ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Friday, January 8, 2010

ಆದಿಪರ್ವ: ೦೨. ಎರಡನೆಯ ಸಂಧಿ

ಸೂ. ರಾಯ ಜನಮೇಜಯಗೆ ವೈಶಂ
ಪಾಯನನು ಹೇಳಿದನು ಮುನಿ ದ್ವೈ
ಪಾಯನಭಿವರ್ಣಿಸಿದ ಭಾರತ ವರ ಕಥಾಮೃತವ

ಸೂತನೈತಂದನು ಜಗದ್ವಿ
ಖ್ಯಾತ ಶೌನಕಮುಖ್ಯ ಮುನಿ ಸಂ
ಘಾತ ಪಾವನ ನೈಮಿಶಾರಣ್ಯಕ ವರಾಶ್ರಮಕೆ
ಆತನನು ಕಂಡುದು ತಪಸ್ವಿ
ವ್ರಾತ ಕುಶಲಕ್ಷೇಮ ಮಧುರ
ಪ್ರೀತಿ ವಚನಾಮೃತದಿ ಸಂಭಾವನೆಯ ಮಾಡಿದರು ೧

ಪರಮಪೌರಾಣಿಕ ಶಿರೋಮಣಿ
ಬರವಿದೆತ್ತಣದಾಯ್ತು ಕೌತುಕ
ವರಕಥಾ ಪೀಯೂಷಸಾರ ವಿಶೇಷವೇನುಂಟು
ಚರಿತ ಚತುರಾಶ್ರಮ ತಪೋ ನಿ
ಷ್ಠರಿಗೆ ವಿಶ್ರಮವೈ ಭವಾದೃಶ
ದರುಶನವು ನಮಗೆಂದು ನುಡಿದರು ರೋಮಹರ್ಷಣಿಯ ೨

ವಂದಿಸಿದೆನೈ (ಪಾ: ವಂದಿಸಿದನೈ) ವರ ತಪೋಧನ
ವೃಂದ ಚಿತ್ತೈಸುವುದು ತಾನೇ
ನೆಂದು ನುಡಿವೆನು ಕೌತುಕಾಮೃತಸರದ ಕಡುಗಡಲ
ಹಿಂದೆ ಕೇಳಿದುದಲ್ಲ ಹೇಳ್ವುದು
ಮುಂದೆ ಹುಸಿ ವರ ನಿಗಮ ಶತವಿದ
ರೊಂದೊರೆಗೆ ಬರಲರಿಯದೆಂದನು ಸೂತ ಕೈಮುಗಿದು ೩

ಕೇಳಿದನು ಜನಮೇಜಯ ಕ್ಷಿತಿ
ಪಾಲಕನು ವರ ಸರ್ಪಯಜ್ಞ
ಸ್ಥೂಲ ಪಾಪವಿಘಾತಿಗೋಸುಗವೀ ಮಹಾಕಥೆಯ
ಕೇಳಿದೆನು ತಾನಲ್ಲಿ ಮುನಿಜನ
ಮೌಳಿ ಮಂಡಿತ ಚರಣಕಮಲ ವಿ
ಶಾಲ ವೇದವ್ಯಾಸಕೃತ ಭಾರತಕಥಾಮೃತವ ೪

ಹಾ ಮಹಾದೇವಾಯಿದೆಂತೈ
ರೋಮಹರ್ಷಣಿ ನಾವು ಮಾಡಿದ
ಸೋಮಪಾನಾದಿಗಳ ಪುಣ್ಯಸ್ತೋಮ ತರುಗಳಿಗೆ
ಈ ಮಹಾಭಾರತ ಕಥಾಮೃತ
ರಾಮಣೀಯಕ ಫಲವಲಾ ನಿ
ಸ್ಸೀಮ ಪುಣ್ಯರು ಧನ್ಯರಾವೆಂದುದು ಮುನಿಸ್ತೋಮ ೫

ಹೇಳು ಸಾಕೆಲೆ ಸೂತ ದುರಿತ
ವ್ಯಾಳ ವಿಷಜಾಂಗುಳಿಕವನು ನೀ
ಕೇಳಿದಂದದೊಳಂದು ಜನಮೇಜಯನ ಯಾಗದಲಿ
ಮೌಳಿಗಳಲಾನುವೆವು ನಿನ್ನಯ
ಹೇಳಿಕೆಯನೆನೆ ನಿಖಿಳ ಮುನಿಗಳ
ನೋಲಗಿಸುವೆನು ನಿಮ್ಮನುಜ್ಞೆಯಲೆಂದು ಕೈಮುಗಿದ ೬

ಸರ್ಪಯಜ್ಞದಲಾದ ದುರಿತದ
ದರ್ಪವನು ಕೆಡೆಬೀಳಲೊದೆಯಲು
ತರ್ಪಣಾದಿ ಕ್ರಿಯೆಗಳಲಿ ಸಾಮರ್ಥ್ಯವಿಲ್ಲೆಂದು
ದರ್ಪಕಾಹಿತ ಮೂರ್ತಿ ಮುನಿಮುಖ
ದರ್ಪಣನು ಶಿಷ್ಯನನು ಕರೆದು ಸ
ಮರ್ಪಿಸಿದನರಸಂಗೆ ವೇದವ್ಯಾಸಮುನಿರಾಯ ೭

ರಾಯ ಕೇಳೈ ನಿಮ್ಮ ಪಾಂಡವ
ರಾಯಚರಿತವನೆಂದು ವೈಶಂ
ಪಾಯನಿಗೆ ಬೆಸಸಿದನು ಕೊಟ್ಟನು ಬಳಿಕ ಪುಸ್ತಕವ
ರಾಯನತಿ ಭಕ್ತಿಯಲಿ ವೈಶಂ
ಪಾಯನಿಗೆ ವಂದಿಸಿ ನಿಜಾಭಿ
ಪ್ರಾಯವನು ಕೇಳಿದನು ಚಿತ್ತೈಸುವುದು ಮುನಿನಿಕರ ೮

ವಿತತ ಪುಸ್ತಕವನು ಸುಗಂಧಾ
ಕ್ಷತೆಯೊಳರ್ಚಿಸಿ ಸೋಮ ಸೂರ್ಯ
ಕ್ಷಿತಿ ಜಲಾನಲ ವಾಯು ಗಗನಾದಿಗಳಿಗಭಿನಮಿಸಿ
ಶತಮಖಾದಿ ಸಮಸ್ತ ದೇವ
ಪ್ರತತಿಗೆರಗಿ ಸರೋಜಭವ ಪಶು
ಪತಿಗಳಿಗೆ ಕೈಮುಗಿದು ವಿಮಲ ಜ್ಞಾನಮುದ್ರೆಯಲಿ ೯

