ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Tuesday, February 9, 2010

ಅರಣ್ಯಪರ್ವ: ೦೩. ಮೂರನೆಯ ಸಂಧಿ

ಸೂ. ಬರುತ ಕ೦ಡನು ಕಣ್ವನಾಶ್ರಮ
ವರದ ಜಂಬೂಫಲವ ಮಾರುತಿ
ತರಲು ಯಮಸುತ ಹಲುಬೆ ಮುರರಿಪು ಶಾಖೆಗಡರಿಸಿದ

ಕೇಳು ಜನಮೇಜಯ ಧರಿತ್ರೀ
ಪಾಲ ಯಮಸುತ ಮುನಿಜನಂಗಳ
ಮೇಳದಲಿ ಹೊರವಂಟು ತನ್ನನುಜಾತರೊಡಗೂಡಿ
ತಾಳಿಗೆಯ ತಲ್ಲಣದ ಗಿರಿಗಳ
ಮೇಲೆ ಚರಿಸುತ ಬಂದು ವಿಪಿನ
ವ್ಯಾಳ ಗಜ ಶಾರ್ದೂಲ ಸಿಂಹಾದಿಗಳನೀಕ್ಷಿಸುತ ೧

ಬರಬರಲು ಮುಂದೊಂದು ವನದೊಳು
ಚರಿಪ ಪಕ್ಷಿ ಮೃಗಾಳಿ ತಳಿತಿಹ
ಬಿರಿಮುಗುಳನೀಕ್ಷಿಸುವ ಮರಿದುಂಬಿಗಳ ಮೇಳವದ
ಪರಿಪರಿಯ ಮರ ಪೂ ಫಲಂಗಳ
ನಿರದೆ ಕೊಡುತಿರೆ ಪಕ್ಷಿಮೃಗಕುಲ
ವೆರಸಿ ಮೆರೆದವು ಬನದ ಸುತ್ತಲು ರಾಯ ಕೇಳೆಂದ ೨

ತುಂಬುರರಳಿ ಲವಂಗ ಪಾದರಿ
ನಿಂಬೆ ಚೂತ ಪಲಾಶ ಪನಸಸು
ಜಂಬು ಗುಗ್ಗುಳಶೋಕ ವಟ ಪುನ್ನಾಗ ಚಂಪಕದ
ಕುಂಭಿನಿಯೊಳುಳ್ಳಖಿಲ ವೃಕ್ಷ ಕ
ದಂಬದಲಿ ವನ ಮೆರೆದುದದನೇ
ನೆಂಬೆನೀ ಪರಿವಾರ ತುಂಬಿತು ಲಲಿತ ನಂದನದ ೩

ತಿಳಿಗೊಳನ ಮಧ್ಯದಲಿ ಮೆರೆದಿಹ
ನಳಿನ ನೃಪನಿದಿರಿನಲಿ ಮಧುಪಾ
ವಳಿ ರವದ ಗಾಯಕರ ಪಿಕಪಾಠಕರ ನೃತ್ಯಗಳ
ಲಲಿತ ನವಿಲಿನ ವಾದ್ಯಗಳ ಘುಳು
ಘುಳಿಪ ಕೊಳರ್ವಕ್ಕಿಗಳ ಲಕ್ಷ್ಮೀ
ಲಲನೆಯರಮನೆಯೆನಲು ಮೆರೆದುದು ಭೂಪ ಕೇಳೆಂದ ೪

ಬಂದು ಭೂಪತಿ ಕೊಳನ ತೀರದೆ
ನಿಂದು ತಮಗಾಶ್ರಯದ ಠಾವಹು
ದೆಂದು ಭೀಮಂಗರುಹಲಾ ಕ್ಷಣವಾತನೈತಂದು
ತಂದು ತಳಿರನು ಪರ್ಣಶಾಲೆಗ
ಳಂದದಲಿ ರಚಿಸಿದನು ಭೂಸುರ
ವೃಂದ ಬಿಟ್ಟುದು ಧರ್ಮಪುತ್ರನ ಸುತ್ತುವಳಯದಲಿ ೫

ದಿನಪನಪರಾಂಬುಧಿಯನೈದಲು
ವನಜ ಮುಗಿದವು ಚಕ್ರವಾಕದ
ಮನಕೆ ಖತಿ ಕುಮುದಿನಿಗೆ ಮುದ ಯಾಮಿನಿಗೆ ಸುಮ್ಮಾನ
ಕನಕಮಯ ವರ ರಥವನಡರಿದು
ದನುಜರನು ಸಂಹರಿಸೆ ಕಮಲಿನಿ
ಮನದೊಳುತ್ಸಾಹಿಸಲು ರವಿಯುದಯಾಚಲಕೆ ಬಂದ ೬

ಋಷಿಗಳೊಳು ಮೇಳವು ವರಾಸನ
ಮೆಸೆವ ಬನದೊಳು ಬಳಿಕ ಗಂಗಾ
ಪ್ರಸರದಲ್ಲಿಯೆ (ಪಾ: ಪ್ರಸರದಲಿ) ಸ್ನಾನ ಭೋಜನ ಕಾಲದಲಿ ಪಾನ
ಮಿಸುಪ ಸುತಿಯ ವಿಲಾಸಗಳ ಸಂ
ತಸದಿ ಕೇಳ್ವ ಸಮಾಸಪೂರಿತ
ವಸುಮತೀಧರ ಯಮಜನೆಸೆದನು ಭೂಪ ಕೇಳೆಂದ ೭

ಇರುತಿರಲು ಕಲಿಭೀಮ ಮೃಗಯಾ
ತುರದಲಖಿಳ ಕಿರಾತರುಗಳೊಡ
ವೆರಸಿ ಹೊಕ್ಕನು ಗಿರಿತರುವ್ರಜ ಬಹಳ ಕಾನನವ
ವರಹ ಮರೆ ಸಾರಂಗ ಪೆರ್ಬುಲಿ
ಕರಡಿ ವೃಕ ಶಾರ್ದೂಲ ಕೇಸರಿ
ಕರಿ ಕಳಭವೋಡಿದವು ದೆಸೆದೆಸೆಗೈದಿ ತಲ್ಲಣಿಸಿ ೮

ಹಾಸಗಳಹರಿವಿಡಿವ ನಾಯ್ಗಳ
ಬೀಸುವಲೆಗಳ ಕಾಲಗಣ್ಣಿಯ
ಸೂಸುವಲೆಗಳ ಧನು ಸರಳ ಭಾಸುರದ ಕುಪ್ಪಸದ
ಕೇಶದಲಿ ತಳಿರುಗಳ ಬಿಗಿದು ವಿ
ಳಾಸದಲಿ ಹೊರವಂಟು ಹೆಬ್ಬಲೆ
ಬೀಸಿದರು ಬೇಂಟೆಗರು ಬಹಳ ಮೃಗಂಗಳನು ಕೆಡಹಿ ೯

ಕೊಡಹಿ ಬಿಸುಟನು ಕೇಸರಿಯ ಕಾ
ಲ್ವಿಡಿದು ಸೀಳಿದ ಕರಿಗಳನು ಬೆಂ
ಬಿಡದೆ ಹಿಡಿದಪ್ಪಳಿಸಿದನು ಶಾರ್ದೂಲ ಹೆಬ್ಬುಲಿಯ
ಅಡಗೆಡಹಿ ಪೇರ್ಮರಿ ವರಾಹನ
ಮಡದಲುರೆ ಘಟ್ಟಿಸಿ ವಿನೋದದಿ
ನಡೆಯೆ ಧರೆ ಕಂಪಿಸಿತು ಭೀಮನ ಪದದ ಘಲ್ಲಣೆಗೆ ೧೦

ಬಂದನತಿಬೇಂಟೆಯಲಿ ಚರಿಸುತ
ನಿಂದು ಹತವಾದಖಿಳ ಮೃಗಗಳ
ನಂದು ವ್ಯಾಧರ ನಿಕರಕಿತ್ತನು ಪವನಜಾತ್ಮಜನು
ತಂದರವದಿರು ತವತವಗೆ ಪರಿ
ತಂದು ತರು ಶಿಖಿಯಿಂದ ದಹಿಸಿದ
ರಂದು ಮಾಂಸವನೊಲಿದು ಭಕ್ಷಿಸಿದರು ವಿನೋದದಲಿ ೧೧

ಮುಂದೆ ಕಂಡನು ದೂರದಲ್ಲಿಹ
ನಂದನದ ಮೆಳೆ ತರು ನಿಕಾಯದ
ಸಂದಣಿಯ ಪೂಗೊಂಚಲಿನ ಪಲ್ಲವ ನಿಕಾಯದಲಿ
ಗೊಂದಣದ ತರು ಮಧ್ಯದಲ್ಲಿಹು
ದೊಂದು ಜಂಬೂವೃಕ್ಷ ಮೆರೆದಿರೆ
ನಿಂದು ನೋಡಿದು ಭೀಮ ವಿಸ್ಮಯಗೊಂಡನಾ ಕ್ಷಣಕೆ ೧೨

ಇದು ವಿಚಿತ್ರದ ಫಲವು ತಾನೊಂ
ದಿದೆ ಮತಂಗಜ ಗಾತ್ರದಲಿ ತಾ
ನಿದನು ಕೊಂಡೊಯ್ವೆನು ಮಹೀಪಾಲಕನ ದರುಶನಕೆ
ಗದೆಯ ಕಕ್ಷದಲೌಕಿ ಮಾರುತಿ
ಮಧುರಿಪುವ ನೆನೆವುತ್ತಲಾನಂ
ದದಲಿ ವೃಕ್ಷವನಡರಿ ಕೊಯ್ದಿಳುಹಿದನು ನಿಮಿಷದಲಿ ೧೩

ಫಲವ ಕೊಂಡಾ ಭೀಮ ಬೇಗದಿ
ನಲವಿನಲಿ ನಡೆತಂದು ಭೂಪನ
ನಿಳಯದಲಿ ತಂದಿಳುಹಿದರೆ ಯಮಸೂನು ಬೆರಗಾಗಿ
ಕೆಲದಲಿದ್ದನುಜರಿರ ಋಷಿ ಜನ
ಗಳಿರ ನೋಡಿರೆಯೆನಲು ಶಿವಶಿವ
ನಳಿನನಾಭನೆ ಬಲ್ಲನೆಂದರು ಸಕಲ ಋಷಿವರರು ೧೪

ಎನಲು ಸಹದೇವನ ಯುಧಿಷ್ಠಿರ
ಜನಪ ಬೆಸಗೊಳುತಿರಲು ಬಿನ್ನಹ
ದನುಜರಿಪು ಹರ ಕಮಲಭವರಿಗೆ ಕೊಡುವ ಶಾಪವನು
ಅನುವ ಕಾಣೆನು ಕಣ್ವಮುನಿ ತಾ
ಮುನಿದನಾದರೆ ಶಪಿಸುವನು ಯೆಂ
ದನು ತ್ರಿಕಾಲಜ್ಞಾನಿ ಮಾದ್ರೀಸುತನು ಭೂಪತಿಗೆ ೧೫

ವರುಷಕೊಂದೇ ಫಲವಹುದು ಅದ
ನರಿತು ಯೋಗಧ್ಯಾನದಲಿ ಕಂ
ದೆರೆದು ಕರ ಸಂಪುಟವನರಳಿಚಲಾಗಲಾ ಫಲವು
ಇರದೆ ಹಸ್ತದೊಳಿಳಿಯಲಾ ಮುನಿ
ಹರುಷದಿಂದದ ತಳೆದು ಕೊಂಬನು
ಪರಶಿವ ಧ್ಯಾನೈಕ ದೃಷ್ಟಿಯೊಳಿಪ್ಪನಾ ಮುನಿಪ ೧೬

ಕಂದೆರೆದು ಮುನಿ ನೋಡಿದೊಡೆ ತಮ
ಗಿಂದು ಹರುವಹುದೆನುತ ಧರ್ಮಜ
ನೊಂದು ಫಲುಗುಣ ಭೀಮ ಸಹದೇವಾದಿಗಳು ಸಹಿತ
ಬಂದನತಿ ವೇಗದಲಿ ಪವನಜ
ನಂದು ವೃಕ್ಷವ ತೋರಿಸಿದನೇ
ನೆಂದು ಬಣ್ಣಿಪೆ ಬಹಳ ಕೊನೆಗಳ ಗಗನ ಚುಂಬಿತವ ೧೭

ಕಂಡು ಯಮಸುತನತಿ ಭಯದಿನಿದ
ಖಂಡಪರಶುವೆ ಬಲ್ಲ ನಾವ್ ಮುಂ
ಕೊಂಡು ಮಾಡಿದ ದುಷ್ಕೃತದ ಫಲವೆನುತ ಬಿಸುಸುಯ್ದ
ಚಂಡವಿಕ್ರಮ ಭೀಮನದ ಕೈ
ಕೊಂಡು ತಾನವಿವೇಕದಲಿಯು
ದ್ದಂಡತನದಿಂ ತಂದ ಹತ್ತಿಸಲರಿದು ನಮಗೆಂದ ೧೮

ಹೇಳಿರೈ ಭೂಸುರರು ಋಷಿಗಳು
ಮೇಲೆ ಹತ್ತುವುಪಾಯವನು ಋಷಿ
ಜಾಲದೊಳಗೆಂದೆನಲು ನುಡಿದನು ಧೌಮ್ಯ ನಸುನಗುತ
ಹೇಳಲರಿದಿದ ನಿಮ್ಮ ಸಲಹುವ
ಬಾಲಕೇಳಿಯ ಕೃಷ್ಣ ಬಲ್ಲನು
ಕಾಲವನು ನೂಕದೆ ಮಹಾತ್ಮನ ಭಜಿಸು ನೀನೆಂದ ೧೯

ಎನಲು ಭೂಪತಿ ಕೃಷ್ಣ ರಕ್ಷಿಸು
ದನುಜರಿಪು ಗೋವಿಂದ ರಕ್ಷಿಸು
ವನಜನಾಭ ಮುಕುಂದ ರಕ್ಷಿಸು ರಾವಣಾಂತಕನೆ
ಮನಸಿಜನ ಪಿತ ರಾಮ ರಕ್ಷಿಸು
ಘನಮಹಿಮ ಕೇಶವನೆ ರಕ್ಷಿಸು
ನೆನೆವ ಭಕ್ತರ ಭಾಗ್ಯನಿಧಿ ಮಾಧವನೆ ರಕ್ಷಿಪುದು ೨೦

ಎಂದು ಭಜಿಸುತ್ತಿರಲು ನೃಪ ಗೋ
ವಿಂದನಮಳಜ್ಞಾನದಲಿ ಸಾ
ನಂದದಿಂದಲೆ ಸತ್ಯಭಾಮಾದೇವಿಯರ ಕೂಡೆ
ಮಂದಮತಿ ಪವಮಾನುಜನ ಕತ
ದಿಂದ ಪಾಂಡು ಕುಮಾರರಿಗೆ ಕೇ
ಡಿಂದು ಬಹುದಾ ಋಷಿಯ ಶಾಪದಿ ಶಿವಶಿವಾಯೆಂದ ೨೧

ಎನುತ ಸಿಂಹಾಸನವನಿಳಿದಾ
ದನುಜರಿಪು ಕಮಲಾಕ್ಷಿ ನೀ ನಿ
ಲ್ಲೆನುತ ಮನವೇಗದಲಿ ಬಂದನು ಧರ್ಮಜನ ಹೊರೆಗೆ
ನೆನೆಯೆ ಲಕ್ಷ್ಮೀಕಾಂತ ಬಂದನು
ಘನದುರಿತ ದಾವಾಗ್ನಿ ಬಂದನು
ಯೆನುತ ಮೈಯಿಕ್ಕಿದನು ಮುನಿಜನ ಸಹಿತ ಯಮಸೂನು ೨೨

ತೆಗೆದು ತಕ್ಕೈಸಿದನು ಭೂಪನ
ಮಿಗೆ ಹರುಷದಲಿ ಭೀಮ ಪಾರ್ಥರ
ನೆಗಹಿ ಮೈದಡವಿದನು ಮಾದ್ರೀಸುತರ ದ್ರೌಪದಿಯ
ನಗುತ ಋಷಿಜನ ವಿಪ್ರ ಧೌಮ್ಯಾ
ದಿಗಳನುಚಿತೋಕ್ತಿಯಲಿ ಮನ್ನಿಸು
ತಗಧರನು ನೋಡಿದನು ಜಂಬೂಫಲದ ಘನತರುವ ೨೩

ಕಾಳು ಮಾಡದಿರಕಟಕಟ ನೀವ್
ಮೇಲನರಿಯದೆ ಋಷಿಯ ಶಾಪವ
ನಾಲಿಸದೆ (ಪಾ: ನಾಲಿಸಿದೆ) ವರ ಮೂರ್ಖತನದಲೆ ನೆನೆದಿರನುಚಿತವ
ಏಳಿ ಫಲವನು ತೊಟ್ಟ ಸರಿಸಕೆ
ಕಾಲದಲಿ ತಂದಿರಿಸಿ ನಿಮ್ಮನು
ಕೂಲಧರ್ಮಂಗಳನು ಬೇಗದಿ ಹೇಳಿ ನೀವೆಂದ ೨೪

ಎನಲು ತಂದಿರಿಸಿದರು ಫಲವನು
ವನಜನಾಭನ ಹೇಳಿಕೆಯಲಾ
ಕ್ಷಣಕೆ ಕುಂತೀತನುಜ ಹೇಳೆನೆ ಕೈಗಳನು ಮುಗಿದು
ಇನ ಶಶಿಗಳಿಂದ್ರಾನಲಾಂತಕ
ದನುಜ ವರುಣ ಸಮೀರ ಹರಸಖ
ಮನುಮಥಾರಿಯೆ ನೀವು ಚಿತ್ತವಿಸೆನುತಲಿಂತೆಂದ ೨೫

ಶ್ಲೋಕ -
ಮಾತೃವತ್ ಪರದಾರಾಣಿ
ಪರದ್ರವ್ಯಾಣಿ ಲೋಷ್ಠವತ್
ಆತ್ಮವತ್ ಸರ್ವಭೂತಾನಿ
ಯಃ ಪಶ್ಯತಿ ಸ ಪಶ್ಯತಿ = ೧

ಪರಸತಿಯೆ ನಿಜಜನನಿ ಪರ ಧನ
ವಿರದೆ ಲೋಷ್ಠವು ಜೀವರಾಶಿಯ
ಪರರ ನೋವನು ತನ್ನ ನೋವೆಂದೆನುತ ಭಾವಿಸುವೆ
ನಿರುತವೆನೆ ಫಲ ಧರೆಯ ಬಿಟ್ಟಂ
ತರದೊಳೊಮ್ಮೊಳ ನೆಗೆಯೆ ಮುರಹರ
ಮರುತಸುತ ಬಾರೆನಲು ನುಡಿದನು ಮುಗಿದು ಕರಯುಗವ ೨೬

ಶ್ಲೋಕ -
ಪ್ರಾಣಮೇವ ಪರಿತ್ಯಜ್ಯ
ಮಾನಮೇವಾಭಿರಕ್ಷತು
ಆನಿತ್ಯಮಧ್ರುವಂ ಪ್ರಾಣಂ
ಮಾನಮಾಚಂದ್ರತಾರಕಂ = ೨

ಜೀವವೀಕ್ಷಣವಿಳಿದು ಹೋಗಲಿ
ಕಾವುದಭಿಮಾನವನು ನಿತ್ಯದ
ಭಾವವಾಗಿಹುದಾತ್ಮವಾಚಂದ್ರಾರ್ಕವಭಿಮಾನ
ನಾವು ಬೇರೊಂದರಿಯೆವಿದ್ದುದ
ದೇವರಿಗೆ ಬಿನ್ನವಿಸಿದೆವುಯೆನ
ಲಾವ ಬೇಗದಲಡರಿದುದೊ ಫಲವರಸ ಕೇಳೆಂದ ೨೭

ಏನಭಿಮತವು ಪಾರ್ಥ (ನಿನ್ನ) ನಿ
ಧಾನವನು ನುಡಿಯೆನಲು ಹೇಳುವೆ
ಮಾನನಿಧಿ ನಿಮಗರುಹುವೆನು ಚಿತ್ತವಿಸಿ ನೀವೆನುತ
ಧ್ಯಾನದಲಿ ಕೈಮುಗಿದು ಶಂಕರ
ನೀನೆ ಗತಿಯೆಂದೆನುತಲಾ ಶಶಿ
ಭಾನು ದಿಗುಪಾಲರಿಗೆ ನಮಿಸುತ ಕೇಳಿ ನೀವೆಂದ ೨೮

ಶ್ಲೋಕ -
ನಿಮಂತ್ರಣೋತ್ಸವೋ ವಿಪ್ರಾಃ
ಗಾವೋ ನವ ತೃಣೋತ್ಸವಾಃ
ಸುಭರ್ತಾರೋತ್ಸವಾ ನಾರ್ಯಃ
ಅಹಂ ಕೃಷ್ಣ ರಣೋತ್ಸವಃ = ೩

ಪರಗೃಹದ ಭೋಜನಕೆ ವಿಪ್ರರು
ಪರಿಣಮಿಸುವೋಲ್ ಪಶು ಸಮೂಹವು
ಇರದೆ ನವತೃಣದಿಂದ ತುಷ್ಟಿಯನೈದುವಂದದಲಿ
ವರಸತಿಯು ನಿಜಪತಿಯ ಕಂಡಾ
ಹರುಷವಹುದೆನಗಾಹವದಲೆಲೆ
ಹರಿಯೆಯೆನೆ ಬೇಗದಲಿ ಫಲವಡರಿತ್ತು ನಿಮಿಷದಲಿ ೨೯

ಶ್ಲೋಕ -
ಧರ್ಮೋ ಜಯತು ನಾಧರ್ಮಃ
ಸತ್ಯಂ ಜಯತು ನಾನೃತಂ
ಕ್ಷಮಾ ಜಯತು ನ ಕ್ರೋಧೋ
ವಿಷ್ಣುರ್ಜಯತು ನಾಸುರಃ = ೪

ಧರ್ಮವನು ನೆರೆ ಜಯಿಸಲರಿಯದ
ಧರ್ಮ ಸತ್ಯವ ಮೀರಲರಿವುದೆ
ನಿರ್ಮಳದ ಸೈರಣೆಯ ಗೆಲುವುದೆ ಕ್ರೋಧ ಭಾವಿಸಲು
ಕರ್ಮಹರ ಕೃಷ್ಣನನು ಗೆಲುವರೆ
ದುರ್ಮತಿಗಳಹ ಅಸುರರೆನಲಾ
ಧರ್ಮತತ್ವವ ನಕುಲ ವಿರಚಿಸಲೈದಿತಾ ಫಲವು ೩೦

ಶ್ಲೋಕ -
ಸತ್ಯಂ ಮಾತಾ ಪಿತಾ ಜ್ಞಾನಂ
ಧರ್ಮೋಭ್ರಾತಾ ದಯಾ ಸಖಾ
ಶಾಂತಿ:ಪತ್ನೀ ಕ್ಷಮಾಸೂನು
ಷ್ಷಡೈತೇ ಮಮ ಬಾಂಧವಾಃ = ೫

ಸತ್ಯವೇ ನಿಜಮಾತೆ ಜ್ಞಾನವೆ
ನಿತ್ಯವಹ ಪಿತ ಧರ್ಮವನುಜನು
ಮತ್ತೆ ದಯವೇ ಮಿತ್ರ ಶಾಂತಿಯೆ ಪತಿ(ಯು) ಕ್ಷಮೆಸೂನು
ಸತ್ಯವನು ಸಹದೇವ ನುಡಿಯಲಿ
ಕತ್ಯಧಿಕಫಲ ಮೇಲೆ ಚಿಗಿಯಲು
ಮತ್ತೆ ಮುರರಿಪು ದ್ರುಪದಸುತೆ ಬಾಯೆಂದನುಚಿತದಲಿ ೩೧

ಶ್ಲೋಕ -
ಸುಂದರಂ ಪುರುಷಂ ದೃಷ್ಟ್ವಾ
ಪಿತರಂ ಭ್ರಾತರಂ ಸುತಂ
ಯೋನಿರ್ದ್ರವತಿ ನಾರೀಣಾಂ
ಸತ್ಯಂ ಬ್ರೂಮೀಹ ಕೇಶವ = ೬

ಭಾವವಹ ಪುರುಷರನು ಕಾಣುತ
ಭಾವಿಸಲು ಪಿತ ಸುತರ ಅನುಜರ
ಠಾವಿನಲಿಯಾದರೆಯು ಯೋನಿದ್ರವಣ (ಪಾ: ಯೋನಿರ್ದ್ರವಣ) ಸತಿಯರಿಗೆ
ಭಾವದಲಿ ಮರೆವಿಡಿದು ನುಡಿಯಲಿ
ಕಾ ವಿಗಡ ಫಲವಡರದಿರುತಿರೆ
ದೇವ ನುಡಿದನು ವಂಚಿಸದೆ ನಿಶ್ಚಯವ ಹೇಳೆಂದ ೩೨

ಶ್ಲೋಕ -
ಪಂಚ ಮೇ ಪತಯಸ್ಸಂತಿ
ಷಷ್ಠಸ್ತು ಮಮ ರೋಚತೇ
ಪುರುಷಾಣಾಮಭಾವೇನ
ಸರ್ವ ನಾರ್ಯಾಃ ಪತಿವ್ರತಾಃ = ೭

ಪತಿಗಳೀಶ್ವರನಾಜ್ಞೆಯಿಂದವೆ
ಯತಿಶಯದಲೈವರು ಮನಸ್ಸಿನ
ಮತದಲಾರಾಗಿಹುದು ಬೇರೊಂದಿಲ್ಲ ಚಿತ್ತದಲಿ
ಪೃಥಿವಿಯಲಿ ಪರಪುರುಷನು ದು
ರ್ಮತಿಯೊಳೊಡಬಡುವವಳು ಸತಿಯೇ
ಸತತ ಕರುಣಾಕರಯೆನಲು ಫಲ ಠಾವನಡರಿದುದು ೩೩

ಹರುಷ ಮಿಗೆ ಋಷಿಜನಕೆ ಧೌಮ್ಯನು
ಕರಗಳನು ನೆಗಹುತ ಯುಧಿಷ್ಠಿರ
ಧರಣಿಪತಿ ಕೇಳ್ ಕೃಷ್ಣನಿರೆ ನಿನಗಾವುದರಿದೆಂದು
ಇರದೆ ದೇವನ ಪಾದ ಪಂಕಜ
ಕೆರಗಿದುದು ಮುನಿನಿಕರ ಬುಧಜನ
ನಿರತ ಪರಮಾನಂದದಿಂದೈದಿದರು ತದ್ವನವ ೩೪

ಮುನಿಪ ಕಣ್ವನು ಕಣ್ದೆರೆದು ಪರ
ಮನನು ಜಾನಿಸಿ ಕರವನರಳಿಚ
ಲೊನೆದು ಬಿದ್ದುದು ಪಣ್ಣು ಕಂಡನು ನಗುತ ಮನದೊಳಗೆ
ವನಜನಾಭನ ತಂತ್ರವಿದು ಪಾ
ವನ ಸುರೂಪನ ನೋಳ್ಪೆನೆಂದಾ
ಮುನಿಪ ಫಲಸಹ ಬಂದು ಕಂಡನು ಕೃಷ್ಣ ಪಾಂಡವರ ೩೫

ಇದಿರೊಳಿರಿಸಿದನಾ ಫಲವ ಸಂ
ಮುದದಿ ಹೊಂಪುಳಿಯೋಗಿ ಮುನಿಯಾ
ಪದುಮನಾಭಂಗೆರಗಿ ತೆಗೆ ನೀ ಫಲವನೆಂದೆನಲು
ಮದನಪಿತ ನಸುನಗುತ ಮುನಿಪನ
ಹದುಳ ಮಿಗೆ ಸೈಪಿಟ್ಟು ನೆಗಹಿದ
ನುದಿತ ಫಲವನು ಹಂಚ ಹೇಳಿದನಾ ನೃಪಾಲಂಗೆ ೩೬

ಬರಿಸಿ ಋಷಿಗಳನವರವರ ತರ
ವರಿದು ಕೊಡಿಸಿದನುಳಿದುದನು ಭೂ
ಸುರ ಸಹೋದರರಿಂಗೆ ಮುನಿಸತಿಯರಿಗೆ ದ್ರೌಪದಿಗೆ
ಮುರಹರಗೆ ತನ್ಮುನಿಪ ಕಣ್ವಂ
ಗಿರಿಸಿ ಕೈವೀಸಿದೊಡೆ ಫಲವನು
ಹರುಷ ಮಿಗೆ ಭುಂಜಿಸಿತು ಭೂಪತಿ ಕೇಳು ಕೌತುಕವ ೩೭

ಪಾರಣೆಯನುರೆ ಮಾಡಿ ಮುನಿಪ ಮ
ಹೀರಮಣನನು ಬೀಳುಕೊಟ್ಟನು
ದಾರ ಲಕ್ಷ್ಮೀಕಾಂತನನು ಬೀಳ್ಕೊಂಡು ಮತ್ತೊಂದು
ಸಾರವಹ ಸುಸ್ಥಾನಕೈದಿದ
ನಾರು ಭಾವಿಸಬಲ್ಲರಾ ಮುರ
ವೈರಿಯನುಪಮ ಮಹಿಮೆಗಳ ಭೂಪಾಲ ಕೇಳೆಂದ ೩೮

ದೇವ ನಿಮ್ಮಡಿಯಂಘ್ರಿ ಕಮಲವ
ನಾವ ನೆನೆವನವಂಗೆ ಜಪತಪ
ಸಾವು ಹುಟ್ಟಿಲ್ಲೆಂಬುದೈ ವರವೇದ ಶಾಸ್ತ್ರಗಳು
ನಾವಲೇ ಕೃತಕೃತ್ಯರಿಂದೀ
ದೇವ ಸಾಕ್ಷಾತ್ಕಾರ ದರ್ಶನ
ಭಾವವೋಯಿದು ನಮಗೆನುತ ಹೊಗಳಿದನು ಸಹದೇವ ೩೯

ಹರಿಯೊಲಿದು ಮೈದಡವಿಯೈವರ
ತರುಣಿಯನು ಸಂತೈಸಿಯಾ ಮುನಿ
ವರರನುಪಚರಿಸಿದನು ಬುದ್ಧಿಯನೊರೆದು ಧರ್ಮಜಗೆ
ಉರುತರೋತ್ತರ ಸಿದ್ಧಿ ನಿಮಗಿ
ನ್ನಿರದೆ ಫಲಿಸುವುದೆಂದು ಸೂಚಿಸಿ
ಮರಳಿ ತನ್ನಯ ಪುರಿಗೆ ಗಮನೋದ್ಯೋಗಮನನಾದ ೪೦

ಬಂದನಾ ಭೂಪತಿ ಮುರಾಂತಕ
ನಂದಣದ ಬಲ ದೆಸೆಯಲನಿಲಜ
ಮುಂದೆ ವಾಮದಿ ಪಾರ್ಥಯಮಳ ದ್ರೌಪದಾದೇವಿ
ಹಿಂದೆ ಬರೆ ಕಿರಿದೆಡೆಯಲಲ್ಲಿಯೆ
ನಿಂದು ಕಳುಹಿದನೆಲ್ಲರನು ಗೋ
ವಿಂದನೇರಿದ ರಥವ ಗದುಗಿನ ವೀರನಾರಾಯಣ ೪೧

(ಸಂಗ್ರಹ: ಹೊಳೆನರಸಿಪುರ ಮಂಜುನಾಥ)

Monday, February 8, 2010

ದ್ರೋಣಪರ್ವ: ೦೧. ಒಂದನೆಯ ಸಂಧಿ

ಸೂ: ರಾಯ ಕಟಕ ಪಿತಾಮಹನ ತರು
ವಾಯಲಭಿಷೇಕವನು ಕೌರವ
ರಾಯ ಮಾಡಿಸಿ ಪತಿಕರಿಸಿದನು ಕುಂಭಸಂಭವನ.

