ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Thursday, January 21, 2010

ಸಭಾಪರ್ವ: ೦೧. ರಾಜಸೂಯಾರಂಭ

ಸೂ: ಸಭೆಯೊಳೋಲಗದೊಳು ವಿರಿಂಚಿ
ಪ್ರಭವನನುಮತದಿಂದ ಧರಣೀ
ವಿಭು ಮಹಾಕ್ರತು ರಾಜಸೂಯವನೊಲಿದು ಕೈಕೊಂಡ

ಕೇಳು ಜನಮೇಜಯ ಧರಿತ್ರೀ
ಪಾಲ ಖಾಂಡವ ವನದ ವಹ್ನಿ
ಜ್ವಾಲೆ ತೆಗೆದುದು ಕೂಡೆ ಹೊಗೆದುದು ಹೊದರ ಹೊಸ ಮೆಳೆಯ
ಮೇಲುಗಾಳಗದುಬ್ಬಿನಲಿ ಸಿರಿ
ಲೋಲ ಸಹಿತರ್ಜುನನು ವಿಕ್ರಮ
ದೇಳಿಗೆಯ ಪರಿತೋಷದಲಿ ತಿರುಗಿದನು ಪಟ್ಟಣಕೆ ೧

ದೂತರೈದಿದರಿವರ ಸೂರೆಯ
ಕೈತವಕಿಗರು ಕೃತಕ ವಾರ್ತಾ
ಭೀತ ಪುರಜನ ಮುಖದ ದುಗುಡದ ದಡ್ಡಿಗಳನುಗಿದು
ಬೀತುದಿಂದ್ರನ ಬಲುಹು ವಿಗಡನ
ವೀತಿಹೋತ್ರನ ವಿಲಗ ತಿದ್ದಿ ವಿ
ಧೂತರಿಪುಬಲ ಬಂದನಿದೆಯೆಂದರು ಮಹೀಪತಿಗೆ ೨

ಹೂತುದರಸನ ಹರುಷಲತೆ ಪುರು
ಹೂತ ವಿಜಯದ ವಿಜಯ ವಾರ್ತಾ
ಶ್ರೋತ್ರ ಸುಖಸಂಪ್ರೀತಿ ನಯನ ಜಲಾಭಿಷೇಕದಲಿ
ಮಾತು ಹಿಂಚಿತು ಮುಂಚಿದುದು ನಯ
ನಾತಿಥಿವ್ರಜ ಮುಸುಕಿತಸುರ ವಿ
ಘಾತಿ ಪಾರ್ಥನನನಿಲಸುತ ನಕುಲಾದಿ ಬಾಂಧವರ ೩

ತಳಿತ ಗುಡಿಗಳು ಸಾಲ ಕಲಶದ
ನಿಳಯ ನಿಳಯದ ಬೀದಿ ಬೀದಿಯ
ತಳಿರ ತೋರಣದೋರಣದ ನವ ಮಕರತೋರಣದ
ತಳಿಗೆ ತುಂಬುಲದಾರತಿಯ ಮಂ
ಗಳಿತ ರಭಸದೊಳಖಿಳ ರಾಜಾ
ವಳಿಗಳೊಸಗೆಯುಳಿವರು ಹೊಕ್ಕರು ರಾಜಮಂದಿರವ ೪

ಹಿರಿಯರಂಘ್ರಿದ್ವಯಕೆ ಮಣಿದರು
ಕಿರಿಯರುಚಿತ ಕ್ಷೇಮ ಕುಶಲದಿ
ಪರಿ ರಚಿತ ಪರಿರಂಭ ಮಧುರ ವಚೋವಿಳಾಸದಲಿ
ಅರಸನಿವರನು ಮನ್ನಿಸಿದನಾ
ದರಿಸಿತನ್ಯೋನ್ಯಾನುರಾಗ
ಸ್ಫುರಿತ ತೇಜೋಭಾವ ವಿಭ್ರಮ ಭೂಪತಿವ್ರಾತ ೫

ಅರಸ ಕೇಳೈ ಬಳಿಕ ಹರಿ ನಿಜ
ಪುರಕೆ ಬಿಜಯಂಗೆಯ್ವ ವಾರ್ತೆಯ
ನೊರೆದನವನೀಪತಿಗೆ ಭೀಮ ಧನಂಜಯಾದ್ಯರಿಗೆ
ಅರಸಿಯರಿಗಭಿಮನ್ಯು ಧರ್ಮಜ
ನರ ವೃಕೋದರಸೂನು ಮೊದಲಾ
ಗಿರೆ ಸಮಸ್ತಜನಂಗಳನು ಮನ್ನಿಸಿದನುಚಿತದಲಿ ೬

ವರಮುಹೂರ್ತದೊಳಮೃತ ಯೋಗೋ
ತ್ಕರ ಶುಭಗ್ರಹ ದೃಷ್ಟಿಯಲಿ ಹಿಮ
ಕರಶುಭಾವಸ್ಥೆಯಲಿ ಕೇಂದ್ರಸ್ಥಾನ ಗುರುವಿನಲಿ
ಧರಣಿಸುರರಾಶೀರ್ವಚನ ವಿ
ಸ್ತರಣ ದಧಿ ದೂರ್ವಾಕ್ಷತೆಗಳು
ಬ್ಬರದ ವಾದ್ಯ ಗಡಾವಣೆಯಲಸುರಾರಿ ಹೊರವಂಟ ೭

ಕರಯುಗದ ಚಮ್ಮಟಿಕೆ ವಾಘೆಯ
ಲರಸ ರಥವೇರಿದನು ಮುಕ್ತಾ
ಭರದ ಭಾರದ ಸತ್ತಿಗೆಯ ಪಲ್ಲವಿಸಿದನು ಭೀಮ
ಹರಿಯುಭಯಪಾರ್ಶ್ವದಲಿ ಸಿತ ಚಾ
ಮರವ ಚಿಮ್ಮಿದನರ್ಜುನನು ಬಂ
ಧುರದ ಹಡಪದ ಹೆಗಲಲೈದಿದರರ್ಜುನಾನುಜರು ೮

ಪೌರಜನ ಪುರಜನ ನೃಪಾಲ ಕು
ಮಾರ ಸಚಿವ ಪಸಾಯ್ತ ಭಟ ಪರಿ
ವಾರ ಧೌಮ್ಯಪ್ರಮುಖ ಸೂರಿ ಸಮಾಜರೊಗ್ಗಿನಲಿ
ತೇರ ಬಳಿವಿಡಿದೈದಿದರು ಮುರ
ವೈರಿ ವಿರಹ ವಿಧೂತ ವದನಾಂ
ಭೋರುಹರ ಸಂತೈಸಿ ಬೀಳ್ಕೊಟ್ಟನು ಕೃಪಾಜಲಧಿ ೯

ಅರಿನೃಪರು ಕುಹಕಿಗಳು ನೀವೇ
ಸರಸ ಹೃದಯರಧರ್ಮಶೀಲರು
ಪರರು ನೀವತಿ ಧರ್ಮನಿಷ್ಠರು ಹಾನಿಯುಂಟದಕೆ
ಅರಸನಾರೋಗಳೆ ವಿಹಾರದೊ
ಳಿರುಳು ಹಗಲು ಮೃಗವ್ಯಸನದೆ
ಚ್ಚರಿನೊಳಿಹುದೆಂದನಿಬರನು ಬೀಳ್ಕೊಟ್ಟನಸುರಾರಿ ೧೦

ನಾಲಗೆಗಳಸುರಾರಿ ಗುಣ ನಾ
ಮಾಳಿಯಲಿ ತುರುಗಿದವು ಕಂಗಳು
ನೀಲಮೇಘಶ್ಯಾಮನಲಿ ಬೆಚ್ಚವು ವಿಹಾರದಲಿ
ಬಾಲಕೇಳೀ ಕಥನ ಸುಧೆಯೊಳ
ಗಾಳಿ ಮುಳುಗುತ ಕಳುಹುತನಿಬರು
ಸಾಲಭಂಜಿಕೆಯಂದವಾದರು ಕೃಷ್ಣವಿರಹದಲಿ ೧೧

