ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Tuesday, February 2, 2010

ಉದ್ಯೋಗಪರ್ವ: ೦೧. ಮೊದಲನೆಯ ಸಂಧಿ

ಸೂ. ನಂಬಿದವರಿಗೆ ತನ್ನ ತೆತ್ತಿಹ
ನೆಂಬ ಬಿರುದನು ಮೆರೆದು ಭಕ್ತಕು
ಟುಂಬಿ ಸಾರಥಿಯಾದನೊಲಿದರ್ಜುನಗೆ ಮುರವೈರಿ

ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀ ತನಯರುನ್ನತ
ದೇಳಿಗೆಯನೇನೆಂಬೆನೈ ಕಾರುಣ್ಯ ಸಿಂಧುವಲ
ಶ್ರೀಲತಾಂಗಿಯ ರಮಣನನಿಬರೊ
ಳಾಳೊಡೆಯನೆಂದೆಂಬ ಭೇದವ
ಬೀಳುಕೊಟ್ಟೇ ನಡೆಸುತಿರ್ದನು ತನ್ನ ಮೈದುನರ ೧

ಹೋಲಿಕೆಗೆ ಬಾಯ್ಬಿಡುವ ವೇದದ
ತಾಳಿಗೆಗಳೊಣಗಿದವು ಘನತೆಯ
ಮೇಲೆ ನನ್ನದು ಘನತೆಯೆಂಬುದನತ್ತ ಬೇರಿರಿಸಿ
ಕಾಲಿಗೆರಗುವನಾ ಯುಧಿಷ್ಠಿರ
ನೇಳಲೊಡನೇಳುವನು ಕೃಷ್ಣನ
ಲೀಲೆಯನುಪಮವೆಂದು ವೈಶಂಪಾಯ ಮುನಿ ನುಡಿದ ೨

ಒಂದು ದಿನ ವೊಡ್ಡೋಲಗಕ್ಕೈ
ತಂದನಖಿಳಾವನಿಯ ರಾಯರ
ಮಂದಿಯಲಿ ಮುರವೈರಿ ನುಡಿದನು ರಾಜಮಂತ್ರವನು
ಹಿಂದೆ ಜೂಜಿನ ವಿಲಗದಲಿ ಮನ
ನೊಂದರಿವರಡವಿಯಲಿ ಧರೆಗಿ
ನ್ನೆಂದು ಸೇರುವರೇನು ಹದನೀ ಪಾಂಡು ತನಯರಿಗೆ ೩

ದೇವ ನೀನೇ ಬಲ್ಲೆ ನಿಮ್ಮಯ
ಭಾವನೀ ಧರ್ಮಜನ ಬಹುಮಾ
ನಾವಮಾನದ ಹೊರಿಗೆ ನಿನ್ನದು ಹರಣ ಭರಣವನು
ನೀವು ಬಲ್ಲಿರಿ ಕಾಲಲೊದೆದುದ
ನೋವಿ ತಲೆಯಲಿ ಹೊತ್ತು ನಡೆಸುವ
ಡಾವು ಬಲ್ಲೆವು ಜೀಯಯೆಂದನು ದ್ರುಪದ ಭೂಪಾಲ ೪

ಕಳುಹುವುದು ಶಿಷ್ಟರನು ಧರಣೀ
ತಳವ ಬೇಡಿಸುವಲ್ಲಿ ಸಾಮವ
ಬಳಸುವುದು ಭೀಷ್ಮಾದಿಗಳ ಕಟ್ಟುವುದು ವಿನಯದಲಿ
ತಿಳಿವುದಾತನ ನೆಲೆಯನಲ್ಲಿಂ
ಬಳಿಕ ನಯವಿಲ್ಲೆಂದಡಾಹವ
ದೊಳಗೆ ಕೈದೋರುವುದು ಮತವೆಂದನು ಮುರಧ್ವಂಸಿ ೫

