ್ರಮ
ಹೀನರೇ ಧೃತರಾಷ್ಟ್ರ ಕೇಳೈ ದ್ರೋಣ ಸಂಗರವ ೨೯

ಬಿಲ್ಲನೊದರಿಸಿ ಕೆಲಬಲದ ಭಟ
ರೆಲ್ಲರಿಗೆ ಕೈವೀಸಿ ಚೌಪಟ
ಮಲ್ಲ ನುಡಿದನು ತನ್ನ ಸಾರಥಿಗಿತ್ತು ವೀಳೆಯವ
ಖುಲ್ಲ ರಿಪುಗಳ ಬಿಸುಟು ಹೊದರಿನ
ಹೊಳ್ಳುಗರನೊಡೆಹಾಯ್ಸಿ ಧರ್ಮಜ
ನೆಲ್ಲಿ ಮೋಹರದೆಗೆವನತ್ತಲೆ ರಥವ ಹರಿಸೆಂದ ೩೦

ರಥವ ಬಿಟ್ಟನು ಸೂಠಿಯಲಿ ನಿ
ರ್ಮಥಿತ ರಿಪುಗಳನಟ್ಟಿದನು ಭುಜ
ಶಿಥಿಲ ಸಾಹಸರೇನ ನಿಲುವರು ದ್ರೋಣನುರವಣೆಗೆ
ಪೃಥಿವಿ ನೆಗ್ಗಿತು ಹೊತ್ತ ಕಮಠನ
ವೃಥೆಯನಾರುಸುರುವರು ಸುಮಹಾ
ರಥರ ಹೊದರಲಿ ಹೊಕ್ಕನುರಿ ಬಲು ಮೆಳೆಯ ಹೊಕ್ಕಂತೆ ೩೧

ಆಳ ಹೊಗಿಸೋ ದ್ರೋಣ ರಥ ದು
ವ್ವಾಳಿಯಲಿ ಬರುತದೆ ಕೃತಾಂತನ
ದಾಳಿಗೆತ್ತಣ ವೀರವೋ ನೆಗ್ಗಿದವು ನೆನಹುಗಳು
ಕಾಳುಗೆಡದಿರಿ ಕೂಡೆ ಕೈಕೊಳ
ಹೇಳಿ ಕೈ ತಪ್ಪಾಗದಿರದು ನೃ
ಪಾಲಕಂಗೆಂದೊದರಿದರು ಧರ್ಮಜನ ಮಂತ್ರಿಗಳು ೩೨

ಫಡ ಫಡಾನಿರುತಿರಲು ರಾಯನ
ಹಿಡಿದವನ ಹೆಸರೇನು ರಿಪು ಭಟ
ನೊಡಲ ಹೊಳ್ಳಿಸಿ ನೆಣನನುಣಲಿಕ್ಕುವೆನು ದೈತ್ಯರಿಗೆ
ಬಿಡು ರಥವನಾ ದ್ರೋಣನಿದಿರಲಿ
ತಡೆಯೆನುತ ಸಾರಥಿಗೆ ಸೂಚಿಸಿ
ತುಡುಕಿದನು ಬಲುಬಿಲ್ಲ ದೃಷ್ಟದ್ಯುಮ್ನನಿದಿರಾದ ೩೩

ಬಲ್ಲೆನೀತನ ಬಲುಹ ಸಾಕೀ
ಯೊಳ್ಳೆಗನನೆಡಕಿಕ್ಕಿ ಹಾಯಿಸು
ಕಲ್ಲೆಯಲಿ ಮುರಿನೂಕು ನಡೆ ಭೂಪತಿಯ ಸಮ್ಮುಖಕೆ
ನಿಲ್ಲದೊಡ್ಡೈಸೆನುತ ಸಾಹಸ
ಮಲ್ಲ ಸಾರಥಿಗರುಹೆ ಬಲವ
ಲ್ಲಲ್ಲಿ ಭಯಗೊಳೆ ದ್ರೋಣ ಹೊಕ್ಕನು ರಾಯಮೋಹರವ ೩೪

ಶಿವಶಿವಾ ಸಿಕ್ಕಿದನು ಸಿಕ್ಕಿದ
ನವನಿಪತಿಯೆನಲೌಂಕಿದರು ಗಜ
ನಿವಹವಗಿದಬ್ಬರಿಸೆ ಮುಕ್ಕುರುಕಿದವು ಕುದುರೆಗಳು
ತವಕದಲಿ ಬದ್ದರದ ಬಂಡಿಗ
ಳವುಚಿದವು ತಲೆವರಿಗೆಗಳಲಾ
ಹವವ ಹೊಕ್ಕುದು ಪಾಯದಳವಾಚಾರ್ಯನಿದಿರಿನಲಿ ೩೫