ಕಳುಹಿ ಕಂಗಳು ಮರಳಿದವು ಮನ
ಕಳುಹದಾ ದ್ವಾರಾವತಿಗೆ ಮಂ
ಗಳ ಮಹೋತ್ಸವದೊಸಗೆ ನುಡಿಯಲಿ ಹೊಕ್ಕನಸುರಾರಿ
ಬಳಿಕಿವರು ನಿಜ ರಾಜಭವನ
ಸ್ಥಳಕೆ ಬಂದರು ಸೌಮನಸ್ಯದ
ಲಿಳೆಯ ಪಾಲಿಸುತಿರ್ದರವನೀಪಾಲ ಕೇಳೆಂದ ೧೨

ಮುರಹರನ ನೇಮದಲಿ ಮಯ ವಿ
ಸ್ತರಿಸಿದನು ಪದಿನಾಲ್ಕು ತಿಂಗಳು
ವರ ಸಭಾಮಂಟಪವನನಿಬರಿಗಿವ ಕೃತಜ್ಞನಲೆ
ಕಿರಣ ಲಹರಿಯ ವಿವಿಧ ರತ್ನೋ
ತ್ಕರದ ರಚನಾಶಿಲ್ಪವಿದು ದೇ
ವರಿಗಸಾಧ್ಯವು ಶಿವಶಿವಾಯೆನೆ ಮೆರೆದುದಾಸ್ಥಾನ ೧೩

ಹತ್ತು ಸಾವಿರ ಕೈ ಪ್ರಮಾಣದ
ಸುತ್ತುವಳಯದ ಮಣಿಯ ಶಿಲೆಗಳ
ತತ್ತವಣೆಗಳ ತೆಕ್ಕೆವೆಳಗಿನ ಲಳಿಯ ಲಹರಿಗಳ
ಸುತ್ತುವಳಯದ ಪದ್ಮರಾಗದ
ಭಿತ್ತಿಗಳ ವೈಡೂರ್ಯ ಶಿಲೆಗಳ
ಮತ್ತವಾರಣ ವರ ವಿಧಾನದಲೆಸೆದುದಾಸ್ಥಾನ ೧೪

ಕರೆಸಿದನು ಮಯನೆಂಟು ಸಾವಿರ
ಸರಿಗ ರಕ್ಕಸ ಕಿಂಕರರ ನಿಜ
ಶಿರದೊಳಾಂತರು ತಂದರಿಂದ್ರಪ್ರಸ್ಥಪುರವರಕೆ
ಅರಸ ಕಾಣಿಸಿಕೊಂಡನದನಾ
ದರಿಸಿದನು ಭೀಮಂಗೆ ಭಾರಿಯ
ವರ ಗದಾದಂಡವನು ಕಾಣಿಕೆಯಿತ್ತು ಪೊಡವಂಟ ೧೫

ಇದು ಪುರಾತನ ಸಗರ ವಂಶಾ
ಭ್ಯುದಯ ದುರ್ಜಯ ಯೌವನಾಶ್ವನ
ಗದೆ ಕೃತಾಂತನ ಕರದ ದಂಡವನಂಡಲೆವ ಬಲದ
ಮದದಲೊಪ್ಪುವುದೆನುತ ಮಯನತಿ
ಮುದದಿ ಬಳಿಕಾ ದೇವದತ್ತಾ
ಖ್ಯದ ಮಹಾ ಶಂಖವನು ಪಾರ್ಥಗೆ ಕೊಟ್ಟು ಕೈಮುಗಿದ ೧೬

ಒಸಗೆ ಮೆರೆದುದು ಮಯನ ಮಿಗೆ ಮ
ನ್ನಿಸಿದನವನಿಪನಂಗಚಿತ್ತದೊ
ಳಸುರ ಕಿಂಕರರನಿಬರನು ಸನ್ಮಾನ ದಾನದಲಿ
ಒಸೆದು ಕಳುಹಿದನಾತನನು ದೆಸೆ
ದೆಸೆಯ ಯಾಚಕ ನಿಕರ ನೂಕಿತು
ಮುಸುಕಿತೈ ಧರ್ಮಜನ ಕೀರ್ತಿಯ ಝಾಡಿ ಮೂಜಗವ ೧೭

ದಿವಸ ದಿವಸದೊಳುಂಡುದವನೀ
ದಿವಿಜ ಸಂತತಿ ಹತ್ತು ಸಾವಿರ
ವವರನೇನೆಂದೆಣಿಸುವೆನು ಮಾರ್ಗಣ ಮಹೋದಧಿಯ
ವಿವಿಧ ರತ್ನಾಭರಣ ಕಾಂಚನ
ನವ ದುಕೂಲದ ದಿಂಡಿನಲಿ ಬುಧ
ನಿವಹ ದಣಿದುದನಂತ ಕೃಪಣಾನಾಥ ಜನಸಹಿತ ೧೮

ಆ ಮಹೋತ್ಸವದೇಳು ದಿನವಭಿ
ರಾಮರಂಜಿತವಾಯ್ತು ಶುಭದಿನ
ರಾಮಣೀಯಕ ಲಗ್ನದಲಿ ಹೊಕ್ಕನು ಮಹಾಸಭೆಯ
ಭೂಮಿಪಾಲರನಂತ ಸುಜನ
ಸ್ತೋಮವನುಜರಮರ್ತ್ಯರೆನಿಪ ಸ
ನಾಮರಿದ್ದರು ರಾಯನೆಡಬಲವಂಕದಿದಿರಿನಲಿ ೧೯

ಹೊಳೆಹೊಳೆದುದಾಸ್ಥಾನ ಕಾಂತಾ
ವಳಿಯ ಕಂಗಳ ಬೆಳಕಿನಲಿ ತನಿ
ಮುಳುಗಿತೋಲಗ ಲಲಿತರಸ ಲಾವಣ್ಯಲಹರಿಯಲಿ
ವಿಳಸದಖಿಳಾಭರಣ ರತ್ನಾ
ವಳಿಯ ರಶ್ಮಿಯಲಡಿಗಡಿಗೆ ಪ್ರ
ಜ್ವಲಿಸಿತಾ ಸಭೆ ದೀಪ್ತಿಮಯ ವಿವಿಧಾನುಭಾವದಲಿ ೨೦

ಮೇಳದಲಿ ಗಂಧರ್ವರಿಪ್ಪ
ತ್ತೇಳು ತುಂಬುರ ಸಹಿತ ಶುದ್ಧದ
ಸಾಳಗದ ಸಂಕೀರ್ಣ ದೇಶಿಯ ವಿವಿಧ ರಚನೆಗಳ
ಬಾಳೆಯರ ಸುರಗಣಿಕೆಯರ ಮುಖ
ಚಾಳೆಯರ ಸಂಗೀತ ತಾಳದ
ತೂಳುವರೆ ತುಂಬಿದುದು ಕುಸುಮಾಯುಧನ ಕಳವಳವ ೨೧

ಆ ಮಹಾಸಭೆಯಲಿ ಯುಧಿಷ್ಠಿರ
ಭೂಮಿಪತಿ ದೂರದಲಿ ಕಂಡನು
ತಾಮರಸವಳ ನಯನ ಸನ್ನಿಭ ಭಾವ ಭಾವಿತನ
ಹಾ ಮಹಾದೇವೆತ್ತಣದುಭುತ
ಧಾಮವಿದು ದಿನಮಣಿಯ ತೇಜ
ಸ್ತೋಮವೆರಡರ ಧಾತುಯೆನುತೀಕ್ಷಿಸಿದರಾ ದೆಸೆಯ ೨೨

ಲಲಿತ ತೇಜಃಪುಂಜ ಮಿಗೆ ಥಳ
ಥಳಿಸಿತತಿ ದೂರದಲಿ ಬೆಳಗಿನ
ಗೊಳಸನುಡಿದಂತಾದುದಾಗಳೆ ತೋರಿತಾಕಾರ
ತಳಿತುದವಯವ ಶುದ್ಧವರ್ಣ
ಸ್ಥಳವು ನಿಮಿಷಕೆ ಮುನಿವರಾಕೃತಿ
ಹೊಳೆದುದಾಕ್ಷಣವೀತ ನಾರದನೆಂದುದಖಿಳಜನ ೨೩