ಎಲೆ ಮರುಳೆ ಮುರವೈರಿ ಕೌರವ
ರೊಲಿಯರೀ ಹದನನು ಯುಧಿಷ್ಠಿರ
ನಿಳೆಯ ಸೋತನು ಜೂಜುಗಾರರ ಮೇರೆ ಮಾರ್ಗದಲಿ
ನೆಲನನೊಡ್ಡಲಿ ಮತ್ತೆ ಗೆಲಿದೇ
ಕೊಳಲಿ ಮೇಣ್ ಕಾದಲಿ ಸುಯೋಧನ
ನೊಳಗೆ ತಪ್ಪಿಲ್ಲೆಂದು ನುಡಿದನು ನಗುತ ಬಲರಾಮ ೬

ಲೇಸನಾಡಿದೆ ರಾಮ ಬಳಿಕೇ
ನಾ ಸುಯೋಧನನಧಮನೇ ನೀ
ನೀಸನೇರಿಸಿಕೊಂಡು ನುಡಿವಾ ಮತ್ತೆ ಕೆಲಬರಲಿ
ಆಸುರದ ಕತ್ತಲೆಯ ಬೀಡು ಮ
ಹಾ ಸಹಾಯವು ಗೂಗೆಗಳಿಗುಪ
ಹಾಸವೇ ದಿಟವೆಂದು ಸಾತ್ಯಕಿ ನಗುತ ಖತಿಗೊಂಡ ೭

ಬಲನ ಮಾತೇನಿವರ ಭಾಗ್ಯದ
ನೆಲೆಯೆ ಫಡ ಕೌರವರ ಶತಕದ
ತಲೆಗೆ ನಾ ವೀಳೆಯವನೆಲೆ ಕುಂತೀ ಕುಮಾರಕನೆ
ನೆಲವನಲಗಿನ ಮೊನೆಯಲಲ್ಲದೆ
ಮೆಲುನುಡಿಯ ಸಾಮದಲಿ ಗೀಮದ
ಲಿಳೆಯ ಕೊಂಬರೆ ಧರೆಯೊಳಧಿಕ ಕ್ಷತ್ರಿಯಾತ್ಮಜರು ೮

ಕಾದಿ ಸಾವುದು ಮೇಣು ರಿಪು ಭಟ
ನಾದವನ ನೆತ್ತಿಯಲಿ ಸಬಳವ
ಕೋದು ಕೊಂಬುದು ನೆಲನವಿದು ಕ್ಷತ್ರಿಯರ ಮಕ್ಕಳಿಗೆ
ಮೇದಿನಿಯ ಬೇಡುವೊಡೆ ಮಟ್ಟಿಯ
ತೇದು ಹಣೆಯಲಿ ಬಡಿದು ದರ್ಭೆಯ
ಕೋದು ಸ್ವಸ್ತಿಯ ಹಾಕುವುದು ಹಾರುವರ ಮಕ್ಕಳಿಗೆ ೯

ಎನಲು ನಕ್ಕನು ದ್ರುಪದನಿದು ನ
ಮ್ಮನುಮತವು ಕಾಳಗದೊಳಲಗಿನ
ಮೊನೆಯೊಳಲ್ಲದೆ ಮಹಿಯ ಕೊಡುವನೆ ಕೌರವೇಶ್ವರನು
ವಿನುತ ಸಾತ್ಯಕಿ ಕೇಳು ನೆಲೆಯಿದು
ಜನಪನಲ್ಲಿಗೆವೊಬ್ಬ ದೂತನ
ವಿನಯದಲಿ ಕಳುಹುವುದು ಸಾಮವ ಬೆಳೆಸಿ ನೋಡುವುದು ೧೦

ವಿಹಿತವಿದು ಪಾಂಚಾಲಕನ ಮತ
ವಹುದು ರಾಯರಿಗಟ್ಟುವುದು ವಿ
ಗ್ರಹವ ಸೂಚಿಸಿ ಕರೆದುಕೊಂಬುದು ಬೇಹ ಭೂಭುಜರ
ಬಹಳ ಸಂವರಣದಲಿ ರಣ ಸ
ನ್ನಿಹಿತವಾಗಿಹುದಿತ್ತಲತ್ತಲು
ಮಹಿಯ ಬೇಡಿಸ ಕಳುಹುವುದು ತೆರನೆಂದನಸುರಾರಿ ೧೧