ಮನದೊಳಾದ್ಯಂಪುರುಷಮೀಶಾ
ನನನು ಪುರುಹೂತ(ನ?) ಪುರಸ್ಕೃತ
ನನಘನೇಕಾಕ್ಷರ ಪರಬ್ರಹ್ಮನ ಸನಾತನನ
ದನುಜರಿಪು ಸುವ್ಯಕ್ತನವ್ಯ
ಕ್ತನನು ಸದಸದ್ರೂಪನವ್ಯಯ
ನೆನಿಪ ವಿಷ್ಣುವ ನೆನೆದು ಮುನಿ ವಿಸ್ತರಿಸಿದನು ಕಥೆಯ ೧೦

ವೇದ ನಾಲ್ಕದರಂಗವಾರ
ಷ್ಟಾದಶಾದಿ ಪುರಾಣ ಸ್ಮೃತಿಗಳೊ
ಳಾದಪೂರ್ವೋತ್ತರದ ಮೀಮಾಂಸದ ಪರಿಕ್ರಮದ
ವಾದ ವಿಲಸನ್ನ್ಯಾಯವನು ಶ
ಬ್ದೋದಧಿಯನಳವಡಿಸಿ ರಚಿಸಿದ
ಬಾದರಾಯಣನಂಘ್ರಿಯನು ಭಜಿಸಿದನು ಮನದೊಳಗೆ ೧೧

ಅರಸ ಕೇಳೈ ನಾರದಾದ್ಯರು
ಸರಸಿರುಹ ಸಂಭವನ ಸಭೆಯೊಳು
ವರಮಹಾಭಾರತವ ಕೊಂಡಾಡಿದರು ಭಕ್ತಿಯಲಿ
ವರ ಮಹತ್ವದಿ ಭಾರವತ್ವದಿ
ವರಮಹಾಭಾರತವಿದೊಂದೇ
ದುರಿತದುರ್ಗ ವಿಭೇದಕರವೀರೇಳು ಲೋಕದಲಿ ೧೨

ಹೇಳಿದನು ಪೌಲೋಮ ಚರಿತೋ
ದ್ಧಾಲಕಾಖ್ಯರ ಚರಿತವನು ಮುನಿ
ಹೇಳಿದನು ಫಣಿನಿಕರ ಗರುಡಾಸ್ತಿಕರ ಸಂಭವವ
ಮೇಲೆ ಬಳಿಕ ಪರೀಕ್ಷಿದವನೀ
ಪಾಲ ಶಾಪದ ಮರಣವನು ನೆರೆ
ಹೇಳಿದನು ಮುನಿಗಳಿಗೆ ಸರ್ಪಾಧ್ವರದ ಸಂಗತಿಯ ೧೩

ಕೇಳಿದನು ಜನಮೇಜಯಕ್ಷಿತಿ
ಪಾಲ ವೈಶಂಪಾಯನನು ತಾ
ಕೀಳು ದುರಿತಂಗಳಿಗೆ ಪ್ರಾಯಶ್ಚಿತ್ತ ರೂಪದಲಿ
ಕೇಳಿರೈ ಮುನಿನಿಕರವೀ ಕಲಿ
ಕಾಲದಲಿ ಫಲಿಸುವುದು ಲಕ್ಷ್ಮೀ
ಲೋಲ ನಾಮಸ್ತುತಿಮಹಾಭಾರತ ಕಥಾಶ್ರವಣ ೧೪

ರಾಯ ಚಿತ್ತೈಸೆಂದು ವೈಶಂ
ಪಾಯಮುನಿ ಹೇಳಿದನು ಕಮಲದ
ಳಾಯತಾಕ್ಷನ ಬಾಲಕೇಳಿ ವಿಧೂತ ಕಿಲ್ಬಿಷವ
ಕಾಯ ಕಲ್ಮಷಹರವಖಿಳ ನಿ
ಶ್ರೇಯಸದ ಸದ್ರೂಪುವಿನ ಸಂ
ದಾಯಕವ ನಿರ್ಮಲ ಮಹಾಭಾರತ ಕಥಾಮೃತವ ೧೫

ಆದಿ ಸೃಷ್ಟಿಯೊಳುದಿಸಿದರು ದ
ಕ್ಷಾದಿ ವಿಮಲ ನವಪ್ರಜೇಶ್ವರ
ರಾದರಂಬುಜಭವನ ಲೀಲಾಮಾತ್ರ ಸೂತ್ರದಲಿ
ಆದನವರೊಳಗತ್ರಿಮುನಿ ಬಳಿ
ಕಾದನಾ ಮುನಿಪತಿಗೆ ಜಗದಾ
ಹ್ಲಾದಕರ ಹಿಮಕಿರಣನಾತನಲಾಯ್ತು ಶಶಿವಂಶ ೧೬

ಸೋಮನಿಂ ಬುಧನಾ ಬುಧಂಗೆಯು
ಭೂಮಿಯಲ್ಲಿ ಪುರೂರವನು ಬಳಿ
ಕಾ ಮಹೀಪತಿಗೂರ್ವಶಿಯೊಳಾಯುಃ ಕುಮಾರಕನು
ಆ ಮಹೀಶಗೆ ನಹುಷ ನಹುಷಂ
ಗಾ ಮಹಾತ್ಮ ಯಯಾತಿ ಬಳಿಕೀ
ಸೋಮಕುಲವೆರಡಾಯ್ತು ಯದು ಪೂರುಗಳ ದೆಸೆಯಿಂದ ೧೭

ಯದುಪರಂಪರೆಯಿಂದ ಯಾದವ
ರುದಿಸಿದರು ಪೂರುವಿನ ದೆಸೆಯಿಂ
ದಿದುವೆ ಕೌರವ ವಂಶವಾಯ್ತು ಯಯಾತಿ ಪೌತ್ರರಲಿ
ವಿದಿತ ಪೂರ್ವೋತ್ತರದ ಯದು ವಂ
ಶದ ಕಥಾವಿಸ್ತಾರವನು ಹೇ
ಳಿದನು ದುಷ್ಯಂತನಲಿ ಶಾಕುಂತಲೆಯ ಕಥೆ ಸಹಿತ ೧೮

