ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Sunday, February 21, 2010

ವಿರಾಟಪರ್ವ: ೦೪. ನಾಲ್ಕನೆಯ ಸಂಧಿ

ಸೂ: ವಿಗ್ರಹಕೆ ಸಮತಳಿಸಿ ಕುರುಕುಲ
ದಗ್ರಣಿಯ ಮುಂಕೊಂಡು ದಕ್ಷಿಣ
ಗೋಗ್ರಹಣದಲಿ ಭೀಮ ಹಿಡಿದನು ಕಲಿ ಸುಶರ್ಮಕನ

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವ ದೂತರವನಿಯ
ಮೇಲೆ ತೊಳಲುತಲರಸಿ ಕಾಣದೆ ಪಾಂಡುನಂದನರ
ಹೋಲುವಿಕೆಯಿಂಬಿಡಿಯಲಾರದೆ
ಕಾಲ ಸವೆಯಲು ನಾಲ್ಕು ದಿಕ್ಕಿನ
ಮೂಲೆಯವರೈತಂದು ಬಿನ್ನವಿಸಿದರು ಕುರುಪತಿಗೆ ೧

ವಿತಳದೊಳು ಹೊಕ್ಕಿರಲಿಯಮರಾ
ವತಿಯೊಳಗೆ ಮೇಣಿರಲಿ ನಮ್ಮೀ
ಕ್ಷಿತಿಯೊಳಗೆ ಸುಳುಹಿಲ್ಲ ನೃಪ ಕುಂತೀಕುಮಾರಕರ
ಮತಿಯ ಹಬ್ಬುಗೆಯಿಂದ ನಾನಾ
ಗತಿಯೊಳಗೆ ಹೊಕ್ಕರಸಿದೆವು ಕುರು
ಪತಿಯೆ ಕೇಳ್ ನಿರ್ನಾಮರಾದರು ನಿನ್ನ ವೈರಿಗಳು ೨

ಎನಲು ನಸುನಗುತರಸ ಮನದಲಿ
ತನಗೆ ಹಗೆಯಿಲ್ಲೆಂದು ದೂತರ
ಮನವೊಲಿದು ಮನ್ನಿಸಿದ ನಾಲುಕು ಕಡೆಯ ವಾರ್ತೆಗಳ
ತನತನಗೆ ಮಂತ್ರಿಗಳು ಬೆಸಗೊಳ
ಲನಿತು ದೂತರೊಳಬ್ಬ ಕೀಚಕ
ಹನನವನು ವಿಸ್ತರಿಸಿದನು ಕುರುರಾಯನಿದಿರಿನಲಿ ೩

ಒಂದು ವಾರ್ತೆಯಲಾ ತ್ರಿಗರ್ತಾ
ನಂದಕರವಿದು ಜೀಯ ಕೀಚಕ
ವೃಂದವನು ಗಂಧರ್ವರಿರುಳೈತಂದು ಖಾತಿಯಲಿ
ಕೊಂದು ಹೋದರು ರಾವಣನ ವಿಧಿ
ಯಿಂದು ಕೀಚಕಗಾಯಿತೆನೆ ಕೇ
ಳ್ದೊಂದು ನಿಮಿಷ ಮಹೀಶ ಮೋನವ ಹಿಡಿದು ಬೆರಗಾದ ೪

ಹೇಳು ಹೇಳಿನ್ನೊಮ್ಮೆ ಮತ್ಸ್ಯನ
ತೋಳು ಮುರಿದುದೆ ಸುಭಟರೊಳು ಕ
ಟ್ಟಾಳು ಕೀಚಕ ಮಡಿದನೇ ಗಂಧರ್ವರಿರಿದವರೇ
ಮೇಲಣವರಿಗೆ ಮರ್ತ್ಯರಿಗೆ ಕೈ
ಕಾಲು ಮೆಟ್ಟಿನ ತೋಟಿಯೇತಕೆ
ಹೋಲದೋ ಹುಸಿ ಹೋಗೆನುತ ಮುಖದಿರುಹಿದನು ಭೂಪ ೫

ಅಹುದು ಜೀಯವಧರಿಸು ದಿವಿಜರ
ಮಹಿಳೆಯೋಲೈಸಿದಳು ಮತ್ಸ್ಯನ
ಮಹಿಳೆಯನು ಬಳಿಕಾಕೆಯೋಲಗದಲ್ಲಿ ಸತಿಯಿರಲು
ಕುಹಕಿ ಕಂಡಳುಪಿದರೆ ನಾಟ್ಯದ
ಗೃಹವ ಸೂಚನೆಗೊಟ್ಟು ನಿಮಿಷಕೆ
ರಹವ ಮಾಡಿದರವರು ಸವರಿದರಖಿಳ ಕೀಚಕರ ೬

ಅವನಿಪತಿ ಮೂಗಿನಲಿ ಕರ ಪ
ಲ್ಲವವನಿಟ್ಟನು ತಲೆಯ ತೂಗಿದ
ನವಳು ದುರುಪದಿ ಖಳರ ಕೊಂದವ ಭೀಮ ಗಂಧರ್ವ
ದಿವಿಜ ಸತಿಯೆತ್ತಲು ವಿರಾಟನ
ಭವನದೋಲಗವೆತ್ತಲದು ಪಾಂ
ಡವರ ಕೃತ್ರಿಮ ತಂತ್ರ ಮರೆಯಿರಿಗಾರರವರೆಂದ ೭