ದಣಿಯದಾತನ ಬೆರಳು ನಾರಾ
ಯಣರವದ ವೀಣೆಯಲಿ ಹೃದಯಾಂ
ಗಣದ ಸೀಮೆಗೆ ಬಿಡಯವಾಗದು ಕೃಷ್ಣಪದ ಕೇಳಿ
ಪ್ರಣವರೂಪದ ಭಾವಶುದ್ಧಿಯ
ಕಣಿ ಮುರಾರಿಯ ತನ್ಮಯದ ನಿ
ರ್ಗುಣಮುನೀಶ್ವರನಿಳಿದನಿಂದ್ರಪ್ರಸ್ಥಪುರವರಕೆ ೨೪

ಬಂದನರಮನೆಗಾ ಮುನಿಯನಭಿ
ವಂದಿಸಿದುದಾಸ್ಥಾನವಿದಿರಲಿ
ನಿಂದುಬಿಜಯಂಗೈಸಿ ತಂದರು ಸಿಂಹವಿಷ್ಟರಕೆ
ಸಂದ ಮಧುಪರ್ಕಾದಿ ಸತ್ಕೃತಿ
ಯಿಂದ ಪೂಜಿಸಿ ವಿನಯ ಮಿಗೆ ನಗು
ತೆಂದನವನೀಪಾಲನುಚಿತೋಕ್ತಿಯಲಿ ನಾರದನ ೨೫

ಕುಶಲವೇ ನಿಮ್ಮಂಘ್ರಿಗಳಿಗಿಂ
ದೊಸಗೆಯಾಯಿತು ನಮಗೆ ದರುಶನ
ವಸಮ ಸಂಸ್ಕೃತಿ ವಹ್ನಿದಗ್ಧರಿಗಮೃತ ವರ್ಷವಲೆ
ಪಶುಪತಿಯ ಪರಮೇಷ್ಠಿಯಾ ಮುರ
ದ್ವಿಷನ ಸಾಮರ್ಥ್ಯದ ಸಗಾಢದ
ದೆ(ಎ)ಸಕ ನಿಮಗುಂಟೆಂದು ಕೊಂಡಾಡಿದನು ನಾರದನ ೨೬

ಕುಶಲವೆಮಗಿಂದೈದೆ ನೀನೀ
ವಸುಮತೀವಧುಗೊಳ್ಳಿದನೆ ಶೋ
ಭಿಸುವುದೇ ಭವದಾಜ್ಞೆಯಲಿ ವರ್ಣಾಶ್ರಮಾಚಾರ
ದೆಸೆದೆಸೆಗಳಮಳಾಗ್ನಿಹೋತ್ರ
ಪ್ರಸರ ಧೂಮಧ್ವಜಗಳೇ ನಿಂ
ದಿಸರಲೇ ದುರ್ಜನರು ಸುಜನನರನೆಂದನಾ ಮುನಿಪ ೨೭

ಅರ್ಥದಿಂ ಧರ್ಮವನು ಧರ್ಮದಿ
ನರ್ಥವನು ಧರ್ಮಾರ್ಥವೆರಡನು
ವ್ಯರ್ಥಕಾಮದಲಳಿಯಲೇ ರಾಜ್ಯಾಭಿಲಾಷೆಯಲಿ
ಅರ್ಥಸಾಧನ ಧರ್ಮಸಾಧನ
ವರ್ಥಧರ್ಮದಲುಭಯಲೋಕಕ
ನರ್ಥಸಾಧನ ಕಾಮವೆಂದನು ಮುನಿ ನೃಪಾಲಂಗೆ ೨೮

ಮಾನ್ಯರನು ಧಿಕ್ಕರಿಸೆಯಲೆಯವ
ಮಾನ್ಯರನು ಮನ್ನಿಸೆಯಲೇ ಸಂ
ಮಾನ್ಯರನು ಸತ್ಕರಿಸುವಾ ಹಳಿವಾ ವಿಕಾರಿಗಳ
ಅನ್ಯರನು ನಿನ್ನವರ ಮಾಡಿಯ
ನನ್ಯರನು ಬಾಹಿರರ ಮಾಡಿವ
ದಾನ್ಯರನು ನಿಗ್ರಹಿಸೆಯೆಲೆ ಭೂಪಾಲ ಕೇಳೆಂದ ೨೯

ಖಳರ ಖಂಡಿಸುವಾ ಮದವ್ಯಾ
ಕುಲರ ದಂಡಿಸುವಾ ದರಿದ್ರರ
ನೊಲಿದು ರಕ್ಷಿಸುವಾ ಸುಮಾಯಾವಿಗಳ ಶಿಕ್ಷಿಸುವ
ಕುಲಯುತರ ಕೊಂಡಾಡುವಾ ರಿಪು
ಬಲದ ತಲೆ ಚೆಂಡಾಡುವಾ ದು
ರ್ಬಲರನತಿ ಬಾಧಿಸೆಯಲೇ ಭೂಪಾಲ ಕೇಳೆಂದ ೩೦

ಜಾತಿಸಂಕರವಿಲ್ಲಲೇ ಜನ
ಜಾತದಲಿ ಹೀನೋತ್ತಮರು ನಿ
ರ್ಣೀತರೇ ನಿಜಮಾರ್ಗದಲಿ ಕುಲವಿಹಿತ ಧರ್ಮದಲಿ
ಖ್ಯಾತರೇ ಸತ್ಪುರುಷರಧಿಕ
ದ್ಯೂತಕೇಳಿಗಳಿಲ್ಲಲೇ ಮೃಗ
ಯಾತಿರೇಕವ್ಯಸನ ಕಿರಿದೇ ರಾಯ ನಿನಗೆಂದ ೩೧

ಗಸಣಿಯಿಲ್ಲಲೆ ನಿನಗೆ ಸಪ್ತ
ವ್ಯಸನದಲಿ ನಿನ್ನನುಜ ತನುಜರ
ಮುಸುಡಧರ್ಮದಲಿರದಲೇ ವೈದಿಕ ವಿಧಾನದಲಿ
ಸಸಿನವೇ ನಿನ್ನರಿತ ಖಳರಿಗೆ
ಹುಸಿಕರಿಗೆ ಡಂಬಕರಿಗಜ್ಞರಿ
ಗುಸುರುವಾ ನಿನ್ನಂತರಂಗವನೆಂದನಾ ಮುನಿಪ ೩೨

ಹುರುಡಿಗರನೇಕಾಂತದೊಳಗಾ
ದರಿಸುವರು ಭೇದಕರ ಬುದ್ಧಿಗೆ
ತೆರಹುಗೊಡುವರು ಕುಟಿಲರಿಗೆ ವಿಶ್ವಾಸಹೀನರಿಗೆ
ಮರುಳುಗೊಂಬರು ಖೂಳರಿಗೆ ಭಂ
ಡರಿಗೆ ತೆರುವರು ಧನವನೀ ಧರೆ
ಯರಸುಗಳಿಗಿದು ಸಹಜ ನಿನ್ನಂತಸ್ಥವೇನೆಂದ ೩೩

ಒಳಗೆ ಕುಜನರು ಹೊರಗೆ ಧರಣೀ
ವಳಯಮಾನ್ಯರು ಛತ್ರಚಮರದ
ನೆಳಲು ಖೂಳರಿಗಾತಪದ ಬಲುಬೇಗೆ ಬುಧಜನಕೆ
ಒಳಗೆ ರಾಜದ್ರೋಹಿಗಳು ಹೊರ
ವಳಯದಲಿ ಪತಿಕಾರ್ಯನಿಷ್ಠರು
ಬಳಸಿಹುದು ನೃಪಚರಿತ ನಿನ್ನಂತಸ್ಥವೇನೆಂದ ೩೪

ಖೂಳರೊಡನೆ ವಿನೋದ ಭಂಡರೊ
ಳಾಳಿ ಸ್ವಾಮಿದ್ರೋಹರೊಡನೆ ಸ
ಮೇಳ ನಂಬುಗೆ ಡಂಭರೊಡನೆ ವಿಕಾರಿಯೊಡನಾಟ
ಸೂಳೆಯರು ಸಮಜೀವಿಗಳು ಕುಲ
ಬಾಲಕಿಯರೋಗಡಿಕೆಯವರು ನೃ
ಪಾಲಜನಕಿದು ಸಹಜ ನಿನ್ನಂತಸ್ಥವೇನೆಂದ ೩೫