ಮದುವೆಗೋಸುಗ ಬಂದೆವಾವಿ
ನ್ನಿದರ ಮೇಲಣ ರಾಜಕಾರ್ಯದ
ಹದನನಟ್ಟುವುದರುಹುವುದು ಬಹೆವಾವು ಕರೆಸಿದೊಡೆ
ಹದುಳವಿಹುದೆಂದಸುರರಿಪು ಕರು
ಣದಲಿ ಕುಂತೀಸುತರನಾ ದ್ರೌ
ಪದಿಯನಭಿಮನ್ಯುವ ಸುಭದ್ರೆಯ ಹರಸಿ ಬೀಳ್ಕೊಂಡ ೧೨

ಕೂಡಿಕೊಂಡಿಹುದಿವರ ಮಕ್ಕಳ
ನೋಡಲಾಗದು ಹೆಚ್ಚು ಕುಂದನು
ನಾಡ ಬೇಡಲು ಬುದ್ಧಿವಂತರನಲ್ಲಿಗಟ್ಟುವುದು
ಕೂಡೆ ಶೋಧಿಸಿ ಸಜ್ಜೆಯಲಿ ಮೈ
ಗೂಡಿಯಾರೋಗಣೆಗಳಲಿ ಕೈ
ಮಾಡಿ ಬೆರೆಸಿಹುದೆಂದು ದ್ರುಪದ ವಿರಾಟರಿಗೆ ನುಡಿದ ೧೩

ಎಂದು ಕಳುಹಿಸಿಕೊಂಡು ನಾರೀ
ವೃಂದ ಯದುಕುಲ ಸಹಿತ ದೇವ ಮು
ಕುಂದ ಬಿಜಯಂಗೈದು ಹೊಕ್ಕನು ದ್ವಾರಕಾಪುರವ
ಒಂದು ದಿನವಾಲೋಚನೆಯ ನೆಲೆ
ಯಿಂದ ಕರೆದು ಪುರೋಹಿತನ ನಲ
ವಿಂದ ಕಳುಹಿದ ದ್ರುಪದನಾ ಕೌರವರ ಪಟ್ಟಣಕೆ ೧೪

ಓಲೆಯುಡುಗೊರೆ ಸಹಿತ ಧರಣೀ
ಪಾಲರಿಗೆ ಪಾಂಡವರು ಶಿಷ್ಟರು
ಕಾಳಗಕೆ ನೆರವಾಗಲೋಸುಗ ಕರೆದರಲ್ಲಲ್ಲಿ
ಆಳು ಕುದುರೆಯ ಕೂಡಿ ದೆಸೆಗಳ
ಮೂಲೆಯರಸುಗಳೆಲ್ಲ ಕುರು ಭೂ
ಪಾಲನಲ್ಲಿಗೆ ಕೆಲರು ಕೆಲಬರು ಪಾಂಡು ತನಯರಿಗೆ ೧೫

ಧರಣಿಯೆಡೆಗೆಡೆ ರಾಯ ಮೋಹರ
ತೆರಳಿತಿಬ್ಬರು ರಾಯರಿಗೆ ಕೈ
ನೆರವುದೋರಲು ಕವಿದು ಬಂದುದು ಕಾಣೆನಳತೆಗಳ
ಅರಿಗಳತಿ ಹೆಚ್ಚಿದರು ಮೈಮರೆ
ದಿರಲು ಧರಣಿಗಮಾನ್ಯನಹುದಿ
ನ್ನುರವಣಿಸಬೇಕೆಂದು ದುರ್ಯೋಧನನು ಚಿಂತಿಸಿದ ೧೬

ಹದನನಾಪ್ತರಿಗರುಹಿದನು ಗು
ಪ್ತದಲಿ ಕೃಷ್ಣನನೊಳಗು ಮಾಡುವ
ಮುದದಿ ಬಂದನು ಕೌರವೇಂದ್ರನು ದ್ವಾರಕಾಪುರಿಗೆ
ಇದನು ಭೇದಿಸಿ ಬೇಹಿನವರರು
ಹಿದರು ಕುಂತೀ ಸುತರಿಗತಿ ವೇ
ಗದಲಿ ಧರ್ಮಜನಳುಕಿ ಕಳುಹಿದನಿಂದ್ರನಂದನ ೧೭