ಪರಿಮಳವ ಕದ್ದೋಡವನಿಲನ
ಹರಿವ ಹೆಜ್ಜೆಯ ಹತ್ತುವರೆ ಮಧು
ಕರನೆ ಬಲ್ಲುದು ಜೀಯ ಬಲ್ಲಿರಿ ನಿಮ್ಮವರ ಪರಿಯ
ಹರದ ಮಾತಿನ ಹದನು ಬಳಿಕಾ
ಚರರಿಗಿದು ಗೋಚರಿಸುವುದೆಯೆಂ
ದರಸನನು ಕೊಂಡಾಡಿದರು ಮಂತ್ರಿಗಳು ತವತವಗೆ ೮

ಪ್ರೌಢಿಯಲ್ಲಿದು ಕೇಳಿ ಬಲ್ಲೆವು
ರೂಢಿಯಲಿ ಸಮಬಲರು ಭೀಮ ಸ
ಗಾಢದಲಿ ಬಲಭದ್ರ ಕೀಚಕ ಶಲ್ಯರೆಂಬುವರು
ಗೂಢರನು ಗರುವಾಯಿಗೆಡಿಸಿಯೆ
ಗಾಢಿಕೆಯ ನೆರೆ ಮೆರೆಯಬೇಕೆನೆ
ರೂಢಿ ಸಮತಳಿಸಿತ್ತು ಸೇನೆಯ ನೆರಹಬೇಕೆಂದ ೯

ಕರೆಸಿದನು ಗಾಂಗೇಯ ಗರುಡಿಯ
ಗುರುವನಶ್ವತ್ಥಾಮ ಸಂಜಯ
ವರ ಕೃಪಾಚಾರಿಯನ ಸೈಂಧವ ಸೂರ್ಯನಂದನನ
ಬರಿಸಿದನು ತೆಂಕಣದ ದಿಗುತಟ
ದರಸುಗಳ ದೆಸೆಯಿಂದ ಬೇಹಿನ
ಚರರು ಬಂದರು ಕೇಳಿರೈ ಹೊಸ ವಾರ್ತೆಯನುಯೆಂದ ೧೦

ಭೀಮ ಕೀಚಕ ಶಲ್ಯನೀ ಬಲ
ರಾಮನೆಂಬೀ ನಾಲುವರು ಸಂ
ಗ್ರಾಮದೊಳು ಸರಿ ಖಚರರೆಂಬುದು ಬಯಲಿನಪವಾದ
ಭೀಮನಾಗಲು ಬೇಕು ಕೀಚಕ
ಕಾಮುಕನ ದುರುಪದಿಗೆ ಅಳುಪಿದ
ತಾಮಸನ ಹಿಡಿದೊರೆಸಿದವನೆಂದನು ಸುಯೋಧನನು ೧೧

ಮಾತು ಹೋಲುವೆಯಹುದು ನುಡಿದುದು
ನೀತಿ ಧರ್ಮಜನಿದ್ದ ದೇಶ
ವ್ರಾತದೊಳು ಬರನಿಲ್ಲ ಸವೆಯವು ಬೆಳೆದ ಬೆಳಸುಗಳು
ಬೀತ ಬನವಲ್ಲಿಲ್ಲ ಹುಸಿ ಕೊಲೆ
ಪಾತಕಾದಿಗಳಿಲ್ಲ ಸೊಂಪಿನ
ನೂತನದ ಸಿರಿಯೆಂದು ನುಡಿದನು ರಾಯ ಗಾಂಗೇಯ ೧೨

ಎಲ್ಲಿ ಲಕ್ಷ್ಮಿಯ ಬೀಡು ಧರಣಿಯೊ
ಳೆಲ್ಲಿ ಸೊಂಪಿನ ನಾಡು ನಗರದೊ
ಳೆಲ್ಲಿ ವಿಭವದ ಕಡಲು ಶೈತ್ಯದ ಸಾರ ಸೌರಂಭ
ಎಲ್ಲಿ ನೆಲೆಸಿಹುದಲ್ಲಿ ಪಾಂಡವ
ರಿಲ್ಲದಿರರಿನ್ನವರ ನೆಲೆಗಾ
ಬಲ್ಲಿ ಸಂಶಯವಿಲ್ಲವೆಂದನು ಭೀಷ್ಮ ನಸುನಗುತ ೧೩

ಅತ್ತ ಹಿಮಗಿರಿ ಮೇಲೆ ಭಾವಿಸ
ಲಿತ್ತ ಮೂರು ಸಮುದ್ರ ಗಡಿಯಿಂ
ದಿತ್ತ ನಾನಾ ದೇಶವೆಂಬಿವು ಬರದ ಬೇಗೆಯಲಿ
ಹೊತ್ತಿ ಹೊಗೆದವು ಮಧ್ಯ ದೇಶದ
ಲುತ್ತಮದ ಸಿರಿ ಫಲದ ಬೆಳಸುಗ
ಳೊತ್ತೆಯಿದು ಪಾಂಡವರ ಚಾವಡಿಯೆಂದನಾ ದ್ರೋಣ ೧೪

ಅವಧಿ ತುಂಬದ ಮುನ್ನಲೀ ಪಾಂ
ಡವರ ಕಾಣಿಸಿಕೊಂಬ ಮತ್ತಂ
ತವರು ಸತ್ಯಕೆ ನಡೆಯಬೇಹುದು ಮುನ್ನಿನಂದದಲಿ
ಅವರ ನೆಲೆಗಾಣಿಸುವ ಮಂತ್ರದ
ಹವಣನರುಪುವೆನೆಂದು ರವಿಸುತ
ನವನಿಪಗೆ ನಸುನಗುತ ನುಡಿದನು ರಾಜಕಾರಿಯವ ೧೫