ಸೋಲಿಸಿತೆ ಕರ್ಣಾಮೃತದ ಮಳೆ
ಗಾಲ ನಿನ್ನಯ ಕಿವಿಗಳನು ನೆರೆ
ಕೇಳಿದೈ ಕೌರವನ ಕದನದ ಬಾಲಕೇಳಿಗಳ
ಹೇಳುವುದು ತಾನೇನು ಕೆಂಗರಿ
ಗೋಲ ಮಂಚದ ಮಹಿಮನಿರವನು
ಮೇಲು ಪೋಗಿನ ಕಥೆಯನವಧಾನದಲಿ ಕೇಳೆಂದ ೧

ಬತ್ತಿತಂಬುಧಿ ನಿನ್ನ ಮಗ ಹೊಗು
ವತ್ತ ಕಾದುದು ನೆಲನು ನೃಪ ತಲೆ
ಗುತ್ತಿ ಹೊಗಲೊಳಕೊಳ್ಳದಂಬರವೇನನುಸುರುವೆನು
ಮೃತ್ಯು ನಿನಗೊಲಿದಿಹಳು ಬಳಿಕಿ
ನ್ನುತ್ತರೋತ್ತರವೆಲ್ಲಿಯದು ನೆರೆ
ಚಿತ್ತವಿಸುವುದು ಜೀಯ ದ್ರೋಣಂಗಾಯ್ತು ಹರಿವೆಂದ ೨

ಐದು ದಿವಸದೊಳಹಿತ ಬಲವನು
ಹೊಯ್ದು ಹೊಡೆಕುಟ್ಟಾಡಿ ರಿಪುಗಳೊ
ಳೈದೆ ದೊರೆಗಳನಿರಿದು ಮೆರೆದನು ಭುಜಮಹೋನ್ನತಿಯ
ಕೈದುಕಾರರ ಗುರು ಛಡಾಳಿಸಿ
ಮೈದೆಗೆದು ನಿರ್ಜರರ ನಗರಿಗೆ
ಹಾಯ್ದನೆನಲುರಿ ಜಠರದಲಿ ಮೋಹರಿಸಿತವನಿಪನ ೩

ಶಿವಶಿವಾ ಭೀಷ್ಮಾವಸಾನ
ಶ್ರವಣ ವಿಷವಿದೆ ಮತ್ತೆ ಕಳಶೋ
ದ್ಭವನ ದೇಹವ್ಯಥೆಯ ಕೇಳ್ದೆನೆ ಪೂತು ವಿಧಿಯೆನುತ
ಅವನಿಪತಿ ದುಗುಡದಲಿ ಮೋರೆಯ
ಲವುಚಿದನು ಕರತಳವ ಚಿತ್ತದ
ಬವಣಿಗೆಯ ಭಾರಣೆಯ ಕಡುಶೋಕದಲಿ ಮೈಮರೆದ ೪

ಶೋಕವೇತಕೆ ಜೀಯ ನೀನವಿ
ವೇಕಿತನದಲಿ ಮಗನ ಹೆಚ್ಚಿಸಿ
ಸಾಕಿ ಕಲಿಸಿದೆ ಕುಟಿಲತನವನು ಕುಹಕ ವಿದ್ಯೆಗಳ
ಆಕೆವಾಳರು ಹೊರಿಗೆಯುಳ್ಳ ವಿ
ವೇಕಿಗಳು ನಿಮ್ಮಲ್ಲಿ ಸಲ್ಲರು
ಸಾಕಿದೇತಕೆ ಸೈರಿಸೆಂದನು ಸಂಜಯನು ನೃಪನ ೫

ಆರು ಕುಹಕಿಗಳಾರು ದುರ್ಜನ
ರಾರು ಖುಲ್ಲರು ನೀತಿ ಬಾಹಿರ
ರಾರು ದುರ್ಬಲರವರು ನಿನ್ನರಮನೆಯ ಮಂತ್ರಿಗಳು
ಆರು ಹಿತವರು ನೀತಿ ಕೋವಿದ
ರಾರು ಸುಜನರು ಬಹು ಪರಾಕ್ರಮ
ರಾರವರ ಹೊರಬೀಸಿ ಕಾಬುದು ನಿನ್ನ ಮತವೆಂದ ೬

ಹರಿದುದೈ ಕುರುಸೇನೆ ಬತ್ತಿದ
ಕೆರೆಯೊಳಗೆ ಬಲೆಯೇಕೆ ಹಗೆ ಹೊ
ಕ್ಕಿರಿವರಿನ್ನಾರಡ್ಡ ಬೀಳ್ವರು ನಿನ್ನ ಮಕ್ಕಳಿಗೆ
ಬರಿದೆ ಮನ ನೋಯದಿರು ಸಾಕೆ
ಚ್ಚರುವುದೆನೆ ತನ್ನೊಳಗೆ ಹದುಳಿಸಿ
ಸರಿಹೃದಯನೀ ಮಾತನೆಂದನು ಮತ್ತೆ ಸಂಜಯಗೆ ೭

ಘಾಸಿಯಾದೆನು ಮಗನ ಮೇಲಿ
ನ್ನಾಸೆ ಬೀತುದು ಬೆಂದ ಹುಣ್ಣಲಿ
ಸಾಸಿವೆಯ ಬಳಿಯದಿರು ಸಂಜಯ ನಿನಗೆ ದಯವಿಲ್ಲ
ಏಸು ಬಲಹುಂಟಾದರೆಯು ಹಗೆ
ವಾಸುದೇವನ ಹರಿಬವೆಂದಾ
ನೇಸನೊರಲಿದೆನೇನ ಮಾಡುವೆನೆಂದನಂಧನೃಪ ೮

ಬೇಡ ಮಗನೇ ಪಾಂಡುಸುತರಲಿ
ಮಾಡು ಸಂಧಿಯನಸುರ ರಿಪುವಿನ
ಕೂಡೆ ವಿಗ್ರಹವೊಳ್ಳಿತೇ ಹಗೆ ಹೊಲ್ಲ ದೈವದಲಿ
ಪಾಡು ತಪ್ಪಿದ ಬಳಿಕ ವಿನಯವ
ಮಾಡಿ ಮೆರವುದು ಬಂಧುವರ್ಗದ
ಕೂಡೆ ವಾಸಿಗಳೇತಕೆನ್ನೆನೆ ನಿನ್ನ ಮನವರಿಯೆ ೯

ಹೋಗಲಿನ್ನಾ ಮಾತು ಖೂಳರು
ತಾಗಿ ಬಾಗರು ಸುಕೃತ ದುಷ್ಕೃತ
ಭೋಗವದು ಮಾಡಿದರಿಗಪ್ಪುದು ಖೇದ ನಮಗೇಕೆ
ಈಗಲೀ ಕದನದಲಿ ವಜ್ರಕೆ
ಬೇಗಡೆಯ ಮಾಡಿದನದಾವನು
ತಾಗಿ ದ್ರೋಣನ ಮುರಿದ ಪರಿಯನು ರಚಿಸಿ ಹೇಳೆಂದ ೧೦

ಚಿತ್ತವಿಸು ಧೃತರಾಷ್ಟ್ರ ಮಲಗಿದ
ಮುತ್ತಯನ ಬೀಳ್ಕೊಂಡು ಕೌರವ
ರಿತ್ತ ಸರಿದರು ಪಾಂಡುನಂದನರತ್ತ ತಿರುಗಿದರು
ಹೊತ್ತ ಮೋನದ ವಿವಿಧ ವಾದ್ಯದ
ಕೆತ್ತ ಬಾಯ್ಗಳ ಪಾಠಕರ ಕೈ
ಹತ್ತುಗೆಯ ಮೋರೆಯ ಮಹೀಪತಿ ಹೊಕ್ಕನರಮನೆಯ ೧೧

ಗಾಹು ಕೊಳ್ಳದು ಭೀಮ ಪಾರ್ಥರ
ಸಾಹಸವನೆಣಿಸುತ ಕಠಾರಿಯ
ಮೋಹಳದ ಮೇಲಿಟ್ಟ ಗಲ್ಲದ ಮಕುಟದೊಲಹುಗಳ
ಊಹೆದೆಗಹಿನ ಕಂಬನಿಯ ತನಿ
ಮೋಹರದ ಘನ ಶೋಕವಹ್ನಿಯ
ಮೇಹುಗಾಡಿನ ಮನದ ಕೌರವನಿತ್ತನೋಲಗವ ೧೨

ಗುರುತನುಜ ವೃಷಸೇನ ಮಾದ್ರೇ
ಶ್ವರ ಕಳಿಂಗ ವಿಕರ್ಣ ದುಸ್ಸಹ
ದುರುಳ ಶಕುನಿ ಸುಕೇತು ಭೂರಿಶ್ರವ ಜಯದ್ರಥರು
ವರ ಸುಲೋಚನ ವಿಂದ್ಯ ಯವನೇ
ಶ್ವರರು ಕೃಪ ಕೃತವರ್ಮ ಭಗದ
ತ್ತರು ಮಹಾ ಮಂತ್ರಿಗಳು ಬಂದರು ರಾಯನೋಲಗಕೆ ೧೩

ತೊಡರ ಝಣಝಣ ರವದ ಹೆಗಲಲಿ
ಜಡಿವ ಹಿರಿಯುಬ್ಬಣದ ಹೆಚ್ಚಿದ
ಮುಡಿಹುಗಳ ಮಿಗೆ ಹೊಳೆವ ಹೀರಾವಳಿಯ ಕೊರಳುಗಳ
ಕಡುಮನದ ಕಲಿ ರಾಜಪುತ್ರರ
ನಡುವೆ ಮೈಪರಿಮಳದಿ ದೆಸೆ ಕಂ
ಪಿಡಲು ಭಾರವಣೆಯಲಿ ಬಂದನು ಕರ್ಣನೋಲಗಕೆ ೧೪

ಇತ್ತ ಬಾರೈ ಕರ್ಣ ಕುರುಕುಲ
ಮತ್ತವಾರಣ ಕುಳ್ಳಿರೈ ಬಾ
ಯಿತ್ತ ಬಾ ತನ್ನಾಣೆಯೆನುತವೆ ಸೆರಗ ಹಿಡಿದೆಳೆದು
ಹತ್ತಿರಾತನ ನಿಲಿಸಿ ಬಟ್ಟಲ
ಲಿತ್ತು ವೀಳೆಯವನು ಸುಯೋಧನ
ಕೆತ್ತುಕೊಂಡಿರೆ ನುಡಿಸಿದನು ಕಲಿಕರ್ಣನವನಿಪನ ೧೫

ಜೀಯ ದುಗುಡವಿದೇಕೆ ಬಿಡು ಗಾಂ
ಗೇಯನಳುಕಿದರೇನು ಕಾಣೆಯ
ಬೀಯದಲಿ ಬಡವಹುದೆ ಕನಕಾಚಲ ನಿಧಾನಿಸಲು
ರಾಯ ಜಗಜಟ್ಟಿಗಳು ರಣದೊಳ
ಜೇಯರಿದೆ ಪರಿವಾರವನು ನಿ
ರ್ದಾಯದಲಿ ದಣಿಸುವೆನು ರಿಪುಗಳ ಸಿರಿಯ ಸೂರೆಯಲಿ ೧೬

ಕರ್ಣ ಕರ್ಣಕಠೋರ ಸಾಹಸ
ನಿರ್ಣಯಿಸು ಪರಸೈನ್ಯ ಸುಭಟ ಮ
ಹಾರ್ಣವಕೆ ಬಿಡು ನಿನ್ನ ವಿಕ್ರಮ ಬಾಡಬಾನಳನ
ಪೂರ್ಣಕಾಮನು ನೀನು ಕುರುಬಲ
ಕರ್ಣಧಾರನು ನೀನು ವಿಶ್ವವಿ
ಕರ್ಣ ನೀನೇ ರಕ್ಷಿಸೆಂದುದು ನಿಖಿಳ ಪರಿವಾರ ೧೭

ಕಾದುವೆನು ರಿಪುಭಟರ ಜೀವವ
ಸೇದುವೆನು ಸಮರಂಗ ಭೂಮಿಯ
ನಾದುವೆನು ನೆಣಗೊಬ್ಬಿನಹಿತರ ಗೋಣ ರಕುತದಲಿ
ಹೋದ ದಿವಸಂಗಳಲಿ ಕಾಳೆಗ
ಮಾದುದಂದಿನ ಭೀಷ್ಮರೊಡನೆ ವಿ
ವಾದ ಕಾರಣ ಬೇಡಿಕೊಳಬೇಹುದು ನದೀಸುತನ ೧೮

ಎಂದು ನೃಪತಿಯ ಬೀಳುಕೊಂಡಿನ
ನಂದನನು ಬೊಂಬಾಳ ದೀಪದ
ಸಂದಣಿಗಳಲಿ ಸೆಳೆದಡಾಯ್ದದ ಭಟರ ಮುತ್ತಿಗೆಯ
ಮುಂದೆ ಪಾಯವಧಾರು ರಿಪುನೃಪ
ಬಂದಿಕಾರವಧಾರು ಧಿರುಪಯ
ವೆಂದು ಕಳಕಳ ಗಜರು ಮಿಗೆ ಕುರು ಭೂಮಿಗೈತಂದ ೧೯

ಹಾಯಿದವು ನರಿ ನಾಯಿಗಳು ಕಟ
ವಾಯಲೆಳಲುವ ಕರುಳಿನಲಿ ಬಸಿ
ವಾಯ ರಕುತದಲೋಡಿದವು ರಣ ಭೂತ ದೆಸೆದೆಸೆಗೆ
ಆಯುಧದ ಹರಹುಗಳ ತಲೆಗಳ
ಡೋಯಿಗೆಯ ಕಡಿ ಖಂಡಮಯದ ಮ
ಹಾಯತದ ರಣದೊಳಗೆ ಬಂದನು ಭೀಷ್ಮನಿದ್ದೆಡೆಗೆ ೨೦

ಸರಳ ಮಂಚವ ಹೊದ್ದಿ ಭೀಷ್ಮನ
ಚರಣಕಮಲವ ಹಿಡಿದು ನೊಸಲಿನೊ
ಳೊರಸಿಕೊಂಡನು ನಾದಿದನು ಕಂಬನಿಯೊಳಂಘ್ರಿಗಳ
ಕರುಣಿಸೈ ಗಾಂಗೇಯ ಕರುಣಾ
ಶರಧಿಯೈ ಖಳತಿಲಕ ಕರ್ಣನ
ದುರುಳತನವನು ಮರೆದು ಮೆರೆವುದು ನಿಮ್ಮ ಸದ್ಗುಣವ ೨೧

ಎನಲು ಹೃದಯಾಂಬುಜದ ಪೀಠದ
ವನಜನಾಭ ಧ್ಯಾನಸುಧೆಯಲಿ
ನೆನದು ಹೊಂಗಿದ ಕರಣ ಹೊರೆಯೇರಿತ್ತು ನಿಮಿಷದಲಿ
ತನುಪುಳಕ ತಲೆದೋರೆ ರೋಮಾಂ
ಚನದ ಬಿಗುಹಡಗಿತ್ತು ಕಂಗಳ
ನನೆಗಳರಳಿದವಾಯ್ತು ಭೀಷ್ಮಂಗಿತ್ತಣವಧಾನ ೨೨

ಅಳಲದಿರು ಬಾ ಮಗನೆ ಕುರುಕುಲ
ತಿಲಕನವಸರದಾನೆ ರಿಪು ಮಂ
ಡಳಿಕಮಸ್ತಕಶೂಲ ಬಾರೈ ಕರ್ಣ ಬಾಯೆನುತ
ತುಳುಕಿದನು ಕಂಬನಿಯ ಕೋಮಳ
ತಳದಿ ಮೈದಡವಿದನು ಕೌರವ
ನುಳಿವು ನಿನ್ನದು ಕಂದ ಕದನವ ಜಯಿಸು ಹೋಗೆಂದ ೨೩

ಗಾರುಗೆಡೆದೆನು ನಿಮ್ಮನೋಲೆಯ
ಕಾರತನದುಬ್ಬಿನಲಿ ತನಿ ಮದ
ವೇರಿ ನಿಮ್ಮಲಿ ಸೆಣಸಿದೆನು ಸೇನಾಧಿಪತ್ಯದಲಿ
ದೂರ ಹೊತ್ತೆನು ರಣದ ಮೀಸಲಿ
ನೇರು ತಪ್ಪಿತು ನೀಲಮಣಿ ತಲೆ
ಗೇರಿಸಿದ ತೃಣವದಕೆ ಸರಿಯೇ ಭೀಷ್ಮ ಹೇಳೆಂದ ೨೪

ತನುಜ ತಪ್ಪೇನದಕೆ ಕಾಳೆಗ
ವೆನಗೆ ತಗೆನಬೇಕು ವೀರರು
ಮನದ ಕಲಿತನದುಬ್ಬುಗೊಬ್ಬಿನಲೆಂಬರಿದಕೇನು
ಮನದೊಳೆಗೆ ಖತಿಯಿಲ್ಲ ದುರಿಯೋ
ಧನ ನೃಪತಿಯೋಪಾದಿ ನೀ ಬೇ
ರೆನಗೆ ಲೋಗನೆ ಕಂದ ಕದನವ ಜಯಿಸು ಹೋಗೆಂದ ೨೫

ಆಳುತನದ ದೊಠಾರತನ ಸರಿ
ಯಾಳಿನಲಿ ಸೆಣಸಾದೊಡೊಳ್ಳಿತು
ಮೇಳವೇ ಗುರು ದೈವದಲಿ ಕಟ್ಟುವರೆ ಬಿರುದುಗಳ
ಹಾಳಿ ಹಸುಗೆಯನರಿಯದಾ ಹೀ
ಹಾಳಿಗೆಡಿಸಿದೆನಂದು ಸಭೆಯಲಿ
ಖೂಳನವಗುಣ ಶತವ ನೋಡದೆ ನಿಮ್ಮ ಮೆರೆಯೆಂದ ೨೬

ನೋವು ಮನದೊಳಗುಳ್ಳಡಾ ರಾ
ಜೀವಲೋಚನನಾಣೆ ಮಗನೇ
ಜೀವ ಕೌರವನಲ್ಲಿ ಕರಗುವುದೇನ ಹೇಳುವೆನು
ಆವನಾತನ ಬಂಧುವಾತನೆ
ಜೀವವೆನ್ನಯ ದೆಸೆಯ ಭಯ ಬೇ
ಡಾವ ಪರಿಯೆಂದವನನುಳುಹುವ ಹದನ ಮಾಡೆಂದ ೨೭

ಎನ್ನ ಹವಣೇ ಹಗೆಯ ಗೆಲುವಡೆ
ನಿನ್ನ ವಂದಿಗರಿರಲು ನೂಕದು
ತನ್ನ ಸಾಹಸವೆಲ್ಲಿ ಪರಿಯಂತಹುದು ಕದನದಲಿ
ಗನ್ನಕಾರನು ಕೃಷ್ಣನವರಿಗೆ
ತನ್ನನೊಚ್ಚತಗೊಟ್ಟನಹಿತರ
ನಿನ್ನು ಗೆಲುವವರಾರು ಜಯವೆಲ್ಲಿಯದು ನಮಗೆಂದ ೨೮

ಆಲವಟ್ಟದ ಗಾಳಿಯಲಿ ಮೇ
ಘಾಳಿಮುರಿವುದೆ ಮಿಂಚುಬುಳುವಿಗೆ
ಸೋಲುವುದೆ ಕತ್ತಲೆಯ ಕಟಕವು ಜೀಯ ಚಿತ್ತೈಸು
ಸೀಳಬಹುದೇ ಸೀಸದುಳಿಯಲಿ
ಶೈಲವನು ಹರಿಯೊಲಿದ ಮನುಜರ
ಮೇಲೆ ಮುನಿದೇಗುವರು ಕೆಲಬರು ಭೀಷ್ಮ ಹೇಳೆಂದ ೨೯

ಲೇಸನಾಡಿದೆ ಕರ್ಣ ದಿಟ ನೀ
ನೀಸು ಸಮ್ಯಜ್ಞಾನಿಯೆಂಬುದ
ನೀಸು ದಿನ ನಾವರಿಯೆವೈ ನೀ ಸತ್ಕುಲೀನನಲ
ಆ ಸುಯೋಧನಗರುಹಿ ಸಂಧಿಯ
ನೀ ಸಮಯದಲಿ ಘಟಿಸು ನೀನೆನ
ಲೈಸ ಮೀರನು ಪಾಂಡವರ ಸಂಪ್ರತಿಯ ಮಾಡೆಂದ ೩೦

ಜೀಯ ಮಂತ್ರದ ಮಾತು ರಾವುತ
ಪಾಯಕರಿಗೊಪ್ಪುವುದೆ ಅವರವ
ರಾಯತದಲೋಲೈಸಬೇಹುದು ಮೇರೆ ಮಾರ್ಗದಲಿ
ರಾಯನೊಲಿದುದ ಹಿಡಿವೆನೊಲ್ಲದ
ದಾಯವನು ಬಿಡುವೆನು ನಿಜಾಭಿ
ಪ್ರಾಯವಿದು ಸಂಪ್ರತಿಯ ನುಡಿ ತನಗಂಗವಲ್ಲೆಂದ ೩೧

ಭಾನುಸನ್ನಿಭ ಮರಳು ಭೂಪನ
ಹಾನಿ ವೃದ್ದಿಗಳೆಲ್ಲ ನಿನ್ನದು
ನೀನು ಪಂಥದ ಜಾಣನಲ್ಲಾ ವಿಜಯನಾಗೆನಲು
ಆ ನದೀಸುತನಡಿಗೆರಗಿ ರವಿ
ಸೂನು ಕಳುಹಿಸಿಕೊಂಡು ಬಹಳ ಮ
ನೋನುರಾಗದಲೈದಿದನು ಕುರುರಾಯನೋಲಗವ ೩೨

ಭಾನುಸುತ ಕುಳ್ಳಿರು ನದೀಸುತ
ನೇನನೆಂದನು ತನ್ನ ಚಿತ್ತ
ಗ್ಲಾನಿಯನು ಬಿಸುಟೇನ ನುಡಿದನು ಭಾವಶುದ್ಧಿಯಲಿ
ಏನನೆಂಬೆನು ಜೀಯ ಬಹಳ ಕೃ
ಪಾನಿಧಿಯಲಾ ಭೀಷ್ಮನನುಸಂ
ಧಾನವಿಲ್ಲದೆ ಬೆಸಸಿ ಕಳುಹಿದನೆಂದನಾ ಕರ್ಣ ೩೩

ಇನ್ನು ಸೇನಾಪತಿಯದಾರೈ
ನಿನ್ನ ಮತವೇನುದಯವಾಗದ
ಮುನ್ನ ಬವರದ ಹಿಡಿಯಬೇಹುದು ವೈರಿ ರಾಯರಲಿ
ಎನ್ನು ನಿನ್ನಭಿಮತವನೆನೆ ಸಂ
ಪನ್ನಭುಜಬಲ ದ್ರೋಣನಿರಲಾ
ರಿನ್ನು ಸೇನಾಪತಿಗಳೆಂದನು ಭೂಪತಿಗೆ ಕರ್ಣ ೩೪

ಪ್ರಭೆಯ ದಾರಿಗೆ ಸೂರ್ಯನಿದಿರಿನೊ
ಳಭವನಿರೆ ತಾನಾರು ಭುವನಕೆ
ವಿಭುಗಳೈ ವೈಕುಂಠನಿದಿರಿನೊಳಾರು ದೇವತೆಯೈ
ವಿಭವ ನದಿಗಳಿಗುಂಟೆ ಜಲಧಿಯ
ರಭಸದಿದಿರಲಿ ನಮ್ಮ ಬಲದಲಿ
ಸುಭಟರಾರೈ ದ್ರೋಣನಿರುತಿರಲೆಂದನಾ ಕರ್ಣ ೩೫

ಜಾಗು ಜಾಗುರೆ ಕರ್ಣ ಪರರ ಗು
ಣಾಗಮನ ಪತಿಕರಿಸಿ ನುಡಿವವ
ನೀಗಳಿನ ಯುಗದಾತನೇ ಮಝು ಪೂತು ಭಾಪೆನುತ
ತೂಗುವೆರಳಿನ ಮಕುಟದೊಲಹಿನೊ
ಳಾ ಗರುವ ಭಟರುಲಿಯೆ ಲಹರಿಯ
ಸಾಗರದ ಸೌರಂಭದಂತಿರೆ ಮಸಗಿತಾಸ್ಥಾನ ೩೬

ನುಡಿಸು ನಿಸ್ಸಾಳವನು ಕರೆ ಹೊಂ
ಗೊಡನ ಹಿಡಿದೈತರಲಿ ನಾರಿಯ
ರೆಡ ಬಲನು ತೆರಹಾಗಲಿಕ್ಕಲಿ ಸಿಂಹವಿಷ್ಟರವ
ತಡವು ಬೇಡನೆ ಕೌರವೇಂದ್ರನ
ನುಡಿಗೆ ಮುನ್ನನುವಾಯ್ತು ವಿಪ್ರರ
ಗಡಣ ಬಂದುದು ರಚಿಸಿದರು ಮೂರ್ಧಾಭಿಷೇಚನವ ೩೭

ಸಕಲ ಸಾವಂತರು ಮಹೀಷಾ
ಲಕರು ಬಂದುದು ಚರಣದಲಿ ಕಾ
ಣಿಕೆಯನಿಕ್ಕಿತು ಕೈಯ ಮುಗಿದುದು ನಿಖಿಳ ಪರಿವಾರ
ಮಕುಟ ರತ್ನದ ಲಹರಿ ಖಡುಗದ
ವಿಕಟ ಧಾರಾರಶ್ಮಿ ದೀಪ
ಪ್ರಕರದಲಿ ಥಳಥಳಿಸೆ ರವಿಯವೊಲೆಸೆದನಾ ದ್ರೋಣ ೩೮

ಅರಸ ಬೇಡೈ ವರವನೆನ್ನನು
ಕರೆದು ಮಿಗೆ ಪತಿಕರಿಸೆ ಬಳಿಕಾ
ಬರಿದೆ ಹೋಹೆನೆ ಮೆಚ್ಚಿದುದ ನುಡಿ ಖೇಡತನವೇಕೆ
ಹೊರೆ ಹೊಗದೆ ಹೇಳೆನಲು ನಗೆ ಮೊಗ
ವರಳಿ ಹೊಂಪುಳಿಯೋಗಿ ಕೌರವ
ರರಸ ನುಡಿದನು ಕಟ್ಟಿಕೊಡಿ ಧರ್ಮಜನ ನನಗೆಂದ ೩೯

ಮರಣ ಮಂತ್ರಾನುಗ್ರಹವನವ
ಧರಿಸಬಹುದೇ ಮಗನೆ ಪಾರ್ಥನ
ಪರಿಯನರಿಯಾ ಹಿಡಿಯಲೀವನೆ ಧರ್ಮನಂದನನ
ಅರಿದ ಬೇಡಿದೆ ತನಗೆ ನೂಕದ
ವರವ ವಚನಿಸಿ ಮಾಡದಿಹ ಬಾ
ಹಿರರು ನಾವಲ್ಲೆನಲು ಕೌರವರಾಯನಿಂತೆಂದ ೪೦

ಕೊಡುವಡಿದು ವರವಲ್ಲದಿದ್ದರೆ
ನುಡಿಗೆ ಮೊಳೆ ಹೊಮ್ಮುವರೆ ನಿಮ್ಮಯ
ತೊಡಕನೊಲುವವನಲ್ಲ ನೀವೇ ಬಲ್ಲಿರೆನೆ ನಗುತ
ಹಿಡಿದು ಬಿಗಿವೆನು ಪಾರ್ಥನನು ಕೆಲ
ಕಡೆಗೆ ತಪ್ಪಿಸಿ ಧರ್ಮಪುತ್ರನ
ಬಿಡೆನು ನಿನ್ನಯ ಪುಣ್ಯದಳತೆಯನರಿಯಬಹುದೆಂದ ೪೧

ಸಾಕಿದೊಳ್ಳಿತು ಚಾಪತಂತ್ರ ಪಿ
ನಾಕಿಯೇರಿಸಿ ನುಡಿದ ನುಡಿಗಳು
ಕಾಕಹುದೆ ಕೈಕೊಂಡೆವೆನುತವನೀಶ ಹರುಷದಲಿ
ಆ ಕೃಪಾದಿ ಮಹಾ ಪ್ರಧಾನಾ
ನೀಕವನು ಕಳುಹಿದನು ಮನೆಗೆ ದಿ
ವಾಕರನು ಹೆಡೆತಲೆಗೆ ಹಗರಿಕ್ಕಿದನು ಚಂದ್ರಮನ ೪೨

ಜಗವರಾಜಕವಾಯ್ತು ಕುಮುದಾ
ಳಿಗಳ ಬಾಗಿಲು ಹೂಡಿದವು ಸೂ
ರೆಗರು ಕವಿದುದು ತುಂಬಿಗಳು ಸಿರಿವಂತರರಮನೆಯ
ಉಗಿದವಂಬರವನು ಮಯೂಖಾ
ಳಿಗಳು ಭುವನದ ಜನದ ಕಂಗಳ
ತಗಹು ತೆಗೆದುದು ಸೆರೆಯ ಬಿಟ್ಟರು ಜಕ್ಕವಕ್ಕಿಗಳ ೪೩

ಸೂಳವಿಸಿ ಬೊಬ್ಬಿರಿದವುರು ನಿ
ಸ್ಸಾಳಚಯವದ್ರಿಗಳ ಹೆಡೆತಲೆ
ಸೀಳೆ ಸಿಡಿಲೇಳಿಗೆಯಲೆದ್ದವು ವಿವಿಧ ವಾದ್ಯರವ
ಆಳು ನೆರೆದುದು ನೆಲ ಕುಸಿಯೆ ರಥ
ಜಾಲ ಜಡಿದುದು ಹಣ್ಣಿದಾನೆಯ
ಸಾಲು ಮೆರೆದವು ಕುಣಿವುತಿದ್ದುವು ಕೂಡೆ ವಾಜಿಗಳು ೪೪

ತಳಿತ ಝಲ್ಲರಿಗಳಿಗೆ ಗಗನದ
ವಳಯವೈದದು ನೆರೆದ ಸೇನೆಗೆ
ನೆಲನಗಲ ನೆರೆಯದು ನಿರೂಢಿಯ ಭಟರ ವಿಕ್ರಯಕೆ
ಅಳವು ಕಿರಿದರಿರಾಯರಿಗೆ ದಿಗು
ವಳೆಯವಿಟ್ಟೆಡೆಯಾಗೆ ರಥ ಹಯ
ದಳವುಳಕೆ ಕುರುಸೇನೆ ನಡೆದುದು ದೊರೆಯ ನೇಮದಲಿ ೪೫

ಹರಿಗೆ ಹರಿದವು ಮುಂದೆ ಬಿಲ್ಲಾ
ಳುರವಣಿಸಿದರು ಮೋಹರವ ಮಿ
ಕ್ಕುರುಬಿದರು ಸಬಳಿಗರು ಮುಂಚಿತು ರಣಕೆ ಖಡ್ಗಿಗಳು
ತುರಗ ಕವಿದವು ದಂತಿ ಘಟೆಗಳು
ತುರುಗಿದವು ರಥ ರಾಜಿ ಮುಂಗುಡಿ
ವರಿದುದವನೀಪತಿಯ ಚೂಣಿಯ ನೃಪರ ಜೋಕೆಯಲಿ ೪೬

ಸಿಡಿಲ ಕುಡುಹುಗಳಿಂದ ಕಮಲಜ
ಹೊಡೆಯಲಬುಜಭವಾಂಡ ಭೇರಿಯ
ಕಡುದನಿಗಳೆನಲೊದರಿದವು ನಿಸ್ಸಾಳ ಕೋಟಿಗಳು
ತುಡುಕಿದವು ತಂಬಟದ ದನಿ ಜಗ
ದಡಕಿಲನು ಫಡ ಕೌರವೇಂದ್ರನ
ತೊಡಕು ಬೇಡೆಂದೊದರುತಿ(ಪಾ: ತ್ತಿ)ದ್ದವು ಗೌರುಗಹಳೆಗಳು ೪೭

ಬಿಗಿದ ಝಲ್ಲರಿ ಮುಗಿಲ ಹೊಸ ಕೈ
ದುಗಳ ಮಿಂಚಿನ ಮಕುಟಮಣಿ ಕಾಂ
ತಿಗಳ ಸುರಧನುವಿನ ಚತುರ್ಬಲ ರವದ ಸಿಡಿಲುಗಳ
ವಿಗಡ ಕುಂಭಜ ಮೇಘ ಋತು ತನಿ
ಹೊಗರಿರಿದು ಪರಬಲದ ಕಡು ವೇ
ಸಗೆಗೆ ಕವಿದುದು ರಾಜಹಂಸ ಪ್ರಕರವೋಸರಿಸೆ ೪೮

ಕಳನ ಗೆಲಿದುದು ಬಂದು ಕೌರವ
ಬಲ ಯುಧಿಷ್ಠಿರರಾಯ ದಳ ಮುಂ
ಕೊಳಿಸಿ ಹೊಕ್ಕುದು ಜಯದ ಸುಮ್ಮಾನದ ಸಘಾಡದಲಿ
ಬಲಿದರೊಡ್ಡನು ಮಂಡಳಾಕೃತಿ
ಗೊಳಿಸಿ ಕೌರವರಿವರು ಥಟ್ಟನು
ನಿಲಿಸಿದರು ಚಂದ್ರಾರ್ಧಸದೃಶದಲಖಿಳ ಮೋಹರವ ೪೯

ಚಾರಿಗಳು ಬಲವೆರಡರೊಳಗೊ
ಯ್ಯಾರದಲಿ ತೂಗಿದವು ಚೂಣಿಯ
ವೀರರುರವಣಿ ಮಿಗಿಲು ಹೊಯ್ದರು ಹೊಕ್ಕು ಪರಬಲವ
ಮಾರಿ ಮೊಗವಡದೆರೆದವೊಲು ಜ
ಜ್ಝಾರ ಮಾಸಾಳುಗಳು ನಿಜ ದಾ
ತಾರನವಸರಕೊದಗಿ ಹಣವಿನ ಋಣನ ನೀಗಿದರು ೫೦