ಪಟುಗಳೋ ಮಝ ಪೂತು ಪಾಂಡವ
ಭಟರು ಖರೆಯವಲಾ ಯುಧಿಷ್ಠಿರ
ನಟಮಟಿಸಿ ತಾ ಚುಕ್ಕಿಗಿಕ್ಕುವ ಲೆಕ್ಕ ಲೇಸಾಯ್ತು
ಕುಟಿಲತನದಲಿ ಗೆಲುವನೇ ಹುಲು
ಕುಟಿಗರಿವದಿರ ಹೊಯ್ದು ತನ್ನನು
ನಿಟಿಲಲೋಚನನಡ್ಡ ಹಾಯ್ದರೆ ಹಿಡಿವೆನೆನುತೆಚ್ಚ ೩೬

ನೂಕಿ ಹರಿತಹ ತೇಜಿಗಳ ಖುರ
ನಾಕ ಖಂಡಿಸಿ ಕವಿದ ನಾಗಾ
ನೀಕವನು ನೆರೆ ಕೆಡಹಿ ತೇರಿನ ಹೊದರ ಹರೆಗಡಿದು
ಔಕಿ ತಲೆವರಿಗೆಯಲಿ ತೆರಳಿದ
ನೇಕ ಸುಭಟರ ಸೀಳಿ ಜಯ ರ
ತ್ನಾಕರನು ಕಲಕಿದನು ಪಾಂಡವ ಸೈನ್ಯ ಸಾಗರವ ೩೭

ಬಲವ ಬರಿಕೈದೆವು ಯುಧಿಷ್ಠಿರ
ಬಿಲುದುಡುಕು ಸಾಕೋಡಿ ಬದುಕುವ
ಹುಲು ಪರೆಯತನ ಹೆಮ್ಮೆಯೇ ಕ್ಷತ್ರಿಯರ ಮಕ್ಕಳಿಗೆ
ಆಳಿದರರಮರರಿಗೊಡೆಯನಹೆ ಮೇ
ಣುಳಿದಡವನೀಪಾಲನಹೆ ಯೀ
ಕಲಹವಿಹಪರಕೊಳ್ಳಿತೆಂದುರವಣಿಸಿದನು ದ್ರೋಣ ೩೮

ಫಡ ಫಡುರವಣೆ ಬೇಡ ತೆಗೆ ಬಾ
ಯ್ಬಡಿಕತನವಿದು ಗುರುವರಂಗವೆ
ಕಡುಹ ನಾಲಗೆಯರುಹಲೇತಕೆ ಕೈಯ ಧನುವಿರಲು
ಒಡನೆ ತಾನಿರುತಿರಲು ರಾಯನ
ಹಿಡಿವ ಭಟನೇ ನೀನೆನುತ ಬಿಲು
ದುಡುಕಿ ಮುಂದೆ ಶಿಖಂಡಿ ದ್ರೋಣನ ರಥಕೆ ಮಾರಾಂತ ೩೯

ಅಕಟ ಸಿಂಹಕೆ ಮಲೆತುದೋ ಜಂ
ಬುಕನು ನೋಡೈ ಸೂತ ಭೀಷ್ಮನ
ಶಕುತಿಗಂದಿದಿರಾದ ಮದದಲಿ ಮುಂದುಗಾಣನಿವ
ಚಕಿತ ಚಾಪ ಶಿಖಂಡಿ ನಿಲು ಸಾ
ಯಕದ ಮೊನೆಯಲಿ ಮಾತನಾಡುವು
ದುಕುತಿ ಚಾಪಳವೇಕೆನುತ ಕಣೆಗೆದರಿದನು ದ್ರೋಣ ೪೦

ಗುರುವಿನಂಬಿನ ಬಂಬಲನು ಕ
ತ್ತರಿಸಿ ಕೈದೋರಿದನು ದಿಗುತಟ
ಬಿರಿಯೆ ದಿಙ್ಮಯವಾದವಂಬುಗಳೇನನುಸುರುವೆನು
ಅರಿ ಶಿಖಂಡಿಯ ಕೈಚಳಕ ಕಾ
ಹುರವಲೇ ಲೇಸಾಯ್ತು ಬಿಲ್ಲಿನ
ಭರವಸಿಕೆಯಹುದೆನುತ ಕೈಕೊಂಡೆಚ್ಚನಾ ದ್ರೋಣ ೪೧

ಸಾಕು ಷಂಡನ ಕೂಡೆ ಕಾದುವು
ದೇಕೆ ತಿದ್ದುವೆನೆನುತ ರಥವನು
ನಾಕು ಶರದಲಿ ಮುರಿದು ಸೂತನ ತಲೆಯನೆರಡರಲಿ
ನೂಕಿ ಧನುವನು ಮೂರು ಬಾಣದ
ಲೌಕಿ ಖಂಡಿಸಿ ಹೋಗು ಹೋಗಿ
ನ್ನಾಕೆವಾಳರನರಸಿ ತಾ ಎನುತೈದಿದನು ದ್ರೋಣ ೪೨