ಬೀಳುಕೊಂಡರ್ಜುನನು ಲಕ್ಷ್ಮೀ
ಲೋಲನಲ್ಲಿಗೆ ಬರುತ ಕಂಡನು
ಲೀಲೆಯಲಿ ನರ್ತಿಸುವ ನವಿಲನು ಬನದೊಳದ ಹಾಯ್ದು
ಮೇಲೆ ಹಂಗನ ಬಲನ ಹರಿಣೀ
ಜಾಲದೆಡನನು ತಿದ್ದುವಳಿಯ ವಿ
ಶಾಲ ಶಕುನವನಾಲಿಸುತ ಹರುಷದಲಿ ನಡೆತಂದ ೧೮

ಮೊರೆದು ಮಿಗೆ ತಲೆಯೊತ್ತಿ ತೆರೆ ಮೈ
ಮುರಿದು ಘುಳುಘುಳು ಘುಳಿತ ಘನ ನಿ
ಷ್ಟುರ ನಿನಾದದ ಗಜರು ಗಾಢಿಸಿ ಬಹಳ ಲಹರಿಯಲಿ
ತೆರೆ ತೆರೆಯ ತಿವಿದೆದ್ದು ಗಗನವ
ನಿರದೊದೆದು ವಿತಳಕ್ಕೆ ಸುಳಿ ಭೊಂ
ಕರಿಸಿ ಸಾಗರನುಬ್ಬುಗವಳವ ಕೊಂಡವೊಲು ಕುಣಿದ ೧೯

ಪೂತು ಮಝ ಸಾಗರನ ಬಿಗುಹು ಮ
ಹಾತಿಶಯವೈ ಯಿವನನಂಜಿಸ
ಲಾತಗಳು ಮರ್ಮಿಗಳು ಬೆಟ್ಟವನೊಟ್ಟಿ ನೆತ್ತಿಯಲಿ
ಈತ ನಮಗಂಜುವನೆಯೆನುತ ವಿ
ಧೂತರಿಪುಬಲ ಮುಂದೆ ಕಂಡನು
ಪಾತಕದ ಹೆಡತಲೆಯ ದಡಿಯನು ದ್ವಾರಕಾಪುರವ ೨೦

ಅಟ್ಟಿ ಬಳಲಿದ ಶ್ರುತಿಗೆ ಹರಿ ಮೈ
ಗೊಟ್ಟ ಠಾವಿದು ತಾಪಸರು ಜಪ
ಗುಟ್ಟಿ ಜಿನುಗಿದಡವರನುಜ್ಜೀವಿಸಿದ ಠಾವಿದಲ
ಹುಟ್ಟು ಸಾವಿನ ವಿಲಗ ಜೇವರ
ಬಿಟ್ಟ ಠಾವಿದು ಕಾಲ ಕರ್ಮದ
ಥಟ್ಟು ಮುರಿವಡೆದೋಡಿದೆಡೆಯಿದು ಶಿವ ಶಿವಾಯೆಂದ ೨೧

ಪರಮ ನಾರಾಯಣ ಪರಾಯಣ
ನಿರವೆ ಪರತರವೆಂದು ಮುರಹರ
ಬರೆದ ಠಾವಿದು ಮುಕುತಿಯಿದರೊಳು ಕರತಳಾಮಲಕ
ಭರಿತ ಬೊಮ್ಮದ ಸುತ್ತುಗೊಳಸನು
ಸರಿದ ಠಾವೀ ತರ್ಕ ತಂತ್ರದ
ತರದ ಯುಕುತಿಗೆ ತೊಳಸುಗೊಳ್ಳದ ಠಾವಲಾಯೆಂದ ೨೨