ಆರು ಗುಣದೊಳುಪಾಯ ನಾಲ್ಕರೊ
ಳೇರಿಹುದೆ ಮನ ರಾಜಧರ್ಮದ
ಮೂರುವರ್ಗದೊಳೆಚ್ಚರುಂಟೇ ನಯವಿಧಾನದಲಿ
ಮೂರು ಶಕ್ತಿಗಳೊಳಗೆ ಮನ ಬೇ
ರೂರಿಹುದೆ ಸಪ್ತಾಂಗದಲಿ ಮೈ
ದೋರಿಹೈ ಬೇಸರೆಯೆಲೇ ಭೂಪಾಲ ನೀನೆಂದ ೩೬

ಪ್ರಜೆಗಳನುರಾಗಿಗಳೆ ಸುಭಟ
ವ್ರಜಕೆ ಜೀವಿತ ಸಂದಿಹುದೆ ವರ
ಸುಜನರಿಗೆ ಸಂತೋಷವೇ ಮಧುರೋಕ್ತಿ ರಚನೆಯಲಿ
ವಿಜಯ ಭೀಮರು ಯಮಳರಿವರ
ಗ್ರಜರೊಳನುಜರಭಿನ್ನರೇ ಗಜ
ಬಜಿಕೆಯಂತಃಪುರದೊಳಿಲ್ಲಲೆ ರಾಯ ಕೇಳೆಂದ ೩೭

ವಿಹಿತಕಾಲದ ಮೇಲೆ ಸಂಧಿಯ
ನಹಿತರೊಳು ವಿರಚಿಸುವ ಮೇಣ್ವಿ
ಗ್ರಹದ ಕಾಲಕೆ ವಿಗಡಿಸುವುದೆಂಬರಸು ನೀತಿಯಲಿ
ವಿಹಿತವೇ ಮತಿ ವೈರಿ ರಾಯರ
ವಿಹರಣವನವರಾಳು ಕುದುರೆಯ
ಬಹಳತೆಯನಲ್ಪತೆಯನರಿವೈ ರಾಯ ನೀನೆಂದ ೩೮

ಒಂದರಾಯಕೆ ಬೀಯ ಸರಿ ಮ
ತ್ತೊಂದು ಕಡೆಯಲಿ ಹೀನ ಫಲವಿ
ನ್ನೊಂದು ಕಾರ್ಯದುಪೇಕ್ಷತೆಗೆ ಮೊದಲಿಲ್ಲ ಕಡೆಯಿಲ್ಲ
ಒಂದು ದುರ್ಘಟ ದೈವ ಸಾಧಿತ
ವೊಂದು ಶಂಕಿತ ಫಲವೆನಿಪ್ಪವ
ಹಿಂದುಗಳೆವೈ ಮಂತ್ರದಲಿ ಭೂಪಾಲ ಕೇಳೆಂದ ೩೯

ನೆನೆದ ಮಂತ್ರವ ನಿನ್ನೊಳಾಲೋ
ಚನೆಯ ನಿಶ್ಚಯವಿಲ್ಲದಿರಲೊ
ಬ್ಬನಲಿ ಮೇಣ್ ಹಲಬರಲಿ ಜಡರಲಿ ಮತಿವಿಹೀನರಲಿ
ಮನಬರಡರಲಿ ಸಲೆ ವಿಧಾವಂ
ತನಲಿ ಮಂತ್ರಾಲೋಚನೆಯ ಸಂ
ಜನಿಸಿ ಹರಹಿನೊಳಳಿಯೆಲೇ ಭೂಪಾಲ ಕೇಳೆಂದ ೪೦

ಕಿರಿದುಪೇಕ್ಷೆಯ ಬಹಳ ಫಲವನು
ಹೊರೆವುದಿದು ಮೇಣಲ್ಪಭೇದಕೆ
ಮುರಿವುದಿದು ವಿಕ್ರಮಕೆ ವಶವಿದು ನೀತಿಸಾಧ್ಯವಿದು
ಹರಿವುದಿದು ನಯ ಶಕ್ತಿಗೆಂಬುದ
ನರಿದು ನಡೆವೈ ರಾಜಧರ್ಮದ
ಹೊರಿಗೆಯನು ಮರೆದಿರೆಯೆಲೇ ಭೂಪಾಲ ಕೇಳೆಂದ ೪೧

ಪರರು ಮಾಡಿದ ಸದ್ಗುಣಂಗಳ
ಮರೆಯೆಯಲೆ ಪರರವಗುಣಂಗಳ
ಮರೆದು ಕಳೆವಾ ಮಾನ್ಯರಿಗೆ ನೀ ಮಾಡಿದವಗುಣವ
ಮೆರೆಯೆಯಲೆ ನೀ ಮಾಡಿದುಚಿತವ
ಮರೆದು ಕಳೆವಾಚಾರವಿದು ಸ
ತ್ಪುರುಷರಭಿಮತವಿದು ಕಣಾ ಭೂಪಾಲ ಕೇಳೆಂದ ೪೨

ಭಜಿಸುವಾ ಭಕ್ತಿಯಲಿ ದೈವ
ದ್ವಿಜ ಗುರುಸ್ಥಾನವನು ದೇಶ
ಪ್ರಜೆಯನರ್ಥಾಗಮದ ಗಡಣೆಗೆ ಘಾಸಿ ಮಾಡೆಯೆಲೆ
ಕುಜನರಭಿಮತಮಗ್ರ ದಂಡ
ವ್ಯಜನದಲಿ ಜನ ಜಠರ ವಹ್ನಿಯ
ಸೃಜಿಸೆಯೆಲೆ ಭವದೀಯ ರಾಜ್ಯಸ್ಥಿತಿಯ ಹೇಳೆಂದ ೪೩

ಆಣೆಗಪಜಯವಿಲ್ಲಲೇ ಕೀ
ಳಾಣೆ ಟಂಕದೊಳಿಲ್ಲಲೇ ನಿ
ತ್ರಾಣದಲಿ ಸಂಗರವ ಹೊಗೆಯೆಲೆ ಶೌರ್ಯ ಗರ್ವದಲಿ
ವಾಣಿಯವನುಚಿತದಲಿ ಧರ್ಮದ
ಲೂಣೆಯವನಹಿತರಲುಪೇಕ್ಷೆಯ
ಕೇಣವನು ದಾನದಲಿ ಮಾಡೆಲೆ ರಾಯ ಕೇಳೆಂದ ೪೪

ಕಳವು ಪುಸಿ ಹಾದರ ವಿರೋಧ
ಸ್ಖಲಿತವಾರಡಿಬಂದಿ ದಳವುಳ
ಬೆಳಗವಿತೆಯನ್ಯಾಯ ಪರಿಭವ ಠಕ್ಕು ಡೊಳ್ಳಾಸ
ಪಳಿವು ವಂಚನೆ ಜಾತಿ ಸಂಕರ
ಕೊಲೆ ವಿರೋಧವು ವಿಕೃತ ಮಾಯಾ
ವಳಿಗಳೆಂಬಿವು ನಿನ್ನೊಳಿಲ್ಲಲೆ ರಾಯ ಕೇಳೆಂದ ೪೫

ರಣಮುಖದೊಳಂಗನೆಯೊಳಾರೋ
ಗಣೆಯಲರಿಗಳ ಕೂಟದಲಿ ವಾ
ರಣ ತುರಗದೇರಾಟದಲಿ ವಿವಿಧಾಯುಧಂಗಳಲಿ
ಎಣೆ ನೃಪರ ಸೋಂಕಿನಲಿ ಸೆಜ್ಜೆಯ
ಲಣಿಯ ಮಜ್ಜನದಲಿ ಮಹಾಮೃಗ
ಗಣನೆಯೊಳಗೆಚ್ಚರಿಕೆಯುಂಟೇ ರಾಯ ನಿನಗೆಂದ ೪೬

ನುಡಿದೆರಡನಾಡದಿರು ಕಾರ್ಯವ
ಬಿಡದಿರಾವನೊಳಾದರೆಯು ನಗೆ
ನುಡಿಯ ಕುಂದದಿರೊಡೆಯದಿರು ಹೃದಯವನು ಕಪಟದಲಿ
ಬಡಮನವ ಮಾಡದಿರು ಮಾರ್ಗದೊ
ಳಡಿಯಿಡದಿರನುಜಾತ್ಮಜರೊಳೊ
ಗ್ಗೊಡೆಯದಿರು ನೃಪನೀತಿಯಿದು ಭೂಪಾಲ ಕೇಳೆಂದ ೪೭