ಎಲೆ ಯುಧಿಷ್ಠಿರ ಬಿಲ್ಲ ಹಿಡಿ ನರ
ಹುಳುಗಳಿವದಿರ ಕವಿಸಿ ಕಾಲವ
ಕೊಲುವುದೇ ಸಾಕಿನ್ನು ಕೈವಶವಾದೆ ನಿಲ್ಲೆನುತ
ಅಳವಿಗಿಟ್ಟಣಿಸಲು ಶರಾಳಿಯ
ತುಳುಕಿ ಹೊಕ್ಕನು ಸತ್ಯಜಿತು ದಳ
ವುಳಿಸಿದರು ಚಿತ್ರ (ನು?) ಶತಾನೀಕಾದಿ ನಾಯಕರು ೪೩

ಬರಿಯ ಕಾರ್ಪಣ್ಯದಲಿ ಮೇಘದ
ಮರೆಯ ಹೊಕ್ಕರೆ ರಾಹು ಬಿಡುವನೆ
ಉರಿವ ರವಿಮಂಡಲವನೆಲೆ ಕುಂತೀ ಕುಮಾರಕನೆ
ಇರಿದು ಮೆರೆವುದು ಮಹಿಮೆಯನು ಕೈ
ಮರೆಯದಿರು ಮೈಮಾರಿಗಳ ಮು
ಕ್ಕುರಿಕಿದಿವದಿರ ತಿದ್ದಿ ಬಹೆನಿದೆಯೆನುತ ತೆಗೆದೆಚ್ಚ ೪೪

ಏನು ತರಹರಿಸುವುದು ತಿಮಿರವು
ಭಾನುರಶ್ಮಿಯ ಮುಂದೆ ದ್ರೋಣನ
ನೂನ ಶರವರ್ಷದಲಿ ನಾದವು ಸುಭಟರೊಡಲುಗಳು
ಆ ನಿರಂತರ ನಿಶಿತ ಶರ ಸಂ
ಧಾನಕಿವದಿರು ಲಕ್ಷ್ಯವೇ ನಿ
ನ್ನಾನೆಗಳಿಗಿದಿರಾವನೈ ಧೃತರಾಷ್ಟ್ರ ಕೇಳೆಂದ ೪೫

ಕೋಲಿಗೊಬ್ಬರ ಕೆಡಹಿದನು ಪಾಂ
ಚಾಲ ಬಲದಲಿ ಸತ್ಯಜಿತುವನು
ಮೇಲಣಾಹವದೊಳು ಶತಾನೀಕ ಕ್ಷಿತೀಶ್ವರನ
ಸೀಳಿದನು ಮಿಡುಕುವ ಮಹಾರಥ
ರೇಳು ನೂರನು ತುರಗ ಗಜ ಕಾ
ಲಾಳನಳಿದುದನಾವನೆಣಿಸುವನಹಿತ ಸೇನೆಯಲಿ ೪೬

ಹೊಳ್ಳುಗಳ ತೂರಿದೆವು ಹಿಡಿ ಹಿಡಿ
ಬಿಲ್ಲ ಸುರಿ ಸುರಿ ಶರವನಕಟಿ
ನ್ನೆಲ್ಲಿ ಹೊಗುವೈ ಕಂದ ಕುಂತಿಯ ಜಠರವಲ್ಪವಲೆ
ನಿನ್ನುನಿಲ್ಲೆನುತೈದಿ ಬರಲ
ಲ್ಲಲ್ಲಿ ಮರುಗಿತು ಸೇನೆ ಸಾಹಸ
ಮಲ್ಲನಡಹಾಯಿದನು ದ್ರುಪದನು ಧನುವನೊದರಿಸುತ ೪೭

ರಾಯನಾಪತ್ತಿಂದ ಮುನ್ನವೆ
ಸಾಯಬೇಹುದು ತನಗೆನುತಲಡ
ಹಾಯಿದನು ಕಲಿ ಮತ್ಸ್ಯನೃಪ ನಿಜಬಂಧುಗಳ ಸಹಿತ
ನೋಯಬೇಹುದು ಮುನ್ನ ತಾವೆನು
ತಾಯತಿಕೆಯಲಿ ಪಂಚ ಕೈಕೆಯ
ರಾಯುಧದ ಬೆಳಗಳ್ಳಿರಿಯ ನೂಕಿದರು ತೇರುಗಳ ೪೮

ತಲೆಗೆ ಕೊಂಡೆವು ಹಣವನಿನ್ನಿದ
ನುಳುಹಿಕೊಂಡಿರಲಾಗದೆಂದಿ
ಟ್ಟಳಿಸಿ ಹೊಕ್ಕುದು ಯವನ ಸಂವೀರರು ಸುಷೇಣಕರು
ಅಳವಿಗಳುಕುವುದಾಳುತನದ
ಗ್ಗಳಿಕೆಯೇ ಸುಡಲೆನುತ ಮನ ಮುಂ
ಕೊಳಿಸಿ ಕುಂತೀಭೋಜ ಹೊಕ್ಕನು ಸಕಲದಳ ಸಹಿತ ೪೯