ರಾಜಮಂದಿರದೊಳಗೆ ನೀತಿಗ
ಳೋಜೆಯಿಲ್ಲದ ಸಚಿವರಿಂ ನಿ
ರ್ವ್ಯಾಜದಲಿ ಕೇಡಹುದು ತಪ್ಪದು ಲೋಕವಾರ್ತೆಯಿದು
ಗಾಜು ಕೇವಣಿಸಿದರೆ ರಜತದ
ರಾಜಭೂಷಣವಹುದೆ ಕರ್ಣನ
ಬೀಜಮಂತ್ರಗಳಿಂದ ಕೇಡಹುದೆಂದನಾ ಭೀಷ್ಮ ೧೬

ಅವರು ಸತ್ಯಕೆ ನಡೆವರಲ್ಲದೆ
ಬವರಕಂಜುವರಲ್ಲ ಪಾಂಡವ
ರವಧಿ ಬೀಳ್ಕೊಳಬಂದುದೈ ನೀ ಸಮಯದೊಳು ಕರೆಸಿ
ಅವರ ಧರಣಿಯನವರಿಗಿತ್ತರೆ
ನಿವಗನಿಷ್ಟತೆಯಿಲ್ಲ ಕೇಳೆಲೆ
ಅವನಿಪತಿಯೆಂದೆನುತ ನುಡಿದನು ಮತ್ತೆ ಗಾಂಗೇಯ ೧೭

ನನ್ನಿ ನಿಮ್ಮಯ ನುಡಿಯ ಕೈಕೊಂ
ಡೆನ್ನ ಭೂಮಿಯನೀಯೆನಯ್ಯನ
ಬನ್ನಣೆಯ ಮಾತಿನ್ನು ಕೊಳ್ಳದು ಸಾಕು ಸಂಧಿಯನು
ಮನ್ನಿಸುತ ಮರುಳಾದೆನೀ ನಿ
ಷ್ಪನ್ನತೆಯ ಬೀಳ್ಕೊಂಡ ಪಾಂಡವ
ಗುನ್ನಿಗಳ ಗರುವಾಯ ಮಾಡುವಿರೆಂದು ಖಳ ನುಡಿದ ೧೮

ಅರಿ ವಿರಾಟನ ಪುರಕೆ ಹಾಯಿದು
ತುರು ಸೆರೆಯ ತೆಗೆಸುವೆವು ಪಾಂಡವ
ರಿರಲು ಧರ್ಮದ ಮೇರೆ ಮರ್ಯಾದೆಗಳ ಬಲ್ಲವರು
ಅರವರಿಸದಂಗೈಸುವರು ನಾ
ವರಿದು ಕೊಂಬೆವು ಬಳಿಕ ವನದಲಿ
ವರುಷ ಹದಿಮೂರಕ್ಕೆ ಕೊಡುವೆವು ಮತ್ತೆ ವೀಳೆಯವ ೧೯

ಒಳ್ಳಿತಿದು ನಿರ್ದೋಷ ನಿರ್ಣಯ
ವೆಲ್ಲರಭಿಮತವಹುದು ರಿಪುಗಳ
ಖುಲ್ಲವಿದ್ಯವನರಿವುಪಾಯಕೆ ಬೇರೆ ಠಾವಿಲ್ಲ
ಅಲ್ಲಿ ಪಾಂಡವರಿಹರು ಸಂಶಯ
ವಿಲ್ಲ ದೇಶದ ಸೊಂಪು ಸಿರಿ ಮ
ತ್ತೆಲ್ಲಿಯೂ ಹಿರಿದಿಲ್ಲ ನಿಶ್ಚಯವೆಂದನಾ ಕರ್ಣ ೨೦

ಗುರುವಿನಭಿಮತವಹಡೆ ಕೃಪ ಮೊಗ
ದಿರುಹದಿದ್ದೊಡೆ ಭೀಷ್ಮ ಮನದಲಿ
ಮುರಿಯದಿರ್ದೊಡೆ ಗುರುಕುಮಾರನ ಮತಕೆ ಸೇರುವೊಡೆ
ವರ ಶಕುನಿಯಹುದೆಂದೊಡಾ ಸೋ
ದರರು ತಪ್ಪಲ್ಲೆಂದರಾದೊಡೆ
ಅರಸ ನೆಗಳ್ದುದೆ ಮಂತ್ರವೆಂದು ಸುಶರ್ಮ ಹೊಗಳಿದನು ೨೧

ಮತವಹುದು ತಪ್ಪಲ್ಲ ಪಾಂಡವ
ಗತಿಯನರಿವೊಡೆ ಮಾರ್ಗವಿದು ಸ
ಮ್ಮತವು ನಿರ್ಮಳ ನೀತಿಕಾರರ ಮನಕೆ ಮತವಹುದು
ಅತಿ ಗಳಿತವಾಯ್ತವಧಿ ದಿವಸ
ಸ್ಥಿತಿಯೊಳೈದಾರಾಗೆ ಬಳಿಕೀ
ಕ್ಷಿತಿಗೆ ಪಾಂಡವರುತ್ತರಾಯಿಗಳೆಂದನಾ ಭೀಷ್ಮ ೨೨