ನೀತಿವಿಡಿದರಸಂಗೆ ಬಹಳ
ಖ್ಯಾತವದು ಜನರಾಗ ರಾಗ
ವ್ರಾತದಿಂ ಧನ ಧನದಿ ಪರಿಕರ ಪರಿಕರದಿ ಜಯವು
ಆತ್ತ ಜಯದಿಂ ಧರ್ಮ ಧರ್ಮ ಸ
ಮೇತದಿಂ ಸುರತುಷ್ಟಿ ತುಷ್ಟಿಯ
ನೀತಿಯಿಂದಿಹಪರವ ಗೆಲುವೈ ರಾಯ ನೀನೆಂದ ೪೮

ಮಂತ್ರವುಳ್ಳವನವನೆ ಹಿರಿಯನು
ಮಂತ್ರವುಳ್ಳವನವನೆ ರಾಯನು
ಮಂತ್ರವುಳ್ಳವನವನೆ ಸಚಿವ ನಿಯೋಗಿಯೆನಿಸುವನು
ಮಂತ್ರವಿಲ್ಲದ ಬರಿಯ ಬಲು ತಳ
ತಂತ್ರದಲಿ ಫಲವಿಲ್ಲವೈ ಸ್ವಾ
ತಂತ್ರವೆನಿಸಲ್ಕರಿವುದೇ ಭೂಪಾಲ ಕೇಳೆಂದ ೪೯

ಸತ್ಯವುಳ್ಳರೆ ಧರಣಿ ಸಾರುಗು
ಸತ್ಯವುಳ್ಳರೆ ಪದವಿ ಸಾರುಗು
ಸತ್ಯವುಳ್ಳರೆ ಸಕಲರಾಜ್ಯದ ವೀರಸಿರಿ ಸಾರ್ಗು
ಸತ್ಯವೇ ಬೇಹುದು ನೃಪರಿಗಾ
ಸತ್ಯ ಭುಜಬಲಗೂಡಿ ಮಂತ್ರದ
ಸತ್ಯವೇ ಸತ್ವಾಧಿಕವು ಭೂಪಾಲ ಕೇಳೆಂದ ೫೦

ಮೇಲನರಿಯದ ನೃಪನ ಬಾಳಿಕೆ
ಗಾಳಿಗೊಡ್ಡಿದ ಸೊಡರು ನೀರವ
ಜಾಲದೊಡ್ಡಣೆ ಸುರಧನುವಿನಾಕಾರ ಶವದುಡಿಗೆ
ಬಾಳಿಗೌಕಿದ ಕೊರಳು ಭುಜಗನ
ಹೇಳಿಗೆಯಲಿಕ್ಕಿದ ಕರವು ಬೆ
ಳ್ಳಾರ ಹೆಬ್ಬುಗೆಯವನ ಸಿರಿ ಭೂಪಾಲ ಕೇಳೆಂದ ೫೧

ಆಯವಿಲ್ಲದ ಬೀಯವನು ಪೂ
ರಾಯವಿಲ್ಲದ ಗಾಯವನು ನಿ
ರ್ದಾಯವಿಲ್ಲದ ಮಂತ್ರವನು ಲೇಸಾಗಿ ಮಿಗೆ ರಚಿಸಿ
ನ್ಯಾಯವಿಲ್ಲದ ನಡವಳಿಯನ
ನ್ಯಾಯ ಹೊದ್ದುವ ಪಾತಕವ ನಿಜ
ಕಾಯದಲಿ ನೀ ಧರಿಸೆಯೆಲೆ ಭೂಪಾಲ ಕೇಳೆಂದ ೫೨

ಫಲವಹುದ ಕೆಡಲೀಯದಳಿ ಪರಿ
ಮಳವ ಕೊಂಬಂದದಲೆ ನೀನಾ
ಳ್ವಿಳೆಯ ಕರದರ್ಥವನು ತೆಗೆವೈ ಪ್ರಜೆಯ ನೋಯಿಸದೆ
ಹಲವು ಸನ್ಮಾನದಲಿ ನಯದಲಿ
ಚಲಿಸದಿಪ್ಪಂದದಲಿ ರಾಜ್ಯವ
ನಿಲಿಸುವಭಿಮತ ಮಂತ್ರಿಯುಂಟೇ ರಾಯ ನಿನಗೆಂದ ೫೩

ಸೂಕರನ ತುಂಬಿಯ ಮರಾಳನ
ಭೇಕವೈರಿಯ ಕಾರುರಗ ಕಪಿ
ಕೋಕಿಲನ ಬರ್ಹಿಯ ಸುಧಾಕಿರಣನ ದಿನಾಧಿಪನ
ಆಕಸದ ದರ್ಪಣದ ಬಕ ರ
ತ್ನಾಕರನಲೊಂದೊಂದುಗುಣವಿರ
ಬೇಕು ನೃಪರಿಗೆ ನಿನ್ನೊಳುಂಟೇ ರಾಯ ಹೇಳೆಂದ ೫೪

ನೆಚ್ಚದಿರು ಸಿರಿಯನು ವೃಥಾ ಮದ
ಗಿಚ್ಚಿನುರಿಯಲಿ ಬೇಯದಿರು ಮಿಗೆ
ಬೆಚ್ಚಿ ಬೆದರದಿರೆರಡರಲಿ ಸತ್ಯವನು ಚಲಿಸದಿರು
ಮೆಚ್ಚದಿರಸತ್ಯವನು ಗುಣವನು
ಮುಚ್ಚದಿರು ಅಪಕೀರ್ತಿನಾರಿಯ
ಮೆಚ್ಚದಿರು ಮರುಳಾಗದಿರು ಭೂಪಾಲ ಕೇಳೆಂದ ೫೫

ಹಲವು ವಿನಿಯೋಗದಲಿ ಸುದತಿಯ
ರೊಲುಮೆಯಲಿ ಸಕಲಾಂಗದಲಿ ನಿ
ಸ್ಖಲಿತ ನಿಜವನೆ ಧರಿಸುವಾಶ್ರಮ ವರ್ಣಭೇದದಲಿ
ಹಳಿವು ನಿಗಾವಂಗದಲಿ ಬಳಿ
ಸಲಿಸದಲೆ ಪರತತ್ತ್ವದಲಿ ವೆ
ಗ್ಗಳಿಸದಲೆ ವೈರಾಗ್ಯಮತ ಭೂಪಾಲ ನಿನಗೆಂದ ೫೬

ಪರಿಜನಕೆ ದಯೆಯನು ಪರಸ್ತ್ರೀ
ಯರಲಿ ಭೀತಿಯ ಹಗೆಗಳಲಿ ನಿ
ಷ್ಕರುಣತೆಯ ಬಡವರಲಿ ದಾನವ ದೈವ ಗುರು ದ್ವಿಜರ
ಚರಣಸೇವೆಯಲಾರ್ತತೆಯ ಪಿಸು
ಣರ ನುಡಿಗಳಲಿ ಮೂರ್ಖತೆಯ ನೀ
ವಿರಚಿಪೆಯೊ ಬೇಸರುವೆಯೋ ಭೂಪಾಲ ಕೇಳೆಂದ ೫೭

ಮೋಹದವಳಲಿ ವೈದ್ಯರಲಿ ಮೈ
ಗಾಹಿನವರಲಿ ಬಾಣಸಿಗರಲಿ
ಬೇಹ ಮಂತ್ರಿಗಳಲಿ ವಿಧಾವಂತರಲಿ ಹಿರಿಯರಲಿ
ದೇಹರಕ್ಷಕರಲಿ ಸದೋದಕ
ವಾಹಿಯಲಿ ಹಡಪಾಳಿಯಲಿ ಪ್ರ
ತ್ಯೂಹವನು ವಿರಚಿಸೆಯಲೇ ಭೂಪಾಲ ಕೇಳೆಂದ ೫೮