ಹರೆದ ಬಲವೊಗ್ಗಾಯ್ತು ರಾಯನ
ನುರವಣಿಸಲೀಯದೆ ನೃಪಾಲಕ
ರುರುಬಿದರು ತರುಬಿದರು ಪರಬಲ ಕಾಲಭೈರವನ
ಹೊರಳಿಯೊಡೆಯದೆ ಭಾರಣೆಯಲೊ
ತ್ತರಿಸಿ ಕಲ್ಪದ ಕಡೆಯ ಕಡಲಿನ
ಗರುವಿಕೆಯ ಗಾಢದಲಿ ನಡೆದರು ತಡೆದರರಿಭಟರ ೫೦

ತೊಲಗು ವಿಪ್ರಾಧಮ ಸುಯೋಧನ
ಬಲದೊಳಗೆ ಬಹು ಭಾಷೆತನದಲಿ
ಗಳಹಿ ಬಂದರೆ ಹಿಡಿಯ ಬಲ್ಲೈ ಧರ್ಮನಂದನನ
ಗಳದ ಸತ್ವವನರಿಯದದ್ರಿಗೆ
ತಲೆಯನೊಡ್ಡುವರೇ ವೃಥಾ ಕಳ
ಕಳಿಸಿ ನುಡಿವರೆ ಮಾನ್ಯರೆನುತಿದಿರಾದನಾ ದ್ರುಪದ ೫೧

ದಿಟ್ಟನಹೆಯೋ ದ್ರುಪದ ಹಾ ಜಗ
ಜಟ್ಟಿಗಳಿಗುಪಹಾಸ್ಯವೇ ಗರಿ
ಗಟ್ಟಿದಿರಿ ನೀವ್ ಹಿಡಿಯಲೀವಿರೆ ಧರ್ಮನಂದನನ
ತೊಟ್ಟ ಜೋಹಕೆ ತಕ್ಕ ನುಡಿಗಳ
ಬಿಟ್ಟೆವಲ್ಲದೆ ನಿಮ್ಮ ರಾಯನ
ಕಟ್ಟಲಾಪೆವೆ ಎನುತ ಕರೆದನು ಸರಳ ಸರಿವಳೆಯ ೫೨

ದರ್ಪದಾಭರಣಕ್ಕೆ ಸೂಸಿದ
ವೊಪ್ಪಸಲಿಗೆಗಳೆನಲು ಗರಿಗಳು
ಚಪ್ಪರಿಸಿ ತುರುಗಿದುವು ರಿಪುಸೇನಾಸಮುದ್ರದಲಿ
ಹಿಪ್ಪೆಗರ ಹರಗಡಿದು ಹೊಗರಲ
ಗೊಪ್ಪಿದವು ಕರುಳುಗಳ ನಿಮಿಷದೊ
ಳೊಪ್ಪಗೆಡಿಸಿದವರಿ ಕದಂಬವನೀತನಂಬುಗಳು ೫೩

ಮರುಳೆ ಮಂಜಿನ ಮಳೆಗೆ ಕುಲಗಿರಿ
ಕರಗುವುದೆ ನೀನೆಚ್ಚ ಶರ ಪಂ
ಜರಕೆ ಸಿಲುಕುವ ವೀರರೇ ಪಾಂಡವ ಮಹಾರಥರು
ಕೊರಳ ರಕ್ಷಿಸಿಕೊಳ್ಳೆನುತ ಚ
ಪ್ಪರಿಸಿ ದ್ರುಪದ ವಿರಾಟರೆಚ್ಚರು
ಸರಳ ರಶ್ಮಿಯ ಮಾಲೆ ಮುಕ್ಕುರುಕಿದವು ದಿಗುತಟವ ೫೪

ಗಿರಿಯ ಮಕ್ಕಳು ನೆರೆದು ವಜ್ರವ
ಸರಸವಾಡುವ ಕಾಲವಾಯಿತೆ
ಹರಹರತಿ ವಿಸ್ಮಯವೆನುತ ಹೊಗರೇರಿ ಖತಿ ಮಸಗಿ
ತಿರುವ ಕಾರಿಸಿದನು ಕಠೋರದ
ಮೊರಹುಗಳ ಬಾಯ್ದಾರೆಗಳ ಕಿಡಿ
ಹೊರಳಿಗಳ ಹೊಗರಂಬು ಹೊಕ್ಕವು ಪಾಂಡು ಸೈನ್ಯದಲಿ ೫೫