ಹೊಗಳುತರ್ಜುನನಸುರರಿಪುವಿನ
ನಗರಿಗೈತಂದರಮನೆಯ ಹೊಗ
ಲಗಧರನು ಮಂಚದಲಿ ನಿದ್ರಾಂಗನೆಯ ಕೇಳಿಯಲಿ
ಸೊಗಸುಮಿಗಲರೆದೆರೆದ ಲೋಚನ
ಯುಗಳ ಸಮತಳಿಸಿದ ಸುಷುಪ್ತಿಯ
ಬಿಗುಹಿನಲಿ ಪರಮಾತ್ಮನೆಸೆದನು ಭ್ರಾಂತಿಯೋಗದಲಿ ೨೩

ಮುಕುಳಕರಪುಟನಾಗಿ ಭಯಭರ
ಭಕುತಿಯಲಿ ಕಲಿಪಾರ್ಥನಬುಜಾಂ
ಬಕನನೆಬ್ಬಿಸಲಮ್ಮದೊಯ್ಯನೆ ಚರಣ ಸೀಮೆಯಲಿ
ಅಕುಟಿಲನು ಸಾರಿದನು ಬಳಿಕೀ
ವಿಕಳ ದುರ್ಯೋಧನು ನಿಗಮ
ಪ್ರಕರ ಮೌಳಿಯ ಮೌಳಿಯತ್ತಲು ಸಾರ್ದು ಮಂಡಿಸಿದ ೨೪

ಇರಲು ನಿಮಿಷದೊಳಸುರರಿಪು ಮೈ
ಮುರಿದನುಪ್ಪವಡಿಸಿದನಿದಿರಲಿ
ಸುರಪತಿಯ ಸೂನುವನು ಕಂಡನು ನಗೆಯ ಮೊನೆ ಮಿನುಗೆ
ತಿರುಗಿ ನೋಡುತ ತಲೆಯ ದೆಸೆಯಲಿ
ಕುರುಕುಲೇಶನನತಿ ವಿಕಾರತೆ
ಯಿರವ ಕಂಡನಿದೇನಿದೇನೆಂದಸುರರಿಪು ನುಡಿದ ೨೫

ವೀಳಯವ ತಾ ಕೊಂಡು ಕುರು ಭೂ
ಪಾಲ ಪಾರ್ಥರಿಗಿತ್ತು ಲಕ್ಷ್ಮೀ
ಲೋಲ ನುಡಿದನು ಉಭಯ ರಾಯರಿಗಿತ್ತ ಬರವೇನು
ಹೇಳಿರೈ ಬರವಘಟಿತವಲಾ
ಮೇಳವೇ ಕಡುಮಾನ್ಯರೆಮ್ಮೀ
ಯಾಲಯಕೆ ಬರಲೇನೆನಲು ಕುರು ರಾಯನಿಂತೆಂದ ೨೬

ಯಾದವರು ಕೌರವರೊಳುಂಟೇ
ಭೇದವಾವಯಿತಂದರೆಮ್ಮೊಳ
ಗಾದ ಲಾಘವವೇನು ನಿಮ್ಮವೊಲಾರು ಸಖರೆಮಗೆ
ಸೋದರರ ಮನ ಕದಡಿದವು ದಾ
ಯಾದ ವಿಷಯದಲಿನ್ನು ಧರಣಿಗೆ
ಕಾದುವೆವು ನಮ್ಮಿಬ್ಬರಿಗೆ ಬಲವಾಗಬೇಕೆಂದ ೨೭

ಕೌರವೇಶ್ವರ ಕೇಳು ಧರಣೀ
ನಾರಿಯನಿಬರಿಗೊಕ್ಕತನವಿ
ದ್ದಾರ ಮೆಚ್ಚಿದಳಾರ ಸಂಗಡ ವುರಿಯ ಹಾಯಿದಳು
ಭೂರಿ ಮಮಕಾರದಲಿ ನೃಪರು ವಿ
ಚಾರಿಸದೆ ಧರೆಯೆಮ್ಮವೆಂದೇ
ನಾರಕದ ಸಾಮ್ರಾಜ್ಯಕೈದುವರೆಂದು ಹರಿ ನುಡಿದ ೨೮