ತರುಣಿಯಲಿ ಹಗೆಗಳಲಿ ಬಹಳೈ
ಶ್ವರಿಯದಲಿ ಶಸ್ತ್ರಾಂಗಿಯಲಿ ಸಂ
ಸ್ತರಣದಲಿ ಮದ್ಯಪನಲಬಲಾರ್ಥಿಯಲಿ ಶೃಂಗಿಯಲಿ
ಉರಗನಲಿ ನದಿಯಲಿ ಸಖಿಯರಾ
ತುರಿಯದಲಿ ದುರ್ಮಂತ್ರಿಯಲಿ ದು
ಶ್ಚರಿತನಲಿ ವಿಶ್ವಾಸಿಸೆಯಲೇ ಭೂಪ ಕೇಳೆಂದ ೫೯

ಢಾಳರನು ಢವಳರನು ಠಕ್ಕಿನ
ಠೌಳಿಕಾರರ ಕೃತಕ ಮಾಯಾ
ಜಾಲರನು ಕಾಹುರರನಂತರ್ವಾಹಕರ ಶಠರ
ಖೂಳರನು ಖಳರನು ವಿಕಾರಿಯ
ಜಾಳು ನುಡಿಗಳ ಜಡಮತಿಯನೀ
ನಾಳಿಗೊಂಬೆಯೊ ಲಾಲಿಸುವೆಯೊ ರಾಯ ಹೇಳೆಂದ ೬೦

ಆವಕಾಲದೊಳಾವಕಾರ್ಯವ
ದಾವನಿಂದಹುದವನ ಮನ್ನಿಪ
ಠಾವಿದೆಂಬುದನರಿದಿಹೈ ಮೃಗಜೀವಿಯಂದದಲಿ
ಲಾವಕರ ನುಡಿ ಕೇಳಿ ನಡೆದರೆ
ಭೂವಳದೇಕಾಧಿಪತ್ಯದ
ಠಾವು ಕೆಡುವುದನರಿದಿಹೈ ಭೂಪಾಲ ಕೇಳೆಂದ ೬೧

ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನ
ನೆರವಿ ಬಡವರ ಭಿನ್ನಪವನಿನ್ನಾರು ಕೇಳುವರು
ಉರಿವುರಿವುತಿದೆ ದೇಶ ನಾವಿ
ನ್ನಿರಲು ಬಾರದೆನುತ್ತ ಜನ ಬೇ
ಸರಿನ ಬೇಗೆಯಲಿರದಲೇ ಭೂಪಾಲ ಕೇಳೆಂದ ೬೨

ಧನದುಲುರು ಧಾನ್ಯದಲಿ ನೆರೆದಿಂ
ಧನದಲುದಕದ ಹೆಚ್ಚುಗೆಯಲಂ
ಬಿನಲಿ ಶಸ್ತ್ರೌಘದಲಿ ಶಿಲ್ಪಿಯ ವರ ಶಿಲಾಳಿಯಲಿ
(ಬಿನಲಿ ಶಸ್ತ್ರೌಘದಲಿ ಶಿಲ್ಪಿಗಳ ಶಿಲಾಳಿಯಲಿ - ಪಾ)
ವನವಳಯ ಕೋಟಾವಳಯ ಜೀ
ವನವಳಯ ಗಿರಿವಳಯ ದುರ್ಗಮ
ವೆನಿಪ ದುರ್ಗಾವಳಿ ಸಮಗ್ರವೆ ಭೂಪ ಕೇಳೆಂದ ೬೩

ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ
ಪಸರಿಸುವುದಾ ಕೃಷಿಯನುದ್ಯೋ
ಗಿಸುವ ಜನವನು ಪಾಲಿಸುವುದಾ ಜನಪದವ ಜನದಿ
ವಸು ತೆರಳುವುದು ವಸುವಿನಿಂ ಸಾ
ಧಿಸುವಡಾವುದಸಾಧ್ಯವದರಿಂ
ಕೃಷಿವಿಹೀನನ ದೇಶವದು ದುರ್ದೇಶ ಕೇಳೆಂದ ೬೪

ಸತಿಯರೊಲುಮೆಯ ವಿಟರುಗಳನಾ
ಸತಿಯರ ಸ್ಥಿತಿಗತಿಗೆ ತಾನೆಂ
ದತಿಶಯೋಕ್ತಿಯ ನುಡಿವವರನರಮನೆಯ ಕಾಹಿಂಗೆ
ಪತಿಕರಿಸಿದರೆ ಜಗವರಿಯಲಾ
ಕ್ಷಿತಿಪರಭಿಮಾನವು ಮುಹೂರ್ತಕೆ
ಗತವಹುದು ನೀನರಿದಿಹೈ ಭೂಪಾಲ ಕೇಳೆಂದ ೬೫

ಖಡುಗ ಧಾರೆಯ ಮಧು ಮಹಾಹಿಯ
ಹೆಡೆಯ ಮಾಣಿಕ ವಜ್ರದಿಂ ಬಿಗಿ
ದೊಡಲಿಗೊಡ್ಡಿದ ಸುರಗಿ ಕಡುಗೆರಳಿದ ಮೃಗಾಧಿಪನ
ನಡುಗುಹೆಯೊಳಿಹ ಸುಧೆಯ ಘಟವೀ
ಪೊಡವಿಯೊಡೆತನ ಸದರವೇ ಕಡು
ಬಡವರಿಗೆ ದೊರೆಕೊಂಬುದೇ ಭೂಪಾಲ ಕೇಳೆಂದ ೬೬

ಮಗಗೆ ಮುನಿವನು ತಂದೆ ತಂದೆಗೆ
ಮಗ ಮುನಿವನೊಡಹುಟ್ಟಿದರು ಬಲು
ಪಗೆ ಕಣಾ ತನ್ನೊಳಗೆ ಭೂಪರ ಕುಲದ ವಿದ್ಯವಿದು
ಬಗೆಯ ನಿನ್ನೊಡಹುಟ್ಟಿದರು ಮಂ
ತ್ರಿಗಳೊಳಾಪ್ತರಖಿನ್ನರೇ ದಾ
ಯಿಗರೊಳಂತರ್ಬದ್ಧವುಂಟೇ ರಾಯ ನಿನಗೆಂದ ೬೭

ಮಲೆವ ರಾಯರ ಬೆನ್ನ ಕಷ್ಟವ
ನಲಗಿನಲಿ ಕೊಂಡಾಂತ ಮನ್ನೆಯ
ಕುಲದ ತಲೆ ಚೆಂಡಾಡಿ ಗಡಿಗಳ ದುರ್ಗದಲಿ ತನ್ನ
ಬಲು ಸಚಿವರನು ನಿಲಿಸಿ ತಾ ಪುರ
ದಲಿ ವಿನೋದದಲಿರುತ ಹರುಷದ
ಲಿಳೆಯ ಪಾಲಿಸುವವನರಸು ಭೂಪಾಲ ಕೇಳೆಂದ ೬೮

ಮನ್ನಣೆಯೊಳಲ್ಪತೆಯ ನುಡಿಯೊಳ
ಗುನ್ನತಿಯನೆಸಗುವುದು ಪರರಿಗೆ
ತನ್ನವರಿಗುಗ್ಗಡದ ಪರಿಕರಣೆಯನು ಮಾತಿನಲಿ
ಭಿನ್ನವನು ತೋರುವುದು ರಾಯರ
ಗನ್ನಗತಕ ಕಣಾ ವಿಪುಳ ಸಂ
ಪನ್ನಮತಿ ನಿನಗುಂಟೆ ಭೂಮೀಪಾಲ ಕೇಳೆಂದ ೬೯

ಧನದಿ ಪಂಡಿತರಶ್ವತತಿಯಾ
ಧನದಿ ಧಾರುಣಿ ಮಾನ ಮೇಣಾ
ಧನದಿ ಕಾಂತೆಯರಖಿಳ ವಸ್ತುಗಳೈದೆ ಸೇರುವುದು
ನೆನಹು ತೃಪ್ತಿಯೊಳೈದದದರಿಂ
ಧನವೆ ಸಾಧನವರಸಿಗಾ ಧನ
ವನಿತು ದೊರಕೊಳಲಿದಿರದಾರೈ ಧಾತ್ರಿಪತಿಗಳಲಿ ೭೦