ನರರ ಕಡಿಯಾನೆಗಳ ಕಡಿಯಲಿ
ಬೆರಸಿದವು ತೇಜಿಗಳ ಕರುಳಲಿ
ಕರಿ ಘಟೆಯ ಕರುಳುಗಳು ತೊಡಕಿದವುಡಿದ ತೇರುಗಳು
ಜರಿದ ಜೋಡಿನೊಳೊಂದಿದವು ಕ
ತ್ತರಿಸಿದಾಯುಧ ಕಡಿದ ಸಿಂಧದ
ಹೊರಳಿಯಲಿ ಹೋಳಿದವು ನಿಮಿಷಕೆ ಪಾಂಡು ಸೇನೆಯಲಿ ೫೬

ನೊರೆ ರಕುತ ಸುಳಿ ಮಸಗಿ ಮಿದುಳಿನ
ಹೊರಳಿಗಳೆದುಬ್ಬಣದ ನೆಣ ವಸೆ
ದೊರಳೆಗಳ ಮೆದಕುಗಳ ಮೂಳೆಯ ಬಸಿವ ಬಲು ಜಿಗಿಯ
ಕರುಳ ಬಂಬಲು ಖಂಡದಿಂಡೆಯ
ತುರುಗಿದೆಲುವಿನ ತಳಿತ ಚರ್ಮದ
ಶಿರದ ತಡಿಗಳಲಡಸಿ ಹರಿದುದು ವೈರಿಸೇನೆಯಲಿ ೫೭

ಕೂಡೆ ತಳಪಟವಾಯ್ತು ಸುಭಟರ
ಜೋಡಿ ಜರಿದುದು ಕೌರವೇಂದ್ರಗೆ
ಖೋಡಿಯುಂಟೇ ದ್ರೋಣ ಕೇಣವ ಬಿಟ್ಟು ಕಾದುವರೆ
ಖೇಡತನ ಬಿಗುಹಾಯ್ತು ಮೈಯಲಿ
ಮೂಡಿದವು ಹೊಗರಂಬುಗಳು ತೆಗೆ
ದೋಡಿದವು ತೆಕ್ಕೆಯಲಿ ಪಾಂಡವ ನೃಪ ಮಹಾರಥರು ೫೮

ಘಾಯವಡೆದನು ದ್ರುಪದ ಮತ್ಸ್ಯನ
ಬಾಯೊಳೊಕ್ಕುದು ರಕುತ ಕೈಕೆಯ
ರಾಯುಧಂಗಳನೊಪ್ಪಿಸಿದರಿಳಿದೋಡಿದರು ರಥವ
ಸಾಯಲಾದನು ಧೃಷ್ಟಕೇತು ವಿ
ಡಾಯಿಗೆಟ್ಟನು ಭೋಜನಿತ್ತಲು
ರಾಯನಲ್ಲಿಗೆ ರಥವ ದುವ್ವಾಳಿಸಿದನಾ ದ್ರೋಣ ೫೯

ತೀರಿತಿನ್ನೇನರಿ ನೃಪನ ಸಂ
ಸಾರವಿನ್ನರೆ ಘಳಿಗೆಯಲಿ ಗಾಂ
ಧಾರಿ ನೆರೆ ನೋಂಪಿನಲಿ ಪಡೆದಳು ಕೌರವೇಶ್ವರನ
ಸಾರ ಹೇಳೋ ಸಾಹಸಿಕರೆಂ
ದಾರುತಿರೆ ಬಲವಿತ್ತಲಾಹವ
ಧೀರ ಸಾತ್ಯಕಿ ಭೀಮ ಪಾರ್ಥ ಕುಮಾರರನುವಾಯ್ತು ೬೦

ಗೆಲಿದನೈ ಮಝ ಪೂತು ದ್ರೋಣನ
ಬಲುಹು ಭರ್ಗನ ಸರಿ ಯುಧಿಷ್ಠಿರ
ಸಿಲುಕಿದನಲಾ ಶಿವಶಿವಾ ಕಲಿಕರ್ಣ ನೋಡೆನುತ
ಉಲಿವ ದುರಿಯೋಧನನನೀಕ್ಷಿಸು
ತಲಘು ಭುಜಬಲ ಭಾನು ನಂದನ
ನಳುಕದೀ ಮಾತುಗಳನೆಂದನು ನೀತಿಸಮ್ಮತವ ೬೧

ಗೆಲುವು ನಮಗೆಲ್ಲಿಯದು ಧರ್ಮಜ
ಸಿಲುಕುವುದು ತಾನಿಲ್ಲ ಕೃಷ್ಣನ
ನೆಳಲು ದಿಟವುಂಟಾದೊಡೊಳಗಾಗರು ವಿರೋಧಿಗಳು
ನೆಲನ ತಿಣ್ಣವ ತಿದ್ದಲೋಸುಗ
ಸುಳಿದನರಿಯಾ ಕೃಷ್ಣನೀತನ
ಬಲದವರಿಗೆಂತಹುದು ಬಾಧೆಗಳೆಂದನಾ ಕರ್ಣ ೬೨