ಭರತನಾ ದುಷ್ಯಂತನಿಂದವ
ತರಿಸಿದನು ತತ್ಪೂರ್ವ ನೃಪರಿಂ
ಹಿರಿದು ಸಂದನು ಬಳಿಕ ಭಾರತವಂಶವಾಯ್ತಲ್ಲಿ
ಭರತಸೂನು ಸುಹೋತ್ರನಾತನ
ವರಕುಮಾರಕ ಹಸ್ತಿ ಹಸ್ತಿನ
ಪುರಿಗೆ ಹೆಸರಾಯ್ತಾತನಿಂದವೆ ನೃಪತಿ ಕೇಳೆಂದ ೧೯

ವರಕುಮಾರರ ಪಂಕ್ತಿಯಲಿ ಸಂ
ವರಣನಾತಗೆ ಸೂರ್ಯಪುತ್ರಿಗೆ
ಕುರು ಮಹೀಪತಿ ಜನಿಸಿದನು ಬಳಿಕಾಯ್ತು ಕುರುವಂಶ
ವರ ಪರಂಪರೆಯೋಳ್ ಪ್ರತೀಪನು
ಧರಣಿಪತಿಯಾತನಲಿ ಸಂತನು
ಧರೆಗಧೀಶ್ವರನಾಗಿ ಬೆಳಗಿದನರಸ ಕೇಳೆಂದ ೨೦

ಸರಸಿಜಾಸನ ಕೊಟ್ಟ ಶಾಪದಿ
ಯರಸಿಯಾದಳು ಗಂಗೆ ಬಳಿಕಿ
ಬ್ಬರಿಗೆ ಮಕ್ಕಳು ವಸುಗಳೆಂಟು ವಸಿಷ್ಠ ಶಾಪದಲಿ
ನಿರಪರಾಧಿಗಳೇಳು ಜನನಾಂ
ತರಕೆ ಮರಣವ ಕಂಡರುಳಿದಂ
ಗಿರವು ಭೂಲೋಕದಲಿ ಬಲಿದುದು ಭೀಷ್ಮನಾಮದಲಿ ೨೧

ಶಾಪ ಹಿಂಗಿತು ಸುರನದಿಗೆ ಬಳಿ
ಕಾ ಪರಾಕ್ರಮಿ ಭೀಷ್ಮ ಶಂತನು
ಭೂಪತಿಗೆ ಮಗನಾಗಿ ಬೆಳಗಿನಖಿಳ ದಿಕ್ತಟವ
ಭೂಪ ಕೇಳೈ ಉಪರಿಚರ ವಸು
ರೂಪಗರ್ಭವು ಮೀನ ಬಸುರಲಿ
ವ್ಯಾಪಿಸಿತು ಜನಿಸಿದುದು ಮಿಥುನವು ಮತ್ಸ್ಯ ಜಠರದಲಿ ೨೨

ಬಳಿಕ ಮತ್ಸ್ಯದ ಬಸಿ(ಪಾ: ಸು)ರಲುದಿಸಿದ
ನಳಿನಲೋಚನೆ ಮತ್ಸ್ಯಗಂಧಿನಿ
ಬೆಳೆವುತಿರ್ದಳು ಸಂಗವಾಯ್ತು ಪರಾಶರವ್ರತಿಯ
ಬಳಿಕ ಯೋಜನಗಂಧಿಯಲ್ಲಿಂ
ದಿಳಿದನಭ್ರಶ್ಯಾಮನುರು ಪಿಂ
ಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ ೨೩

ನೆನೆ ವಿಪತ್ತಿನೊಳೆಂದು ತಾಯನು
ತನುಜ ಬೀಳ್ಕೊಂಡನು ಪರಾಶರ
ಮುನಿ ಪುನಃ ಕನ್ಯತ್ವವನು ಕರುಣಿಸಿದನಾ ಸತಿಗೆ
ವಿನುತ ಯಮುನಾ ತೀರದಲಿ ಮಾ
ನಿನಿಯ ಕಂಡನು ಬೇಂಟೆಯಾಡುತ
ಜನಪ ಶಂತನು ಮರುಳುಗೊಂಡನು ಮದನನೆಸುಗೆಯಲಿ ೨೪

ಪರಿಮಳದ ಬಳಿವಿಡಿದು ಬಂದೀ
ತರುಣಿಯನು ಕಂಡಾರು ನೀನೆಂ
ದರಸ ಬೆಸಗೊಳುತೆಸುವ ಕಾಮನ ಶರಕೆ ಮೈಯೊಡ್ಡಿ
ಅರಮನೆಗೆ ನಡೆಯೆನಲು ತಂದೆಯ
ಪರಮ ವಚನವಲಂಘ್ಯವೆನೆ ಕಾ
ತರಿಸಿ ಭಗ್ನ ಮನೋರಥನು ಮರಳಿದನು ಮಂದಿರಕೆ ೨೫

ವಿರಹದಾವುಗೆ ಕಿಚ್ಚು ಭೂಮೀ
ಶ್ವರನ ಮುಸುಕಿತು ಬಲಿದವಸ್ಥೆಯ
ನರಸ ಬಣ್ಣಿಸಲರಿಯೆನೇಳೆಂಟೊಂಬತರ ಬಳಿಯ
ಮರಣವೀತಂಗೆಂಬ ಜನದು
ಬ್ಬರದ ಗುಜುಗುಜುವರಿದು ಯಮುನಾ
ವರನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ ೨೬

ಕರೆಸಿದನು ಧೀವರನನಯ್ಯಂ
ಗರಸಿಯಾಗಲಿ ನಿನ್ನ ಮಗಳೆನ
ಲರಸಿಯಾದರೆ ಮಗಳ ಮಕ್ಕಳು ರಾಜ್ಯವಾಳುವರೆ
ಅರಿದು ಸಲಿಸುವಡಿದನು ನೇ ಬರಿ
ಯರಸುತನ ನಮಗೇಕೆನಲು ಧೀ
ವರನ ಮಾತಿಂಗೀತನೆಂದನು ರಾಯ ಕೇಳೆಂದ ೨೭

ಆದರಿಲ್ಲಿಂ ಮೇಲೆ ನಾರಿಯ
ರಾದವರು ಭಾಗೀರಥಿಗೆ ಸರಿ
ಮೇದಿನಿಯ ಸಲಿಸುವೆನು ನಿನ್ನಯ ಮಗಳ ಮಕ್ಕಳಿಗೆ
ಈ ದಿವಿಜರೀ ಹರಿ ಹರ ಬ್ರ
ಹ್ಮಾದಿ ದೇವರು ಸಾಕ್ಷಿ ಹೋಗೆಂ
ದಾ ದಯಾಂಬುಧಿ ನಗುತ ನಿನ್ನಯ ಮಗಳ ಕರೆಸೆಂದ ೨೮