ನಾಡಿಗೋಸುಗ ಸೋದರರು ಹೊ
ಯ್ದಾಡಿ ಹರಿಹಂಚಾದರೆಂಬುದ
ನಾಡದಿಹುದೇ ಲೋಕ ಕಮಲಜನುಸಿರಿಹನ್ನೆಬರ
ಬೇಡಕಟ ನಿಮ್ಮೊಳಗೆ ನೀವ್ ಕೈ
ಗೂಡಿ ಬದುಕುವುದೊಳ್ಳಿತಾವ್ ನೆರೆ
ನೋಡಿ ಸಂತಸಬಡುವೆವೆಂದನು ರುಕ್ಮಿಣೀರಮಣ ೨೯

ತಗರೆರಡ ಖತಿಗೊಳಿಸಿ ಬಲುಗಾ
ಳಗವ ನೋಡುವರಂತೆ ನಿಮ್ಮನು
ತೆಗೆತೆಗೆದು ಕಲಿಮಾಡಿ ಬಿಡುವರು ಖುಲ್ಲರಾದವರು
ನಗುತ ಹೆರೆ ಹಿಂಗುವರು ಪಿಸುಣರು
ಬಗುಳಿದವದಿರು ಬಳಿಕ ಕಡೆಯಲಿ
ಹೊಗುವಿರೈ ನೀವಿಬ್ಬರಪಕೀರಿತಿಯ ಹಾದರಕೆ ೩೦

ಅವಧರಿಸು ಮುರವೈರಿ ಧರ್ಮ
ಶ್ರವಣಕೋಸುಗ ಬಾರೆವಾವ್ ಪಾ
ರ್ಥಿವರ ಪಂಥದ ಕದನ ವಿದ್ಯಾಕಾಮವೆಮಗಾಯ್ತು
ನಿವಗೆ ನಾವಿತ್ತಂಡ ಸರಿ ಪಾಂ
ಡವರಿಗೆಯು ಮನದೊಲವಿನಲಿ ಕೌ
ರವರಿಗೆಯು ಬಲವಾಗಬೇಕೆಂದನು ಸುಯೋಧನನು ೩೧

ಎನಲು ತಂಬುಲ ಸೂಸೆ ನಗುತ
ರ್ಜುನನ ನೋಡಿದನಸುರರಿಪು ನಿ
ನ್ನನುವ ಹೇಳೈ ಪಾರ್ಥಯೆನೆ ತಲೆವಾಗಿ ಕೈಮುಗಿದು
ಎನಗೆ ಮತ ಬೇರೇನು ದುರಿಯೋ
ಧನನ ಮತವೇ ನನ್ನ ಮತ ನಿ
ಮ್ಮನುನಯವೆ ನಯವೆಮ್ಮೊಳೀ ಸ್ವಾತಂತ್ರ್ಯವಿಲ್ಲೆಂದ ೩೨

ಆದಡಾವಿಹೆವೊಂದು ಕಡೆಯಲಿ
ಕಾದುವವರಾವಲ್ಲ ಬಲನೊಳು
ಯಾದವರು ಕೃತವರ್ಮ ನಾರಾಯಣ ಮಹಾಸೇನೆ
ಕಾದುವವರಿವರೊಂದು ದೆಸೆಯೆರ
ಡಾದುದಿವರೊಳು ಮೆಚ್ಚಿದುದ ನೀ
ನಾದರಿಸಿ ವರಿಸೆಂದು ಪಾರ್ಥಂಗಸುರರಿಪು ನುಡಿದ ೩೩

ಮುರಮಥನ ಚಿತ್ತೈಸು ಕೌರವ
ರರಸನತಿ ಸಿರಿವಂತನಿದ ಸಂ
ತರಿಸಲಾಪನು ಬಹಳ ಯಾದವ ಸೈನ್ಯ ಸಾಗರವ
ಧರೆಯ ಸಂಪದವಿಲ್ಲದಡವಿಯ
ತಿರುಕರಾವಿನಿಬರನು ಸಲೆ ಸಂ
ತರಿಸಲಾಪೆವೆ ಕೃಷ್ಣ ನೀನೇ ಸಾಕು ನಮಗೆಂದ ೩೪