ಶೂರ ಧೀರನುದಾರ ಧರ್ಮೋ
ದ್ಧಾರ ವಿವಿಧ ವಿಚಾರ ಸುಜನೋ
ದ್ಧಾರ ರಿಪುಸಂಹಾರ ಚತುರೋಪಾಯ ಸಾಕಾರ
ಸಾರಮಂತ್ರ ವಿಚಾರ ಭುವನಾ
ಧಾರ ಸುಜನಸ್ವಾಮಿ ಕಾರ್ಯಾ
ಗಾರನೆನಿಸುವ ಮಂತ್ರಿಯುಂಟೇ ರಾಯ ನಿನಗೆಂದ ೭೧

ತಿಳಿದವನ ಮತಿವಿದನ ಭಾಷಾ
ವಳಿ ಲಿಪಿಜ್ಞನ ಸಾಕ್ಷರಿಕ ಮಂ
ಡಲಿಕ ಸಾವಂತರನಶೇಷರನಿಂಗಿತವನರಿತು
ಸಲೆ ಕರೆವ ಕಳುಹಿಸುವ ನಿಲಿಸುವ
ಬಲುಹನುಳ್ಳನ ಸುಕೃತ ದುಷ್ಕೃತ
ಫಲಿತ ಕಾರ್ಯಕೆ ಮಂತ್ರಿಯುಂಟೇ ರಾಯ ನಿನಗೆಂದ ೭೨

ಜರೆ ನರೆಯ ಮೈಸಿರಿಯ ಕುಲವೃ
ದ್ಧರನು ಹೀನಾಂಗರನು ಹಿಂಸಾ
ಚರಿತರನು ಜಾತ್ಯಂಧರನು ಧನದಾಸೆಯಳಿದವರ
ಅರಮನೆಯ ಸಂರಕ್ಷಣಾರ್ಥದೊ
ಳಿರಿಸಿದರೆ ಮಾನೋನ್ನತಿಕೆ ವಿ
ಸ್ತರಣವಹುದಿದನರಿದಿಹೈ ಭೂಪಾಲ ಕೇಳೆಂದ ೭೩

ಗುಳಿತೆವರನೀಕ್ಷಿಸುತ ಬಟ್ಟೆಯ
ಮೆಳೆ ಮರಂಗಳ ಹೊಯ್ಲ ತಪ್ಪಿಸಿ
ನೆಳಲನರಸುತ ವೇಗಗತಿ ಸಾಮಾನ್ಯಗತಿಗಳಲಿ
ಬಳಿವಿಡಿದು ಭೂಭುಜರ ಯಾನಂ
ಗಳೊಳಗಳುಕದೆ ಧಗೆಯ ಸೈರಿಸಿ
ಬಳಸುವವನೇ ಛತ್ರಧಾರಕನರಸ ಕೇಳೆಂದ ೭೪

ಬೇಸರದೆ ಕಾಳೋರಗನನ
ಡ್ಡೈಸಿ ಕಟ್ಟಿರುವೆಗಳು ಮಿಗೆ ವೇ
ಡೈಸಿ ಕಡಿದರೆಯಟ್ಟುವಂದದಲಹಿತ ಬಲದೊಳಗೆ
ಓಸರಿಸದೊಳಹೊಕ್ಕು ಸಮರ ವಿ
ಳಾಸವನು ನೆರೆ ಮೆರೆದು ಕೇಶಾ
ಕೇಶಿಯಲಿ ಹಿಡಿದಿರಿವವನೆ ಕಾಲಾಳು ಕೇಳೆಂದ ೭೫

ಬಿಟ್ಟ ಸೂಠಿಯಲರಿನೃಪರ ನೆರೆ
ಯಟ್ಟಿ ಮೂದಲಿಸುತ್ತ ಮುಂದಣ
ಥಟ್ಟನೊಡೆಹಾಯ್ದಹಿತ ಬಲದೊಳಗಾನೆವರೆವರಿದು
ಹಿಟ್ಟುಗುಟ್ಟುತ ಹೆಣನ ಸಾಲುಗ
ಳೊಟ್ಟು ಮೆರೆಯಲು ಕಳನ ಚೌಕದ
ಲಟ್ಟಿಯಾಡಿಸಬಲ್ಲವನೆ ರಾವುತನು ಕೇಳೆಂದ ೭೬

ಹೆಬ್ಬಲವನೊಡತುಳಿದು ಧರಣಿಯ
ನಿಬ್ಬಗಿಯ ಮಾಡಿಸುತ ಪಾಯ್ದಳ
ದೊಬ್ಬುಳಿಯ ಹರೆಗಡಿದು ಕಾದಿಸುತಾನೆಗಳಮೇಲೆ
ಬೊಬ್ಬಿರಿದು ಶರಮಳೆಯ ಕರೆವುತ
ಲಬ್ಬರಿಸಿ ಬವರದಲಿ ರಿಪುಗಳಿ
ಗುಬ್ಬಸವನೆಸಗುವನೆ ಜೋಧನು ರಾಯ ಕೇಳೆಂದ ೭೭

ಒಂದುಕಡೆಯಲಿ ದಳ ಮುರಿದು ಮ
ತ್ತೊಂದು ದಿಕ್ಕಲಿ ಮನ್ನೆಯರು ಕವಿ
ದೊಂದು ದೆಸೆಯಲಿ ಬಲದೊಳೊಂದನೆಯಧಿಕಬಲವೆನಿಸಿ
ಬಂದು ಸಂತಾಪದಲಿ ಕಾಳಗ
ದಿಂದ ಪುರಳಲಿ ನಿಂದು ಕರಿಕರಿ
ಗುಂದುವ ಕ್ಷಿತಿಪಾಲನೇ ಭೂಪಾಲ ಕೇಳೆಂದ ೭೮

ಕುದುರೆಗಳನಾರೈದು ರಥವನು
ಹದುಳಿಸುತ ಸಾರಥಿಯನೋವುತ
ಲಿದಿರ ಮುರಿವುತ ತನ್ನ ಕಾಯಿದುಕೊಳುತ ಕೆಲಬಲನ
ಸದೆದು ಮರಳುವ ಲಾಗುವೇಗದ
ಕದನ ಕಾಲಾನಲನವನು ತಾ
ಮೊದಲಿಗನಲೈ ರಥಿಕರಿಗೆ ಭೂಪಾಲ ಕೇಳೆಂದ ೭೯

ದೊರೆಯ ಕಾಣುತ ವಂದಿಸುತ್ತಂ
ಕರಿಸುತಂತರಿಸುತ್ತ ಮಿಗೆ ಹ
ತ್ತಿರನೆನಿಸದತಿ ದೂರನೆನಿಸದೆ ಮಧ್ಯಗತನೆನಿಸಿ
ಪರಿವಿಡಿಯಲೋಲೈಸುತರಸನ
ಸಿರಿಮೊಗವನೀಕ್ಷಿಸುತ ಬೆಸೆಸಲು
ಕರಯುಗವನಾನುವನೆ ಸೇವಕನರಸ ಕೇಳೆಂದ ೮೦

ನರಕ ಕರ್ಮವ ಮಾಡಿಯಿಹದೊಳು
ದುರಿತಭಾಜನರಾಗಿ ಕಡೆಯಲಿ
ಪರಕೆ ಬಾಹಿರರಾಗಿ ನಾನಾ ಯೋನಿಯಲಿ ಸುಳಿದು
ಹೊರಳುವರು ಕೆಲಕೆಲರು ಭೂಪರು
ಧರಿಸುವರಲೈ ರಾಜಧರ್ಮದ
ಹೊರಿಗೆಯನು ಮರೆದಿರೆಯಲಾ ಭೂಪಾಲ ಕೇಳೆಂದ ೮೧

ನೃಗನ ಭರತನ ದುಂದುಮಾರನ
ಸಗರನ ಪುರೂರನ ಯಯಾತಿಯ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳು ವಲ್ಲಭರ ವಂಶದ
ವಿಗಡರಲಿ ಯಮಸೂನು ಸರಿಯೋ
ಮಿಗಿಲೊ ಎನಿಸುವ ನೀತಿಯುಂಟೇ ರಾಯ ನಿನಗೆಂದ ೮೨