ತರಿಸಿದನು ದಂಡಿಗೆಯ ದಂಡಿಯ
ಚರರ ನೆಲನುಗ್ಗಡಣೆಯಲಿ ಸರ
ಸಿರುಹಮುಖಿಯನು ತಂದು ಮದುವೆಯ ಮಾಡಿದನು ಪಿತಗೆ
ಉರವಣಿಸಿ ಮಗ ನುಡಿದ ಭಾಷೆಯ
ನರಸ ಕೇಳಿದು ಬಳಿಕ ಭೀಷ್ಮಗೆ
ವರವನಿತ್ತನು ಮರಣವದು ನಿನ್ನಿಚ್ಛೆ ಹೋಗೆಂದ ೨೯

ಬಳಿಕ ಯೋಜನಗಂಧಿಯಲಿ ಮ
ಕ್ಕಳುಗಳವತರಿಸಿದರು ದೀಪ್ತ
ಜ್ವಲನತೇಜನರು ಕಲ್ಪಭೂಜರು ಹಿಮಕರಾನ್ವಯಕೆ
ಲಲಿತ ಮಂಗಳ ಜಾತಕರ್ಮಾ
ವಳಿಯ ಚಿತ್ರಾಂಗದನನಾ ನೃಪ
ತಿಲಕ ನೆಗಳೆ ವಿಚಿತ್ರವೀರ್ಯನ ನಾಮಕರಣದಲಿ ೩೦

ಇರಲಿರಲು ಶಂತನು ಮಹೀಪತಿ
ಸುರರೊಳಗೆ ಸೇರಿದನು ಬಳಿಕೀ
ಧರಣಿಯೊಡೆತನವಾಯ್ತು ಚಿತ್ರಾಂಗದ ಕುಮಾರಂಗೆ
ಅರಸ ಕೇಳೈ ಕೆಲವು ಕಾಲಾಂ
ತರದಲಾತನು ಕಾದಿ ಗಂಧ
ರ್ವರಲಿ ಮಡಿದನು ಪಟ್ಟವಾಯ್ತು ವಿಚಿತ್ರವೀರ್ಯಂಗೆ ೩೧

ರಾಯ ಕೇಳೈ ಸಕಲ ರಾಜ್ಯ
ಶ್ರೀಯನಾತಂಗಿತ್ತು ಭೀಷ್ಮನು
ತಾಯ ಚಿತ್ತವ ಪಡೆದು ಮೆಚ್ಚಿಸಿದನು ಜಗತ್ರಯವ
ರಾಯ ಕುವರನ ಮದುವೆಗಬ್ಜದ
ಳಾಯತಾಕ್ಷಿಯರನು ವಿಚಾರಿಸಿ
ಹಾಯಿದನು ದಳದುಳದೊಳೊಂದು ವಿವಾಹ ಮಂಟಪಕೆ ೩೨

ಅಲ್ಲಿ ನೆರೆದಾ ಕ್ಷತ್ರವರ್ಗವ
ಚೆಲ್ಲಬಡಿದು ವಿವಾಹ ಶಾಲೆಯ
ಚೆಲ್ಲೆಗಂಗಳ ಕಮಲಮುಖಿಯರ ಮೂವರನು ಪಿಡಿದು
ಘಲ್ಲಣೆಯ ಖಂಡೆಯದ ಚೌಪಟ
ಮಲ್ಲ ಭೀಷ್ಮನು ಪುರಕೆ ತಂದವ
ರೆಲ್ಲರನು ತಮ್ಮಂಗೆ ಮದುವೆಯ ಮಾಡಲನುವಾದ ೩೩

ಆ ಕಮಲಲೋಚನೆಯರೊಳು ಮೊದ
ಲಾಕೆ ಭೀಷ್ಮನ ಗಂಡನೆಂದೇ
ನೂಕಿ ಭಾಷೆಯ ಮಾಡಿ ನಿಂದಳು ಛಲದ ಬಿಗುಹಿನಲಿ
ಆಕೆ ಮಾಣಲಿ ಮಿಕ್ಕವರು ಬರ
ಲೀ ಕುಮಾರಂಗೆಂದು ವೈದಿಕ
ಲೌಕಿಕೋತ್ಸವದಿಂದ ಮದುವೆಯ ಮಾಡಿದನು ಭೀಷ್ಮ ೩೪

ಅರಸ ಚಿತ್ತೈಸಂಬೆಯೆಂಬಳು
ದುರುಳೆ ಭೀಷ್ಮನ ಕೂಟವಲ್ಲದೆ
ಮರಣದೆಡೆಯಲಿ ಬೆರಸಿದಲ್ಲದೆ ಪಂಥವಿಲ್ಲೆಂದು
ಪರಶುರಾಮನ ಭಜಿಸಿ ಹಸ್ತಿನ
ಪುರಕೆ ತಂದಳು ಹೇಳಿಸಿದಳೀ
ಸುರನದೀನಂದನನು ಮಾಡಿದ ಪರಿಯ ಕೇಳೆಂದ ೩೫

ಸತಿಯನೊಲ್ಲೆನು ಬ್ರಹ್ಮಚರ್ಯ
ಸ್ಥಿತಿಗೆ ತಪ್ಪುವನಲ್ಲ ನೀವನು
ಚಿತವ ನೆನೆದರೆ ನಡೆಯಿ ಕೊಟ್ಟೆನು ಕಾಳಗವ ನಿಮಗೆ
ವ್ರತದನಿಧಿ ಕುರುಭೂಮಿಯಲಿ ಶರ
ತತಿಯಲಿಪ್ಪತ್ತೊಂದು ದಿನ ಭೃಗು
ಸುತನೊಡೆನೆ ಕಾದಿದನು ವಿರಥನ ಮಾಡಿದನು ಭೀಷ್ಮ ೩೬

ನುಡಿಯ ಭಂಗಿಸಲೆಂದು ಗುರುವವ
ಗಡಿಸಿ ಹೊಕ್ಕರೆ ಸರಳಮೊನೆಯಲಿ
ಕೊಡಹಿ ಬಿಸುಟನು ಬಿಟ್ಟುದಿಲ್ಲ ಮಹಾವ್ರತಸ್ಥಿತಿಯ
ನುಡಿಯ ಮೀರದ ನಮ್ಮ ಶಿಷ್ಯನ
ನೊಡಬಡಿಸಿಕೊಳ್ಳೆಂದು ನಾರಿಗೆ
ನುಡಿದು ತನ್ನಾಶ್ರಮಕೆ ಸರಿದನು ಪರಶುರಾಮಮುನಿ ೩೭