ಗಿರಿಯ ಕೊರಳಿಗೆ ವಜ್ರಮಣಿಯಾ
ಭರಣವೇ ದಳ್ಳುರಿಯ ಜೋಡುಗ
ಳರಗಿನೋಲೆಯಕಾರರಿಗೆ ಸುಯಿಧಾನವೇ ನೃಪತಿ
ವರ ತಿಮಿರ ರಾಜಂಗೆ ಮಂಗಳ
ಕರವೆ ಆ ರವಿ ಕೃಷ್ಣ ಭಕ್ತರ
ಪರಿಭವವು ಜೀವರಿಗೆ ಪಥ್ಯವೆ ಎಂದನಾ ಕರ್ಣ ೬೩

ಇರಲಿ ಮೇಣ್ ದೂರದಲಿ ಹತ್ತಿರೆ
ಯಿರಲಿ ತನ್ನವರೆಂದರತ್ತಲೆ
ಹರಹಿಕೊಂಬನು ಕೃಷ್ಣನದು ತನಗೇರಿಸಿದ ಬಿರುದು
ಹರಿ ಸಮೀಪದೊಳಿಲ್ಲ ದ್ರೋಣಂ
ಗರಸ ಸಿಲುಕಿದನೆಂದು ಬಗೆದೈ
ಮರುಳೆ ಮುರವೈರಿಯ ಕಟಾಕ್ಷದ ಕಾಹು ಘನವೆಂದ ೬೪

ಆ ಹದನದಂತಿರಲಿ ನಮ್ಮೀ
ಯಾಹವಕೆ ಕಲಿ ಭೀಮ ಸಾತ್ಯಕಿ
ರೂಹುದೋರಿದರದೆ ಘಟೋತ್ಕಚ ಪಾರ್ಥಸುತರೊಡನೆ
ಸಾಹಸಿಕರೊಗ್ಗಾಯ್ತು ದ್ರೋಣಂ
ಗೀ ಹದನು ಭಾರಾಂಕವೀಗಳೆ
ಬೇಹ ಸುಭಟರ ಕಳುಹು ಕಾಳೆಗಕೆಂದನಾ ಕರ್ಣ ೬೫

ಎನಲು ನೂಕಿದನರಸ ದುಶ್ಯಾ
ಸನ ಜಯದ್ರಥನಿನತನುಜ ಗುರು
ತನುಜ ಕೃಪ ಮಾದ್ರೇಶ ಭಗದತ್ತಾದಿಗಳು ಸಹಿತ
ತನತನಗೆ ನಾಯಕರು ದ್ರೋಣನ
ಮೊನೆಯ ಬಲಿದರು ಹಿಡಿ ಯುಧಿಷ್ಠಿರ
ಜನಪತಿಯನೆನುತುರುಬಿದರು ತುರುಬಿದರು ಪರಬಲವ ೬೬

ಫಡಫಡಾರೋ ಧರ್ಮಪುತ್ರನ
ಹಿಡಿವವರು ಬಾಯ್ಬಡಿಕರೈ ಕಾ
ಳ್ಗೆಡೆದಡೇನಹುದೆನುತ ಹೊಕ್ಕನು ಭೀಮನುರವಣಿಸಿ
ಕಡಲ ಕಡುಹಿನ ಬಹಳ ಲಹರಿಯ
ನೊಡೆಮುರಿವ ಮಂದರದವೋಲವ
ಗಡಿಸಿ ಹೊಕ್ಕನು ಗದೆಯ ಘಾಡದ ಹೊದರ ಹೊಯ್ಲಿನಲಿ ೬೭

ಗದೆಯ ಘಾತಾಘಾತಿಕಾರನ
ನಿದಿರುಗೊಂಡುದು ದೆಸೆದೆಸೆಗೆ ಹ
ಬ್ಬಿದುದು ಬಲನೆಡೆಜೋಡು ಬಲು ಭಾರಣೆಯ ಪಟುಭಟರು
ಮದಗಜದ ನಿಡುವರಿಯ ತೇರಿನ
ಕುದುರೆಕಾರರ ಕಾಹಿನಲಿ ಕೊ
ಬ್ಬಿದುದು ನಿಬ್ಬರವಾಗಿ ಬಹುವಿದ ವಾದ್ಯ ನಿರ್ಘೋಷ ೬೮

ತೆತ್ತಿಗರ ಬರಹೇಳು ಭೀಮಂ
ಗೆತ್ತಣದು ಜಯವೆನುತ ಸುಭಟರು
ಮುತ್ತಿಕೊಂಡರು ಮುಸುಕಿದರು ಮೆತ್ತಿದರು ಸರಳುಗಳ
ಕತ್ತಲೆಯ ಹೇರಾಸಿ ಸೂರ್ಯನ
ನೊತ್ತಿ ತಹ ದಿನವಾಯ್ತಲಾ ಎನು
ತತ್ತಲಿತ್ತಲು ಮುರಿದು ತಳಪಟ ಮಾಡಿದನು ಭೀಮ ೬೯