ಬಿಟ್ಟಸೂಠಿಯೊಳೇರಿ ಕುದುರೆಗ
ಳಟ್ಟಿದವು ಕಿವಿಗೌಂಕಿದುಂಗುಟ
ವಿಟ್ಟ ಸನ್ನೆಯೊಳೊಲೆದು ಕವಿದವು ಸೊಕ್ಕಿದಾನೆಗಳು
ನಿಟ್ಟುವರಿಯಲು ಕೂಡೆ ರಥ ಸಾ
ಲಿಟ್ಟು ಹರಿದವು ಬಿಡದೆ ಸುಭಟರು
ಮುಟ್ಟಿ ಮೂದಲಿಸುತ್ತ ಹೊಯ್ದರು ಹೊಕ್ಕು ಪರಬಲವ ೫೧

ಏರುವಡೆದರು ಹೊಕ್ಕವರು ಕೈ
ದೋರಿ ಕಳಕಳಕಾರರಸುಗಳ
ಕಾರಿದರು ಕೈ ಮಾಡಿ ಕೊಂಡರು ಸುರರ ಕೋಟೆಗಳ
ತಾರು ಥಟ್ಟಿನೊಳಟ್ಟಿ ಮೈಮಸೆ
ಸೂರೆಕಾರರ ಮಿದುಳ ಜೊಂಡಿನ
ಜೋರುಗಳ ಬೀರಿದವು ಬೇತಾಳರಿಗೆ ಭಟನಿಕರ ೫೨

ತೆಗೆಸು ದೊದ್ದೆಯನುರವಣಿಸದಿರಿ
ವಿಗಡ ಸುಭಟರು ಸಾಹಸದ ತನಿ
ಹೊಗರಿನಾತಗಳೆಲ್ಲಿ ಭೀಮಾರ್ಜುನರ ಬರಹೇಳು
ಹೊಗುವ ಬಿನುಗನು ಹೊಯ್ಯದಿರಿ ತೆಗೆ
ತೆಗೆಯೆನುತ ಸಾವಿರ ಮಹಾ ರಥ
ರಗಲದಲಿ ಬರಲುರುಬಿ ಹೊಕ್ಕನು ದ್ರೋಣ ಪರಬಲವ ೫೩

ಸಾರಿರೈ ಸಾಹಸಿಕರಿರ ಕೆಲ
ಸಾರಿರೈ ಪಾಂಚಾಲ ಮತ್ಸ್ಯರು
ವೀರರಹುದಲ್ಲೆಂಬೆವೇ ಶಿವ ಶಿವ ಮಹಾದೇವ
ಸಾರಿರೈ ನಮ್ಮೊಡನೆ ಕೈ ಮನ
ವಾರೆ ಕಾದುವ ಬಳಿಕ ಮೊದಲೊಳು
ದಾರ ಭೀಮಾರ್ಜುನರ ನೋಡುವೆನೆನುತ ಕೈಕೊಂಡ ೫೪

ಬಿನುಗು ಹಾರುವ ನಿನಗೆ ಭೀಮಾ
ರ್ಜುನರ ಪರಿಯಂತೇಕೆಯಂಬಿನ
ಮೊನೆಯಲುಣಲಿಕ್ಕುವೆನು ರಣಭೂತಕ್ಕೆ ನಿನ್ನೊಡಲ
ಎನುತ ಧೃಷ್ಟದ್ಯುಮ್ನ(ಪಾ: ಧೃಷ್ಟದ್ನುಮ್ನ)ನಿದಿರಾ
ದನು ಶರೌಘದ ಸೋನೆಯಲಿ ಮು
ಮ್ಮೊನೆಯ ರಥಿಕರ ಮುರಿದು ದ್ರೋಣನ ರಥಕೆ ಮಾರಾಂತ ೫೫

ಕಡಗಿದಡೆ ಕೋದಂಡ ರುದ್ರನ
ತೊಡಕಿ ಬದುಕುವರಾರು ಸಾರೆಂ
ದೊಡನೊಡನೆ ನಾರಾಚ ಜಾಲದಲರಿಭಟನ ಬಿಗಿದು
ಕಡಿದು ಬಿಸುಟನು ದ್ರುಪದತನಯನು
ಹಿಡಿದ ಬಿಲ್ಲನು ಸಾರಥಿಯನಡೆ
ಗೆಡಹಿದನು ಚಂದ್ರಾರ್ಧಶರದಲಿ ನೊಸಲನೊಡೆಯೆಚ್ಚ ೫೬

ಎಸಲು ಧೃಷ್ಟದ್ಯುಮ್ನ ದ್ರೋಣನ
ವಿಶಿಖಹತಿಯಲಿ ನೊಂದು ರಥದಲಿ
ಬಸವಳಿಯೆ ಬಳಿ ಸಲಿಸಿದನು ಪಾಂಚಾಲ ನಾಯಕರು
ಮುಸುಡ ಬಿಗುವಿನ ಸೆಳೆದಡಾಯುಧ
ಹೊಸ ಪರಿಯ ಬಿರುದುಗಳ ಗಜರಥ
ವಿಸರ ಮಧ್ಯದಲೆಂಟು ಸಾವಿರ ರಥಿಕರೌಂಕಿದರು ೫೭

ರಾಯರೊಳು ಪಾಂಚಾಲರುಬ್ಬಟೆ
ಕಾಯಗಟ್ಟಿತು ಪೂತು ಮಝ ಕುರು
ರಾಯನಾಡಿತು ದಿಟವೆನುತ ಹೊಗರಂಬ ಹೊದೆಗೆದರಿ
ನೋಯಿಸಿದನುರವಣಿಸಿ ಹರಿತಹ
ನಾಯಕರನುಬ್ಬೆದ್ದ ಬಿರುದರ
ಬೀಯ ಮಾಡಿದನಹಿತ ರಥಿಕರನೆಂಟು ಸಾವಿರವ ೫೮

ಆಳುತನವುಳ್ಳವರ ಕರೆ ಪಾಂ
ಚಾಲರೊಳ್ಳೆಗರವದಿರಂಬಿನ
ಕೋಲ ಕಾಣದ ಮುನ್ನ ಹಮ್ಮೈಸುವರು ಹುರಿಯೊಡೆದು
ಖೂಳರಿವರಂತಿರಲಿ ದೊರೆ ಕ
ಟ್ಟಾಳಹನು ಕರೆ ಧರ್ಮಪುತ್ರನ
ತೋಳ ಬಲುಹನು ನೋಡಬೇಕೆಂದುರುಬಿದನು ದ್ರೋಣ ೫೯

ಸವರಿ ಹೊಕ್ಕನು ಕೆಲಬಲದ ಪಾಂ
ಡವ ಮಹಾರಥರನು ವಿಭಾಡಿಸಿ
ಪವನಜನ ಮುರಿಯೆಚ್ಚು ನಕುಲನ ರಥವ ಹುಡಿಮಾಡಿ
ಕವಲುಗೋಲಲಿ ದ್ರುಪದ ಮತ್ಸ್ಯರ
ನವಗಡಿಸಿ ಹೈಡಿಂಬನಭಿಮ
ನ್ಯುವನು ಮಸೆಗಾಣಿಸಿ ಮಹೀಶನ ರಥಕೆ ಮಾರಾಂತ ೬೦

ಅರಸ ಫಡ ಹೋಗದಿರು ಸಾಮದ
ಸರಸ ಕೊಳ್ಳದು ಬಿಲ್ಲ ಹಿಡಿ ಹಿಡಿ
ಹರನ ಮರುವೊಗು ನಿನ್ನ ಹಿಡಿವೆನು ಹೋಗು ಹೋಗೆನುತ
ಸರಳ ಮುಷ್ಟಿಯ ಕೆನ್ನೆಯೋರೆಯ
ಗುರು ಛಡಾಳಿಸಿ ಧನುವನೊದರಿಸಿ
ಧರಣಿಪತಿ ಹಳಚಿದನು ಹೂಳಿದನಂಬಿನಲಿ ರಥವ ೬೧

ಶಿವಶಿವಾ ಬೆಳುದಿಂಗಳಲಿ ಮೈ
ಬೆವರುವುದೆ ಕಲಿ ಧರ್ಮಪುತ್ರನ
ಬವರದಲಿ ಬೆಂಡಹರೆ ವೀರರು ಕಂಡೆವದುಭುತವ
ನಿಮಗಿದೆತ್ತಣ ಕೈಮೆ ಕೋಲ್ಗಳ
ಕವಿಸುವಂದವಿದೊಳ್ಳಿತಿದಲೇ
ನಮಗಭೀಷ್ಟವೆನುತ್ತ ಕಟ್ಟಳವಿಯಲಿ ಕೈಕೊಂಡ ೬೨

ಎಲೆಲೆ ದೊರೆ ಸಿಕ್ಕಿದನು ಕರೆ ಪಡಿ
ತಳಿಸ ಹೇಳೋ ಸ್ವಾಮಿದ್ರೋಹರು
ದಳದಲಿದ್ದವರೆತ್ತ ಹೋದರು ನಾಯಕಿತ್ತಿಯರು
ಕಳವಳಿಸಿ ಸಾತ್ಯಕಿ ಘಟೋತ್ಕಚ
ರುಲಿದು ಅರಿತರೆ ಕೇಳಿದಾ ಕ್ಷಣ
ದಲಿ ಮುರಾಂತಕ ಸಹಿತ ವಹಿಲದಿ ಬಂದನಾ ಪಾರ್ಥ ೬೩

ಕಾಳಕೂಟದ ಬಹಳ ದಾಳಿಗೆ
ಶೂಲಿಯೊಡ್ಡೈಸುವವೊಲವನೀ
ಪಾಲಕನ ಹಿಂದಿಕ್ಕಿ ತಡೆದನು ಕಳಶಜನ ರಥವ
ಆಲಿಯಳುಕಿತು ತಿರುಹಿದಂಬಿನ
ಕೋಲ ಝಳಪಿಸಿ ಪೂತು ಮಝ ಮೇ
ಲಾಳು ಬಂದುದೆ ಅಕಟೆನುತ ಹಲುಮೊರೆದನಾ ದ್ರೋಣ ೬೪

ಮಂದಭಾಗ್ಯನು ಕೌರವನು ನಾ
ವೆಂದು ಮಾಡುವುದೇನು ನಿಮಿಷವು
ನಿಂದನಾದರೆ ಹಿಡಿವೆನಾಗಳೆ ಧರ್ಮನಂದನನ
ಬಂದು ಪಲುಗುಣನಡ್ಡವಿಸಲಿ
ನ್ನಿಂದುಧರ ಮುಳಿದೇನ ಮಾಡುವ
ನೆಂದು ಖಾತಿಯ ಹಿಡಿದು ರಥವನು ತಿರುಹಿದನು ದ್ರೋಣ ೬೫

ಎರಡು ಬಲದಲಿ ವೀರ ನೀ ಮಡ
ಮುರಿಯಲಿವನೇಸರವನಂಧಾ
ಸುರನೊ ತಾರಕನೋ ಹಿರಣ್ಯಾಸುರನೊ ಕೈಟಭನೋ
ಗುರುಗಳಿದಿರಲಿ ವೀರವೇ ಸಾ
ಕಿರಲಿ ಮೂದಲೆಯೆನುತಲಾ ಬಿಲು
ದಿರುವ ಮಿಡಿದೈದಿದರು ನಾಸಾವಿರ ಮಹಾರಥರು ೬೬

ಫಡ ಫಡವೆಲವೋ ಪಾರ್ಥ ಭೀಷ್ಮನ
ಕೆಡಹಿದುಬ್ಬಟೆ ನಮ್ಮ ಕೂಡಳ
ವಡದು ತೆಗೆ ತೆಗೆಯೆನುತ ತುಳುಕಿದನಂಬಿನಂಬುಧಿಯ
ಗಡಣವೊಳ್ಳಿತು ಗಾಢ ಮಿಗೆ ಬಿಲು
ವಿಡಿಯ ಬಲ್ಲಿರಿ ಸಮರ ಜಯವಳ
ವಡುವುದಳವಡದಿಹುದು ತಪ್ಪೇನೆನುತ ನರನೆಚ್ಚ ೬೭

ಜೋಡು ಜರಿಯದೆ ಹುರುಳುಗೆಡದೆ
ಚ್ಚಾಡಿದರು ಫಲುಗುಣನ ರಥದಲಿ
ಹೂಡಿದರು ಹೊಗರಂಬುಗಳನುಬ್ಬೆದ್ದು ತಮತಮಗೆ
ನೋಡಿದನು ಸಾಕಿವದಿರನು ಕೊಂ
ಡಾಡಲೇಕೆನುತನಿಬರಸುಗಳ
ತೋಡಿದನು ಕೂರಂಬಿನಲಿ ಸಾವಿರ ಮಹಾರಥರ ೬೮

ಮಡಿದು ಕೆಲಬರು ಕೊರಳಲಸುಗಳ
ಹಿಡಿದು ಕೆಲಬರು ಘಾಯವಡೆದೆಲು
ವೊಡೆದು ಕೆಲಬರು ಕೈದು ರಥವನು ಬಿಸುಟು ಕೆಲಕೆಲರು
ಹೊಡೆವ ಬಿರುಗಾಳಿಯಲಿ ಮುಗಿಲೊ
ಡ್ಡೊಡೆದವೊಲು ಮೈಮಾರಿಗಳು ಹಿಂ
ಡೊಡೆದುದೈ ಹೇರಾಳದಲಿ ಹೊಕ್ಕೆಚ್ಚನಾ ಪಾರ್ಥ ೬೯

ನಿಮಗೆ ಸದರವೆ ಪಾರ್ಥನಲೆ ವಿ
ಕ್ರಮದರಿದ್ರರಿರಾ ವೃಥಾ ಸಂ
ಭ್ರಮಿತರಿರ ಭಂಡಾಟವೇತಕೆ ರಣಕೆ ಹೆರತೆಗೆಯಿ
ಸಮರವಿಜಯತ್ಯಾಗಿಯೇ ತಾ
ನಮರಪತಿ ನಂದನನು ಸಾಕೀ
ಕುಮತಿಗಳ ತಡೆಯದಿರಿ ಹೋಗಲಿ ಎಂದನಾ ದ್ರೋಣ ೭೦

ಸೋಲದಲಿ ಕೌರವನ ಸೇನಾ
ಜಾಲ ಚೆಲ್ಲಿತು ವೀರ ಪಾರ್ಥನ
ಕೋಲು ಕಾಲನ ದಣಿಸಿದವು ಚತುರಂಗ ಸೇನೆಯಲಿ
ಕೋಲು ಧರಿಸಿದವೆರಕೆಗಳನೆನೆ
ಚಾಳಿಸಿತು ಪಡೆ ರವಿಯ ರಶ್ಮಿಯ
ಗೂಳೆಯವು ತೆಗೆಯಿತ್ತು ಪಡುವಣ ಕಡಲೊಳಿನನಿಳಿದ ೭೧

(ಸಂಗ್ರಹ : ಸತ್ಯನಾರಾಯಣ)

Sunday, February 7, 2010

ಅರಣ್ಯಪರ್ವ: ೦೨. ಎರಡನೆಯ ಸಂಧಿ

ಸೂ: ಸಕಲ ಯದುಬಲ ಸಹಿತ ಭಕ್ತ -
ಪ್ರಕರ ಪಾಲಕನೊಲವಿನಲಿ ಕಾ
ಮ್ಯಕ ಮಹಾಕಾನನಕೆ ಬಿಜಯಂಗೈದನುಸುರಾರಿ

ಅರಸ ಕೇಳೈ ದ್ವಾರಕಾಪುರ
ವರಕೆ ಬಂದುದು ವಾರ್ತೆ ಪೀತಾಂ
ಬರನ ಬಹಳಾಸ್ಥಾನದಲಿ ವರ್ತಿಸಿದುದಡಿಗಡಿಗೆ
ಧರೆಸಹಿತ ನಿಜವಸ್ತು ವಾಹನ
ಪರಮವಿಭವವ ಬಿಸುಟು ಭಾರಿಯ
ಪರಿಭವದಿ ನಟ್ಟಡವಿಯೊಕ್ಕರು ಪಾಂಡುಸುತರೆಂದು ೧

ಕೇಳಿ ತಲೆದೂಗಿದನು ಮೂಗಿನ
ಮೇಲುವೆರಳಿನ ಹೊತ್ತ ದುಗುಡದ
ತೂಳಿದಬ್ಬೆಯ ನಟ್ಟನೋಟದ ನೆಗ್ಗಿದುತ್ಸವದ
ಹೂಳಿದೂಹೆಯ ಹಿಳಿದ ನೆಗಹಿನ
ಹೇಳಲರಿದೆನೆ ಹುದಿದ ಭಾವದ
ಲಾಲಿಸಿದನುಸುರಾರಿ ದೂತವ್ರಜದ ಬಿನ್ನಪವ ೨

ಅಕಟ ಕಪಟ ದ್ಯೂತದಲಿ ನೃಪ
ಮುಕುರನುನ್ನತಿ ಮುರಿದುದೇ ಕೌ
ಳಿಕದಲೀ ಕೌರವರು ಕೊಂಡರೆ ಧರ್ಮಜನ ನೆಲನ
ಅಕುಟಿಲರಿಗೇಕಿದು ನಿರಾಬಾ
ಧಕರಿಗೇಕಿದು ಸಕಲ ಸುಜನ
ಪ್ರಕರ ವಂದ್ಯರಿಗೇಕೆನುತ್ತಸುರಾರಿ ಚಿಂತಿಸಿದ ೩

ಹಿರಿದು ಹರಿ ಚಿಂತಿಸಿದನೀ ವ್ಯತಿ
ಕರವನರಿಯದ ಮುಗುದರಿದನಾ
ರರಿವರೈ ವಿಶ್ವಂಭರಾ ಭಾರಾಪನೋದನಕೆ
ಧರಣಿಯಲಿ ಮೈಗೊಂಡು ದೈತ್ಯರ
ನೊರಸಿದನು ಬಳಿಕುಳಿದ ಪಾಂಡವ
ಕುರುನೃಪರ ಕದಡಿಸಿದನೆಲೆ ಭೂಪಾಲ ಕೇಳೆಂದ ೪

ಏನನೆಂಬೆನು ಜೀಯ ಕಡು ದು
ಮ್ಮಾನದಲಿ ಹೊರವಂಟು ಬಂದನು
ದಾನವಾಂತಕನೈದಿದವು ದಂಡಿಗೆಗಳರಸಿಯರ
ಆ ನಿಖಿಳ ನೃಪವರ್ಗ ಯಾದವ
ಸೇನೆ ಕವಿದುದು ಪಾಂಡುಪುತ್ರರ
ಕಾನನವ ಕರುಣಾಳು ಹೊಕ್ಕನು ಹಲವು ಪಯಣದಲಿ ೫

ಕೇಳಿದಾಗಳೆ ಬಂದರಾ ಪಾಂ
ಚಾಲ ಕೇಕಯ ಧೃಷ್ಟಕೇತು ನೃ
ಪಾಲ ಕುಂತೀಭೋಜ ಸೃಂಜಯ ಸೋಮಕಾದಿಗಳು
ಮೇಲೆ ಮೇಲೀ ನಾಲ್ಕು ದಿನದಲಿ
ಮೂಲೆಯರಸುಗಳಿವರ ಕಂಡುಪ
ಲಾಲಿಸಲು ಬರುತಿರ್ದರಾ ಕಾಮ್ಯಕ ವನಾಂತರಕೆ ೬

ಇವರು ಬಂದರು ನಿಖಿಳ ಭೂಸುರ
ನಿವಹ ಸಹಿತಿದಿರಾಗಿ ವರ ಬಾಂ
ಧವರೊಳಭಿವಂದ್ಯರಿಗೆ ತತ್ಸಮರಿಗೆ ಕನಿಷ್ಠರಿಗೆ
ಅವರಿಗವರವರುಚಿತ ಸತ್ಕಾ
ರವನು ಮಾಡಿ ಮುರಾರಿಯಂಘ್ರಿಯ
ನವಿರಳಾಶ್ರುಗಳಿಂದ ನಾದಿದರರಸ ಕೇಳೆಂದ ೭

ಬೇರೆ ಬೇರೈವರನು ತೆಗೆದು ಮು
ರಾರಿಯಪ್ಪಿದನಡಿಗಡಿಗೆ ದೃಗು
ವಾರಿಗಳನೊರಸಿದನು ಪೀತಾಂಬರದ ಸೆರಗಿನಲಿ
ಸಾರು ಸಾರೆನಲುಗ್ಗಡಣೆಯ ವಿ
ಕಾರವಿನ್ನೇಕೆನುತ ರಾಯನ
ನಾರಿ ಬಂದಳು ಕವಿದು ಬಿದ್ದಳು ಹರಿಯ ಚರಣದಲಿ ೮

ಒರಲಿದಳು ದೆಸೆಯೊಡನೊರಲೆ ಮಿಗೆ
ಹೊರಳಿದಳು ಹರಿ ಪಾದದಲಿ ಮೈ
ಮರೆದಳಂಗನೆ ತನುವ ಮುಸುಕಿದ ಕೇಶಪಾಶದಲಿ
ಕರಗಿದಳು ಕಂದಿದಳು ಮಮ್ಮಲ
ಮರುಗಿ ಕರುಗಂದಿದಳು ದೃಗು ಜಲ
ದೊರತೆಯುಕ್ಕಿತು ಮೇಲೆ ಮೇಲೆ ಮಹೀಶನಂಗನೆಗೆ ೯

ಹಿಂದೆ ಸೆಳೆಸೀರೆಯಲಕಟ ಗೋ
ವಿಂದ ರಕ್ಷಿಸನಾಥನಾಥ ಮು
ಕುಂದ ಕಾಯೈ ಕೃಷ್ಣ ರಕ್ಷಿಸು ಕರುಣಿಸಸುರಾರಿ
ಇಂದಿರಾಪತಿಯೇ ಯಶೋದಾ
ನಂದನನೆ ಕಾರುಣ್ಯನಿಧಿ ಸಲ
ಹೆಂದರುಳುಹಿದ ದೈವ ನೀ ಮೈದೋರಿದೈ ತನಗೆ ೧೦

ಶ್ರುತಿಗಳಿಗೆ ಮೈದೋರೆ ಸುಪತಿ
ವ್ರತೆಯರಿಗೆ ಗೋಚರಿಸೆ ಯತಿ ಸಂ
ತತಿಯ ನಿರ್ಮಳ ಸಾರ ಸಮ್ಯಜ್ಞಾನ ದೀಧಿತಿಗೆ
ಮತಿಗೊಡದ ಮಹಿಮಾಂಬುನಿಧಿಯೆನ
ಗತಿಶಯವನೇ ಮಾಡಿ ಲಜ್ಜಾ
ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ ೧೧

ಪೆಸರುಗೊಂಡರೆ ಹಿಂದೆ ಬಂದು
ಬ್ಬಸದ ಭಾರ ವ್ಯಸನವನು ಹಿಂ
ಗಿಸಿದೆ ಸಾಕ್ಷಾದ್ದೃಷ್ಟ ದರುಶನವೇನನಿತ್ತಪುದೊ
ಹೆಸರುಗೊಳಲರಿಯದೆ ಮನೋವಾ
ಗ್ವಿಸರ ಮರಳಿದ ತರ್ಕ ನಿಗಮ
ಪ್ರಸರಣದ ಪರದೈವ ನೀ ಮೈದೋರಿದೈ ತನಗೆ ೧೨

ಪತಿಗಳಿವರಂಜಿದರು ಧರ್ಮ
ಸ್ಥಿತಿಯನರಿದವರಳುಕಿದರು ತ
ತ್ಪಿತೃ ಪಿತಾಮಹ ಗುರುಗಳಡಗಿದರವನಿಯಲಿ ಬಗಿದು
ಗತಿವಿಹೀನೆಗೆ ಕೃಷ್ಣ ನೀನೇ
ಗತಿಯೆನುತ ಬಾಯ್ಬಿಡಲು ಲಜ್ಜಾ
ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ ೧೩

ದಾನ ಯಜ್ಞ ತಪೋವ್ರತಾನು
ಷ್ಠಾನ ನಿಷ್ಠರು ಕಾಣರಷ್ಟ ವಿ
ಧಾನ ಯೋಗದ ಸಿದ್ಧರರಿಯರು ನಿನ್ನ ಸುಳಿವುಗಳ
ಜ್ಞಾನಮಧ್ಯ ತ್ರಿಪುಟಿಯನು ಸಂ
ಧಾನ ರಹಿತ ಜ್ಞಪ್ತಿರೂಪನು
ತಾನೆನಿಪ ಪರಬೊಮ್ಮ ನೀ ಮೈದೋರಿದೈ ತನಗೆ ೧೪

ಕಾಯಿದೈ ಪ್ರಹ್ಲಾದ ಮಾರ್ಕಂ
ಡೇಯ ವನಗಜವಂಬರೀಷನ
ಕಾಯಿದೈ ಕಾರುಣ್ಯದಲಿ ಪಾತಕಿಯಜಾಮಿಳನ
ಕಾಯಿದೈ ಗೋವಿಂದಯೆನೆ ತ
ನ್ನಾಯತಿಕೆಯಭಿಮಾನವನು ನೀ
ಕಾಯಿದೈ ಹರಿಯೆನುತ ಪದದಲಿ ಹೊರಳಿದಳು ತರಳೆ ೧೫

ಏಳು ತಾಯೆ ಸರೋಜಮುಖಿ ಪಾಂ
ಚಾಲೆ ನೊಂದೌ ತಂಗಿಯೆನುತ ಕೃ
ಪಾಳು ಕಂಬನಿದೊಡೆದು ಕೊಡಹಿದನವಯವದ ರಜವ
ಮೇಲು ಮುಚ್ಚಳ ತೆರೆದ ತನುವಿನ
ಹೇಳಿಗೆಯ ಶೋಕಾಹಿಯಂತಿರೆ
ಲೋಲಲೋಚನೆಯಳಲು ಮಿಗೆ ಹೆಕ್ಕಳಿಸಿತಡಿಗಡಿಗೆ ೧೬

ಆ ಸಕಲ ಪರಿವಾರವಾ ಧರ
ಣೀಶರಾ ಮುನಿ ನಿಕರವಾ ಜನ
ವಾ ಸತೀ ನಿಕುರುಂಬವಾ ಗಜ ಘೋಟಕ ವ್ರಾತ
ಆ ಸರೋಜಾನನೆಯ ಬಹಳ
ಕ್ಲೇಶಗಳ ಕಂಡಕ್ಷಿಜಲ ವಾ
ರಾಸಿಯಲಿ ತೇಕಾಡುತಿರ್ದುದು ರಾಯ ಕೇಳೆಂದ ೧೭

ಮುಡಿಯ ಸಂವರಿಸಬಲೆ ಸೀರೆಯ
ನುಡು ನವಾಂಬರವಿದೆ ವಿರೋಧವ
ಬಿಡು ಸುಯೋಧನ ರಾಜಸಂತತಿಯುರಿದುದಿನ್ನೇನು
ಕೆಡಿಸಿಕೊಂಡರು ನಾಯ್ಗಳಿನ್ನದ
ನುಡಿದು ಫಲವೇನಕಟ ಕೈಕೊಂ
ಡಡವಿಯನುಭವ ಸವೆಯೆ ಸೈರಿಪುದೆಂದನಸುರಾರಿ ೧೮

ತುರುಬು ಕಟ್ಟುವ ಹದನ ನಿಮ್ಮಡಿ
ಯರಿಯದೆಂಬೆನೆ ಸಕಲ ಸಚರಾ
ಚರದ ಚೇತನರೂಪ ದೇಹಿ ನಿಕಾಯ ಕೃತಸಾಕ್ಷಿ
ತೈದು ದುಶ್ಯಾಸನನ ವಕ್ಷದೊ
ಳೊರೆವ ರಕುತದೊಳದ್ದಿ ಕಟ್ಟುವ
ದುರುಬನರಿಯಾ ಕೃಷ್ಣಯೆಂದಳು ಕಮಲಮುಖಿ ನಗುತ ೧೯

ಐಸಲೇ ದುರ್ಯೋಧನಾದಿಗ
ಳೇಸರವದಿರು ಭೀಮ ಪಾರ್ಥರ
ಬೀಸರಕೆ ಬಲುಗೈಯೆ ಬರ್ಹಿರ್ಮುಖರ ಭಾರವಣೆ
ದೂಸಕನ ರಕ್ತದಲಿ ನಿನ್ನಯ
ಕೇಶವನು ಕಟ್ಟಿಸುವೆ ನಿನ್ನಯ
ಭಾಷೆ ತನ್ನದು ತಾಯೆ ತವಕಿಸಬೇಡ ನೀನೆಂದ ೨೦

ವರ ತಪಸ್ವಿನಿ ನೀನು ನಿನ್ನನು
ಕೆರಳಿಚಿದರೇ ಕುನ್ನಿಗಳು ಮಿಗೆ
ಭರತಸಂತತಿ ಫಲಿತ ಕದಳಿಯ ತೆರದೊಳಾಯಿತಲ
ಕುರುಡನರಿಯದೆ ಹೋದರೆಯು ಕಂ
ಗುರುಡಾದರೆ ಭೀಷ್ಮ ವಿದುರಾ
ದ್ಯರು ಮಹಾದೇವೆನುತ ಮುರರಿಪು ತೂಗಿದನು ಶಿರವ ೨೧

ಶಕುನಿ ಕಲಿಸಿದ ಕಪಟವೇ ಕೌ
ಳಿಕದ ಜೂಜಿದು ನಿಮ್ಮನೀ ಕಾ
ಮ್ಯಕಕೆ ತಂದುದು ಜೂಜಿನಲಿ ತಾನಿಲ್ಲಲೇಯೆನಲು
ಸಕಲ ಜೀವರ ಕರ್ಣಸಾಕ್ಷಿ
ಪ್ರಕರ ಚೈತನ್ಯ ಸ್ವರೂಪಾ
ತ್ಮಕನು ನೀನಲ್ಲಿಲ್ಲ ಹುಸಿಯಲ್ಲೆಂದಳಿಂದುಮುಖಿ ೨೨

ದೇವಿ ತಾನಿದನರಿದೊಡಾ ವಸು
ದೇವನಾಣೆ ಮಹಾದ್ಭುತವನದ
ನೇವೊಗಳ್ವೆನು ಯದುನೃಪಾಲ ವಿಪತ್ಪರಂಪರೆಯ
ನೀವು ಮಾಡಿದ ಯಜ್ಞ ಮುಖದ ವ
ಳಾವಳಿಯೊಳಾವಿರಲು ಮುತ್ತಿತು
ದೇವರಿಪುಬಲ ನಿಕರವಸ್ಮದ್ದ್ವಾರಕಾಪುರಿಯ ೨೩

ಲಗ್ಗೆಗಳುಕುವುದಲ್ಲಲೇ ಬಲು
ದುರ್ಗಮದು ದುರ್ಭೇದವವರೊಳ
ಗಗ್ಗಳೆಯರಿದ್ದುದು ಹಲಾಯುಧ ಮನ್ಮಥಾದಿಗಳು
ಬಗ್ಗಿ ಕವಿವ ಕಠೋರ ದೈತ್ಯರ
ನುಗ್ಗುನುರಿ ಮಾಡಿದರು ಹರಣದ
ಸುಗ್ಗಿ ಮೆರೆದುದು ಮಾರ್ಬಲದೊಳಬುಜಾಕ್ಷಿ ಕೇಳೆಂದ ೨೪

ಅಳುಕಿ ಮುತ್ತಿಗೆದೆಗೆದು ಸಾಲ್ವನ
ದಳ ಮುರಿದು ನಿಜಪುರಕೆ ಹಾಯ್ವುದು
ಗೆಲವು ಸಾತ್ಯಕಿ ರಾಮಕಾಮಾದಿಗಳ ವಶವಾಯ್ತು
ಬಳಿಕ ನಿಮ್ಮಯ ರಾಜಸೂಯಕೆ
ಕಳಶವಿಟ್ಟು ಮದೀಯ ನಗರಿಯ
ಕಳವಳವ ಸಂತೈಸಿ ನಡೆದೆವು ಸಾಲ್ವ ಪಟ್ಟಣಕೆ ೨೫

ಏನನೆಂಬೆನು ಸಾಲ್ವಪುರದ ನ
ವೀನ ಮಾಯಾರಚನೆಯನು ನಮ
ಗಾನಲಸದಳವುಳಿದ ಗೀರ್ವಾಣರಿಗೆ ಗೋಚರವೆ
ದಾನವನ ಮಾಯಾಪುರದ ಸಂ
ಸ್ಥಾನ ವರ್ಮವನರಿದು ಶರ ಸಂ
ಧಾನದಲಿ ಸಂಹರಿಸಿದೆವು ಸಾಲ್ವಾದಿ ರಿಪುಭಟರ ೨೬

ಅತ್ತಲಾ ಕೋಳಾಹಳದಲಿರ
ಲಿತ್ತಲಾದುದು ಜೂಜು ನಿಮ್ಮ ವಿ
ಪತ್ತು ಕಂಡುದು ತೆರಹ ತಪ್ಪಿಸಿ ನಮ್ಮ ಸುಳಿವುಗಳ
ಇತ್ತಲಾವಿರೆ ಮೇಣು ದೋರಕಿ
ಯತ್ತಲಿರೆ ನೀವಡವಿವೊಕ್ಕರೆ
ಹೆತ್ತಳೋ ದೇವಕಿ ಮಗನನೆಂದನು ಮುರಧ್ವಂಸಿ ೨೭