ಅಂಬೆ ಭೀಷ್ಮನ ಬೈದು ಕಂಬನಿ
ದುಂಬಿ ಹೋದಳು ತಪಕೆ ಬಳಕೀ
ಯಂಬಿಕೆಯನಂಬಾಲೆಯನು ರಮಿಸಿದನು ನೃಪಸೂನು
ಬೆಂಬಲಕೆ ಕಲಿಭೀಷ್ಮನಿರೆ ಚತು
ರಂಬುಧಿಯ ಮಧ್ಯದ ನೃಪಾಲ ಕ
ದಂಬವೀತಂಗಿದಿರೆ ಸಲಹಿದನಖಿಳ ಭೂತಳವ ೩೮

(ಸಂಗ್ರಹ: ಶ್ರೀಕಾಂತ್ ವೆಂಕಟೇಶ್)

ಆದಿಪರ್ವ: ೦೧. ಪೀಠಿಕಾ ಸಂಧಿ

ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನನಿಕರ ದಾತಾರ
ರಾವಾಣಾಸುರ ಮಥನ ಶ್ರವಣ ಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ ೧

ಶರಣಸಂಗವ್ಯಸನ ಭುಜಗಾ
ಭರಣನಮರ ಕಿರೀಟ ಮಂಡಿತ
ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ
ಕರಣನಿರ್ಮಲ ಭಜಕರಘ ಸಂ
ಹರಣ ದಂತಿ ಚಮೂರು ಚರ್ಮಾಂ
ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ ೨

ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರಭಾಳದಿ ಕುಣಿವ ಕುಂತಳದ
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿ
ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ೩

ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ೪

ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನರಚನೋ
ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ದಿದಾಯಕಿಯೆ
ಶೌರಿ ಸುರಪತಿ ಸಕಲ ಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿನೊಲಿದೆನ್ನ ಜಿಹ್ವೆಯಲಿ ೫

ಆದಿ ನಾರಾಯಣಿ ಪರಾಯಣಿ
ನಾದಮಯೆ ಗಜಲಕ್ಷ್ಮಿ ಸತ್ವಗು
ಣಾಧಿದೇವತೆ ಅಮರ ವಂದಿತ ಪಾದಪಂಕರುಹೆ
ವೇದಮಾತೆಯೆ ವಿಶ್ವತೋಮುಖೆ
ಯೈದು ಭೂತಾಧಾರಿಯೆನಿಪೀ
ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ ೬

ವೀರನಾರಾಯಣನೆ ಕವಿ ಲಿಪಿ
ಕಾರ ಕುವರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು
ಚಾರುಕವಿತೆಯ ಬಳಕೆಯಲ್ಲ ವಿ
ಚಾರಿಸುವೊಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ ೭

ಶ್ರೀಮದಮರಾಧೀಶ ನತಪದ
ತಾಮರಸ ಘನವಿಪುಳ ನಿರ್ಮಲ
ರಾಮನುಪಮ ಮಹಿಮ ಸನ್ಮುನಿ ವಿನುತ ಜಗಭರಿತ
ಶ್ರೀಮದೂರ್ಜಿತ ಧಾಮ ಸುದಯಾ
ನಾಮನಾಹವ ಭೀಮ ರಘುಕುಲ
ರಾಮ ರಕ್ಷಿಸುವೂಲಿದು ಗದುಗಿನ ವೀರನಾರಯಣ ೮

ಶರಧಿಸುತೆ ಸನಕಾದಿ ವಂದಿತೆ
ಸುರನರೋರಗ ಮಾತೆ ಸುಜನರ
ಪೂರೆವ ದಾತೆ ಸುರಾಗ್ರಗಣ್ಯಸುಮೌನಿ ವರಸ್ತುತ್ಯೆ
ಪರಮ ಕರುಣಾ ಸಿಂಧು ಪಾವನ
ಚರಿತೆ ಪದ್ಮಜ ಮುಖ್ಯ ಸಕಲಾ
ಮರ ಸುಪೂಜಿತೆ ಲಕ್ಷ್ಮಿ ಕೊಡುಗೆಮಗಧಿಕ ಸಂಪದವ ೯

ಗಜಮುಖನ ವರಮಾತೆ ಗೌರಿಯೆ
ತ್ರಿಜಗದರ್ಚಿತ ಚಾರು ಚರಣಾಂ
ಭುಜೆಯೆ ಪಾವನಮೂರ್ತಿ ಪದ್ಮಜಮುಖ್ಯ ಸುರಪೂಜ್ಯೆ
ಭಜಕರಘ ಸಂಹರಣೆ ಸುಜನ
ವ್ರಜ ಸುಸೇವಿತೆ ಮಹಿಷ ಮರ್ದಿನಿ
ಭುಜಗ ಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ ೧೦

ದುರಿತಕುಲಗಿರಿ ವಜ್ರದಂಡನು
ಧರೆಯ ಜಂಗಮ ಮೂರ್ತಿ ಕವಿ ವಾ
ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜವಂದಿತನು
ತರಳನನು ತನ್ನವನೆನುತ ಪತಿ
ಕರಿಸಿ ಮಗನೆಂದೊಲಿದು ಕರುಣದಿ
ವರವನಿತ್ತನು ದೇವ ವೇದವ್ಯಾಸ ಗುರುರಾಯ ೧೧

ವಂದಿತಾಮಳ ಚರಿತನಮರಾ
ನಂದ ಯದುಕುಲ ಚಕ್ರವರ್ತಿಯ
ಕಂದ ನತಸಂಸಾರ ಕಾನನ ಘನ ದವಾನಳನು
ನಂದನಂದನ ಸನ್ನಿಭನು ಸಾ
ನಂದದಿಂದಲೆ ನಮ್ಮುವನು ಕೃಪೆ
ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ ೧೨

ತಿಳಿಯ ಹೇಳುವೆ ಕೃಷ್ಣಕಥೆಯನು
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ
ಹಲವು ಜನ್ಮದ ಪಾಪ ರಾಶಿಯ
ತೊಳೆವ ಜಲವಿದು ಶ್ರೀಮದಾಗಮ
ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ ೧೩

ಪದದಪ್ರೌಢಿಯ ನವರಸಂಗಳ
ವುದಿತವೆನುವಭಿಧಾನ ಭಾವವ
ಬೆದಕಲಾಗದು ಬಲ್ಲ ಪ್ರೌಢರುಮಾ ಕಥಾಂತರಕೆ
ಇದ ವಿಚಾರಿಸೆ ಬರಿಯ ತೊಳಸಿಯ
ವುದಕದಂತಿರೆಯಲ್ಲಿ ನೋಳ್ಪುದು
ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು ೧೪

ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ ೧೫

ಕೃತಿಯನವಧರಿಸುವುದು ಸುಕವಿಯ
ಮತಿಗೆ ಮಂಗಳವೀವುದಧಿಕರು
ಮಥಿಸುವುದು ತಿದ್ದುವುದು ಮೆರೆವುದು ಲೇಸ ಸಂಚಿಪುದು
ನುತಗುಣರು ಭಾವುಕರು ವರಪಂ
ಡಿತರು ಸುಜನರು ಸೂಕ್ತಿಕಾರರು
ಮತಿಯನೀವುದು ವೀರನಾರಯಣನ ಕಿಂಕರಗೆ ೧೬

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಿಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ ೧೭

ಹರಿಯ ಬಸುರೊಳಗಖಿಲ ಲೋಕದ
ವಿರಡವಡಗಿಹವೋಲು ಭಾರತ
ಶರಧಿಯೊಳಗಡಗಿಹವನೇಕ ಪುರಾಣ ಶಾಸ್ತ್ರಗಳು
ಪರಮ ಭಕ್ತಿಯಲೀ ಕೃತಿಯನವ
ಧರಿಸಿ ಕೇಳ್ದಾನರರ ದುರಿತಾಂ
ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ ೧೮

ಅರಸುಗಳಿಗಿದು ವೀರ ದ್ವಿಜರಿಗೆ
ಪರಮ ವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ ೧೯

ವೇದ ಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನ ಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗ ಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನ ಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ೨೦

ಹೇಮ ಖುರ ಶೃಂಗಾಭರಣದಲಿ
ಕಾಮಧೇನು ಸಹಸ್ರ ಕಪಿಲೆಯ
ಸೋಮ ಸೂರ್ಯ ಗ್ರಹಣದಲಿ ಸುರನದಿಯ ತೀರದಲಿ
ಶ್ರೀಮುಕುಂದಾರ್ಪಣವೆನಿಸಿ ಶತ
ಭೂಮಿದೇವರಿಗಿತ್ತ ಫಲವಹು
ದೀ ಮಹಾಭಾರತದೊಳೊಂದಕ್ಷರವ ಕೇಳ್ದರಿಗೆ ೨೧

ಚೋರ ನಿಂದಿಸಿ ಶಶಿಯ ಬೈದಡೆ
ಕ್ಷೀರವನು ಕ್ಷಯರೋಗಿ ಹಳಿದರೆ
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು
ಭಾರತದ ಕಥನ ಪ್ರಸಂಗವ
ಕ್ರೂರ ಕರ್ಮಿಗಳೆತ್ತ ಬಲ್ಲರು
ಘೋರತರ ರೌರವವ ಕೆಡಿಸುಗು ಕೇಳ್ದ ಸಜ್ಜನರ ೨೨

ವೇದಪುರುಷನ ಸುತನ ಸುತನ ಸ
ಹೋದರನ ಮೊಮ್ಮಗನ (ಪಾ: ಹೆಮ್ಮಗನ) ಮಗನ ತ
ಳೋದರಿಯ ಮಾತುಳನ ರೂಪ (ಮಾವ)ನನತುಳ ಭುಜಬಲದಿ
ಕಾದಿ ಗೆಲಿದವನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ ೨೩

(ಸಂಗ್ರಹ: ಶ್ರೀಕಾಂತ್)

ಗದುಗಿನ ಭಾರತ - ಒಂದು ಇ-ಪುಸ್ತಕ ಪ್ರಯತ್ನ

ಸ್ನೇಹಿತರೇ,

ಕನ್ನಡ ಸಾಹಿತ್ಯ ಭಂಡಾರದಲ್ಲಿ ರತ್ನಪ್ರಾಯವಾಗಿರುವ ಗದುಗಿನ ನಾರಣಪ್ಪ (ಕುಮಾರವ್ಯಾಸ)ನ ಕರ್ಣಾಟ ಭಾರತ ಕಥಾಮಂಜರಿಯನ್ನು ಹಂತಹಂತವಾಗಿ ಇಲ್ಲಿ ಪ್ರಕಟಿಸುವುದು, ಕೊನೆಗೆ ಇಡೀ ಗ್ರಂಥವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸ್ತುತಪಡಿಸುವುದು ಈ ಬ್ಲಾಗಿನ ಉದ್ದೇಶ.

ಈ ಗ್ರಂಥದ ಎಲೆಕ್ಟ್ರಾನಿಕ್ ಪ್ರತಿಯೊಂದು ಈಗಾಗಲೇ ಅಂತರ್ಜಾಲದಲ್ಲಿ ಇದೆಯೋ ಇಲ್ಲವೋ ತಿಳಿಯದು, ಇದ್ದರೆ ಅಂಥ ಮತ್ತೊಂದು ಪ್ರಯತ್ನ ಅವಶ್ಯಕವೇ ಎಂಬ ಪ್ರಶ್ನೆಯೇಳುತ್ತದೆ. ಅವಶ್ಯಕವೆಂದಾದರೂ ಆ ಪ್ರತಿಯಿಂದ ಇಲ್ಲಿಗೆ ಕಾಪಿ ಪೇಸ್ಟ್ ಮಾಡಿಬಿಡಬಹುದಲ್ಲವೇ ಎಂಬ ಉಪಪ್ರಶ್ನೆಯೂ ಏಳುತ್ತದೆ. ಆದರೆ ನಮ್ಮ ಅಂತಿಮ ಉದ್ದೇಶ ಇ-ಪುಸ್ತಕವೊಂದನ್ನು ಹೊರತರುವುದಾದರೂ, ಮೂಲ ಉದ್ದೇಶ ಕೇವಲ ಅದಲ್ಲ. ಇಡೀ ಗದುಗಿನ ಭಾರತವನ್ನು ಓದಬೇಕೆಂಬ ಆಸೆ ನಮ್ಮಲ್ಲಿ ಕೆಲವರಿಗಾದರೂ ಇದ್ದೇ ಇದೆ, ಆದರೆ ಕಾರಣಾಂತರಗಳಿಂದ, ಜೀವನದ ಇತರ ಒತ್ತಡ/ಪ್ರೇರಣೆ/ಒತ್ತಾಯಗಳಿಂದ ಈ ಆಸೆ ಆಸೆಯಾಗೇ ಉಳಿಯುತ್ತದೆಯೇ ಹೊರತು ಅದೊಂದು ಒತ್ತಡವಾಗಿ ಕ್ರಿಯೆಯಾಗಿ ಹೊರಹೊಮ್ಮುವುದೇ ಇಲ್ಲ - ಇಂಥದ್ದೊಂದು ಯೋಜನೆಯ ಒತ್ತಾಸೆ ಇಲ್ಲದಿದ್ದರೆ. ಗದುಗಿನ ಭಾರತವನ್ನು ಟೈಪು ಮಾಡುವ ನೆಪದಲ್ಲಾದರೂ ಅದನ್ನು ಸಂಪೂರ್ಣ ಓದುವ ಅವಕಾಶ ದೊರೆಯುತ್ತದಲ್ಲವೇ, ಇದು ನಮ್ಮ ಮೂಲ ಆಶಯ. ಕಾರಣವೇನೇ ಇರಲಿ, ಒಮ್ಮೆ ಓದಲು ತೊಡಗಿಸಿಕೊಂಡರೆ, ಓದುವ ವೇಗ ಬಂದರೆ, ಕಾವ್ಯ ತನ್ನಿಂದ ತಾನೇ ನಮ್ಮನ್ನು ತೊಡಗಿಸಿಕೊಳ್ಳುತ್ತದೆ ಎನ್ನುವುದು ನಮ್ಮ ಅನುಭವ, ಕುಮಾರವ್ಯಾಸನ ವಿಷಯದಲ್ಲಂತೂ ಅದು ಹೆಚ್ಚು ಸತ್ಯ. ಜೊತೆಗೆ ಹೀಗೆ ನಮ್ಮದೇ ಒಂದು ಇ-ಆವೃತ್ತಿಯನ್ನು ತಯಾರಿಸಿಕೊಳ್ಳುವುದರ ಮೂಲಕ ಅದರಲ್ಲಿ ಹುಡುಕುವಿಕೆ, ಗುರುತಿಟ್ಟುಕೊಳ್ಳುವಿಕೆ ಇತ್ಯಾದಿ ಸೌಲಭ್ಯಗಳನ್ನೂ ಅಭಿವೃದ್ಧಿಪಡಿಸಬಹುದೇ ಎಂಬ ಆಲೋಚನೆಯೂ ಇದೆ.