ಪರಿಗಣಿಸಿ ನೋಡಿದೊಡೆ ಮಾಡಿದ
ವರುಷ ತತಿಯೊಳು ಹೆಚ್ಚು ಕುಂದುಂ
ಟುರವಣಿಸಿ ಮಾಡುವುದು ನೆಗಳಿದ ರಾಜಕಾರಿಯವ
ಅರಿಯಲೇ ಬೇಕಾವ ಪರಿಯಿಂ
ದರಿದೆವಾದೊಡೆಯುತ್ತರೋತ್ತರ
ಧರಣಿ ಕುರುಪತಿಗೆಂದರಾ ದ್ರೋಣಾದಿ ನಾಯಕರು ೨೩

ಬೀಡು ನಡೆಯಲಿ ಮುಂದೆ ಮತ್ಸ್ಯನ
ನಾಡಿನೊಳು ಕಟಕಾಳಿ ದೂತರು
ಕೂಡೆ ಸಾರಲಿ ಕರೆಯಲಕ್ಷೋಹಿಣಿಯ ನಾಯಕರ
ಜೋಡಿಸಲಿ ಗುಡಿ ದಡ್ಡಿ ಚಂಪೆಯ
ಗೂಡಿ ಕೊಟ್ಟಿಗೆ ಬಂಡಿ ನಡೆಯಲಿ
ನಾಡ ಬಿಟ್ಟಿಗಳೆಂದು ಕೌರವರಾಯ ನೇಮಿಸಿದ ೨೪

ಹರಿದುದೋಲಗ ಮರುದಿವಸ ಗುಡಿ
ಹೊರಗೆ ಹೊಯ್ದವು ಸನ್ಮುಹೂರ್ತದೊ
ಳರಸ ಹೊರವಂಟನು ಸುಶರ್ಮಾದಿಗಳ ಗಡಣದಲಿ
ಸುರನದೀಸುತ ಕರ್ಣ ಕೃಪ ಗುರು
ಗುರುಸುತಾದಿ ಮಹಾಪ್ರಧಾನರು
ಕರಿತುರಗ ರಥಪತ್ತಿಯಲಿ ಹೊರವೊಂಟರೊಗ್ಗಿನಲಿ ೨೫

ಮೋಹರವ ಮೇಳೈಸಿದನು ನಿ
ರ್ವಾಹವನು ನಿಶ್ಚೈಸಿದನು ಮ
ತ್ತೂಹೆಕಾರರ ಮನವ ಸೋದಿಸಿಕೊಂಡು ತುರುಗೊಂಬ
ಸಾಹಸರನಟ್ಟಿದನು ವೈರಿಗ
ಳಾಹವಕೆ ನೆಲನಗಲದಲಿ ಬಲ
ಮೋಹಿಸಿತು ನೆರಸಿದನು ಬಹಳಾಕ್ಷೋಹಿಣೀ ಬಲವ ೨೬

ಕರಿಗಳಿಗೆ ಗುಳ ಬೀಸಿದವು ವರ
ತುರಗ ಹಲ್ಲಣಿಸಿದವು ತೇಜಿಯ
ತರಿಸಿ ರಥದಲಿ ಹೂಡಿ ಕೈದುವ ಸೆಳೆದು ಕಾಲಾಳು
ಅರಸನಿದಿರಲಿ ಮೋಹಿದುದು ಸೀ
ಗುರಿಯ ಸಬಳದ ಸಾಲಿನೊಳಗಂ
ಬರನ ಮುಸುಕಿತು ಧರಣಿ ತಗ್ಗಿತು ನೆರೆದುದಾ ಸೇನೆ ೨೭

ಆರತಿಗಳೆತ್ತಿದವು ತಳಿದು
ಪ್ಪಾರತಿಯ ಸೂಸಿದರು ಘನ ರಥ
ದೋರಣದ ಮಧ್ಯದಲಿ ಕೌರವರಾಯ ಕುಳ್ಳಿರಲು
ಸಾರಿದರು ಭಟ್ಟರು ಮಹಾ ನಾ
ಗಾರಿಗಳು ಬಿರುದಾವಳಿಯ ಕೈ
ವಾರಿಸುವ ಜಯರವದೊಡನೆ ನಿಸ್ಸಾಳ ಸೂಳೈಸೆ ೨೮

ಹೊಗೆದುದಂಬರವವನಿ ನಡುಗಿತು
ಗಗನಮಣಿ ಪರಿವೇಷದಲಿ ತಾ
ರೆಗಳು ಹೊಳೆದವು ಸುರಿದವರುಣಾಂಬುಗಳ ಧಾರೆಗಳು
ದಿಗುವಳಯದಲಿ ಧೂಮಕೇತುಗ
ಳೊಗೆದುವೆನಲುತ್ಪಾತ ಕೋಟಿಯ
ಬಗೆಯದವನಿಪ ಪುರವ ಹೊರವಂಟನು ಸಗಾಢದಲಿ ೨೯

ಪಳಹರದ ಪಲ್ಲವದ ಪಸರದ
ಪಳಿಯ ಪಟ್ಟಿಯ ತೋಮರದ ಹೊಳೆ
ಹೊಳೆವ ಚಮರದ ಸೀಗುರಿಯ ಡೊಂಕಣಿಯ ತಿಂಥಿಣಿಯ
ಬಿಳುಗೊಡೆಯ ಝಲ್ಲರಿಯ ಜೋಡಿಗ
ಳೊಳಗೆ ಗಗನವು ತೀವಿತೆನೆ ಹೆ
ಕ್ಕಳಸಿ ನಡೆದುದು ಸೇನೆ ಪಯಣದ ಮೇಲೆ ಪಯಣದಲಿ ೩೦