ಒಂದು ಕಡೆಯಲಿ ಭೀಮ ಸವರಿದ
ನೊಂದು ದೆಸೆಯಲಿ ಸಾತ್ಯಕಿಯ ಶರ
ವೊಂದು ಕಡೆಯಲಿ ಪಾರ್ಥನಂದನ ಭೀಮನಂದನರು
ಒಂದು ಕಡೆಯಲಿ ನಕುಲ ಪಾಂಡವ
ನಂದನರು ಮತ್ತೊಂದು ದೆಸೆಯಲಿ
ಮುಂದುವರಿದರು ಮುರಿದರರಿಗಳ ಹೊದರ ಹೊಸ ಮೆಳೆಯ ೭೦

ಥಟ್ಟು ನುಗ್ಗಾಯಿತು ವಿರೋಧಿಗ
ಳಿಟ್ಟಣಿಸುತಿದೆ ದ್ರೋಣನೊಬ್ಬನ
ಬಿಟ್ಟು ನೋಡುವುದುಚಿತವಲ್ಲೆನುತೆಡಬಲನ ನೋಡಿ
ಬಿಟ್ಟನಾಹವಕಹಿತಬಲ ಜಗ
ಜಟ್ಟಿ ಕೌರವ ನೃಪತಿ ರಥವನು
ಹೊಟ್ಟುಗರ ತೆಗೆ ಹೋಗ ಹೇಳೆಂದೆಚ್ಚನತಿರಥರ ೭೧

ಮಗನ ತೆಗೆಯೋ ಸಾತ್ಯಕಿಯ ಹೆರ
ತೆಗೆಯ ಹೇಳೋ ಬೇಡ ನಕುಲಾ
ದಿಗಳ ನೂಕಭಿಮನ್ಯುವನು ಹಿಮ್ಮೆಟ್ಟ ಹೇಳೆನುತ
ಮೊಗದ ಹೊಗರಿನ ಕೆಂಪನುಗುಳ್ವಾ
ಲಿಗಳ ದಂತದಲೌಕಿದಧರದ
ಬಿಗಿದ ಹುಬ್ಬಿನ ಭೀಮ ಹೊಕ್ಕನು ಗದೆಯ ತಿರುಗಿಸುತ ೭೨

ಸಿಲುಕಿದನು ತಿವಿ ಸ್ವಾಮಿದ್ರೋಹನ
ಗಳದ ರಕುತಕೆ ಬಾಯನೊಡ್ಡೆನು
ತಳವಿಯಲಿ ಹೊಕ್ಕೊಕ್ಕಲಿಕ್ಕಿದನಾನೆ ಕುದುರೆಗಳ
ಎಲೆ ದುರಾತ್ಮ ದ್ಯೂತಕೇಳೀ
ಕಲಹಲಂಪಟ ನಿಲ್ಲು ನಿಲ್ಲೆನು
ತೊಳಗುವರಿದಪ್ಪಳಿಸಿದನು ದುರ್ಯೋಧನನ ರಥವ ೭೩

ತೋಳನಳವಿಗೆ ಸಿಕ್ಕಿತೋ ಮೃಗ
ಜಾಲ ಶಿವಶಿವ ದಿವಿಜ ವದುಗಳ
ತೋಳ ತೆಕ್ಕೆಗೆ ಒಡಲನಿತ್ತನು ರಾಯನಕಟೆನುತ
ಆಳು ಮಿಗೆ ಕಳವಳಿಸೆ ಕುರುಭೂ
ಪಾಲಕನ ಹಿಂದಿಕ್ಕಿ ಕಿವಿಗಡಿ
ಗೋಲ ತೆಗಹಿನೊಳೊದಗಿದರು ದುಶ್ಶಾಸನಾದಿಗಳು ೭೪

ವರ ವಿಕರ್ಣ ಸುಲೋಚನನು ದು
ರ್ಮರುಷಣನು ದುಶ್ಯಾಸನನು ಸಂ
ಗರವ ಕೆಣಕಿದರನಿಲಸುತನೊಳು ನೃಪನ ಹರಿಬದಲಿ
ನೆರೆದ ನುಸಿಗಳು ಗಿರಿಯ ಕಾಡುವ
ಸರಿಯ ನೋಡೈ ಪೂತುರೆನುತ
ಬ್ಬರಿಸಿ ಕೈದೋರಿದನು ಕಲಿ ಪವಮಾನಸುತ ನಗುತ ೭೫

ಎಚ್ಚ ಶರವನು ಗದೆಯಲಣೆದಿಡು
ಗಿಚ್ಚು ಹೊಕ್ಕಂದದಲಿ ರಥವನು
ಬಿಚ್ಚಿ ಬಿಸುಟನು ಸಾರಥಿಯನಾ ಹಯವನಾ ಧನುವ
ಕೊಚ್ಚಿದನು ಕೊಲೆಗಡಿಗನಿದಿರಲಿ
ಕೆಚ್ಚು ಮನದವರಾರು ಸೋಲವಿ
ದೊಚ್ಚತವಲೇ ನಿಮ್ಮ ಸೇನೆಗೆ ಭೂಪ ಕೇಳೆಂದ ೭೬