ಮಗನ ಕರೆದರೆ ಯಮನ ದೂತರ
ತಗುಳುವಂದು ಸಮೀಪವರ್ತಿಯೆ
ನಗಧರ ಶ್ರೀಕಾಂತ ಸಲಹೆನೆ ಮುನಿ ಕುಮಾರಕನ
ಉಗುಳಿಚಿದೆಲಾ ಮೃತ್ಯುವಿನ ತಾ
ಳಿಗೆಯೊಳಂದು ಸಮೀಪವರ್ತಿಯೆ
ಜಗದುದರ ನೀ ಜಾಣನಹೆಯೆಂದಳು ಸರೋಜಮುಖಿ ೨೯

ಆಯಿತೇಳೌ ತಂಗಿ ನೀ ಪಿರಿ
ದಾಯಸವನನುಭವಿಸಲುದಿಸಿದೆ
ರಾಯನಾಡಿದ ಭಾಷೆ ಸಲಲಿ ವನಪ್ರವಾಸದಲಿ
ವಾಯುತನುಜನ ಕೈಯಲೇ ನಿ (ಪಾ: ನೀ)
ನ್ನಾಯತಿಕೆಯಹುದಾ ಪ್ರತಿಜ್ಞೆಗೆ
ತಾಯೆ ತಾ ಹೊಣೆಯೆಂದು ಕೊಟ್ಟನು ಸತಿಗೆ ನಂಬುಗೆಯ ೩೦

ಸಂತವಿಟ್ಟನು ಬೇರೆ ಬೇರೆ ಕೃ
ತಾಂತಸುತ ಭೀಮಾದಿಗಳ ಮುನಿ
ಸಂತತಿಯ ಮನ್ನಿಸಿದನವರವರುಚಿತ ವೃತ್ತಿಯಲಿ
ಎಂತು ಹದಿಮೂರಬುದವೀ ನೃಪ
ಸಂತತಿಗೆ ಸೌಹಾರ್ದವಕಟ ವ
ನಾಂತರದೊಳೆಂದಸುರರಿಪು ನುಡಿದನು ಯುಧಿಷ್ಠಿರಗೆ ೩೧

ಕಳುಹುವುದು ಸೌಭದ್ರೆಯನು ನಿಜ
ಲಲನೆಯರನವರವರ ತಾಯ್ವನೆ
ಗಳಿಗೆ ಬೀಳ್ಕೊಡು ನಿಮ್ಮ ಪಂಚದ್ರೌಪದೀಸುತರ
ಹಳುವ ದಾಟಲಿ ದ್ರುಪದ ನಂದನೆ
ಯಳಲ ಶಿಖಿಗಿಂಧನವಲೇ ಕುರು
ಕುಲದ ಕರಡದ ಬಣಬೆ ಕಾದುರುಹುವುದು ಕೇಳೆಂದ ೩೨

ಎಂದು ಕಳುಹಿ ಸುಭದ್ರೆಯನು ನರ
ನಂದನನ ಬೀಳ್ಕೊಡಿಸಿದನು ನೃಪ
ನಂದನರ ಕಳುಹಿಸಿದನಾ (ಪಾ: ಕಳುಹಿದನಾ) ಪಾಂಚಾಲ ನೃಪನೊಡನೆ
ಇಂದುವದನೆಯ ಸಂತವಿಟ್ಟು ಮು
ಕುಂದ ರಥವೇರಿದನು ಕುಂತೀ
ನಂದನರು ಕಳುಹುತ್ತ ಬಂದರು ಕಮಲಲೋಚನನ ೩೩

ಬೀಳುಗೊಂಡರು ಕೃಷ್ಣನನು ಪಾಂ
ಚಾಲಪತಿಯನು ಪಂಚ ಕೇಕಯ
ಚೋಳ ಕೇರಳ ಪಾಂಡ್ಯ ಕುಂತೀಭೋಜ ನಂದನರ
ಬೀಳುಕೊಟ್ಟರು ಧೃಷ್ಟಕೇತು ನೃ
ಪಾಲ ಮೊದಲಾದಖಿಳ ಧರಣೀ
ಪಾಲಕರು ದುಗುಡದಲಿ ಹೊಕ್ಕರು ತಮ್ಮ ನಗರಿಗಳ ೩೪

ಸಂತವಿಸಿ ಪಾಂಡುವರನಾ ಮುನಿ
ಸಂತತಿಯ ಮನ್ನಿಸಿ ಮಹೀಭಾ
ರಾಂತರವ ನಿಶ್ಚಯಿಸಿ ಭಾರತ ಪಾರಿಶೇಷಕವ
ಅಂತಕಾಂತಕ ನಲವು ಮಿಗೆ ಜಗ
ದಂತರಂಗಸ್ಥಾಯಿ ಲಕ್ಷ್ಮೀ
ಕಾಂತ ಬಿಜಯಂಗೈದು ಹೊಕ್ಕನು ದೋರಕಾಪುರಿಯ ೩೫

(ಸಂಗ್ರಹ: ಹೊಳೆನರಸಿಪುರ ಮಂಜುನಾಥ)

ಅರಣ್ಯ ಪರ್ವ: ೦೧. ಮೊದಲನೆಯ ಸಂಧಿ

ಕೇಳು ಜನಮೇಜಯ ಧರಿತ್ರೀ
ಪಾಲ ಗಂಗಾತೀರದಲಿ ಭೂ
ಪಾಲಕರು ಗುರು ಭೀಷ್ಮ ವಿದುರಾದ್ಯಖಿಳ ಬಾಂಧವರ
ಬೀಳುಗೊಟ್ಟರು ಗಜಪುರದ ಜನ
ಜಾಲವನು ಕಳುಹಿದರು ಗಂಗಾ
ಕೂಲದುತ್ತರ ಭಾಗದಲಿ ಮಾಡಿದರು ವಿಕ್ರಮವ ೧

ನಿಲಿಸೆ ನಿಲ್ಲದೆ ಬಂದರರಸನ
ಬಳಿಯಲಗ್ಗದ ಮಂಡಲೇಶ್ವರ
ರೊಲಿದು ಸಾಕಿದ ರಾಜಪುತ್ರರು ಹಲವು ಮನ್ನಣೆಯ
ಬಲುಭಟರು ಬಾಹತ್ತರದ ನಿ
ಶ್ಚಲ ನಿಯೋಗಿಗಳಾಶ್ರಮಿಗಳ
ಗ್ಗಳೆಯ ವಿಪ್ರಸ್ತೋಮ ಬಂದುದು ಕೋಟಿ ಸಂಖ್ಯೆಯಲಿ ೨

ತಿರುಗಿ ಕಂಡನು ಭೂಮಿ ಭಾರದ
ನೆರವಿಯನು ಗಲ್ಲದಲಿ ಕರವಿ
ಟ್ಟರಸ ತಲೆದೂಗಿದನು ಸುಯ್ದನು ಬೈದು ದುಷ್ಕೃತವ
ಧರಣಿ ಸೇರಿದುದಹಿತರಿಗೆ ಕರಿ
ತುರಗ ರಥವೆಮಗಿಲ್ಲ ವಿಪಿನದ
ಪರಿಭವಣೆಗಿವರೇಕೆ ಬೆಸಗೊಳು ಭೀಮ ನೀನೆಂದ ೩

ನಿಲ್ಲಿರೈ ದ್ವಿಜನಿಕರ ಕಳುಹಿಸಿ
ಕೊಳ್ಳಿರೈ ಪುರವರ್ಗ ನೇಮವ
ಕೊಳ್ಳಿರೈ ಪರಿವಾರ ಮಕ್ಕಳತಂದೆ ಮೊದಲಾಗಿ
ಎಲ್ಲಿ ಮೆಳೆ ಮರಗಾಡು ಪಲ್ಲವ
ಫುಲ್ಲಫಲ ಪಾನೀಯಪೂರಿತ
ವಲ್ಲಿ ರಾಯನ ಸೆಜ್ಜೆಯರಮನೆಯೆಂದನಾ ಭೀಮ ೪

ಆವನಿಪತಿ ಚಿತ್ತವಿಸು ಬಹಳಾ
ರ್ಣವವ ಹೊಗು ಹಿಮಗಿರಿಯಲಿರು ಭೂ
ವಿವರ ಗತಿಯಲಿ ಗಮಿಸು ಗಾಹಿಸು ಗಹನ ಗಹ್ವರವ
ಎವಗೆ ನೀನೇ ಜೀವ ನೀನೇ
ವಿವಿಧ ಧನ ಗತಿ ನೀನೆ ಮತಿ ನೀ
ನವಗಡಿಸಬೇಡಕಟ ಕೃಪೆ ಮಾಡೆಂದುದಖಿಳಜನ ೫

ತುಂಬಿದನು ಕಂಬನಿಯನಕಟ ವಿ
ಡಂಬಿಸಿತೆ ವಿಧಿಯೆನ್ನನಿನಿಬರ
ನಂಬಿಸುವ ಪರಿಯೆಂತು ವಸನ ಗ್ರಾಸವಾಸದಲಿ
ತುಂಬಿ ಸಿರಿಗೆಡಹಿಯೊಳ ಲಕುಮಿಯ
ಮುಂಬಿಗನೊಳಪದೆಸೆಯ ಕುಂತದ
ಚುಂಬಿಗನೊಳೇನುಂಟು ಫಲವೆಂದರಸ ಬಿಸುಸುಯ್ದ ೬

ಖೇದವೇಕೆಲೆ ನೃಪತಿ ಹರುಷ ವಿ
ಷಾದದಲಿ ಸುಖ ದು:ಖದಲಿ ನುತಿ
ವಾದ ಪರಿವಾದದಲಿ ಸಮಬುದ್ಧಿಗಳಲಾ ದ್ವಿಜರು
ಈ ದುರಂತದ ಚಿಂತೆ ಬೇಡೆಲೆ
ದ್ವಾದಶಾತ್ಮನ ಭಜಿಸಿದರೆ ಭ
ಕ್ಷ್ಯಾದಿ ಬಹುವಿಧದನ್ನ ಸಿದ್ಧಿಪುದೆಂದನಾ ಧೌಮ್ಯ ೭

ಧರಣಿಪತಿ ಕೇಳ್ ಧೌಮ್ಯ ವಚನಾ೦
ತರದೊಳಮರನದೀ ವಿಗಾಹನ
ಪರಮಪಾವನ ಕರಣನೀಕ್ಷಿಸಿ ತರಣಿಮಂಡಲವ
ಮುರುಹಿ ಮೂಲಾಧಾರ ಪವನನ
ನುರು ಸುಷುಮ್ನೆಗೆ ನೆಗಹಿ ನಿಚ್ಚಟ
ವರ ಸಮಾಧಿಯಲಿನನ ಮೆಚ್ಚಿಸಿದನು ಮಹೀಪಾಲ ೮

ವರವ ಕೊಟ್ಟೆನು ನಿನಗೆ ಹೇಮದ
ಚರುಕವಿದೆ ವಿವಿಧಾನ್ನ ಪಾನೋ
ತ್ಕರದ ತವನಿಧಿ ನಿನ್ನ ವಧು ಬಾಣಸನ ಕರಣದಲಿ
ವಿರಚಿಸಲಿ ಬಳಿಕುಣಲಿ ಶತ ಸಾ
ವಿರವನಂತವು ನೀವು ಬಳಿಕಂ
ಬುರುಹಮುಖಿ ಮರುದಿವಸವೀ ಪರಿಯೆಂದನಾ ದ್ಯುಮಣಿ ೯

ಭೂಮಿಪತಿ ಭುಲ್ಲವಿಸಿದನು ನಿ
ಸ್ಸೀಮ ಸಂತೋಷದಲಿ ಸುಜನ
ಸ್ತೋಮ ರಕ್ಷಣಕಾದ ನಿರ್ವಾಹದ ನಿರೂಢಿಯಲಿ
ಆ ಮುನೀಂದ್ರಂಗೆರಗಿ ಬಳಿಕೀ
ಭಾಮಿನಿಯ ಕರೆದೀ ಹದನ ಸು
ಪ್ರೇಮದಿಂದರುಹಿದನು ತನ್ನ ಸಹೋದರವ್ರಜಕೆ ೧೦

ಇವರು ತಿರುಗಿದರಿತ್ತಲಡವಿಯ
ಬವಣಿಗೆಯ ಭಾರಾಂಕ ಭಾಷೆಯ
ಲವಿರಳಿತ ಜನಜಾಲ ಸಹಿತಾರಣ್ಯ ಮಾರ್ಗದಲಿ
ಆವನಿಪತಿ ಕೇಳತ್ತಲಾ ಕೌ
ರವನ ನಗರಿಗೆ ಪಾರಿಕಾಂಕ್ಷಿ
ಪ್ರವರನೊಬ್ಬನು ಬಂದು ಹೊಕ್ಕನು ರಾಜಮಂದಿರವ ೧೧

ಮುನಿಯ ಸತ್ಕರಿಸಿದನು ಕೌರವ
ಜನಪನಾ ಋಷಿಮುಖ್ಯನೀತನ
ವಿನಯ ರಚನೆಗೆ ಮೆಚ್ಚಿ ನುಡಿದನು ರಾಜಕಾರಿಯವ
ನಿನಗದೊಂದೇ ಕೊರತೆ ಪಾಂಡವ
ಜನಪರನು ಜೂಜಿನಲಿ ಸೋಲಿಸಿ
ಕನಲಿಸಿದೆಯದರಿಂದ ಬಲುಗೇಡಹುದು ನಿನಗೆಂದ ೧೨

ಹೋದ ಕೃತಿಯಂತಿರಲಿ ಸಾಕಿ
ನ್ನಾದರೆಯು ಕೌಂತೇಯರನು ಕರೆ
ದಾದರಿಸಿ ಕೊಡು ಧರೆಯನೆನೆ ಖೊಪ್ಪರಿಸಿ ಖಾತಿಯಲಿ
ಹೊಯ್ದು ತೊಡೆಯನು ಹಗೆಗೆ ಕೊಡುವೆನೆ
ಮೇದಿಯನೆನೆ ರೋಷ ಶಿಖಿಯಲಿ
ಕಾದುದೀತನ ಹೃದಯ ಶಪಿಸಿದನಂದು ಮೈತ್ರೇಯ ೧೩

ತೊಡೆಗಳನು ಕಲಿಭೀಮ ಬವರದೊ
ಳುಡಿದು ಕೆಡಹಲಿಯೆಂದು ಶಾಪವ
ಕೊಡಲು ಮುನಿಪನ ಸಂತವಿಟ್ಟನು ಬಂದು ಧೃತರಾಷ್ಟ್ರ
ತೊಡೆಗೆ ಬಂದುದು ತೋಟಿ ಸಾಕಿ
ನ್ನೊಡಬಡಿಸಿ ಫಲವಿಲ್ಲ ನಮ್ಮಯ
ನುಡಿಗೆ ಮರುಮಾತಿಲ್ಲೆನುತ ಮುನಿ ಸರಿದನಾಶ್ರಮಕೆ ೧೪

ಆ ಮಹಾಮುನಿ ಶಾಪಭಯವನು
ಭೀಮಸೇನನ ಬಲುಹ ನೆನೆ ನೆನೆ
ದಾ ಮನಸ್ಸಿನ ಬೇಗೆಯಲಿ ಬೆದೆಬೆಂದು ಬೇಸರಲಿ
ಭೂಮಿಪತಿ ಕರೆಸಿದನು ವಿದುರನ
ನಾ ಮಹಾಜ್ಞಾನಿಯನು ಮುನಿಪನ
ತಾಮಸವನರುಹಿದೊಡೆ ಬಳಿಕಿಂತೆಂದನಾ ವಿದುರ ೧೫

ತಪ್ಪದಿದು ನಿನ್ನಾತಗಳ ಭುಜ
ದರ್ಪ ತೀವ್ರ ಜ್ವರದ ವಿಕಳರ
ನೊಪ್ಪಿತಾದೆ ಸುಯೋಧನಾದ್ಯರು ಜನಿಸಲೀ ಧರೆಗೆ
ತಪ್ಪುವುದೆ ಋಷಿವಾಕ್ಯ ಸಂಧಿಯೊ
ಳಪ್ಪಿಗೊಳು ಪಾಂಡವರನಲ್ಲದ
ರಪ್ಪಿಕೊಂಬಳು ಮೃತ್ಯು ನಿನ್ನ (ಪಾ: ನಿನ್ನನು) ಕುಮಾರಕರನೆಂದ ೧೬

ಎನಲು ಕಿಡಿಕಿಡಿಯಾ(ಪಾ: ಯೋ)ಗಿ ಕೌರವ
ಜನಪನೀತನ ಬೈದು ಕುಂತೀ
ತನುಜರಲಿ ಬಾಂಧವನಲಾ ಹೋಗವರ ಹೊರೆಗೆಂದು
ಮುನಿದು ಗರ್ಜಿಸೆ ಜೀಯ ಕರ ಲೇ
ಸೆನುತ ಮನದುಬ್ಬಿನಲಿ ಪಾಂಡವ
ಜನಪರಿಹ ಕಾಮ್ಯಕ ವನಾಂತರಕೈದಿದನು ವಿದುರ ೧೭

ಇದಿರುಗೊಂಡರು ಹಿರಿದು ಮನ್ನಿಸಿ
ವಿದುರನನು ಕೊಂಡಾಡಿ ಗುರು ನೃಪ
ನದಿಜ ಧೃತರಾಷ್ಟ್ರಾದಿಗಳ ಸುಕ್ಷೇಮ ಕುಶಲಗಳ
ವಿದುರನಾಗಮನ ಪ್ರಪಂಚದ
ಹದನನೆಲ್ಲವ ಕೇಳಿದರು ಹೇ
ಳಿದನು ನಿಜ ವೃತ್ತಾಂತವನು ವಿದುರಂಗೆ ಯಮಸೂನು ೧೮

ಇತ್ತಲೀ ವಿದುರನ ವಿಯೋಗದ
ಚಿತ್ತದಂತಸ್ತಾಪದಲಿ ನೃಪ
ಮತ್ತೆ ದೂತರ ಕಳುಹಿ ಕರೆಸಿದಾತನನು ಪುರಕೆ
ಹೆತ್ತಮಕ್ಕಳ ಬಿಡು ಪೃಥಾಸುತ
ರತ್ತ ತಿರುಗೆನೆ ಖಾತಿಗೊಂಡೆನು
ಮತ್ತೆ ಮುನಿಯದಿರೆಂದು ವಿದುರನನಪ್ಪಿದನು ನೃಪತಿ ೧೯

ಆವ ವನದಲಿ ಪಾಂಡುಸುತರಿಗೆ
ತಾವು ನಿನಗೇನೆಂದರನಿಬರ
ನಾವ ವನದಲಿ ಕಂಡೆ ಕೂಡೆನಿತುಂಟು ಪರಿವಾರ
ಆವುದಭಿಮತ ಭೀಮಸೇನನ
ಭಾವವೇನು ಯುಧಿಷ್ಠಿರಾರ್ಜುನ
ರಾವ ಭಂಗಿಯಲಿದ್ದರೆಂದನು ನಗುತ ಧೃತರಾಷ್ಟ್ರ ೨೦

ಅರಸ ಕೇಳ್ ಗಂಗಾನದಿಯನು
ತ್ತರಿಸಿದವರಿಗೆ ಕಮಲ ಮಿತ್ರನ
ಕರುಣವಾಯಿತು ಕನಕ ಪಾತ್ರೆಯೊಳಕ್ಷಯಾನ್ನದಲಿ
ಪರಿಕರದ ಪರುಟವಣೆಯಲಿ ಸಾ
ವಿರದ ಶತಸಂಖ್ಯಾತ ಧರಣೀ
ಸುರನಿಯೋಗಿಗಳಾಪ್ತಜನ ಸಹಿತೈದಿದರು ವನವ ೨೧

ಜನಪ ಕೇಳ್ ಕಿಮ್ಮೀರನೆಂಬವ
ನನಿಮಿಷರಿಗುಬ್ಬಸದ ಖಳನಾ
ತನ ವಿಭಾಡಿಸಿ ಹೊಕ್ಕರವರಾರಣ್ಯ ಮಂದಿರವ
ದನುಜನೇ ಕಿಮ್ಮೀರನಾತನ
ನನಿಲಜನೊ ಫಲುಗುಣನೊ ಕೊಂದಾ
ತನು ಯುಧಿಷ್ಠಿರನೋ ಸವಿಸ್ತರವಾಗಿ ಹೇಳೆಂದ ೨೨

ಅರಸ ಕೇಳಂದೇಕ ಚಕ್ರದೊ
ಳೊರಸಿದನಲಾ ಭೀಮನಾತಗೆ
ಹಿರಿಯನೀ ಕಿಮ್ಮೀರ ಬಾಂಧವನಾ ಹಿಡಂಬಕಗೆ
ಧರಣಿಪಾಲನ ಸಪರಿವಾರದ
ಬರವ ಕಂಡನು ತನ್ನ ತಮ್ಮನ
ಹರಿಬವನು ಮರಳಿಚುವೆನೆನುತಿದಿರಾದನಮರಾರಿ ೨೩

ಇವರು ಮೂರೇ ದಿನಕೆ ಕಾಮ್ಯಕ
ವನ ಮಹಾಶ್ರಮಕಾಗಿ ಬರೆ ದಾ
ನವನು ದಾರಿಯ ಕಟ್ಟಿ ನಿಂದನು ಕೈಯ ಮುಷ್ಟಿಯಲಿ
ಅವನ ಕಂಗಳ ಕೆಂಪಿನಲಿ ಮೇ
ಣವನ ದಾಡೆಯ ಬೆಳಗಿನಲಿ ಖಳ
ನವಯವವ ಕಂಡಳುಕಿ ನಿಂದರು ಮುಂಗುಡಿಯ ಭಟರು ೨೪

ಮುಂದೆ ಘೋರಾರಣ್ಯವಿದೆ ಸುರ
ಬಂದಿಕಾರನ ಕಾಹಿನಲಿ ಕಾ
ಲಿಂದಿಯುದರದ ಮೊಬ್ಬಿನಂತಿದೆ ತೀವ್ರತರ ತಿಮಿರ
ಇಂದಿನಿರುಳಲ್ಲಿ ಬದುಕಿದೊಡೆ ಸಾ
ವೆಂದಿಗೆಮಗಿಲ್ಲೆನುತ ಭಯದಲಿ
ನಿಂದುದಲ್ಲಿಯದಲ್ಲಿ ಪಾಂಡುಕುಮಾರ ಪರಿವಾರ ೨೫

ಅಡಿಗಡಿಗೆ ಮಾನಿಸರ ಸೊಗಡವ
ಗಡಿಸುತಿದೆ ಬರಹೇಳು ನೆತ್ತರ
ಗುಡಿಹಿಗೈನೆಯರೆಲ್ಲಿ ಶಾಕಿನಿ ಡಾಕಿನೀ ನಿಕರ
ತಡೆಯಬೇಡೋ ತಿನ್ನೆನುತ ಬೊ
ಬ್ಬಿಡುತ ಖಳನುರುಬಿದನು ರಾಯನ
ಮಡದಿ ಹೊಕ್ಕಳು ಮರೆಯನರ್ಜುನ ಭೀಮ ಧರ್ಮಜರ ೨೬

ಎಲೆಲೆ ರಾಕ್ಷಸ ಭೀತಿ ಹೋಗದೆ
ನಿಲು ನಿಲೆಲವೋ ನಿಮಿಷ ಮಾತ್ರಕೆ
ಗೆಲುವರರಸುಗಳೆನುತ ಮುನಿ ರಕ್ಷೋಘ್ನ ಸೂಕ್ತವನು
ಹಲವು ವಿಧದಲಿ ಜಪಿಸಿ ದಿಗು ಮಂ
ಡಲದ ಬಂಧವ ರಚಿಸಿ ಜನ ಸಂ
ಕುಲವ ಸಂತೈಸಿದನು ಧೌಮ್ಯನು ಮುಂದೆ ಭೂಪತಿಯ ೨೭

ಆರು ನೀವ್ ನಡುವಿರುಳು ಪಾಂಡು ಕು
ಮಾರರಾವೆನಲಿತ್ತಲೇನು ವಿ
ಚಾರ ಬಂದಿರಿ ಹೇಳಿ ನೀವಾ ಬಕ ಹಿಡಿಂಬಕರ
ವೈರಿಗಳಲಾ ಹೊಲ್ಲೆಹೇನು ವಿ
ಕಾರಿಗಳನೊಡಹೊಯ್ದು ಶೋಣಿತ
ವಾರಿಯೋಕುಳಿಯಾಡ ಬೇಹುದೆನುತ್ತ ಖಳ ಜರೆದ ೨೮

ಮಿಡಿದನರ್ಜುನ ಧನುವನಾತನ
ಜಡಿದು ನಿಂದನು ಭೀಮನಸುರನ
ಕೆಡಹಿ ಕಾಮ್ಯಕ ವನದ ಭೂಮಿಯ ಭೂತ ಸಂತತಿಗೆ
ಬಡಿಸುವೆನು ನೀ ಸೈರಿಸೆನುತವ
ಗಡಿಸಿದನು ಕಲಿ ಭೀಮನಂತ್ಯದ
ಸಿಡಿಲು ಸೆರೆ ಬಿಟ್ಟಂತೆ ಬೊಬ್ಬಿಡುತೆದ್ದನಮರಾರಿ ೨೯

ಎಂಬೆನೇನನು ಪವನಜನ ಕೈ
ಕೊಂಬ ದೈತ್ಯನೆ ಹೆಮ್ಮರನ ಹೆ
ಗ್ಗೊಂಬ ಮುರಿದನು ಸವರಿದನು ಶಾಖೋಪಶಾಖೆಗಳ
ತಿಂಬೆನಿವನನು ತಂದು ತನ್ನ ಹಿ
ಡಿಂಬಕನ ಹಗೆ ಸಿಲುಕಿತೇ ತಾ
ನಂಬಿದುದು ನೆರೆ ದೈವವೆನುತಿದಿರಾದನಮರಾರಿ ೩೦

ಹೊಯಿದನವನುರವಣಿಸಿ ಮುರಿದೊಳ
ಹೊಯಿದು ಹೊಕ್ಕನು ಭೀಮನೆಲವೋ
ಕಯಿದು ಮರನೇ ಸೆಳೆಗೆ ಸೆಡೆವುದೆ ಭದ್ರಮದದಂತಿ
ಕಯಿದುವಿಲ್ಲಾ ತರಿಸಿಕೊಡುವೆನ
ಡಾಯುಧವ ಬಿಡು ಸರಳನೆನುತವ
ಹೊಯಿದು ಹುರಿಯೋ ಹುರಿಯೆನುತ ಗಹಗಹಿಸಿದನು ಭೀಮ ೩೧

ಮುರುಕಿಸುವ ಪವನಜನ ನೆತ್ತಿಯ
ನೆರಗಿದನು ಬಳಿಕವನ ಹೊಯ್ಲಿನ
ಬಿರುಸಿನಯ್ಯನೊ ಸಿಡಿಲ ಶಿಷ್ಯನೊ ವಜ್ರಕರ ಹತಿಯೊ
ಕರಗಿದಾ ಮಯಣಾಮದಿಗಳಿಂ
ದೆರದ ಕಾಹಿನ ಕರುವೆನಲು ಕು
ಕ್ಕುರಿಸಲಸುರನನಿಕ್ಕಿದನು ಚಾಪಲ ಚಪೇಟದಲಿ ೩೨

ಡೆಂಡಣಿಸಿ ಸುರವೈರಿ ಧೊಪ್ಪನೆ
ದಿಂಡುಗೆಡೆದನು ನೀಲಶೈಲದ
ದಂಡಿಗಾರನ ದೇಹ ಗರ್ತದ ರಕ್ತನಿರ್ಜರದ
ದೊಂಡೆಗರುಳಿನ ಬಾಯ ಜೋಲಿನ
ಕುಂಡಲಿತ ಕರ ಜಂಘೆಗಳ ಬಿಡು
ಮಂಡೆಗೆದರಿದ ಖಳನ ಕಂಡುದು ಭೂಸುರವ್ರಾತ ೩೩

ಅರಸ ಹೇಳುವುದೇನು ಹೋರಿದ
ನರೆಗಳಿಗೆ ಕೊಂಡಾಡಿ ಬಳಿಕಿ
ಟ್ಟೊರೆಸಿ ಹುಡಿಯಲಿ ಹೂಳಿದನು ಕಿಮ್ಮೀರ ದಾನವನ
ಬೆರೆಸಿತೀ ವಿಪ್ರೌಘವೀ ಮುನಿ
ವರಿಯರೀ ಕಾಮಿನಿಯರೀ ನೃಪ
ವರನ ಪರಿಕರವಾ ಮಹಾಕಾಮ್ಯಕ ವನಾಂತರವ ೩೪

ತಳಿರು ಬಿಟ್ಟುದು ಕೂಡೆ ಹರಹಿನ
ಹಳುವದೊಳ್ ದ್ವಿಜವರ್ಗ ರಚಿಸಿದ
ತಳಿರ ಗುಡಿಗಳ ಪರ್ಣಶಾಲೆಯ ಭದ್ರಭವನಿಕೆಯ
ಮೆಳೆಯ ಮಂಟಪ ಹೊದರುದುರುಗಲು
ನೆಳಲ ಚೌಕಿಗೆ ವಿಪುಳ ವಟ ಸಂ
ಕುಲದೊಳೋಲಗ ಶಾಲೆ ಮೆರೆದುದು ಧರ್ಮನಂದನನ ೩೫

ಆ ಸಕಲ ಸಾಮ್ರಾಜ್ಯಲಕ್ಷ್ಮಿ (ಪಾ: ಲಕ್ಷ್ಮೀ) ವಿ
ಳಾಸದರಮನೆಗಳನು ಮರೆಸಿದು
ದೀ ಶರಭ ಶಾರ್ದೂಲ ಸೇವಿತ ಘೋರ ಕಾಂತಾರ
ಆ ಸುಧಾಕಲಿತಾನ್ನವೇ ಫಲ
ರಾಸಿಯಾದುದು ಗೇಯರಸ ವಿ
ನ್ಯಾಸವೇ ಮಧು ಮಕ್ಷಿಕವ್ರಜ ಜಂಬುಕಧ್ವಾನ ೩೬

ದಿನಪ ಕೃಪೆ ಮಾಡಿದನಲೇ ಕಾಂ
ಚನಮಯದ ಭಾಂಡವನು ಬಳಿಕಾ
ವನಜಮುಖಿ ಮಾಡಿದ ಸುಪಾಕದ ಷಡುರಸಾನ್ನದಲಿ
ಮುನಿಜನಕೆ ಪರಿಜನಕೆ ಭೂಸುರ
ಜನಕೆ ತುಷ್ಟಿಯ ಮಾಡಿ ಭೂಪತಿ
ವನದೊಳಿದ್ದನು ವೀರ ನಾರಾಯಣನ ಕರುಣದಲಿ ೩೭

(ಸಂಗ್ರಹ: ಹೊಳೆನರಸಿಪುರ ಮಂಜುನಾಥ)

Tuesday, February 2, 2010

ಉದ್ಯೋಗಪರ್ವ: ೦೧. ಮೊದಲನೆಯ ಸಂಧಿ

ಸೂ. ನಂಬಿದವರಿಗೆ ತನ್ನ ತೆತ್ತಿಹ
ನೆಂಬ ಬಿರುದನು ಮೆರೆದು ಭಕ್ತಕು
ಟುಂಬಿ ಸಾರಥಿಯಾದನೊಲಿದರ್ಜುನಗೆ ಮುರವೈರಿ

ಕೇಳು ಜನಮೇಜಯ ಧರಿತ್ರೀ
ಪಾಲ ಕುಂತೀ ತನಯರುನ್ನತ
ದೇಳಿಗೆಯನೇನೆಂಬೆನೈ ಕಾರುಣ್ಯ ಸಿಂಧುವಲ
ಶ್ರೀಲತಾಂಗಿಯ ರಮಣನನಿಬರೊ
ಳಾಳೊಡೆಯನೆಂದೆಂಬ ಭೇದವ
ಬೀಳುಕೊಟ್ಟೇ ನಡೆಸುತಿರ್ದನು ತನ್ನ ಮೈದುನರ ೧

ಹೋಲಿಕೆಗೆ ಬಾಯ್ಬಿಡುವ ವೇದದ
ತಾಳಿಗೆಗಳೊಣಗಿದವು ಘನತೆಯ
ಮೇಲೆ ನನ್ನದು ಘನತೆಯೆಂಬುದನತ್ತ ಬೇರಿರಿಸಿ
ಕಾಲಿಗೆರಗುವನಾ ಯುಧಿಷ್ಠಿರ
ನೇಳಲೊಡನೇಳುವನು ಕೃಷ್ಣನ
ಲೀಲೆಯನುಪಮವೆಂದು ವೈಶಂಪಾಯ ಮುನಿ ನುಡಿದ ೨