ರಾಯದಳ ನಡೆಗೊಂಡುದೊಗ್ಗಿನ
ನಾಯಕರು ಮನ್ನೆಯರು ರಾಜ ಪ
ಸಾಯಿತರು ಸಂವರಣೆ ಸೌರಂಭದಲಿ ಸಂದಣಿಸೆ
ತಾಯಿಮಳಲುಬ್ಬಳಿಸೆ ಜಲನಿಧಿ
ಬಾಯಬಿಡೆ ಗರ್ಜಿಸುವ ನಿಸ್ಸಾ
ಳಾಯತದ ಸೂಳೊದಗೆ ಪಯಣದ ಮೇಲೆ ಪಯಣದಲಿ ೩೧

ಸೆಳೆವ ಸಿಂಧದ ಕವಿವ ಹೀಲಿಯ
ವಳಯ ತೋಮರ ಚಮರ ಡೊಂಕಣಿ
ಗಳ ವಿಡಾಯಿಯಲಮಮ ಕೆತ್ತುದು ಗಗನವಳ್ಳರಿಯೆ
ಸುಳಿಯಲನಿಲಂಗಿಲ್ಲ ಪಥ ಕೈ
ಹೊಳಕಬಾರದು ರವಿಗೆ ನೆಲನೀ
ದಳವನಾನುವಡರಿದೆನಲು ಜೋಡಿಸಿತು ಕುರುಸೇನೆ ೩೨

ಪೊಡವಿ ಜಡಿದುದು ಫಣಿಯ ಹೆಡೆಗಳು
ಮಡಿದವಾಶಾ ದಂತಿಗಳು ತಲೆ
ಗೊಡಹಿದವು ಬಲದೊಳಗೆ ಮೊಳಗುವ ಲಗ್ಗೆವರೆಗಳಲಿ
ಕಡಲು ಮೊಗೆದದು ರತುನವನು ನೆಲ
ನೊಡೆಯಲಗ್ಗದ ಸೇನೆ ವಹಿಲದಿ
ನಡೆದು ಬರಲಾ ಧೂಳಿ ಮುಸುಕಿತು ರವಿಯ ಮಂಡಲವ ೩೩

ಪ್ರಳಯಪಟು ಜಲರಾಶಿ ಜರಿದುದೊ
ತಳಿತ ಸಂದಣಿಗಿಲ್ಲ ಕಡೆಯೀ
ದಳಕೆ ಮಾರ್ಮಲೆತಾರು ನಿಲುವವರಿಂದ್ರ ಯಮರೊಳಗೆ
ಹುಲು ನೃಪರಿಗೀಯೊಡ್ಡು ಗಡ ಈ
ಬಲುಹು ಹೊದರಿನ ಹೊರಳಿಯೀ ಕಳ
ಕಳಿಕೆಯೇಕೆನೆ ನೂಕಿದುದು ಕುರುಸೇನೆ ದಟ್ಟೈಸಿ ೩೪

ಎರಡು ಮೋಹರವಾಗಿ ತೆಂಕಲು
ಹರಿದು ತುರುಗಳ ತಡೆಯಿ ನಾವು
ತ್ತರದಲಾನುವೆವೆನುತ ನೃಪತಿ ತ್ರಿಗರ್ತನನು ಕಳುಹಿ
ಹುರಿಯೊಡೆದು ಹದಿನಾರು ಸಾವಿರ
ವರ ಮಹಾರಥರೊಗ್ಗಿನಲಿ ದು
ರ್ಧರ ಸುಶರ್ಮನು ದಾಳಿಯಿಟ್ಟನು ತೆಂಕ ದೆಸೆಗಾಗಿ ೩೫

ಅಸಿತ ಪಕ್ಷಾಷ್ಟಮಿಯ ದಿನ ಸಂ
ಧಿಸಿದರಾಳೆದ್ದುದು ವಿರಾಟನ
ಪಶು ಸಮೂಹವ ಮುತ್ತಿದರು ಗೋಪಾಲಕರ ಕೆಡಹಿ
ಹೊಸ ಮುಖಕೆ ಸೀವರಿಸಿದವು ದೆಸೆ
ದೆಸೆಗೆ ಹಿಂಡುಗಳೊಡೆದು ಹಾಯ್ದವು
ಮಸಗಿತಂಬಾ ರವದ ಕಳವಳವಾಯ್ತು ನಿಮಿಷದಲಿ ೩೬

ಆಳು ಸುತ್ತಲು ಕಟ್ಟಿ ತುರುಗಳ
ಕೋಳ ಹಿಡಿದರು ಬೊಬ್ಬಿರಿದು ಗೋ
ಪಾಲರಾಂತರೆ ಕಾದಿದರು ಕಡಿಖಂಡಮಯವಾಗೆ
ಮೇಲೆ ಮೇಲೈತಪ್ಪ ಹೆಬ್ಬಲ
ದಾಳು ಕುದುರೆಯ ಕಂಡು ನೂಕದು
ಕಾಳಗವು ತಮಗೆನುತ ತಿರುಗಿತು ಗೋವರುಳಿದವರು ೩೭

ಮಿಸುಪ ಕಂಬಳಿ ಕೊಂಬು ಕಲ್ಲಿಯ
ಬಿಸುಟು ಗಾಯದಿ ಗೋವಳರು ಹೊ
ತ್ತಸುವ ಕೊರಳಲಿ ಹಿಡಿದು ನಾಲಗೆಯೊಣಗಿ ಢಗೆ ಹೊಯ್ದು
ವಿಷಮ ರಣಭೀತಿಯಲಿ ಕಂದಿದ
ಮುಸುಡ ತೊದಲಿನ ನುಡಿಯ ಮರಣದ
ದೆಸೆಯ ಕೈಸನ್ನೆಗಳ ಕಾತರರೈದಿದರು ಪುರವ ೩೮