ಆ ಮುನೀಂದ್ರನ ವಚನ ರಚನಾ
ತಾಮರಸ ಮಕರಂದ ಕೇಳಿಯ
ಲೀ ಮಹೀಶ ಮಧುವ್ರತ(ಕರಣ?)ವುಬ್ಬಿತೊಲವಿನಲಿ
ರೋಮ ಪುಳಕದ ರುಚಿರ ಭಾವ
ಪ್ರೇಮಪೂರಿತ ಹರುಷರಸದು
ದ್ದಾಮ ನದಿಯಲಿ ಮುಳುಗಿ ಮೂಡಿದನರಸ ಕೇಳೆಂದ ೮೩

ಎಲೆ ಮುನಿಯೆ ನೀವ್ ರಚಿದೀ ನಿ
ರ್ಮಳ ನೃಪಾಲ ನಯ ಪ್ರಪಂಚವ
ಬಳಸಿದೆನು ಕೆಲ ಕೆಲವನಿನ್ನುರೆ ಬಳಸುವೆನು ಕೆಲವ
ಇಳಿದು ಧರಣಿಗೆ ಸುಳಿದು ನೀತಿ
ಸ್ಖಲಿತ ಜಡರನು ತಿದ್ದಿ ತಿಳುಹುವ
ಸುಲಭತನದಲಿ ದೇವಮುನಿ ನಿನಗಾರು ಸರಿಯೆಂದ ೮೪

ಮುನಿಯೆ ಬಿನ್ನಹವಿಂದು ನೀವಿಂ
ದ್ರನ ವಿರಿಂಚಿಯ ಯಮನ ವರುಣನ
ಧನಪತಿಯ ಶೇಷನ ಸಭಾಮಧ್ಯದಲಿ ಸುಳಿವಿರಲೆ
ಇನಿತು ರಚನೆಗೆ ಸರಿಯೊ ಮಿಗಿಲೋ
ಮನುಜ ಯೋಗ್ಯಸ್ಥಾನವೋ ಮೇ
ಣೆನಲು ನಗುತೆಂದನು ಮುನೀಶ್ವರನಾ ಯುಧಿಷ್ಠಿರಗೆ ೮೫

ಜನಪ ಕೇಳುತ್ಸೇದ ಶತ ಯೋ
ಜನ ತದರ್ಧದೊಳಗಲದಳತೆಯಿ
ದೆನಿಪುದಿಂದ್ರಸ್ಥಾನವಲ್ಲಿಹುದಖಿಳ ಸುರನಿಕರ
ಜನಪರಲ್ಲಿ ಯಯಾತಿಯಾತನ
ಜನಕ ನೃಗ ನಳ ಭರತ ಪೌರವ
ರೆನಿಪರಖಿಳ ಕ್ರತುಗಳಲಿ ಸಾಧಿಸಿದರಾ ಸಭೆಯ ೮೬

ವೈದಿಕೋಕ್ತಿಗಳಲಿ ಹರಿಶ್ಚಂ
ದ್ರಾದಿಯರು (ಆ?) ರಾಜಸೂಯದೊ
ಳಾದರನಿಬರೊಳಗ್ಗಳೆಯರಿಂದ್ರಂಗೆ ಸರಿ ಮಿಗಿಲು
ಆದೊಡಾ ಪುರುಹೂತ ಸಭೆಯೋ
ಪಾದಿ ಯಮನಾಸ್ಥಾನವಲ್ಲಿ ವಿ
ಷಾದದಲಿ ನಿಮ್ಮಯ್ಯನಿಹನಾತನ ಸಮೀಪದಲಿ ೮೭

ವರುಣ ಸಭೆಯೊಳಗಿಹವು ಭುಜಗೇ
ಶ್ವರ ಸಮುದ್ರ ನದೀನದಾವಳಿ
ಗಿರಿ ತರು ವ್ರಜವೆನಿಪ ಸಂಖ್ಯಾರಹಿತ ವಸ್ತುಗಳು
ಅರಸ ಕೇಳು ಕುಬೇರ ಸಭೆಯಾ
ಪರಿಯಗಲವೆಂಭತ್ತು ಯೋಜನ
ಹರಸಖನ ಸಿರಿ ಸದರವೇ ಭೂಪಾಲ ಕೇಳೆಂದ ೮೮

ಬಗೆಯೊಳಗೆ ಮೊಳೆವುದು ಚತುರ್ದಶ
ಜಗವೆನಲು ಜಾವಳವೆ ತಸ್ಯೋ
ಲಗದ ಸಿರಿ ಪರಮೇಷ್ಟಿಗೇನರಿದೈ ಮಹೀಪತಿಯೆ
ಸುಗಮ ಗಾನಿಯರುಪನಿಷದ ವಿ
ದ್ಯೆಗಳು ವೇದಕ್ರತು ಪುರಾಣಾ
ದಿಗಳು ಬಿರುದಾವಳಿಯ ಪಾಠಕರಾತನಿದಿರಿನಲಿ ೮೯

ಮುನಿಗಳೇ ಮಾಣಿಯರು ಮಂತ್ರಾಂ
ಗನೆಯರೋಲೆಯಕಾತಿಯರು ಸುರ
ಜನವೆ ಕಿಂಕರಜನವು ಸೂರ್ಯಾದಿಗಳೆ ಸಹಚರರು
ಘನ ಚತುರ್ದಶ ವಿದ್ಯೆ ಪಾಠಕ
ಜನವಲೈ ಪಾಡೇನು ಪದುಮಾ
ಸನನ ಪರುಠವವಾ ಸಭೆಗೆ ಸರಿ ಯಾವುದೈ ನೃಪತಿ ೯೦

ಇನಿಬರಾಸ್ಥಾನದಲಿ ಸುಕೃತಿಗ
ಳೆನಿಪ ತೇಜಸ್ವಿಗಳು ಗಡ ಸುರ
ಮುನಿ ಹರಿಶ್ಚಂದ್ರಂಗೆ ಸೇರಿದ ಸುಕೃತ ಫಲವೇನು
ಜನಪನಪದೆಸೆಗೇನು ದುಷ್ಕೃತ
ವೆನಲು ನಕ್ಕನು ರಾಜಸೂಯದ
ಘನವನರಿಯಾ ಧರ್ಮನಂದನಯೆಂದನಾ ಮುನಿಪ ೯೧

ಈ ಮಹಾಕ್ರತುವರವ ನೀ ಮಾ
ಡಾಮಹೀಶ್ವರ ಪಂಕ್ತಿಯಲ್ಲಿ ನಿ
ರಾಮಯನು ನಿಮ್ಮಯ್ಯನಿಹನು ಸತೇಜದಲಿ ಬಳಿಕ
ಸೋಮವಂಶದ ರಾಯರೊಳಗು
ದ್ದಾಮರಹ ಬಲುಗೈ ಕುಮಾರ
ಸ್ತೋಮ ನೀವಿರಲಯ್ಯಗೇನರಿದೆಂದನಾ ಮುನಿಪ ೯೨

ಮುನಿಯ ಮಾತಿನ ಬಲೆಗೆ ಸಿಲುಕಿತು
ಜನಪತಿಯ ಚೈತನ್ಯಮೃಗವೀ
ತನ ವಚೋ ವರುಷದಲಿ ನೆನೆದವು ಕರಣವೃತ್ತಿಗಳು
ಮನದಲಂಕುರವಾಯ್ತು ನಾಲಿಗೆ
ಗೊನೆಯಲೆರಡೆಲೆಯಾಯ್ತು ಯಜ್ಞದ
ನೆನವು ಭಾರವಣೆಯಲಿ ಬಿದ್ದುದು ಧರ್ಮನಂದನನ ೯೩

ಕಳುಹಿದನು ಸುರಮುನಿಯ
ನುದರದೊಳಿಳಿದುದಂತಸ್ತಾಪ ಯಜ್ಞದ
ಬಲುಹ ನೆನೆದಡಿಗಡಿಗೆ ಕಂಪಿಸಿ ಕೈಯ ಗಲ್ಲದಲಿ
ಒಲೆದೊಲೆದು ಭಾವದಲಿ ಮಿಗೆ ಕಳ
ವಳಿಸಿ ಪದುಳಿಸಿಕೊಳುತ ಭೂಪತಿ
ತಿಲಕ ಚಿಂತಿಸಿ ನೆನೆವುತಿದ್ದನು ವೀರನರಯಣನ ೯೪

(ಸಂಗ್ರಹ: ಮಂಜುನಾಥ ಕೊಳ್ಳೇಗಾಲ)