ಒಂದು ದಿನ ವೊಡ್ಡೋಲಗಕ್ಕೈ
ತಂದನಖಿಳಾವನಿಯ ರಾಯರ
ಮಂದಿಯಲಿ ಮುರವೈರಿ ನುಡಿದನು ರಾಜಮಂತ್ರವನು
ಹಿಂದೆ ಜೂಜಿನ ವಿಲಗದಲಿ ಮನ
ನೊಂದರಿವರಡವಿಯಲಿ ಧರೆಗಿ
ನ್ನೆಂದು ಸೇರುವರೇನು ಹದನೀ ಪಾಂಡು ತನಯರಿಗೆ ೩

ದೇವ ನೀನೇ ಬಲ್ಲೆ ನಿಮ್ಮಯ
ಭಾವನೀ ಧರ್ಮಜನ ಬಹುಮಾ
ನಾವಮಾನದ ಹೊರಿಗೆ ನಿನ್ನದು ಹರಣ ಭರಣವನು
ನೀವು ಬಲ್ಲಿರಿ ಕಾಲಲೊದೆದುದ
ನೋವಿ ತಲೆಯಲಿ ಹೊತ್ತು ನಡೆಸುವ
ಡಾವು ಬಲ್ಲೆವು ಜೀಯಯೆಂದನು ದ್ರುಪದ ಭೂಪಾಲ ೪

ಕಳುಹುವುದು ಶಿಷ್ಟರನು ಧರಣೀ
ತಳವ ಬೇಡಿಸುವಲ್ಲಿ ಸಾಮವ
ಬಳಸುವುದು ಭೀಷ್ಮಾದಿಗಳ ಕಟ್ಟುವುದು ವಿನಯದಲಿ
ತಿಳಿವುದಾತನ ನೆಲೆಯನಲ್ಲಿಂ
ಬಳಿಕ ನಯವಿಲ್ಲೆಂದಡಾಹವ
ದೊಳಗೆ ಕೈದೋರುವುದು ಮತವೆಂದನು ಮುರಧ್ವಂಸಿ ೫

ಎಲೆ ಮರುಳೆ ಮುರವೈರಿ ಕೌರವ
ರೊಲಿಯರೀ ಹದನನು ಯುಧಿಷ್ಠಿರ
ನಿಳೆಯ ಸೋತನು ಜೂಜುಗಾರರ ಮೇರೆ ಮಾರ್ಗದಲಿ
ನೆಲನನೊಡ್ಡಲಿ ಮತ್ತೆ ಗೆಲಿದೇ
ಕೊಳಲಿ ಮೇಣ್ ಕಾದಲಿ ಸುಯೋಧನ
ನೊಳಗೆ ತಪ್ಪಿಲ್ಲೆಂದು ನುಡಿದನು ನಗುತ ಬಲರಾಮ ೬

ಲೇಸನಾಡಿದೆ ರಾಮ ಬಳಿಕೇ
ನಾ ಸುಯೋಧನನಧಮನೇ ನೀ
ನೀಸನೇರಿಸಿಕೊಂಡು ನುಡಿವಾ ಮತ್ತೆ ಕೆಲಬರಲಿ
ಆಸುರದ ಕತ್ತಲೆಯ ಬೀಡು ಮ
ಹಾ ಸಹಾಯವು ಗೂಗೆಗಳಿಗುಪ
ಹಾಸವೇ ದಿಟವೆಂದು ಸಾತ್ಯಕಿ ನಗುತ ಖತಿಗೊಂಡ ೭

ಬಲನ ಮಾತೇನಿವರ ಭಾಗ್ಯದ
ನೆಲೆಯೆ ಫಡ ಕೌರವರ ಶತಕದ
ತಲೆಗೆ ನಾ ವೀಳೆಯವನೆಲೆ ಕುಂತೀ ಕುಮಾರಕನೆ
ನೆಲವನಲಗಿನ ಮೊನೆಯಲಲ್ಲದೆ
ಮೆಲುನುಡಿಯ ಸಾಮದಲಿ ಗೀಮದ
ಲಿಳೆಯ ಕೊಂಬರೆ ಧರೆಯೊಳಧಿಕ ಕ್ಷತ್ರಿಯಾತ್ಮಜರು ೮

ಕಾದಿ ಸಾವುದು ಮೇಣು ರಿಪು ಭಟ
ನಾದವನ ನೆತ್ತಿಯಲಿ ಸಬಳವ
ಕೋದು ಕೊಂಬುದು ನೆಲನವಿದು ಕ್ಷತ್ರಿಯರ ಮಕ್ಕಳಿಗೆ
ಮೇದಿನಿಯ ಬೇಡುವೊಡೆ ಮಟ್ಟಿಯ
ತೇದು ಹಣೆಯಲಿ ಬಡಿದು ದರ್ಭೆಯ
ಕೋದು ಸ್ವಸ್ತಿಯ ಹಾಕುವುದು ಹಾರುವರ ಮಕ್ಕಳಿಗೆ ೯

ಎನಲು ನಕ್ಕನು ದ್ರುಪದನಿದು ನ
ಮ್ಮನುಮತವು ಕಾಳಗದೊಳಲಗಿನ
ಮೊನೆಯೊಳಲ್ಲದೆ ಮಹಿಯ ಕೊಡುವನೆ ಕೌರವೇಶ್ವರನು
ವಿನುತ ಸಾತ್ಯಕಿ ಕೇಳು ನೆಲೆಯಿದು
ಜನಪನಲ್ಲಿಗೆವೊಬ್ಬ ದೂತನ
ವಿನಯದಲಿ ಕಳುಹುವುದು ಸಾಮವ ಬೆಳೆಸಿ ನೋಡುವುದು ೧೦

ವಿಹಿತವಿದು ಪಾಂಚಾಲಕನ ಮತ
ವಹುದು ರಾಯರಿಗಟ್ಟುವುದು ವಿ
ಗ್ರಹವ ಸೂಚಿಸಿ ಕರೆದುಕೊಂಬುದು ಬೇಹ ಭೂಭುಜರ
ಬಹಳ ಸಂವರಣದಲಿ ರಣ ಸ
ನ್ನಿಹಿತವಾಗಿಹುದಿತ್ತಲತ್ತಲು
ಮಹಿಯ ಬೇಡಿಸ ಕಳುಹುವುದು ತೆರನೆಂದನಸುರಾರಿ ೧೧

ಮದುವೆಗೋಸುಗ ಬಂದೆವಾವಿ
ನ್ನಿದರ ಮೇಲಣ ರಾಜಕಾರ್ಯದ
ಹದನನಟ್ಟುವುದರುಹುವುದು ಬಹೆವಾವು ಕರೆಸಿದೊಡೆ
ಹದುಳವಿಹುದೆಂದಸುರರಿಪು ಕರು
ಣದಲಿ ಕುಂತೀಸುತರನಾ ದ್ರೌ
ಪದಿಯನಭಿಮನ್ಯುವ ಸುಭದ್ರೆಯ ಹರಸಿ ಬೀಳ್ಕೊಂಡ ೧೨

ಕೂಡಿಕೊಂಡಿಹುದಿವರ ಮಕ್ಕಳ
ನೋಡಲಾಗದು ಹೆಚ್ಚು ಕುಂದನು
ನಾಡ ಬೇಡಲು ಬುದ್ಧಿವಂತರನಲ್ಲಿಗಟ್ಟುವುದು
ಕೂಡೆ ಶೋಧಿಸಿ ಸಜ್ಜೆಯಲಿ ಮೈ
ಗೂಡಿಯಾರೋಗಣೆಗಳಲಿ ಕೈ
ಮಾಡಿ ಬೆರೆಸಿಹುದೆಂದು ದ್ರುಪದ ವಿರಾಟರಿಗೆ ನುಡಿದ ೧೩

ಎಂದು ಕಳುಹಿಸಿಕೊಂಡು ನಾರೀ
ವೃಂದ ಯದುಕುಲ ಸಹಿತ ದೇವ ಮು
ಕುಂದ ಬಿಜಯಂಗೈದು ಹೊಕ್ಕನು ದ್ವಾರಕಾಪುರವ
ಒಂದು ದಿನವಾಲೋಚನೆಯ ನೆಲೆ
ಯಿಂದ ಕರೆದು ಪುರೋಹಿತನ ನಲ
ವಿಂದ ಕಳುಹಿದ ದ್ರುಪದನಾ ಕೌರವರ ಪಟ್ಟಣಕೆ ೧೪

ಓಲೆಯುಡುಗೊರೆ ಸಹಿತ ಧರಣೀ
ಪಾಲರಿಗೆ ಪಾಂಡವರು ಶಿಷ್ಟರು
ಕಾಳಗಕೆ ನೆರವಾಗಲೋಸುಗ ಕರೆದರಲ್ಲಲ್ಲಿ
ಆಳು ಕುದುರೆಯ ಕೂಡಿ ದೆಸೆಗಳ
ಮೂಲೆಯರಸುಗಳೆಲ್ಲ ಕುರು ಭೂ
ಪಾಲನಲ್ಲಿಗೆ ಕೆಲರು ಕೆಲಬರು ಪಾಂಡು ತನಯರಿಗೆ ೧೫

ಧರಣಿಯೆಡೆಗೆಡೆ ರಾಯ ಮೋಹರ
ತೆರಳಿತಿಬ್ಬರು ರಾಯರಿಗೆ ಕೈ
ನೆರವುದೋರಲು ಕವಿದು ಬಂದುದು ಕಾಣೆನಳತೆಗಳ
ಅರಿಗಳತಿ ಹೆಚ್ಚಿದರು ಮೈಮರೆ
ದಿರಲು ಧರಣಿಗಮಾನ್ಯನಹುದಿ
ನ್ನುರವಣಿಸಬೇಕೆಂದು ದುರ್ಯೋಧನನು ಚಿಂತಿಸಿದ ೧೬

ಹದನನಾಪ್ತರಿಗರುಹಿದನು ಗು
ಪ್ತದಲಿ ಕೃಷ್ಣನನೊಳಗು ಮಾಡುವ
ಮುದದಿ ಬಂದನು ಕೌರವೇಂದ್ರನು ದ್ವಾರಕಾಪುರಿಗೆ
ಇದನು ಭೇದಿಸಿ ಬೇಹಿನವರರು
ಹಿದರು ಕುಂತೀ ಸುತರಿಗತಿ ವೇ
ಗದಲಿ ಧರ್ಮಜನಳುಕಿ ಕಳುಹಿದನಿಂದ್ರನಂದನ ೧೭

ಬೀಳುಕೊಂಡರ್ಜುನನು ಲಕ್ಷ್ಮೀ
ಲೋಲನಲ್ಲಿಗೆ ಬರುತ ಕಂಡನು
ಲೀಲೆಯಲಿ ನರ್ತಿಸುವ ನವಿಲನು ಬನದೊಳದ ಹಾಯ್ದು
ಮೇಲೆ ಹಂಗನ ಬಲನ ಹರಿಣೀ
ಜಾಲದೆಡನನು ತಿದ್ದುವಳಿಯ ವಿ
ಶಾಲ ಶಕುನವನಾಲಿಸುತ ಹರುಷದಲಿ ನಡೆತಂದ ೧೮

ಮೊರೆದು ಮಿಗೆ ತಲೆಯೊತ್ತಿ ತೆರೆ ಮೈ
ಮುರಿದು ಘುಳುಘುಳು ಘುಳಿತ ಘನ ನಿ
ಷ್ಟುರ ನಿನಾದದ ಗಜರು ಗಾಢಿಸಿ ಬಹಳ ಲಹರಿಯಲಿ
ತೆರೆ ತೆರೆಯ ತಿವಿದೆದ್ದು ಗಗನವ
ನಿರದೊದೆದು ವಿತಳಕ್ಕೆ ಸುಳಿ ಭೊಂ
ಕರಿಸಿ ಸಾಗರನುಬ್ಬುಗವಳವ ಕೊಂಡವೊಲು ಕುಣಿದ ೧೯

ಪೂತು ಮಝ ಸಾಗರನ ಬಿಗುಹು ಮ
ಹಾತಿಶಯವೈ ಯಿವನನಂಜಿಸ
ಲಾತಗಳು ಮರ್ಮಿಗಳು ಬೆಟ್ಟವನೊಟ್ಟಿ ನೆತ್ತಿಯಲಿ
ಈತ ನಮಗಂಜುವನೆಯೆನುತ ವಿ
ಧೂತರಿಪುಬಲ ಮುಂದೆ ಕಂಡನು
ಪಾತಕದ ಹೆಡತಲೆಯ ದಡಿಯನು ದ್ವಾರಕಾಪುರವ ೨೦

ಅಟ್ಟಿ ಬಳಲಿದ ಶ್ರುತಿಗೆ ಹರಿ ಮೈ
ಗೊಟ್ಟ ಠಾವಿದು ತಾಪಸರು ಜಪ
ಗುಟ್ಟಿ ಜಿನುಗಿದಡವರನುಜ್ಜೀವಿಸಿದ ಠಾವಿದಲ
ಹುಟ್ಟು ಸಾವಿನ ವಿಲಗ ಜೇವರ
ಬಿಟ್ಟ ಠಾವಿದು ಕಾಲ ಕರ್ಮದ
ಥಟ್ಟು ಮುರಿವಡೆದೋಡಿದೆಡೆಯಿದು ಶಿವ ಶಿವಾಯೆಂದ ೨೧

ಪರಮ ನಾರಾಯಣ ಪರಾಯಣ
ನಿರವೆ ಪರತರವೆಂದು ಮುರಹರ
ಬರೆದ ಠಾವಿದು ಮುಕುತಿಯಿದರೊಳು ಕರತಳಾಮಲಕ
ಭರಿತ ಬೊಮ್ಮದ ಸುತ್ತುಗೊಳಸನು
ಸರಿದ ಠಾವೀ ತರ್ಕ ತಂತ್ರದ
ತರದ ಯುಕುತಿಗೆ ತೊಳಸುಗೊಳ್ಳದ ಠಾವಲಾಯೆಂದ ೨೨

ಹೊಗಳುತರ್ಜುನನಸುರರಿಪುವಿನ
ನಗರಿಗೈತಂದರಮನೆಯ ಹೊಗ
ಲಗಧರನು ಮಂಚದಲಿ ನಿದ್ರಾಂಗನೆಯ ಕೇಳಿಯಲಿ
ಸೊಗಸುಮಿಗಲರೆದೆರೆದ ಲೋಚನ
ಯುಗಳ ಸಮತಳಿಸಿದ ಸುಷುಪ್ತಿಯ
ಬಿಗುಹಿನಲಿ ಪರಮಾತ್ಮನೆಸೆದನು ಭ್ರಾಂತಿಯೋಗದಲಿ ೨೩

ಮುಕುಳಕರಪುಟನಾಗಿ ಭಯಭರ
ಭಕುತಿಯಲಿ ಕಲಿಪಾರ್ಥನಬುಜಾಂ
ಬಕನನೆಬ್ಬಿಸಲಮ್ಮದೊಯ್ಯನೆ ಚರಣ ಸೀಮೆಯಲಿ
ಅಕುಟಿಲನು ಸಾರಿದನು ಬಳಿಕೀ
ವಿಕಳ ದುರ್ಯೋಧನು ನಿಗಮ
ಪ್ರಕರ ಮೌಳಿಯ ಮೌಳಿಯತ್ತಲು ಸಾರ್ದು ಮಂಡಿಸಿದ ೨೪

ಇರಲು ನಿಮಿಷದೊಳಸುರರಿಪು ಮೈ
ಮುರಿದನುಪ್ಪವಡಿಸಿದನಿದಿರಲಿ
ಸುರಪತಿಯ ಸೂನುವನು ಕಂಡನು ನಗೆಯ ಮೊನೆ ಮಿನುಗೆ
ತಿರುಗಿ ನೋಡುತ ತಲೆಯ ದೆಸೆಯಲಿ
ಕುರುಕುಲೇಶನನತಿ ವಿಕಾರತೆ
ಯಿರವ ಕಂಡನಿದೇನಿದೇನೆಂದಸುರರಿಪು ನುಡಿದ ೨೫

ವೀಳಯವ ತಾ ಕೊಂಡು ಕುರು ಭೂ
ಪಾಲ ಪಾರ್ಥರಿಗಿತ್ತು ಲಕ್ಷ್ಮೀ
ಲೋಲ ನುಡಿದನು ಉಭಯ ರಾಯರಿಗಿತ್ತ ಬರವೇನು
ಹೇಳಿರೈ ಬರವಘಟಿತವಲಾ
ಮೇಳವೇ ಕಡುಮಾನ್ಯರೆಮ್ಮೀ
ಯಾಲಯಕೆ ಬರಲೇನೆನಲು ಕುರು ರಾಯನಿಂತೆಂದ ೨೬

ಯಾದವರು ಕೌರವರೊಳುಂಟೇ
ಭೇದವಾವಯಿತಂದರೆಮ್ಮೊಳ
ಗಾದ ಲಾಘವವೇನು ನಿಮ್ಮವೊಲಾರು ಸಖರೆಮಗೆ
ಸೋದರರ ಮನ ಕದಡಿದವು ದಾ
ಯಾದ ವಿಷಯದಲಿನ್ನು ಧರಣಿಗೆ
ಕಾದುವೆವು ನಮ್ಮಿಬ್ಬರಿಗೆ ಬಲವಾಗಬೇಕೆಂದ ೨೭

ಕೌರವೇಶ್ವರ ಕೇಳು ಧರಣೀ
ನಾರಿಯನಿಬರಿಗೊಕ್ಕತನವಿ
ದ್ದಾರ ಮೆಚ್ಚಿದಳಾರ ಸಂಗಡ ವುರಿಯ ಹಾಯಿದಳು
ಭೂರಿ ಮಮಕಾರದಲಿ ನೃಪರು ವಿ
ಚಾರಿಸದೆ ಧರೆಯೆಮ್ಮವೆಂದೇ
ನಾರಕದ ಸಾಮ್ರಾಜ್ಯಕೈದುವರೆಂದು ಹರಿ ನುಡಿದ ೨೮

ನಾಡಿಗೋಸುಗ ಸೋದರರು ಹೊ
ಯ್ದಾಡಿ ಹರಿಹಂಚಾದರೆಂಬುದ
ನಾಡದಿಹುದೇ ಲೋಕ ಕಮಲಜನುಸಿರಿಹನ್ನೆಬರ
ಬೇಡಕಟ ನಿಮ್ಮೊಳಗೆ ನೀವ್ ಕೈ
ಗೂಡಿ ಬದುಕುವುದೊಳ್ಳಿತಾವ್ ನೆರೆ
ನೋಡಿ ಸಂತಸಬಡುವೆವೆಂದನು ರುಕ್ಮಿಣೀರಮಣ ೨೯

ತಗರೆರಡ ಖತಿಗೊಳಿಸಿ ಬಲುಗಾ
ಳಗವ ನೋಡುವರಂತೆ ನಿಮ್ಮನು
ತೆಗೆತೆಗೆದು ಕಲಿಮಾಡಿ ಬಿಡುವರು ಖುಲ್ಲರಾದವರು
ನಗುತ ಹೆರೆ ಹಿಂಗುವರು ಪಿಸುಣರು
ಬಗುಳಿದವದಿರು ಬಳಿಕ ಕಡೆಯಲಿ
ಹೊಗುವಿರೈ ನೀವಿಬ್ಬರಪಕೀರಿತಿಯ ಹಾದರಕೆ ೩೦

ಅವಧರಿಸು ಮುರವೈರಿ ಧರ್ಮ
ಶ್ರವಣಕೋಸುಗ ಬಾರೆವಾವ್ ಪಾ
ರ್ಥಿವರ ಪಂಥದ ಕದನ ವಿದ್ಯಾಕಾಮವೆಮಗಾಯ್ತು
ನಿವಗೆ ನಾವಿತ್ತಂಡ ಸರಿ ಪಾಂ
ಡವರಿಗೆಯು ಮನದೊಲವಿನಲಿ ಕೌ
ರವರಿಗೆಯು ಬಲವಾಗಬೇಕೆಂದನು ಸುಯೋಧನನು ೩೧

ಎನಲು ತಂಬುಲ ಸೂಸೆ ನಗುತ
ರ್ಜುನನ ನೋಡಿದನಸುರರಿಪು ನಿ
ನ್ನನುವ ಹೇಳೈ ಪಾರ್ಥಯೆನೆ ತಲೆವಾಗಿ ಕೈಮುಗಿದು
ಎನಗೆ ಮತ ಬೇರೇನು ದುರಿಯೋ
ಧನನ ಮತವೇ ನನ್ನ ಮತ ನಿ
ಮ್ಮನುನಯವೆ ನಯವೆಮ್ಮೊಳೀ ಸ್ವಾತಂತ್ರ್ಯವಿಲ್ಲೆಂದ ೩೨

ಆದಡಾವಿಹೆವೊಂದು ಕಡೆಯಲಿ
ಕಾದುವವರಾವಲ್ಲ ಬಲನೊಳು
ಯಾದವರು ಕೃತವರ್ಮ ನಾರಾಯಣ ಮಹಾಸೇನೆ
ಕಾದುವವರಿವರೊಂದು ದೆಸೆಯೆರ
ಡಾದುದಿವರೊಳು ಮೆಚ್ಚಿದುದ ನೀ
ನಾದರಿಸಿ ವರಿಸೆಂದು ಪಾರ್ಥಂಗಸುರರಿಪು ನುಡಿದ ೩೩

ಮುರಮಥನ ಚಿತ್ತೈಸು ಕೌರವ
ರರಸನತಿ ಸಿರಿವಂತನಿದ ಸಂ
ತರಿಸಲಾಪನು ಬಹಳ ಯಾದವ ಸೈನ್ಯ ಸಾಗರವ
ಧರೆಯ ಸಂಪದವಿಲ್ಲದಡವಿಯ
ತಿರುಕರಾವಿನಿಬರನು ಸಲೆ ಸಂ
ತರಿಸಲಾಪೆವೆ ಕೃಷ್ಣ ನೀನೇ ಸಾಕು ನಮಗೆಂದ ೩೪

ನಾವು ಬಡವರು ಬಡವರಿಗೆ ದಿಟ
ನೀವೆ ಬೆಂಬಲವೆಂಬ ಬಿರುದನು
ದೇವ ಕೇಳಿದು ಬಲ್ಲೆವೆಂದನು ಪಾರ್ಥ ಕೈಮುಗಿದು
ನೀವು ಸುಖದಲಿ ಪಾಂಡವರನು
ಜ್ಜೀವಿಸುವುದೆಮಗುಳಿದ ಯದು ಭೂ
ಪಾವಳಿಯ ಕೃಪೆ ಮಾಡಬೇಕೆಂದನು ಸುಯೋಧನನು ೩೫

ಮರೆಯ ಮಾತುಗಳೇಕೆ ಪಾಂಡವ
ರೆರಕ ನಿಮ್ಮಲಿ ಹಿರಿದು ಪಾರ್ಥಗೆ
ಮರುಗುವಿರಿ ಹಿರಿದಾಗಿ ಮನಮೆಚ್ಚುಂಟು ನಿಮ್ಮೊಳಗೆ
ಉರುವ ಕಾರ್ಯಕೆ ಕಡೆಯಲಾವೇ
ಹೊರಗು ಸಾಕಂತಿರಲಿ ನೀ ಹೊ
ಕ್ಕಿರಿಯಲಾಗದು ಕೃಷ್ಣಯೆಂದನು ಕೌರವರ ರಾಯ ೩೬

ಮೊಲೆಯನುಂಬಂದೊಬ್ಬ ದನುಜೆಯ
ಹಿಳಿದೆವೊದೆದೆವು ಶಕಟನನು ತನು
ಗಳೆದೆ ಧೇನುಕ ವತ್ಸ ನಗ ಹಯ ವೃಷಭ ಭುಜಗರನು
ಬಲುಗಜವ ಮಲ್ಲರನು ಮಾವನ
ನೆಳೆದು ಮಾಗಧ ಬಲವ ಬರಿ ಕೈ
ದಳಿಸಿದೆವು ದಾನವರ ಹಿಂಡಿದೆವಾಹವಾಗ್ರದಲಿ ೩೭

ಕಾಲಯವನನ ದಂತವಕ್ತ್ರನ
ಸೀಳಿದೆವು ಮುರ ನರಕ ಕುಂಭನ
ಸಾಲುವನ ಪೌಂಡ್ರಕನ ಡಿಬಿಕನ ಹಂಸ ಮೋಹರವ
ಕಾಳಗದೊಳಿಟ್ಟೊರಸಿ ಬಾಣನ
ತೋಳ ತರಿವಂದಾಯ್ತು ಧಾಳಾ
ಧೂಳಿಯಾಹವವಿಂದುಮೌಳಿಯೊಳೆಮಗೆ ಮುಳಿಸಿನಲಿ ೩೮

ಹಸುಳೆತನ ಮೊದಲಾಗಿ ಬಲು ರ
ಕ್ಕಸರೊಡನೆ ತಲೆಯೊತ್ತಿರಣದಾ
ಯಸವ ಸೈರಿಸಿ ಹೊಯ್ದು ಕೊಂದೆವು ಕೋಟಿ ದಾನವರ
ಮಿಸುಕಲಾರೆವು ಚಕ್ರಭಂಡಾ
ರಿಸಿತು ಮುನ್ನಿನ ಜವ್ವನದ ಬಲ
ಮಸುಳಿತಾವುಂಡಾಡಿ ಭಟ್ಟರು ನೃಪತಿ ಕೇಳೆಂದ ೩೯

ಎನಲು ಕರ ಲೇಸೆಂದು ದುರಿಯೋ
ಧನನು ಕಳುಹಿಸಿಕೊಂಡು ಬಲರಾ
ಮನನು ಕೃತವರ್ಮನನು ಕಂಡನು ನಿಖಿಳ ಯಾದವರ
ವಿನುತಬಲ ಸಹಿತೊಲವಿನಲಿ ಹ
ಸ್ತಿನಪುರಿಗೆ ಹಾಯಿದನು ಬಳಿಕೀ
ದನುಜರಿಪು ನಸುನಗುತಲಿಂತೆಂದನು ಧನಂಜಯಗೆ ೪೦

ಸುರಗಿಯನು ಬಿಸುಟೊರೆಯನಂಗೀ
ಕರಿಸಿದಂದದಲಾಹವದ ಧುರ
ಭರದ ಯಾದವ ಬಲವನೊಲ್ಲದೆ ಮಂದ ಮತಿಯಾಗಿ
ಮರುಳೆ ಕಾದದ ಕಟ್ಟದೆಮ್ಮನು
ಬರಿದೆ ಬಯಸಿದೆಯಿದನು ಕೇಳ್ದೊಡೆ
ಮರುಳುಗಟ್ಟದೆ ಮಾಣ್ಪರೇ ನಿಮ್ಮಣ್ಣ ತಮ್ಮದಿರು ೪೧

ಎನಲು ಗಹಗಹಿಸಿದನಿದಾರಿಗೆ
ಮನವ ಕದ್ದಾಡುವಿರಿ ನಿಜ ಶಿ
ಷ್ಯನಲಿ ನಾಟಕದಿಂದ್ರಜಾಲವೆ ನಿಮ್ಮ ಗರುಡಿಯಲಿ
ಎನಗೆ ಶ್ರಮವುಂಟದು ನಿಲಲಿ ಯೆ
ನ್ನನುಜರಗ್ರಜರರಿಯರೇ ನಿ
ಮ್ಮನುಪಮಿತ ಮಹಿಮಾವಲಂಬವನೆಂದನಾ ಪಾರ್ಥ ೪೨

ನಾವು ಬರಿಗೈಯವರು ಬರಲೆಮ
ಗಾವುದಲ್ಲಿಯ ಕೆಲಸ ಉಂಡುಂ
ಡಾವು ಕುಳ್ಳಿಹರಲ್ಲ ಹಂಗಾಗಿರೆವು ಕದನದಲಿ
ದೇವನೆಂದೇ ನೀವು ಬಗೆವಿರಿ
ದೇವತನ ನಮ್ಮಲ್ಲಿ ಲವವಿ
ಲ್ಲಾವು ಬಲ್ಲೆವು ಬಂದು ಮಾಡುವುದೇನು ಹೇಳೆಂದ ೪೩

ದೇವ ಮಾತ್ರವೆ ನೀವು ದೇವರ
ದೇವರೊಡೆಯರು ಹೊಗಳುವರೆ ವೇ
ದಾವಳಿಗಳಳವಲ್ಲ ಸಾಕಾ ಮಾತದಂತಿರಲಿ
ನಾವು ಭಕುತರು ಭಕುತ ಭೃತ್ಯರು
ನೀವು ಸಾರಥಿಯಾಗಿ ಭೃತ್ಯನ
ಕಾವುದೆಂದರ್ಜುನು ಹಣೆ ಚಾಚಿದನು ಹರಿಪದಕೆ ೪೪

ಎನಲು ನಗುತೆತ್ತಿದನು ಸಾರಥಿ
ತನವ ಕೈಕೊಂಡನು ಕೃಪಾಳುವಿ
ನನುನಯವ ನಾನೆತ್ತ ಬಲ್ಲೆನು ಭೃತ್ಯವರ್ಗದಲಿ
ತನಗಹಂಕೃತಿಯಿಲ್ಲ ವೈರೋ
ಚನಿಯ ಪಡಿಹಾರಿಕೆ ಕಿರೀಟಿಯ
ಮನೆಯ ಬಂಡಿಯ ಬೋವನಾದನು ವೀರನಾರಯಣ ೪೫

(ಸಂಗ್ರಹ: ಹನ್ಸಿಕಾ ಪ್ರಿಯದರ್ಶಿನಿ)

ಭೀಷ್ಮಪರ್ವ: ೦೨. ಎರಡನೆಯ ಸಂಧಿ

ಸೂ: ಸಾಮದಲಿ ಪರಬಲದ ಸುಭಟ
ಸ್ತೋಮವನು ತನ್ನೊಳಗು ಮಾಡಿಯೆ
ಭೂಮಿಪತಿ ಯಮನಂದನನು ಸಂಗ್ರಾಮಕನುವಾದ

ಕೇಳು ಜನಮೇಜಯ ಧರಿತ್ರೀ
ಪಾಲ ಧೃಷ್ಟದ್ಯುಮ್ನ ಭೀಷ್ಮರ
ಪಾಳಯದೊಳಂದಮಮ ಕೈಗೈದಿಳೆಗೆ ಹೊಸತೆನಿಸಿ
ಕಾಳೆಗಕ್ಕುನುವಾಗಿ ರಥತುರ
ಗಾಳಿ ಕರಿ ಕಾಲಾಳು ದೊರೆಗಳ
ಮೇಲುಗೈಚಮರಿಗಳನೀಕ್ಷಿಸುತಿದ್ದುದುಭಯಬಲ ೧

ಮಡದ ಸೋಂಕಿಂ ಮುನ್ನ ಗಗನವ
ತುಡುಕ ಬಗೆದವು ತೇಜಿಗಳು ನಸು
ಸಡಿಲಬಿಡೆ ವಾಘೆಯಲಿ ಚಿಗಿದವು ರಥದ ವಾಜಿಗಳು
ತುಡುಕುವಂಕುಶದಿಂದ ಮುನ್ನಿಳೆ
ಯೊಡೆಯ ಗಜ ಗಾಢಿಸಿದವರಸರ
ಬಿಡುಹು ತಡೆದೆಡಗಲಸಬಗೆದುವು ವಿಗಡ ಪಾಯದಳ ೨

ಗಜದ ಬಲುಗರ್ಜನೆಯ ವಾಜಿ
ವ್ರಜದ ಹೇಷಿತರವದ ತೇರಿನ
ಗಜಬಜದ ಕಾಲಾಳು ಕಡುಹಿನ ಬೊಬ್ಬೆಯಬ್ಬರದ
ಗಜರುವಗ್ಗದ ಬೊಗ್ಗುಗಳ ದಿ
ಗ್ವ್ರಜವ ನುಡಿಸುವ ರಾಯಗಿಡಿಗನ
ವಿಜಯಬಲ ತೊಡರಿಕ್ಕಿತೈ ಕಲ್ಪಾಂತ ಸಾಗರಕೆ ೩

ತಿಗಡಲೊದರುವ ಹರಿಗೆಗಳ ಗೌ
ರಗಿವ ಹೆಗ್ಗಹಳೆಗಳ ಹೊನ್ನಾ
ಯುಗದ ಖಡುಗದ ಗಜರು ಡೊಂಕಣಿಗಳ ಝಣತ್ಕೃತಿಯ
ಬಿಗಿದ ಬಿಲು ಬೊಬ್ಬೆಗಳ ಬಿರುದರ
ವಿಗಡ ಮೂದಲೆಗಳ ಮಹಾಧ್ವನಿ
ಬಿಗಿದುದೈ ತಾವರೆಯ ತನಯನ ಕರ್ಣ ಕೋಟರವ ೪

ಕುಣಿವ ಕುದುರೆಯ ಮದದ ಬಲುಭಾ
ರಣೆಯಲೊಲೆವಾನೆಗಳ ತುರಗವ
ಕೆಣಕಿ ಸರಳಿಸಿ ಹಿಡಿವ ತೇರಿನ ಸೂತರೋಜೆಗಳ
ಅಣೆವ ಹರಿಗೆಯನೊಬ್ಬನೊಬ್ಬರ
ನಣಸಿನಲಿ ತಿವಿದಗಿವ ಭಟರೊ
ಡ್ಡಣೆ ಸಘಾಡಿಸಿತೆರಡುಬಲದಲಿ ಭೂಪ ಕೇಳೆಂದ ೫