ಬಸಿವ ನೆತ್ತರ ಗೋವರರಸಂ
ಗುಸುರಲಾರದೆ ಧೊಪ್ಪನಡೆಗೆಡೆ
ದಸುವ ಕಳೆದರು ಕೆಲರು ಕೆಲಬರು ತಮ್ಮ ಸಂತೈಸಿ
ಅಸಮ ಬಲವದು ಜೀಯ ಗೋವರ
ಕುಸುರಿದರಿದರುವತ್ತು ಸಾವಿರ
ಪಶುಸಮೂಹವ ಹಿಡಿದರೆಂದರು ಮತ್ಸ್ಯಭೂಪತಿಗೆ ೩೯

ಕೇಳಿ ಬಿಸುಸುಯ್ದನು ವಿರಾಟ ನೃ
ಪಾಲನಿಂದಿನಲಳಿದನೇ ಕ
ಟ್ಟಾಳು ಕೀಚಕನೆನುತ ನೋಡಿದನಂದು ಕೆಲಬಲನ
ಆಳು ಗಜಬಜಿಸಿತ್ತು ಹಾಯಿಕು
ವೀಳೆಯವನಿಂದೆನಗೆ ತನಗೆಂ
ದೋಲಗದೊಳಬ್ಬರಣೆ ಮಸಗಿತು ಕದಡಿತಾಸ್ಥಾನ ೪೦

ಕೇಳಿ ಸಿಡಿಲೇಳಿಗೆಯಲೆದ್ದು ನೃ
ಪಾಲಕರು ಗಜಬಜಿಸಿ ರಭಸದೊ
ಳೋಲಗವ ಹೊರವಂಟು ನಡೆದರು ಭಾಷೆಗಳ ಕೊಡುತ
ಆಳು ಕೈದುವ ಕೊಂಡು ಕರಿಘಟೆ
ಮೇಳವಿಸಿ ಹಲ್ಲಣಿಸಿ ತೇಜಿಗ
ಳೋಲಿಯಲಿ ರಥ ಹೂಡಿ ಕವಿದುದು ಮತ್ಸ್ಯ ಪರಿವಾರ ೪೧

ಇವರು ತಮ್ಮೊಳಗೆಂದರದು ನ
ಮ್ಮವರ ಬಲ ತುರುಗೊಂಡವರು ಕೌ
ರವರು ನಮ್ಮ ಪರೀಕ್ಷೆಗೋಸುಗ ಬಂದ ಹದನಹುದು
ಅವಧಿ ತೀರದ ಮುನ್ನ ಕಾಣಿಸಿ
ನಮಗೆ ಬಳಿಕಾರಣ್ಯವಾಸವ
ನಿವರು ಕರುಣಿಸ ಬಂದರೆಂದನು ಧರ್ಮನಂದನನು ೪೨

ಅವಧಿ ತೀರಲಿ ಮೇಣು ಮಾಣಲಿ
ಎನಗೆ ತುರು ಹುಯ್ಯಲನು ಕೇಳಿದು
ಕಿವಿಯಲುದಕವ ಕೊಂಡಡಾ ಪಾತಕವನೆಣಿಸುವೊಡೆ
ಎವಗೆ ನೂಕದು ಸಾಕದಂತಿರ
ಲವರ ಬೆಂಬಳಿವಿಡಿದು ವರ ಗೋ
ನಿವಹವನು ಮರಳಿಚುವೆನೆಂದನು ಧರ್ಮನಂದನನು ೪೩

ಎಂದು ತಮ್ಮಂದಿರು ಸಹಿತ ಯಮ
ನಂದನನು ಕಲಹಾವಲೋಕಾ
ನಂದ ಪರಿಕರಲುಳಿತ ಕೋಮಲಕಾಯನನುವಾಗಿ
ಬಂದು ಮತ್ಸ್ಯನ ನೇಮದಲಿ ನಡೆ
ತಂದು ರಥವೇರಿದನು ಪಾರ್ಥನ
ಹಿಂದಕಿರಿಸಿ ವಿರಾಟನೊಡನವನೀಶ ಹೊರವಂಟ ೪೪

ವರ ವಿರಾಟ ಸಹೋದರರು ಸಾ
ವಿರದ ಸಂಖ್ಯೆಯ ರಾಜಪುತ್ರರು
ಕೊರಳ ಪದಕವ ಕಾಲ ತೊಡರಿನ ಮಣಿಯ ಮೌಳಿಗಳ
ಪರಿಮಳದ ಕತ್ತುರಿಯ ತಿಲಕದ
ಹೊರೆದ ಗಂಧದ ತೋರ ಮುಡುಹಿನ
ಕರದ ಖಂಡೆಯರದಟರೈದಿದರಾನೆ ಕುದುರೆಯಲಿ ೪೫

ತೂಳುವರೆಗಳ ಲಗ್ಗೆಯಲಿ ಕೆಂ
ಧೂಳು ಮಸಗಿ ವಿರಾಟ ಭೂಪತಿ
ಯಾಳು ಕವಿತರೆ ಕಂಡು ಸೈರಿಸಿ ತುರುವ ಹಿಂದಿಕ್ಕಿ
ಕಾಳಗವ ಕೊಟ್ಟರು ಛಡಾಳಿಸಿ
ಸೂಳವಿಸಿ ನಿಸ್ಸಾಳ ದಿಕ್ಕಿನ
ಮೂಲೆ ಬಿರಿಯೆ ವಿರಾಟಬಲ ಹಳಚಿದದು ಪರಬಲವ ೪೬