ನಾವು ಬಡವರು ಬಡವರಿಗೆ ದಿಟ
ನೀವೆ ಬೆಂಬಲವೆಂಬ ಬಿರುದನು
ದೇವ ಕೇಳಿದು ಬಲ್ಲೆವೆಂದನು ಪಾರ್ಥ ಕೈಮುಗಿದು
ನೀವು ಸುಖದಲಿ ಪಾಂಡವರನು
ಜ್ಜೀವಿಸುವುದೆಮಗುಳಿದ ಯದು ಭೂ
ಪಾವಳಿಯ ಕೃಪೆ ಮಾಡಬೇಕೆಂದನು ಸುಯೋಧನನು ೩೫

ಮರೆಯ ಮಾತುಗಳೇಕೆ ಪಾಂಡವ
ರೆರಕ ನಿಮ್ಮಲಿ ಹಿರಿದು ಪಾರ್ಥಗೆ
ಮರುಗುವಿರಿ ಹಿರಿದಾಗಿ ಮನಮೆಚ್ಚುಂಟು ನಿಮ್ಮೊಳಗೆ
ಉರುವ ಕಾರ್ಯಕೆ ಕಡೆಯಲಾವೇ
ಹೊರಗು ಸಾಕಂತಿರಲಿ ನೀ ಹೊ
ಕ್ಕಿರಿಯಲಾಗದು ಕೃಷ್ಣಯೆಂದನು ಕೌರವರ ರಾಯ ೩೬

ಮೊಲೆಯನುಂಬಂದೊಬ್ಬ ದನುಜೆಯ
ಹಿಳಿದೆವೊದೆದೆವು ಶಕಟನನು ತನು
ಗಳೆದೆ ಧೇನುಕ ವತ್ಸ ನಗ ಹಯ ವೃಷಭ ಭುಜಗರನು
ಬಲುಗಜವ ಮಲ್ಲರನು ಮಾವನ
ನೆಳೆದು ಮಾಗಧ ಬಲವ ಬರಿ ಕೈ
ದಳಿಸಿದೆವು ದಾನವರ ಹಿಂಡಿದೆವಾಹವಾಗ್ರದಲಿ ೩೭

ಕಾಲಯವನನ ದಂತವಕ್ತ್ರನ
ಸೀಳಿದೆವು ಮುರ ನರಕ ಕುಂಭನ
ಸಾಲುವನ ಪೌಂಡ್ರಕನ ಡಿಬಿಕನ ಹಂಸ ಮೋಹರವ
ಕಾಳಗದೊಳಿಟ್ಟೊರಸಿ ಬಾಣನ
ತೋಳ ತರಿವಂದಾಯ್ತು ಧಾಳಾ
ಧೂಳಿಯಾಹವವಿಂದುಮೌಳಿಯೊಳೆಮಗೆ ಮುಳಿಸಿನಲಿ ೩೮

ಹಸುಳೆತನ ಮೊದಲಾಗಿ ಬಲು ರ
ಕ್ಕಸರೊಡನೆ ತಲೆಯೊತ್ತಿರಣದಾ
ಯಸವ ಸೈರಿಸಿ ಹೊಯ್ದು ಕೊಂದೆವು ಕೋಟಿ ದಾನವರ
ಮಿಸುಕಲಾರೆವು ಚಕ್ರಭಂಡಾ
ರಿಸಿತು ಮುನ್ನಿನ ಜವ್ವನದ ಬಲ
ಮಸುಳಿತಾವುಂಡಾಡಿ ಭಟ್ಟರು ನೃಪತಿ ಕೇಳೆಂದ ೩೯