ಝಳಪದಲಿ ಬೊಬ್ಬಿಡುವಡಾಯುಧ
ಹೊಳವುಗಳ ಡೊಂಕಣಿಯ ತಳಪದ
ಬೆಳಗುಗಳ ಬಟ್ಟೇರ ಧಾರೆಯ ಬಳ್ಳಿಮಿಂಚುಗಳ
ಅಲಗಿನುಬ್ಬರಗಿಡಿಯ ಹಬ್ಬುಗೆ
ಥಳಥಳಿಸಿ ಸೈಗರೆದುದೈ ಹೆ
ಬ್ಬಲ ದಿವಾಕರಶತವನೆನೆ ಹೆಸರಿಡುವನಾರೆಂದ ೬

ಕೇಳು ಜನಮೇಜಯ ಧರಿತ್ರೀ
ಪಾಲ ಭೀಷ್ಮನ ಹೊರೆಗೆ ಕುರುಭೂ
ಪಾಲ ಬಂದನು ಬಿನ್ನವಿಸಿದನು ಮುಕುಳಕರನಾಗಿ
ಮೇಳದಲಿ ಮಂಡಳಿಸಿದರಿನೃಪ
ಜಾಲದಲಿ ಯಮಸೂನುವಾವನು
ಮೇಲೆ ಭೀಮಾರ್ಜುನರ ವಿವರಿಸಿ ತೋರಬೇಕೆಂದ ೭

ನಸುನಗೆಯ ಚೂಣಿಯಲಿ ವದನದ
ರಸುಮೆ ಝಳಪಿಸೆ ಕೌರವೇಂದ್ರಂ
ಗುಸುರಿದನು ಕಲಿಭೀಷ್ಮನವಧರಿಸೈ ಮಹೀಪತಿಯೆ
ಪಸರಿಸಿದ ಮುಗಿಲೊಡ್ಡಿನಲಿ ಮಿಂ
ಚೆಸವವೊಲು ಗಜದಳದ ಮಧ್ಯದೊ
ಳೆಸೆವನಾತನು ವೀರಧೃಷ್ಟದ್ಯುಮ್ನ ನೋಡೆಂದ ೮

ಇವ ಕಣಾ ಪಾಂಡವರ ಸೇನಾ
ರ್ಣವಕೆ ನಾಯಕನಿವನ ಕೆಲಬಲ
ದವರು ತೆಕ್ಕೆಯ ತೇರ ತೇಜಿಯ ಥಟ್ಟಿನುನ್ನತಿಯ
ಬವರಿಗರು ಪಾಂಚಾಲಕುಲ ಸಂ
ಭವರು ದ್ರುಪದ ಸಹೋದರರು ಮ
ತ್ತಿವರು ಸೃಂಜಯ ವರ ಯುಧಾಮನ್ಯೂತ್ತಮೌಂಜಸರು ೯

ಡೊಂಕಣಿಯ ಹೊದರುಗಳಲೆಡಬಲ
ವಂಕದಾನೆಯ ಥಟ್ಟುಗಳ ನಿ
ಶ್ಶಂಕಮಲ್ಲನು ದ್ರುಪದನೀತ ವಿರಾಟನೃಪನೀತ
ಮುಂಕುಡಿಯ ನಾಯಕರಿವರು ಪತಿ
ಯಂಕಕಾರರು ಇವರ ಬಳಿಯಲಿ
ಬಿಂಕದೆರಡಕ್ಷೋಣಿ ಬಲವದೆ ರಾಯ ನೋಡೆಂದ ೧೦

ಅವರ ಮೋಹರದಾಚೆಯಲಿ ನಿಂ
ತವರು ಕೊಂತೀಭೋಜ ಕೇಕಯ
ರವರ ಬಳಿಯಲಿ ತಳಿತುದೆರಡಕ್ಷೋಹಿಣೀ ಸೇನೆ
ಅವರ ಹತ್ತಿರೆ ಮೋಹರಿಸಿ ನಿಂ
ದವರು ಪಾಂಡ್ಯ ಶಿಖಂಡಿ ಸೋಮಕ
ರವರ ಮೋಹರದೊಳಗೆ ನೋಡಕ್ಷೋಹಿಣೀ ಸೇನೆ ೧೧

ಅರೆನೆಲೆಯ ದಳದತ್ತ ದೃಷ್ಟಿಯ
ಹರಿಯಬಿಡು ನೋಡಲ್ಲಿ ಕೌಂತೇ
ಯರ ಕುಮಾರರನಮಲ ಪಂಚ ದ್ರೌಪದೀಸುತರ
ಉರಿಯ ಕರುವಿಟ್ಟಂತೆ ವಿಲಯದ
ಹರನ ಖತಿ ಹೊಗೆವಂತೆ ಸಿಡಿಲಿನ
ಹೊರಳಿ ಹೊದರೆದ್ದಂತೆ ನಿಂದವನವ ಘಟೋತ್ಕಚನು ೧೨

ಭೀಮಸೇನನ ಮಗನವನು ಸಂ
ಗ್ರಾಮ ಚಾಪಟನವನ ಬಳಿಯಲಿ
ತಾಮಸದ ಬಲುಮೊಗದ ಹೊಗರಿನ ಹೊಳೆವ ದಾಡೆಗಳ
ಕಾಮರೂಪಿಗಳೊಂದು ಕೋಟಿ ಸ
ನಾಮದೈತ್ಯರು ಕುಂಭಕರ್ಣ
ಸ್ತೋಮವೆನಲದೆ ಲಯಕೃತಾಂತನ ಕ್ರೂರ ಪರಿವಾರ ೧೩

ಅವರ ಹೊರೆಯಲಿ ಫಲುಗುಣಗೆ ಮಲೆ
ವವರ ಗಂಡನು ರಿಪುಕುಮಾರಕ
ನಿವಹ ಕಾಳಾನಳನು ನೋಡಭಿಮನ್ಯುವರ್ಜುನನ
ಕುವರನಿವ ಮಗುವಲ್ಲ ಬಲುಗೆ
ಯ್ಯವನ ಮೋಹರದೊತ್ತಿನಲಿ ನಿಂ
ದವರು ಸಾತ್ಯಕಿ ಚೇಕಿತಾನ ಪ್ರಮುಖ ನಾಯಕರು ೧೪

ಅವರೊಳೊಂದಕ್ಷೋಹಿಣಿಯು (ಪಾ: ಯದು) ಮಾ
ಧವನ ಮನೆಯದು ಧೃಷ್ಟಕೇತು
ಪ್ರವರನಾತನು ಚೈದ್ಯನಂದನನವರ ಕಂಡಿಹನು
ಅವರ ಹೊರೆಯಲಿ ವೀರ ಸೇನಾ
ನಿವಹದೊಳು ಸಹದೇವನಾತನ
ಸವಹರೆಯ ನಕುಲಾಂಕನಿವರಾಹವ ಧುರಂಧರರು ೧೫

ಇತ್ತಲಿದು ಕಲ್ಪಾಂತರುದ್ರನ
ಮೊತ್ತ ಕಾಳೋಗರನ ಜಂಗುಳಿ
ಮತ್ಯುವಿನ ಮೋಹರ ಕೃತಾಂತನ ಥಟ್ಟು ಭೈರವನ
ತೆತ್ತಿಗರ ದಾವಣಿಯೊಳಣ್ಣನ
ಮತ್ತವಾರಣ ಭೀಮಸೇನನ
ನಿತ್ತ ನೋಡೈ ಮಗನೆ ಕುರುಕುಲ ಕೇಣಿಕಾರನನು ೧೬

ಕೆಲದಲಾ ತರುವಾಯಲಾಹವ
ದಳಲಿಗರ ಮೇಳದಲಿ ಮುಕುಟದ
ಲಲಿತರತ್ನ ಪ್ರಭೆಯ ಲಹರಿಯ ಲಾವಣಿಗೆ ಮಿಗಲು
ಚಲತುರಂಗದ ಭಾರಿಯಾನೆಯ
ದಳದ ರಥದ ಪದಾತಿಮಧ್ಯದ
ಹೊಳಹಿನಲಿ ನಿಂದಾತನಾತ ಮಹೀಶ ಧರ್ಮಜನು ೧೭

ಆತನೆಡವಂಕದಲಿ ಹನುಮನ
ಕೇತನದ ಗರುವಾಯಿಯಲಿ ನವ
ಶಾಂತಕುಂಭವರೂಥದಲಿ ನೆರೆ ತೀವಿದಸ್ತ್ರದಲಿ
ನೂತನಾಶ್ವ ನಿಕಾಯ ಖುರಪುಟ
ಧೂತಧೂಳೀಪಟಲವಿಹಿತ ನಿ
ಶಾತಘನ ಜಯಯುವತಿವಿಟನರ್ಜುನನ ನೋಡೆಂದ ೧೮

ತಿಳಿಯಲೊಬ್ಬನ ರೋಮರೋಮದ
ಕುಳಿಯೊಳಗೆ ಬ್ರಹ್ಮಾಂಡಕೋಟಿಯ
ಸುಳಿವು ಗಡ ಶ್ರುತಿನಿಕರವೊರಲಿದರೊಳಗುದೋರ ಗಡ
ಹಲವು ಮಾತೇನಾತನೀತನ
ಬಳಿಯ ಬಂಡಿಯ ಬೋವನಾಗಿಯೆ
ಸುಳಿವನಾತನ ನೋಡು ಮಗನೇ ವೀರನರಯಣನ ೧೯

ಅದೆ ದುರಂತದ ದುರುಳ ದೊದ್ದೆಯ
ಹದನ ಬಣ್ಣಿಸಲೆನಗೆ ನೂಕದು
ತುದಿಯಲರಿವೆನು ದಳದ ಮನ್ನೆಯ ಮಂಡಲೀಕರಲಿ
ಕದನವಿದು ಭಾರಂಕವಾರ
ಭ್ಯುದಯ ತಲೆದೋರುವುದೊ ನಮಗೇ
ಕಿದರ ಚಿಂತೆ ಮುರಾರಿ ಬಲ್ಲನು ಕಂದ ಕೇಳೆಂದ ೨೦

ಅವರೊಳೇಳಕಕ್ಷೋಣಿಬಲ ನ
ಮ್ಮವರೊಳಗೆ ಹನ್ನೊಂದು ಮತ್ತವ
ರಿವರ ಸಖ್ಯಕೆ ನೆರೆದುದೇಕಾದಶಶತಕ್ಷೋಣಿ
ತವಿಸುವರೆ ನನಗೊಂದು ದಿನ ಮೂ
ದಿವಸದಲಿ ಗುರುವೈದು ದಿವಸಕೆ
ರವಿಜ ನಿಮಿಷಕೆ ದ್ರೌಣಿ ನಿಮಿಷಾರ್ಧಕೆ ಧನಂಜಯನು ೨೧

ಎನಲು ಗುರುತನಯನ ಸಘಾಟಕೆ
ಕೊನರಿತಾತನ ಮನವಜಾಂಡಕೆ
ತನುಪುಲಕದುಬ್ಬಿನಲಿ ಪಾರ್ಥನ ಪಟುಪರಾಕ್ರಮಕೆ
ಮೊನೆಗಣೆಯ ನುಡಿ ಸೋಂಕೆ ಕರ್ಣವ
ನಿನಿತು ಕುಸಿದ ರಸಾತಳಕೆ ಕುರು
ಜನಪನನಿಬದ್ಧ ಪ್ರಲಾಪವ ಬಿಡಿಸಿದನು ಭೀಷ್ಮ ೨೨

ತಾಗಲನುಗೈದುಭಯಬಲ ಕೈ
ಲಾಗನೀಕ್ಷಿಸುತಿರಲು ರಿಪುಬಲ
ಸಾಗರದ ಸೌರಂಭವನು ಮಿಗೆ ನೋಡಿ ಧರ್ಮಜನು
ತೂಗಿದನು ಶಿರವನು ಮಹಾಹವ
ಮೀಗಲಾಗದ ಮುನ್ನ ಭೇದದ
ಲಾಗಿನಲಿ ಭೀಷ್ಮಾದಿಗಳ ಮನವೊಲಿಸಬೇಕೆಂದ ೨೩

ಬಂದು ಭೀಷ್ಮನ ಚರಣ ಕಮಲ
ದ್ವಂದ್ವದಲಿ ಚಾಚಿದನು ಮಕುಟವ
ನಿಂದಿನಾಹವದೊಳಗೆ ನಮಗಿನ್ನೇನು ನಿರ್ವಾಹ
ನಿಂದು ನೀವ್ ಕಾದುವರೆ ನಮಗಿ
ನ್ನೆಂದು ಹರಿವುದು ಬವರವೆಮಗೇ
ನೆಂದು ಬೆಸಸಿದಿರೆನುತ ಕರುಣವ ತೋರಿದನು ಭೂಪ ೨೪

ನೀವರಿಯಲಾವುತ್ತರಾಯಿಗ
ಳಾವ ಪರಿಯಲು ಕೌರವರು ಬಹ
ಳಾವಮಾನವನೆಮಗೆ ನೆಗಳಿದರೆಮ್ಮ ಸತ್ಯವನು
ನೀವು ಮೆಚ್ಚಲು ನಡೆಸಿದೆವು ತಲೆ
ಗಾವುದುಂಟೇ ಕರುಣಿಸಲ್ಲದ
ಡಾವ ಹದನೆಂದವಗೆ ನೇಮವ ಕೊಟ್ಟು ಕಳುಹೆಂದ ೨೫

ಏಳು ಮಗನೇ ನಮ್ಮ ಮತಿಯನು
ಕೇಳೆನುತ ಭೂಪಾಲ ತಿಲಕನ
ಮೌಳಿಯನು ನೆಗಹಿದನು ಗಂಗಾಸೂನು ನಸುನಗುತ
ಆಳುಗೊಂಡನು ಕೌರವನು ಪರ
ರಾಳುತನವೆಮಗಾಯ್ತು ಪರಸೇ
ವಾ ಲಘುಸ್ಥಿತರೆಮ್ಮನೇತಕೆ ನುಡಿಸಿದಪೆಯೆಂದ ೨೬

ಹಿರಿಯನಾಗಲಿ ಸುಜನನಾಗಲಿ
ಗರುವನಾಗಲಿ ಅರ್ಥವುಳ್ಳನ
ಚರಣಸೇವಾಪರರು ಜಗದಲಿ ವರ್ತಮಾನವಿದು
ಪರರ ಭಜಕರೊಳಾವಗುಣವಾ
ವಿರವದಾವಗ್ಗಳಿಕೆ ಯಾವುದು
ಗರುವತನವೈ ತಂದೆ ಪುರುಷಾಧಮನು ತಾನೆಂದ ೨೭

ಕೌರವನ ಧನವೆಂಬ ಘನಸಂ
ಸಾರಗುಣದೊಳು ಬದ್ಧನಾದೆನು
ಧೀರ ನಾನೇಗೈವೆನೆನೆ ಯಮಸೂನು ಕೈಮುಗಿದು
ವೈರವೃತ್ತಿಯ ರಣದೊಳೆಮಗಿ
ನ್ನಾರು ಗತಿ ನೀನುಭಯನೃಪರಿಗೆ
ಕಾರುಣಿಕ ನೀ ಮುನಿದಡೆಮಗಿನ್ನಾಸೆಯಿಲ್ಲೆಂದ ೨೮

ಮಾನನಿಧಿ ಕೇಳ್ ಕೌರವಂಗಾ
ಧೀನವೆನ್ನಯ ತನು ವಿಧಾತ್ರಾ
ಧೀನವೆನ್ನಯ ಜೀವವದು ಕಾರಣದಿನಾವಹಕೆ
ನೀನು ಚಿಂತಿಸಬೇಡ ನನ್ನವ
ಸಾನಕಾಲಕೆ ಮತ್ತೆ ಬರಲು ನಿ
ದಾನವನು ನೆರೆ ಬುದ್ಧಿಗಲಿಸುವೆನೀಗ ಮರಳೆಂದ ೨೯

ಎನೆ ಹಸಾದವೆನುತ್ತ ಯಮನಂ
ದನನು ಕಳುಹಿಸಿಕೊಂಡು ಗಂಗಾ
ತನುಜ(ನು)ಚಿತೋಕ್ತಿಗಳ ನೆನೆದಡಿಗಡಿಗೆ ಪುಳಕಿಸುತ
ವಿನುತಮತಿ ನಡೆತರಲು ಸುಭಟರು
ತನತನಗೆ ತೊಲಗಿದರು ಪಾಂಡವ
ಜನಪ ಮೈಯಿಕ್ಕಿದನು ದ್ರೋಣನ ಚರಣ ಕಮಲದಲಿ ೩೦

ಅರಸ ಬಂದನಪೂರ್ವವಾಯಿತು
ದರುಶನವು ತನಗೆನುತ ಗರುಡಿಯ
ಗುರು ಮಹೀಪಾಲಕನ ಮಕುಟವನೆತ್ತಿದನು ಬಳಿಕ
ಬರಸೆಳೆದು ಬಿಗಿಯಪ್ಪಿದನು ಸಂ
ಗರದ ಸಮಯದಲೇಕೆ ಬಂದಿರಿ
ಭರವಸದ ಬಗೆಯೇನು ಬಿನ್ನಹ ಮಾಡು ಸಾಕೆಂದ ೩೧

ಎವಗೆ ದೈವವು ನೀನು ಗುರು ನೀ
ನೆವಗೆ ತಾತನು ನೀನು ಮಹದಾ
ಹವದೊಳಗೆ ಪತಿಕರಿಸಿ ರಕ್ಷಿಸಲೊಡೆಯ ನೀನೆಮಗೆ
ಅವನಿಯಭಿಲಾಷೆಯಲಿ ತೆತ್ತುದು
ಬವರವೆಮಗಿನ್ನೇನು ಗತಿ ಕೌ
ರವ ಜಯೋಪಾಯಕ್ಕೆ ಹದನೇನೆಂದು ನೃಪ ನುಡಿದ ೩೨

ಅರಸ ಕೇಳರ್ಥಕ್ಕೆ ಧರಣೀ
ಶ್ವರರ ಕಿಂಕರರರ್ಥ ತಾ ಕಿಂ
ಕರತೆಯನು ಮಾಡುವುದು ಜಗದಲಿ ವರ್ತಮಾನವಿದು
ನಿರುತ ಕೌರವನರ್ಥದಲಿ ಕಿಂ
ಕರತೆ(ಯೆ)ಮಗಾಯಿತ್ತು ರಾಜ್ಯೈ
ಶ್ವರಿಯ ಸೇವಾಪರರಿಗೀ ಸ್ವಾತಂತ್ರ್ಯವಿಲ್ಲೆಂದ ೩೩

ಆದರೆಮಗಿನ್ನೇನು ಗತಿ ರಣ
ವಾದಸಿದ್ಧಿಯದೆಂತು ಜಯಸಂ
ಪಾದಕರು ನಮಗಾರೆನಲು ಗುರು ಕೇಳಿ ನಸುನಗುತ
ಕಾದುವಾ ಸಮಯದೊಳಗಪ್ರಿಯ
ವಾದ ನುಡಿಗಳ ಕೇಳಿದಾಕ್ಷಣ
ಮೇದಿನಿಯೊಳಾವಿರೆವು ಚಿಂತಿಸಬೇಡ ಹೋಗೆಂದ ೩೪

ಎನಲು ಪರಿತೋಷದಲಿ ಯಮನಂದ
ನನು ಕಳುಹಿಸಿಕೊಂಡು ನಡೆತಂ
ದನು ಮಹಾಹವರಂಗಮಧ್ಯದ ಕೃಪನ ಹೊರೆಗಾಗಿ
ವಿನಯದಲಿ ಬಿನ್ನಯಿಸೆ ಕೃಪನೆಂ
ದನು ನಿಧಾನಿಸಲಾವವಧ್ಯರು
ಜನಪ ನಿನ್ನನು ನಾವು ಕೊಲ್ಲೆವು ಮರಳು ನೀನೆಂದ ೩೫

ಕೃಪನ ಬೀಳ್ಕೊಂಡತುಳಜಯಲೋ
ಲುಪನು ಶಲ್ಯನ ಬಂದು ಕಂಡನು
ವಿಪುಳಮತಿ ಮಾತಾಡಿದನು ನಿಜರಾಜಕಾರಿಯವ
ಕೃಪೆಯ ಮಾಡುವುದೆವಗೆ ರಣದಲಿ
ತಪನತನಯನ ತೇಜವನು ನಿ
ಷ್ಕೃಪೆಯೊಳವಗಡಿಸೆಂದು ಶಲ್ಯನೊಳಭಯವನು ಪಡೆದ ೩೬

ಬಲದೊಳಗೆ ಬೇಹವರ ನಾಲ್ವರ
ನೊಳಗುಮಾಡಿ ಧರಾಧಿಪನು ಮನ
ಗೆಲವಿನಲಿ ಮರಳಿದನು ಕೌರವ ಮೋಹರವನುಳಿದು
ತಿಳಿದು ತನ್ನೊಳು ಭೀಮಸೇನನ
ಬಲು ಗದಾಘಾತದಲಿ ಕುರುಕುಲ
ವಳಿವುದೆಂದು ಯುಯುತ್ಸು ರಥದಿಂದಿಳಿದು ನಡೆತಂದ ೩೭

ಎರಡು ಬಲ ಬೆರಗಾಗಿ ನೋಡು
ತ್ತಿರೆ ಯುಯುತ್ಸು ಮಹೀಶನಂಘ್ರಿಗೆ
ಕರವ ಮುಗಿದೆರಗಿದರೆ ಹಿಡಿದೆತ್ತಿದನು ಕರುಣದಲಿ
ಧರಣಿಪತಿ ನೀನಾರೆನಲು ಕೇ
ಳರಸ ಕೌರವನನುಜ ನಿಮ್ಮನು
ಶರಣುವೊಗಲೈತಂದೆಯಭಯವನಿತ್ತು ಸಲಹೆಂದ ೩೮

ಹಿಂದೆ ರಾವಣನನುಜನಿರದೈ
ತಂದು ಶರಣಾಗತರ ರಕ್ಷಿಪ
ನೆಂದು ರಾಘವನಂಘ್ರಿಕಮಲವ ಕಂಡು ಬದುಕಿದನು
ಇಂದು ನಿಮ್ಮಂಘ್ರಿಗಳ ಮರೆವೊಗ
ಬಂದೆನೆನ್ನನು ಪತಿಕರಿಸಬೇ
ಕೆಂದು ಕೌರವನನುಜ ಬಿನ್ನಯಿಸಿದನು ಭೂಪತಿಗೆ ೩೯

ಎನಗೆ ಭೀಮಾರ್ಜುನರವೊಲು ನೀ
ನನುಜನಲ್ಲದೆ ಬೇರೆ ನಿನ್ನಲಿ
ಮನವಿಭೇದವ ಬಲ್ಲೆನೇ ಬಾಯೆನುತ ಕೈವಿಡಿದು
ಜನಪನಭಯವನಿತ್ತು ಕೌರವ
ನನುಜನನುಕೊಂಡೊಯ್ದನಾಹವ
ದನುಕರಣೆಯಲಿ ಸೇನೆ ಗಜಬಜಿಸಿತ್ತು ಬೊಬ್ಬೆಯಲಿ ೪೦

(ಸಂಗ್ರಹ: ಆನಂದ)

Monday, February 1, 2010

ವಿರಾಟಪರ್ವ: ೦೩. ಮೂರನೆಯ ಸಂಧಿ

ಸೂ: ರಾಯ ಕುರುಬಲ ವಿಲಯ ಹರನಬು
ಜಾಯತಾಕ್ಷಿಯ ಸಲಹಿ ಕೀಚಕ
ರಾಯ ವಂಶಾರಣ್ಯವನು ಸವರಿದನು ಕಲಿಭೀಮ

ಬಯಸಿದಳು ಮೃತ್ಯುವನು ಕಡು ಪಾ
ಪಿಯ ಮನೋಧರ್ಮವನು ಜನಮೇ
ಜಯ ಮಹೀಪತಿ ಕೇಳು ಪಾಂಚಾಲಿಯನು ಕರೆಸಿದಳು
ನಯವಿಹೀನೆ ಸುದೇಷ್ಣೆ ಬಂದಾ
ಕೆಯನು ಬೆಸಸಿದಳೆಲೆಗೆ ಅನುಜಾ
ಲಯದಲುತ್ತಮ ಮಧುವ ನೀ ಝಡಿತೆಯಲಿ ತಹುದೆಂದು ೧

ಅಮ್ಮೆನಲ್ಲಿಗೆ ದೇವಿ ನಿಮ್ಮಯ
ತಮ್ಮ ದುರುಳನು ಲೇಸು ಹೊಲ್ಲೆಹ
ವೆಮ್ಮ ತಾಗುವದಾತನಳಿದರೆ ಬಳಿಕ ಹಳಿವೆಮಗೆ
ನಿಮ್ಮ ನಾವೋಲೈಸಿ ನಿಮಗೆ ವಿ
ಕರ್ಮವನು ಮಾಡುವದು ನಮಗದು
ಧರ್ಮವಲ್ಲುಳಿದವರ ಕಳುಹುವದೆಂದಳಿಂದುಮುಖಿ ೨

ಎನಗೆ ಭುಗಿಲೆಂದಳು ಸುಡೇತಕೆ
ಮನದ ಗರ್ವವ ನುಡಿವೆ ನಿನ್ನಿಂ
ದೆನಗೆ ಮೇಣೆನ್ನವರಿಗುಂಟೇ ಹಾನಿ ಹರಿಬಗಳು
ಅನುಜನಾರೆಂದರಿಯೆ ಸಾಕಾ
ತನ ಸಮೀಪಕೆ ಹೋಗಿ ಬಾ ನಡೆ
ಯೆನಲು ಕೈಕೊಂಡಬಲೆ ಹೊರವಂಟಳು ನಿಜಾಲಯವ ೩

ದೇವಿ ನೇಮಿಸಲರಿಯೆನೆಂದೊಡಿ
ದಾವ ಧರ್ಮವು ಶಿವ ಶಿವೀ ಹದ
ನಾವನವರಿಗೆ ತಹುದು ಬದ್ಧವಿಘಾತಿಯಿದು ಬಲುಹು
ಸೇವಿಸುವದೇ ಕಷ್ಟವೆಂಬುದು
ಕೋವಿದರ ಮತ ಶಿವ ಶಿವಾ ರಾ
ಜೀವಲೋಚನ ಕೃಷ್ಣ ಬಲ್ಲನೆನುತ್ತ ಗಮಿಸಿದಳು ೪

ಹರಿ ಹರಿ ಶ್ರೀಕಾಂತ ದಾನವ
ಹರ ಮುರಾರಿ ಮುಕುಂದ ಗತಿಶೂ
ನ್ಯರಿಗೆ ನೀನೇ ಗತಿಯೆಲೈ ಗರುವಾಯಿಗೆಟ್ಟೆನಲೈ
ಕುರುಕುಲಾಗ್ರಣಿ ಸೆಳೆದ ವಸ್ತ್ರಾ
ಕರುಷಣದ ಭಯ ಮತ್ತೆ ಬಂದಿದೆ
ಕರುಣಿ ನೀನೇ ಬಲ್ಲೆಯೆನುತಡಿಯಿಟ್ಟಳಬುಜಾಕ್ಷಿ ೫

ಸುರಪ ಶಿಖಿ ಯಮ ನಿರುತಿ ವರುಣಾ
ದ್ಯರಿಗೆ ವಂದಿಸಿ ಕಣ್ಣೆವೆಯ ಬಿಗಿ
ದರೆಗಳಿಗೆ ನಿಂದಬುಜಮಿತ್ರನ ಭಜಿಸಿ ಕಂದೆರೆಯೆ
ಮುರಿವ ದೈತ್ಯನ ಕಾಹ ಕೊಟ್ಟನು
ತರಣಿ ತರುಣಿಗೆ ಮಂದ ಮಂದೋ
ತ್ತರದ ಗಮನದಲಬಲೆ ಬಂದಳು ಕೀಚಕನ ಮನೆಗೆ ೬

ಚಾರು ನೂಪುರ ಝಣಝಣದ ಝೇಂ
ಕಾರ ರವದುಬ್ಬಿನಲಿ ಭವನ ಮ
ಯೂರ ಕುಣಿದವು ವರಕಟಾಕ್ಷದ ಮಿಂಚು ಥಳಥಳಿಸೆ
ಆರು ಹೊಗಳುವರಂಗವಟ್ಟದ
ಸೌರಭದ ಭಾರಣೆಗೆ ತುಂಬಿಯ
ಸಾರ ಕಟ್ಟಿತು ಬಂದಳಂಗನೆ ಕೀಚಕಾಲಯಕೆ ೭

ಮನುಮಥನ ಮದದಾನೆ ಕಂದ
ರ್ಪನ ಮಹಾಮಂತ್ರಾಧಿದೇವತೆ
ಜನವು ಮರುಳಹ ಮದ್ದು ಸಂಸೃತಿಸುಖದ ಸಾಕಾರೆ
ಮನಸಿಜನ ಮಸೆದಲಗು ಮುನಿ ಮೋ
ಹನತಿಲಕ ಲಾವಣ್ಯಸಾಗರ
ಜನಿತ ಲಕ್ಷ್ಮಿ ಲತಾಂಗಿ ಬಂದಳು ಕೀಚಕನ ಮನೆಗೆ ೮

ಕುಡಿತೆಗಂಗಳ ಚಪಲೆಯುಂಗುರ
ವಿಡಿಯ ನಡುವಿನ ನೀರೆ ಹಂಸೆಯ
ನಡೆಯ ಗಮನದ ಮೌಳಿಕಾತಿ ಪಯೋಜ ಪರಿಮಳದ
ಕಡುಚೆಲುವೆ ಬರಲವನ ತನು ನಡ
ನಡುಗಿ ನಿಂದುದದಾವ ಹೆಂಗಸು
ಪಡೆದಳೀ ಚೆಲುವಿಕೆಯನೆನುತೀಕ್ಷಿಸಿದನಂಗನೆಯ ೯

ಅರಿದು ನೆತ್ತರುಗಾಣದಲಗಿದು
ನೆರೆ ಬಿಗಿಯೆ ಮೈ ಬಾಸುಳೇಳದ
ಹುರಿ ಬಲಿದ ನೇಣ್ಸೋಂಕಿದೊಡೆ ಹೊಗೆ ಮಸಗದೆದೆಗಿಚ್ಚು
ಅರರೆ ಕಂಗಳ ಧಾರೆ ಯಾವನ
ಕೊರಳ ಕೊಯ್ಯದದಾವನರಿಕೆಯ
ಹುರುಳುಗೆಡಿಸದಿದಾವ ನಿಲುವನು ಶಿವ ಶಿವಾಯೆಂದ ೧೦

ಆವ ಜನ್ಮದ ಸುಕೃತ ಫಲ ನೆರೆ
ದೀ ವಧುವ ಸೇರಿದರೊ ಧನ್ಯರು
ತಾವಲಾ ಬಳಿಕೇನು ಪೂರ್ವದ ಸುಖದ ಸರ್ವಸ್ವ
ಭಾವಿಸಲು ಸುಕೃತಾವಳಿಗಳಿಂ
ದೀ ವನಿತೆಯಲ್ಲಿಂದ ಮೇಣಿ
ನ್ನಾವುದತಿಶಯವುಂಟೆನುತ ಖಳರಾಯನಿದಿರೆದ್ದ ೧೧

ತರುಣಿ ಬಾ ಕುಳ್ಳಿರು ಮದಂತಃ
ಕರಣದೆಡರಡಗಿತ್ತು ಕಾಮನ
ದುರುಳತನಕಿನ್ನಂಜುವೆನೆ ನೀನೆನಗೆ ಬಲವಾಗೆ
ಬಿರುದ ಕಟ್ಟುವೆನಿಂದುವಿಗೆ ಮಧು
ಕರಗೆ ಕೋಗಿಲೆಗೆಂದು ಖಳನ
ಬ್ಬರಿಸಿ ನುಡಿಯಲು ಖಾತಿಗೊಂಡಿಂತೆಂದಳಿಂದುಮುಖಿ ೧೨

ಬಾಯಿ ಹುಳುವುದು ಬಯಲ ನುಡಿದೊಡೆ
ನಾಯಿತನ ಬೇಡೆಲವೊ ಕೆಡದಿರು
ರಾಯರಂಗನೆ ಕಳುಹೆ ಬಂದೆನು ಮಧುವ ತರಲೆಂದು
ಸಾಯಬೇಕೇ ಹಸಿದ ಶೂಲವ
ಹಾಯಿ ಹೋಗೆನೆ ನಿನ್ನ ಬೈಗಳು
ನೋಯಿಸುವವೇ ತನ್ನನೆನುತವೆ ತುಡುಕಿದನು ಸತಿಯ ೧೩