ಸರಿದರೀ ನಾಲುವರು ರಾಯನ
ಮರಳಲೀಯದೆ ಮತ್ತೆ ಮಾರುತಿ
ಹರಸಿದನು ನಿಜರಥವನತಿರಥರೊಡ್ಡು ಲಟಕಟಿಸೆ
ದೊರೆಯ ತೆಗಯೋ ನೂಕು ನೂಕಲಿ
ಕರಿಘಟೆಯನೆನೆ ಮುಗಿಲ ಮೋಹರ
ಧರೆಗೆ ತಿರುಗಿದವೆನಲು ಜೋಡಿಸಿದರು ಗಜವ್ರಜವ ೭೭

ವಂಗನಂಬಟ್ಟನು ವರಾಳ ಕ
ಳಿಂಗ ಬರ್ಬರರಾನೆಗಳ ಥ
ಟ್ಟಿಂಗೆ ಕೈವೀಸಿದರು ಕೊಂಡರು ನಾಳಿವಿಲ್ಲುಗಳ
ವಂಗಡದಲೆಂಬತ್ತು ಸಾವಿರ
ತುಂಗ ಗಜಘಟೆ ಕವಿದವಿದಕಿ
ನ್ನಂಗವಿಸುವವರಾರೆನುತ ಗಜಬಜಿಸಿತರಿಸೇನೆ ೭೮

ಆಳ ಹೆದರಿಸಿ ನುಡಿವ ನಾಯ್ಗಳ
ಬೀಳ ಬಡಿ ಬಡಬಾಗ್ನಿ ನೊರಜಿನ
ದಾಳಿಗಳುಕುವುದುಂಟೆ ಫಡ ಫಡಯೆನುತ ಬೊಬ್ಬಿರಿದ
ಕಾಲ ದಂಡವ ತಿರುಹಿ ಭುವನದ
ಲೂಳಿಗವ ಮಾಡುವ ಕೃತಾಂತನ
ಹೋಲುವೆಯ ಹೊಸಬಿಗನು ಹೊಕ್ಕನು ಭೀಮನುರವಣಿಸಿ ೭೯

ಗದೆಯಲಪ್ಪಳಿಸಿದನು ಕೋದಂ
ಡದಲಿ ಕಾದಿದ ಮುದ್ಗರದಲೊರ
ಸಿದನು ಲೌಡಿಯಲರೆದನುರೆ ತರಿದನು ಕೃಪಾಣದಲಿ
ಒದೆದು ಕೆಲವನು ಮುಷ್ಟಿಯಲಿ ಮೋ
ದಿದನು ಕೆಲವನು ನಿಖಿಳ ಶಸ್ತ್ರಾ
ಸ್ತ್ರದಲಿ ಕಾದಿದನನಿಲಸುತನಿಭಬಲವ ಬರಿಕೈದು ೮೦

ಗಿಳಿಯ ಹಿಂಡುಗಳೆತ್ತ ಗಿಡಿಗನ
ದಳದುಳವು ತಾನೆತ್ತ ಭೀಮನ
ಸುಳಿವು ಗಡ ಕಾಲೂರುವವೆ ಕರಿ ಘಟೆಗಳೊಗ್ಗಿನಲಿ
ಕಳಿತ ಹೂವಿನ ತೊಡಬೆಗಳೊ ರಿಪು
ಬಲವೊ ಬಿರುಗಾಳಿಯೊ ವೃಕೋದರ
ನಳವ ಬಲ್ಲವನಾವನೈ ಧೃತರಾಷ್ಟ್ರ ಕೇಳೆಂದ ೮೧

ಹೋಯಿತಾ ಮಾತೇಕೆ ಗಜದಳ
ಮಾಯವಾದುದು ವಂಗ ಭೂಪನ
ಬಾಯೊಳಗೆ ಬೆಟ್ಟಿದನು ಗದೆಯನು ಮಿಕ್ಕ ನಾಲ್ವರನು
ಸಾಯ ಬಡಿದನು ಮುಂದೆ ಕೌರವ
ರಾಯನನು ತಾಗಿದನು ಭೀಮನ
ದಾಯ ಬಂದುದು ಸಕಲ ಕುರು ತಳತಂತ್ರ ತಲ್ಲಣಿಸೆ ೮೨

(ಸಂಗ್ರಹ: ಸತ್ಯ, ಶೈಲ, ಮೋಹನ ಮತ್ತು ಪ್ರಿಯ - ಹಾಸನ)

1 comment:

vedasudhe said...

Nimma prayatna chennaagide. Shubhavaagali. Samayavaadaaga illi Banni.

www.vedasudhe.blogspot.com