ಫಡ ವಿರಾಟನ ಚುಕ್ಕಿಗಳಿರವ
ಗಡಿಸದಿರಿ ಸಾಯದಿರಿ ಬಿರುದರ
ಹೆಡತಲೆಯ ಹಾವಾದ ಕೀಚಕನಳಿದನಿನ್ನೇನು
ಮಿಡುಕಿ ಕಟಕವ ಹೊಕ್ಕು ನರಿ ಹಲು
ಬಿಡುವವೊಲು ವೈರಾಟ ಕೆಟ್ಟನು
ಕಡೆಗೆನುತ ಕೈವೊಯ್ದು ನಕ್ಕದು ಕೂಡೆ ಕುರುಸೇನೆ ೪೭

ಕುದುರೆ ಹೊಕ್ಕವು ದಂತಿ ಘಟೆ ತೂ
ಳಿದವು ರಥವಾಜಿಗಳು ಸೇನೆಯ
ಹೊದರ ಹೊಯ್ದವು ಕೂಡೆ ಕಾಲಾಳಿರಿದು ಕಾದಿದರು
ಕದಡಿತಾ ದಳ ಮೈಯೊಳೊಕ್ಕವು
ಬಿದಿರಿದೆಲುಗಳು ಮುರಿದು ನೆತ್ತಿಯ
ಮಿದುಳು ಸುರಿದುದು ನೆತ್ತರುಬ್ಬರಿಸಿದುದು ನೆರೆ ಮಸಗಿ ೪೮

ದಿಂಡುಗೆಡೆದವು ದಂತಿಘಟೆ ಶತ
ಖಂಡವಾದವು ತುರಗದಳ ಮುಂ
ಕೊಂಡಿರಿದು ಕಾಲಾಳು ಕೆಡೆದವು ತಾರುಥಟ್ಟಿನಲಿ
ತುಂಡಿಸಿತು ರಥವಾಜಿ ಮಿದುಳಿನ
ಜೊಂಡಿನಲಿ ರಣಭೂಮಿ ರಕುತದ
ಗುಂಡಿಗೆಗಳೊಗ್ಗಾಯ್ತು ಶಾಕಿನಿ ಡಾಕಿನೀ ಜನಕೆ ೪೯

ಚೂಳಿಕೆಯ ಬಲ ಮುರಿದು ದೊರೆಗಳ
ಮೇಲೆ ಬಿದ್ದುದು ಬವರ ಬಳಿಕೆ
ಚ್ಚಾಳುತನದಲಿ ಹೊಕ್ಕು ದುವ್ವಾಳಿಸುವ ನಿಜರಥದ
ಮೇಲು ದಳ ಕವಿದುದು ಮಹಾರಥ
ರೇಳು ಸಾವಿರ ಮತ್ಸ್ಯಭೂಪನ
ಕಾಳಗಕೆ ತೆಗೆದರು ತ್ರಿಗರ್ತರ ಸೇನೆ ಮುರಿವಡೆದು ೫೦

ಬಲ ಮುರಿದು ಬರುತಿರಲು ಖಾತಿಯ
ತಳೆದು ವೀರ ಸುಶರ್ಮನಂಬಿನ
ಮಳೆಯ ಕರೆವುತ ರಿಪು ವಿರಾಟನ ರಥವ ತುರುಬಿದನು
ಎಲವೊ ಫಡ ಫಡ ಮತ್ಸ್ಯ ಹುಲುಮಂ
ಡಳಿಕ ನಿನಗೇಕಾಳುತನವೆಂ
ದುಲಿದು ಕೈಕೊಂಡೆಚ್ಚು ಕಾದಿದನಾ ವಿರಾಟನಲಿ ೫೧

ಸರಳು ತೀರಲು ಕಿತ್ತು ಸುರಗಿಯ
ತಿರುಹಿ ಹೊಯ್ದಾಡಿದರು ಮುರಿದೊಡೆ
ಪರಿಘದಲಿ ಕಾದಿದರು ಹೊಕ್ಕರು ಹಲಗೆ ಖಡ್ಗದಲಿ
ಬೆರಸಿ ತಿವಿದಾಡಿದರು ಮತ್ಸ್ಯನ
ಭರವ ಹೊಗಳುತ ಕಲಿ ಸುಶರ್ಮಕ
ನುರವಣಿಸಿದನು ಗಾಯವಡೆದು ವಿರಾಟನನು ಹಿಡಿದ ೫೨

ಸಿಕ್ಕಿದನು ದೊರೆಯೊಪ್ಪುಗೊಟ್ಟರು
ಚುಕ್ಕಿಗಳು ಕೀಚಕನ ನೆಳಲಿರೆ
ಸಿಕ್ಕಲೀಸುವನೇ ವಿರಾಟನೆನುತ್ತ ಬಲ ಬೆದರೆ
ಉಕ್ಕಿದಾತನ ಹೆಗಲು ಬೇವುದು
ಮಕ್ಕಳಾಟಿಕೆಯಾಯ್ತು ತಾ ಕೈ
ಯಿಕ್ಕಲೇಕೆಂದೊದರಿದರು ಮತ್ಸ್ಯನ ಸಹೋದರರು ೫೩