ಕರವನೊಡೆಮುರುಚಿದಳು ಬಟ್ಟಲ
ಧರೆಯೊಳೀಡಾಡಿದಳು ಸತಿ ಮೊಗ
ದಿರುಹಿ ಬಾಗಿಲ ದಾಂಟಿ ಭಯದಲಿ ನಡುಗಿ ಡೆಂಡಣಿಸಿ
ತರಳೆ ಹಾಯ್ದಳು ಮೊಲೆಯ ಜಘನದ
ಭರದಿ ಬಡನಡು ಮುರಿಯದಿಹುದೇ
ವರ ಸಭಾಗ್ಯತೆಗೆನಲು ರಭಸದೊಳೋಡಿದಳು ಸಭೆಗೆ ೧೪

ಒಡನೆ ಬೆಂಬತ್ತಿದನು ತುರುಬನು
ಹಿಡಿದು ತೊತ್ತಿನ ಮಗಳೆ ಹಾಯ್ದರೆ
ಬಿಡುವೆನೇ ಫಡಯೆನುತ ಹೊಯ್ದನು ಕಾಲಲೊಡೆಮೆಟ್ಟಿ
ಕೆಡೆದು ರಕುತವ ಕಾರಿ ಹುಡಿಯಲಿ
ಮುಡಿ ಹೊರಳಿ ಬಿರುಗಾಳಿಯಲಿ ಸೈ
ಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು ೧೫

ಕರುಳ ತೆಗೆ ತಿನ್ನಡಗನೆನುತ
ಬ್ಬರಿಸಿ ಸೂರ್ಯನು ಕೊಟ್ಟ ದಾನವ
ನುರವಣಿಸಿ ಕೀಚಕನ ಹೊಯ್ದನು ಹಿಡಿದು ಕುಸುಬಿದನು
ದುರುಳನಡೆಗೆಡೆದೆದ್ದು ನಿಮಿಷದೊ
ಳೊರಲುತೋಡಿದನಾಲಯಕೆ ಬಳಿ
ಕರಸ ಮೊದಲಾಖಿಳಜನ ನಡುಗಿತ್ತು ಭಯ ಹೊಯ್ದು ೧೬

ಹೊಡೆ ಮರಳಿ ಮುರಿದೆದ್ದು ತುರುಬಿನ
ಹುಡಿಯ ಕೊಡಹುತ ಮೊಲೆಗೆ ಮೇಲುದು
ತೊಡಿಸಿ ಗಲ್ಲದ ರಕುತವನು ಬೆರಲಿಂದ ಮಿಡಿ ಮಿಡಿದು
ನುಡಿಯಲಾಗದೆ ಖಳನು ಹೆಂಗುಸ
ಬಡಿಯೆ ನೋಡುತ್ತಿಹರೆ ಹಿರಿಯರು
ಹಿಡಿದ ಮೌನವ ಹೊತ್ತು ಲೇಸೆಂದಬಲೆ ಹಲುಬಿದಳು ೧೭

ಶಿವ ಶಿವಾ ಪಾಪಿಗಳು ಪತಿಯಾ
ದವರ ತಾಗಲಿ ಸುಯ್ಲಕಟ ನಾ
ಲುವರ ನಡುವಣ ಹಾವು ಸಾಯದು ನಿರಪರಾಧಿಯನು
ಅವಗಡಿಸಿದನು ಖಳನು ಧರ್ಮದ
ವಿವರ ಸುದ್ದಿಯನಾಡದೀ ಜನ
ನಿವಹ ಘೋರಾರಣ್ಯವಾಯ್ತೆಂದೊರಲಿದಳು ತರಳೆ ೧೮

ಎಲವೊ ದೇಶಿಗ ಕಂಕ ಭಟ್ಟನೆ
ಹಲವು ಧರ್ಮವ ಬಲ್ಲೆ ಗಡ ನೃಪ
ತಿಲಕಗರುಹುವದೇನು ಸನ್ಯಾಸಿಗಳಿಗುಚಿತವಿದು
ತಿಳಿಯೆ ದೇಶಿಗರಿಂಗೆ ದೇಶಿಗ
ರೊಲವು ಸಮನಿಸಬೇಕು ಸಭೆಯಲಿ
ಬಲವಿಹೀನರಿಗಾಪ್ತರಿಲ್ಲಂದೆಬಲೆಯೊರಲಿದಳು ೧೯

ಧೈರ್ಯವನು ನೆರೆ ಬಲಿದು ಮೇಲಣ
ಕಾರ್ಯಭಾಗವನರಿದು ನೃಪಜನ
ವರ್ಯ ನೋಡದೆ ನುಡಿಸದಿದ್ದನು ಧರ್ಮನಂದನನು
ಶೌರ್ಯಕವಸರವಲ್ಲ ನಮಗೀ
ಯಾರ್ಯನಾಜ್ಞೆಯೆನುತ್ತ ಬಳಿಕಾ
ತುರ್ಯರಿದ್ದರು ಪಾರ್ಥ ಯಮಳರು ಬಲಿದ ದುಗುಡದಲಿ ೨೦

ನೊಂದಳಕಟಾ ಸತಿಯೆನುತ ಮನ
ನೊಂದು ಸೈವೆರಗಾಗಿ ಖತಿಯಲಿ
ಕಂದಿ ನಸು ಮೈಬಾಗಿ ರೋಷದೊಳೌಡನೊಡೆಯವುಚಿ
ಮಂದಿಯರಿಯದವೊಲು ಕುಚೇಷ್ಟೆಯೊ
ಳೊಂದಿ ಮೆಲ್ಲನೆ ಬಾಗಿ ನೋಡಿದ
ನಂದು ರಾಜಾಲಯದ ಮುಂದಣ ಮರನನಾ ಭೀಮ ೨೧

ಒಳಗೆ ನಿಶ್ಚೈಸಿದನು ಮೊದಲಲಿ
ಹಿಳಿದು ಹಿಂಡುವೆನಿವಳ ಬಡಿದೀ
ಖಳನನಿವನೊಡಹುಟ್ಟಿದರನಿವನಖಿಳ ಬಾಂಧವರ
ಬಳಿಕ ವಿಗಡ ವಿರಾಟ ರಾಯನ
ಕೊಲುವೆನರಿಯದ ಮುನ್ನ ಕೌರವ
ಕುಲವ ಸವರುವೆನೆಂದು ಕಿಡಿಕಿಡಿಯೋದನಾ ಭೀಮ ೨೨

ಆತನಿಂಗಿತದನುವನರಿತು ಮ
ಹೀತಳಾಧಿಪ ಧರ್ಮಸುತನತಿ
ಕಾತರಿಸದಿರು ವಲಲ ಸೈರಿಸು ಸೈರಿಸಕಟೆನುತ
ಈ ತರುವ ಮುರಿಯದಿರು ಸುಜನ
ವ್ರಾತಕಾಶ್ರಯವೂರ ಹೊರಗೆ ಮ
ಹಾತಿಶಯ ತರುವುಂಟು ನಿನ್ನಯ ಬಾಣಸಿನ ಮನೆಗೆ ೨೩

ಧರ್ಮಮಯ ತರುವಿದನು ಮುರಿಯದಿ
ರೆಮ್ಮ ಮಾತನು ಕೇಳೆನಲು ಮಿಗೆ
ಸುಮ್ಮನೋಲಗದಿಂದ ಸರಿದನು ಭೀಮ ದುಗುಡದಲಿ
ಕರ್ಮಫಲವಿದು ನಿನಗೆ ಮಾನಿನಿ
ನಿಮ್ಮ ಭವನಕೆ ಹೋಗು ಶಿಕ್ಷಿಸ
ಲಮ್ಮದೀ ಸಭೆ ಬಗೆಯನಾತನು ಮತ್ಸ್ಯಭೂಪತಿಯ ೨೪

ಕೋಪಕವಸರವಲ್ಲ ಪತಿಗಳು
ಕಾಪುರುಷರೇ ನಿನ್ನವರು ಪರಿ
ತಾಪವನು ಬೀಳ್ಕೊಡು ಪತಿವ್ರತೆ ಪುಣ್ಯವಧು ನೀನು
ದೀಪವಲ್ಲಾ ಕ್ಷಮೆಯಖಿಳ ದೋ
ಷಾಪಹಾರವು ಶೌರ್ಯ ಧರ್ಮದ
ರೂಪು ನೆಲೆಯಾ ಕ್ಷಮೆಯೆನಲು ಬಳಿಕೆಂದುಳಿಂದುಮುಖಿ ೨೫

ನೀರು ಹೊರಗಿಕ್ಕುವದು ಮೂರೇ
ಬಾರಿ ಬಳಿಕದು ಪಾಪಿ ಜಾಡಿಸೆ
ಸೈರಿಸದು ಅನ್ಯಾಯ ಬಹುಳತೆಗೇನ ಮಾಡುವೆನು
ಸೈರಣೆಗೆ ತಾನವಧಿಯಿಲ್ಲಾ
ಪೌರುಷವು ಕಡು ಬಂಜೆಯಾಯಿತು
ಆರಯಿಕೆಯಲಿ ಜುಣುಗಿ ಜಾರುವಿರೆಂದಳಿಂದುಮುಖಿ ೨೬

ಅರರೆ ಹೆಂಗಸು ದಿಟ್ಟೆ ಮೋನದೊ
ಳಿರಲಿದಾವಂತರವು ರಾಯನ
ಹೊರೆಯಲೀ ಬಾಯ್ಬಡಿಕತನ ಗರುವಾಯಿಯೇನೆನಲು
ಕೆರಳಿದಳು ಲಲಿತಾಂಗಿಯಿಲ್ಲಿಯ
ಹಿರಿಯರಲಿ ಹುರುಳಿಲ್ಲ ಮಾರುತಿ
ಗರುಹುವೆನು ಬಳಿಕಾದುದಾಗಲಿಯೆನುತ ತಿರುಗಿದಳು ೨೭

ಆ ಸುದೇಷ್ಣೆಯ ಮನೆಗೆ ಬರಲವ
ಳೀ ಸತಿಯ ನುಡಿಸಿದಳು ತಂಗಿ ವಿ
ಳಾಸವಳಿದಿದೆ ಮುಖದ ದುಗುಡವಿದೇನು ಹದನೆನಲು
ಈಸು ಮರವೆಯಿದರಸುತನದ ಮ
ಹಾ ಸಗಾಢಿಕೆಯೆಮ್ಮ ನೀವಪ
ಹಾಸ ಮಾಡುವಿರೆನುತ ದುರುಪದಿ ನುಡಿದಳೊಡತಿಯನು ೨೮

ದುರುಳ ನಿಮ್ಮೊಡಹುಟ್ಟಿದನು ನೀ
ವರಸುಗಳು ತಿರುಕುಳಿಗಳಾವಿ
ನ್ನಿರಲು ಬಾರದು ನೃಪತಿ ತಪ್ಪಿದೊಡಾರು ಕಾವವರು
ಕರೆಸಿ ಬುದ್ಧಿಯ ಹೇಳಿ ಎನ್ನನು
ಹೊರೆಯಲಾಪರೆ ಹೊರೆಯಿರಲ್ಲದ
ಡರಸಿ ಕಳಹುವದೆನ್ನನೆನಲಿಂತೆಂದಳಾ ರಾಣಿ ೨೯

ಲಲನೆ ಕೇಳನ್ಯಾಯದವರನು
ಕೊಲಿಸುವೆನು ಭಯ ಬೇಡ ಪರ ಸತಿ
ಗಳುಪಿದವನೊಡಹುಟ್ಟಿದನೆ ಕಡುಪಾಪಿ ಹಗೆಯೆನಲು
ಕೊಲಿಸುವಡೆ ನೀವೇಕೆ ತಪ್ಪಿನ
ಬಳಿಯಲೆನ್ನಾತಗಳು ಕೀಚಕ
ಕುಲವ ಸವರುವರೆನಗೆ ಕಾರಣವಿಲ್ಲ ಸಾರಿದೆನು ೩೦

ಎಂದು ಬೀಳ್ಕೊಂಡಬಲೆ ತನ್ನಯ
ಮಂದಿರಕೆ ಬಂದೊಳಗೊಳಗೆ ಮನ
ನೊಂದು ಸೈವೆರಗಾಗಿ ಚಿಂತಿಸಿ ನೂಕಿದಳು ಹಗಲ
ಕೊಂದುಕೊಂಬೆನೆ ಆತ್ಮಘಾತಕ
ಹಿಂದೆ ಹತ್ತದೆ ಮಾಣದೇಗುವೆ
ನೆಂದು ದ್ರೌಪದಿ ತನ್ನ ಮನದಲಿ ಹಿರಿದು ಮರುಗಿದಳು ೩೧

ಆರಿಗುಸುರುವೆನಾರ ಸಾರುವೆ
ನಾರಿಗೊರಲುವೆನಾರಿಗರುಹುವೆ
ನಾರ ಬೇಡುವೆನಕಟ ಹೆಂಗಸು ಜನ್ಮವನು ಸುಡಲಿ
ಘೋರ ಪಾತಕಿಯೆನ್ನವೊಲು ಮು
ನ್ನಾರು ನವೆದವರುಂಟು ಮರಣವು
ಬಾರದೆಂದೊರಲಿದಳು ಬಸುರನು ಹೊಯ್ದು ಶಶಿವದನೆ ೩೨

ಯಮಸುತಂಗರಹುವೆನೆ ಧರ್ಮ
ಕ್ಷಮೆಯ ಗರ ಹೊಡೆದಿಹುದು ಪಾರ್ಥನು
ಮಮತೆಯುಳ್ಳವನೆಂಬೆನೇ ತಮ್ಮಣ್ಣನಾಜ್ಞೆಯಲಿ
ಭ್ರಮಿತನಾಗಿಹನುಳಿದರಿಬ್ಬರು
ರಮಣರಿವರೀ ನಾಯ ಕೊಲಲ
ಕ್ಷಮರು ನಿಸ್ಸಂದೇಹವೆಂದಳು ತನ್ನ ಮನದೊಳಗೆ ೩೩

ಎಲ್ಲರೊಳು ಕಲಿಭೀಮನೇ ಮಿಡು
ಕುಳ್ಳ ಗಂಡನು ಹಾನಿ ಹರಿಬಕೆ
ನಿಲ್ಲದಂಗೈಸುವನು ಕಡು ಹೀಹಾಳಿಯುಳ್ಳವನು
ಖುಲ್ಲನಿವನುಪಟಳವನಾತಂ
ಗೆಲ್ಲವನು ಹೇಳುವೆನು ಬಳಿಕವ
ನಲ್ಲಿ ಹುರುಳಿಲ್ಲದೊಡೆ ಕುಡಿವೆನು ಘೋರತರ ವಿಷವ ೩೪

ನಿಳಯವನು ಹೊರವಂಟು ಕಂಗಳ
ಬೆಳಗು ತಿಮಿರವ ಕೆಡಿಸೆ ಕಂಕಣ
ಲಲಿತ ಝೇಂಕೃತಿಯಿಂದ ತೂಗುವ ವಾಮಭುಜಲತೆಯ
ಒಲಿದು ಮೇಲುದು ನೂಕಿ ನಡುಗುವ
ಮೊಲೆಯ ಭರದಲಿಯಡಿಯಿಡುತ ಕಳ
ವಳದ ಕರಣದ ಮುಗುದೆ ಬಂದಳು ಬಾಣಸಿನ ಮನೆಗೆ ೩೫

ಕೆಲದಲೊಟ್ಟಿದ ಪತ್ರ ಶಾಕಾ
ವಳಿಯ ಫಲರಾಸಿಗಳ ಕಳವೆಯ
ಹೊಳೆವುತಿಹ ರಾಜಾನ್ನದಕ್ಕಿಯ ಸಾಲ ಹರಿಯಣದ
ಕೆಲಬಲದ ಸಂಭಾರ ಚೂರ್ಣದ
ಲಲಿತ ಬೋನದ ವಿವಿಧ ಭಕ್ಷ್ಯಾ
ವಳಿಯ ಬಾಣಸದೊಳಗೆ ಬಂದಳು ಮತ್ತಗಜಗಮನೆ ೩೬

ತರಿದ ಕುರಿಗಳ ಹಂದಿಯಡಗಿನ
ಜುರಿತ ರಕುತದ ಮೊಲನ ಖಂಡದ
ತಿರಿದ ಗುಬ್ಬಿಯ ಕೀಸಿ ಸೀಳಿದ ನವಿಲ ಲಾವುಗೆಯ
ತುರುಗಿದೆಲುವಿನ ಸಾಲ ಸುಂಟಿಗೆ
ಮೆರೆವ ಮಾಂಸದ ರಾಸಿಗಳ ಹರ
ದೆರಕೆಗಳ ಕಂಡಬಲೆ ಹೊಗಳಿದಳಡಬಳದ ಮನೆಯ ೩೭

ಆರಲರಿದನೊ ಭೀಮನೀ ಸೂ
ವಾರ ವಿದ್ಯೆಯ ಭಾಪು ವಿಧಿ ಮುನಿ
ದಾರನಾವಂಗದಲಿ ಬರಿಸದು ಶಿವಶಿವಾಯೆನುತ
ನಾರಿ ನಸುನಗುತೊಳಗೆ ಹೊಕ್ಕು ಬ
ಕಾರಿ ಮಂಚದೊಳಿರಲು ನಿದ್ರಾ
ಭಾರ ವಿಹ್ವಲಕರಣನನು ಹೊದ್ದಿದಳು ಲಲಿತಾಂಗಿ ೩೮

ಎಬ್ಬಿಸಲು ಭುಗಿಲೆಂಬನೋ ಮೇ
ಣೊಬ್ಬಳೇತಕೆ ಬಂದೆ ಮೋರೆಯ
ಮಬ್ಬಿದೇಕೆಂದೆನ್ನ ಸಂತೈಸುವನೊ ಸಾಮದಲಿ
ತುಬ್ಬುವದೊ ತಾ ಬಂದ ಬರವಿದು
ನಿಬ್ಬರವಲಾ ಜನದ ಮನಕಿ
ನ್ನೆಬ್ಬಿಸಿಯೆ ನೋಡುವೆನೆನುತ ಸಾರಿದಳು ವಲ್ಲಭನ ೩೯

ಮೆಲ್ಲ ಮೆಲ್ಲನೆ ಮುಸುಕ ಸಡಿಲಿಸಿ
ಗಲ್ಲವನು ಹಿಡಿದಲುಗಲಪ್ರತಿ
ಮಲ್ಲನೆದ್ದನು ನೋಡಿದನು ಪಾಂಚಾಲನಂದನೆಯ
ವಲ್ಲಭೆಯೆ ಬರವೇನು ಮುಖದಲಿ
ತಲ್ಲಣವೆ ತಲೆದೋರುತಿದೆ ತಳು
ವಿಲ್ಲದುಸುರಿರುಳೇಕೆ ಬಂದೆ ಲತಾಂಗಿ ಹೇಳೆಂದ ೪೦

ಸೈರಿಸರು ಬಾಣಸದ ಭವನದ
ನಾರಿಯರು ದುರ್ಜನರು ಖುಲ್ಲ ಕು
ಠಾರರಿವರರಮನೆಯ ನಾಯ್ಗಳು ನಾವು ದೇಶಿಗರು
ಭಾರವಿದು ಕೆಲರರಿಯದಂತಿರೆ
ನಾರಿ ನೀ ಹೇಳೆನುತ ದುಗುಡವಿ
ದಾರ ದೆಸೆಯಿಂದಾಯಿತೆನಲಿಂತೆಂದಳಿಂದುಮುಖಿ ೪೧

ನಿನ್ನೆ ಹಗಲರೆಯಟ್ಟಿ ಕೀಚಕ
ಕುನ್ನಿಯೊದೆದನು ರಾಜಸಭೆಯಲಿ
ನಿನ್ನ ವಂದಿಗರಿರಲು ಪರಿಭವವುಚಿತವೇ ತನಗೆ
ಎನ್ನನವ ಬೆಂಬಳಿಯ ಬಿಡ ನಾ
ನಿನ್ನು ಬದುಕುವಳಲ್ಲ ಪಾತಕ
ನಿನ್ನ ತಾಗದೆ ಮಾಣದೆನಲಾ ಭೀಮ ಖತಿಗೊಂಡ ೪೨

ಉಸುರಲಾಗದು ನಿನ್ನ ಹರಿಬಕೆ
ಮಿಸುಕುವವರಾವಲ್ಲ ಹೆಂಡಿರ
ಗಸಣಿಗೊಂಬವರಲ್ಲ ಹುದುವಿನ ಗಂಡತನವಿದನು
ಶಶಿವದನೆ ಸುಡು ಕಷ್ಟವೀಯಪ
ದೆಸೆಯವರು ನಾವಲ್ಲ ನಿನ್ನವ
ರಸಮ ಸಾಹಸರುಳಿದ ನಾಲ್ವರಿಗರಹು ಹೋಗೆಂದ ೪೩

ರಮಣ ಕೇಳುಳಿದವರು ತನ್ನನು
ರಮಿಸುವರು ಮಾನಾರ್ಥವೆನೆ ನಿ
ರ್ಗಮಿಸುವರು ನೀನಲ್ಲದುಳಿದವರುಚಿತಬಾಹಿರರು
ಮಮತೆಯಲಿ ನೀ ನೋಡು ಚಿತ್ತದ
ಸಮತೆಯನು ಬೀಳ್ಕೊಡು ಕುಠಾರನ
ಯಮನ ಕಾಣಿಸಿ ಕರುಣಿಸೆಂದಳು ಕಾಂತೆ ಕೈಮುಗಿದು ೪೪

ಕಲಹಕಾದೊಡೆ ನಾವು ರಮಿಸುವ
ರುಳಿದವರು ಬಳಿಕೇನು ಗಾದೆಯ
ಬಳಕೆ ಕೆಲಬರು ಗಳಿಸಿದೊಡೆ ಕೆಲರುಂಡು ಜಾರುವರು
ಅಳುಕಿ ನಡೆವವರಲ್ಲ ನಿನ್ನಯ
ಹಳಿವು ಹರಿಬವ ಹೇಳಿ ಚಿತ್ತವ
ತಿಳುಹಿಕೊಂಬದು ನಾವು ಭೀತರು ಧರ್ಮಜನ ಹೊರೆಗೆ ೪೫

ಹೆಂಡತಿಯ ಹರಿಬದಲಿಯೊಬ್ಬನೆ
ಗಂಡುಗೂಸೆ ವೈರಿಯನು ಕಡಿ
ಖಂಡವನು ಮಾಡುವನು ಮೇಣ್ ತನ್ನೊಡಲನಿಕ್ಕುವನು
ಗಂಡರೈವರು ಮೂರು ಲೋಕದ
ಗಂಡರೊಬ್ಬಳನಾಳಲಾರಿರಿ
ಗಂಡರೋ ನೀವ್ ಭಂಡರೋ ಹೇಳೆಂದಳಿಂದುಮುಖಿ ೪೬

ಅಂದು ಕೌರವ ನಾಯಿ ಸಭೆಯಲಿ
ತಂದು ತೋರಿದನುನ್ನತಿಯ ಬಳಿ
ಕಿಂದು ಕೀಚಕ ಕುನ್ನಿಯೊದೆದನು ರಾಜಸಭೆಯೊಳಗೆ
ಅಂದು ಮೇಣಿಂದಾದ ಭಂಗಕೆ
ಕುಂದದಾವುದು ನೀವು ಬಲ್ಲಿದ
ರೆಂದು ಹೊಕ್ಕರೆ ಹೆಣ್ಣ ಕೊಂದಿರಿಯೆಂದಳಿಂದುಮುಖಿ ೪೭

ದಾನವರು ಮಾನವರೊಳೆನ್ನಭಿ
ಮಾನವನು ಕೊಂಬವನ ಹೆಸರನ
ದೇನನೆಂಬೆನು ನೊಂದು ನುಡಿದೊಡೆ ಖಾತಿಯಿಲ್ಲೆಮಗೆ
ಈ ನಪುಂಸಕರೊಡನೆ ಹುಟ್ಟಿದ
ನಾನು ಮೂಗುಳ್ಳವನೆ ಮಾನಿನಿ
ನೀನು ತೋರಿದ ಪರಿಯಲೆಂಬುದು ಭೀತಿ ಬೇಡೆಂದ ೪೮

ಅಂದು ದುಶ್ಶಾಸನನ ಕರುಳನು
ತಿಂದಡಲ್ಲದೆ ತಣಿವು ದೊರಕೊಳ
ದೆಂದು ಹಾಯ್ದೊಡೆ ಹಲುಗಿರಿದು ಮಾಣಿಸಿದನಾ ವ್ಯಥೆಯ
ಇಂದು ಕೀಚಕ ನಾಯನೆರಗುವೆ
ನೆಂದು ಮರನನು ನೋಡಿದರೆ ಬೇ
ಡೆಂದ ಹದನನು ಕಂಡೆ ನೀನೆನಗುಂಟೆಯಪರಾಧ ೪೯

ಹೆಣ್ಣ ಹರಿಬಕ್ಕೋಸುಗವೆ ತ
ಮ್ಮಣ್ಣನಾಜ್ಞೆಯ ಮೀರಿ ಕುಂತಿಯ
ಚಿಣ್ಣ ಬದುಕಿನೆಂದು ನುಡಿವರು ಕುಜನರಾದವರು
ಅಣ್ಣನವರಿಗೆ ದೂರುವುದು ನಾ
ವುಣ್ಣದುರಿಯಿವು ರಾಯನಾಜ್ಞೆಯ
ಕಣ್ಣಿನಲಿ ಬಿಗಿವಡೆದು ಕೆಡೆದೆವು ಕಾಂತೆ ಕೇಳೆಂದ ೫೦

ಹೊದ್ದುವುದು ಫಲುಗುಣನ ಪಾದಕೆ
ಬಿದ್ದು ಯಮನಂದನನ ಮನವನು
ತಿದ್ದುವದು ಸಹದೇವ ನಕುಲರ ಕೈಯಲೆನಿಸುವದು
ಗೆದ್ದು ಕೊಡುವರು ನಿನ್ನ ಪಾಲಿಸ
ದಿದ್ದರಾದೊಡೆ ದೋಷವವರನು
ಹೊದ್ದುವುದು ನೀನೆನ್ನ ಬರಿದೇ ಕಾಡಬೇಡೆಂದ ೫೧

ಗಂಡ ಗರ್ವವ ನುಡಿಯೆವೆಮ್ಮಯ
ದಂಡಿ ತಾನದು ಬೇರೆ ನಾವೀ
ಭಂಡತನದಲಿ ಬದುಕಲರಿಯೆವು ಧರ್ಮಗಿರ್ಮವನು
ಕೊಂಡು ಕೊನರುವರಲ್ಲ ರಾಯನ
ನಂಡಲೆದು ಕೀಚಕನ ತಲೆಯನು
ಚೆಂಡನಾಡಿಸು ರಮಣಿ ಮೇಣರ್ಜುನಗೆ ಹೇಳೆಂದ ೫೨

ತರುಣಿ ದಿಟ ಕೇಳಿಂದು ಮೊದಲಾ
ಗರಸಿ ನೀ ನಾಲ್ವರಿಗೆ ನಾವೆಡೆ
ಮುರಿದವರು ಬಿಟ್ಟವರು ನಿನ್ನಯ ಸೂಳು ಪಾಳೆಯವ
ಅರಸನನು ಪ್ರಾರ್ಥಿಸುವುದರ್ಜುನ
ವರ ನಕುಲ ಸಹದೇವರಿಗೆ ವಿ
ಸ್ತರಿಸಿ ಹೇಳ್ವುದು ನಮ್ಮೊಡನೆ ಫಲಸಿದ್ಧಿಯಿಲ್ಲೆಂದ ೫೩

ಕೇಳುತಿದ್ದಳು ಕೊರಳ ಸೆರೆ ಗೋ
ನಾಳಿಗೌಕಿತು ಬಿಕ್ಕಿ ಬಿಕ್ಕಿ ವಿ
ಲೋಲಲೋಚನೆಯಕಟ ನೆನೆದಳು ಬಾಷ್ಪವಾರಿಯಲಿ
ಶೂಲ ಮರುಮೊನೆಗೊಂಡವೊಲು ಸುಳಿ
ವಾಳೆ ಝಳ ತಾಗಿದವೊಲುದರ
ಜ್ವಾಲೆ ನೆತ್ತಿಗೆ ನಿಲುಕೆ ಹಲುಬಿದಳಬಲೆ ಬಿಸುಸುಯ್ದು ೫೪

ಕೆಂದಳದ ಸೆಕೆಯಲಿ ಕಪೋಲವು
ಕಂದಿ ಕಸರಿಕೆಯಾಯ್ತು ನಿಡುಸುಯಿ
ಲಿಂದ ಸೀಕರಿಯೋದವೇಕಾವಳಿಯ ಮುತ್ತುಗಳು
ಸಂದಣಿಸಿದೆವೆಗಳಲಿ ಬಾಷ್ಪದ
ಬಿಂದು ತಳಿತುದು ನಟ್ಟ ದೃಷ್ಟಿಯೊ
ಳಿಂದುಮುಖಿ ಸೈಗರೆದು ತೂಗಿದಳಡಿಗಡಿಗೆ ಶಿರವ ೫೫

ಆವ ಹೆಂಗುಸನಳಲಿಸಿದೆನಿ
ನ್ನಾವ ಧರ್ಮವನಳಿದೆನೊ ತಾ
ನಾವ ಪಾಪದ ಫಲಕೆ ಪಿಡಿದೆನೊ ಸಂಚಕಾರವನು
ಆವ ಹೆಂಗಸು ನವೆದಳೆನ್ನವೊ
ಲಾವಳಳಲಿದು ಮರುಗಿದಳು ಮ
ತ್ತಾವಳೆನ್ನಂದದಲಿ ಪಡೆದವಳುಂಟೆ ಲೋಕದಲಿ ೫೬

ಇನ್ನು ಹುಟ್ಟದೆಯಿರಲಿ ನಾರಿಯ
ರೆನ್ನವೊಲು ಭಂಗಿತರು ಭುವನದೊ
ಳಿನ್ನು ಜನಿಸಲು ಬೇಡ ಗಂಡರು ಭೀಮಸನ್ನಿಭರು
ಎನ್ನವೊಲು ಪಾಂಡವರವೊಲು ಸಂ
ಪನ್ನ ದುಃಖಿಗಳಾರು ನವೆದರು
ಮುನ್ನಿನವರೊಳಗೆಂದು ದ್ರೌಪದಿ ಹಿರಿದು ಹಲುಬಿದಳು ೫೭

ಆವ ಗರಳವ ಕುಡಿವೆನೋ ಮೇ
ಣಾವ ಬೆಟ್ಟವನಡರಿ ಬೀಳ್ವೆನೊ
ಯಾವ ಮಡುವನು ಹೊಗುವೆನೋ ಹಾಸರೆಯ ಗುಂಪಿನಲಿ
ಆವ ಕುಂತವ ಹಾಯ್ವೆನೋ ಮೇ
ಣಾವ ಪಾವಕನೊಳಗೆ ಹೊಗುವೆನೊ
ಸಾವು ಸಮನಿಸದೆನಗೆನುತ ಮರುಗಿದಳು ನಳಿನಾಕ್ಷಿ ೫೮

ಮಂದೆಗೆಳಸಿದ ಪಾಪಿ ಕೌರವ
ನಂದು ಮುಂದಲೆವಿಡಿದು ಸೈಂಧವ
ಬಂದು ಬಳಿಕಾರಣ್ಯವಾಸದೊಳೆನ್ನನೆಳದೊಯ್ದ
ಇಂದು ಕೀಚಕ ನಾಯ ಕಾಲಲಿ
ನೊಂದೆ ನಾನೀ ಮೂರು ಬಾರಿಯೆ
ಬಂದ ಭಂಗವೆ ಸಾಕೆನುತ ಬಸವಳಿದಳಿಂದುಮುಖಿ ೫೯

ಜನನವೇ ಪಾಂಚಾಲರಾಯನ
ಮನೆ ಮನೋವಲ್ಲಭರದಾರೆನೆ
ಮನುಜಗಿನುಜರು ಗಣ್ಯವೇ ಗೀರ್ವಾಣರಿಂ ಮಿಗಿಲು
ಎನಗೆ ಬಂದೆಡರೀ ವಿರಾಟನ
ವನಿತೆಯರುಗಳ ಮುಡಿಯ ಕಟ್ಟುವ
ತನುವ ತಿಗುರುವ ಕಾಲನೊತ್ತುವ ಕೆಲಸದುತ್ಸಾಹ ೬೦

ಹಗೆಗಳಿಗೆ ತಂಪಾಗಿ ಬದುಕುವ
ಮುಗುದರಿನ್ನಾರುಂಟು ಭಂಗಕೆ
ಹೆಗಲ ಕೊಟ್ಟಾನುವ ವಿರೋಧಿಗಳುಂಟೆ ಲೋಕದಲಿ
ವಿಗಡ ಬಿರುದನು ಬಿಸುಟು ಬಡಿಹೋ
ರಿಗಳು ಪಾಂಡವರಂತೆ ಮೂಗು
ರ್ಚಿಗಳದಿನ್ನಾರುಂಟೆನುತ ಮರುಗಿದಳು ನಳಿನಾಕ್ಷಿ ೬೧