ಇಷ್ಟಕ್ಕೂ ಇದೊಂದು ಮಹಾನ್ ಪ್ರಯತ್ನವೆಂಬ ಹಮ್ಮೇನೂ ನಮಗಿಲ್ಲ. ಈ ಇನ್ನೂರು ವರ್ಷಗಳಲ್ಲಿ ಅನೇಕ ವ್ಯಕ್ತಿ-ಸಂಸ್ಥೆಗಳು ಓದುವುದೇ ಕಷ್ಟವಾದ, ವಿವಿಧ ಪಾಠಾಂತರಗಳುಳ್ಳ ತಾಳೆಗರಿಗಳ ಆಕರಗಳಿಂದ ಗದುಗಿನ ಭಾರತವನ್ನು ಸಂಪಾದಿಸುವ/ಸಂಸ್ಕರಿಸುವ/ಪರಿಷ್ಕರಿಸುವ ಮಹತ್ ಕಾರ್ಯಗಳನ್ನೇ ಮಾಡಿದ್ದಾರೆ (ಕಂಪ್ಯೂಟರೆಂಬ ಆಧುನಿಕ ಸಾಧನವಿಲ್ಲದೆಯೂ!). ಆದ್ದರಿಂದ ನಮ್ಮ ಈ ಚಿಕ್ಕ ಪ್ರಯತ್ನದಿಂದ ಕುಮಾರವ್ಯಾಸಭಾರತದ ಬಳಕೆ ಹೆಚ್ಚಿಸಿಕೊಳ್ಳುವುದು ಬಿಟ್ಟರೆ ಹೆಚ್ಚಿನ ಫಲವನ್ನೇನೂ ನಾವು ನಿರೀಕ್ಷಿಸುವುದಿಲ್ಲ.

ಇಡೀ ಜನಪದದ ಮನದಲ್ಲಿ ನಲಿದಾಡುವ ಕೃತಿಯನ್ನು "ಸಂಪಾದಿಸು"ವ ಪ್ರಯತ್ನ ಕೂಡಾ, ಕೇವಲ ಇಬ್ಬರದೇ ಆಗುವ ಬದಲು ಬಹುಜನರ ಪ್ರಯತ್ನವಾದರೆ ಸೊಗಸಲ್ಲವೇ? ಆದ್ದರಿಂದ ಇದು ನಮ್ಮೆಲ್ಲರ ಪ್ರಯತ್ನದ ಫಲವಾಗಲಿ ಎಂದು ನಮ್ಮ ಆಶಯ. ನೀವೂ ಬನ್ನಿ, ಕೈಗೂಡಿಸಿ, ಗದುಗಿನ ಭಾರತದ ಜನಪ್ರಿಯ ಇ-ಆವೃತ್ತಿಯನ್ನು ಸಾಕಾರಗೊಳಿಸಿ.

ಲಭ್ಯವಿರುವ ಗದುಗಿನ ಭಾರತದಲ್ಲಿ ೧೦ ಪರ್ವಗಳಿವೆ. ಭಾಗವಹಿಸುವವರು ತಮಗಿಷ್ಟವಾದ ಪರ್ವವೊಂದನ್ನು ಆರಿಸಿಕೊಂಡು ಅದನ್ನು ಬರಹಕ್ಕಿಳಿಸಲು ಪ್ರಾರಂಭಿಸಬಹುದು. ಒಂದೊಂದು ಸಂಧಿ ಪೂರ್ಣವಾದಾಗಲೂ ನಿರ್ದಿಷ್ಟವಾದ ಪರ್ವದ ಹೆಸರಿನಡಿಯಲ್ಲಿ (ಲೇಬಲ್) ಈ ಬ್ಲಾಗಿನಲ್ಲಿ ಪ್ರಕಟಿಸುತ್ತಾ ಹೋಗಬಹುದು. ಹೀಗೆ ಹತ್ತು ಪರ್ವಗಳೂ ಪೂರ್ಣವಾದಾಗ ಇ-ಪುಸ್ತಕಕ್ಕೆ ಬೇಕಾದ ಸಾಹಿತ್ಯ ಸಿಕ್ಕಂತಾಯಿತು. ಅದನ್ನೆಲ್ಲ ಕ್ರೋಢೀಕರಿಸಿ, ಕರಡು ತಿದ್ದಿ ಪ್ರಕಟಿಸುವ ಕೆಲಸದ ಬಗ್ಗೆ ನಂತರ ಯೋಚಿಸಬಹುದು. ಸಧ್ಯಕ್ಕೆ ಪರ್ವಗಳು, ಸಂಧಿ ಸಂಖ್ಯೆ ಹಾಗೂ ಆ ಪರ್ವಗಳನ್ನು ವಹಿಸಿಕೊಂಡವರ ಪಟ್ಟಿ ಹೀಗಿದೆ:

ಸಂ. /ಪರ್ವ /ಸಂಧಿಗಳು /ವಹಿಸಿಕೊಂಡವರು
೦೧. /ಆದಿಪರ್ವ /೨೦ /ಶ್ರೀಕಾಂತ್ ವೆಂಕಟೇಶ್ (ಆಸಕ್ತರು ಕೈಗೂಡಿಸಬಹುದು)
೦೨. /ಸಭಾಪರ್ವ /೧೬ /ಮಂಜುನಾಥ ಕೊಳ್ಳೇಗಾಲ ಮತ್ತು ಶ್ರೀಮತಿ ಶಕುಂತಲಾ (ಮುಗಿದಿದೆ, ಕರಡು ತಿದ್ದುವಿಕೆ ಬಾಕಿ)
೦೩. /ಅರಣ್ಯಪರ್ವ /೨೩ /ಹೊಳೆನರಸಿಪುರ ಮಂಜುನಾಥ ಮತ್ತು ಶ್ರೀಮತಿ ಶಕುಂತಲಾ (ಮುಗಿದಿದೆ, ಕರಡು ತಿದ್ದುವಿಕೆ ಬಾಕಿ)
೦೪. /ವಿರಾಟಪರ್ವ /೧೦ /ಸುನಾಥ್ ಮತ್ತು ಜ್ಯೋತಿ ಮಹದೇವ್ (ಪೂರ್ಣಗೊಂಡಿದೆ)
೦೫. /ಉದ್ಯೋಗಪರ್ವ/೧೧ /ಹನ್ಸಿಕಾ ಪ್ರಿಯದರ್ಶಿನಿ (ಆಸಕ್ತರು ಕೈಗೂಡಿಸಬಹುದು)
೦೬. /ಭೀಷ್ಮಪರ್ವ /೧೦ /ಆನಂದ (ಆಸಕ್ತರು ಕೈಗೂಡಿಸಬಹುದು)
೦೭. /ದ್ರೋಣಪರ್ವ /೧೯ /ಸತ್ಯನಾರಾಯಣ
೦೮. /ಕರ್ಣಪರ್ವ /೨೭ /ಸುಪ್ತದೀಪ್ತಿ ಮತ್ತು ಸುಬ್ರಮಣ್ಯ (ಶಂಭುಲಿಂಗ)
೦೯. /ಶಲ್ಯಪರ್ವ /೩ /ಪಾರ್ಥಸಾರಥಿ
೧೦./ ಗದಾಪರ್ವ /೧೩ /ಸಂತೋಷ್ ಮೂಗೂರ್ ಮತ್ತು ರಶ್ಮಿ ಮೂಗೂರ್

ಸಧ್ಯಕ್ಕೆ ಮೇಲಿನ ಎಲ್ಲ ಪರ್ವಗಳ ಸಂಗ್ರಹಣಕಾರ್ಯ ಚಾಲ್ತಿಯಲ್ಲಿದೆಯಾದರೂ ಕೆಲವು ಪರ್ವಗಳು ಹಿಂದುಳಿದಿವೆ. ಆಸಕ್ತರು ಕೈಗೂಡಿಸಬಹುದು. ಹಾಗೆಯೇ ಅನೇಕ ಪರ್ವಗಳು/ಸಂಧಿಗಳು ಕರಡು ತಿದ್ದುವಿಕೆಗೆ ಕಾದಿವೆ. ಅವುಗಳನ್ನು ಆಗಿಂದಾಗ್ಗೆ ಗ್ರೂಪ್ ಮೈಲ್ ನಲ್ಲಿ ಪ್ರಕಟಿಸುತ್ತೇವೆ. ಆಸಕ್ತರು ಕರಡು ತಿದ್ದುವಿಕೆಗೆ ಮುಂದಾಗುವುದಾದರೆ ಸಂಗ್ರಹಣೆ ಮತ್ತಷ್ಟು ಚುರುಕುಗೊಳ್ಳುತ್ತದೆ. ಆಸಕ್ತರು ದಯವಿಟ್ಟು ಇಲ್ಲಿ ಕಾಮೆಂಟ್ ಹಾಕಿರಿ, ನಿಮ್ಮ email ವಿಳಾಸ ಮತ್ತು ತಾವು ಹಂಚಿಕೊಳ್ಳಲಿಚ್ಛಿಸುವ ಪರ್ವವನ್ನು ಸೂಚಿಸಿ.


ಇವೆಲ್ಲದರ ಅಂತಿಮ ಉದ್ದೇಶ, ಕುಮಾರವ್ಯಾಸಭಾರತದ ಸಮಗ್ರ ಮಾಹಿತಿ ಒಂದೆಡೆಯಲ್ಲಿ ದೊರೆಯುವಂತೆ ಮಾಡುವುದು. ಯೋಜನೆಯ ಈ ಪ್ರಾಥಮಿಕ ಹಂತದಲ್ಲಿ ಅದರ ತಾಂತ್ರಿಕತೆಯನ್ನೂ ಒಳಗೊಂಡಂತೆ ವಿವಿಧ ಆಯಾಮಗಳನ್ನು ಚರ್ಚಿಸುವುದು, ಕಾರ್ಯಕ್ರಮ ರೂಪಿಸುವುದು ಅತ್ಯಗತ್ಯ. ಮೊದಲೇ ಹೇಳಿದಂತೆ ಇದು ಒಂದು ಇಡೀ ತಂಡದ ಕೆಲಸ. ಆದ್ದರಿಂದ ನಾವೆಲ್ಲರೂ ಸರಾಗವಾಗಿ ಚರ್ಚಿಸಲು/ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಅನುವಾಗುವಂತೆ ಅನುವಾಗುವಂತೆ ಒಂದು google group ಸೃಷ್ಟಿಸಿದ್ದೇವೆ. ಅದು ಇಲ್ಲಿದೆ:

http://groups.google.com/group/gaduginabharata

ದಯವಿಟ್ಟು ಈ-ಗುಂಪಿಗೆ ಸೇರಿ. ನಿಮ್ಮ ಸಕ್ರಿಯ ಭಾಗವಹಿಸುವಿಕೆ ಯೋಜನೆಯ ಯಶಸ್ಸಿಗೆ ಅತ್ಯಗತ್ಯ.