ಎನಲು ಕರ ಲೇಸೆಂದು ದುರಿಯೋ
ಧನನು ಕಳುಹಿಸಿಕೊಂಡು ಬಲರಾ
ಮನನು ಕೃತವರ್ಮನನು ಕಂಡನು ನಿಖಿಳ ಯಾದವರ
ವಿನುತಬಲ ಸಹಿತೊಲವಿನಲಿ ಹ
ಸ್ತಿನಪುರಿಗೆ ಹಾಯಿದನು ಬಳಿಕೀ
ದನುಜರಿಪು ನಸುನಗುತಲಿಂತೆಂದನು ಧನಂಜಯಗೆ ೪೦

ಸುರಗಿಯನು ಬಿಸುಟೊರೆಯನಂಗೀ
ಕರಿಸಿದಂದದಲಾಹವದ ಧುರ
ಭರದ ಯಾದವ ಬಲವನೊಲ್ಲದೆ ಮಂದ ಮತಿಯಾಗಿ
ಮರುಳೆ ಕಾದದ ಕಟ್ಟದೆಮ್ಮನು
ಬರಿದೆ ಬಯಸಿದೆಯಿದನು ಕೇಳ್ದೊಡೆ
ಮರುಳುಗಟ್ಟದೆ ಮಾಣ್ಪರೇ ನಿಮ್ಮಣ್ಣ ತಮ್ಮದಿರು ೪೧

ಎನಲು ಗಹಗಹಿಸಿದನಿದಾರಿಗೆ
ಮನವ ಕದ್ದಾಡುವಿರಿ ನಿಜ ಶಿ
ಷ್ಯನಲಿ ನಾಟಕದಿಂದ್ರಜಾಲವೆ ನಿಮ್ಮ ಗರುಡಿಯಲಿ
ಎನಗೆ ಶ್ರಮವುಂಟದು ನಿಲಲಿ ಯೆ
ನ್ನನುಜರಗ್ರಜರರಿಯರೇ ನಿ
ಮ್ಮನುಪಮಿತ ಮಹಿಮಾವಲಂಬವನೆಂದನಾ ಪಾರ್ಥ ೪೨

ನಾವು ಬರಿಗೈಯವರು ಬರಲೆಮ
ಗಾವುದಲ್ಲಿಯ ಕೆಲಸ ಉಂಡುಂ
ಡಾವು ಕುಳ್ಳಿಹರಲ್ಲ ಹಂಗಾಗಿರೆವು ಕದನದಲಿ
ದೇವನೆಂದೇ ನೀವು ಬಗೆವಿರಿ
ದೇವತನ ನಮ್ಮಲ್ಲಿ ಲವವಿ
ಲ್ಲಾವು ಬಲ್ಲೆವು ಬಂದು ಮಾಡುವುದೇನು ಹೇಳೆಂದ ೪೩

ದೇವ ಮಾತ್ರವೆ ನೀವು ದೇವರ
ದೇವರೊಡೆಯರು ಹೊಗಳುವರೆ ವೇ
ದಾವಳಿಗಳಳವಲ್ಲ ಸಾಕಾ ಮಾತದಂತಿರಲಿ
ನಾವು ಭಕುತರು ಭಕುತ ಭೃತ್ಯರು
ನೀವು ಸಾರಥಿಯಾಗಿ ಭೃತ್ಯನ
ಕಾವುದೆಂದರ್ಜುನು ಹಣೆ ಚಾಚಿದನು ಹರಿಪದಕೆ ೪೪

ಎನಲು ನಗುತೆತ್ತಿದನು ಸಾರಥಿ
ತನವ ಕೈಕೊಂಡನು ಕೃಪಾಳುವಿ
ನನುನಯವ ನಾನೆತ್ತ ಬಲ್ಲೆನು ಭೃತ್ಯವರ್ಗದಲಿ
ತನಗಹಂಕೃತಿಯಿಲ್ಲ ವೈರೋ
ಚನಿಯ ಪಡಿಹಾರಿಕೆ ಕಿರೀಟಿಯ
ಮನೆಯ ಬಂಡಿಯ ಬೋವನಾದನು ವೀರನಾರಯಣ ೪೫

(ಸಂಗ್ರಹ: ಹನ್ಸಿಕಾ ಪ್ರಿಯದರ್ಶಿನಿ)

1 comment:

Anonymous said...

Thanks. Which edition did you use?