ಕಾಲನನು ಕೆರಳಿದೊಡೆ ಮುರಿವೆ
ಚ್ಚಾಳುತನದವರೆನ್ನನೊಬ್ಬಳ
ನಾಳಲಾರಿರಿ ಪಾಪಿಗಳಿರಪಕೀರ್ತಿಗಳುಕಿರಲ
ತೋಳ ಹೊರೆ ನಿಮಗೇಕೆ ಭೂಮೀ
ಪಾಲ ವಂಶದೊಳುದಿಸಲೇತಕೆ
ಕೂಳುಗೇಡಿಂಗೊಡಲ ಹೊರುವಿರಿಯೆಂದಳಿಂದುಮುಖಿ ೬೨

ಧರೆಯ ಭಂಡಾರವನು ಪುರವನು
ಕರಿತುರಗ ರಥ ಪಾಯದಳವನು
ಕುರುಕುಲಾಗ್ರಣಿ ಸೆಳೆದುಕೊಂಡನು ನಿಮ್ಮ ಹೊರವಡಿಸಿ
ದುರುಳ ಕೀಚಕಗೆನ್ನ ಕೊಟ್ಟಿರಿ
ಪರಿಮಿತದಲಿರವಾಯ್ತು ನಿಮ್ಮೈ
ವರಿಗೆ ಲೇಸಾಯ್ತಕಟಯೆಂದಬುಜಾಕ್ಷಿ ಹಲುಬಿದಳು ೬೩

ಭಾವ ಭಾಗ್ಯಾಧಿಕನು ಕೌರವ
ದೇವನರಸುಗಳೊಡೆಯತನವನು
ನೀವು ಕೃಷ್ಣನ ಕೂರ್ಮೆ ಧರ್ಮದಿ ಪಾಲಿಸಿದಿರೀಗ
ನೀವು ತಟತಟವಾಗಿ ಲೋಗರ
ಸೇವೆಯಲಿ ಬೆಂದೊಡಲ ಹೊರುವಿರಿ
ಸಾವವಳು ನಿಮಗಂಜಲೇಕೆಂದಬಲೆಯೊರಲಿದಳು ೬೪

ಭೀಮ ಕೊಟ್ಟೈ ತನಗೆ ಸಾವಿನ
ನೇಮವನು ನಿಮ್ಮಣ್ಣನಾಜ್ಞೆ ವಿ
ರಾಮವಾಗದೆ ಬದುಕಿ ಧರ್ಮದ ಮೈಸಿರಿಯನರಿದು
ಕಾಮಿನಿಯ ಕೇಳಿಯಲಿ ನೆನೆವುದು
ತಾಮಸದಿ ತಾ ಮೀರಿ ನುಡಿದು
ದ್ದಾಮತೆಯ ಸೈರಿಸುವದೆಂದೆರಗಿದಳು ಚರಣದಲಿ ೬೫

ಎನಲು ಕಂಬನಿದುಂಬಿದನು ಕಡು
ನೆನೆದುದಂತಃಕರಣ ರೋಷದ
ಘನತೆ ಹೆಚ್ಚಿತು ಹಗೆಗಳನು ಹಿಂಡಿದನು ಮನದೊಳಗೆ
ತನುಪುಳಕವುಬ್ಬರಿಸಿ ಮೆಲ್ಲನೆ
ವನಿತೆಯನು ತೆಗೆದಪ್ಪಿದನು ಕಂ
ಬನಿಯದೊಡೆದನು ಸೆರಗಿನಲಿ ಕಲಿಭೀಮ ಮಾನಿನಿಯ ೬೬

ಕುರುಳ ನೇವರಿಸಿದನು ಗಲ್ಲವ
ನೊರಸಿ ಮುಂಡಾಡಿದನು ಮಂಚದ
ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ
ಅರಸಿ ಬಿಡು ಬಿಡು ಖಾತಿಯನು ವಿ
ಸ್ತರಿಸಲೇಕೆಮ್ಮಣ್ಣನಾಜ್ಞೆಯ
ಗೆರೆಯ ದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ ೬೭

ಬಸುರ ಬಗಿವೆನು ಕೀಚಕನ ನಸು
ಮಿಸುಕಿದೊಡೆ ವೈರಾಟ ವಂಶದ
ಹೆಸರ ತೊಡೆವೆನು ನಮ್ಮನರಿದೊಡೆ ಕೌರವವ್ರಜವ
ಕುಸುರಿದರಿವೆನು ಭೀಮ ಕಷ್ಟವ
ನೆಸಗಿದನು ಹಾಯೆಂದರಾದೊಡೆ
ಮುಸುಡನಮರಾದ್ರಿಯಲಿ ತೇವೆನು ದೇವಸಂತತಿಯ ೬೮

ಮುನಿದನಾದೊಡೆಯಣ್ಣ ತನವಿಂ
ದಿನಲಿ ಹರಿಯಲಿ ಪಾರ್ಥ ನಕುಲರು
ಕನಲಿದೊಡೆ ಕೈದೋರುವೆನು ಸಹದೇವನಿವರುಗಳ
ಅನುಜನೆಂಬೆನೆ ಕೃಷ್ಣ ಹಾಯ್ದೆರೆ
ಘನಮುರಾರಿಯ ಮೀರುವೆನು ಬಳಿ
ಕೆನಗೆ ಸಮಬಲರಾರು ತರಿವೆನು ಕೀಚಕಾನ್ವಯವ ೬೯

ಈಸು ದಿನವೆಮ್ಮಣ್ಣನಾಜ್ಞೆಯ
ಪಾಶದಲಿ ಸಿಕ್ಕಿರ್ದೆ ಸಿಂಹದ
ಕೂಸ ನರಿ ಕೆಣುಕುವವೊಲೀ ಕುರು ಕೀಚಕಾದಿಗಳು
ಗಾಸಿಯಾದರು ಕೆಣಕಿ ನಾಯ್ಗಳ
ವೀಸ ಬಡ್ಡಿಯಲಸುವ ಕೊಂಬೆನು
ವಾಸಿ ಧರ್ಮದ ಮೇರೆದಪ್ಪಿತು ಕಾಂತೆ ಕೇಳೆಂದ ೭೦

ತರುಣಿ ಕೀಚಕ ಕೌರವೇಂದ್ರರ
ಹರಣಕಿದ ಕೋ ಸಂಚಕಾರವ
ಕೆರಳಿದೊಡೆಯೀ ಭೀಮ ಬಗೆವನೆ ನೀತಿಗೀತಿಗಳ
ಕೆರಳಿಚಿದೆಯಿನ್ನೇನು ನಿನ್ನಯ
ಹರಿಬವೆನ್ನದು ನಾಯಿ ಜಾರನ
ಕರೆದು ಸಂಕೇತದಲಿ ಸೂಚಿಸು ನಾಟ್ಯಮಂದಿರವ ೭೧

ಅಲ್ಲಿಗಿರುಳೈತಂದು ಮರೆಯಲಿ
ಖುಲ್ಲನುದರವ ಬಗಿದು ರಕುತವ
ಚೆಲ್ಲುವೆನು ಶಾಕಿನಿಯರಿಗೆ ಸಂದೇಹ ಬೇಡಿದಕೆ
ಅಲ್ಲಿ ಕೆಲಬಲನರಿದುದಾದೊಡೆ
ಬಲ್ಲೆನದಕೌಷಧಿಯ ಕರೆ ಮರೆ
ಯಿಲ್ಲ ಮಾನಿನಿ ಹೋಗೆನುತ ಬೀಳ್ಕೊಟ್ಟನಂಗನೆಯ ೭೨

ಹರುಷದಲಿ ಹೆಚ್ಚಿದಳು ಪುರುಷರ
ಪುರುಷನಲ್ಲಾ ಭೀಮ ತನ್ನಯ
ಪರಮ ಸುಕೃತೋದಯವಲಾ ನೀನೊಬ್ಬನೆಂದೆನುತ
ಅರಸಿ ಕಾಂತನ ಬೀಳುಕೊಂಡಳು
ತಿರುಗಿದಳು ನಿಜಭವನಕಿತ್ತಲು
ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ ೭೩

ಆ ದಿವಸವರಮನೆಗೆ ಬರುತ ವೃ
ಕೋದರನ ವಲ್ಲಭೆಯ ಕಂಡನು
ಕೈದುಡುಕಲಂಜಿದನು ಮಾತಾಡಿಸಿದನಂಗನೆಯ
ಹೋದಿರುಳು ಯುಗವಾಗಿ ಸವೆದುದು
ನೀ ದಯಾಂಬುಧಿ ಕುಸುಮಶರ ಯಮ
ನಾದನದ ನೀ ಬಲ್ಲೆಯೆಂದನು ಕೀಚಕನು ನಗುತ ೭೪

ಕುಸುಮಶರ ಯಮನಹನು ಅಮೃತವು
ವಿಷವಹುದು ಬಳಿಕಾಲಿಕಲುಗಳು
ಬಿಸಿಯಹವು ಬಾಂಧವರು ವೈರಿಗಳಹರು ನಿಮಿಷದಲಿ
ಒಸೆದರೊಲ್ಲದರಹರು ಲೋಗರ
ಶಶಿವದನೆಗಳುಪಿದ ದುರಾತ್ಮನ
ವಸುಧೆ ಹೊರದೆಲೆ ಪಾಪಿ ಕೀಚಕಯೆಂದಳಿಂದುಮುಖಿ ೭೫

ಬಳಿಕ ನಿನ್ನ ಪುರಾಣ ಧರ್ಮವ
ತಿಳಿದುಕೊಂಬೆನಿದೊಮ್ಮೆ ನಿನ್ನಯ
ಲಲಿತ ಕರುಣ ಕಟಾಕ್ಷಕವಚವ ತೊಡಿಸಿ ತನ್ನೊಡಲ
ಅಳುಕದೆಸುವ ಮನೋಜನಂಬಿನ
ಹುಳುಕ ಮುರಿ ಡಿಂಗರಿಗನಹೆನೆಂ
ದಳಿಮನದಲಾ ಖೂಳನಬುಜಾನನೆಗೆ ಕೈಮುಗಿದ ೭೬

ಅರಿದರಾದೊಡೆ ನಿನ್ನ ವಂಶವ
ತರಿವರೆನ್ನವರೆಲವೊ ಕೆಲಬಲ
ನರಿಯದಂದದಿ ಬಂದು ನಾಟ್ಯದ ಗರುಡಿಯೊಳಗಿಹುದು
ನೆರೆದುದಾಯುಷ ನಿನಗೆ ಕತ್ತಲೆ
ಮನೆಯೊಳಾನೈತಹೆನುಯೆನ್ನನು
ಮರೆದು ನೀ ಬಿಡೆಯಾದುದಾಗಲಿಯೆಂದಳಿಂದುಮುಖಿ ೭೭

ಖಳ ಹಸಾದವ ಹಾಯ್ಕಿ ತನ್ನಯ
ನಿಳಯಕೈದಿದನಬುಜ ಬಾಂಧವ
ನಿಳಿದನಸ್ತಾಚಲದ ತಪ್ಪಲ ತಾವರೆಯ ಬನಕೆ
ನಳಿನಮುಖಿ ನಲವೇರಿ ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ಕಂಗಳ
ಬೆಳಗು ಬಟ್ಟೆಯ ತೋರೆ ಬಂದಳು ಬಾಣಸಿನ ಮನೆಗೆ ೭೮

ಭೀಮ ನಿಂದಿರು ನಾಟ್ಯನಿಲಯವ
ನಾ ಮದಾಂಧಗೆ ನುಡಿದು ಬಂದೆನು
ತಾಮಸವ ಮಾಡದಿರು ಹೂಡದಿರಲ್ಪಬುದ್ಧಿಗಳ
ಕಾಮುಕನನಡೆಗೆಡಹಿ ನಿಜ ಸು
ಪ್ರೇಮವನು ತೋರೆನಲು ನಗುತು
ದ್ದಾಮನೆದ್ದನು ಘಳಿಯನುಟ್ಟನು ಮಲ್ಲಗಂಟಿನಲಿ ೭೯

ಖಳನ ಮುರಿಯೆಂದಬಲೆ ನೊಸಲಲಿ
ತಿಲಕವನು ರಚಿಸಿದಳು ಸೇಸೆಯ
ತಳಿದಳೇರಿಸಿ ತಿಗುರ ಗೆಲಿದಳು ಹಿಣಿಲ ಹೊಸ ಪರಿಯ
ಬಲುಭುಜನ ಹರಸಿದಳು ಕಗ್ಗ
ತ್ತಲೆಯ ಹಬ್ಬುಗೆಯೊಳಗೆ ನಾಟ್ಯದ
ನಿಳಯ ಮಧ್ಯದ ಮಣಿಯ ಮಂಚದ ಮೇಲೆ ಪವಡಿಸಿದ ೮೦

ಉರಿವ ಮಾರಿಯ ಬೇಟದಾತನು
ತುರುಗಿದನು ಮಲ್ಲಿಗೆಯ ಮೊಗ್ಗೆಯ
ನಿರಿಕಿ ತಾ ಪೂಸಿದನು ಸಾದು ಜವಾಜಿ ಕತ್ತುರಿಯ
ಮೆರೆವ ಗಂಡುಡಿಗೆಯನು ರಚಿಸಿದ
ಸೆರಗಿನೊಯ್ಯಾರದಲಿ ಸುರಗಿಯ
ತಿರುಹಿತಿರುಳೊಬ್ಬನೆ ನಿಜಾಲಯದಿಂದ ಹೊರವಂಟ ೮೧

ಕಾಲಪಾಶದಲೆಳಸಿಕೊಂಬ ಕ
ರಾಳಮತಿ ಸುಡುಗಾಡಲೈತಂ
ದಾಲಯವ ಹೊಕ್ಕನು ಕೃತಾಂತನ ಬಾಯ ಹೊಗುವಂತೆ
ಮೇಲೆ ಮೇಲವಶಕುನ ಶತಕವ
ನಾಲಿಸದೆ ಸುಮ್ಮಾನದಲಿ ಕೇ
ಡಾಳಿ ಬಂದನು ಮಂಚವಿದ್ದೆಡೆಗಾಗಿ ತಡವರಿಸಿ ೮೨

ವನಜಮುಖಿ ವೀಳೆಯವನನುಲೇ
ಪನವ ಮಲ್ಲಿಗೆಯರಳ ತೊಡಿಗೆಯ
ನನುಪಮಾಂಬರವಿದೆ ಮನೋಹರವಹರೆ ಚಿತ್ತೈಸು
ನಿನಗೆ ಪಾಸಟಿಯಾನುಯೆನ್ನವೊ
ಲನಿಮಿಷರೊಳರಾರುಂಟು ಚೆಲುವರು
ಮನುಜರೆನ್ನನು ಹೋಲುವರೆ ಸೈರಂಧ್ರಿ ಕೇಳೆಂದ ೮೩

ಎನ್ನವೋಲ್ ಪುರುಷರಲಿ ಚೆಲುವರ
ಮುನ್ನ ನೀ ಕಂಡರಿದೆಯಾದೊಡೆ
ಯೆನ್ನ ಮೇಲಾಣೆಲೆಗೆ ಹುಸಿಯದೆ ಹೇಳು ಹೇಳೆಂದು
ಮುನ್ನ ನಿನ್ನಂತಪ್ಪ ಸತಿಯರು
ಎನ್ನನೇ ಬಯಸುವರು ನಾರಿಯ
ರೆನ್ನ ಕಂಡರೆ ಸೋಲದವರಿಲ್ಲೆಲೆಗೆ ನಿನ್ನಾಣೆ ೮೪

ಎಲವೊ ಕೀಚಕ ನಿನ್ನ ಹೋಲುವ
ಚೆಲುವರಿಲ್ಲಂತಿರಲಿ ಲೋಕದ
ಲಲನೆಯರ ಪರಿಯಲ್ಲ ತನ್ನಯ ರೂಪು ಬೇರೊಂದು
ಇಳೆಯೊಳೆನಗೆಣೆಯಿಲ್ಲ ನಿನಗಾ
ನೊಲಿದು ಬಂದೆನು ತನ್ನ ಪರಿಯನು
ಬಳಿಕ ನೋಡಾ ಬೇಗ ತೋರುವೆನೆಂದನಾ ಭೀಮ ೮೫

ಎನಗೆ ಪುರುಷರು ಸೋಲದವರಿ
ಲ್ಲೆನಗೆ ಪಾಸಟಿ ನೀನು ನಿನಗಾ
ಮನವೊಲಿದೆ ನೀ ನೋಡು ತನ್ನಯ ಹೆಣ್ಣುತನದನುವ
ಎನಲು ಹರುಷದಲುಬ್ಬಿ ಕೀಚಕ
ನನಿಲಜನ ಮೈದಡವಿ ವೃತ್ತ
ಸ್ತನವ ಕಾಣದೆ ಹೆದರಿ ಬಳಿಕಿಂತೆಂದನವ ನಗುತ ೮೬

ಎಲೆಗೆ ಕಲುಮೈಯಾದೆ ಕಡುಗೋ
ಮಲತೆಯೆತ್ತಲು ಕರ್ಕಶಾಂಗದ
ಬಲುಹಿದೆತ್ತಲು ಮಾಯ ವೇಷವ ಧರಿಸಿದೆಯೊ ಮೇಣು
ತಿಳುಹೆನಲು ಕೇಳೆಲವೊ ಪರ ಸತಿ
ಗಳುಪಿದಾತಂಗಮೃತ ವಿಷ ಕೋ
ಮಲತೆ ಕರ್ಕಶವಹುದೆನುತ ತುಡುಕಿದನು ಮುಂದಲೆಯ ೮೭

ಚಪಳೆ ಫಡ ಹೋಗೆನುತ ಹಾಯ್ದನು
ಕೃಪಣಮತಿ ಮುಂಗೈಯಲನಿಲಜ
ನಪರ ಭಾಗಕೆ ಹಾಯ್ದು ಹಿಡಿದನು ಕೀಚಕನ ತುರುಬ
ವಿಪುಳಬಲ ಕಳವಳಿಸಿದನು ಕಡು
ಕುಪಿತನಾದನು ಹೆಂಗುಸಲ್ಲಿವ
ನಪಸದನು ತೆಗೆ ಕರುಳನೆನುತೊಳಹೊಕ್ಕು ಹೆಣಗಿದನು ೮೮

ತಿವಿದನವನುರವಣಿಸಿ ಮಾರುತಿ
ಕವಿದು ಹೆಣಗಿದನಡಸಿ ಹೊಯ್ದೊಡೆ
ಬವರಿಯಲಿ ಟೊಣದೌಕಿದೊಡೆ ಮಡ ಮುರಿಯದೊಳಹೊಕ್ಕು
ಸವಡಿ ಮಂದರದಂತೆ ಕೀಚಕ
ಪವನಸುತರೊಪ್ಪಿದರು ಭೀಮನ
ಯುವತಿ ನಗುತಾಲಿಸುತಲಿದ್ದಳು ಹೊಯ್ಲ ಹೋರಟೆಯ ೮೯

ಎರಗಿದೊಡೆ ಕೀಚಕನ ಗಾಯಕೆ
ತರವರಿಸಿ ಕಲಿಭೀಮ ಮಂಡಿಸಿ
ಮರೆವಡೆದು ಮುರಿದೆದ್ದು ರೋಷದಲೌಡನೊಡೆಯಗಿದು
ಬರಸಿಡಿಲು ಪರ್ವತದ ಶಿಖರವ
ನೆರಗುವಂತಿರೆ ಖಳನ ನೆತ್ತಿಯ
ನೆರಗಿದನು ರಣಧೀರನುನ್ನತ ಬಾಹುಸತ್ವದಲಿ ೯೦

ಅರಿಯ ಮುಷ್ಟಿಯ ಗಾಯದಲಿ ತಲೆ
ಬಿರಿಯೆ ತನು ಡೆಂಡಣಿಸಿ ಕಂಗಳು
ತಿರುಗಿ ಜೋಲಿದು ಮೆಲ್ಲ ಮೆಲ್ಲನೆಯಸುವ ಪಸರಿಸುತ
ಕೆರಳಿ ಕರಿ ಕೇಸರಿಯ ಹೊಯ್ದುರೆ
ತಿರುಗುವಂತಿರೆ ಭೀಮಸೇನನ
ಬರಿಯ ತಿವಿದನು ಬೀಳೆನುತ ಖಳುರಾಯ ಹಲು ಮೊರೆದ ೯೧

ತಿರುಗಿ ಪೈಸರವೋಗಿ ಪವನಜ
ಮರಳಿ ತಿವಿದನು ಕೀಚಕನ ಪೇ
ರುರವನೆದೆ ಜರ್ಝರಿತವಾಗಲು ಕಾರಿದನು ಕರುಳ
ಬಿರಿದವಾಲಿಗಳೊಲೆದೊಲೆದು ಕ
ಣ್ಣುರುಗಿ ಧೊಪ್ಪನೆ ಕೆಡೆದು ನಿಮಿಷಕೆ
ಹೊರಳಿ ಹರಣವ ಕಳುಹಿ ಕಳೆದುದು ಕಾಯ ಕೀಚಕನ ೯೨

ತಲೆಯನೆದೆಯೊಳಗಿಕ್ಕಿ ಕೈ ಕಾ
ಲ್ಗಳನು ಬಸುರೊಳು ಸಿಕ್ಕಿ ದೂರಕೆ
ತೊಲಗಿದನು ತೋರಿದನು ರಮಣಿಗೆ ಕೀಚಕನ ಹದನ
ಖಳನ ಕಾಲನ ಕೋಣ ತುಳಿದಂ
ತಿಳೆಯೊಳೊರಗಿರೆ ಕಂಡು ಕಾಮಿನಿ
ಕಳಕಳಿಸಿದಳು ಭೀಮಸೇನನಪ್ಪಿ ಮುಂಡಾಡಿ ೯೩

ತರುಣಿ ಬಿಡು ಸಾರೆನುತ ಪವನಜ
ಸರಿದನತ್ತಲು ದ್ರುಪದನಂದನೆ
ಕರೆದು ನುಡಿದಳು ಕಾಹಿನವರಿಗೆ ಕೀಚಕನ ಹದನ
ದುರುಳ ಬಲುಹಿಂದೆನ್ನನೆಳೆದೊಡೆ
ಕೆರಳಿದರು ಗಂಧರ್ವರೀತಗೆ
ಹರುವ ಕಂಡರು ನೋಡಿಯೆನೆ ಹರಿತಂದರವಳೊಡನೆ ೯೪

ಅರಸಿ ಕೈದೀವಿಗೆಯಲವನಿಹ
ಪರಿಯ ಕಂಡರು ಕಾಹಿನವದಿರು
ಹರಿದು ಹೇಳಿದರಾತನನುಜಾತರಿಗೆ ಬೇಗದಲಿ
ಕರದಿ ಬಾಯ್ಗಳ ಹೊಯ್ದು ಹೃದಯದೊ
ಳುರಿ ಚಡಾಳಿಸೆ ಬಿಟ್ಟ ಮಂಡೆಯೊ
ಳಿರದೆ ಬಂದರು ಕೀಚಕನ ಸೋದರರು ಬಾಯ್ವಿಡುತ ೯೫

ಆರು ಗತಿಯೆಮಗಕಟ ಕೀಚಕ
ವೀರ ದೇಶಿಗರಾದೆವಾವಿ
ನ್ನಾರ ಸೇರುವೆವೆನುತ ಹಲುಬಿದರವನ ತಕ್ಕೈಸಿ
ಕ್ರೂರಕರ್ಮರು ನಿನ್ನ ಕೊಂದವ
ರಾರು ಹಾ ಹಾಯೆನುತ ಹಲುಬಲು
ವಾರಿಜಾನನೆ ಮುಗುಳುನಗೆಯಲಿ ನೋಡಿದಳು ಖಳರ ೯೬

ಇವಳಿಗೋಸುಗವಳಿದನೇ ಸಹ
ಭವನು ತಪ್ಪೇನೆನುತ ನಡುವಿರು
ಳವದಿರೈತಂದರುಹಿದರು ವೈರಾಟ ರಾಯಂಗೆ
ಅವಳನಾತನ ಕೂಡೆ ಕಳಹುವೊ
ಡೆವಗೆ ನೇಮವೆಯೆಂದು ಬೀಳ್ಕೊಂ
ಡವರು ಮರಳಿದು ಬಂದು ಹಿಡಿದರು ಕಮಲಲೋಚನೆಯ ೯೭

ತೆಗೆದು ಮಂಚದಲವನ ಹೆಣನನು
ಬಿಗಿದರವಳನು ಕಾಲ ದೆಸೆಯಲಿ
ನಗುವುದಿನ್ನೊಮ್ಮೆನುತ ಕಟ್ಟಿದರವರು ಕಾಮಿನಿಯ
ಬೆಗಡುಗೊಂಡಂಭೋಜಮುಖಿಯು
ಬ್ಬೆಗದೊಳೊದರಿದಳಕಟಕಟ ಪಾ
ಪಿಗಳಿರಾ ಗಂಧರ್ವರಿರ ಹಾಯೆನುತ ಹಲುಬಿದಳು ೯೮

ಕೇಳಕಟ ಜಯನೇ ಜಯಂತನೆ
ಕೇಳು ವಿಜಯ ಜಯೋದ್ಭವನೆ ನೀ
ಕೇಳು ಜಯಸೇನನೆ ದುರಾತ್ಮಕರೆನ್ನನೆಳೆದೊಯ್ದು
ಬೀಳಿಸುವರಗ್ನಿಯಲಿ ನೀವಕ
ಟೇಳಿ ತಡವೇಕೆನುತ ಮೊರೆಯಿಡೆ
ಕೇಳಿದನು ಕಲಿಭೀಮ ಸತಿಯಾಕ್ರಂದನ ಧ್ವನಿಯ ೯೯

ಈ ದುರಾತ್ಮರಿಗಗ್ರಜನ ಸಾ
ವೈದದೇ ತಮ್ಮಣ್ಣನಲ್ಲಿಗೆ
ಹೊಯ್ದು ಕಳುಹಲುಬೇಕಲಾ ಕುನ್ನಿಗಳನೀ ಕ್ಷಣಕೆ
ಬೈಯ್ದು ಫಲವೇನೆಂದು ಮಾರುತಿ
ಹಾಯ್ದು ಝಂಕಿಸಿ ರುದ್ರಭೂಮಿಯ
ನೆಯ್ದಿದನು ಫಡಯೆನುತ ಕೊಂಡನು ಮುರಿದು ಹೆಮ್ಮರನ ೧೦೦

ಎಲೆಲೆ ಗಂಧರ್ವಕನ ಹೆಂಗುಸ
ಕಳಚಿ ಬಿಡಿರೊ ಪಾಪಿ ಹೋಗಲಿ
ಕೊಲೆಗಡಿಗನಿವನೆನುತ ಹೆಣನನು ಬಿಸುಟು ದೆಸೆದೆಸೆಗೆ
ತಲೆಗೆದರಿ ತೆಗೆದೋಡೆ ನಕ್ಕನು
ಕಳಕಳಸಿ ಕಲಿಭೀಮನೆಲೆ ನಾ
ಯ್ಗಳಿರ ಹೋದೊಡೆ ಬಿಡುವೆನೇ ಹಾಯೆನುತ ಕೈಕೊಂಡ ೧೦೧

ತಿರುಹಿದನು ಹೆಮ್ಮರನನವದಿರ
ನರೆದು ನಿಟ್ಟೊರೆಸಿದನು ದೆಸೆ ದೆಸೆ
ಗೊರಲಿ ಚಿಮ್ಮುವ ಚಪಲರನು ಬೆಂಬತ್ತಿ ಬರಿಕೈದು
ಕುರಿದರಿದು ಮಾಡಿದನು ನೂರೈ
ವರನು ಕೊಂದನು ಮರನ ಹಾಯಿಕಿ
ಮರಳಿ ಮಿಣ್ಣನೆ ಬಂದು ಹೊಕ್ಕನು ಬಾಣಸದ ಮನೆಯ ೧೦೨

ಸುಳಿಯಲಮ್ಮದು ಪೌರಜನವಿವ
ರಳಿವ ವಚನಿಸಲಮ್ಮದೀಕೆಯ
ನಲುಕಲಮ್ಮದು ನೋಡಲಮ್ಮದು ಮಂದಿ ಗುಜುಗುಜಿಸಿ
ನಳಿನಮುಖಿ ನಸುನಗುತ ತಿಳಿಗೊಳ
ದೊಳಗೆ ಹೊಕ್ಕಳು ಮಿಂದು ಬೀದಿಗ
ಳೊಳಗೆ ಬರುತಿರೆ ಕಂಡು ಕೈಗಳ ಮುಗಿದುದಖಿಳ ಜನ ೧೦೩

ಈಕೆಗೋಸುಗವಳಿದನಕಟವಿ
ವೇಕಿ ಕೀಚಕನೆಂದು ಕೆಲಬರಿ
ದೇಕೆ ನಮಗೀ ಚಿಂತೆ ಶಿವ ಶಿವಯೆಂದು ಕೆಲಕೆಲರು
ನೂಕಿ ಕವಿದುದು ಮಂದಿ ಮಧ್ಯದೊ
ಳೀಕೆ ಮೆಲ್ಲನೆ ಬರುತಲಾ ಲೋ
ಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ ೧೦೪

ಮುಗುಳು ನಗೆಯಲಿ ಕಣ್ಣ ಕಡೆಯಲಿ
ವಿಗಡ ಭೀಮನ ನೋಡಿ ಕೈಗಳ
ಮುಗಿದೆವಾವ್ ಗಂಧರ್ವಪತಿಗೆ ನಮೋ ನಮೋಯೆನುತ
ಹೊಗರಿಡುವ ಹರುಷದಲಿ ರೋಮಾ
ಳಿಗಳ ಗುಡಿಯಲಿ ತನ್ನ ನಿಳಯಕೆ
ಮುಗುದೆ ಬಂದಳು ಸೂರ್ಯನಡರಿದನುದಯ ಪರ್ವತವ ೧೦೫

ಊರೊಳಗೆ ಗುಜುಗುಜಿಸಿ ವಾರ್ತಾ
ಭಾರ ಮಸಗಿತು ನೆರೆದ ನೆರವಿಯೊ
ಳಾರ ಬಾಯ್ಗಳೊಳಾದೊಡೆಯು ಜಪವಾಯ್ತು ಜನಜನಿತ
ಭೂರಿ ಚಿಂತಾತುರ ವಿರಾಟನು
ಮಾರಿಯೋ ಸೈರಂಧ್ರಿಯೋ ಈ
ನಾರಿಯಿರಬೇಡೆಂದು ತನ್ನಯ ಸತಿಗೆ ನೇಮಿಸಿದ ೧೦೬

ಅಳಲು ಕೈಮಿಗಲಾ ವಿರಾಟನ
ಲಲನೆ ಸೈರಂಧ್ರಿಯನು ಕರೆಸಿದ
ಳೆಲೆ ಮಹಾತುಮೆ ತಾಯೆ ನಿಮಗಂಜುವೆವು ಶರಣೆನುತ
ಹೊಳಲೊಳಿದ್ದರೆ ಭೀತಿ ಘನ ನೀ
ವೊಲಿದ ಠಾವಿಗೆ ಬಿಜಯ ಮಾಡುವು
ದುಳುಹ ಬೇಹುದು ತಮ್ಮನೆನಲಿಂತೆಂದಳಿಂದುಮುಖಿ ೧೦೭

ಎಮ್ಮದೇನಪರಾಧ ದೇವಿಯೆ
ನಿಮ್ಮ ತಮ್ಮನು ತಪ್ಪಿ ನಡೆದೊಡೆ
ಯೆಮ್ಮ ರಮಣರು ಸೈರಿಸದೆ ಸೀಳಿದರು ದುರ್ಜನರ
ನಿಮ್ಮ ನಾವೋಲೈಸಿ ಮರಳಿದು
ನಿಮ್ಮ ಕೆಡಿಸುವರಲ್ಲ ಧೂರ್ತರು
ತಮ್ಮ ಮತದಲಿ ತಾವೆ ಕೆಟ್ಟರು ನೀತಿ ಬಾಹಿರರು ೧೦೮

ತಾವು ತಮ್ಮಿಂದಳಿದರದು ಸಾ
ಕಾವು ನಿಮಗಂಜುವೆವು ನಿಮ್ಮಲಿ
ಯಾವುದೂ ತಪ್ಪಿಲ್ಲ ನೀವಿಲ್ಲಿರಲು ಬೇಡೆನಲು
ನಾವು ಮುನ್ನಿಹರಲ್ಲ ನಿಮ್ಮಯ
ಸೇವೆಯಲಿ ಹದಿಮೂರು ದಿವಸವು
ನೀವು ನೂಕಿದೊಡಿರದೆ ಮಾಣೆವು ದೇವಿ ಚಿತ್ತೈಸು ೧೦೯

ಅಳುಕದಿರಿ ಹದಿಮೂರು ದಿವಸವ
ಕಳೆದ ಬಳಿಕೆಮಗೆಲ್ಲ ಲೇಸಹು
ದಳಿದು ಹೋದರು ದುಷ್ಟರಾದವರಿನ್ನು ಭಯ ಬೇಡ
ಕಲಹದವರಾವಲ್ಲೆನುತ ನಿಜ
ನಿಳಯವನು ಸಾರಿದಳು ದುರುಪದಿ
ಗಳಿಗೆ ಗಳಿಗೆಗೆ ಕೀಚಕನ ವೃತ್ತಾಂತ ಪಸರಿಸಿತು ೧೧೦

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)