ಬಲವನಾಯಕವಾಯ್ತು ಮತ್ಸ್ಯನ
ಕುಲಕೆ ಬಂದುದು ಕೇಡು ಸುಮ್ಮನೆ
ನಿಲುವದನುಚಿತ ಭೀಮ ಬಿಡಿಸು ವಿರಾಟ ಭೂಪತಿಯ
ಗೆಲವು ಪರಬಲಕಾಯಿತೆನೆ ರಿಪು
ಕುಲ ದವಾನಳನಣ್ಣನಾಜ್ಞೆಯ
ತಲೆಯೊಳಾಂತನು ಮುಂದಣಾಲದ ಮರನ ನೋಡಿದನು ೫೪

ಹೆಮ್ಮರವನಿದ ಕಿತ್ತು ವೈರಿ ಸು
ಶರ್ಮಕನನೊರೆಸುವೆನು ಬವರದೊ
ಳೊಮ್ಮೆಯರಿ ಮೋಹರವನರೆವನು ಜೀಯ ಚಿತ್ತೈಸು
ತಮ್ಮ ಸೈರಿಸು ಮರನ ಮುರಿಯದಿ
ರೆಮ್ಮ ಮಾತನು ಕೇಳು ಹೊಲ್ಲೆಹ
ವೆಮ್ಮ ತಾಗದೆ ಮಾಣದೆಂದನು ಧರ್ಮನಂದನನು ೫೫

ಮರನ ಮುರಿದೊಡೆ ನಮ್ಮನರಿವನು
ಕುರುಕುಲಾಗ್ರಣಿಯೀಯಮಾನುಷ
ಪರಮ ಸಾಹಸ ಭೀಮಸೇನಂಗಲ್ಲದಿಲ್ಲೆಂದು
ಅರಿಕೆಯಹುದೆನೆ ಭೀಮನೆಂದನು
ಕುರುಕುಲಾಗ್ರಣಿ ಸಹಿತಿದೆಲ್ಲವ
ನೊರೆಸಿ ಕಳೆದೊಡೆ ಬಳಿಕ ನಮಗಾರುಂಟು ಮುನಿವವರು ೫೬

ಉಗ್ರ ಕರ್ಮವ ನೆನೆಯಬೇಡ
ವ್ಯಗ್ರದಲಿ ಸಾಧಿಸಿದೆವವಧಿ ಸ
ಮಗ್ರವನು ಸಾಕಿನ್ನು ಬಿಡಿಸು ವಿರಾಟ ಭೂಪತಿಯ
ವಿಗ್ರಹವ ಜಯಿಸೆನಲು ಕುರುಕುಲ
ದಗ್ರಿಯನು ಬೀಳ್ಕೊಂಡು ವಿಲಯ ಮ
ಹೋಗ್ರ ಸನ್ನಿಭನರೆದನಿಭ ಹಯ ರಥ ಪದಾತಿಗಳ ೫೭

ಸರಳ ಸಾರದಲೆಂಟು ಸಾವಿರ
ತುರಗವನು ಸೀಳಿದನು ಕೊಂದನು
ಕರಿಘಟೆಯನೈನೂರ ಮುರಿದನು ತೇರು ಸಾವಿರವ
ಅರಿ ಪದಾತಿಯನೊಂದು ಲಕ್ಕವ
ನೊರೆಸಿದನು ಬೆಂಬತ್ತಿ ಬಿಡು ಬಿಡು
ದೊರೆ ವಿರಾಟನನೆನುತ ಹಿಡಿದನು ಕಲಿ ಸುಶರ್ಮಕನ ೫೮

ವಲಲ ಮೆಚ್ಚಿದೆನೈ ಮಹಾ ದೇ
ವಲಘು ಸಾಹಸಿ ತನ್ನ ಬಿಡಿಸಿದೆ
ಸಿಲುಕಿದನು ಹಗೆಯೆನುತ ಬೋಳೈಸಿದ ವಿರಾಟ ನೃಪ
ಬಳಿಕ ಯಮನಂದನನು ಬಿಡಿಸಿದ
ಕಲಿ ಸುಶರ್ಮನನಿರುಳಗಾಳಗ
ದೊಳಗೆ ತುರು ಮರಳಿದವು ಗೆಲಿದರು ಪಾಂಡು ನಂದನರು ೫೯

ನೀವೆಯರಸುಗಳಿನ್ನು ನಿಮ್ಮಯ
ಸೇವೆಯಲಿ ತಾನಿಹೆನು ನಾಲ್ವರಿ
ದಾವ ದೇಶದ ವೀರರೋ ಕಂಕಾದಿ ಭಟರೆನುತ
ಆ ವಿರಾಟನು ನುಡಿಯೆ ಸನ್ಮಾ
ನಾವಲಂಬಕೆ ತುಷ್ಟನಾದೆನು
ಭಾವಿಪೊಡೆ ಧರೆ ನಮ್ಮದೆಂದನು ಧರ್ಮನಂದನನು ೬೦

ಮಾನಭಂಗದ ಮೇಲೆ ಕೌರವ
ಸೇನೆ ಸರಿಯೆ ಸುಶರ್ಮ ಕಡು ದು
ಮ್ಮಾನದಿಂದಲೆ ಮುಸುಕಿನಲಿ ತಿರುಗಿದನು ಪಾಳಯಕೆ
ಭಾನು ಭುವನದ ಜನದ ನಿದ್ರಾ
ಮೌನ ಮುದ್ರೆಯನೊಡೆದನುತ್ತರ
ಧೇನು ವಿಗ್ರಹಣವನು ಮಾಡಿದನಂದು ಕುರುರಾಯ ೬೧

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)

No comments: