ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Friday, January 29, 2010

ಗದಾಪರ್ವ: ೦೧. ಒಂದನೆಯ ಸಂಧಿ

ಸೂ: ಶಲ್ಯನವಸಾನದಲಿ ಕೌರವ
ಮಲ್ಲ ದಳಪತಿಯಾಗಿ ರಣದಲಿ
ನಿಲ್ಲದಡಗಿದನಿತ್ತ ಸಂಜಯ ಬಂದನಾಹವಕೆ

ಕೇಳು ಧೃತರಾಷ್ಟ್ರಾವನಿಪ ಸಿರಿ
ಲೋಲಸಹಿತರ್ಜುನನು ಸೇನಾ
ಜಾಲವನು ಸಂತೈಸಿ ದೊರೆ ಸುಯ್ದಾನವೆಂದೆನುತ
ಆಳೊಡನೆ ಬೆರೆಸಿದನು ಕುರುಭೂ
ಪಾಲಕನ ಥಟ್ಟಿನಲಿ ಶಸ್ತ್ರ
ಜ್ವಾಲೆಗಳ ಕೆದರಿದನು ಹೊದರಿನ ಹಿಂಡ ಹರೆಗಡಿದ ೧

ಎಲವೊ ಕಪಟದ್ಯೂತಕೇಳೀ
ಕಲುಷಿತಾಂತಃಕರಣ ನಿನ್ನೀ
ಬಲಕೆ ಪತಿ ನೀನೋ ಕೃಪಾಚಾರಿಯನೊ ಗುರುಸುತನೊ
ಖಳ ಸುಶರ್ಮನೊ ಶಕುನಿಯೋ ನಿ
ನ್ನುಳಿದವೊಡವುಟ್ಟಿದರೊ ರಾಜಾ
ವಳಿಯೊಳಾರಳಲಿಗರೆನುತ ತೆಗೆದೆಚ್ಚನಾ ಪಾರ್ಥ ೨

ಅರಸ ಕೇಳೈ ಮೂರು ಸಾವಿರ
ಕರಿಘಟೆಗಳಿಪ್ಪತ್ತು ಸಾವಿರ
ತುರಗದಳ ರಥವೆರಡುಸಾವಿರ ಲಕ್ಷ ಕಾಲಾಳು
ಅರಸುಗಳು ಮೂನೂರು ನಿಂದುದು
ಕುರುಬಲದ ವಿಸ್ತಾರ ಕೌರವ
ಧರಣಿಪತಿಯೇಕಾದಶಾಕ್ಷೋಹಿಣಿಯ ಶೇಷವಿದು ೩

ಕರಿಘಟೆಗಳೈನೂರು ಮೂವ
ತ್ತೆರಡು ಸಾವಿರ ಪಾಯದಳ ಸಾ
ವಿರದ ನೂರು ವರೂಥ ವಂಗಡದವನಿಪರು ಸಹಿತ
ತುರುಕ ಬರ್ಬರ ಪಾರಸೀಕರ
ತುರಗವೈಸಾವಿರ ಸಹಿತ ಮೋ
ಹರಿಸಿ ನಿಂದನು ಶಕುನಿ ಥಟ್ಟಿನ ಬಲದ ಬಾಹೆಯಲಿ ೪

ನೂರು ರಥವಿನ್ನೂರು ಗಜವೈ
ನೂರು ಹಯವೈಸಾಸಿರದ ಮೂ
ನೂರು ಸುಭಟರು ಸಹಿತ ಮೋಹರದೆರಡು ಬಾಹೆಯಲಿ
ತೋರಿದರು ಕೃತವರ್ಮ ಕೃಪರೈ
ನೂರುಗಜ ಗುರುತನುಜ ಸಹಿತೀ
ಮೂರುದಳಕೊತ್ತಾಗಿ ನಿಂದನು ಕೌರವರರಾಯ ೫

ಕವಿದುದಿದು ದುವ್ವಾಳಿಸುತ ರಥ
ನಿವಹ ಬಿಟ್ಟವು ಕುದುರೆ ಸೂಠಿಯ
ಲವಗಡಿಸಿ ತೂಳಿದವು ಹೇರಾನೆಗಳು ಸಂದಣಿಸಿ
ಸವಡಿವೆರಳಲಿ ಸೇದುವಂಬಿನ
ತವಕಿಗರು ತರುಬಿದರು ಬಲುಬಿ
ಲ್ಲವರು ಮೊನೆಮುಂತಾಗಿ ಮೋಹಿತು ಮಿಕ್ಕ ಸಬಳಿಗರು ೬

ರಣ ಪರಿಚ್ಚೇದಿಗಳು ಮಿಗೆ ಸಂ
ದಣಿಸಿತೋ ಕುರುಸೇನೆ ವಾದ್ಯದ
ರಣಿತವದ್ರಿಯನೊದೆದುದದುಭುತ ಬೊಬ್ಬೆಗಳ ಲಳಿಯ
ಕುಣಿದವರ್ಜುನನುರುರಥದ ಮುಂ
ಕಣಿಯಲಾರೋಹಕರು ರಥ ಹಯ
ಹೆಣಗಿದವು ಹಯದೊಡನೆ ಕಂದದ ಖುರದ ಹೊಯ್ಲಿನಲಿ ೭

ಸುತ್ತುವಲಗೆಯ ಮೇಲೆ ಕಣೆಗಳ
ತೆತ್ತಿಸಿದರೀಚಿನಲಿ ಸಬಳಿಗ
ರೆತ್ತಿದರು ರಾವುತರು ಕೀಲಿಸಿದರು ರಥಧ್ವಜವ
ಮುತ್ತಿದವು ಗಜಸೇನೆ ಪಾರ್ಥನ
ತೆತ್ತಿಗರ ಬರಹೇಳು ವೇಢೆಯ
ಕಿತ್ತು ಮಗುಚುವರಾರೆನುತ ಮುಸುಕಿತ್ತು ಕುರುಸೇನೆ ೮

ಅರಸ ಕೇಳೈ ಬಳಿಕ ಪಾರ್ಥನ
ಕೆರಳಿಚಿದರೋ ಕಾಲರುದ್ರನ
ಸರಸವಾಡಿದರೋ ಪ್ರಚಂಡಪ್ರಳಯಭೈರವನ
ಪರಿಭವಿಸಿದರೊ ಲಯಕೃತಾಂತನ
ಕರೆದರೋ ಮೂದಲಿಸಿ ನಾವಿ
ನ್ನರಿಯೆವರ್ಜುನನೆಸುಗೆಯಭಿವರ್ಣನೆಯ ನಿರ್ಣಯವ ೯

ಎಡದಲೌಕಿದ ಭಟರನಾ ವಂ
ಗಡದ ರಾವ್ತರ ಸಮ್ಮುಖದೊಳವ
ಗಡಿಸಿದಾನೆಯ ಥಟ್ಟಿನಾ ತೇರುಗಳ ಸಮರಥರ
ಕಡಿದನೊಂದೇ ಸರಳಿನಲಿ ಚಿನ
ಕಡಿಗಳೆದು ರುಧಿರಾಂಬುರಾಶಿಯೊ
ಳಡಿಗಿಸಿದ ಚತುರಂಗಬಲವನದೊಂದು ನಿಮಿಷದಲಿ ೧೦

ಅಳಿದವಿನ್ನೂರಾನೆ ಸರಳ
ಚ್ಚಳಿಸಿದವು ಮೂನೂರು ಪುನರಪಿ
ಮಲಗಿದವು ನೂರಾನೆ ಕೆಡೆದವು ತಾರುಥಟ್ಟಿನಲಿ
ಬಳಿಕ ನೂರು ನಿರಂತರಾಸ್ತ್ರಾ
ವಳಿ ವಿಘಾತಿಗೆ ನೂರು ಲೆಕ್ಕವ
ಕಳೆದವಿನ್ನೂರಾನೆ ಪಾರ್ಥನ ಕೋಲ ತೋಹಿನಲಿ ೧೧

ರಥ ಮುರಿದವೈನೂರು ತತ್ಸಾ
ರಥಿಗಳಳಿದುದು ನೂರು ಮಿಕ್ಕುದು
ರಥವನಿಳಿದೋಡಿದುದು ಸಮರಥರೆಂಟುನೂರೈದು
ಪೃಥುವಿಗೊರಗಿದುವೆಂಟು ಸಾವಿರ
ಪೃಥುಳ ಹಯ ನುಗ್ಗಾಯ್ತು ಗಣನೆಯ
ರಥ ಪದಾತಿಯೊಳಿತ್ತಲೆನೆ ಸವರಿದನು ಪರಬಲವ ೧೨

ಒದೆದು ರಥವನು ಸೂತರಿಳಿದೋ
ಡಿದರು ಚಾಪವನಿಳುಹಿ ಸಮರಥ
ರೆದೆಯ ನೀವಿತು ದೂರದಲಿ ಕರಿಕಂಧರವನಿಳಿದು
ಕೆದರಿತಾರೋಹಕರು ವಿಕ್ರಮ
ವಿದಿತ ವಿಪುಳ ಪದಸ್ಥಭೂಪರು
ಹುದುಗಿತಲ್ಲಿಯದಲ್ಲಿ ಪಾರ್ಥನ ಸರಳ ಘಾತಿಯಲಿ ೧೩

ಬಿರುದ ಬಿಸುಟರು ಧ್ವಜದ ಕಂಬವ
ಹರಿಯ ಹೋಯ್ದರು ಕಾಲ ತೊಡರನು
ಧರೆಗೆ ಬಿಸುಟರು ಹಡಪ ಬಾಹಿಯ ಚಮರಧಾರಿಗರ
ದೊರೆಗಳುಳಿದರು ಬೆದರಿ ರಥದಲಿ
ಕರಿಗಳಲಿ ವಾರುವದಿನಿಳೆಗು
ಪ್ಪರಿಸಿದರು ಹರಹಿನಲಿ ಹಾಯ್ದರು ಹೊತ್ತ ದುಗುಡದಲಿ ೧೪

ಬೆದರಿ ಗಜ ಮುಂಡಾಸನದಲೋ
ಡಿದವು ಚಮರೀಮೃಗದವೊಲು ಬಲು
ಗುದುರೆ ಹಾಯ್ದವು ಕಂದದಲಿ ಬಲನೊಗನನಸಬಡಿದು
ಕುದುರೆಯೆಳೆದವು ಬರಿರಥವನೋ
ಡಿದ ಪದಾತಿಯ ಬಿಸುಟ ಕೈದುವ
ಹೊದೆದುದಿಳೆ ಕಳನಗಲದಲಿ ಕಂಡೆನು ಮಹಾದ್ಭುತವ ೧೫

ಮರಳಿ ವಾಘೆಯ ಕೊಂಡು ರಾವ್ತರು
ತಿರುಗಿದರು ಹಮ್ಮುಗೆಯ ನೇಣ್ಗಳ
ಹರಿದು ಹಕ್ಕರಿಕೆಗಳ ಬಿಸುಟರು ಹಾಯ್ಕಿ ಖಂಡೆಯವ
ಬಿರುದ ಸಂಭಾಳಿಸುವ ಭಟ್ಟರ
ನಿರಿದರಾರೋಹಕರು ಕರಿಗಳ
ತಿರುಹಿ ಗುಳ ರೆಂಚೆಗಳ ಕೊಯ್ದೀಡಾಡಿದರು ನೆಲಕೆ ೧೬

ರಾಯ ಕೇಳೈ ಬಲದ ಬಾಹೆಯ
ನಾಯಕರು ಜಾರಿದರು ವಾಮದ
ಜೇಯ ಸುಭಟರು ಸಿಡಿದು ತರಹರಿಸಿದರು ದೂರದಲಿ
ರಾಯ ಕಂಡನು ಬಳಿಕ ಬಲದ ಪ
ಲಾಯನದ ಪರಿವಿಡಿಯನಸುವಿನ
ಬೀಯಕಿವರಂಜಿದರೆನುತ ಮೂದಲಿಸಿದನು ನೃಪರ ೧೭

ಎಲೆ ಮಹೀಪತಿಗಳಿರ ಪುಣ್ಯ
ಸ್ಥಳ ಕುರುಕ್ಷೇತ್ರವು ಮಹಾಸ
ತ್ಕುಲದಿ(ಪಾ: ದೊಳಗೆ) ಜನನವು ನಿಮಗೆ ವೀರಕ್ಷತ್ರಿಯೋತ್ತಮರು
ಅಳುಕದಂಘೈಸಿದಡೆ ಸುರಸಂ
ಕುಲದ ಸೇರುವೆ ತಪ್ಪಿದರೆ ನೀ
ವಿಳಿವಿರೈ ರೌರವದೊಳಾವುದು ಲಾಗು ನಿಮಗೆಂದ ೧೮

ವೀರಮಾತೆಯರೆಂದು ತಾಯ್ಗಳ
ನಾರು ಕೊಂಡಾಡುವರು ಸತಿಯರು
ವೀರಪತ್ನಿಯರೆಂದು ನುಡಿವರೆ ನಿಮ್ಮ ರಾಣಿಯರ
ವೀರಸಿರಿ ನಿಮಗೆಂದು ವಂದಿಗ
ಳೋರೆ ಕಟಕಿಯಲೆನ್ನರೇ ಕೈ
ವಾರಿಸುವ ಕವಿನಿಕರ ನಾಚದೆ ಶಿವಶಿವಾ ಎಂದ ೧೯

ಸೆರೆನರದ ದರ್ಭೆಗಳ ಮಿದುಳಿನ
ಚರುವಿನೆಲುವಿನ ಸಮಿಧೆಗಳ ಬಿಲು
ದಿರುರವದ ಚತುರಂಗರಭಸದ ಸಾಮವೇದಿಗಳ
ಅರುಣಜಲದಾಜ್ಯದ ಸ್ರುವಾದಿಯ
ಶಿರಕಪಾಲದ ವೈರಿಪಶುಬಂ
ಧುರದ ಸಂಗರಯಜ್ಞ ದೀಕ್ಷೆಯ ಮರೆದಿರಕಟೆಂದ ೨೦

ಇಲ್ಲಿ ಮನುಜಸ್ತ್ರೀಯ ಮೇಳವ
ವಲ್ಲಿ ಸುರನಾರಿಯರ ರತಿ ನಿವ
ಗಿಲ್ಲಿ ಭೌಮವಿಭನ್ನರಸ ಪೀಯೂಷರಸವಲ್ಲಿ
ಇಲ್ಲಿಯಧ್ರುವ ವಿಭವವಮರತೆ
ಯಲ್ಲಿ ಕಿಲ್ಬಿಷವಿಲ್ಲಿ ಶಿವಮಯ
ವಲ್ಲಿ ನೀವಿಂದೇನ ನೆನದಿರಿ ಶಿವಶಿವಾ ಎಂದ ೨೧

ಆವ ಭವದಲಿ ನಿಮ್ಮ ರಾಜ್ಯವ
ದಾವ ಭವದಲಿ ಪುತ್ರಮಿತ್ರರ
ದಾವ ಜನ್ಮಂಗಳ ಸಮಾಗಮ ನಿಮ್ಮ ರಾಣಿಯರು
ಈ ವಿಡಂಬನ ದೈಹಿಕವ ಸಂ
ಭಾವಿಸುತ ಪರಲೋಕಹಿತವನು
ನೀವು ನೆನೆಯದೆ ಕೆಟ್ಟುದಕೆ ಬೆರಗಾದೆ ನಾನೆಂದ ೨೨

ನೃಪನ ಮೂದಲೆ ನಿಜಕುಲಕ್ರಮ
ಕಪಯಶೋಭಯ ಪಾರಲೌಕಿಕ
ದುಪಹತಿ ಪ್ರತಿಭಟರ ನಗೆ ಸೌಭಟಪರಿತ್ಯಾಗ
ಕೃಪಣತೆಯ ದುಷ್ಕೀರ್ತಿ ಭುಜಬಲ
ದಪದಶಾವಿರ್ಭಾವವೀ ಭೂ
ಮಿಪರ ಮರಳಿಚಿತೇನನೆಂಬೆನು ಭೂಪ ಕೇಳೆಂದ ೨೩

ಕರೆದರೊಬ್ಬರನೊಬ್ಬರುರೆ ಧಿ
ಕ್ಕರಿಸಿದರು ತಮ್ಮೊಬ್ಬರೊಬ್ಬರ
ಬಿರುದ ಹಿಡಿದರು ಬಯ್ದರಪಮಾನಾನುತಾಪದಲಿ
ತಿರುಗಹೇಳೋ ರಾವುತರ ರಥಿ
ಕರ ಗಜಾರೋಹಕರನೆಂದ
ಬ್ಬರಿಸಿ ಚೌರಿಯ ಬೀಸಿ ಮರಳಿತು ಭೂಪತಿವ್ರಾತ ೨೪

ವಾರುವಂಗಳ ಬಿಗುಹನೇರಿಸಿ
ವಾರಣಂಗಳ ಗುಳವ ಜೋಡಿಸಿ
ತೇರುಗಳ ಕೀಲಚ್ಚು ಕೂಬರಯುಗವನಾರೈದು
ವೀರಪಟ್ಟವ ರಚಿಸಿ ಕಂಕಣ
ದಾರವನು ಕಟ್ಟಿದರು ಸಂಗರ
ವೀರಸಿರಿಯ ವಿವಾಹಸಮಯದ ಸೌಮನಸ್ಯದಲಿ ೨೫

ದೂಪಿಸಿದ ಬಿಳಿದುಗುಳನುಟ್ಟನು
ಲೇಪನಂಗಳ ಹೂಸಿ ಮಧುರಾ
ಳಾಪದಲೆ ಬೋಳೈಸಿ ಸಾರಥಿ ಗಜ ಹಯಾವಳಿಯ
ಭೂಪತಿಯ ರಣಯಜ್ಞಮುಖಕೆ ನಿ
ಜಾಪಘನಪೂರ್ಣಾಹುತಿಯಲೇ
ಶ್ರೀಪತಿಯ ಸಾಯುಜ್ಯವೆನುತಿದಿರಾಯ್ತು ನೃಪಕಟಕ ೨೬

ಅರಿಯಬಹುದೈ ಭಾವಮೈದುನ
ಮೆರೆ ಭುಜಾಟೋಪವನು ಹಿಂದಣ
ಕೊರತೆಯನು ಕಳೆ ಮಗನೆ ಬೊಪ್ಪಕುಲಕ್ರಮಾಗತವ
ಮುರಿಯದಿರು ಮುಂಗಲಿತನಕೆ ತಾ
ನಿರಿವೆ ನಾ ಮುನ್ನೆಂದು ತಮ್ಮೊಳು
ಜರೆದರೊಡವುಟ್ಟಿದರು ಬಂಧವ ಮಿತ್ರ ಭೂಮಿಪರು ೨೭

ನೂಕಿತೊಂದೇ ವಾಘೆಯಲಿ ಹಯ
ನಾಕು ಸಾವಿರ ರಥದ ಜೋಡಿಯ
ಜೋಕೆ ಕವಿದುದು ಮೂರು ಸಾವಿರ ರಾಜಪುತ್ರರಲಿ
ತೋಕುವಂಬಿನ ಜೋದರೊಗ್ಗಿನೊ
ಳೌಕಿದವು ಸಾವಿರ ಮದೇಭಾ
ನೀಕ ಬೊಬ್ಬೆಯ ಲಳಿಯಲೌಕಿತು ಲಕ್ಕ ಪಾಯದಳ ೨೮

ಸುರಿದುದಂಬಿನ ಸೋನೆ ರಥಿಕರ
ಕರಿಘಟೆಯ ಥಟ್ಟಂದ ಕಕ್ಕಡೆ
ಪರಶು ಶೂಲ ಮುಸುಂಡಿ ಸೆಲ್ಲೆಹ ಸಬಳ ಶಕ್ತಿಗಳು
ಅರಿಬಲಾಬ್ಧಿಯನೀಸಿದವು ತ
ತ್ತುರಗ ರಥವನು ಬೀಸಿದವು ಮದ
ಕರಿಗಳಿಕ್ಕಡಿಘಾಯಕೊದಗಿತು ರಾಯರಾವುತರು ೨೯

ನೆರೆ ಪರಿಚ್ಛೇದಿಸಿದ ಬಲ ಮು
ಕ್ಕರಿಸಿತೋ ನಿಜಸೈನ್ಯಸಾಗರ
ಬರತುದೋ ಬಲಗೈಗಳೆದಗಳ ಕೆಚ್ಚು ಕರಗಿತಲಾ
ಮುರಿದು ಬರುತಿದೆ ಸೃಂಜಯರು ಕೈ
ಮುರಿದರೇ ಪಾಂಚಾಲಭಟರೆಂ
ದೊರೆಲಿದುದು ಮಂತ್ರಿಗಳು ರಾಯನ ರಥದ ಬಳಸಿನಲಿ ೩೦

ಅರಸ ಕೇಳು ಯುಧಿಷ್ಠಿರನ ಮೇ
ಲುರವಣಿಸಿತೀ ಸೇನೆ ಭೀಮನ
ಬಿರುದ ತಡೆದವು ಸಾವಿರಾನೆಗಳೊಂದು ಬಾಹೆಯಲಿ
ಅರರೆ ರಾವುತೆನುತ್ತ ಕವಿದುದು
ತುರಗ ಸಾವಿರ ನಕುಲ ಸಹದೇ
ವರಿಗೆ ಸಾತ್ಯಕಿಗಾಗಿ ಬಿಟ್ಟನು ರಥವನಾ ದ್ರೌಣಿ ೩೧

ರಾಯದಳದಲೆ ಚಾತುರಂಗದ
ಬೀಯ ಬೆದರಿಸಿತದಟರನು ಬಲು
ನಾಯಕರಿಗಿದಿರೊಡ್ಡಿದರು ಕೃಪ ಭೋಜ ಗುರುಸುತರು
ಆಯಿತೀ ರಣವೆನುತ ಪಾಂಡವ
ರಾಯ ಹೊಕ್ಕನು ಬಳಿಕಲಾ ಕ
ರ್ಣಾಯತಾಸ್ತ್ರನು ಕಂಡನರ್ಜುನನಾ ಮಹಾದ್ಭುತವ ೩೨

ಮೇಲುಲೋಕವ ಬಯಸಿ ಕುರುಬಲ
ಮೇಲೆ ಬಿದ್ದುದು ಜೀಯ ಜಡಿದು ನೃ
ಪಾಲನೇಕಾಂಗದಲಿ ಹೊಕ್ಕನು ಹೊದರನೊಡೆಬಡಿದು
ಮೇಲುದಾಯದಲವನಿಪನ ಸಂ
ಭಾಳಿಸುವೆನೆನೆ ನಗುತ ಲಕ್ಷ್ಮೀ
ಲೋಲ ಚಪ್ಪರಿಸಿದನು ನರನುದ್ದಂಡವಾಜಿಗಳ ೩೩

ಅರಸ ಕೇಳೈ ನಿಮಿಷದಲಿ ನೃಪ
ವರನ ರಥದಿಂ ಮುನ್ನ ಪಾರ್ಥನ
ತಿರುವಿನಬ್ಬರ ಕೇಳಲಾದುದು ಕಳನ ಚೌಕದಲಿ
ಅರರೆ ದೊರೆಯೋ ಕೊಳ್ಳಿವನ ಕೈ
ಮರೆಯದಿರಿ ಕುರುಧರಣಿಪನ ಹಗೆ
ಹರಿಯಲೆಂದುರವಣಿಸಿ ಕವಿದುದು ಕೂಡೆ ಕುರುಸೇನೆ ೩೪

ಮೋಹಿದವು ಬರಿ ಕೈಗಳನು ರಥ
ವಾಹತತಿಗಾನೆಗಳು ವಂಶ
ದ್ರೋಹಿ ಸಿಲುಕಿಡನೆನುತ ತಡೆದರು ರಥಿಕರೆಡಬಲನ
ಗಾಹಿಸಿತು ದೂಹತ್ತಿ ಲೌಡೆಯ
ರಾಹುತರು ಕಟ್ಟಳವಿಯಲಿ ಕವಿ
ದೋಹಡಿಸದೌಂಕಿತು ಪದಾತಿ ಧನಂಜಯನ ರಥವ ೩೫

ಏನನೆಂಬೆನು ಜೀಯ ಕುರುಬಲ
ದಾನೆಗಳ ವಿಕ್ರಮವನತಿರಥ
ರೇನ ನಿಲುವರು ಕೆಲಬಲನ ಚತುರಂಗದುಪಹತಿಗೆ
ಭಾನುಮಂಡಲವಕಟ ತಿಮಿರಾಂ
ಭೋನಿಧಿಯಲಕ್ಕಾಡಿತೆಂಬವೊ
ಲಾ ನಿರಂತರ ದಳದ ಥಟ್ಟಣೆ ಧೂಳಿಪಟವಾಯ್ತು ೩೬

ಮುಂಕುಡಿಯ ಹಿಡಿದಾನೆಗಳನೆಡ
ವಂಕಕೌಕಿದ ರಥಚಯವ ಬಲ
ವಂಕಕೊತ್ತಿದ ರಾವುತರನುಬ್ಬೆದ್ದ ಪಯದಳವ
ಶಂಕೆಯನು ನಾ ಕಾಣೆ ಬಲನೆಡ
ವಂಕವನು ತರಿದೊಟ್ಟಿದನು ಮಾ
ರಂಕ ನಿಲುವುದೆ ಪಾರ್ಥ ಮುನಿದಡೆ ಭೂಪ ಕೇಳೆಂದ ೩೭

ಉಡಿಯ ಮೋರೆಯ ಜೋಡು ಜೋದರ
ಕೊಡಹಿ ಹಾಯ್ದವು ದಂತಿಘಟೆ ಖುರ
ಕಡಿವಡೆಯೆ ಕುದುರೆಗಳು ಹಾಯ್ದವು ಹಾಯ್ಕಿ ರಾವುತರ
ಮಡಿಯೆ ಸಾರಥಿ ಮಗ್ಗಿದವು ರಥ
ನಡೆದು ಕಾದಿ ಮಹಾರಥರು ಮೆದೆ
ಗೆಡೆದುದುಳಿದ ಪದಾತಿಪತನವನರಿಯೆ ನಾನೆಂದ ೩೮

ಕರಿಘಟೆಗಳೈನೂರು ರಥ ಸಾ
ವಿರದ ಮೂನೂರೆರಡು ಸಾವಿರ
ತುರಗದಳವೆಂಬತ್ತು ಸಾವಿರ ವಿಗಡ ಪಾಯದಳ
ತೆರಳಿತಂತಕಪುರಿಗೆ ಪುನರಪಿ
ತುರಗ ಸಾವಿರ ನೂರು ರಥ ಮದ
ಕರಿಗಳಿನ್ನೂರೆಂಟು ಸಾವಿರಗಣಿತ ಪಾಯದಳ ೩೯

ಮತ್ತೆ ಮೇಲೊಡಗವಿದ ನೂರರು
ವತ್ತು ಗಜ ರಥಯೂಥ ನೂರಿ
ಪ್ಪತ್ತು ಮೂನೂರಶ್ವಚಯ ಸಾವಿರದ ನಾನೂರು
ಪತ್ತಿ ಮರಳೈವತ್ತು ಗಜ ಮೂ
ವತ್ತು ಶರವಿನ್ನೂರು ಹಯವರು
ವತ್ತು ನಾನೂರಿಂದ ಮೇಲಾಯ್ತುಳಿದ ಪಾಯದಳ ೪೦

ಬಿರುದು ಪಾಡಿನ ಭಾಷೆಗಳ ನಿ
ಷ್ಠುರದ ನುಡಿಗಳ ರಾಜವರ್ಗದ
ಮರುಳದಲೆಯನೆ ಕಾಣೆನರ್ಜುನನಾಹವಾಗ್ರದಲಿ
ಹರಿವ ರಕುತದ ತಳಿತ ಖಂಡದ
ಶಿರದ ಹರಹಿನ ಕುಣಿವ ಮುಂಡದ
ಕರಿ ತುರಗ ಪಯದಳದ ಹೆಣಮಯವಾಯ್ತು ರಣಭೂಮಿ ೪೧

ಮುರಿದುದೆಡಬಲವಂಕ ಪಾರ್ಥನ
ತರುಬಿದನು ನಿನ್ನಾತ ಸೈರಿಸಿ
ಹರಿದಳವ ಕೂಡಿದನು ಕಲಿಮಾಡಿದನು ಕಾಲಾಳ
ಒರಲಿದವು ಬಹುವಿಧದ ವಾದ್ಯದ
ಬಿರುದನಿಗಳುಬ್ಬೆದ್ದು ಮಾರಿಯ
ಸೆರಗ ಹಿಡಿದನು ಕೌರವೇಶ್ವರನರ್ಜುನನ ಕೆಣಕಿ ೪೨

ಕೊಲುವಡನುಚಿತವಿಂದು ಭೀಮಗೆ
ಕಳೆದ ಮೀಸಲು ನಿನ್ನ ತನು ನೀ
ನೊಲಿದ ಪರಿಯೆಂದೆಸು ವಿಭಾಡಿಸು ರಚಿಸು ಭಾಷೆಗಳ
ಅಳುಕಿದೆವು ನಿನಗೆಂದು ರಾಯನ
ಬಳಿಯ ಜೋದರ ರಾವುತರ ರಥಿ
ಗಳ ಪದಾತಿಯನಿಕ್ಕಿದನು ಸೆಕ್ಕಿದನು ಸರಳುಗಳ ೪೩

ಜನಪ ಕೇಳೈ ನಿನ್ನ ಮಗನ
ರ್ಜುನನನೆಚ್ಚನು ಫಲುಗುಣಾಸ್ತ್ರವ
ಚಿನಕಡಿದು ಮಗುಳೆಚ್ಚು ಪಾರ್ಥನೊಳೇರ ತೋರಿಸಿದ
ಮನದ ಮದ ಮೀರಿತು ಕಿರೀಟಿಯ
ಮೊನೆಗಣೆಯ ಮನ್ನಿಸದೆ ದುರ್ಯೋ
ಧನನು ದುವ್ವಾಳಿಸಿದನವನೀಪತಿಯ ಮೋಹರಕೆ ೪೪

ಅರಸುಮೋಹರ ಸಿಲುಕಿದುದು ದೊರೆ
ಬೆರಸಿ ಹೊಯ್ದನು ಬೇಹ ಸುಭಟರು
ಮರಳಿಯೆನೆ ಮುಂಚಿದರು ಪಂಚದ್ರೌಪದೀಸುತರು
ಧರಣಿಪತಿಯ ವಿಘಾತಿಗೊಪ್ಪಿಸಿ
ಶಿರವನೆನುತುಬ್ಬೆದ್ದು ಪಾಂಚಾ
ಲರು ಪ್ರಬುದ್ಧಕ ಸೃಂಜಯರು ರಂಜಿಸಿತು ಚೂಣಿಯಲಿ ೪೫

ಇತ್ತ ಪಡಿಬಲವಾಗಿ ಸಾವಿರ
ಮತ್ತಗಜಘಟೆ ಕೌರವೇಂದ್ರನ
ತೆತ್ತಿಗರ ತೂಳಿದರು ಪಾಂಚಾಲಪ್ರಬುದ್ಧಕರ
ಹತ್ತು ಸಾವಿರ ಪಾಯದಳ ಹೊಗ
ರೆತ್ತಿದಲಗಿನ ಹೊಳಹಿನಂತಿರೆ
ಮುತ್ತಿತವನೀಪತಿಯ ಮೋಹರದೆರಡು ಬಾಹೆಯಲಿ ೪೬

ನೂರುರಥದಲಿ ಬಲುಗುದುರೆ ನಾ
ನೂರರಲಿ ಕುರುರಾಯ ಸೂಠಿಯ
ಲೇರಿದನು ಧರ್ಮಜನ ದಳ ನುಗ್ಗಾಯ್ತು ನಿಮಿಷದಲಿ
ವೀರಿದವು ಗಜಘಟೆಗಳಾವೆಡೆ
ತೋರು ದೊರೆಗಳನೆನುತ ಬೊಬ್ಬಿರಿ
ದೇರಿಸಿದರರಿಭಟರು ನೃಪತಿಗೆ ಜೋದರಂಬುಗಳ ೪೭

ಏನು ಹೇಳುವೆನವನಿಪತಿ ಯಮ
ಸೂನುವಿನ ಸುಕ್ಷಾತ್ರವನು ನಿ
ನ್ನಾನೆಗಳನಗ್ಗಳೆಯ ರಾವ್ತರ ರಥಪದಾತಿಗಳ
ಭಾನುಬಿಂಬವ ತೆಗೆವ ತಮದ ವಿ
ತಾನದಂತಿರೆ ವಿರಸವಾಯ್ತು ಶ
ರಾನುಗತಶರಜಾಲ ಜನದ ವಿಡಾಯ್ಲತನವೆಂದ ೪೮

ಆಳ ಕೊಂದನು ನೂರ ಪುನರಪಿ
ಸೀಳಿದನು ಮೂನೂರನುಕ್ಕಿನ
ಬೋಳೆಯಂಬಿಗೆ ಬೀರಿದನು ನಾಲ್ಕೈದು ಸಾವಿರವ
ಮೇಲೆ ಮೂಸಾವಿರದ ಸವಡಿಯ
ಸೀಳಿಸಿದನಿನ್ನೂರು ಕುದುರೆಗೆ
ಕಾಲನೂರಲಿ ಲಾಯ ನೀಡಿತು ನೃಪತಿ ಕೇಳೆಂದ ೪೯

ಚೆಲ್ಲಿದವು ರಥ ಗಾಲಿ ಮುರಿದವು
ಗೆಲ್ಲೆಗೆಡೆದವು ಕೂಡೆ ಕಂಬುಗೆ
ಯಲ್ಲಿ ಕಾಣೆನು ಕೊಚ್ಚಿದಚ್ಚಿನ ಕಡಿದ ಕೀಲುಗಳ
ಎಲ್ಲಿಯವು ರಥವಾಜಿ ವಾಜಿಗೆ
ತೆಲ್ಲಟಿಯಲೇ ರಥಿಕ ಸೂತರು
ಬಲ್ಲಿದರು ಕುರುಳಿಂಗೆ ಹಾಯ್ದರು ಸುರರ ಸೂಳೆಯರ ೫೦

ಉಳಿಗಡಿಯ ನಾನೂರು ಕುದುರೆಗ
ಳಳಿದವರಸನ ಶರಹತಿಗೆ ಮು
ಮ್ಮುಳಿತವಾದುದುದು ಹತ್ತು ಸಾವಿರ ವಿಗಡ ಪಾಯದಳ
ಕಳಚಿ ಕೆಡೆದವು ನೂರು ರಥ ವೆ
ಗ್ಗಳೆಯತನವರಿರಾಯರಲಿ ಹೆ
ಕ್ಕಳಿಸೆ ಕಳವಳಿಸಿದನು ಕೌರವರಾಯ ಖಾತಿಯಲಿ ೫೧

ಜೋಡಿಸಿದ ಸಾವಿರ ಗಜಂಗಳ
ನೀಡಿರಿದರಂಕುಶದಿ ನೆತ್ತಿಯ
ತೋಡಿಬಿಟ್ಟರು ನೃಪನ ಮತದಲಿ ದೊರೆಯ ಸಮ್ಮುಖಕೆ
ಜೋಡಿಸಿದ ಬರಿಕಯ್ಯ ಪರಿಘದ
ಲೌಡಿಗಳ ಪಟ್ಟೆಯದಲೊಬ್ಬುಳಿ
ಗೂಡಿ ತೂಳಿದವಾನೆಗಳು ಯಮಸುತನ ಪಡಿಮುಖಕೆ ೫೨

ಎಲೆಲೆ ಭೂಪತಿ ಸಿಕ್ಕಿದನು ಗಜ
ಬಲದ ಭಾರಣೆ ಬಲುಹೆನುತ ಬಲ
ಕಳವಳಿಸೆ ಕೇಳಿದನಲೈ ಕಲಿಭೀಮನಾಚೆಯಲಿ
ಪ್ರಳಯ ದಿವಸದಿ ಶಿಖಿಯ ಡಾವರ
ದೊಳಗೆ ಶ್ರವಮಾಡಿದನೆನಲು ಮಿಗೆ
ಮೊಳಗಿ ಮಂಡಿಯನಿಕ್ಕಿ ಮಲೆತನು ಸಿಂಹನಾದದಲಿ ೫೩

ಚೆಲ್ಲಿದವು ಗಜಯೂಥವಪ್ರತಿ
ಮಲ್ಲ ಭೀಮನಗದೆಯ ಘಾತಿಯ
ಘಲ್ಲಣೆಗೆ ಕಂಠಣಿಸಿದವು ಟೆಂಠಣಿಸುವಾನೆಗಳು
ಸೆಲ್ಲೆಹಿದ ಮಳೆಗರೆದು ಭೀಮನ
ಘಲ್ಲಿಸಿದರಾರೋಹಕರು ಬಲು
ಬಿಲ್ಲ ಜಂತ್ರದ ನಾಳಿಯಿಂಬಿನ ಸರಳ ಸಾರದಲಿ ೫೪

ಜನಪ ಕೇಳೈ ಜಡಿವ ತುಂತು
ರ್ವನಿಗಳನು ಬಿರುಗಾಳಿ ಮೊಗೆವವೊ
ಲನಿತು ಸೆಲ್ಲೆಹ ಶರವಳೆಯ ಗದೆಯಿಂದ ಘಟ್ಟಿಸಿದ
ಜಿನುಗುವಳೆಯಲಿ ಪರ್ವತದ ಶಿಲೆ
ನೆನೆವುದೇ ಗಜಸೇನೆ ಕದಳೀ
ವನವಲೇ ಕಲಿಭೀಮದಿಗ್ಗಜ ಗಾಢ ಪದಹತಿಗೆ ೫೫

ಅವನಿಪನ ಹಿಂದಿಕ್ಕಿ ಗಜಯೂ
ಥವ ವಿಭಾಡಿಸಿ ಹಿಂಡ ಕೆದರಿದ
ನವಗಡಿಸಿದನು ಹಾರಲೂದಿದನೊದೆದು ಬೊಬ್ಬಿರಿದ
ತಿವಿದನಣಸಿನಲೂರಿ ಮೊನೆಯಲಿ
ಸವಡಿಯಾನೆಯನೆತ್ತಿದನು ಬಲ
ಬವರಿಯೆಡಬವರಿಯಲಿ ತಡೆಗಾಲ್ವೊಯ್ದನಾ ಭೀಮ ೫೬

ಒರಲಿ ತಿವಿದನು ಕರಿಯ ಬರಿಯೆಲು
ಮುರಿಯಲೊದೆದನು ಸದೆದು ದಾಡೆಯ
ತಿರುಹಿ ಕಿತ್ತನು ಬಿಕ್ಕಿದನು ಬಿದುವಿನಲಿ ಬಲುಗದೆಯ
ಜರೆದನಾರೋಹಕರ ತಲೆಗಳ
ತರಿದು ಬಿಸುಟನು ಗಜಘಟೆಯ ಥ
ಟ್ಟೊರಗಿದವು ದಡಿಸಹಿತ ನವರುಧಿರಾಂಬುಪೂರದಲಿ ೫೭

ಗುಳವನುಗಿದಾರೋಹಕರ ಮುಂ
ದಲೆಯ ಸೆಳೆದೊಡಮೆಟ್ಟಿದನು ಮಂ
ಡಳಿಸಿದೊಡ್ಡಿನ ಮೇಲೆ (ತಾ ಹರಿ)ಹಾಯ್ದನುರವಣಿಸಿ
ಕಳಚಿದನು ದಾಡೆಗಳ ಬರಿಕೈ
ಗಳನು ತುಂಡಿಸಿ ವಾಲಧಿಯ ಬರ
ಸೆಳೆದು ಕೊಡಹಿದನಾನೆಗಳ ನಾನಾವಿಧಾನದಲಿ ೫೮

ಕೋಡ ಕಿತ್ತನು ನೂರು ಗಜವ ವಿ
ಭಾಡಿಸಿದನಿನ್ನೂರ ನಡಹಾ
ಯ್ದೋಡಿದವು ನೂರಾನೆ ಭೀಮನ ಗದೆಯ ಗಾಳಿಯಲಿ
ಜೋಡಿಗೆಡೆದವು ನೂರು ಮಗ್ಗುಲ
ನೀಡಿದವು ನಾನೂರು ಪುನರಪಿ
ಕೇಡುಗಂಡವು ನೂರು ಭೀಮನ ಗದೆಯ ಘಾಯದಲಿ ೫೯

ಧರಣಿಪತಿ ಕೇಳ್ ಭೀಮಸೇನನ
ಧರಧುರದ ದೆಖ್ಖಾಳದಲಿ ನ
ಮ್ಮರಸ ನಿಂದನು ಕಾದಿದನು ನೂರಾನೆಯಲಿ ಮಲೆತು
ಸರಳ ಸಾರದಲನಿಲಜನ ರಥ
ತುರಗವನು ಸಾರಥಿಯನಾತನ
ಭರವಸವ ನಿಲಿಸಿದನು ನಿಮಿಷಾರ್ಧದಲಿ ಕುರುರಾಯ ೬೦

ಒಡೆದು ರಥವನು ಧರೆಗೆ ಧುಮ್ಮಿ
ಕ್ಕಿದನು ಕೌರವರಾಯ ಮೈದೋ
ರಿದೆಯಲಾ ಕಲಿಯಾಗು ಪಾಲಿಸದಿರು ಪಲಾಯನವ
ರದನಿಗಳ ರೌದ್ರಾಹವಕೆ ಕೋ
ವಿದನಲೇ ಕೊಳ್ಳೆನುತ ಕರಿಗಳ
ಕೆದರಿದನು ಕಲಿಜೋದರಂಬಿನ ಸರಿಯ ಸೈರಿಸುತ ೬೧

ಏನ ಹೇಳುವೆನವನಿಪನ ಮದ
ದಾನೆ ಮುರಿದವು ಭೀಮಸೇನನೊ
ವೈನತೇಯನೊ ಕರಿಗಳೋ ಕಾಳೋರಗನ ದಳವೊ
ಮಾನನಿಧಿ ಮುರಿವಡೆದನೈ ವೈ
ರಾನುಬಂಧದ ಬೇಗುದಿಯ ದು
ಮ್ಮಾನ ದಳವೇರಿದುದುದು ಹೇರಿತು ಭೀತಿ ಭೂಪತಿಗೆ ೬೨

ನೂರು ಗಜವಕ್ಕಾಡಲವನಿಪ
ನೇರಿದನು ವಾರುವನನೆಡದಲಿ
ಜಾರಿದನು ಸೂಠಿಯಲಿ ದುವ್ವಾಳಿಸಿ ತುರಂಗಮವ
ಅರು ಸಾವಿರ ಕುದುರೆ ರಥವೈ
ನೂರು ಗಜಘಟೆ ನೂರು ಮೂವ
ತ್ತಾರು ಸಾವಿರ ಪಾಯದಳದಲಿ ಬಂದನಾ ಶಕುನಿ ೬೩

ಶಕುನಿ ಕಂಡನು ಕೌರವೇಂದ್ರನ
ನಕಟನೀನೇಕಾಂಗದಲಿ ಹೋ
ರಿಕೆಗೆ ಬಂದೈ ಗರುವ ಗುರುಸುತ ಭೋಜ ಗೌತಮರು
ಸಕಲಬಲ ನುಗ್ಗಾಯ್ತೆ ಸಮಸ
ಪ್ತಕರು ನಿನ್ನಯ ಮೂಲಬಲವಿದೆ
ವಿಕಳನಾಗದಿರೆಂದು ಸಂತೈಸಿದನು ಕುರುಪತಿಯ ೬೪

ದಳಪತಿಯು ಪವಡಿಸಿದನರಸನ
ಸುಳಿವು ಸಿಲುಕಿತು ಭಯದ ಬಲೆಯಲಿ
ಮೊಳಗುತದೆ ನಿಸ್ಸಾಳ ಸುಮ್ಮಾನದಲಿ ರಿಪುಬಲದ
ಉಳಿದರೋ ಗುರುಸೂನು ಕೃಪರೇ
ನಳಿದರೋ ಪಾಳೆಯದೊಳಗೆ ರಥ
ವಿಳಿದರೋ ತಾನೇನೆನುತ ಚಿಂತಿಸಿತು ಕುರುಸೇನೆ ೬೫

ಕೂಡೆ ಹರಿಹಂಚಾದ ಸುಭಟರು
ಕೂಡಿಕೊಂಡುದು ನೊಂದು ನಸಿದವ
ರೋಡಿದವರೊಗ್ಗಾಯ್ತು ಕುರುರಾಯನ ಪರೋಕ್ಷದಲಿ
ನೋಡಲಹುದಾಹವದೊಳಗೆ ಕೈ
ಮಾಡಿಸಿದ ವಸುಧಾಂಗನೆಗೆ ಬೆಲೆ
ಮಾಡುವುದು ಮತವೆಂದು ಕವಿದುದುದು ಮತ್ತೆ ಕುರುಸೇನೆ ೬೬

ಬಿಡದಲಾ ಕುರುಸೈನ್ಯ ಹಕ್ಕಲು
ಗಡಿಯ ಭಟರೊಗ್ಗಾಯ್ತಲಾ ದೊರೆ
ಮಡಿದನೋ ಬಳಲಿದನೊ ಮಿಗೆ ಪೂರಾಯಘಾಯದಲಿ
ಪಡೆಯ ಜಂಜಡ ನಿಲಲಿ ಕೌರವ
ರೊಡೆಯನಾವೆಡೆ ನೋಡು ನೋಡೆಂ
ದೊಡನೊಡನೆ ಪವಮಾನಸುತನರಸಿದನು ಕುರುಪತಿಯ ೬೭

ಅರಸ ಕೇಳೈ ಕೌರವೇಂದ್ರನ
ನರಸುತರ್ಜುನ ಭೀಮ ಸಾತ್ಯಕಿ
ಧರಣಿಪತಿ ಸಹದೇವ ನಕುಲರು ಕೂಡೆ ಕಳನೊಳಗೆ
ತಿರುಗಿದರು ಬಳಿಕಿತ್ತಲೀ ಮೋ
ಹರವ ಧೃಷ್ಟದ್ಯುಮ್ನ ಸೃಂಜಯ
ರೊರಸಿದರು ನಿಶ್ಯೇಷ ಕೌರವನೃಪಚತುರ್ಬಲವ ೬೮

ಧರಣಿಪತಿ ಕೇಳಿನ್ನುಮೇಲಣ
ಧುರದ ವೃತ್ತಾಂತವನು ಕುರುಪತಿ
ಯಿರವನರಿಯೆನು ಕಂಡುಬಹೆನೇ ನೇಮವೇ ತನಗೆ
ಗುರುಸುತನು ಕೃಪ ಭೋಜ ಶಕುನಿಗ
ಳರಸನನು ಪರಿವೇಷ್ಟಿಸಿದರದ
ನರಿದು ಬಹೆನೆನೆ ಕಳುಹಿದನು ಧೃತರಾಷ್ಟ್ರ ಸಂಜಯನ ೬೯

(ಸಂಗ್ರಹ: ಸಂತೋಷ್ ಮತ್ತು ರಶ್ಮಿ)

Tuesday, January 26, 2010

ಭೀಷ್ಮಪರ್ವ: ೦೧. ಮೊದಲನೆಯ ಸಂಧಿ

ಸೂ. ವೈರಿ ಭಟಕುಲ ವಿಲಯ ರುದ್ರನು
ದಾರಿತೇಜೋಭದ್ರನಾ ಭಾ
ಗೀರಥೀಸುತ ಧರಿಸಿದನು ಕುರುಸೇನೆಯೊಡೆತನವ

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವರಾಯನಲ್ಲಿಗೆ
ಕಾಳೆಗದ ಕಾತರಿಗರಿವರಟ್ಟಿದರು ಭಟ್ಟರನು
ಕೇಳಿದನು ಕುರುಭೂಮಿಯಲಿ ರಿಪು
ಜಾಲದುದಯವನಂದು ಕುರುಕುಲ
ಮೌಳಿ ಕರೆಸಿದನಾಪ್ತರನು ಪರಿಮಿತಕೆ ಮಂತ್ರಿಗಳ ೧

ರವಿಜ ಗುರುಸುತ ಶಲ್ಯ ಕಲಶೋ
ದ್ಭವರು ಸೌಬಲರಾದಿಯಾದವ
ರವನಿಪಾಲನ ಕಂಡರಂದೇಕಾಂತ ಭವನದಲಿ
ಅವನಿಪತಿ ಹದನೇನು ರಿಪುಪಾಂ
ಡವರ ಬೀಡಿನ ಗುಪ್ತದನುಮಾ
ನವನು ಚಿತ್ತಯಿಸಿದರೆ ಬೆಸಸುವುದೆನಲು ನೃಪ ನುಡಿದ ೨

ಸಂದಣಿಸಿ ಕುರುಭೂಮಿಯಲಿ ತಾ
ಮಂದಿ ಬಿಟ್ಟುದು ನಾಡ ಗಾವಳಿ
ಬಂದುದಲ್ಲಿಗೆ ಕಳುಹಿದರು ದೂತರನು ದುರ್ಜನರು
ನಂದಗೋಪನ ಮಗನ ಕೊಂಡೆಯ
ದಿಂದ ಕಲಿಯೇರಿದರು ಕೃಪಣರ
ಕೊಂದಡಹುದಪಕೀರ್ತಿಯಿದಕಿನ್ನೇನು ಹದನೆಂದ ೩

ಭೂರಿ ನೆರೆದುದು ನಾಡ ಗಾವಳಿ
ಭಾರ ದೃಷ್ಟದ್ಯುಮ್ನನದು ಗಡ
ಚಾರದೇವನ ಜೋಕೆ ಮಂದಿಯ ಕಾಹು ಕಟ್ಟ ಗಡ
ಧಾರುಣಿಯ ಲಂಪಟರು ಕದನವ
ಹಾರಿ ಬಂದರು ಗಡ ಕೃತಾಂತನ
ಭೂರಿ ಭೂತದ ಧಾತುವಾಯಿತು ಲೇಸು ಲೇಸೆಂದ ೪

ನಾಡ ಮನ್ನೆಯ ಗಿನ್ನೆಯರುಗಳ
ಕೂಡಿಕೊಂಡೆಮ್ಮೊಡನೆ ಕಲಹವ
ಬೇಡಿ ಮಹಿಪಾಲನೆಯ ಪಟ್ಟಕೆ ನೊಸಲನೊಡ್ಡುವರು
ನೋಡಿರೈ ನಿರುಪಮವಲಾ ಕಾ
ದಾಡಿಗಳ ಕಲಿತನವನೆನೆ ಮಾ
ತಾಡಿದನು ಕಲಿಕರ್ಣನಾತನ ಮನದ ಮೈಸಿರಿಯ ೫

ನೆರೆದ ದೊದ್ದೆಯನೊರಸಬಬಹುದೇ
ನರಿದು ಜೀಯ ವಿರೋಧಿರಾಯರ
ನೆರವಿ ತಾನೇಗುವುದು ಗಹನವೆ ನಿನ್ನ ವೀರರಿಗೆ
ಕರಿಗಳಿಗೆ ಪ್ರತ್ಯೇಕವಿವೆ ಕೇ
ಸರಿಗಳೆಮ್ಮನು ಕಳುಹಿ ನಿಮ್ಮಡಿ
ಪರಿಮಿತಕೆ ಬರಲಾವ ಭಾರವಿದೆಂದನಾ ಕರ್ಣ ೬

ಕಲಕುವೆನು ಪಾಂಡವರ ಸೇನಾ
ಜಲಧಿಯನು ತೇರಿನಲಿ ತಲೆಗಳ
ಕಳುಹುವೆನು ಕದನದಲಿ ಕೈದೋರಿದ ಕುಠಾರಕರ
ಹೊಳಲ ಹೊರಶೂಲದಲಿ ರಿಪುಗಳ
ಸೆಳಸುವೆನು ತಾ ವೀಳೆಯವನೆಂ
ದಲಘುಭುಜಬಲ ಕರ್ಣ ನುಡಿದನು ಕೌರವೇಂದ್ರಂಗೆ ೭

ಕುಲಿಶ ಪರಿಯಂತೇಕೆ ನೇಗಿಲ
ಬಳಿಯ ಹುಲುವೆಟ್ಟಕೆ ವಿರೋಧಿಗ
ಳಳಿಬಲಕೆ ಕಲಿಕರ್ಣ ನೀ ಪರಿಯಂತ ಸಂಗರವೆ
ಹೊಳಲ ಪರಿವಾರಕ್ಕೆ ಸಾರಿಸು
ಕೆಳಬಲದ ರಾಯರಿಗೆ ದೂತರ
ಕಳುಹಿ ನೆರಹಿಸು ಕಾದಿಸೆಂದನು ಕೌರವರ ರಾಯ ೮

ಮೂಗಿನಲಿ ಬೆರಳಿಟ್ಟು ಮಕುಟವ
ತೂಗಿದನು ಚತುರಂಗಬಲವನು
ಬೇಗದಲಿ ಕೊಳುಗುಳಕೆ ಕಳುಹಿಸು ಗೆಲಿಸು ಕಾಳೆಗವ
ತಾಗಿ ಬಾಗದ ಮರುಳುತನದು
ದ್ಯೋಗವಿದಕೇನೆಂಬೆನಕಟಕಟ
ಟೀಗಲದ್ದುದು ಕೌರವಾನ್ವಯವೆಂದನಾ ದ್ರೋಣ ೯

ಹಿಂದೆ ಗಳುಹುವನಿವನು ಬಾಯಿಗೆ
ಬಂದ ಪರಿಯಲಿ ಪಾಂಡುತನಯರ
ಕೊಂದನಾಗಳೆ ಕರ್ಣನಿನ್ನಾರೊಡನೆ ಸಂಗ್ರಾಮ
ಹಿಂದೆ ಹಮ್ಮಿದ ಸಮರದೊಳು ನಡೆ
ತಂದು ಖೇಚರನಡಸಿ ಕಟ್ಟಿದ
ಡಂದು ನಿನ್ನನು ಬಿಡಿಸಿದವನರ್ಜುನನೊ ರವಿಸುತನೊ ೧೦

ಸಾಹಸಿಗಳಿಲ್ಲಿಲ್ಲ ಹರಿ ತುರು
ಗಾಹಿ ಪಾಂಡವರೈವರವಡವಿಯ
ಮೇಹುಗಾರರು ಬಂದ ಭೂಭುಜರೆಲ್ಲ ತಾ ನೆರವಿ
ಅಹವಕೆ ನಿನ್ನೂರ ತಳವರ
ಗಾಹಿನವರನು ಕಳುಹುವುದು ಸಂ
ದೇಹವೇ ನೀನಿಲ್ಲಿ ಸುಖದಲಿ ರಾಜ್ಯ ಮಾಡೆಂದ ೧೧

ಎಲೆ ಸುಯೋಧನ ಕಾಳುಗೆಡೆದರೆ
ಫಲವನಿದರಲಿ ಕಾಣೆನಹಿರತರ
ಬಲದ ಭಾರಣೆ ಬಿಗುಹು ಭೀಮಾರ್ಜುನರು ಬಲ್ಲಿದರು
ನಳಿನನಾಭನ ಮಂತ್ರಶಕ್ತಿಯ
ಬಲುಹು ನೀವ್ ನಿರ್ದೈವರವರ
ಗ್ಗಳ ಸದೈವರು ಕೆಟ್ಟಿರಿನ್ನೇನೆಂದನಾ ದ್ರೋಣ ೧೨

ಅಸುರರಿಪುವಿನ ಮಾತ ನೀ ಮ
ನ್ನಿಸದೆ ಕೌರವಕುಲವನದ್ದಿದೆ
ನುಸಿಗಳಿವದಿರು ಮುನಿದು ಪಾರ್ಥನನೇನ ಮಾಡುವರು
ಅಸುರರಲಿ ಸುರರಲಿ ಭುಜಂಗ
ಪ್ರಸರದಲಿ ಭೀಮಾರ್ಜುನರ ಸೈ
ರಿಸುವರುಂಟೇ ಕೆಟ್ಟಿರಿನ್ನೇನೆಂದನಾ ದ್ರೋಣ ೧೩

ಅವರಿಗಸುರಾತಂಕ ಸಹಾಯನು
ನಿವಗೆ ಗಂಗಾಸುತನ ಬಲವಾ
ಹವವನೀತನ ನೇಮದಲಿ ನೆಗಳುವದು ನೀತಿಯಿದು
ಅವರಿವರ ಮಾತಿನಲಿ ಫಲವಿ
ಲ್ಲವನಿಪತಿ ಕೇಳೆನಲು ಕಲಶೋ
ದ್ಭವನ ಮತದಲಿ ಬಳಿಕ ಮಣಿದನು ಕೌರವರ ರಾಯ ೧೪

ಮತವಹುದು ತಪ್ಪಲ್ಲ ಗಂಗಾ
ಸುತನ ತಿಳುಹುವ ವೀರಪಟ್ಟವ
ನತುಳ ಬಲ ಭೀಷ್ಮಂಗೆ ಕಟ್ಟುವೆನೆನುತ ಕುರುರಾಯ
ಮತದ ನಿಶ್ಚಯದಿಂದ ಗುರು ಗುರು
ಸುತನ ಕಳುಹಿದನಿತ್ತಲಬುಜ
ಪ್ರತತಿಯುತ್ಸಹವಡಗೆ ಪಡುವಣ ಕಡಲೊಳಿನನಿಳಿದ ೧೫

ವಿನುತ ಸಂಧ್ಯಾದೇವಿಗಭಿವಂ
ದನ ಜಪಾದಿ ಸಮಸ್ತ ದೇವಾ
ರ್ಚನೆಯ ಮಾಡಿಯೆ ರವಿತನೂಜನ ಕರಸಿ ಪಂತಿಯಲಿ
ಜನಪನಾರೋಗಿಸಿದನಾಪ್ತಾ
ವನಿಪ ಸಚಿವರು ಸಹಿತ ಭೀಷ್ಮನ
ಮನೆಗೆ ಬಂದನು ಕೌರವೇಶ್ವರನಂದಿನಿರುಳಿನಲಿ ೧೬

ಮುಂದೆ ಹರಿದರು ಕೈಯ ಕಂಬಿಯ
ಸಂದಣಿಯ ಪಡೆವಳರು ಗಂಗಾ
ನಂದನಂಗೀ ಹದನನರುಹಲು ಬಂದನಿದಿರಾಗಿ
ಕಂದುಮೋರೆಯ ರಾಯನನು ತೆಗೆ
ದಂದಣದೊಳಾಲಂಗಿಸುತ ನಲ
ವಿಂದ ಮನ್ನಿಸಿ ತಂದನರಮನೆಗುಚಿತವಚನದಲಿ ೧೭

ಏನಿರುಳು ನೀ ಬಂದ ಹದನೆಲೆ
ಮಾನನಿಧಿ ಬೇಕಾದರೆಮ್ಮನು
ನೀನು ಕರೆಸುವುದರುಪುವುದು ನಿಜಕಾರ್ಯ ಸಂಗತಿಯ
ಏನ ಹೇಳುವೆ ನಗೆಯನನುಸಂ
ಧಾನದಲಿ ಪಾಂಡವರು ಕುರುಭೂ
ಮೀನಿವಾಸಕೆ ಬಂದು ಬಿಟ್ಟರು ಕಿರಿದು ದಳಸಹಿತ ೧೮

ಹರಿಯ ಹಿಸುಣಿಕೆಯವರ ಚಿತ್ತವ
ಬೆರಸಿ ವೈರವ ಬೆಳಸಿ ಬಂದರು
ಧರೆಯ ಭಾಗವ ಬೇಡಿ ಕದನವ ಮಸೆದರೆಮ್ಮೊಡನೆ
ಹರನ ಸಮದಂಡಿಗಳು ನೀವೆಮ
ಗಿರಲು ಜಯಿಸುವ ವೀರನಾವನು
ಮರುಳುತನವನು ಧರ್ಮಪುತ್ರನೊಳರಿಯಲಾಯ್ತೆಂದ ೧೯

ಬಂದರೇ ಪಾಂಡವರು ಸುದ್ದಿಯ
ತಂದರೇ ನಿನ್ನವರು ನಿನಗೇ
ನೆಂದು ಭಾಷೆಯ ಕೊಟ್ಟರೀ ಕರ್ಣಾದಿ ನಾಯಕರು
ಇಂದು ಸಂತತಿ ಗುರುವರಲ್ಲಾ
ಬಂದರೇನಪರಾಧವೇ ಇ
ನ್ನೆಂದು ಪರಿಯಂತವರು ನವೆವರು ಎಂದನಾ ಭೀಷ್ಮ ೨೦

ಜಗದ ಗುರುವಲ್ಲಾ ಮುರಾಂತಕ
ನಗಣಿತೋಪಮಮಹಿಮನಲ್ಲಾ
ಸಗುಣ ನಿರ್ಗುಣನಾ ಮಹಾತ್ಮನನಂತ ರೂಪವನು
ವಿಗಡಿಸಲು ಜಯವಹುದೆ ಜಾಣರ
ಬಗೆಗೆ ಬಹುದೇ ನಿನ್ನ ಮತವೆಲೆ
ಮಗನೆ ಮರುಳಾದೈ ಮದಾಂಧರ ಮಾತುಗಳ ಕೇಳಿ ೨೧

ಮಿಕ್ಕ ಮಾತೇಕಿನ್ನು ನೀ ಹಿಂ
ದಿಕ್ಕಿ ಕೊಂಬರೆ ಕೊಲುವನಾವನು
ಮಕ್ಕಳಾವೆನಬೇಡ ಬಲ್ಲೆವು ನಿನ್ನ ವಿಕ್ರಮವ
ಹೊಕ್ಕು ಹಗೆಗಳ ಹೊಯ್ದ ದಿಗುಬಲಿ
ಯಿಕ್ಕಿ ನನ್ನಯ ಹರುಷಜಲಧಿಯ
ನುಕ್ಕಿಸಲು ಬೇಕೆನಲು ಕೇಳಿದು ಭೀಷ್ಮನಿಂತೆಂದ ೨೨

ದೈವಬಲವವರಲ್ಲಿ ನೀವೇ
ದೈವಹೀನರು ಧರ್ಮಪರರವ
ರೈವರೂ ಸತ್ಪುರುಷಶೀಲರು ನೀವಧಾರ್ಮಿಕರು
ಮುಯ್ವನಾನುವುದವರ್ಗೆ ಭುವನವು
ಬೈವುದೈ ನಿಮ್ಮಿನಿಬರನು ನಿಮ
ಗೈವಡಿಯ ಸಹಸಿಗಳವರು ದುರ್ಬಲರು ನೀವೆಂದ ೨೩

ದಯವನತ್ತಲು ತಿದ್ದಿ ನಮ್ಮನು
ಭಯಮಹಾಬ್ದಿಯೊಳದ್ದಿ ಸಮರದ
ಜಯವನವರಿಗೆ ಮಾಡಿ ನಮ್ಮಭಿಮತವ ನೀಗಾಡಿ
ನಯವ ನೀವೊಡ್ಡುವರೆ ನಿಮ್ಮನು
ನಿಯಮಿಸುವರಾರುಂಟು ಭಾಗ್ಯೋ
ದಯವಿಹೀನನು ತಾನೆನುತ ಕುರುರಾಯ ಬಿಸುಸುಯ್ದ ೨೪

ಉಚಿತವನು ನಾನರಿಯೆ ವಾರ್ಧಕ
ರಚಿತ ನಿಜವನು ನುಡಿಯೆ ನಿನಗವು
ರುಚಿಸವೇ ಮಾಣಲಿಯದಂತಿರಲೀ ಕುಮಂತ್ರಿಗಳ
ವಚನವತಿಗಾಢದಲಿ ನಟ್ಟುದು
ಸಚಿವ ನಯವಿನ್ನೇಕೆ ಸೇನಾ
ನಿಚಯಕೆಮ್ಮನು ಮೊದಲಿಗನ ಮಾಡರಸ ಹೋಗೆಂದ ೨೫

ಖಳನ ಕಳುಹಿದನತಿಬಳನು ತ
ನ್ನೊಳಗೆ ನೆನೆದನು ಪಾಂಡುನಂದನ
ರುಳಿವು ತನ್ನದು ಮೀರಿ ಕಾದುವಡಸುರರಿಪುವಿಹನು
ಅಳುಕಿ ಕಾದುವಡಿತ್ತ ಹಾವಿನ
ಹಳವಿಗೆಯ ಕಡಮೂರ್ಖನಿಗೆ ಬೆಂ
ಬಲವ ಕಾಣೆನು ತನಗೆ ಹದನೇನೆನುತ ಚಿಂತಿಸುತ ೨೬

ಆದಡೇನಿದಿರಾದ ರಿಪುಬಲ
ವಾದುದನು ಸಂಹರಿಸಿ ಮಕ್ಕಳ
ಕಾದು ಬಿಸುಡುವೆನೊಡಲನಾ ಸಂಗ್ರಾಮಭೂಮಿಯಲಿ
ಆದುದಾಗಲಿ ಬಳಿಕ ಮಾಡುವ
ಭೇದ ಬೇರಿಲ್ಲೆನುತ ಹೃತ್ಸಂ
ವಾದವನು ಬೀಳ್ಕೊಟ್ಟು ಗಂಗಾಸೂನು ಪವಡಿಸಿದ ೨೭

ಮಗನೊಡನೆ ಮೂದಲಿಸಿ ಭೀಷ್ಮನು
ಹೊಗುವ ಗಡ ಪರಸೇನೆಯನು ಕಾ
ಳೆಗವ ನೋಡುವೆನೆಂಬವೊಲು ತಲೆದೋರಿದನು ದಿನಪ
ನಗೆಯುಡಗಿ ನಾಚಿದವು ಕುಮುದಾ
ಳಿಗಳು ಮುಂಗಾಣಿಕೆಯ ಹರುಷದೊ
ಳಗಿದು ವಿರಹವ ಬೀಳುಕೊಟ್ಟವು ಜಕ್ಕವಕ್ಕಿಗಳು ೨೮

ಅರಸನುಪ್ಪವಡಿಸಿದನವನೀ
ಶ್ವರವಿಹಿತಸತ್ಕರ್ಮವನು ವಿ
ಸ್ತರಿಸಿದನು ಚಾವಡಿಗೆ ಬಂದನು ಹರುಷದುಬ್ಬಿನಲಿ
ಚರರನಟ್ಟಿದನಖಿಳಧರಣೀ
ಶ್ವರ ನಿಕಾಯಕೆ ಸಕಲ ಸುಭಟರ
ಬರಿಸಿದನು ತರಿಸಿದನು ಪಟ್ಟಕೆ ಬೇಹ ವಸ್ತುಗಳ ೨೯

ಗುರುತನುಜ ರವಿಸೂನು ಮಾದ್ರೇ
ಶ್ವರ ಕೃಪದ್ರೋಣಾದಿಗಳು ಬಂ
ದರಮನೆಗೆ ಹೊಕ್ಕರು ನದೀನಂದನನ ಬಳಿವಿಡಿದು
ನೆರೆದರವನೀ ನಿರ್ಜರರು ಕೇ
ಸರಿಯ ಪೀಠವ ರಚಿಸಿ ವೈದಿಕ
ಪರಿಣಿತರ ಮತದಿಂದ ವಿಸ್ತರಿಸಿದರು ಮಂಗಳವ ೩೦

ಕಮಲಜನ ಹೋಲುವೆಯ ಧಾರಿಣಿ
ಯಮರಕರದಲಿ ನಿಗಮ ಪೂತೋ
ತ್ತಮ ಸುವಾರಿಗಳಿಳಿದವಜಸನ್ನಿಭನ ಮಸ್ತಕಕೆ
ಕಮಲಜನ ಕರದಿಂದ ಗಂಗಾ
ವಿಮಲನದಿಯಿಳಿತಂದು ಸಾರ್ದುದೊ
ಹಿಮಗಿರಿಯನೆಂಬಂತಿರಿಳಿದುದು ಪಟ್ಟದಭಿಷೇಕ ೩೧

ಆರತಿಯನೆತ್ತಿದರು ತಂದು
ಪ್ಪಾರತಿಯ ಸೂಸಿದರು ನೃಪಪರಿ
ವಾರವೆಲ್ಲವು ಬಂದು ಕಂಡುದು ಕಾಣಿಕೆಯ ನೀಡಿ
ಕೌರವೇಂದ್ರನ ಮೋಹರದ ಗುರು
ಭಾರ ಭೀಷ್ಮಂಗಾಯ್ತು ಸಮರದ
ವೀರಪಟ್ಟವನಾಂತನಾಚಾರ್ಯಾದಿಗಳು ನಲಿಯೆ ೩೨

ಈ ನದೀನಂದನನ ಬಲದಲಿ
ಸೇನೆ ಶಿವಗಂಜುವುದೇ ಕುಂತೀ
ಸೂನುಗಳಿಗಾರಣ್ಯಜಪವಿನ್ನವರಿಗಿಳಿಯೇಕೆ
ಮಾನನಿಧಿ ಭೀಷ್ಮಂಗೆ ಸಮರ ಸ
ಮಾನಭಟನಿನ್ನಾವನೆಂದು ಮ
ನೋನುರಾಗದ ಮೇಲೆ ಕೌರವರಾಯ ಬಣ್ಣಿಸಿದ ೩೩

ಎಲೆ ಮರುಳೆ ಭೂಪಾಲ ಕೌರವ
ಕುಲಪಿತಾಮಹನಹನು ಧರ್ಮಂ
ಗಳಲಿ ಪರಿಣಿತನಹನು ಕಾಳಿಗವೆತ್ತಲಿವರೆತ್ತ
ಗಳದ ಗರಳನ ದೊರೆಯ ಭಟಮಂ
ಡಲಿಯೊಳಗೆ ಮನ್ನಣೆಯೆ ಹೇಳೈ
ಕಳಿದ ಹರೆಯಂಗೆಂದು ಗಹಗಹಿಸಿದನು ಕಲಿಕರ್ಣ ೩೪

ತೊಗಲು ಸಡಿಲಿದ ಗಲ್ಲ ಬತ್ತಿದ
ಹೆಗಲು ನರುಕಿದ ನರೆತ ಮೀಸೆಯ
ಜಗುಳ್ದ ಹಲುಗಳ ಹಾಯಿದೆಲುಗಳ ನೆಗ್ಗಿದವಯವಯದ
ಅಗಿಯಲಲುಗುವ ತಲೆಯ ಮುಪ್ಪಿನ
ಮುಗುದನೀತನು ಕಾದಹೇಳಿದು
ನಗೆಯ ಸುರಿದೈ ರಾಯ ಕಟಕದೊಳೆಂದನಾ ಕರ್ಣ ೩೫

ಇಲ್ಲಿ ಭೀಷ್ಮನು ರಾಘವನ ಬಲ
ದಲ್ಲಿ ಜಾಂಬವನುಭಯವೀರರು
ಬಲ್ಲಿದರು ಬಳಿಕುಳಿದ ಸುಭಟರ ಶೌರ್ಯವೊಪ್ಪುವುದೆ
ನಿಲ್ಲು ನೀ ಕೊಲಲೆಳಸುವರೆ ಹಗೆ
ಯಲ್ಲಿಗೊಪ್ಪಿಸಿ ಕೊಲಿಸಲೇತಕೆ
ಬಿಲ್ಲಿನಲಿ ಬಡಿದಡ್ಡಗೆಡಹುವೆನೆಂದನಾ ಕರ್ಣ ೩೬

ಹಾ ನುಡಿಯದಿರು ನಿನ್ನ ಹವಣಿನ
ಮಾನಿಸನೆ ಸುರಸಿಂಧುಜನು ತಾ
ನೀನು ಮಿಗೆ ಮೇಲರಿಯೆ ಜವ್ವನದುಬ್ಬುಗೊಬ್ಬಿನಲಿ
ನೀನು ಸರಿಯೇ ರಾಮಕಟಕದ
ಹಾನಿಯನು ತಲೆಗಾಯ್ದ ಚಾಂಬವ
ಗೇನು ಕೊರತೆಯೆನುತ್ತ ಜರೆದನು ಗರುಡಿಯಾಚಾರ್ಯ ೩೭

ರಣದೊಳೊಡ್ಡಿದರಾತಿಗಳನೀ
ಹಣೆಯ ಪಟ್ಟದ ವೀರ ಜಯಿಸಲು
ಹಣವಿಗಾನೋಲೈಸೆ ಮಾಡುವೆನಡವಿಯಲಿ ತಪವ
ರಣದೊಳಿವನಡಗೆಡೆದನಾದರೆ
ಮಣಿಯದಿರಿದಪೆನನ್ನೆಬರ ಮಾ
ರ್ಗಣೆಯನಾಹವದೊಳಗೆ ಸಂಧಿಸೆನೆಂದನಾ ಕರ್ಣ ೩೮

ಗಳಹಧಿರು ರಾಧೇಯ ನಿನ್ನಯ
ಕುಲವ ನೋಡದೆ ಮೇರೆದಪ್ಪುವ
ಸಲುಗೆಯಿದಲೇ ಸ್ವಾಮಿಸಂಪತ್ತಿನ ಸಗಾಢತನ
ಕಲಿಗಳುಳಿದಂತೆನ್ನ ಸರಿಸಕೆ
ನಿಲುವನಾವನು ದೇವದಾನವ
ರೊಳಗೆ ನಿನ್ನೊಡನೊರಲಿ ಫಲವೇನೆಂದನಾ ಭೀಷ್ಮ ೩೯

ಕೇಳು ನೃಪ ಕೇಳೈ ಜಯದ್ರಥ
ಕೇಳು ಗುರುಸುತ ಶಲ್ಯ ಕುಂಭಜ
ಕೇಳು ದುಶ್ಯಾಸನ ವಿಕರ್ಣ ಸುಲೋಚನಾದಿಗಳು
ಕಾಳೆಗದೊಳರಿ ದಶಸಹಸ್ರ ನೃ
ಪಾಲಕರ ಮಣಿಖಚಿತನಿರ್ಮಲ
ಮೌಳಿಗಳ ದಿಗುಬಲಿಯ ಕೊಡುವೆನು ದಿವಸ ದಿವಸದಲಿ ೪೦

ಹರಿಯ ಚಕ್ರವ ತುಡುಕಿಸುವೆ ವಾ
ನರಪತಾಕನ ರಥವ ಹಿಂದಕೆ
ಮುರಿಯಲಿಸುವೆನು ಮಹಿಮರಿಬ್ಬರ ನಡೆವಳಿಯ ಕೆಡಿಸಿ
ಸುರನರೋರಗರೊಳಗೆ ಮೀಟಾ
ದರಿಗೆ ಕಟ್ಟಿದ ತೊಡರು ಇವನು
ಬ್ಬರಿಸಿ ನುಡಿದರೆ ನೊರಜ ಕೊಲುವರೆ ಕೈದುವೇಕೆಂದ ೪೧

ಜಲಧಿಯುಬ್ಬಿದವೊಲು ಸಭಾಮಂ
ಡಲಿಯ ಸೌಹೃದವಾಗ್ವಿವಾದದ
ಕಳಕಳಿಕೆ ದಿಗುತಟವ ಗಬ್ಬರಿಸಿದುದು ಗಾಢದಲಿ
ಕೆಲರು ಭೀಷ್ಮನನಿನತನೂಜನ
ಕೆಲರು ಕೊಂಡಾಡಿದರು ಕೌರವ
ನಳುಕಿ ಭೀಷ್ಮನ ಬೇಡಿಕೊಂಡನು ವಿನಯಪರನಾಗಿ ೪೨

ಬೀಳುಕೊಂಡುದು ರಜನಿ ಮರುದಿನ
ವಾಳು ಕುದುರೆಯ ನೆರಹಿ ಧರಣೀ
ಪಾಲ ಸುಮುಹೂರ್ತದಲಿ ಹೊಯ್ಸಿದನಂದು ಹೊರಗುಡಿಯ
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳಕೋಟಿಗಳುರುಚತುರ್ಬಲ
ಮೇಳವಿಸಿ ನಡೆದುದು ಸಮಸ್ತ ಮಹಾಮಹೀಶ್ವರರು ೪೩

ವೀರ ಧೃತರಾಷ್ಟ್ರಂಗೆ ವರ ಗಾಂ
ಧಾರಿಗೆರಗಿದನವರ ಹರಕೆಯ
ಭೂರಿಗಳ ಕೈಕೊಂಡನವನೀಸುರರಿಗಭಿನಮಿಸಿ
ಚಾರುಚಮರದ ನಿಕರದವರೊ
ಯ್ಯಾರಿಸಲು ಜಯವರದ ರಭಸದು
ದಾರ ಮೆರೆಯಲು ಬೀಳುಕೊಂಡನು ರಾಜಮಂದಿರವ ೪೪

ಒಡನೊಡನೆ ಕರಿತುರಗವೇರಿದ
ರೊಡನೆ ಹುಟ್ಟಿದ ಶತಕುಮಾರರು
ಗಡಣದಾಪ್ತರು ಕರ್ಣ ಶಕುನಿ ಜಯದ್ರಥಾದಿಗಳು
ಅಡಸಿದವಿ ಸೀಗುರಿಗಳಭ್ರವ
ತುಡುಕಿದವು ಝಲ್ಲರಿಗಳಂತ್ಯದ
ಕಡಲವೊಲು ಪಡೆ ನಡೆಯೆ ಹಸ್ತಿನಪುರವ ಹೊರವಂಟ ೪೫

ಭುಗುಭುಗಿಪ ಚಂಬಕನ ಗಜ ಕೋ
ಟಿಗಳ ಮುಂದಣ ಡೌಡೆಗಳ ಭೂ
ಗಗನವೊಡನೊಡನೊದರೆ ಮೊರೆವ ಗಭೀರಭೇರಿಗಳ
ಅಗಿವ ಪಟಹ ಮೃದಂಗ ಕಹಳಾ
ದಿಗಳ ಕಳಕಳ ರಭಸ ದಶದಿ
ಕ್ಕುಗಳ ಮಾತಾಡಿಸೆ ಮಹಾಬಲ ತೆರಳಿತಿಭಪುರಿಯ ೪೬

ಅಗಿವ ವಜ್ರದ ಹೊಳೆಕೆಗಳೊ ದಿಟ
ಹಗಲ ತಗಡೋ ಮೇಣು ಮಿಂಚಿನ
ಬಗೆಯ ಸೆಕ್ಕೆಯೋ ಸೂರ್ಯಕಾಂತಚ್ಛವಿಯ ತೆಕ್ಕೆಗಳೊ
ಜಗುಳಿದೊರೆಗಳ ಜಾಳಿಗೆಯ ಹೊಗ
ರೊಗಲು ಝಳಪಿಸೆ ಹೊಳೆಹೊಳೆವ ಕೈ
ದುಗಳ ಹಬ್ಬುಗೆನೆಳಗು ಗಬ್ಬರಿಸಿದುದು ದಿಗುತಟವ ೪೭

ಜಲಧಿಗಳ ಕುಡಿದುದು ನಭೋಮಂ
ಡಲವ ಸೆಳೆದುದು ಸುರನದಿಯ ಮು
ಕ್ಕುಳಿಸಿತಖಿಲಾದ್ರಿಗಳ ನುಂಗಿತು ದಿವವನಳುಕಿಸಿತು
ನೆಲನ ಸವೆಸಿತು ನೇಸರಿನ ಕಂ
ಗಳನು ಕದುಕಿತು ನೆನೆಯ ಬಾರದು
ನಳಿನಭವ ಹರನಾದನೆನಲುಚ್ಚಳಿಸೆ ಪದಧೂಳಿ ೪೮

ಸುರಿವ ಗಜಮದಧಾರೆಯಲಿ ಹೊಸ
ಶರಧಿಗಳು ಸಂಭವಿಸಿದವು ನೃಪ
ವರರ ಮುಕುಟದ ಮಣಿಯೊಳಾದರು ಚಂದ್ರಸೂರಿಯರು
ಗಿರಿಗಳಾದವು ದಂತಿಯಲಿ ಪಡಿ
ಧರಣಿಯಾದವು ಛತ್ರ ಚಮರದ
ಲರರೆ ನೂತನ ಸೃಷ್ಟಿಯಾಯ್ತು ವಿರಿಂಚಸೃಷ್ಟಿಯಲಿ ೪೯

ಅರರೆ ನಡೆದುದು ಸೇನೆ ಕುಲಗಿರಿ
ಯೆರಡು ಕೂರುಮ ಫಣಿಪರಿಬ್ಬಿ
ಬ್ಬರ ದಿಶಾಮಾತಂಗಗಳ ಹದಿನಾರನಳವಡಿಸಿ
ಸರಸಿಜೋದ್ಭವ ಸೃಜಿಸಿದಿರ್ದರೆ
ಧರಿಸಲಾಪುದೆ ಧರಣಿಯೆನೆ ಕುರು
ಧರೆಗೆ ಬಂದುದು ಸೇನೆ ಪಯಣದ ಮೇಲೆ ಪಯಣದಲಿ ೫೦

ನಡೆದು ಬಂದುದು ಕೌರವೇಂದ್ರನ
ಪಡೆ ಕುರುಕ್ಷೇತ್ರಕ್ಕೆ ಮೂಡಣ
ಕಡೆಯಲಳವಡಿಸಿದರು ಬೀಡಾಯಿತ್ತು ವಹಿಲದಲಿ
ಗುಡಿಗಳನು ಬಿಡಿಸಿದರು ಲೋಹದ
ತಡಿಕೆಗಳನಳವಡಿಸಿ ಬೀಡಿನ
ನಡುವೆ ರಚಿಸಿದರವನಿಪಾಲನ ರಾಜಮಂದಿರವ ೫೧

ಅಳವಿ ನಾಲ್ವತ್ತೆಂಟರೊಳಗೆ
ಟ್ಟಳಿಸಿ ಬಿಟ್ಟುದು ಸೇನೆ ಕೋಟಾ
ವಳಯವಗಳಲ್ಲಲ್ಲಿ ತಳಿ ಮುಳುವೇಲಿ ಪಡಿಯಗಳು
ಕೆಲದೊಳೊಪ್ಪುವ ಭೋಗವತಿ ನಿ
ರ್ಮಲ ಗಭೀರೋದಕದ ನದಿ ಕುರು
ಬಲದ ಪಾಳಯದಂಗವಿದು ಕೇಳೈ ಮಹೀಪಾಲ ೫೨

ಪಡೆಯ ಮುಂಗುಡಿ ಭೀಷ್ಮನದು ಬಲ
ನೆಡನು ಪಿಂಗುಡಿಯಾತನದು ನೃಪ
ಗಡಣಬೀಡಿನ ಕಾಹು ಗಂಗಾಸುತನ ಗುರುಭಾರ
ನಡೆವಡಾತನ ನೇಮ ಮರಳಿದು
ಬಿಡುವಡಾತನ ಮಾತು ಕೌರವ
ಪಡೆಗೆ ಭಾರಿಯ ವಜ್ರ ಪಂಜರವಾದನಾ ಭೀಷ್ಮ ೫೩

ಕೇಳು ಜನಮೇಜಯ ಧರಿತ್ರೀ
ಪಾಲ ಧೃತರಾಷ್ಟ್ರಂಗೆ ಮಕ್ಕಳ
ಮೇಲೆ ನೆನೆಹಾಯ್ತಧಿಕಶೋಕೋದ್ರೇಕ ಪಲ್ಲವಿಸೆ
ಕಾಳೆಗದೊಳೇನಾದರೋ ಭೂ
ಪಾಲತಿಲಕರು ದೃಗುವಿಹೀನರ
ಬಾಳಿಕೆಯ ಸುಡಲೆನುತ ತನ್ನೊಳು ಹಿರಿದು ಚಿಂತಿಸಿದ ೫೪

ಆ ಸಮಯದಲಿ ರಾಯ ವೇದ
ವ್ಯಾಸಮುನಿ ನಡೆತಂದು ಗತಪರಿ
ತೋಷವನು ಸಂತೈಸಿ ಕರೆಸಿದನಂದು ಸಂಜಯನ
ಆ ಸಮರವೃತ್ತಾಂತ ನಿನಗೆ ಸ
ಮಾಸ ವಿಸ್ತರವಾಗಿರಲಿ ಭೂ
ಮೀಶತಿಲಕಂಗರುಹುವುದು ನೀನೆಂದು ನೇಮಿಸಿದ ೫೫

ಪರಮ ವೇದವ್ಯಾಸ ಮುನಿಪನ
ಕರುಣವಾಗಲು ಕಂಗಳಿಗೆ ಗೋ
ಚರಿಸಿತೀ ಭಾರತ ಮಹಾಸಂಗ್ರಾಮ ಸೌರಂಭ
ಧುರದ ವೃತ್ತಾಂತವನು ಚಿತ್ತೈ
ಸರಸ ತಿಳುಹುವೆನೆಂದು ಸಲೆ ವಿ
ಸ್ತರಿಸ ಬಗೆದನು ಸಂಜಯನು ಧೃತರಾಷ್ಟ್ರ ಭೂಪತಿಗೆ ೫೬

ಅವಧರಿಸು ಧೃತರಾಷ್ಟ್ರ ಗಂಗಾ
ಭವನ ನೇಮದಲಂದು ಮಹದಾ
ಹವಕೆ ನಡೆದದು ಕಟಕವಲ್ಲಿಯುಲೂಕನೆಂಬುವನು
ಇವರು ಕಳುಹಿದೊಡವರು ರಿಪು ಪಾಂ
ಡವರ ಹೊರಗೈತಂದನಿನ್ನಾ
ಹವಕೆ ನಿಂದರು ಧರ್ಮಪುತ್ರ ವಿಳಂಬವೇಕೆಂದ ೫೭

ಅಗ್ಗಳೆಯನೆಮ್ಮ ರಸ ಸಂಪ್ರತಿ
ನೆಗ್ಗಿ ಕೆಟ್ಟಿರಿ ನೀವು ನಿಮಗೀ
ಹುಗ್ಗಿಗರು ಹುರಿಗೂಡಿ ಗೆಲಿದಿನ್ನೆಳೆಯ ಕೊಡಿಸುವರೆ
ಅಗ್ಗಿ ತಾ ಮಾತೇಕೆ ರಣದಲಿ
ನುಗ್ಗು ನುಗ್ಗಾಗದೆ ಸಹೋದರ
ರೊಗ್ಗು ಮುರಿಯದೆ ಮಾಣದರೆಗೇಡಾಯ್ತು ನಿಮಗೆಂದ ೫೮

ಬೆಂಬಲಕೆ ತಾನೆಂದ ಬಯಲ ವಿ
ಡಂಬದಲಿ ಕಾಳೆಗವ ಮಸೆದರೆ
ನಂಬಿ ಕೆಟ್ಟರಿ ಕೃಷ್ಣನನು ನೀವೇನ ಮಾಡುವಿರಿ
ಇಂಬುಗೆಟ್ಟುದು ರೀತಿ ರಣಕೆ ತ್ರಿ
ಯಂಬಕನನಮರಾಧಿಪನ ಕೈ
ಕೊಂಬನೇ ಕೌರವನೆನಲು ಖತಿಗೊಂಡನಾ ಭೀಮ ೫೯

ಸೀಳು ಕುನ್ನಿಯ ಬಾಯನೆಲವೋ
ತೋಳ ತೀಟೆಯನವನ ನೆತ್ತಿಯ
ಮೇಲೆ ಕಳೆವೆನು ಕುಲಕುವೆನು ಕೌರವ ಬಲಾಂಬುಧಿಯ
ಹೇಳು ಹೋಗೀ ನಾಯನಾಡಿಸಿ
ಕೇಳುತಿರಲೇಕಹಿತ ಕುರುಕುಲ
ಕಾಲಭೈರವನೆಂದು ನಿನ್ನೊಡೆಯಂಗೆ ಹೇಳೆಂದ ೬೦

ಮಾಡಲಿದ್ದುದು ಬಹಳ ಪೌರುಷ
ವಾಡಿ ಕೆಡಿಸಲದೇಕೆ ಕೌರವ
ರಾಡಿ ಕೆಡಿಸಲಿ ಮಾಡಿ ಕೆಡಿಸಲಿ ಚಿಂತೆ ನಮಗೇಕೆ
ಮಾಡಿದೆವು ಗುರುಭಾರವನು ಮುರ
ಗೇಡಿಯಲಿ ರಣಪಾರಪತ್ಯವ
ಮಾಡುವಾತನು ಕೃಷ್ಣನೆಂದನು ಧರ್ಮಸುತ ನಗುತ ೬೧

ವೈರಿದೂತನ ಕಳುಹಿದನು ಕೈ
ವಾರಿಗಳು ಜಯಜಯಯೆನಲು ಹೊಂ
ದೇರ ತರಸಿದನಬುಜನಾಭನ ಪದಯುಗಕೆ ನಮಿಸಿ
ವಾರುದದ ಖುರನಾಲ್ಕರಲಿ ಮಣಿ
ಚಾರು ಕನಕವ ಸುರಿದು ಧರ್ಮಜ
ತೇರನೇರಿದನೊದರಿದವು ನಿಸ್ಸಾಳ ಕೋಟಿಗಳು ೬೨

ಹರಿಯ ಬಲವಂದಣ್ಣನಂಘ್ರಿಗೆ
ಶಿರವ ಚಾಚಿ ನಿಜಾಯುಧವ ವಿ
ಸ್ತರಿಸಿ ಪವನಜ ಪಾರ್ಥಮಾದ್ರೀಸುತರು ರಥವೇರಿ
ಧುರಕೆ ನಡೆದರು ದ್ರುಪದ ಸಾತ್ಯಕಿ
ವರ ವಿರಾಟಾದಿಗಳು ಚೂಣಿಯೊ
ಳುರವಣಿಸಿದರು ಸೇನೆ ನಡೆದುದು ಮುಂದೆ ಸಂದಣಿಸಿ ೬೩

ಬಳಿಕ ಧೃಷ್ಟದ್ಯುಮ್ನನಾಜ್ಞೆಯೊ
ಳಳವಿಗೊಟ್ಟುದು ಸೇನೆ ಮೂಡಣ
ಜಲಧಿಗಾಂತುದು ಪಶ್ಚಿಮೋದಧಿಯೆಂಬ ರಭಸದಲಿ
ಪಳಹರದ ತೋಮರದ ಕುಂತಾ
ವಳಿಯ ಚಮರಚ್ಛತ್ರಮಯ ಸಂ
ಕುಳದಿನಾದುದು ಭೂತ ನಾಲ್ಕಾಕಾಶಗತವಾಗಿ ೬೪

(ಸಂಗ್ರಹ: ಆನಂದ)

Sunday, January 24, 2010

ವಿರಾಟಪರ್ವ: ೦೨. ಎರಡನೆಯ ಸಂಧಿ

ಸೂ: ಕುಸುಮಶರನುರವಣೆಯ ಗಾಯದ
ಲೆಸುಗೆವಡೆದನು ಕೀಚಕನು ತ
ನ್ನಸುವಿನಳತೆಯ ನೋಡದೆಯೆ ತುಡುಕಿದನು ದ್ರೌಪದಿಯ

ಕೇಳು ಜನಮೇಜಯ ಧರಿತ್ರೀ
ಪಾಲ ನಿಮ್ಮಯ ಪೂರ್ವ ಪೃಥ್ವೀ
ಪಾಲರಿದ್ದರು ಗುಪುತದಿಂದ ವಿರಾಟನಗರಿಯಲಿ
ಕಾಲ ಸವೆದುದು ಹತ್ತು ತಿಂಗಳ
ಮೇಲೆ ಮತ್ತೊಂದತಿಶಯೋಕ್ತಿಯ
ನಾಲಿಸೈ ವಿಸ್ತರದೊಳರುಪುವೆನೆಂದನಾ ಮುನಿಪ ೧

ಆ ವಿರಾಟನ ರಾಜಧಾನಿಯೊ
ಳೀ ವಿಳಾಸದಿ ಮುಸುಕಿ ತಾವ್ ಪರ
ಸೇವೆಯಲಿ ಪಾಂಡವರು ಕಳೆದರು ಹತ್ತು ಮಾಸವನು
ರಾವಣನು ಮುನ್ನಂದು ಸೀತಾ
ದೇವಿಗಳುಪಿದ ಕಥೆಯವೋಲ್ ಸಂ
ಭಾವಿಸಿದ ಕೀಚಕವಿಡಂಬವ ಕೇಳು ಭೂಪಾಲ ೨

ಒಂದು ದಿವಸ ವಿರಾಟನರಸಿಯ
ಮಂದಿರಕ್ಕೋಲೈಸಲೆಂದೈ
ತಂದನಾಕೆಯ ತಮ್ಮ ಕೀಚಕನತುಳ ಭುಜಬಲನು
ಹಿಂದೆ ಮುಂದಿಕ್ಕೆಲದ ಸತಿಯರ
ಸಂದಣಿಯ ಮಧ್ಯದಲಿ ಮೆರೆವರ
ವಿಂದವದನೆಯ ಕಂಡು ಕಾಣಿಕೆಗೊಟ್ಟು ಪೊಡಮಟ್ಟ ೩

ಅನುಜನನು ತೆಗೆದಪ್ಪಿ ಸಿಂಹಾ
ಸನದ ಕೆಲದಲಿ ಕುಳ್ಳಿರಿಸಿ ಮನ
ದಣಿಯಲಂಗನೆ ಮನ್ನಿಸಿದಳೈ ತತ್ಸಹೋದರನ
ತನುಪುಳಕ ತಲೆದೋರಲವನು
ಬ್ಬಿನಲಿ ಸತ್ಕೃತನಾಗಿ ಕಮಳಾ
ನನೆಯರನು ಕಂಡನು ಸುದೇಷ್ಣೆಯ ಮೇಳದಬಲೆಯರ ೪

ಅವರ ಮಧ್ಯದಲಮಲ ತಾರಾ
ನಿವಹದಲಿ ರೋಹಿಣಿಯವೋಲ್ ಸುರ
ಯುವತಿಯರಲೂರ್ವಶಿಯವೋಲ್ ನದಿಗಳೊಳು ಜಾಹ್ನವಿಯ
ಅವಯವದ ಪರಿಮಳಕೆ ಪಸರಕೆ
ಕವಿವ ತುಂಬಿಯ ಸಾರ ಸಂಗೀ
ತವನು ಕೇಳುತ ಕಂಡನವ ಪಾಂಚಾಲ ನಂದನೆಯ ೫

ಮೊದಲೊಳವನವಳಂಗವಟ್ಟವ
ನೊದವಿ ನೋಡಿದೊಡಲ್ಲಿಯೇ ಗಾ
ಢದಲಿ ನಟ್ಟವು ಕೀಳಲರಿದಾಯ್ತಾಲಿಗಳನಲುಗಿ
ಮದನ ಮಸೆದೋರಿದನು ಹೂಗಣೆ
ಹೃದಯವನು ತಾಗಿದುದು ಹರ ಹರ
ಹೆದರಿದನು ಹಮ್ಮೈಸಿದನು ಖಳನೊಂದು ನಿಮಿಷದಲಿ ೬

ನಿಂದು ನೋಡಿದ ದ್ರೌಪದಿಯ ಮೊಗ
ದಂದವನು ಕಂಡಾಗ ಕೀಚಕ
ನೊಂದನೆನೆ ಮೊಗ ತೆಗೆಯಲೆಚ್ಚನು ಕಾಮ ಕೈಗೂಡಿ
ಅಂದು ಬೆರಗಾದನು ವಿಳಾಸಿನಿ
ಯಿಂದು ತಳೆದಳು ಮನವನಿವಳಾ
ರೆಂದು ಭಾವಿಸಿ ಚಾಚಿದನು ಕದಪಿನಲಿ ಕರತಳವ ೭

ತಿಳಿಯಿವಳು ಮೂಜಗವ ಮೋಹಿಪ
ತಿಲಕವೋ ಕಾಮಂಗೆ ಕಟ್ಟಿದ
ಕಳನ ಭಾಷೆಗೆ ನಿಂದ ಮಾಸಾಳೋ ಮಹಾದೇವ
ಕೊಲೆಗಡಿಗ ಕಂದರ್ಪಕನ ಕೂ
ರಲಗೊ ಮದನನ ಸೊಕ್ಕಿದಾನೆಯೊ
ನಳಿನಮುಖಿಯಿವಳಾರ ಸತಿಯೆಂದಳುಪಿ ನೋಡಿದನು ೮

ಜಗವ ಕೆಡಹಲು ಜಲಜವಿಶಿಖನು
ಬಿಗಿದ ಬಲೆಯಿವಳಲ್ಲಲೇ ಯೋ
ಗಿಗಳ ಯತಿಗಳನೆಸಲು ಕಾಮನು ಮಸೆದ ಕೂರಲಗು
ಮುಗುದನಾದನು ಕಾಮನಂಬುಗ
ಳುಗಿದವೆದೆಯಲಿ ನಟ್ಟ ದೃಷ್ಟಿಯ
ತೆಗೆಯಲಾರದೆ ಸೋತು ಕೀಚಕ ಪಾತಕವ ನೆನೆದ ೯

ಸೂರೆವೋಯಿತು ಚಿತ್ತ ಕಂಗಳು
ಮಾರುವೋದವು ಖಳನ ಧೈರ್ಯವು
ತೂರಿ ಪೋದದು ಕರಣದಲಿ ಕಳವಳದ ಬೀಡಾಯ್ತು
ಮೀರಿ ಪೊಗುವಂಗಜನ ಶರದಲಿ
ದೋರುವೋಯಿತು ಹೃದಯ ಕಣ್ಣಿರಿ
ಗಾರೆಯಿವಳಾರೆನುತ ಗಜಬಜಿಸಿದನು ನಿಮಿಷದಲಿ ೧೦

ರತಿಯ ಚೆಲುವಂತಿರಲಿ ಸಿರಿ ಪಾ
ರ್ವತಿಯ ರೂಪಂತಿರಲಿ ಬೊಮ್ಮನ
ಸತಿಯ ಸೊಬಗಂತಿರಲಿಯೀ ಬಾಲಕಿಯ ರೂಪಿಂಗೆ
ಪ್ರತಿಯ ಕಾಣೆನು ಪಾಂಡವರ ದುರು
ಪತಿಯ ರೂಪಿಂಗೈದು ಮಡಿಯೀ
ಸತಿಯ ವಿಭ್ರಮವೈದಿತೆನ್ನಯ ಮನವನೆನುತಿರ್ದ ೧೧

ಅರಿವು ತಲೆಕೆಳಗಾಯ್ತು ಧೈರ್ಯದ
ನಿರಿಗೆ ನಗೆಗೆಡೆಯಾಯ್ತು ಲಜ್ಜೆಯ
ಹೊರಿಗೆ ಬರಿದೊರೆಯಾಯ್ತು ಕರಿಮೊಳೆಯೋಯ್ತು ಭಯಬೀಜ
ಮರವೆ ಗರಿಗಟ್ಟಿತು ಮನೋಭವ
ನಿರಿಗೆಲಸ ಬಲುಹಾಯ್ತು ಹೊಗಳುವ
ಡರಿಯನಾತನ ತನುವಿನಂತಸ್ತಾಪದೇಳ್ಗೆಯನು ೧೨

ಬೀಳುಗೊಂಡದು ಲಜ್ಜೆ ಮಹಿಮೆಯ
ಕೀಲು ಕಳಚಿತು ದ್ರುಪದ ತನುಜೆಯ
ನಾಲಿಯಲಿ ನುಂಗಿದನು ಮನದಲಿ ಸತಿಯ ಸೆರೆವಿಡಿದು
ಕೇಳು ಬಿನ್ನಹವಕ್ಕ ನಿಮ್ಮಡಿ
ಯೋಲೆಕಾತಿಯರೊಳಗೆ ಮೀಟಿನ
ಮೇಲುಗೈಯಿವಳಾವಳೆಂದಗ್ರಜೆಯ ಬೆಸುಗೊಂಡ ೧೩

ಈಕೆ ಗಂಧರ್ವರ ರಮಣಿ ನ
ಮ್ಮಾಕೆಯಾಗಿರೆ ಮಾನ್ಯವೃತ್ತಿಯೊ
ಳೀಕೆಯನು ಸಲಹುವೆವು ಬಲ್ಲಿದರಿವಳ ವಲ್ಲಭರು
ಸಾಕು ಬೀಡಾರಕ್ಕೆ ನೀ ಹೋ
ಗೀಕೆ ನಿನಗಹಳಲ್ಲ ನಿಂದಿರು
ಕಾಕನಾಡದಿರೆನುತ ಬೀಳ್ಕೊಟ್ಟಳು ನಿಜಾನುಜನ ೧೪

ತಾರಿತಂತಃಕ್ಕರಣ ಕಾಮನ
ಕೂರುಗಣೆ ಕಾಲಿಕ್ಕಿದವು ಮನ
ದೇರು ಮುಚ್ಚಿತು ದುಗುಡ ಬಲಿದದು ಮುಸುಕು ಮೋರೆಯಲಿ
ಮೀರಿ ನಿಜಮಂದಿರಕೆ ಢಗೆ ಮೈ
ದೋರೆ ಬಂದನು ಮರುದಿವಸ ತಲೆ
ಮಾರಿ ಕಂಡನು ದ್ರೌಪದಿಯನರಮನೆಯ ಬಾಗಿಲಲಿ ೧೫

ಕಳುಹಿದನು ತನ್ನೊಡನೆ ಬಹ
ಗಾವಳಿಯ ಪರಿವಾರವನು ತನ್ನಯ
ಬಳಿಯ ಹಡಪದ ಬಾಲಕನ ಹಿಂದಿಕ್ಕಿ ನಡೆತಂದು
ಒಲಿದು ಸಿಂಹದ ಸತಿಗೆ ನರಿ ಮನ
ವಳುಪುವಂತಿರೆ ಗರುಡನರಸಿಗೆ
ನಲಿದು ಫಣಿ ಬಯಸುವವೊಲೈದಿದ ಬಾಲಕಿಯ ಬಳಿಗೆ ೧೬

ಖಳನ ಮನವಿಂಗಿತವನಾಗಳೆ
ತಿಳಿದು ಕಾಮಿನಿ ಬೆದರಿದಳು ಕಳ
ವಳಿಗ ಸೋತನು ಕೆಟ್ಟೆನೆಂದಳು ತನ್ನ ಮನದೊಳಗೆ
ತೊಲಗಿ ಹಿಂದಡಿಯಿಡಲು ಕೀಚಕ
ನಳುಕದೈತಂದಬುಜವದನೆಯ
ಬಳಿಗೆ ಬಂದನು ನುಡಿಸಲಾಗದೆ ತರಳೆ ನೀನೆಂದ ೧೭

ಎಲೆ ಮರುಳೆ ಬೇಡಳುಪದಿರು ಕೂ
ರಲಗ ಕೊರಳಿಗೆ ಬಯಸದಿರು ಕಳ
ವಳಿಸದಿರು ಕೈಯೊಡನೆ ನಿನ್ನರಮನೆಗೆ ತೆರಳುವುದು
ಸುಲಭೆ ನಾ ನಿನಗಲ್ಲ ನಿನ್ನನು
ಕೆಲರು ನಗುವರು ಪರದ ಸದ್ಗತಿ
ತೊಲಗುವುದು ಬೇಡಕಟಯೆಂದಳು ಪಾಂಡವರ ರಾಣಿ ೧೮

ನಿಲ್ಲೆಲೆಗೆ ಸೈರಂಧ್ರಿ ಕಾಮನ
ಬಲ್ಲೆಹದ ಬಲುಗಾಯ ತಾಗಿತು
ಬಲ್ಲೆ ನೀನೌಷಧಿಯ ರಕ್ಷಿಸಿಕೊಂಬುದೆನ್ನೊಡಲ
ಮೆಲ್ಲನಡಿಯಿಡು ಮಾತ ಮನ್ನಿಸು
ಚೆಲ್ಲೆಗಂಗಳನೆನ್ನ ಮುಖದಲಿ
ಚೆಲ್ಲಿ ಸಪ್ರಾಣಿಸಲು ಬೇಹುದು ವಿಗತಜೀವನವ ೧೯

ಎಲೆಗೆ ಪಾತಕಿ ನಿನ್ನ ಕಣ್ಣೆಂ
ಬಲಗಿನಲಿ ತನ್ನೆದೆಯ ನೋಯಿಸಿ
ತೊಲಗಬಹುದೇ ಕರುಣವಿಲ್ಲವೆ ನಿನ್ನ ಮನದೊಳಗೆ
ಒಲಿದು ಬಂದೆನು ಕಾಮನೂಳಿಗ
ಬಲುಹು ಎನ್ನವ ಭಯವ ತಗ್ಗಿಸಿ
ತಲೆಯ ಕಾಯಲು ಬೇಕೆನುತ ಕೀಚಕನು ಕೈಮುಗಿದ ೨೦

ಪರರ ಸತಿಗಳುಪಿದೊಡೆ ಪಾತಕ
ದೊರಕುವುದು ನಿಜಲಕ್ಷ್ಮಿ ತೊಲಗುಗು
ಧರೆಯಳೊಗ್ಗದ ಕೀರ್ತಿ ಮಾಸುಗು ಗತಿಗೆ ಕೇಡಹುದು
ಕೊರಳು ಹಲವಾದಸುರನಂತಕ
ಪುರವನೈದಿದ ಕಥೆಯ ನೀ ಕೇ
ಳ್ದರಿಯಲಾ ಕಡುಪಾಪಿ ಹೋಗೆಂದಳು ಸರೋಜಮುಖಿ ೨೧

ಮೇಲೆ ಸದ್ಗತಿ ಬೆಂದು ಹೋಗಲಿ
ಕಾಲನವರೈತರಲಿ ಬಂಧುಗ
ಳೇಳಿಸಲಿ ತನ್ನವರು ತೊಲಗಲಿ ರಾಣಿಯರು ಬಿಡಲಿ
ಬಾಲೆ ನಿನಗಾನೊಲಿದೆ ಕಾಮನ
ಕೋಲು ಎನ್ನನು ಮರಳಲೀಯದು
ಲೋಲಲೋಚನೆ ಬಿರುಬ ನುಡಿಯದೆ ತನ್ನನುಳಹೆಂದ ೨೨

ಎಳೆನಗೆಯ ಬೆಳುದಿಂಗಳನು ನೀ
ತಳಿತು ತಾಪವ ಕೆಡಿಸು ಮಧುರದ
ಮೆಲುನುಡಿಯ ಸುಧೆಯಿಂದ ತೃಷ್ಣೆಯನಕಟ ಪರಿಹರಿಸು
ಅಳಿಮನದ ಬಡತನವ ನಿನ್ನಯ
ಕಳಸ ಕುಚ ಲಕ್ಷ್ಮಿಯಲಿ ಕಳೆ ಮನ
ದೊಲವನಿತ್ತಲು ತಿದ್ದಬೇಹುದು ಕಾಂತೆ ಕೇಳೆಂದ ೨೩

ಕೇಳಿ ಕಿವಿ ಮುಚ್ಚಿದಳು ತನ್ನಯ
ಮೇಳದೈವರ ನೆನೆದು ಹರ ಹರ
ಶೂಲಪಾಣಿ ಮುಕುಂದಯೆನುತವೆ ರವಿಯನೀಕ್ಷಿಸುತ
ಕಾಳು ಮೂಳನಲಾ ಖಳಾಗ್ರಣಿ
ಮೇಲುಗಾಣನಲಾ ಮದಾಂಧನ
ಸೋಲಿಸುವರಾರುಂಟೆನುತ ತಲೆ ಬಾಗಿದಳು ತರಳೆ ೨೪

ಎಲೆ ದುರಾತ್ಮ ಮಹಾಪರಾಧವ
ಬಳಸುವರೆ ಬಯಲಿಂಗೆ ನಿನ್ನಯ
ಕುಲದ ಬೇರನು ಕೊಯ್ವರೇ ಬಹುದಾವುದಿದರಿಂದ
ಹಳಿವು ಹೊದ್ದದೆ ಹೆತ್ತವರು ಮ
ಕ್ಕಳುಗಳೆಂಬೀ ಬದುಕು ಮಾಣದೆ
ಯೆಳಸಿಕೊಂಬಂತಾಯಿತೆಂದಳು ಪಾಂಡವರ ರಾಣಿ ೨೫

ಕಾತರಿಸದಿರು ಮಂದಿವಾಳದ
ಮಾತುಗಳು ಸಾಕಕಟ ತೊಲಗೈ
ಸೋತಡೇನದು ಮನುಜಧರ್ಮದ ಚಿತ್ತಚಪಲವಲ
ಈ ತತುಕ್ಷಣ ಜಾರು ಕೇಳಿದ
ಡಾತಗಳು ಸೈರಿಸರು ದೇವ
ವ್ರಾತದಲಿ ಬಲ್ಲಿದರು ತನ್ನವರೆಂದುಳಿಂದುಮುಖಿ ೨೬

ಸಾವು ತಪ್ಪದು ತನಗೆ ಕಾಮನ
ಡಾವರವು ಘನ ನಿನ್ನ ನೆರೆದೇ
ಸಾವೆನಲ್ಲದೆ ಕಾಮನಂಬಿಂಗೊಡಲನೊಪ್ಪಿಸೆನು
ಭಾವೆ ನೂಕದಿರೆನ್ನ ವರ ರಾ
ಜೀವಮುಖಿ ಕೃಪೆ ಮಾಡು ತನ್ನಯ
ಜೀವನವನುಳುಹೆನುತ ಕಮಲಾನನೆಗೆ ಕೈಮುಗಿದ ೨೭

ಮರುಳತನ ಬೇಡೆಲವೊ ಗಂಧ
ರ್ವರಿಗೆ ಹೆಂಡತಿ ತಾನು ನಿನ್ನಯ
ದುರುಳತನವನು ಸೈರಿಸರು ತನ್ನವರು ಬಲ್ಲಿದರು
ಸೊರಹದಿರು ಅಪಕೀರ್ತಿ ನಾರಿಯ
ನೆರೆಯದಿರು ನೀ ನಿನ್ನ ನಿಳಯಕೆ
ಮರಳುವುದು ಲೇಸೆಂದು ತೃಣವನು ಹಿಡಿದು ಸಾರಿದಳು ೨೮

ದ್ರೌಪದಿಗೆ ಖಳ ನುಡಿದನೆನ್ನಾ
ಟೋಪವನು ನೀನರಿಯೆ ಬಡವರ
ಕೋಪವೌಡಿಗೆ ಮೃತ್ಯು ನಿನ್ನವರೆನ್ನದೇಗುವರು
ಆಪೆನವರಂತಿರಲಿ ನೀನೆನ
ಗೋಪಳಾದರೆ ಸಾಕು ಮಲೆತಡೆ
ಯಾ ಪಿನಾಕಿಗೆ ತೆರಳುವೆನೆ ಬಳಿಕಲ್ಲಿ ನೋಡೆಂದ ೨೯

ಹುಳುಕನಲ್ಲಾ ತುಂಬಿ ಕೋಗಿಲೆ
ಗಳಹನಲ್ಲಾ ಶಶಿ ವಸಂತನ
ಬಲುಹು ಮಾನ್ಯರನಿರಿಯದೇ ತಂಗಾಳಿ ಧಾರ್ಮಿಕನೆ
ಖಳನಲಾ ಮಾಕಂದ ಲೋಕದ
ಕೊಲೆಗಡಿಗನಲ್ಲಾ ಮನೋಭವ
ನಿಳಿಕೆಗೊಂಬರೆ ಪಾಪಿಯೊಲಿಯದೆ ಕೊಲುವರೇಯೆಂದ ೩೦

ಒಲಿದು ನಿನ್ನನು ನಾವು ಕೊಲ್ಲೆವು
ಕೊಲುವ ಸುಭಟರು ಬೇರೆ ಬಯಲಿಗೆ
ಹಲವ ಗಳಹಿದರೇನು ಫಲವಿಲ್ಲಕಟ ಸಾರಿದೆನು
ತಿಳುಪಿದೊಡೆಯೆನ್ನವರು ನಿನ್ನಯ
ತಲೆಯನರಿದೂ ತುಷ್ಟರಾಗರು
ಕಲಕುವರು ನಿನ್ನನ್ವಯಾಬ್ಧಿಯನೆಂದಳಿಂದುಮುಖಿ ೩೧

ಕುಲದೊಳೊಬ್ಬನು ಜನಿಸಿ ವಂಶವ
ನಳಿದನಕಟಕಟೆಂಬ ದುರ್ಯಶ
ವುಳಿವುದಲ್ಲದೆ ಲೇಸಗಾಣೆನು ಬರಿದೆ ಗಳಹದಿರು
ಕೊಲೆಗಡಿಕೆಯೊ ಪಾಪಿ ಹೆಂಗಸು
ಹಲಬರನು ಕೊಲಿಸಿದಳು ಸುಡಲೆಂ
ದಳಲುವರು ನಿನ್ನಖಿಳ ರಾಣಿಯರೆಂದಳಿಂದುಮುಖಿ ೩೨

ಹರಿ ವಿರಂಚಿಗಳಾದೊಡೆಯು ಸಂ
ಗರದೊಳೆನಿಗಿದಿರಿಲ್ಲ ಮರುಳೇ
ತರುಣಿ ನಿನ್ನೊಡನೇನು ತೋರಾ ನಿನ್ನ ವಲ್ಲಭರ
ಪರಸತಿಯ ಸೆರೆಗೈಯೆ ಮುತ್ತಿತು
ನೆರೆದು ಕೋಡಗವಿಂಡು ಸುಭಟನು
ಸರಿದನಂತಕ ನಗರಿಗರಿಯಾಯ್ತೆಂದಳಿಂದುಮುಖಿ ೩೩

ನೀರೆ ನೂಕದಿರೆನ್ನ ಮನ ಮು
ಮ್ಮಾರುವೋದದು ನೀನು ಚಿತ್ತವ
ಸೂರೆಗೊಂಡೀ ಮದನನಂಬಿಂಗೊಡಲ ಹೂಣಿಸುವೆ
ಜಾರದಿರುಯೆನ್ನೆದೆಗೆ ತಾಪವ
ಬೀರದಿರು ಕಾರುಣ್ಯವನು ಕೈ
ದೋರೆನೆಗೆ ಕಮಲಾಕ್ಷಿ ಮರಣವ ಮಾಣಿಸಕಟೆಂದ ೩೪

ಮರುಳೆ ಮನದ ವಿಕಾರ ಮಾರಿಯ
ಸರಸವಾಡುವರುಂಟೆ ಮೃತ್ಯುವ
ನೆರೆವರೇ ದಳ್ಳುರಿಯ ಪ್ರತಿಮೆಯನಪ್ಪುವರೆ ಬಯಸಿ
ಸರಳಕಂಗೈಸುವರೆ ಪಾಪಿಯೆ
ಮರಳು ನಿನ್ನರಮನೆಗೆಯೆನ್ನಯ
ಗರುವ ಗಂಡರು ಕಡಿದು ಹರಹುವರೆಂದಳಿಂದುಮುಖಿ ೩೫

ತೋಳ ತೆಕ್ಕೆಯ ತೊಡಿಸಿ ಕಾಮನ
ಕೋಲ ತಪ್ಪಿಸು ಖಳನ ಕಗ್ಗೊಲೆ
ಯೂಳಿಗವ ಕೇಳುಸುರದಿಹರೆ ಸಮರ್ಥರಾದವರು
ಸೋಲಿಸಿದ ಗೆಲವಿಂದ ಬಲು ಮಾ
ತಾಳಿಯಿವನೆನ್ನದಿರು ಹರಣದ
ಮೇಲೆ ಸರಸವೆ ಕಾಯಬೇಹುದು ಕಾಂತೆ ಕೇಳೆಂದ ೩೬

ಉಳಿದ ತನ್ನರಸಿಯರ ನಿನ್ನಯ
ಬಳಿಯ ತೊತ್ತಿರ ಮಾಡುವೆನು ಕೇ
ಳೆಲೆಗೆ ತನ್ನೊಡಲಿಂಗೆಯೊಡೆತನ ನಿನ್ನದಾಗಿರಲಿ
ಲಲನೆ ನಿನ್ನೊಳು ನಟ್ಟ ಲೋಚನ
ತೊಲಗಲಾರದು ತನ್ನ ಕಾಯವ
ಬಳಲಿಸದೆ ಕೃಪೆ ಮಾಡಬೇಹುದೆನುತ್ತ ಕೈಮುಗಿದ ೩೭

ನ್ಯಾಯವನು ಮಿಗೆ ಗೆಲುವದೀಯ
ನ್ಯಾಯವಧಮನ ಧರ್ಮ ಮಾರ್ಗ
ಸ್ಥಾಯಿಗಳ ತಿಮಿರಕ್ಕೆ ಭಾಸ್ಕರಗಾವುದಂತರವು
ಕಾಯರೆನ್ನವರವರ ಕೈಗುಣ
ದಾಯತವ ಬಲ್ಲನರೆ ಬಲ್ಲರು
ನಾಯಿ ಸಿಂಹಕ್ಕಿದಿರೆ ಫಡ ಹೋಗೆಂದು ತಿರುಗಿದಳು ೩೮

ಹೂಣೆ ಹೊಕ್ಕುದು ವಿರಹದಾಸೆಯ
ಕಾಣೆನಾಕೆಯ ಮಾತಿನಲಿ ಮುಂ
ಗಾಣಿಕೆಯಲೇ ಸೂರೆ ಹೋದದು ಮನದ ಸರ್ವಸ್ವ
ತ್ರಾಣ ಸಡಿಲಿತು ಬುದ್ಧಿ ಕದಡಿ ಕೃ
ಪಾಣಪಾಣಿ ವಿರಾಟ ರಾಯನ
ರಾಣಿಯರಮನೆಗೈದಿದನು ಕಂಡನು ನಿಜಾಗ್ರಜೆಯ ೩೯

ಹಣೆಯನಂಘ್ರಿಗೆ ಚಾಚಲೆತ್ತಿದ
ಳಣಕಿಗನ ತೆಗೆದಪ್ಪಿ ಮದವಾ
ರಣನೆ ಕುಳ್ಳಿರೆನುತ್ತ ನೋಡಿದಳಾ ಸಹೋದರನ
ಹೆಣ ಮುಸುಡು ಬಿದ್ದಿದೆ ಲತಾಂಗಿಯ
ಕೆಣಕಿದನೊ ಕಡುಪಾಪಿ ವಂಶವ
ಹಣಿದವಾಡದೆ ಮಾಣನೇಗುವೆನೆನುತ ಮರುಗಿದಳು ೪೦

ಅಳುಕಿತಗ್ಗದ ಮಹಿಮೆ ಮುಸುಡಿನ
ಬೆಳಕು ಕಂದಿತು ಬಹಳ ಚಿಂತಾ
ಜಲಧಿಯೊಳಗದ್ದಂತೆ ಸೊಂಪಡಗಿತು ನಿಜಾಕಾರ
ಕುಲಶಿರೋಮಣಿ ಹೇಳು ಚಿತ್ತದ
ನೆಲೆಯನೆನೆ ನಸುನಾಚಿ ಮದನನ
ಹಿಳುಕು ಸುಮತಿಯ ಸೀಳೆ ಬಳಿಕಿಂತೆಂದನವ ನಗುತ ೪೧

ಬೇರೆ ಬಿನ್ನಹವೇನು ಸತಿಯರ
ನೂರು ಮಡಿ ಚೆಲುವಿನಲಿ ಚಿತ್ತವ
ಸೂರೆಗೊಂಡಿಹಳವಳು ನಿನ್ನೋಲಗದ ಸತಿಯರಲಿ
ಮಾರಿದಳು ಮದನಂಗೆ ಜೀವಿಸ
ಲಾರೆನಾಕೆಯನೊಳಗು ಮಾಡಿಸಿ
ತೋರಿದೊಡೆ ತನ್ನೊಡಲೊಳಸುವಿಂಗಿಹುದು ನಿರ್ವಾಹ ೪೨

ಕೀರ್ತಿಲತೆ ಕುಡಿಯೊಣಗಿತೈ ಮದ
ನಾರ್ತನಾದೈ ಕುಲಕೆ ಕಾಲನ
ಮೂರ್ತಿ ನೀನವತರಿಸಿದೈ ಸಂಹರಿಸಿದೈ ಕುಲವ
ಸ್ಫೂರ್ತಿಗೆಡೆ ಮನುಜರಿಗೆ ರಾವಣ
ನಾರ್ತಿಯಪ್ಪುದು ಅರಿಯಲಾ ಕಡು
ಧೂರ್ತತನಕಂಜುವೆನೆನುತ ನಡುಗಿದಳು ನಳಿನಾಕ್ಷಿ ೪೩

ಬೇಟವೇ ಪರವಧುವಿನಲಿ ಕೈ
ಮಾಟವೇ ಪರವಿತ್ತದಲಿ ತೆಗೆ
ದೋಟವೇ ಕದನದಲಿ ಗುಣವೇ ರಾಜಪುತ್ರರಿಗೆ
ಆಟವಿಕರೊಡನಾಡಿ ಕಲಿತು ವಿ
ರಾಟನನು ಕೊಲಲೆಣಿಸಿದೈ ನಿ
ನ್ನಾಟಕಂಜುವೆನೆನುತ ಮುಖದಿರುಹಿದಳು ತರಲಾಕ್ಷಿ ೪೪

ಅವಳ ಗಂಡರು ಸುರರು ಸುರರಿಗೆ
ನವಗದಾವಂತರವು ಮುಳಿದೊಡೆ
ದಿವಿಜ ದಳಕಿದಿರಾರು ನಮ್ಮನದಾರು ಕಾವವರು
ಅವಳ ತೊಡಕೇ ಬೇಡ ಸತಿಯರ
ನಿವಹದಲಿ ನೀನಾರ ಬಯಸಿದ
ಡವಳ ನಾ ಮುಂದಿಟ್ಟು ಮದುವೆಯನೊಲಿದು ಮಾಡುವೆನು ೪೫

ಅಕ್ಕ ಮರುಳೌ ಚಿತ್ತವವಳಲಿ
ಸಿಕ್ಕಿ ಬೇರ್ವರಿಯಿತ್ತು ಬರಿದೇ
ಮಿಕ್ಕ ಡಿಂಬಕೆ ಮದುವೆಯುಂಟೇ ಮನವ ಬೇರಿರಿಸಿ
ಮಕ್ಕಳಾಟಿಕೆಯಾದಡಾಗಲಿ
ತಕ್ಕರಲ್ಲೆಂದೆನಲಿ ಸಲಹುವ
ಡಕ್ಕ ಸೈರಂಧ್ರಿಯನು ಸೇರಿಸಬೇಕು ತನಗೆಂದ ೪೬

ಸೊಗಸದಿತರರ ಮಾತು ಕಣ್ಣುಗ
ಳೊಗಡಿಸವು ಮಿಕ್ಕವರ ರೂಹನು
ಹಗೆಗಳಾಗಿಹವುಳಿದವರ ನಾಮಗಳು ನಾಲಿಗೆಗೆ
ಸೆಗಳಿಕೆಯ ಸಸಿಯಾದೆನೆನ್ನಯ
ಬಗೆಯ ಸಲಿಸೌ ಹರಿದ ಕರುಳಿನ
ಮೃಗದ ಮರಿಯನು ಸಲಹಬೇಕೆಂದೆರಗಿದನು ಪದಕೆ ೪೭

ಆಲಿ ನೀರೇರಿದವು ತಮ್ಮನ
ಮೇಲೆ ತಳಿತುದು ಮೋಹ ಕಾಲನ
ಪಾಳಯಕೆ ಕೈಗೊಟ್ಟಳಂಗನೆ ನೆಗಹಿದಳು ಖಳನ
ಏಳು ಭವನಕೆ ಹೋಗು ತರುಣಿಯ
ನಾಳೆ ನಾ ಕಳುಹುವೆನು ಪರಸತಿ
ಮೇಳ ಲೇಸಲ್ಲೆನುತ ಬೀಳ್ಕೊಟ್ಟಳು ನಿಜಾನುಜನ ೪೮

ಮನದೊಳಗೆ ಗುಡಿಗಟ್ಟಿದನು ಮಾ
ನಿನಿಯ ಕರುಣಾಪಾಂಗ ರಸಭಾ
ಜನವು ಪುಣ್ಯವಲಾಯೆನುತ ಬೀಳ್ಕೊಂಡನಗ್ರಜೆಯ
ಮನದೊಳೊದವಿದ ಮರುಳುತನದು
ಬ್ಬಿನಲಿ ಹೊಕ್ಕನು ಮನೆಯನಿತ್ತಲು
ದಿನಕರಂಗಾಯಿತ್ತು ಬೀಡಸ್ತಾಚಲಾದ್ರಿಯಲಿ ೪೯

ವರ ದಿಗಂಗನೆಯಿಟ್ಟ ಚಂದನ
ತಿಲಕವೋ ಮನುಮಥನ ರಾಣಿಯ
ಕರದಿಲಿಹ ಕನ್ನಡಿಯೊ ಮದನನ ಬಿರುದಿನೊಡ್ಡಣವೊ
ಸುರತ ವಿರಹಿಯ ಸುಡುವ ಕೆಂಡದ
ಹೊರಳಿಯೋ ಹೇಳೆನಲು ಮಿಗೆ ಹಿಮ
ಕರನು ಜನಿಸಿದ ರಜನಿ ಮಧ್ಯದಳವನಿ ತಳತಳಿಸೆ ೫೦

ಬೆಚ್ಚಿದವು ಚಕ್ರಾಂಕಯುಗ ತಾವ್
ಕಚ್ಚಿದವು ಮರಿದುಂಬಿ ಕುಮುದವ
ಮುಚ್ಚಿದವು ಮುಸುಡುಗಳನಂಬುಜರಾಜಿ ತವತವಗೆ
ಹೆಚ್ಚಿದವು ಸಾಗರದ ತೆರೆಗಳು
ಬೆಚ್ಚಿದರು ಜಾರೆಯರು ಚಂದ್ರಮ
ಕಿಚ್ಚನಿಕ್ಕಿದನಕಟ ಸಕಲ ವಿಯೋಗಜನ ಮನಕೆ ೫೧

ಖಳನ ವಿರಹದ ತಾಪದುರಿ ವೆ
ಗ್ಗಳಿಸೆ ತನ್ನರಮನೆಗೆ ಬಂದನು
ಕಳವಳಿಗ ಹಾಯೆನುತ ಕೆಡೆದನು ತಳಿರ ಹಾಸಿನಲಿ
ನಳಿನವೈರಿಯ ಸುಳಿವು ತನ್ನಯ
ಕೊಲೆಗೆ ಬಂದುದು ಪಾಪಿ ಕಮಲಜ
ಚಲಿತಲೋಚನೆಗೇಕೆ ಮಾಡಿದನಿನಿತು ಚೆಲುವಿಕೆಯ ೫೨

ಹಾಸಿದೆಳೆದಳಿರೊಣಗಿದವು ಹೊಗೆ
ಸೂಸಿದಾ ಸುಯಿಲಿನಲಿ ಮೆಲ್ಲನೆ
ಬೀಸುತಿಹ ಸುಳಿವಾಳೆಯೆಲೆ ಬಾಡಿದವು ಝಳ ಹೊಯ್ದು
ಆ ಸಸಿಯ ಕೋಗಿಲೆಯ ತುಂಬಿಯ
ನಾ ಸರೋಜವ ಮಲ್ಲಿಗೆಯ ಕೈ
ವೀಸಿದನು ಕುಸುಮಾಸ್ತ್ರನೀ ಕೀಚಕನ ಕಗ್ಗೊಲೆಗೆ ೫೩

ಉರಿದುದೊಡಲೊಳು ವೀಳೆಯದ ಕ
ರ್ಪುರದ ಹಳಕುಗಳಮಳ ಗಂಧದ
ಸರಸ ಕರ್ದಮ ಕರಿಕುವರಿದುದು ಪೂಸಿದಂಗದಲಿ
ಹೊರಳೆ ನೀರಿನ ಪೊಟ್ಟಣವು ದ
ಳ್ಳುರಿಯಲಾದುದು ಬಲಿದ ಚಂದ್ರಿಕೆ
ಕರಗಿ ಕಡುಗಿದ ತವರವಾದುದು ಕೀಚಕನ ದೆಸೆಗೆ ೫೪

ಪರಿಮಳದಿ ಸುಳಿವಾಲವಟ್ಟದೊ
ಳಿರದೆ ಪೂಸಿದ ಗಂಧ ಕರ್ಪುರ
ವರರೆ ಸೀದವು ಕೀಚಕನ ಕಾಮಾಗ್ನಿ ತಾಪದಲಿ
ಪರಮ ಪಾತಿವ್ರತೆಗಳುಪಿ ತಾನ್
ಹರಣದಾಸೆಯ ಮರೆದು ಪಾತಕ
ಹೊರಳುತಿರ್ದನು ಚಂದ್ರಕಾಂತದ ಮೇಲು ಮಚ್ಚಿನಲಿ ೫೫

ಅರೆಗಳಿಗೆ ಯುಗವಾಗಿ ನೂಕಿದ
ನಿರುಳನುದಯಾಚಲದ ಶಿರದಲಿ
ತರಣಿ ತಲೆದೋರಿದನು ತೊಡೆದನು ಭುವನದಂಧತೆಯ
ಪರಿಮಳದ ಪಾವುದದಿನಳಿಗಳ
ಕರೆಸಿದವು ತಾವರೆಗಳೆನೆ ಕಾ
ತರ ಲತಾಂಗಿಯ ಸುಯ್ಲು ತಾಗಿತು ಕುಮುದಿನೀಪತಿಗೆ ೫೬

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)

Saturday, January 23, 2010

ವಿರಾಟಪರ್ವ: ೦೧. ಒಂದನೆಯ ಸಂಧಿ

ಸೂ: ಕಾಯಿದರು ಸತ್ಯವನು ವನವಾ
ಸಾಯತವ ನೆರೆ ಗೆಲಿದು ಪಾಂಡವ
ರಾಯರೋಲೈಸಿದರು ಬಂದು ವಿರಾಟನಗರಿಯಲಿ

ಕೇಳು ಜನಮೇಜಯ ಧರಿತ್ರೀ
ಪಾಲ ಮುನಿಜನ ನೃಪಜನಂಗಳ
ಬೀಳುಗೊಟ್ಟನು ಭೂಮಿಪತಿ ಬಲವಂದು ಹುತವಹನ
ಮೇಲು ಶಕುನದ ಚಾರು ನಿನದವ
ನಾಲಿಸುತ ಸೋದರರು ಸಹಿತ ವ
ನಾಲಯವ ಹೊರವಂಟು ಸಾರಿದರೊಂದು ವಟಕುಜವ ೧

ಬಂದು ವಟಕುಜದಡಿಯಲನಿಬರು
ನಿಂದು ದುರುಪದಿ ಸಹಿತ ಬಳಲಿಕೆ
ಯಿಂದ ವಿಶ್ರಮಿಸಿದರು ಚಿಂತಿಸಿ ಧರ್ಮನಂದನನು
ಹಿಂದೆ ಹನ್ನೆರಡಬುದ ಸವೆದವು
ಮುಂದಣನುವಿಂಗೇನು ಗತಿ ಬಳಿ
ಕೊಂದು ವರುಷಜ್ಞಾತವಾಸಕ್ಕಾವ ಠಾವೆಂದ ೨

ಬಡಗಲವರದು ಮೂಡಣರಸುಗ
ಳೊಡೆ ಗೆಣೆಯರಾಗಿಹರು ತೆಂಕಣ
ಕಡೆಯವರು ಕಂಡಿಹರು ಕೆಲಬಲದವರು ಕೊಂಡೆಯರು
ಪಡುವಣವರತಿ ಕೃಶರು ನಾವಿ
ನ್ನಡಗಿರಲು ತೆರನಾವುದೆಂದೆನೆ
ನುಡಿದನರ್ಜುನ ದೇವನವನೀಪತಿಗೆ ವಿನಯದಲಿ ೩

ವಳಿತವನು ಹೊಕ್ಕಿರಿದು ಕೌರವ
ರೊಳಗೆ ಹಗೆಯಾಗಿಹನು ಕೀಚಕ
ಬಲ ವಿರಾಟನಿಗವನ ದೆಸೆಯಿಂ ಭಯವಿಹೀನವವದು
ಮುಳಿದು ಹೇಳಿಕೆಯಾದ ರವಿಸುತ
ಕಲಿ ತ್ರಿಗರ್ತಾದಿಗಳೆನಿಪ ಮಂ
ಡಳಿಕರನು ಕೈಕೊಳ್ಳದಾಳುವರವರು ಪಶ್ಚಿಮವ ೪

ನೃಪತಿ ನಿಶ್ಚೈಯಿಸಿದನು ಮತ್ಸ್ಯಾ
ಧಿಪನ ನಗರಿಯೊಳಲ್ಲಿ ಸೈರಿಸಿ
ಕೃಪಣತನದಲಿ ನೂಕಬೇಕಹುದು ನುಡಿದ ವತ್ಸರವ
ಗುಪಿತವೆಂತಳವಡುವುದಾಶ್ರಯ
ದಪದೆಸೆಯನೆಂತಾನುವಿರಿ ನಿ
ಷ್ಕೃಪೆಯೊಳೆಂತಾನೆಂಬೆನೆಂದನು ಧರ್ಮನಂದನನು ೫

ದೇವ ನಿಮ್ಮಯ ಮತವೆ ಮತವೆಮ
ಗಾವ ವೇಷದ ವಿವರ ನಿಮಗದ
ನೀವು ಬೆಸಸುವುದೆಂದು ಭೀಮಾರ್ಜುನರು ಬಿನ್ನವಿಸೆ
ನಾವು ಭೂಸುರವೇಷದಲಿ ಸಂ
ಭಾವಿತರು ಮತ್ತಲ್ಲಿ ಸನ್ಯಾ
ಸಾವಲಂಬನ ಕಂಕನೆಂಬಭಿಧಾನ ತನಗೆಂದ ೬

ವಲಲನೆಂಬಭಿಧಾನದಲಿ ನೃಪ
ನಿಳಯವನು ಸಾರುವೆನು ತಾನೆಂ
ದುಲಿಯೆ ಮಾರುತಿ ನುಡಿದ ವರ ನಾಟ್ಯವಿದ ವೇಷವನು
ಫಲುಗುಣನು ಹಯ ಗೋ ನಿವಾಸ
ಸ್ಥಳ ವಿಳಾಸಿತರೆನಲು ಯಮಳರು
ಲಲನೆ ಬಿನ್ನಹ ಮಾಡಿದಳು ಸೈರಂಧ್ರಿ ವೇಷವನು ೭

ತೊಳಲಿದಿರಿ ಹನ್ನೆರಡು ವರುಷವು
ಹಳುವದಲಿ ಸೊಂಪಡಗಿ ಪರರೊಡ
ನುಳಿಗೆಲಸದೋಲಗವಿದೆಂತೈ ಸಾರ್ವಭೌಮರಿಗೆ
ಬಳಲಿದಿರಿ ಹಿರಿದಾಗಿ ನಿಮ್ಮುವ
ನಳಲಿಸಿದೆನೆನ್ನಿಂದ ಪಾಪಿಗ
ಳೊಳರೆ ಭುವನದೊಳೆಂದು ಕುಂತೀಸೂನು ಬಿಸುಸುಯ್ದ ೮

ಒಡಲ ಬಳಿ ನೆಳಲಿಂಗೆ ಗತಿ ಬೇ
ರ್ಪಡಿಸಿಹುದೆ ಸುಖದುಃಖವಿವು ನಿ
ಮ್ಮಡಿಗಳಲಿ ತನು ನಾಲ್ಕರಲಿ ಜೀವಾತ್ಮ ನೀವೆಮಗೆ
ಅಡವಿಯೇ ಸಾಮ್ರಾಜ್ಯ ನಿಮ್ಮಡಿ
ಯೊಡನಿರಲು ನೀವಿಲ್ಲದಾ ಪುರ
ವಡವಿ ನಮಗಹುದೆಂದು ಬಿನ್ನವಿಸಿದರು ಭೂಪತಿಗೆ ೯

ತುಷ್ಟನಾದನು ನೃಪತಿ ಕೃತ ಪರಿ
ಶಿಷ್ಟಪಾಲನು ಜಗದೊಳತ್ಯು
ತ್ಕೃಷ್ಟ ಚರಿತನು ತೆಂಕ ದೆಸೆಗೆ ಸಹೋದರರು ಸಹಿತ
ದುಷ್ಟ ಮೃಗಗಳ ಬೇಂಟೆಯಾಡಿ ವ
ಸಿಷ್ಠ ಮುನಿಯಾಶ್ರಮದ ಸುಜನರ
ರಿಷ್ಟವನು ಪರಿಹರಿಸುತೈತಂದನು ಸರಾಗದಲಿ ೧೦

ಕಾಳಿ ಪರಮ ಕರಾಳಿ ಸುರಮುನಿ
ಮೌಳಿಮಂಡಿತ ಚರಣಿ ಖಳ ದನು
ಜಾಳಿ ಮರ್ದಿನಿ ಘನ ಕಪರ್ದಿ ವರಾರ್ಧ ತನುಯುತಳೆ
ಶೂಲ ಪರಶು ಪರಶ್ವಧಾದಿಗ
ಳಾಳುತೊಪ್ಪುವ ಕರಚತುಷ್ಟಯೆ
ಪಾಲಿಸೆಮ್ಮನೆನುತ್ತ ದುರ್ಗೆಯನಂದು ನುತಿಸಿದರು ೧೧

ಬಂದು ಮತ್ಸ್ಯ ಪುರೋಪಕಂಠದ
ನಂದನದ ಕೆಲಕಡೆಯಲನಿಬರು
ನಿಂದು ನಾಲಕು ದೆಸೆಯನೀಕ್ಷಿಸಿ ನಿಜನಿವಾಸದಲಿ
ತಂದು ಚರ್ಮದಲಖಿಳ ಕೈದುವ
ನೊಂದು ಹೆಣನಾಕಾರದಲಿ ಬಿಗಿ
ದೊಂದು ಬನ್ನಿಯ ಮರನ ತುದಿಯಲಿ ಕಟ್ಟಲೇರಿದರು ೧೨

ತೆಗೆಯದಿರಿ ನೀವೆಂದು ತುರುಗಾ
ಹಿಗಳನಂಜಿಸಿ ಧರ್ಮಸುತ ದೃಗು
ಯುಗವ ಮುಚ್ಚಿ ಸುರೇಂದ್ರ ಯಮ ವರುಣಾದಿಗಳಿಗೆರಗಿ
ವಿಗಡನೀ ಕಲಿಭೀಮನೀ ಕೈ
ದುಗಳನೀತಂಗೀಯದಿರಿ ಕೈ
ಮುಗಿದು ಬೇಡಿದನೆಂದು ಸುರರಿಗೆ ನುಡಿದನವನೀಶ ೧೩

ಈವುದಾ ಬೇಡಿದರೆ ಪಾರ್ಥಂ
ಗೀವುದೀಯಜ್ಞಾತ ವಾಸದೊ
ಳೀ ವಿಗಡ ಭೀಮಂಗೆ ಕೊಡದಿರಿಯೆನಲು ಖತಿಗೊಂಡ
ನೀವು ಕುಂತಿಯ ಮಕ್ಕಳಾದಿರಿ
ನಾವು ದುರ್ಯೋಧನನವರು ತ
ಪ್ಪಾವುದಿದಕೆಂದನಿಲಸುತನೌಡತ್ತಿ ಗರ್ಜಿಸಿದ ೧೪

ಸುರನಿಕರ ಕಾದಿರಲಿ ಮೇಣೀ
ಧರಣಿ ಕೊಡೆನೆಂದಿರಲಿ ಹಸ್ತಿನ
ಪುರಿಗೆ ಧಾಳಿಯನಿಡುವೆನಮರರ ಮೋರೆಗಳ ತಿವಿದು
ಉರುತರಾಸ್ತ್ರವನೊಯ್ವೆನೆಂದ
ಬ್ಬರಿಸಿ ಮಾರುತಿ ನುಡಿಯೆ ತಮ್ಮನ
ಬರಸೆಳೆದು ಬಿಗಿದಪ್ಪಿ ಮೈದಡವಿದನು ಭೂಪಾಲ ೧೫

ಅವಧಿಯೊಂದೇ ವರುಷವಿದರೊಳ
ಗೆವಗೆ ಸೈರಣೆಯುಂಟು ನೀ ಮುನಿ
ದವಗಡಿಸಿದೊಡೆ ಬಳಿಕ ಸೈರಿಸಲರಿಯೆ ಮನ ಮುಳಿದು
ಅವನಿಯಲಿ ಹನ್ನೆರಡು ವರುಷವು
ನವೆದುದುಂ ನಿಷ್ಫಲವಲಾ ಕೌ
ರವರಿಗತಿ ಲಾಗಹುದು ನೀನೇ ಬಲ್ಲೆ ಹೋಗೆಂದ ೧೬

ಹದುಳವಿಟ್ಟನು ಭೀಮನನು ನಿ
ರ್ಮದನು ಮತ್ಸ್ಯನ ಪುರಿಗೆ ಯತಿ ವೇ
ಷದಲಿ ಬಂದನು ಹೊನ್ನ ಸಾರಿಯ ಚೀಲ ಕಕ್ಷದಲಿ
ಇದಿರೊಳಾನತರಾಯ್ತು ಕಂಡವ
ರುದಿತ ತೇಜಃಪುಂಜದಲಿ ಸೊಂ
ಪೊದವಿ ಬರಲು ವಿರಾಟ ಕಾಣಿಸಿಕೊಂಡು ಬೆಸಗೊಂಡ ೧೭

ಇತ್ತ ಬಿಜಯಂಗೈಯಿ ಹಿರಿಯರಿ
ದೆತ್ತಣಿಂದೈತಂದಿರೈ ಅ
ತ್ಯುತ್ತಮದ ವೇಷದ ಮಹಾತ್ಮರ ಕಂಡು ಬದುಕಿದೆವು
ಇತ್ತಪೆವು ಬೇಡಿದುದ ನಾವೆನೆ
ಸುತ್ತಬಳಸೆವು ರಾಜಸೇವೆ ನಿ
ಮಿತ್ತ ಬಂದೆವು ಮುನ್ನಿನೋಲಗವಂತರಿಸಿತಾಗಿ ೧೮

ಕೆಟ್ಟುದಿಂದ್ರಪ್ರಸ್ಥ ಪಾಂಡವ
ರುಟ್ಟು ಹೋದರು ನಾರ ಸೀರೆಯ
ನಟ್ಟಡವಿ ಮನೆಯಾಯ್ತು ರಾಜಾನ್ವಯದ ರಾಯರಿಗೆ
ಬಿಟ್ಟರೆಮ್ಮನು ಜಠರಭರಣಕೆ
ನೆಟ್ಟನಾಶ್ರಯವಿಲ್ಲದಿರೆ ಕಂ
ಗೆಟ್ಟು ಬಂದೆವು ಕಂಕನೆಂಬಿಧಾನ ತನಗೆಂದ ೧೯

ಓಲಗಕೆ ಬಂದಖಿಳರಾಯರ
ಮೌಳಿಮೌಕ್ತಿಕಮಣಿಮಯೂಖ ನಿ
ವಾಳಿಯಲಿ ನೆರೆ ಮೆರೆವುದಾತನ ಪಾದಪದ್ಮಯುಗ
ಕಾಲವಾವನನಾವ ಪರಿಯಲಿ
ಕೀಳು ಮಾಡದು ಧರ್ಮಪುತ್ರನ
ನಾಳುಗೊಂಡನು ಮತ್ಸ್ಯನೆಲೆ ಜನಮೇಜಯ ಕ್ಷಿತಿಪ ೨೦

ಆದುದೈ ನಿರ್ವಾಹ ಕಂಕಂ
ಗಾದುದಾ ಮತ್ಸ್ಯೇಶನಿಂದ ವಿ
ವಾದವಿಲ್ಲದೆ ಸೇವೆ ನಿಜವಾದಂತೆಯಿರುತಿರಲು
ಹೋದವಿತ್ತಲು ಕೆಲವು ದಿನ ತನ
ಗಾದ ಸಾಹಾಯ್ಯದಲಿ ರಿಪುಬಲ
ಭೇದಿ ಮಾರುತಿ ಬಂದು ಕಂಡನು ಮತ್ಸ್ಯಭೂಪತಿಯ ೨೧

ಏನು ಪರಿಣತೆ ನಿನಗೆ ಬಾಣಸಿ
ಯಾನು ಭೀಮನ ಮನೆಯವನು ಮ
ತ್ತೇನು ಭುಜಬಲವರಿವೆನಗ್ಗದ ಮಲ್ಲವಿದ್ಯೆಯಲಿ
ನೀನಧಿಕನೆಂದಾ ಸಮೀರನ
ಸೂನುವನು ಮನ್ನಿಸಿದನಿತ್ತಲು
ಮಾನನಿಧಿ ಮರುದಿವಸ ಹೊಕ್ಕನು ಪಾರ್ಥನಾ ಹೊಳಲ ೨೨

ಸುರಪನರಸಿಯ ಶಾಪದಲಿ ಸಿತ
ತುರಗನರೆವೆಣ್ಣಾಗಿ ಮತ್ಸ್ಯೇ
ಶ್ವರನ ಮಗಳಿಗೆ ನಾಟ್ಯವಿದ್ಯಾಭ್ಯಾಸ ಸಂಗದಲಿ
ಇರಲು ಯಮಳರು ತುರಗ ಗೋವ್ರಜ
ಭರಣರಾದರು ಬಳಿಕ ಪಾಂಡವ
ರರಸಿ ಸಾರಿದಳೊಲವಿನಲಿ ವೈರಾಟ ಪಟ್ಟಣವ ೨೩

ತರಣಿಗಂಜಿದಡಿಂದು ತಲೆಗಾ
ಯ್ದಿರಿಸಿದನೊ ಮರೆಯಾಗಿ ತಿಮಿರದ
ಹೊರಳಿಗಳನೆನೆ ಮುಡಿಗೆ ಮೋಹಿದ ವೇಣಿವಲ್ಲರಿಯ
ಹಿರಿದು ಸೈರಿಸಲಾರನೆಂದೊಡ
ನಿರಿಸಿದನೊ ಕೈರವವನೆನಲೆಂ
ದರರೆ ಕಂಗಳ ಢಾಳವೊಪ್ಪಿರೆ ಬಂದಳಬುಜಮುಖಿ ೨೪

ಮೊಲೆಯ ಮೇಲುದ ಜಾರೆ ಜಾರಿದ
ರಳಿ ಮನರು ಕಂಗಳಿನ ಮಿಂಚಿನ
ಹಿಳುಕಿನೆಡೆ ನಡೆಗೆಟ್ಟು ನಿಂದರು ಚಿತ್ತವಿಹ್ವಲರು
ತೆಳುವಸರು ತಲೆದೋರೆ ತೋರಿದು
ದಲಗು ಮರು ಮೊನೆಯೆನುತ ವಿಟರಳ
ವಳಿಯೆ ನಡೆತರುತಿರ್ದಳಂಗನೆ ರಾಜವೀಧಿಯಲಿ ೨೫

ಎಲೆಲೆ ಮದನನ ಗಜವು ತೊತ್ತಳ
ದುಳಿದುದೋ ಕಾಮುಕರೆನೆನೆ ಗಾ
ವಳಿಯೊಳಗೆ ಗಾರಾಯ್ತು ಗರುವಿಕೆ ವಿಟ ವಿದೂಷಕರ
ಅಳುಕಿದರು ಮನುಮಥನ ಗರುಡಿಯ
ಬಲುವೆಗಾರರು ಬಂದಳಗ್ಗದ
ನಳಿನಮುಖಿ ಬಹುಜನದ ಮನಕಚ್ಚರಿಯನೊದವಿಸುತ ೨೬

ಜನದ ಜಾಣಕ್ಕಾಡಲಾ ಮೋ
ಹನ ಮಹಾಂಬುಧಿಯೊಳಗೆ ನೃಪನಂ
ಗನೆಯ ಭವನಕೆ ಬರಲು ಬೆರಗಾಯ್ತಖಿಳ ನಾರಿಯರು
ವನಿತೆ ಮಾನಿಸೆಯಲ್ಲ ಮನುಜರಿ
ಗಿನಿತು ರೂಪೆಲ್ಲಿಯದು ವಿಸ್ಮಯ
ವೆನುತ ಮನದೊಳಗಳುಕಿದರು ಮತ್ಸ್ಯೇಶನರಸಿಯರು ೨೭

ಬರವ ಕಂಡು ಸುದೇಷ್ಣೆ ಮನದಲಿ
ಹರುಷ ಮಿಗೆ ಹೊಂಗಿದಳು ಕರೆ ಕರೆ
ತರುಣಿಯಾರೆಂದಟ್ಟಿದಳು ಕೆಳದಿಯರನನಿಬರನು
ಸರಸಿಜಾಯತದಂದವನು ಮೋ
ಹರಿಸಿ ಮುಂಚುವ ಪರಿಮಳವನಂ
ದರಸಿ ಬೀರುತ ಬಂದು ಹೊಕ್ಕಳು ರಾಜಮಂದಿರವ ೨೮

ಕೆಳದಿಯರು ಕಾಣಿಸಿದರರಸನ
ಲಲನೆಯರು ಪರಿಯಂಕ ಪೀಠದ
ಕೆಲಕೆ ಕರೆದಳು ಕಮಲವದನೆಯನುಚಿತ ವಚನದಲಿ
ನಳಿನಮುಖಿ ನೀನಾರು ನಿನಗಾ
ರೊಳರು ರಮಣರು ಮಾಸಿಕೊಂಡಿಹ
ಮಲಿನ ವೃತ್ತಿಯಿದೇಕೆನುತ ಬೆಸಗೊಂಡಳಂಗನೆಯ ೨೯

ಅತುಳಬಲ ಗಂಧರ್ವರೈವರು
ಪತಿಗಳೆನಗುಂಟೆನ್ನ ಚಿತ್ತಕೆ
ಖತಿಯ ಮಾಡಿದರೊಂದು ವರುಷವು ಬಿಡುವೆನವರುಗಳ
ಸತತವಾ ಕುಂತೀಕುಮಾರರ
ಸತಿಯರೋಲೈಸಿದ್ದೆ ಬಳಿಕವ
ರತಿ ಗಹನವನನಿಷ್ಠರಾದರು ತನಗೆ ಬರವಾಯ್ತು ೩೦

ಏನ ಮಾಡಲು ಬಲ್ಲೆಯೆಂದರೆ
ಮಾನಿನಿಯ ಸಿರಿಮುಡಿಯ ಕಟ್ಟುವ
ಸೂನ ಮುಡಿಸುವ ವರ ಕಟಾಕ್ಷಕೆ ಕಾಡಿಗೆಯನಿಡುವ
ಏನ ಹೇಳಿದ ಮಾಡಬಲ್ಲೆನು
ಸಾನುರಾಗದೊಳೆಂದೆನಲು ವರ
ಮಾನಿನಿಯ ನಸುನಗುತ ನುಡಿಸಿಳಂದು ವಿನಯದಲಿ ೩೧

ಎನಲು ಮೆಚ್ಚಿದಳಾ ವಿರಾಟನ
ವನಿತೆ ವೀರರ ವಧುವನಾ ಸಖಿ
ಜನದೊಳಗೆ ನೇಮಿಸಿದಳಬನಿರಿಗಾಯ್ತು ನಿರ್ವಾಹ
ಮನದ ಢಗೆಯಡಗಿದವು ಮತ್ಸ್ಯೇ
ಶನ ಪುರಾಂತರದೊಳಗೆ ಮೈ ಮರೆ
ಸನುಪಮಿತ ಭುಜಸತ್ವರಿದ್ದರು ಭೂಪ ಕೇಳೆಂದ ೩೨

ಆ ಸುದೇಷ್ಣಾ ದೇವಿಯರ ನಿಡು
ಕೇಶವನು ಹಿಕ್ಕುವಳು ಮುದದಲಿ
ಸೂಸು ಮಲ್ಲಿಗೆಯರಳ ದೆಖ್ಖಾಳವನು ಮುಡಿಸುವಳು
ಆ ಸತಿಯ ಮನವೊಲಿದು ನಡೆವಳು
ಲೇಸು ಲೇಸೆಂದೆನಿಸಿ ಬಾಳುವ
ಭಾಷೆಯನು ಸಲಿಸುತ್ತಲಿರ್ದಳು ಪತಿಗಳಾಜ್ಞೆಯಲಿ ೩೩

ಜವನ ಮಗ ಸನ್ಯಾಸಿ ವೇಷದಿ
ಪವನಸುತ ಬಾಣಸಿನ ಮನೆಯಲಿ
ದಿವಿಜರಾಯನ ತನಯನಿರ್ದ ಶಿಖಂಡಿ ವೇಷದಲಿ
ಜವಳಿ ಮಕ್ಕಳು ತುರಗ ಗೋವ್ರಜ
ನಿವಹರಾದರು ಕಮಲಮುಖಿ ಕಾ
ಲವನು ಕಳೆದಳು ರಾಯನೊಲುಮೆಯ ಕೆಳದಿಯರ ಕೂಡ ೩೪

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)

Thursday, January 21, 2010

ಸಭಾಪರ್ವ: ೦೧. ರಾಜಸೂಯಾರಂಭ

ಸೂ: ಸಭೆಯೊಳೋಲಗದೊಳು ವಿರಿಂಚಿ
ಪ್ರಭವನನುಮತದಿಂದ ಧರಣೀ
ವಿಭು ಮಹಾಕ್ರತು ರಾಜಸೂಯವನೊಲಿದು ಕೈಕೊಂಡ

ಕೇಳು ಜನಮೇಜಯ ಧರಿತ್ರೀ
ಪಾಲ ಖಾಂಡವ ವನದ ವಹ್ನಿ
ಜ್ವಾಲೆ ತೆಗೆದುದು ಕೂಡೆ ಹೊಗೆದುದು ಹೊದರ ಹೊಸ ಮೆಳೆಯ
ಮೇಲುಗಾಳಗದುಬ್ಬಿನಲಿ ಸಿರಿ
ಲೋಲ ಸಹಿತರ್ಜುನನು ವಿಕ್ರಮ
ದೇಳಿಗೆಯ ಪರಿತೋಷದಲಿ ತಿರುಗಿದನು ಪಟ್ಟಣಕೆ ೧

ದೂತರೈದಿದರಿವರ ಸೂರೆಯ
ಕೈತವಕಿಗರು ಕೃತಕ ವಾರ್ತಾ
ಭೀತ ಪುರಜನ ಮುಖದ ದುಗುಡದ ದಡ್ಡಿಗಳನುಗಿದು
ಬೀತುದಿಂದ್ರನ ಬಲುಹು ವಿಗಡನ
ವೀತಿಹೋತ್ರನ ವಿಲಗ ತಿದ್ದಿ ವಿ
ಧೂತರಿಪುಬಲ ಬಂದನಿದೆಯೆಂದರು ಮಹೀಪತಿಗೆ ೨

ಹೂತುದರಸನ ಹರುಷಲತೆ ಪುರು
ಹೂತ ವಿಜಯದ ವಿಜಯ ವಾರ್ತಾ
ಶ್ರೋತ್ರ ಸುಖಸಂಪ್ರೀತಿ ನಯನ ಜಲಾಭಿಷೇಕದಲಿ
ಮಾತು ಹಿಂಚಿತು ಮುಂಚಿದುದು ನಯ
ನಾತಿಥಿವ್ರಜ ಮುಸುಕಿತಸುರ ವಿ
ಘಾತಿ ಪಾರ್ಥನನನಿಲಸುತ ನಕುಲಾದಿ ಬಾಂಧವರ ೩

ತಳಿತ ಗುಡಿಗಳು ಸಾಲ ಕಲಶದ
ನಿಳಯ ನಿಳಯದ ಬೀದಿ ಬೀದಿಯ
ತಳಿರ ತೋರಣದೋರಣದ ನವ ಮಕರತೋರಣದ
ತಳಿಗೆ ತುಂಬುಲದಾರತಿಯ ಮಂ
ಗಳಿತ ರಭಸದೊಳಖಿಳ ರಾಜಾ
ವಳಿಗಳೊಸಗೆಯುಳಿವರು ಹೊಕ್ಕರು ರಾಜಮಂದಿರವ ೪

ಹಿರಿಯರಂಘ್ರಿದ್ವಯಕೆ ಮಣಿದರು
ಕಿರಿಯರುಚಿತ ಕ್ಷೇಮ ಕುಶಲದಿ
ಪರಿ ರಚಿತ ಪರಿರಂಭ ಮಧುರ ವಚೋವಿಳಾಸದಲಿ
ಅರಸನಿವರನು ಮನ್ನಿಸಿದನಾ
ದರಿಸಿತನ್ಯೋನ್ಯಾನುರಾಗ
ಸ್ಫುರಿತ ತೇಜೋಭಾವ ವಿಭ್ರಮ ಭೂಪತಿವ್ರಾತ ೫

ಅರಸ ಕೇಳೈ ಬಳಿಕ ಹರಿ ನಿಜ
ಪುರಕೆ ಬಿಜಯಂಗೆಯ್ವ ವಾರ್ತೆಯ
ನೊರೆದನವನೀಪತಿಗೆ ಭೀಮ ಧನಂಜಯಾದ್ಯರಿಗೆ
ಅರಸಿಯರಿಗಭಿಮನ್ಯು ಧರ್ಮಜ
ನರ ವೃಕೋದರಸೂನು ಮೊದಲಾ
ಗಿರೆ ಸಮಸ್ತಜನಂಗಳನು ಮನ್ನಿಸಿದನುಚಿತದಲಿ ೬

ವರಮುಹೂರ್ತದೊಳಮೃತ ಯೋಗೋ
ತ್ಕರ ಶುಭಗ್ರಹ ದೃಷ್ಟಿಯಲಿ ಹಿಮ
ಕರಶುಭಾವಸ್ಥೆಯಲಿ ಕೇಂದ್ರಸ್ಥಾನ ಗುರುವಿನಲಿ
ಧರಣಿಸುರರಾಶೀರ್ವಚನ ವಿ
ಸ್ತರಣ ದಧಿ ದೂರ್ವಾಕ್ಷತೆಗಳು
ಬ್ಬರದ ವಾದ್ಯ ಗಡಾವಣೆಯಲಸುರಾರಿ ಹೊರವಂಟ ೭

ಕರಯುಗದ ಚಮ್ಮಟಿಕೆ ವಾಘೆಯ
ಲರಸ ರಥವೇರಿದನು ಮುಕ್ತಾ
ಭರದ ಭಾರದ ಸತ್ತಿಗೆಯ ಪಲ್ಲವಿಸಿದನು ಭೀಮ
ಹರಿಯುಭಯಪಾರ್ಶ್ವದಲಿ ಸಿತ ಚಾ
ಮರವ ಚಿಮ್ಮಿದನರ್ಜುನನು ಬಂ
ಧುರದ ಹಡಪದ ಹೆಗಲಲೈದಿದರರ್ಜುನಾನುಜರು ೮

ಪೌರಜನ ಪುರಜನ ನೃಪಾಲ ಕು
ಮಾರ ಸಚಿವ ಪಸಾಯ್ತ ಭಟ ಪರಿ
ವಾರ ಧೌಮ್ಯಪ್ರಮುಖ ಸೂರಿ ಸಮಾಜರೊಗ್ಗಿನಲಿ
ತೇರ ಬಳಿವಿಡಿದೈದಿದರು ಮುರ
ವೈರಿ ವಿರಹ ವಿಧೂತ ವದನಾಂ
ಭೋರುಹರ ಸಂತೈಸಿ ಬೀಳ್ಕೊಟ್ಟನು ಕೃಪಾಜಲಧಿ ೯

ಅರಿನೃಪರು ಕುಹಕಿಗಳು ನೀವೇ
ಸರಸ ಹೃದಯರಧರ್ಮಶೀಲರು
ಪರರು ನೀವತಿ ಧರ್ಮನಿಷ್ಠರು ಹಾನಿಯುಂಟದಕೆ
ಅರಸನಾರೋಗಳೆ ವಿಹಾರದೊ
ಳಿರುಳು ಹಗಲು ಮೃಗವ್ಯಸನದೆ
ಚ್ಚರಿನೊಳಿಹುದೆಂದನಿಬರನು ಬೀಳ್ಕೊಟ್ಟನಸುರಾರಿ ೧೦

ನಾಲಗೆಗಳಸುರಾರಿ ಗುಣ ನಾ
ಮಾಳಿಯಲಿ ತುರುಗಿದವು ಕಂಗಳು
ನೀಲಮೇಘಶ್ಯಾಮನಲಿ ಬೆಚ್ಚವು ವಿಹಾರದಲಿ
ಬಾಲಕೇಳೀ ಕಥನ ಸುಧೆಯೊಳ
ಗಾಳಿ ಮುಳುಗುತ ಕಳುಹುತನಿಬರು
ಸಾಲಭಂಜಿಕೆಯಂದವಾದರು ಕೃಷ್ಣವಿರಹದಲಿ ೧೧

ಕಳುಹಿ ಕಂಗಳು ಮರಳಿದವು ಮನ
ಕಳುಹದಾ ದ್ವಾರಾವತಿಗೆ ಮಂ
ಗಳ ಮಹೋತ್ಸವದೊಸಗೆ ನುಡಿಯಲಿ ಹೊಕ್ಕನಸುರಾರಿ
ಬಳಿಕಿವರು ನಿಜ ರಾಜಭವನ
ಸ್ಥಳಕೆ ಬಂದರು ಸೌಮನಸ್ಯದ
ಲಿಳೆಯ ಪಾಲಿಸುತಿರ್ದರವನೀಪಾಲ ಕೇಳೆಂದ ೧೨

ಮುರಹರನ ನೇಮದಲಿ ಮಯ ವಿ
ಸ್ತರಿಸಿದನು ಪದಿನಾಲ್ಕು ತಿಂಗಳು
ವರ ಸಭಾಮಂಟಪವನನಿಬರಿಗಿವ ಕೃತಜ್ಞನಲೆ
ಕಿರಣ ಲಹರಿಯ ವಿವಿಧ ರತ್ನೋ
ತ್ಕರದ ರಚನಾಶಿಲ್ಪವಿದು ದೇ
ವರಿಗಸಾಧ್ಯವು ಶಿವಶಿವಾಯೆನೆ ಮೆರೆದುದಾಸ್ಥಾನ ೧೩

ಹತ್ತು ಸಾವಿರ ಕೈ ಪ್ರಮಾಣದ
ಸುತ್ತುವಳಯದ ಮಣಿಯ ಶಿಲೆಗಳ
ತತ್ತವಣೆಗಳ ತೆಕ್ಕೆವೆಳಗಿನ ಲಳಿಯ ಲಹರಿಗಳ
ಸುತ್ತುವಳಯದ ಪದ್ಮರಾಗದ
ಭಿತ್ತಿಗಳ ವೈಡೂರ್ಯ ಶಿಲೆಗಳ
ಮತ್ತವಾರಣ ವರ ವಿಧಾನದಲೆಸೆದುದಾಸ್ಥಾನ ೧೪

ಕರೆಸಿದನು ಮಯನೆಂಟು ಸಾವಿರ
ಸರಿಗ ರಕ್ಕಸ ಕಿಂಕರರ ನಿಜ
ಶಿರದೊಳಾಂತರು ತಂದರಿಂದ್ರಪ್ರಸ್ಥಪುರವರಕೆ
ಅರಸ ಕಾಣಿಸಿಕೊಂಡನದನಾ
ದರಿಸಿದನು ಭೀಮಂಗೆ ಭಾರಿಯ
ವರ ಗದಾದಂಡವನು ಕಾಣಿಕೆಯಿತ್ತು ಪೊಡವಂಟ ೧೫

ಇದು ಪುರಾತನ ಸಗರ ವಂಶಾ
ಭ್ಯುದಯ ದುರ್ಜಯ ಯೌವನಾಶ್ವನ
ಗದೆ ಕೃತಾಂತನ ಕರದ ದಂಡವನಂಡಲೆವ ಬಲದ
ಮದದಲೊಪ್ಪುವುದೆನುತ ಮಯನತಿ
ಮುದದಿ ಬಳಿಕಾ ದೇವದತ್ತಾ
ಖ್ಯದ ಮಹಾ ಶಂಖವನು ಪಾರ್ಥಗೆ ಕೊಟ್ಟು ಕೈಮುಗಿದ ೧೬

ಒಸಗೆ ಮೆರೆದುದು ಮಯನ ಮಿಗೆ ಮ
ನ್ನಿಸಿದನವನಿಪನಂಗಚಿತ್ತದೊ
ಳಸುರ ಕಿಂಕರರನಿಬರನು ಸನ್ಮಾನ ದಾನದಲಿ
ಒಸೆದು ಕಳುಹಿದನಾತನನು ದೆಸೆ
ದೆಸೆಯ ಯಾಚಕ ನಿಕರ ನೂಕಿತು
ಮುಸುಕಿತೈ ಧರ್ಮಜನ ಕೀರ್ತಿಯ ಝಾಡಿ ಮೂಜಗವ ೧೭

ದಿವಸ ದಿವಸದೊಳುಂಡುದವನೀ
ದಿವಿಜ ಸಂತತಿ ಹತ್ತು ಸಾವಿರ
ವವರನೇನೆಂದೆಣಿಸುವೆನು ಮಾರ್ಗಣ ಮಹೋದಧಿಯ
ವಿವಿಧ ರತ್ನಾಭರಣ ಕಾಂಚನ
ನವ ದುಕೂಲದ ದಿಂಡಿನಲಿ ಬುಧ
ನಿವಹ ದಣಿದುದನಂತ ಕೃಪಣಾನಾಥ ಜನಸಹಿತ ೧೮

ಆ ಮಹೋತ್ಸವದೇಳು ದಿನವಭಿ
ರಾಮರಂಜಿತವಾಯ್ತು ಶುಭದಿನ
ರಾಮಣೀಯಕ ಲಗ್ನದಲಿ ಹೊಕ್ಕನು ಮಹಾಸಭೆಯ
ಭೂಮಿಪಾಲರನಂತ ಸುಜನ
ಸ್ತೋಮವನುಜರಮರ್ತ್ಯರೆನಿಪ ಸ
ನಾಮರಿದ್ದರು ರಾಯನೆಡಬಲವಂಕದಿದಿರಿನಲಿ ೧೯

ಹೊಳೆಹೊಳೆದುದಾಸ್ಥಾನ ಕಾಂತಾ
ವಳಿಯ ಕಂಗಳ ಬೆಳಕಿನಲಿ ತನಿ
ಮುಳುಗಿತೋಲಗ ಲಲಿತರಸ ಲಾವಣ್ಯಲಹರಿಯಲಿ
ವಿಳಸದಖಿಳಾಭರಣ ರತ್ನಾ
ವಳಿಯ ರಶ್ಮಿಯಲಡಿಗಡಿಗೆ ಪ್ರ
ಜ್ವಲಿಸಿತಾ ಸಭೆ ದೀಪ್ತಿಮಯ ವಿವಿಧಾನುಭಾವದಲಿ ೨೦

ಮೇಳದಲಿ ಗಂಧರ್ವರಿಪ್ಪ
ತ್ತೇಳು ತುಂಬುರ ಸಹಿತ ಶುದ್ಧದ
ಸಾಳಗದ ಸಂಕೀರ್ಣ ದೇಶಿಯ ವಿವಿಧ ರಚನೆಗಳ
ಬಾಳೆಯರ ಸುರಗಣಿಕೆಯರ ಮುಖ
ಚಾಳೆಯರ ಸಂಗೀತ ತಾಳದ
ತೂಳುವರೆ ತುಂಬಿದುದು ಕುಸುಮಾಯುಧನ ಕಳವಳವ ೨೧

ಆ ಮಹಾಸಭೆಯಲಿ ಯುಧಿಷ್ಠಿರ
ಭೂಮಿಪತಿ ದೂರದಲಿ ಕಂಡನು
ತಾಮರಸವಳ ನಯನ ಸನ್ನಿಭ ಭಾವ ಭಾವಿತನ
ಹಾ ಮಹಾದೇವೆತ್ತಣದುಭುತ
ಧಾಮವಿದು ದಿನಮಣಿಯ ತೇಜ
ಸ್ತೋಮವೆರಡರ ಧಾತುಯೆನುತೀಕ್ಷಿಸಿದರಾ ದೆಸೆಯ ೨೨

ಲಲಿತ ತೇಜಃಪುಂಜ ಮಿಗೆ ಥಳ
ಥಳಿಸಿತತಿ ದೂರದಲಿ ಬೆಳಗಿನ
ಗೊಳಸನುಡಿದಂತಾದುದಾಗಳೆ ತೋರಿತಾಕಾರ
ತಳಿತುದವಯವ ಶುದ್ಧವರ್ಣ
ಸ್ಥಳವು ನಿಮಿಷಕೆ ಮುನಿವರಾಕೃತಿ
ಹೊಳೆದುದಾಕ್ಷಣವೀತ ನಾರದನೆಂದುದಖಿಳಜನ ೨೩

ದಣಿಯದಾತನ ಬೆರಳು ನಾರಾ
ಯಣರವದ ವೀಣೆಯಲಿ ಹೃದಯಾಂ
ಗಣದ ಸೀಮೆಗೆ ಬಿಡಯವಾಗದು ಕೃಷ್ಣಪದ ಕೇಳಿ
ಪ್ರಣವರೂಪದ ಭಾವಶುದ್ಧಿಯ
ಕಣಿ ಮುರಾರಿಯ ತನ್ಮಯದ ನಿ
ರ್ಗುಣಮುನೀಶ್ವರನಿಳಿದನಿಂದ್ರಪ್ರಸ್ಥಪುರವರಕೆ ೨೪

ಬಂದನರಮನೆಗಾ ಮುನಿಯನಭಿ
ವಂದಿಸಿದುದಾಸ್ಥಾನವಿದಿರಲಿ
ನಿಂದುಬಿಜಯಂಗೈಸಿ ತಂದರು ಸಿಂಹವಿಷ್ಟರಕೆ
ಸಂದ ಮಧುಪರ್ಕಾದಿ ಸತ್ಕೃತಿ
ಯಿಂದ ಪೂಜಿಸಿ ವಿನಯ ಮಿಗೆ ನಗು
ತೆಂದನವನೀಪಾಲನುಚಿತೋಕ್ತಿಯಲಿ ನಾರದನ ೨೫

ಕುಶಲವೇ ನಿಮ್ಮಂಘ್ರಿಗಳಿಗಿಂ
ದೊಸಗೆಯಾಯಿತು ನಮಗೆ ದರುಶನ
ವಸಮ ಸಂಸ್ಕೃತಿ ವಹ್ನಿದಗ್ಧರಿಗಮೃತ ವರ್ಷವಲೆ
ಪಶುಪತಿಯ ಪರಮೇಷ್ಠಿಯಾ ಮುರ
ದ್ವಿಷನ ಸಾಮರ್ಥ್ಯದ ಸಗಾಢದ
ದೆ(ಎ)ಸಕ ನಿಮಗುಂಟೆಂದು ಕೊಂಡಾಡಿದನು ನಾರದನ ೨೬

ಕುಶಲವೆಮಗಿಂದೈದೆ ನೀನೀ
ವಸುಮತೀವಧುಗೊಳ್ಳಿದನೆ ಶೋ
ಭಿಸುವುದೇ ಭವದಾಜ್ಞೆಯಲಿ ವರ್ಣಾಶ್ರಮಾಚಾರ
ದೆಸೆದೆಸೆಗಳಮಳಾಗ್ನಿಹೋತ್ರ
ಪ್ರಸರ ಧೂಮಧ್ವಜಗಳೇ ನಿಂ
ದಿಸರಲೇ ದುರ್ಜನರು ಸುಜನನರನೆಂದನಾ ಮುನಿಪ ೨೭

ಅರ್ಥದಿಂ ಧರ್ಮವನು ಧರ್ಮದಿ
ನರ್ಥವನು ಧರ್ಮಾರ್ಥವೆರಡನು
ವ್ಯರ್ಥಕಾಮದಲಳಿಯಲೇ ರಾಜ್ಯಾಭಿಲಾಷೆಯಲಿ
ಅರ್ಥಸಾಧನ ಧರ್ಮಸಾಧನ
ವರ್ಥಧರ್ಮದಲುಭಯಲೋಕಕ
ನರ್ಥಸಾಧನ ಕಾಮವೆಂದನು ಮುನಿ ನೃಪಾಲಂಗೆ ೨೮

ಮಾನ್ಯರನು ಧಿಕ್ಕರಿಸೆಯಲೆಯವ
ಮಾನ್ಯರನು ಮನ್ನಿಸೆಯಲೇ ಸಂ
ಮಾನ್ಯರನು ಸತ್ಕರಿಸುವಾ ಹಳಿವಾ ವಿಕಾರಿಗಳ
ಅನ್ಯರನು ನಿನ್ನವರ ಮಾಡಿಯ
ನನ್ಯರನು ಬಾಹಿರರ ಮಾಡಿವ
ದಾನ್ಯರನು ನಿಗ್ರಹಿಸೆಯೆಲೆ ಭೂಪಾಲ ಕೇಳೆಂದ ೨೯

ಖಳರ ಖಂಡಿಸುವಾ ಮದವ್ಯಾ
ಕುಲರ ದಂಡಿಸುವಾ ದರಿದ್ರರ
ನೊಲಿದು ರಕ್ಷಿಸುವಾ ಸುಮಾಯಾವಿಗಳ ಶಿಕ್ಷಿಸುವ
ಕುಲಯುತರ ಕೊಂಡಾಡುವಾ ರಿಪು
ಬಲದ ತಲೆ ಚೆಂಡಾಡುವಾ ದು
ರ್ಬಲರನತಿ ಬಾಧಿಸೆಯಲೇ ಭೂಪಾಲ ಕೇಳೆಂದ ೩೦

ಜಾತಿಸಂಕರವಿಲ್ಲಲೇ ಜನ
ಜಾತದಲಿ ಹೀನೋತ್ತಮರು ನಿ
ರ್ಣೀತರೇ ನಿಜಮಾರ್ಗದಲಿ ಕುಲವಿಹಿತ ಧರ್ಮದಲಿ
ಖ್ಯಾತರೇ ಸತ್ಪುರುಷರಧಿಕ
ದ್ಯೂತಕೇಳಿಗಳಿಲ್ಲಲೇ ಮೃಗ
ಯಾತಿರೇಕವ್ಯಸನ ಕಿರಿದೇ ರಾಯ ನಿನಗೆಂದ ೩೧

ಗಸಣಿಯಿಲ್ಲಲೆ ನಿನಗೆ ಸಪ್ತ
ವ್ಯಸನದಲಿ ನಿನ್ನನುಜ ತನುಜರ
ಮುಸುಡಧರ್ಮದಲಿರದಲೇ ವೈದಿಕ ವಿಧಾನದಲಿ
ಸಸಿನವೇ ನಿನ್ನರಿತ ಖಳರಿಗೆ
ಹುಸಿಕರಿಗೆ ಡಂಬಕರಿಗಜ್ಞರಿ
ಗುಸುರುವಾ ನಿನ್ನಂತರಂಗವನೆಂದನಾ ಮುನಿಪ ೩೨

ಹುರುಡಿಗರನೇಕಾಂತದೊಳಗಾ
ದರಿಸುವರು ಭೇದಕರ ಬುದ್ಧಿಗೆ
ತೆರಹುಗೊಡುವರು ಕುಟಿಲರಿಗೆ ವಿಶ್ವಾಸಹೀನರಿಗೆ
ಮರುಳುಗೊಂಬರು ಖೂಳರಿಗೆ ಭಂ
ಡರಿಗೆ ತೆರುವರು ಧನವನೀ ಧರೆ
ಯರಸುಗಳಿಗಿದು ಸಹಜ ನಿನ್ನಂತಸ್ಥವೇನೆಂದ ೩೩

ಒಳಗೆ ಕುಜನರು ಹೊರಗೆ ಧರಣೀ
ವಳಯಮಾನ್ಯರು ಛತ್ರಚಮರದ
ನೆಳಲು ಖೂಳರಿಗಾತಪದ ಬಲುಬೇಗೆ ಬುಧಜನಕೆ
ಒಳಗೆ ರಾಜದ್ರೋಹಿಗಳು ಹೊರ
ವಳಯದಲಿ ಪತಿಕಾರ್ಯನಿಷ್ಠರು
ಬಳಸಿಹುದು ನೃಪಚರಿತ ನಿನ್ನಂತಸ್ಥವೇನೆಂದ ೩೪

ಖೂಳರೊಡನೆ ವಿನೋದ ಭಂಡರೊ
ಳಾಳಿ ಸ್ವಾಮಿದ್ರೋಹರೊಡನೆ ಸ
ಮೇಳ ನಂಬುಗೆ ಡಂಭರೊಡನೆ ವಿಕಾರಿಯೊಡನಾಟ
ಸೂಳೆಯರು ಸಮಜೀವಿಗಳು ಕುಲ
ಬಾಲಕಿಯರೋಗಡಿಕೆಯವರು ನೃ
ಪಾಲಜನಕಿದು ಸಹಜ ನಿನ್ನಂತಸ್ಥವೇನೆಂದ ೩೫

ಆರು ಗುಣದೊಳುಪಾಯ ನಾಲ್ಕರೊ
ಳೇರಿಹುದೆ ಮನ ರಾಜಧರ್ಮದ
ಮೂರುವರ್ಗದೊಳೆಚ್ಚರುಂಟೇ ನಯವಿಧಾನದಲಿ
ಮೂರು ಶಕ್ತಿಗಳೊಳಗೆ ಮನ ಬೇ
ರೂರಿಹುದೆ ಸಪ್ತಾಂಗದಲಿ ಮೈ
ದೋರಿಹೈ ಬೇಸರೆಯೆಲೇ ಭೂಪಾಲ ನೀನೆಂದ ೩೬

ಪ್ರಜೆಗಳನುರಾಗಿಗಳೆ ಸುಭಟ
ವ್ರಜಕೆ ಜೀವಿತ ಸಂದಿಹುದೆ ವರ
ಸುಜನರಿಗೆ ಸಂತೋಷವೇ ಮಧುರೋಕ್ತಿ ರಚನೆಯಲಿ
ವಿಜಯ ಭೀಮರು ಯಮಳರಿವರ
ಗ್ರಜರೊಳನುಜರಭಿನ್ನರೇ ಗಜ
ಬಜಿಕೆಯಂತಃಪುರದೊಳಿಲ್ಲಲೆ ರಾಯ ಕೇಳೆಂದ ೩೭

ವಿಹಿತಕಾಲದ ಮೇಲೆ ಸಂಧಿಯ
ನಹಿತರೊಳು ವಿರಚಿಸುವ ಮೇಣ್ವಿ
ಗ್ರಹದ ಕಾಲಕೆ ವಿಗಡಿಸುವುದೆಂಬರಸು ನೀತಿಯಲಿ
ವಿಹಿತವೇ ಮತಿ ವೈರಿ ರಾಯರ
ವಿಹರಣವನವರಾಳು ಕುದುರೆಯ
ಬಹಳತೆಯನಲ್ಪತೆಯನರಿವೈ ರಾಯ ನೀನೆಂದ ೩೮

ಒಂದರಾಯಕೆ ಬೀಯ ಸರಿ ಮ
ತ್ತೊಂದು ಕಡೆಯಲಿ ಹೀನ ಫಲವಿ
ನ್ನೊಂದು ಕಾರ್ಯದುಪೇಕ್ಷತೆಗೆ ಮೊದಲಿಲ್ಲ ಕಡೆಯಿಲ್ಲ
ಒಂದು ದುರ್ಘಟ ದೈವ ಸಾಧಿತ
ವೊಂದು ಶಂಕಿತ ಫಲವೆನಿಪ್ಪವ
ಹಿಂದುಗಳೆವೈ ಮಂತ್ರದಲಿ ಭೂಪಾಲ ಕೇಳೆಂದ ೩೯

ನೆನೆದ ಮಂತ್ರವ ನಿನ್ನೊಳಾಲೋ
ಚನೆಯ ನಿಶ್ಚಯವಿಲ್ಲದಿರಲೊ
ಬ್ಬನಲಿ ಮೇಣ್ ಹಲಬರಲಿ ಜಡರಲಿ ಮತಿವಿಹೀನರಲಿ
ಮನಬರಡರಲಿ ಸಲೆ ವಿಧಾವಂ
ತನಲಿ ಮಂತ್ರಾಲೋಚನೆಯ ಸಂ
ಜನಿಸಿ ಹರಹಿನೊಳಳಿಯೆಲೇ ಭೂಪಾಲ ಕೇಳೆಂದ ೪೦

ಕಿರಿದುಪೇಕ್ಷೆಯ ಬಹಳ ಫಲವನು
ಹೊರೆವುದಿದು ಮೇಣಲ್ಪಭೇದಕೆ
ಮುರಿವುದಿದು ವಿಕ್ರಮಕೆ ವಶವಿದು ನೀತಿಸಾಧ್ಯವಿದು
ಹರಿವುದಿದು ನಯ ಶಕ್ತಿಗೆಂಬುದ
ನರಿದು ನಡೆವೈ ರಾಜಧರ್ಮದ
ಹೊರಿಗೆಯನು ಮರೆದಿರೆಯೆಲೇ ಭೂಪಾಲ ಕೇಳೆಂದ ೪೧

ಪರರು ಮಾಡಿದ ಸದ್ಗುಣಂಗಳ
ಮರೆಯೆಯಲೆ ಪರರವಗುಣಂಗಳ
ಮರೆದು ಕಳೆವಾ ಮಾನ್ಯರಿಗೆ ನೀ ಮಾಡಿದವಗುಣವ
ಮೆರೆಯೆಯಲೆ ನೀ ಮಾಡಿದುಚಿತವ
ಮರೆದು ಕಳೆವಾಚಾರವಿದು ಸ
ತ್ಪುರುಷರಭಿಮತವಿದು ಕಣಾ ಭೂಪಾಲ ಕೇಳೆಂದ ೪೨

ಭಜಿಸುವಾ ಭಕ್ತಿಯಲಿ ದೈವ
ದ್ವಿಜ ಗುರುಸ್ಥಾನವನು ದೇಶ
ಪ್ರಜೆಯನರ್ಥಾಗಮದ ಗಡಣೆಗೆ ಘಾಸಿ ಮಾಡೆಯೆಲೆ
ಕುಜನರಭಿಮತಮಗ್ರ ದಂಡ
ವ್ಯಜನದಲಿ ಜನ ಜಠರ ವಹ್ನಿಯ
ಸೃಜಿಸೆಯೆಲೆ ಭವದೀಯ ರಾಜ್ಯಸ್ಥಿತಿಯ ಹೇಳೆಂದ ೪೩

ಆಣೆಗಪಜಯವಿಲ್ಲಲೇ ಕೀ
ಳಾಣೆ ಟಂಕದೊಳಿಲ್ಲಲೇ ನಿ
ತ್ರಾಣದಲಿ ಸಂಗರವ ಹೊಗೆಯೆಲೆ ಶೌರ್ಯ ಗರ್ವದಲಿ
ವಾಣಿಯವನುಚಿತದಲಿ ಧರ್ಮದ
ಲೂಣೆಯವನಹಿತರಲುಪೇಕ್ಷೆಯ
ಕೇಣವನು ದಾನದಲಿ ಮಾಡೆಲೆ ರಾಯ ಕೇಳೆಂದ ೪೪

ಕಳವು ಪುಸಿ ಹಾದರ ವಿರೋಧ
ಸ್ಖಲಿತವಾರಡಿಬಂದಿ ದಳವುಳ
ಬೆಳಗವಿತೆಯನ್ಯಾಯ ಪರಿಭವ ಠಕ್ಕು ಡೊಳ್ಳಾಸ
ಪಳಿವು ವಂಚನೆ ಜಾತಿ ಸಂಕರ
ಕೊಲೆ ವಿರೋಧವು ವಿಕೃತ ಮಾಯಾ
ವಳಿಗಳೆಂಬಿವು ನಿನ್ನೊಳಿಲ್ಲಲೆ ರಾಯ ಕೇಳೆಂದ ೪೫

ರಣಮುಖದೊಳಂಗನೆಯೊಳಾರೋ
ಗಣೆಯಲರಿಗಳ ಕೂಟದಲಿ ವಾ
ರಣ ತುರಗದೇರಾಟದಲಿ ವಿವಿಧಾಯುಧಂಗಳಲಿ
ಎಣೆ ನೃಪರ ಸೋಂಕಿನಲಿ ಸೆಜ್ಜೆಯ
ಲಣಿಯ ಮಜ್ಜನದಲಿ ಮಹಾಮೃಗ
ಗಣನೆಯೊಳಗೆಚ್ಚರಿಕೆಯುಂಟೇ ರಾಯ ನಿನಗೆಂದ ೪೬

ನುಡಿದೆರಡನಾಡದಿರು ಕಾರ್ಯವ
ಬಿಡದಿರಾವನೊಳಾದರೆಯು ನಗೆ
ನುಡಿಯ ಕುಂದದಿರೊಡೆಯದಿರು ಹೃದಯವನು ಕಪಟದಲಿ
ಬಡಮನವ ಮಾಡದಿರು ಮಾರ್ಗದೊ
ಳಡಿಯಿಡದಿರನುಜಾತ್ಮಜರೊಳೊ
ಗ್ಗೊಡೆಯದಿರು ನೃಪನೀತಿಯಿದು ಭೂಪಾಲ ಕೇಳೆಂದ ೪೭

ನೀತಿವಿಡಿದರಸಂಗೆ ಬಹಳ
ಖ್ಯಾತವದು ಜನರಾಗ ರಾಗ
ವ್ರಾತದಿಂ ಧನ ಧನದಿ ಪರಿಕರ ಪರಿಕರದಿ ಜಯವು
ಆತ್ತ ಜಯದಿಂ ಧರ್ಮ ಧರ್ಮ ಸ
ಮೇತದಿಂ ಸುರತುಷ್ಟಿ ತುಷ್ಟಿಯ
ನೀತಿಯಿಂದಿಹಪರವ ಗೆಲುವೈ ರಾಯ ನೀನೆಂದ ೪೮

ಮಂತ್ರವುಳ್ಳವನವನೆ ಹಿರಿಯನು
ಮಂತ್ರವುಳ್ಳವನವನೆ ರಾಯನು
ಮಂತ್ರವುಳ್ಳವನವನೆ ಸಚಿವ ನಿಯೋಗಿಯೆನಿಸುವನು
ಮಂತ್ರವಿಲ್ಲದ ಬರಿಯ ಬಲು ತಳ
ತಂತ್ರದಲಿ ಫಲವಿಲ್ಲವೈ ಸ್ವಾ
ತಂತ್ರವೆನಿಸಲ್ಕರಿವುದೇ ಭೂಪಾಲ ಕೇಳೆಂದ ೪೯

ಸತ್ಯವುಳ್ಳರೆ ಧರಣಿ ಸಾರುಗು
ಸತ್ಯವುಳ್ಳರೆ ಪದವಿ ಸಾರುಗು
ಸತ್ಯವುಳ್ಳರೆ ಸಕಲರಾಜ್ಯದ ವೀರಸಿರಿ ಸಾರ್ಗು
ಸತ್ಯವೇ ಬೇಹುದು ನೃಪರಿಗಾ
ಸತ್ಯ ಭುಜಬಲಗೂಡಿ ಮಂತ್ರದ
ಸತ್ಯವೇ ಸತ್ವಾಧಿಕವು ಭೂಪಾಲ ಕೇಳೆಂದ ೫೦

ಮೇಲನರಿಯದ ನೃಪನ ಬಾಳಿಕೆ
ಗಾಳಿಗೊಡ್ಡಿದ ಸೊಡರು ನೀರವ
ಜಾಲದೊಡ್ಡಣೆ ಸುರಧನುವಿನಾಕಾರ ಶವದುಡಿಗೆ
ಬಾಳಿಗೌಕಿದ ಕೊರಳು ಭುಜಗನ
ಹೇಳಿಗೆಯಲಿಕ್ಕಿದ ಕರವು ಬೆ
ಳ್ಳಾರ ಹೆಬ್ಬುಗೆಯವನ ಸಿರಿ ಭೂಪಾಲ ಕೇಳೆಂದ ೫೧

ಆಯವಿಲ್ಲದ ಬೀಯವನು ಪೂ
ರಾಯವಿಲ್ಲದ ಗಾಯವನು ನಿ
ರ್ದಾಯವಿಲ್ಲದ ಮಂತ್ರವನು ಲೇಸಾಗಿ ಮಿಗೆ ರಚಿಸಿ
ನ್ಯಾಯವಿಲ್ಲದ ನಡವಳಿಯನ
ನ್ಯಾಯ ಹೊದ್ದುವ ಪಾತಕವ ನಿಜ
ಕಾಯದಲಿ ನೀ ಧರಿಸೆಯೆಲೆ ಭೂಪಾಲ ಕೇಳೆಂದ ೫೨

ಫಲವಹುದ ಕೆಡಲೀಯದಳಿ ಪರಿ
ಮಳವ ಕೊಂಬಂದದಲೆ ನೀನಾ
ಳ್ವಿಳೆಯ ಕರದರ್ಥವನು ತೆಗೆವೈ ಪ್ರಜೆಯ ನೋಯಿಸದೆ
ಹಲವು ಸನ್ಮಾನದಲಿ ನಯದಲಿ
ಚಲಿಸದಿಪ್ಪಂದದಲಿ ರಾಜ್ಯವ
ನಿಲಿಸುವಭಿಮತ ಮಂತ್ರಿಯುಂಟೇ ರಾಯ ನಿನಗೆಂದ ೫೩

ಸೂಕರನ ತುಂಬಿಯ ಮರಾಳನ
ಭೇಕವೈರಿಯ ಕಾರುರಗ ಕಪಿ
ಕೋಕಿಲನ ಬರ್ಹಿಯ ಸುಧಾಕಿರಣನ ದಿನಾಧಿಪನ
ಆಕಸದ ದರ್ಪಣದ ಬಕ ರ
ತ್ನಾಕರನಲೊಂದೊಂದುಗುಣವಿರ
ಬೇಕು ನೃಪರಿಗೆ ನಿನ್ನೊಳುಂಟೇ ರಾಯ ಹೇಳೆಂದ ೫೪

ನೆಚ್ಚದಿರು ಸಿರಿಯನು ವೃಥಾ ಮದ
ಗಿಚ್ಚಿನುರಿಯಲಿ ಬೇಯದಿರು ಮಿಗೆ
ಬೆಚ್ಚಿ ಬೆದರದಿರೆರಡರಲಿ ಸತ್ಯವನು ಚಲಿಸದಿರು
ಮೆಚ್ಚದಿರಸತ್ಯವನು ಗುಣವನು
ಮುಚ್ಚದಿರು ಅಪಕೀರ್ತಿನಾರಿಯ
ಮೆಚ್ಚದಿರು ಮರುಳಾಗದಿರು ಭೂಪಾಲ ಕೇಳೆಂದ ೫೫

ಹಲವು ವಿನಿಯೋಗದಲಿ ಸುದತಿಯ
ರೊಲುಮೆಯಲಿ ಸಕಲಾಂಗದಲಿ ನಿ
ಸ್ಖಲಿತ ನಿಜವನೆ ಧರಿಸುವಾಶ್ರಮ ವರ್ಣಭೇದದಲಿ
ಹಳಿವು ನಿಗಾವಂಗದಲಿ ಬಳಿ
ಸಲಿಸದಲೆ ಪರತತ್ತ್ವದಲಿ ವೆ
ಗ್ಗಳಿಸದಲೆ ವೈರಾಗ್ಯಮತ ಭೂಪಾಲ ನಿನಗೆಂದ ೫೬

ಪರಿಜನಕೆ ದಯೆಯನು ಪರಸ್ತ್ರೀ
ಯರಲಿ ಭೀತಿಯ ಹಗೆಗಳಲಿ ನಿ
ಷ್ಕರುಣತೆಯ ಬಡವರಲಿ ದಾನವ ದೈವ ಗುರು ದ್ವಿಜರ
ಚರಣಸೇವೆಯಲಾರ್ತತೆಯ ಪಿಸು
ಣರ ನುಡಿಗಳಲಿ ಮೂರ್ಖತೆಯ ನೀ
ವಿರಚಿಪೆಯೊ ಬೇಸರುವೆಯೋ ಭೂಪಾಲ ಕೇಳೆಂದ ೫೭

ಮೋಹದವಳಲಿ ವೈದ್ಯರಲಿ ಮೈ
ಗಾಹಿನವರಲಿ ಬಾಣಸಿಗರಲಿ
ಬೇಹ ಮಂತ್ರಿಗಳಲಿ ವಿಧಾವಂತರಲಿ ಹಿರಿಯರಲಿ
ದೇಹರಕ್ಷಕರಲಿ ಸದೋದಕ
ವಾಹಿಯಲಿ ಹಡಪಾಳಿಯಲಿ ಪ್ರ
ತ್ಯೂಹವನು ವಿರಚಿಸೆಯಲೇ ಭೂಪಾಲ ಕೇಳೆಂದ ೫೮

ತರುಣಿಯಲಿ ಹಗೆಗಳಲಿ ಬಹಳೈ
ಶ್ವರಿಯದಲಿ ಶಸ್ತ್ರಾಂಗಿಯಲಿ ಸಂ
ಸ್ತರಣದಲಿ ಮದ್ಯಪನಲಬಲಾರ್ಥಿಯಲಿ ಶೃಂಗಿಯಲಿ
ಉರಗನಲಿ ನದಿಯಲಿ ಸಖಿಯರಾ
ತುರಿಯದಲಿ ದುರ್ಮಂತ್ರಿಯಲಿ ದು
ಶ್ಚರಿತನಲಿ ವಿಶ್ವಾಸಿಸೆಯಲೇ ಭೂಪ ಕೇಳೆಂದ ೫೯

ಢಾಳರನು ಢವಳರನು ಠಕ್ಕಿನ
ಠೌಳಿಕಾರರ ಕೃತಕ ಮಾಯಾ
ಜಾಲರನು ಕಾಹುರರನಂತರ್ವಾಹಕರ ಶಠರ
ಖೂಳರನು ಖಳರನು ವಿಕಾರಿಯ
ಜಾಳು ನುಡಿಗಳ ಜಡಮತಿಯನೀ
ನಾಳಿಗೊಂಬೆಯೊ ಲಾಲಿಸುವೆಯೊ ರಾಯ ಹೇಳೆಂದ ೬೦

ಆವಕಾಲದೊಳಾವಕಾರ್ಯವ
ದಾವನಿಂದಹುದವನ ಮನ್ನಿಪ
ಠಾವಿದೆಂಬುದನರಿದಿಹೈ ಮೃಗಜೀವಿಯಂದದಲಿ
ಲಾವಕರ ನುಡಿ ಕೇಳಿ ನಡೆದರೆ
ಭೂವಳದೇಕಾಧಿಪತ್ಯದ
ಠಾವು ಕೆಡುವುದನರಿದಿಹೈ ಭೂಪಾಲ ಕೇಳೆಂದ ೬೧

ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನ
ನೆರವಿ ಬಡವರ ಭಿನ್ನಪವನಿನ್ನಾರು ಕೇಳುವರು
ಉರಿವುರಿವುತಿದೆ ದೇಶ ನಾವಿ
ನ್ನಿರಲು ಬಾರದೆನುತ್ತ ಜನ ಬೇ
ಸರಿನ ಬೇಗೆಯಲಿರದಲೇ ಭೂಪಾಲ ಕೇಳೆಂದ ೬೨

ಧನದುಲುರು ಧಾನ್ಯದಲಿ ನೆರೆದಿಂ
ಧನದಲುದಕದ ಹೆಚ್ಚುಗೆಯಲಂ
ಬಿನಲಿ ಶಸ್ತ್ರೌಘದಲಿ ಶಿಲ್ಪಿಯ ವರ ಶಿಲಾಳಿಯಲಿ
(ಬಿನಲಿ ಶಸ್ತ್ರೌಘದಲಿ ಶಿಲ್ಪಿಗಳ ಶಿಲಾಳಿಯಲಿ - ಪಾ)
ವನವಳಯ ಕೋಟಾವಳಯ ಜೀ
ವನವಳಯ ಗಿರಿವಳಯ ದುರ್ಗಮ
ವೆನಿಪ ದುರ್ಗಾವಳಿ ಸಮಗ್ರವೆ ಭೂಪ ಕೇಳೆಂದ ೬೩

ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ
ಪಸರಿಸುವುದಾ ಕೃಷಿಯನುದ್ಯೋ
ಗಿಸುವ ಜನವನು ಪಾಲಿಸುವುದಾ ಜನಪದವ ಜನದಿ
ವಸು ತೆರಳುವುದು ವಸುವಿನಿಂ ಸಾ
ಧಿಸುವಡಾವುದಸಾಧ್ಯವದರಿಂ
ಕೃಷಿವಿಹೀನನ ದೇಶವದು ದುರ್ದೇಶ ಕೇಳೆಂದ ೬೪

ಸತಿಯರೊಲುಮೆಯ ವಿಟರುಗಳನಾ
ಸತಿಯರ ಸ್ಥಿತಿಗತಿಗೆ ತಾನೆಂ
ದತಿಶಯೋಕ್ತಿಯ ನುಡಿವವರನರಮನೆಯ ಕಾಹಿಂಗೆ
ಪತಿಕರಿಸಿದರೆ ಜಗವರಿಯಲಾ
ಕ್ಷಿತಿಪರಭಿಮಾನವು ಮುಹೂರ್ತಕೆ
ಗತವಹುದು ನೀನರಿದಿಹೈ ಭೂಪಾಲ ಕೇಳೆಂದ ೬೫

ಖಡುಗ ಧಾರೆಯ ಮಧು ಮಹಾಹಿಯ
ಹೆಡೆಯ ಮಾಣಿಕ ವಜ್ರದಿಂ ಬಿಗಿ
ದೊಡಲಿಗೊಡ್ಡಿದ ಸುರಗಿ ಕಡುಗೆರಳಿದ ಮೃಗಾಧಿಪನ
ನಡುಗುಹೆಯೊಳಿಹ ಸುಧೆಯ ಘಟವೀ
ಪೊಡವಿಯೊಡೆತನ ಸದರವೇ ಕಡು
ಬಡವರಿಗೆ ದೊರೆಕೊಂಬುದೇ ಭೂಪಾಲ ಕೇಳೆಂದ ೬೬

ಮಗಗೆ ಮುನಿವನು ತಂದೆ ತಂದೆಗೆ
ಮಗ ಮುನಿವನೊಡಹುಟ್ಟಿದರು ಬಲು
ಪಗೆ ಕಣಾ ತನ್ನೊಳಗೆ ಭೂಪರ ಕುಲದ ವಿದ್ಯವಿದು
ಬಗೆಯ ನಿನ್ನೊಡಹುಟ್ಟಿದರು ಮಂ
ತ್ರಿಗಳೊಳಾಪ್ತರಖಿನ್ನರೇ ದಾ
ಯಿಗರೊಳಂತರ್ಬದ್ಧವುಂಟೇ ರಾಯ ನಿನಗೆಂದ ೬೭

ಮಲೆವ ರಾಯರ ಬೆನ್ನ ಕಷ್ಟವ
ನಲಗಿನಲಿ ಕೊಂಡಾಂತ ಮನ್ನೆಯ
ಕುಲದ ತಲೆ ಚೆಂಡಾಡಿ ಗಡಿಗಳ ದುರ್ಗದಲಿ ತನ್ನ
ಬಲು ಸಚಿವರನು ನಿಲಿಸಿ ತಾ ಪುರ
ದಲಿ ವಿನೋದದಲಿರುತ ಹರುಷದ
ಲಿಳೆಯ ಪಾಲಿಸುವವನರಸು ಭೂಪಾಲ ಕೇಳೆಂದ ೬೮

ಮನ್ನಣೆಯೊಳಲ್ಪತೆಯ ನುಡಿಯೊಳ
ಗುನ್ನತಿಯನೆಸಗುವುದು ಪರರಿಗೆ
ತನ್ನವರಿಗುಗ್ಗಡದ ಪರಿಕರಣೆಯನು ಮಾತಿನಲಿ
ಭಿನ್ನವನು ತೋರುವುದು ರಾಯರ
ಗನ್ನಗತಕ ಕಣಾ ವಿಪುಳ ಸಂ
ಪನ್ನಮತಿ ನಿನಗುಂಟೆ ಭೂಮೀಪಾಲ ಕೇಳೆಂದ ೬೯

ಧನದಿ ಪಂಡಿತರಶ್ವತತಿಯಾ
ಧನದಿ ಧಾರುಣಿ ಮಾನ ಮೇಣಾ
ಧನದಿ ಕಾಂತೆಯರಖಿಳ ವಸ್ತುಗಳೈದೆ ಸೇರುವುದು
ನೆನಹು ತೃಪ್ತಿಯೊಳೈದದದರಿಂ
ಧನವೆ ಸಾಧನವರಸಿಗಾ ಧನ
ವನಿತು ದೊರಕೊಳಲಿದಿರದಾರೈ ಧಾತ್ರಿಪತಿಗಳಲಿ ೭೦

ಶೂರ ಧೀರನುದಾರ ಧರ್ಮೋ
ದ್ಧಾರ ವಿವಿಧ ವಿಚಾರ ಸುಜನೋ
ದ್ಧಾರ ರಿಪುಸಂಹಾರ ಚತುರೋಪಾಯ ಸಾಕಾರ
ಸಾರಮಂತ್ರ ವಿಚಾರ ಭುವನಾ
ಧಾರ ಸುಜನಸ್ವಾಮಿ ಕಾರ್ಯಾ
ಗಾರನೆನಿಸುವ ಮಂತ್ರಿಯುಂಟೇ ರಾಯ ನಿನಗೆಂದ ೭೧

ತಿಳಿದವನ ಮತಿವಿದನ ಭಾಷಾ
ವಳಿ ಲಿಪಿಜ್ಞನ ಸಾಕ್ಷರಿಕ ಮಂ
ಡಲಿಕ ಸಾವಂತರನಶೇಷರನಿಂಗಿತವನರಿತು
ಸಲೆ ಕರೆವ ಕಳುಹಿಸುವ ನಿಲಿಸುವ
ಬಲುಹನುಳ್ಳನ ಸುಕೃತ ದುಷ್ಕೃತ
ಫಲಿತ ಕಾರ್ಯಕೆ ಮಂತ್ರಿಯುಂಟೇ ರಾಯ ನಿನಗೆಂದ ೭೨

ಜರೆ ನರೆಯ ಮೈಸಿರಿಯ ಕುಲವೃ
ದ್ಧರನು ಹೀನಾಂಗರನು ಹಿಂಸಾ
ಚರಿತರನು ಜಾತ್ಯಂಧರನು ಧನದಾಸೆಯಳಿದವರ
ಅರಮನೆಯ ಸಂರಕ್ಷಣಾರ್ಥದೊ
ಳಿರಿಸಿದರೆ ಮಾನೋನ್ನತಿಕೆ ವಿ
ಸ್ತರಣವಹುದಿದನರಿದಿಹೈ ಭೂಪಾಲ ಕೇಳೆಂದ ೭೩

ಗುಳಿತೆವರನೀಕ್ಷಿಸುತ ಬಟ್ಟೆಯ
ಮೆಳೆ ಮರಂಗಳ ಹೊಯ್ಲ ತಪ್ಪಿಸಿ
ನೆಳಲನರಸುತ ವೇಗಗತಿ ಸಾಮಾನ್ಯಗತಿಗಳಲಿ
ಬಳಿವಿಡಿದು ಭೂಭುಜರ ಯಾನಂ
ಗಳೊಳಗಳುಕದೆ ಧಗೆಯ ಸೈರಿಸಿ
ಬಳಸುವವನೇ ಛತ್ರಧಾರಕನರಸ ಕೇಳೆಂದ ೭೪

ಬೇಸರದೆ ಕಾಳೋರಗನನ
ಡ್ಡೈಸಿ ಕಟ್ಟಿರುವೆಗಳು ಮಿಗೆ ವೇ
ಡೈಸಿ ಕಡಿದರೆಯಟ್ಟುವಂದದಲಹಿತ ಬಲದೊಳಗೆ
ಓಸರಿಸದೊಳಹೊಕ್ಕು ಸಮರ ವಿ
ಳಾಸವನು ನೆರೆ ಮೆರೆದು ಕೇಶಾ
ಕೇಶಿಯಲಿ ಹಿಡಿದಿರಿವವನೆ ಕಾಲಾಳು ಕೇಳೆಂದ ೭೫

ಬಿಟ್ಟ ಸೂಠಿಯಲರಿನೃಪರ ನೆರೆ
ಯಟ್ಟಿ ಮೂದಲಿಸುತ್ತ ಮುಂದಣ
ಥಟ್ಟನೊಡೆಹಾಯ್ದಹಿತ ಬಲದೊಳಗಾನೆವರೆವರಿದು
ಹಿಟ್ಟುಗುಟ್ಟುತ ಹೆಣನ ಸಾಲುಗ
ಳೊಟ್ಟು ಮೆರೆಯಲು ಕಳನ ಚೌಕದ
ಲಟ್ಟಿಯಾಡಿಸಬಲ್ಲವನೆ ರಾವುತನು ಕೇಳೆಂದ ೭೬

ಹೆಬ್ಬಲವನೊಡತುಳಿದು ಧರಣಿಯ
ನಿಬ್ಬಗಿಯ ಮಾಡಿಸುತ ಪಾಯ್ದಳ
ದೊಬ್ಬುಳಿಯ ಹರೆಗಡಿದು ಕಾದಿಸುತಾನೆಗಳಮೇಲೆ
ಬೊಬ್ಬಿರಿದು ಶರಮಳೆಯ ಕರೆವುತ
ಲಬ್ಬರಿಸಿ ಬವರದಲಿ ರಿಪುಗಳಿ
ಗುಬ್ಬಸವನೆಸಗುವನೆ ಜೋಧನು ರಾಯ ಕೇಳೆಂದ ೭೭

ಒಂದುಕಡೆಯಲಿ ದಳ ಮುರಿದು ಮ
ತ್ತೊಂದು ದಿಕ್ಕಲಿ ಮನ್ನೆಯರು ಕವಿ
ದೊಂದು ದೆಸೆಯಲಿ ಬಲದೊಳೊಂದನೆಯಧಿಕಬಲವೆನಿಸಿ
ಬಂದು ಸಂತಾಪದಲಿ ಕಾಳಗ
ದಿಂದ ಪುರಳಲಿ ನಿಂದು ಕರಿಕರಿ
ಗುಂದುವ ಕ್ಷಿತಿಪಾಲನೇ ಭೂಪಾಲ ಕೇಳೆಂದ ೭೮

ಕುದುರೆಗಳನಾರೈದು ರಥವನು
ಹದುಳಿಸುತ ಸಾರಥಿಯನೋವುತ
ಲಿದಿರ ಮುರಿವುತ ತನ್ನ ಕಾಯಿದುಕೊಳುತ ಕೆಲಬಲನ
ಸದೆದು ಮರಳುವ ಲಾಗುವೇಗದ
ಕದನ ಕಾಲಾನಲನವನು ತಾ
ಮೊದಲಿಗನಲೈ ರಥಿಕರಿಗೆ ಭೂಪಾಲ ಕೇಳೆಂದ ೭೯

ದೊರೆಯ ಕಾಣುತ ವಂದಿಸುತ್ತಂ
ಕರಿಸುತಂತರಿಸುತ್ತ ಮಿಗೆ ಹ
ತ್ತಿರನೆನಿಸದತಿ ದೂರನೆನಿಸದೆ ಮಧ್ಯಗತನೆನಿಸಿ
ಪರಿವಿಡಿಯಲೋಲೈಸುತರಸನ
ಸಿರಿಮೊಗವನೀಕ್ಷಿಸುತ ಬೆಸೆಸಲು
ಕರಯುಗವನಾನುವನೆ ಸೇವಕನರಸ ಕೇಳೆಂದ ೮೦

ನರಕ ಕರ್ಮವ ಮಾಡಿಯಿಹದೊಳು
ದುರಿತಭಾಜನರಾಗಿ ಕಡೆಯಲಿ
ಪರಕೆ ಬಾಹಿರರಾಗಿ ನಾನಾ ಯೋನಿಯಲಿ ಸುಳಿದು
ಹೊರಳುವರು ಕೆಲಕೆಲರು ಭೂಪರು
ಧರಿಸುವರಲೈ ರಾಜಧರ್ಮದ
ಹೊರಿಗೆಯನು ಮರೆದಿರೆಯಲಾ ಭೂಪಾಲ ಕೇಳೆಂದ ೮೧

ನೃಗನ ಭರತನ ದುಂದುಮಾರನ
ಸಗರನ ಪುರೂರನ ಯಯಾತಿಯ
ಮಗನ ನಹುಷನ ಕಾರ್ತವೀರ್ಯನ ನಳನ ದಶರಥನ
ಹಗಲಿರುಳು ವಲ್ಲಭರ ವಂಶದ
ವಿಗಡರಲಿ ಯಮಸೂನು ಸರಿಯೋ
ಮಿಗಿಲೊ ಎನಿಸುವ ನೀತಿಯುಂಟೇ ರಾಯ ನಿನಗೆಂದ ೮೨

ಆ ಮುನೀಂದ್ರನ ವಚನ ರಚನಾ
ತಾಮರಸ ಮಕರಂದ ಕೇಳಿಯ
ಲೀ ಮಹೀಶ ಮಧುವ್ರತ(ಕರಣ?)ವುಬ್ಬಿತೊಲವಿನಲಿ
ರೋಮ ಪುಳಕದ ರುಚಿರ ಭಾವ
ಪ್ರೇಮಪೂರಿತ ಹರುಷರಸದು
ದ್ದಾಮ ನದಿಯಲಿ ಮುಳುಗಿ ಮೂಡಿದನರಸ ಕೇಳೆಂದ ೮೩

ಎಲೆ ಮುನಿಯೆ ನೀವ್ ರಚಿದೀ ನಿ
ರ್ಮಳ ನೃಪಾಲ ನಯ ಪ್ರಪಂಚವ
ಬಳಸಿದೆನು ಕೆಲ ಕೆಲವನಿನ್ನುರೆ ಬಳಸುವೆನು ಕೆಲವ
ಇಳಿದು ಧರಣಿಗೆ ಸುಳಿದು ನೀತಿ
ಸ್ಖಲಿತ ಜಡರನು ತಿದ್ದಿ ತಿಳುಹುವ
ಸುಲಭತನದಲಿ ದೇವಮುನಿ ನಿನಗಾರು ಸರಿಯೆಂದ ೮೪

ಮುನಿಯೆ ಬಿನ್ನಹವಿಂದು ನೀವಿಂ
ದ್ರನ ವಿರಿಂಚಿಯ ಯಮನ ವರುಣನ
ಧನಪತಿಯ ಶೇಷನ ಸಭಾಮಧ್ಯದಲಿ ಸುಳಿವಿರಲೆ
ಇನಿತು ರಚನೆಗೆ ಸರಿಯೊ ಮಿಗಿಲೋ
ಮನುಜ ಯೋಗ್ಯಸ್ಥಾನವೋ ಮೇ
ಣೆನಲು ನಗುತೆಂದನು ಮುನೀಶ್ವರನಾ ಯುಧಿಷ್ಠಿರಗೆ ೮೫

ಜನಪ ಕೇಳುತ್ಸೇದ ಶತ ಯೋ
ಜನ ತದರ್ಧದೊಳಗಲದಳತೆಯಿ
ದೆನಿಪುದಿಂದ್ರಸ್ಥಾನವಲ್ಲಿಹುದಖಿಳ ಸುರನಿಕರ
ಜನಪರಲ್ಲಿ ಯಯಾತಿಯಾತನ
ಜನಕ ನೃಗ ನಳ ಭರತ ಪೌರವ
ರೆನಿಪರಖಿಳ ಕ್ರತುಗಳಲಿ ಸಾಧಿಸಿದರಾ ಸಭೆಯ ೮೬

ವೈದಿಕೋಕ್ತಿಗಳಲಿ ಹರಿಶ್ಚಂ
ದ್ರಾದಿಯರು (ಆ?) ರಾಜಸೂಯದೊ
ಳಾದರನಿಬರೊಳಗ್ಗಳೆಯರಿಂದ್ರಂಗೆ ಸರಿ ಮಿಗಿಲು
ಆದೊಡಾ ಪುರುಹೂತ ಸಭೆಯೋ
ಪಾದಿ ಯಮನಾಸ್ಥಾನವಲ್ಲಿ ವಿ
ಷಾದದಲಿ ನಿಮ್ಮಯ್ಯನಿಹನಾತನ ಸಮೀಪದಲಿ ೮೭

ವರುಣ ಸಭೆಯೊಳಗಿಹವು ಭುಜಗೇ
ಶ್ವರ ಸಮುದ್ರ ನದೀನದಾವಳಿ
ಗಿರಿ ತರು ವ್ರಜವೆನಿಪ ಸಂಖ್ಯಾರಹಿತ ವಸ್ತುಗಳು
ಅರಸ ಕೇಳು ಕುಬೇರ ಸಭೆಯಾ
ಪರಿಯಗಲವೆಂಭತ್ತು ಯೋಜನ
ಹರಸಖನ ಸಿರಿ ಸದರವೇ ಭೂಪಾಲ ಕೇಳೆಂದ ೮೮

ಬಗೆಯೊಳಗೆ ಮೊಳೆವುದು ಚತುರ್ದಶ
ಜಗವೆನಲು ಜಾವಳವೆ ತಸ್ಯೋ
ಲಗದ ಸಿರಿ ಪರಮೇಷ್ಟಿಗೇನರಿದೈ ಮಹೀಪತಿಯೆ
ಸುಗಮ ಗಾನಿಯರುಪನಿಷದ ವಿ
ದ್ಯೆಗಳು ವೇದಕ್ರತು ಪುರಾಣಾ
ದಿಗಳು ಬಿರುದಾವಳಿಯ ಪಾಠಕರಾತನಿದಿರಿನಲಿ ೮೯

ಮುನಿಗಳೇ ಮಾಣಿಯರು ಮಂತ್ರಾಂ
ಗನೆಯರೋಲೆಯಕಾತಿಯರು ಸುರ
ಜನವೆ ಕಿಂಕರಜನವು ಸೂರ್ಯಾದಿಗಳೆ ಸಹಚರರು
ಘನ ಚತುರ್ದಶ ವಿದ್ಯೆ ಪಾಠಕ
ಜನವಲೈ ಪಾಡೇನು ಪದುಮಾ
ಸನನ ಪರುಠವವಾ ಸಭೆಗೆ ಸರಿ ಯಾವುದೈ ನೃಪತಿ ೯೦

ಇನಿಬರಾಸ್ಥಾನದಲಿ ಸುಕೃತಿಗ
ಳೆನಿಪ ತೇಜಸ್ವಿಗಳು ಗಡ ಸುರ
ಮುನಿ ಹರಿಶ್ಚಂದ್ರಂಗೆ ಸೇರಿದ ಸುಕೃತ ಫಲವೇನು
ಜನಪನಪದೆಸೆಗೇನು ದುಷ್ಕೃತ
ವೆನಲು ನಕ್ಕನು ರಾಜಸೂಯದ
ಘನವನರಿಯಾ ಧರ್ಮನಂದನಯೆಂದನಾ ಮುನಿಪ ೯೧

ಈ ಮಹಾಕ್ರತುವರವ ನೀ ಮಾ
ಡಾಮಹೀಶ್ವರ ಪಂಕ್ತಿಯಲ್ಲಿ ನಿ
ರಾಮಯನು ನಿಮ್ಮಯ್ಯನಿಹನು ಸತೇಜದಲಿ ಬಳಿಕ
ಸೋಮವಂಶದ ರಾಯರೊಳಗು
ದ್ದಾಮರಹ ಬಲುಗೈ ಕುಮಾರ
ಸ್ತೋಮ ನೀವಿರಲಯ್ಯಗೇನರಿದೆಂದನಾ ಮುನಿಪ ೯೨

ಮುನಿಯ ಮಾತಿನ ಬಲೆಗೆ ಸಿಲುಕಿತು
ಜನಪತಿಯ ಚೈತನ್ಯಮೃಗವೀ
ತನ ವಚೋ ವರುಷದಲಿ ನೆನೆದವು ಕರಣವೃತ್ತಿಗಳು
ಮನದಲಂಕುರವಾಯ್ತು ನಾಲಿಗೆ
ಗೊನೆಯಲೆರಡೆಲೆಯಾಯ್ತು ಯಜ್ಞದ
ನೆನವು ಭಾರವಣೆಯಲಿ ಬಿದ್ದುದು ಧರ್ಮನಂದನನ ೯೩

ಕಳುಹಿದನು ಸುರಮುನಿಯ
ನುದರದೊಳಿಳಿದುದಂತಸ್ತಾಪ ಯಜ್ಞದ
ಬಲುಹ ನೆನೆದಡಿಗಡಿಗೆ ಕಂಪಿಸಿ ಕೈಯ ಗಲ್ಲದಲಿ
ಒಲೆದೊಲೆದು ಭಾವದಲಿ ಮಿಗೆ ಕಳ
ವಳಿಸಿ ಪದುಳಿಸಿಕೊಳುತ ಭೂಪತಿ
ತಿಲಕ ಚಿಂತಿಸಿ ನೆನೆವುತಿದ್ದನು ವೀರನರಯಣನ ೯೪

(ಸಂಗ್ರಹ: ಮಂಜುನಾಥ ಕೊಳ್ಳೇಗಾಲ)

Friday, January 8, 2010

ಆದಿಪರ್ವ: ೦೨. ಎರಡನೆಯ ಸಂಧಿ

ಸೂ. ರಾಯ ಜನಮೇಜಯಗೆ ವೈಶಂ
ಪಾಯನನು ಹೇಳಿದನು ಮುನಿ ದ್ವೈ
ಪಾಯನಭಿವರ್ಣಿಸಿದ ಭಾರತ ವರ ಕಥಾಮೃತವ

ಸೂತನೈತಂದನು ಜಗದ್ವಿ
ಖ್ಯಾತ ಶೌನಕಮುಖ್ಯ ಮುನಿ ಸಂ
ಘಾತ ಪಾವನ ನೈಮಿಶಾರಣ್ಯಕ ವರಾಶ್ರಮಕೆ
ಆತನನು ಕಂಡುದು ತಪಸ್ವಿ
ವ್ರಾತ ಕುಶಲಕ್ಷೇಮ ಮಧುರ
ಪ್ರೀತಿ ವಚನಾಮೃತದಿ ಸಂಭಾವನೆಯ ಮಾಡಿದರು ೧

ಪರಮಪೌರಾಣಿಕ ಶಿರೋಮಣಿ
ಬರವಿದೆತ್ತಣದಾಯ್ತು ಕೌತುಕ
ವರಕಥಾ ಪೀಯೂಷಸಾರ ವಿಶೇಷವೇನುಂಟು
ಚರಿತ ಚತುರಾಶ್ರಮ ತಪೋ ನಿ
ಷ್ಠರಿಗೆ ವಿಶ್ರಮವೈ ಭವಾದೃಶ
ದರುಶನವು ನಮಗೆಂದು ನುಡಿದರು ರೋಮಹರ್ಷಣಿಯ ೨

ವಂದಿಸಿದೆನೈ (ಪಾ: ವಂದಿಸಿದನೈ) ವರ ತಪೋಧನ
ವೃಂದ ಚಿತ್ತೈಸುವುದು ತಾನೇ
ನೆಂದು ನುಡಿವೆನು ಕೌತುಕಾಮೃತಸರದ ಕಡುಗಡಲ
ಹಿಂದೆ ಕೇಳಿದುದಲ್ಲ ಹೇಳ್ವುದು
ಮುಂದೆ ಹುಸಿ ವರ ನಿಗಮ ಶತವಿದ
ರೊಂದೊರೆಗೆ ಬರಲರಿಯದೆಂದನು ಸೂತ ಕೈಮುಗಿದು ೩

ಕೇಳಿದನು ಜನಮೇಜಯ ಕ್ಷಿತಿ
ಪಾಲಕನು ವರ ಸರ್ಪಯಜ್ಞ
ಸ್ಥೂಲ ಪಾಪವಿಘಾತಿಗೋಸುಗವೀ ಮಹಾಕಥೆಯ
ಕೇಳಿದೆನು ತಾನಲ್ಲಿ ಮುನಿಜನ
ಮೌಳಿ ಮಂಡಿತ ಚರಣಕಮಲ ವಿ
ಶಾಲ ವೇದವ್ಯಾಸಕೃತ ಭಾರತಕಥಾಮೃತವ ೪

ಹಾ ಮಹಾದೇವಾಯಿದೆಂತೈ
ರೋಮಹರ್ಷಣಿ ನಾವು ಮಾಡಿದ
ಸೋಮಪಾನಾದಿಗಳ ಪುಣ್ಯಸ್ತೋಮ ತರುಗಳಿಗೆ
ಈ ಮಹಾಭಾರತ ಕಥಾಮೃತ
ರಾಮಣೀಯಕ ಫಲವಲಾ ನಿ
ಸ್ಸೀಮ ಪುಣ್ಯರು ಧನ್ಯರಾವೆಂದುದು ಮುನಿಸ್ತೋಮ ೫

ಹೇಳು ಸಾಕೆಲೆ ಸೂತ ದುರಿತ
ವ್ಯಾಳ ವಿಷಜಾಂಗುಳಿಕವನು ನೀ
ಕೇಳಿದಂದದೊಳಂದು ಜನಮೇಜಯನ ಯಾಗದಲಿ
ಮೌಳಿಗಳಲಾನುವೆವು ನಿನ್ನಯ
ಹೇಳಿಕೆಯನೆನೆ ನಿಖಿಳ ಮುನಿಗಳ
ನೋಲಗಿಸುವೆನು ನಿಮ್ಮನುಜ್ಞೆಯಲೆಂದು ಕೈಮುಗಿದ ೬

ಸರ್ಪಯಜ್ಞದಲಾದ ದುರಿತದ
ದರ್ಪವನು ಕೆಡೆಬೀಳಲೊದೆಯಲು
ತರ್ಪಣಾದಿ ಕ್ರಿಯೆಗಳಲಿ ಸಾಮರ್ಥ್ಯವಿಲ್ಲೆಂದು
ದರ್ಪಕಾಹಿತ ಮೂರ್ತಿ ಮುನಿಮುಖ
ದರ್ಪಣನು ಶಿಷ್ಯನನು ಕರೆದು ಸ
ಮರ್ಪಿಸಿದನರಸಂಗೆ ವೇದವ್ಯಾಸಮುನಿರಾಯ ೭

ರಾಯ ಕೇಳೈ ನಿಮ್ಮ ಪಾಂಡವ
ರಾಯಚರಿತವನೆಂದು ವೈಶಂ
ಪಾಯನಿಗೆ ಬೆಸಸಿದನು ಕೊಟ್ಟನು ಬಳಿಕ ಪುಸ್ತಕವ
ರಾಯನತಿ ಭಕ್ತಿಯಲಿ ವೈಶಂ
ಪಾಯನಿಗೆ ವಂದಿಸಿ ನಿಜಾಭಿ
ಪ್ರಾಯವನು ಕೇಳಿದನು ಚಿತ್ತೈಸುವುದು ಮುನಿನಿಕರ ೮

ವಿತತ ಪುಸ್ತಕವನು ಸುಗಂಧಾ
ಕ್ಷತೆಯೊಳರ್ಚಿಸಿ ಸೋಮ ಸೂರ್ಯ
ಕ್ಷಿತಿ ಜಲಾನಲ ವಾಯು ಗಗನಾದಿಗಳಿಗಭಿನಮಿಸಿ
ಶತಮಖಾದಿ ಸಮಸ್ತ ದೇವ
ಪ್ರತತಿಗೆರಗಿ ಸರೋಜಭವ ಪಶು
ಪತಿಗಳಿಗೆ ಕೈಮುಗಿದು ವಿಮಲ ಜ್ಞಾನಮುದ್ರೆಯಲಿ ೯

ಮನದೊಳಾದ್ಯಂಪುರುಷಮೀಶಾ
ನನನು ಪುರುಹೂತ(ನ?) ಪುರಸ್ಕೃತ
ನನಘನೇಕಾಕ್ಷರ ಪರಬ್ರಹ್ಮನ ಸನಾತನನ
ದನುಜರಿಪು ಸುವ್ಯಕ್ತನವ್ಯ
ಕ್ತನನು ಸದಸದ್ರೂಪನವ್ಯಯ
ನೆನಿಪ ವಿಷ್ಣುವ ನೆನೆದು ಮುನಿ ವಿಸ್ತರಿಸಿದನು ಕಥೆಯ ೧೦

ವೇದ ನಾಲ್ಕದರಂಗವಾರ
ಷ್ಟಾದಶಾದಿ ಪುರಾಣ ಸ್ಮೃತಿಗಳೊ
ಳಾದಪೂರ್ವೋತ್ತರದ ಮೀಮಾಂಸದ ಪರಿಕ್ರಮದ
ವಾದ ವಿಲಸನ್ನ್ಯಾಯವನು ಶ
ಬ್ದೋದಧಿಯನಳವಡಿಸಿ ರಚಿಸಿದ
ಬಾದರಾಯಣನಂಘ್ರಿಯನು ಭಜಿಸಿದನು ಮನದೊಳಗೆ ೧೧

ಅರಸ ಕೇಳೈ ನಾರದಾದ್ಯರು
ಸರಸಿರುಹ ಸಂಭವನ ಸಭೆಯೊಳು
ವರಮಹಾಭಾರತವ ಕೊಂಡಾಡಿದರು ಭಕ್ತಿಯಲಿ
ವರ ಮಹತ್ವದಿ ಭಾರವತ್ವದಿ
ವರಮಹಾಭಾರತವಿದೊಂದೇ
ದುರಿತದುರ್ಗ ವಿಭೇದಕರವೀರೇಳು ಲೋಕದಲಿ ೧೨

ಹೇಳಿದನು ಪೌಲೋಮ ಚರಿತೋ
ದ್ಧಾಲಕಾಖ್ಯರ ಚರಿತವನು ಮುನಿ
ಹೇಳಿದನು ಫಣಿನಿಕರ ಗರುಡಾಸ್ತಿಕರ ಸಂಭವವ
ಮೇಲೆ ಬಳಿಕ ಪರೀಕ್ಷಿದವನೀ
ಪಾಲ ಶಾಪದ ಮರಣವನು ನೆರೆ
ಹೇಳಿದನು ಮುನಿಗಳಿಗೆ ಸರ್ಪಾಧ್ವರದ ಸಂಗತಿಯ ೧೩

ಕೇಳಿದನು ಜನಮೇಜಯಕ್ಷಿತಿ
ಪಾಲ ವೈಶಂಪಾಯನನು ತಾ
ಕೀಳು ದುರಿತಂಗಳಿಗೆ ಪ್ರಾಯಶ್ಚಿತ್ತ ರೂಪದಲಿ
ಕೇಳಿರೈ ಮುನಿನಿಕರವೀ ಕಲಿ
ಕಾಲದಲಿ ಫಲಿಸುವುದು ಲಕ್ಷ್ಮೀ
ಲೋಲ ನಾಮಸ್ತುತಿಮಹಾಭಾರತ ಕಥಾಶ್ರವಣ ೧೪

ರಾಯ ಚಿತ್ತೈಸೆಂದು ವೈಶಂ
ಪಾಯಮುನಿ ಹೇಳಿದನು ಕಮಲದ
ಳಾಯತಾಕ್ಷನ ಬಾಲಕೇಳಿ ವಿಧೂತ ಕಿಲ್ಬಿಷವ
ಕಾಯ ಕಲ್ಮಷಹರವಖಿಳ ನಿ
ಶ್ರೇಯಸದ ಸದ್ರೂಪುವಿನ ಸಂ
ದಾಯಕವ ನಿರ್ಮಲ ಮಹಾಭಾರತ ಕಥಾಮೃತವ ೧೫

ಆದಿ ಸೃಷ್ಟಿಯೊಳುದಿಸಿದರು ದ
ಕ್ಷಾದಿ ವಿಮಲ ನವಪ್ರಜೇಶ್ವರ
ರಾದರಂಬುಜಭವನ ಲೀಲಾಮಾತ್ರ ಸೂತ್ರದಲಿ
ಆದನವರೊಳಗತ್ರಿಮುನಿ ಬಳಿ
ಕಾದನಾ ಮುನಿಪತಿಗೆ ಜಗದಾ
ಹ್ಲಾದಕರ ಹಿಮಕಿರಣನಾತನಲಾಯ್ತು ಶಶಿವಂಶ ೧೬

ಸೋಮನಿಂ ಬುಧನಾ ಬುಧಂಗೆಯು
ಭೂಮಿಯಲ್ಲಿ ಪುರೂರವನು ಬಳಿ
ಕಾ ಮಹೀಪತಿಗೂರ್ವಶಿಯೊಳಾಯುಃ ಕುಮಾರಕನು
ಆ ಮಹೀಶಗೆ ನಹುಷ ನಹುಷಂ
ಗಾ ಮಹಾತ್ಮ ಯಯಾತಿ ಬಳಿಕೀ
ಸೋಮಕುಲವೆರಡಾಯ್ತು ಯದು ಪೂರುಗಳ ದೆಸೆಯಿಂದ ೧೭

ಯದುಪರಂಪರೆಯಿಂದ ಯಾದವ
ರುದಿಸಿದರು ಪೂರುವಿನ ದೆಸೆಯಿಂ
ದಿದುವೆ ಕೌರವ ವಂಶವಾಯ್ತು ಯಯಾತಿ ಪೌತ್ರರಲಿ
ವಿದಿತ ಪೂರ್ವೋತ್ತರದ ಯದು ವಂ
ಶದ ಕಥಾವಿಸ್ತಾರವನು ಹೇ
ಳಿದನು ದುಷ್ಯಂತನಲಿ ಶಾಕುಂತಲೆಯ ಕಥೆ ಸಹಿತ ೧೮

ಭರತನಾ ದುಷ್ಯಂತನಿಂದವ
ತರಿಸಿದನು ತತ್ಪೂರ್ವ ನೃಪರಿಂ
ಹಿರಿದು ಸಂದನು ಬಳಿಕ ಭಾರತವಂಶವಾಯ್ತಲ್ಲಿ
ಭರತಸೂನು ಸುಹೋತ್ರನಾತನ
ವರಕುಮಾರಕ ಹಸ್ತಿ ಹಸ್ತಿನ
ಪುರಿಗೆ ಹೆಸರಾಯ್ತಾತನಿಂದವೆ ನೃಪತಿ ಕೇಳೆಂದ ೧೯

ವರಕುಮಾರರ ಪಂಕ್ತಿಯಲಿ ಸಂ
ವರಣನಾತಗೆ ಸೂರ್ಯಪುತ್ರಿಗೆ
ಕುರು ಮಹೀಪತಿ ಜನಿಸಿದನು ಬಳಿಕಾಯ್ತು ಕುರುವಂಶ
ವರ ಪರಂಪರೆಯೋಳ್ ಪ್ರತೀಪನು
ಧರಣಿಪತಿಯಾತನಲಿ ಸಂತನು
ಧರೆಗಧೀಶ್ವರನಾಗಿ ಬೆಳಗಿದನರಸ ಕೇಳೆಂದ ೨೦

ಸರಸಿಜಾಸನ ಕೊಟ್ಟ ಶಾಪದಿ
ಯರಸಿಯಾದಳು ಗಂಗೆ ಬಳಿಕಿ
ಬ್ಬರಿಗೆ ಮಕ್ಕಳು ವಸುಗಳೆಂಟು ವಸಿಷ್ಠ ಶಾಪದಲಿ
ನಿರಪರಾಧಿಗಳೇಳು ಜನನಾಂ
ತರಕೆ ಮರಣವ ಕಂಡರುಳಿದಂ
ಗಿರವು ಭೂಲೋಕದಲಿ ಬಲಿದುದು ಭೀಷ್ಮನಾಮದಲಿ ೨೧

ಶಾಪ ಹಿಂಗಿತು ಸುರನದಿಗೆ ಬಳಿ
ಕಾ ಪರಾಕ್ರಮಿ ಭೀಷ್ಮ ಶಂತನು
ಭೂಪತಿಗೆ ಮಗನಾಗಿ ಬೆಳಗಿನಖಿಳ ದಿಕ್ತಟವ
ಭೂಪ ಕೇಳೈ ಉಪರಿಚರ ವಸು
ರೂಪಗರ್ಭವು ಮೀನ ಬಸುರಲಿ
ವ್ಯಾಪಿಸಿತು ಜನಿಸಿದುದು ಮಿಥುನವು ಮತ್ಸ್ಯ ಜಠರದಲಿ ೨೨

ಬಳಿಕ ಮತ್ಸ್ಯದ ಬಸಿ(ಪಾ: ಸು)ರಲುದಿಸಿದ
ನಳಿನಲೋಚನೆ ಮತ್ಸ್ಯಗಂಧಿನಿ
ಬೆಳೆವುತಿರ್ದಳು ಸಂಗವಾಯ್ತು ಪರಾಶರವ್ರತಿಯ
ಬಳಿಕ ಯೋಜನಗಂಧಿಯಲ್ಲಿಂ
ದಿಳಿದನಭ್ರಶ್ಯಾಮನುರು ಪಿಂ
ಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ ೨೩

ನೆನೆ ವಿಪತ್ತಿನೊಳೆಂದು ತಾಯನು
ತನುಜ ಬೀಳ್ಕೊಂಡನು ಪರಾಶರ
ಮುನಿ ಪುನಃ ಕನ್ಯತ್ವವನು ಕರುಣಿಸಿದನಾ ಸತಿಗೆ
ವಿನುತ ಯಮುನಾ ತೀರದಲಿ ಮಾ
ನಿನಿಯ ಕಂಡನು ಬೇಂಟೆಯಾಡುತ
ಜನಪ ಶಂತನು ಮರುಳುಗೊಂಡನು ಮದನನೆಸುಗೆಯಲಿ ೨೪

ಪರಿಮಳದ ಬಳಿವಿಡಿದು ಬಂದೀ
ತರುಣಿಯನು ಕಂಡಾರು ನೀನೆಂ
ದರಸ ಬೆಸಗೊಳುತೆಸುವ ಕಾಮನ ಶರಕೆ ಮೈಯೊಡ್ಡಿ
ಅರಮನೆಗೆ ನಡೆಯೆನಲು ತಂದೆಯ
ಪರಮ ವಚನವಲಂಘ್ಯವೆನೆ ಕಾ
ತರಿಸಿ ಭಗ್ನ ಮನೋರಥನು ಮರಳಿದನು ಮಂದಿರಕೆ ೨೫

ವಿರಹದಾವುಗೆ ಕಿಚ್ಚು ಭೂಮೀ
ಶ್ವರನ ಮುಸುಕಿತು ಬಲಿದವಸ್ಥೆಯ
ನರಸ ಬಣ್ಣಿಸಲರಿಯೆನೇಳೆಂಟೊಂಬತರ ಬಳಿಯ
ಮರಣವೀತಂಗೆಂಬ ಜನದು
ಬ್ಬರದ ಗುಜುಗುಜುವರಿದು ಯಮುನಾ
ವರನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ ೨೬

ಕರೆಸಿದನು ಧೀವರನನಯ್ಯಂ
ಗರಸಿಯಾಗಲಿ ನಿನ್ನ ಮಗಳೆನ
ಲರಸಿಯಾದರೆ ಮಗಳ ಮಕ್ಕಳು ರಾಜ್ಯವಾಳುವರೆ
ಅರಿದು ಸಲಿಸುವಡಿದನು ನೇ ಬರಿ
ಯರಸುತನ ನಮಗೇಕೆನಲು ಧೀ
ವರನ ಮಾತಿಂಗೀತನೆಂದನು ರಾಯ ಕೇಳೆಂದ ೨೭

ಆದರಿಲ್ಲಿಂ ಮೇಲೆ ನಾರಿಯ
ರಾದವರು ಭಾಗೀರಥಿಗೆ ಸರಿ
ಮೇದಿನಿಯ ಸಲಿಸುವೆನು ನಿನ್ನಯ ಮಗಳ ಮಕ್ಕಳಿಗೆ
ಈ ದಿವಿಜರೀ ಹರಿ ಹರ ಬ್ರ
ಹ್ಮಾದಿ ದೇವರು ಸಾಕ್ಷಿ ಹೋಗೆಂ
ದಾ ದಯಾಂಬುಧಿ ನಗುತ ನಿನ್ನಯ ಮಗಳ ಕರೆಸೆಂದ ೨೮

ತರಿಸಿದನು ದಂಡಿಗೆಯ ದಂಡಿಯ
ಚರರ ನೆಲನುಗ್ಗಡಣೆಯಲಿ ಸರ
ಸಿರುಹಮುಖಿಯನು ತಂದು ಮದುವೆಯ ಮಾಡಿದನು ಪಿತಗೆ
ಉರವಣಿಸಿ ಮಗ ನುಡಿದ ಭಾಷೆಯ
ನರಸ ಕೇಳಿದು ಬಳಿಕ ಭೀಷ್ಮಗೆ
ವರವನಿತ್ತನು ಮರಣವದು ನಿನ್ನಿಚ್ಛೆ ಹೋಗೆಂದ ೨೯

ಬಳಿಕ ಯೋಜನಗಂಧಿಯಲಿ ಮ
ಕ್ಕಳುಗಳವತರಿಸಿದರು ದೀಪ್ತ
ಜ್ವಲನತೇಜನರು ಕಲ್ಪಭೂಜರು ಹಿಮಕರಾನ್ವಯಕೆ
ಲಲಿತ ಮಂಗಳ ಜಾತಕರ್ಮಾ
ವಳಿಯ ಚಿತ್ರಾಂಗದನನಾ ನೃಪ
ತಿಲಕ ನೆಗಳೆ ವಿಚಿತ್ರವೀರ್ಯನ ನಾಮಕರಣದಲಿ ೩೦

ಇರಲಿರಲು ಶಂತನು ಮಹೀಪತಿ
ಸುರರೊಳಗೆ ಸೇರಿದನು ಬಳಿಕೀ
ಧರಣಿಯೊಡೆತನವಾಯ್ತು ಚಿತ್ರಾಂಗದ ಕುಮಾರಂಗೆ
ಅರಸ ಕೇಳೈ ಕೆಲವು ಕಾಲಾಂ
ತರದಲಾತನು ಕಾದಿ ಗಂಧ
ರ್ವರಲಿ ಮಡಿದನು ಪಟ್ಟವಾಯ್ತು ವಿಚಿತ್ರವೀರ್ಯಂಗೆ ೩೧

ರಾಯ ಕೇಳೈ ಸಕಲ ರಾಜ್ಯ
ಶ್ರೀಯನಾತಂಗಿತ್ತು ಭೀಷ್ಮನು
ತಾಯ ಚಿತ್ತವ ಪಡೆದು ಮೆಚ್ಚಿಸಿದನು ಜಗತ್ರಯವ
ರಾಯ ಕುವರನ ಮದುವೆಗಬ್ಜದ
ಳಾಯತಾಕ್ಷಿಯರನು ವಿಚಾರಿಸಿ
ಹಾಯಿದನು ದಳದುಳದೊಳೊಂದು ವಿವಾಹ ಮಂಟಪಕೆ ೩೨

ಅಲ್ಲಿ ನೆರೆದಾ ಕ್ಷತ್ರವರ್ಗವ
ಚೆಲ್ಲಬಡಿದು ವಿವಾಹ ಶಾಲೆಯ
ಚೆಲ್ಲೆಗಂಗಳ ಕಮಲಮುಖಿಯರ ಮೂವರನು ಪಿಡಿದು
ಘಲ್ಲಣೆಯ ಖಂಡೆಯದ ಚೌಪಟ
ಮಲ್ಲ ಭೀಷ್ಮನು ಪುರಕೆ ತಂದವ
ರೆಲ್ಲರನು ತಮ್ಮಂಗೆ ಮದುವೆಯ ಮಾಡಲನುವಾದ ೩೩

ಆ ಕಮಲಲೋಚನೆಯರೊಳು ಮೊದ
ಲಾಕೆ ಭೀಷ್ಮನ ಗಂಡನೆಂದೇ
ನೂಕಿ ಭಾಷೆಯ ಮಾಡಿ ನಿಂದಳು ಛಲದ ಬಿಗುಹಿನಲಿ
ಆಕೆ ಮಾಣಲಿ ಮಿಕ್ಕವರು ಬರ
ಲೀ ಕುಮಾರಂಗೆಂದು ವೈದಿಕ
ಲೌಕಿಕೋತ್ಸವದಿಂದ ಮದುವೆಯ ಮಾಡಿದನು ಭೀಷ್ಮ ೩೪

ಅರಸ ಚಿತ್ತೈಸಂಬೆಯೆಂಬಳು
ದುರುಳೆ ಭೀಷ್ಮನ ಕೂಟವಲ್ಲದೆ
ಮರಣದೆಡೆಯಲಿ ಬೆರಸಿದಲ್ಲದೆ ಪಂಥವಿಲ್ಲೆಂದು
ಪರಶುರಾಮನ ಭಜಿಸಿ ಹಸ್ತಿನ
ಪುರಕೆ ತಂದಳು ಹೇಳಿಸಿದಳೀ
ಸುರನದೀನಂದನನು ಮಾಡಿದ ಪರಿಯ ಕೇಳೆಂದ ೩೫

ಸತಿಯನೊಲ್ಲೆನು ಬ್ರಹ್ಮಚರ್ಯ
ಸ್ಥಿತಿಗೆ ತಪ್ಪುವನಲ್ಲ ನೀವನು
ಚಿತವ ನೆನೆದರೆ ನಡೆಯಿ ಕೊಟ್ಟೆನು ಕಾಳಗವ ನಿಮಗೆ
ವ್ರತದನಿಧಿ ಕುರುಭೂಮಿಯಲಿ ಶರ
ತತಿಯಲಿಪ್ಪತ್ತೊಂದು ದಿನ ಭೃಗು
ಸುತನೊಡೆನೆ ಕಾದಿದನು ವಿರಥನ ಮಾಡಿದನು ಭೀಷ್ಮ ೩೬

ನುಡಿಯ ಭಂಗಿಸಲೆಂದು ಗುರುವವ
ಗಡಿಸಿ ಹೊಕ್ಕರೆ ಸರಳಮೊನೆಯಲಿ
ಕೊಡಹಿ ಬಿಸುಟನು ಬಿಟ್ಟುದಿಲ್ಲ ಮಹಾವ್ರತಸ್ಥಿತಿಯ
ನುಡಿಯ ಮೀರದ ನಮ್ಮ ಶಿಷ್ಯನ
ನೊಡಬಡಿಸಿಕೊಳ್ಳೆಂದು ನಾರಿಗೆ
ನುಡಿದು ತನ್ನಾಶ್ರಮಕೆ ಸರಿದನು ಪರಶುರಾಮಮುನಿ ೩೭

ಅಂಬೆ ಭೀಷ್ಮನ ಬೈದು ಕಂಬನಿ
ದುಂಬಿ ಹೋದಳು ತಪಕೆ ಬಳಕೀ
ಯಂಬಿಕೆಯನಂಬಾಲೆಯನು ರಮಿಸಿದನು ನೃಪಸೂನು
ಬೆಂಬಲಕೆ ಕಲಿಭೀಷ್ಮನಿರೆ ಚತು
ರಂಬುಧಿಯ ಮಧ್ಯದ ನೃಪಾಲ ಕ
ದಂಬವೀತಂಗಿದಿರೆ ಸಲಹಿದನಖಿಳ ಭೂತಳವ ೩೮

(ಸಂಗ್ರಹ: ಶ್ರೀಕಾಂತ್ ವೆಂಕಟೇಶ್)

ಆದಿಪರ್ವ: ೦೧. ಪೀಠಿಕಾ ಸಂಧಿ

ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನನಿಕರ ದಾತಾರ
ರಾವಾಣಾಸುರ ಮಥನ ಶ್ರವಣ ಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ ೧

ಶರಣಸಂಗವ್ಯಸನ ಭುಜಗಾ
ಭರಣನಮರ ಕಿರೀಟ ಮಂಡಿತ
ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ
ಕರಣನಿರ್ಮಲ ಭಜಕರಘ ಸಂ
ಹರಣ ದಂತಿ ಚಮೂರು ಚರ್ಮಾಂ
ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ ೨

ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರಭಾಳದಿ ಕುಣಿವ ಕುಂತಳದ
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿ
ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ೩

ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ೪

ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನರಚನೋ
ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ದಿದಾಯಕಿಯೆ
ಶೌರಿ ಸುರಪತಿ ಸಕಲ ಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿನೊಲಿದೆನ್ನ ಜಿಹ್ವೆಯಲಿ ೫

ಆದಿ ನಾರಾಯಣಿ ಪರಾಯಣಿ
ನಾದಮಯೆ ಗಜಲಕ್ಷ್ಮಿ ಸತ್ವಗು
ಣಾಧಿದೇವತೆ ಅಮರ ವಂದಿತ ಪಾದಪಂಕರುಹೆ
ವೇದಮಾತೆಯೆ ವಿಶ್ವತೋಮುಖೆ
ಯೈದು ಭೂತಾಧಾರಿಯೆನಿಪೀ
ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ ೬

ವೀರನಾರಾಯಣನೆ ಕವಿ ಲಿಪಿ
ಕಾರ ಕುವರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು
ಚಾರುಕವಿತೆಯ ಬಳಕೆಯಲ್ಲ ವಿ
ಚಾರಿಸುವೊಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ ೭

ಶ್ರೀಮದಮರಾಧೀಶ ನತಪದ
ತಾಮರಸ ಘನವಿಪುಳ ನಿರ್ಮಲ
ರಾಮನುಪಮ ಮಹಿಮ ಸನ್ಮುನಿ ವಿನುತ ಜಗಭರಿತ
ಶ್ರೀಮದೂರ್ಜಿತ ಧಾಮ ಸುದಯಾ
ನಾಮನಾಹವ ಭೀಮ ರಘುಕುಲ
ರಾಮ ರಕ್ಷಿಸುವೂಲಿದು ಗದುಗಿನ ವೀರನಾರಯಣ ೮

ಶರಧಿಸುತೆ ಸನಕಾದಿ ವಂದಿತೆ
ಸುರನರೋರಗ ಮಾತೆ ಸುಜನರ
ಪೂರೆವ ದಾತೆ ಸುರಾಗ್ರಗಣ್ಯಸುಮೌನಿ ವರಸ್ತುತ್ಯೆ
ಪರಮ ಕರುಣಾ ಸಿಂಧು ಪಾವನ
ಚರಿತೆ ಪದ್ಮಜ ಮುಖ್ಯ ಸಕಲಾ
ಮರ ಸುಪೂಜಿತೆ ಲಕ್ಷ್ಮಿ ಕೊಡುಗೆಮಗಧಿಕ ಸಂಪದವ ೯

ಗಜಮುಖನ ವರಮಾತೆ ಗೌರಿಯೆ
ತ್ರಿಜಗದರ್ಚಿತ ಚಾರು ಚರಣಾಂ
ಭುಜೆಯೆ ಪಾವನಮೂರ್ತಿ ಪದ್ಮಜಮುಖ್ಯ ಸುರಪೂಜ್ಯೆ
ಭಜಕರಘ ಸಂಹರಣೆ ಸುಜನ
ವ್ರಜ ಸುಸೇವಿತೆ ಮಹಿಷ ಮರ್ದಿನಿ
ಭುಜಗ ಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ ೧೦

ದುರಿತಕುಲಗಿರಿ ವಜ್ರದಂಡನು
ಧರೆಯ ಜಂಗಮ ಮೂರ್ತಿ ಕವಿ ವಾ
ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜವಂದಿತನು
ತರಳನನು ತನ್ನವನೆನುತ ಪತಿ
ಕರಿಸಿ ಮಗನೆಂದೊಲಿದು ಕರುಣದಿ
ವರವನಿತ್ತನು ದೇವ ವೇದವ್ಯಾಸ ಗುರುರಾಯ ೧೧

ವಂದಿತಾಮಳ ಚರಿತನಮರಾ
ನಂದ ಯದುಕುಲ ಚಕ್ರವರ್ತಿಯ
ಕಂದ ನತಸಂಸಾರ ಕಾನನ ಘನ ದವಾನಳನು
ನಂದನಂದನ ಸನ್ನಿಭನು ಸಾ
ನಂದದಿಂದಲೆ ನಮ್ಮುವನು ಕೃಪೆ
ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ ೧೨

ತಿಳಿಯ ಹೇಳುವೆ ಕೃಷ್ಣಕಥೆಯನು
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ
ಹಲವು ಜನ್ಮದ ಪಾಪ ರಾಶಿಯ
ತೊಳೆವ ಜಲವಿದು ಶ್ರೀಮದಾಗಮ
ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ ೧೩

ಪದದಪ್ರೌಢಿಯ ನವರಸಂಗಳ
ವುದಿತವೆನುವಭಿಧಾನ ಭಾವವ
ಬೆದಕಲಾಗದು ಬಲ್ಲ ಪ್ರೌಢರುಮಾ ಕಥಾಂತರಕೆ
ಇದ ವಿಚಾರಿಸೆ ಬರಿಯ ತೊಳಸಿಯ
ವುದಕದಂತಿರೆಯಲ್ಲಿ ನೋಳ್ಪುದು
ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು ೧೪

ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ ೧೫

ಕೃತಿಯನವಧರಿಸುವುದು ಸುಕವಿಯ
ಮತಿಗೆ ಮಂಗಳವೀವುದಧಿಕರು
ಮಥಿಸುವುದು ತಿದ್ದುವುದು ಮೆರೆವುದು ಲೇಸ ಸಂಚಿಪುದು
ನುತಗುಣರು ಭಾವುಕರು ವರಪಂ
ಡಿತರು ಸುಜನರು ಸೂಕ್ತಿಕಾರರು
ಮತಿಯನೀವುದು ವೀರನಾರಯಣನ ಕಿಂಕರಗೆ ೧೬

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಿಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ ೧೭

ಹರಿಯ ಬಸುರೊಳಗಖಿಲ ಲೋಕದ
ವಿರಡವಡಗಿಹವೋಲು ಭಾರತ
ಶರಧಿಯೊಳಗಡಗಿಹವನೇಕ ಪುರಾಣ ಶಾಸ್ತ್ರಗಳು
ಪರಮ ಭಕ್ತಿಯಲೀ ಕೃತಿಯನವ
ಧರಿಸಿ ಕೇಳ್ದಾನರರ ದುರಿತಾಂ
ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ ೧೮

ಅರಸುಗಳಿಗಿದು ವೀರ ದ್ವಿಜರಿಗೆ
ಪರಮ ವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ ೧೯

ವೇದ ಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನ ಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗ ಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನ ಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ೨೦

ಹೇಮ ಖುರ ಶೃಂಗಾಭರಣದಲಿ
ಕಾಮಧೇನು ಸಹಸ್ರ ಕಪಿಲೆಯ
ಸೋಮ ಸೂರ್ಯ ಗ್ರಹಣದಲಿ ಸುರನದಿಯ ತೀರದಲಿ
ಶ್ರೀಮುಕುಂದಾರ್ಪಣವೆನಿಸಿ ಶತ
ಭೂಮಿದೇವರಿಗಿತ್ತ ಫಲವಹು
ದೀ ಮಹಾಭಾರತದೊಳೊಂದಕ್ಷರವ ಕೇಳ್ದರಿಗೆ ೨೧

ಚೋರ ನಿಂದಿಸಿ ಶಶಿಯ ಬೈದಡೆ
ಕ್ಷೀರವನು ಕ್ಷಯರೋಗಿ ಹಳಿದರೆ
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು
ಭಾರತದ ಕಥನ ಪ್ರಸಂಗವ
ಕ್ರೂರ ಕರ್ಮಿಗಳೆತ್ತ ಬಲ್ಲರು
ಘೋರತರ ರೌರವವ ಕೆಡಿಸುಗು ಕೇಳ್ದ ಸಜ್ಜನರ ೨೨

ವೇದಪುರುಷನ ಸುತನ ಸುತನ ಸ
ಹೋದರನ ಮೊಮ್ಮಗನ (ಪಾ: ಹೆಮ್ಮಗನ) ಮಗನ ತ
ಳೋದರಿಯ ಮಾತುಳನ ರೂಪ (ಮಾವ)ನನತುಳ ಭುಜಬಲದಿ
ಕಾದಿ ಗೆಲಿದವನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ ೨೩

(ಸಂಗ್ರಹ: ಶ್ರೀಕಾಂತ್)

ಗದುಗಿನ ಭಾರತ - ಒಂದು ಇ-ಪುಸ್ತಕ ಪ್ರಯತ್ನ

ಸ್ನೇಹಿತರೇ,

ಕನ್ನಡ ಸಾಹಿತ್ಯ ಭಂಡಾರದಲ್ಲಿ ರತ್ನಪ್ರಾಯವಾಗಿರುವ ಗದುಗಿನ ನಾರಣಪ್ಪ (ಕುಮಾರವ್ಯಾಸ)ನ ಕರ್ಣಾಟ ಭಾರತ ಕಥಾಮಂಜರಿಯನ್ನು ಹಂತಹಂತವಾಗಿ ಇಲ್ಲಿ ಪ್ರಕಟಿಸುವುದು, ಕೊನೆಗೆ ಇಡೀ ಗ್ರಂಥವನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸ್ತುತಪಡಿಸುವುದು ಈ ಬ್ಲಾಗಿನ ಉದ್ದೇಶ.

ಈ ಗ್ರಂಥದ ಎಲೆಕ್ಟ್ರಾನಿಕ್ ಪ್ರತಿಯೊಂದು ಈಗಾಗಲೇ ಅಂತರ್ಜಾಲದಲ್ಲಿ ಇದೆಯೋ ಇಲ್ಲವೋ ತಿಳಿಯದು, ಇದ್ದರೆ ಅಂಥ ಮತ್ತೊಂದು ಪ್ರಯತ್ನ ಅವಶ್ಯಕವೇ ಎಂಬ ಪ್ರಶ್ನೆಯೇಳುತ್ತದೆ. ಅವಶ್ಯಕವೆಂದಾದರೂ ಆ ಪ್ರತಿಯಿಂದ ಇಲ್ಲಿಗೆ ಕಾಪಿ ಪೇಸ್ಟ್ ಮಾಡಿಬಿಡಬಹುದಲ್ಲವೇ ಎಂಬ ಉಪಪ್ರಶ್ನೆಯೂ ಏಳುತ್ತದೆ. ಆದರೆ ನಮ್ಮ ಅಂತಿಮ ಉದ್ದೇಶ ಇ-ಪುಸ್ತಕವೊಂದನ್ನು ಹೊರತರುವುದಾದರೂ, ಮೂಲ ಉದ್ದೇಶ ಕೇವಲ ಅದಲ್ಲ. ಇಡೀ ಗದುಗಿನ ಭಾರತವನ್ನು ಓದಬೇಕೆಂಬ ಆಸೆ ನಮ್ಮಲ್ಲಿ ಕೆಲವರಿಗಾದರೂ ಇದ್ದೇ ಇದೆ, ಆದರೆ ಕಾರಣಾಂತರಗಳಿಂದ, ಜೀವನದ ಇತರ ಒತ್ತಡ/ಪ್ರೇರಣೆ/ಒತ್ತಾಯಗಳಿಂದ ಈ ಆಸೆ ಆಸೆಯಾಗೇ ಉಳಿಯುತ್ತದೆಯೇ ಹೊರತು ಅದೊಂದು ಒತ್ತಡವಾಗಿ ಕ್ರಿಯೆಯಾಗಿ ಹೊರಹೊಮ್ಮುವುದೇ ಇಲ್ಲ - ಇಂಥದ್ದೊಂದು ಯೋಜನೆಯ ಒತ್ತಾಸೆ ಇಲ್ಲದಿದ್ದರೆ. ಗದುಗಿನ ಭಾರತವನ್ನು ಟೈಪು ಮಾಡುವ ನೆಪದಲ್ಲಾದರೂ ಅದನ್ನು ಸಂಪೂರ್ಣ ಓದುವ ಅವಕಾಶ ದೊರೆಯುತ್ತದಲ್ಲವೇ, ಇದು ನಮ್ಮ ಮೂಲ ಆಶಯ. ಕಾರಣವೇನೇ ಇರಲಿ, ಒಮ್ಮೆ ಓದಲು ತೊಡಗಿಸಿಕೊಂಡರೆ, ಓದುವ ವೇಗ ಬಂದರೆ, ಕಾವ್ಯ ತನ್ನಿಂದ ತಾನೇ ನಮ್ಮನ್ನು ತೊಡಗಿಸಿಕೊಳ್ಳುತ್ತದೆ ಎನ್ನುವುದು ನಮ್ಮ ಅನುಭವ, ಕುಮಾರವ್ಯಾಸನ ವಿಷಯದಲ್ಲಂತೂ ಅದು ಹೆಚ್ಚು ಸತ್ಯ. ಜೊತೆಗೆ ಹೀಗೆ ನಮ್ಮದೇ ಒಂದು ಇ-ಆವೃತ್ತಿಯನ್ನು ತಯಾರಿಸಿಕೊಳ್ಳುವುದರ ಮೂಲಕ ಅದರಲ್ಲಿ ಹುಡುಕುವಿಕೆ, ಗುರುತಿಟ್ಟುಕೊಳ್ಳುವಿಕೆ ಇತ್ಯಾದಿ ಸೌಲಭ್ಯಗಳನ್ನೂ ಅಭಿವೃದ್ಧಿಪಡಿಸಬಹುದೇ ಎಂಬ ಆಲೋಚನೆಯೂ ಇದೆ.

ಇಷ್ಟಕ್ಕೂ ಇದೊಂದು ಮಹಾನ್ ಪ್ರಯತ್ನವೆಂಬ ಹಮ್ಮೇನೂ ನಮಗಿಲ್ಲ. ಈ ಇನ್ನೂರು ವರ್ಷಗಳಲ್ಲಿ ಅನೇಕ ವ್ಯಕ್ತಿ-ಸಂಸ್ಥೆಗಳು ಓದುವುದೇ ಕಷ್ಟವಾದ, ವಿವಿಧ ಪಾಠಾಂತರಗಳುಳ್ಳ ತಾಳೆಗರಿಗಳ ಆಕರಗಳಿಂದ ಗದುಗಿನ ಭಾರತವನ್ನು ಸಂಪಾದಿಸುವ/ಸಂಸ್ಕರಿಸುವ/ಪರಿಷ್ಕರಿಸುವ ಮಹತ್ ಕಾರ್ಯಗಳನ್ನೇ ಮಾಡಿದ್ದಾರೆ (ಕಂಪ್ಯೂಟರೆಂಬ ಆಧುನಿಕ ಸಾಧನವಿಲ್ಲದೆಯೂ!). ಆದ್ದರಿಂದ ನಮ್ಮ ಈ ಚಿಕ್ಕ ಪ್ರಯತ್ನದಿಂದ ಕುಮಾರವ್ಯಾಸಭಾರತದ ಬಳಕೆ ಹೆಚ್ಚಿಸಿಕೊಳ್ಳುವುದು ಬಿಟ್ಟರೆ ಹೆಚ್ಚಿನ ಫಲವನ್ನೇನೂ ನಾವು ನಿರೀಕ್ಷಿಸುವುದಿಲ್ಲ.

ಇಡೀ ಜನಪದದ ಮನದಲ್ಲಿ ನಲಿದಾಡುವ ಕೃತಿಯನ್ನು "ಸಂಪಾದಿಸು"ವ ಪ್ರಯತ್ನ ಕೂಡಾ, ಕೇವಲ ಇಬ್ಬರದೇ ಆಗುವ ಬದಲು ಬಹುಜನರ ಪ್ರಯತ್ನವಾದರೆ ಸೊಗಸಲ್ಲವೇ? ಆದ್ದರಿಂದ ಇದು ನಮ್ಮೆಲ್ಲರ ಪ್ರಯತ್ನದ ಫಲವಾಗಲಿ ಎಂದು ನಮ್ಮ ಆಶಯ. ನೀವೂ ಬನ್ನಿ, ಕೈಗೂಡಿಸಿ, ಗದುಗಿನ ಭಾರತದ ಜನಪ್ರಿಯ ಇ-ಆವೃತ್ತಿಯನ್ನು ಸಾಕಾರಗೊಳಿಸಿ.

ಲಭ್ಯವಿರುವ ಗದುಗಿನ ಭಾರತದಲ್ಲಿ ೧೦ ಪರ್ವಗಳಿವೆ. ಭಾಗವಹಿಸುವವರು ತಮಗಿಷ್ಟವಾದ ಪರ್ವವೊಂದನ್ನು ಆರಿಸಿಕೊಂಡು ಅದನ್ನು ಬರಹಕ್ಕಿಳಿಸಲು ಪ್ರಾರಂಭಿಸಬಹುದು. ಒಂದೊಂದು ಸಂಧಿ ಪೂರ್ಣವಾದಾಗಲೂ ನಿರ್ದಿಷ್ಟವಾದ ಪರ್ವದ ಹೆಸರಿನಡಿಯಲ್ಲಿ (ಲೇಬಲ್) ಈ ಬ್ಲಾಗಿನಲ್ಲಿ ಪ್ರಕಟಿಸುತ್ತಾ ಹೋಗಬಹುದು. ಹೀಗೆ ಹತ್ತು ಪರ್ವಗಳೂ ಪೂರ್ಣವಾದಾಗ ಇ-ಪುಸ್ತಕಕ್ಕೆ ಬೇಕಾದ ಸಾಹಿತ್ಯ ಸಿಕ್ಕಂತಾಯಿತು. ಅದನ್ನೆಲ್ಲ ಕ್ರೋಢೀಕರಿಸಿ, ಕರಡು ತಿದ್ದಿ ಪ್ರಕಟಿಸುವ ಕೆಲಸದ ಬಗ್ಗೆ ನಂತರ ಯೋಚಿಸಬಹುದು. ಸಧ್ಯಕ್ಕೆ ಪರ್ವಗಳು, ಸಂಧಿ ಸಂಖ್ಯೆ ಹಾಗೂ ಆ ಪರ್ವಗಳನ್ನು ವಹಿಸಿಕೊಂಡವರ ಪಟ್ಟಿ ಹೀಗಿದೆ:

ಸಂ. /ಪರ್ವ /ಸಂಧಿಗಳು /ವಹಿಸಿಕೊಂಡವರು
೦೧. /ಆದಿಪರ್ವ /೨೦ /ಶ್ರೀಕಾಂತ್ ವೆಂಕಟೇಶ್ (ಆಸಕ್ತರು ಕೈಗೂಡಿಸಬಹುದು)
೦೨. /ಸಭಾಪರ್ವ /೧೬ /ಮಂಜುನಾಥ ಕೊಳ್ಳೇಗಾಲ ಮತ್ತು ಶ್ರೀಮತಿ ಶಕುಂತಲಾ (ಮುಗಿದಿದೆ, ಕರಡು ತಿದ್ದುವಿಕೆ ಬಾಕಿ)
೦೩. /ಅರಣ್ಯಪರ್ವ /೨೩ /ಹೊಳೆನರಸಿಪುರ ಮಂಜುನಾಥ ಮತ್ತು ಶ್ರೀಮತಿ ಶಕುಂತಲಾ (ಮುಗಿದಿದೆ, ಕರಡು ತಿದ್ದುವಿಕೆ ಬಾಕಿ)
೦೪. /ವಿರಾಟಪರ್ವ /೧೦ /ಸುನಾಥ್ ಮತ್ತು ಜ್ಯೋತಿ ಮಹದೇವ್ (ಪೂರ್ಣಗೊಂಡಿದೆ)
೦೫. /ಉದ್ಯೋಗಪರ್ವ/೧೧ /ಹನ್ಸಿಕಾ ಪ್ರಿಯದರ್ಶಿನಿ (ಆಸಕ್ತರು ಕೈಗೂಡಿಸಬಹುದು)
೦೬. /ಭೀಷ್ಮಪರ್ವ /೧೦ /ಆನಂದ (ಆಸಕ್ತರು ಕೈಗೂಡಿಸಬಹುದು)
೦೭. /ದ್ರೋಣಪರ್ವ /೧೯ /ಸತ್ಯನಾರಾಯಣ
೦೮. /ಕರ್ಣಪರ್ವ /೨೭ /ಸುಪ್ತದೀಪ್ತಿ ಮತ್ತು ಸುಬ್ರಮಣ್ಯ (ಶಂಭುಲಿಂಗ)
೦೯. /ಶಲ್ಯಪರ್ವ /೩ /ಪಾರ್ಥಸಾರಥಿ
೧೦./ ಗದಾಪರ್ವ /೧೩ /ಸಂತೋಷ್ ಮೂಗೂರ್ ಮತ್ತು ರಶ್ಮಿ ಮೂಗೂರ್

ಸಧ್ಯಕ್ಕೆ ಮೇಲಿನ ಎಲ್ಲ ಪರ್ವಗಳ ಸಂಗ್ರಹಣಕಾರ್ಯ ಚಾಲ್ತಿಯಲ್ಲಿದೆಯಾದರೂ ಕೆಲವು ಪರ್ವಗಳು ಹಿಂದುಳಿದಿವೆ. ಆಸಕ್ತರು ಕೈಗೂಡಿಸಬಹುದು. ಹಾಗೆಯೇ ಅನೇಕ ಪರ್ವಗಳು/ಸಂಧಿಗಳು ಕರಡು ತಿದ್ದುವಿಕೆಗೆ ಕಾದಿವೆ. ಅವುಗಳನ್ನು ಆಗಿಂದಾಗ್ಗೆ ಗ್ರೂಪ್ ಮೈಲ್ ನಲ್ಲಿ ಪ್ರಕಟಿಸುತ್ತೇವೆ. ಆಸಕ್ತರು ಕರಡು ತಿದ್ದುವಿಕೆಗೆ ಮುಂದಾಗುವುದಾದರೆ ಸಂಗ್ರಹಣೆ ಮತ್ತಷ್ಟು ಚುರುಕುಗೊಳ್ಳುತ್ತದೆ. ಆಸಕ್ತರು ದಯವಿಟ್ಟು ಇಲ್ಲಿ ಕಾಮೆಂಟ್ ಹಾಕಿರಿ, ನಿಮ್ಮ email ವಿಳಾಸ ಮತ್ತು ತಾವು ಹಂಚಿಕೊಳ್ಳಲಿಚ್ಛಿಸುವ ಪರ್ವವನ್ನು ಸೂಚಿಸಿ.


ಇವೆಲ್ಲದರ ಅಂತಿಮ ಉದ್ದೇಶ, ಕುಮಾರವ್ಯಾಸಭಾರತದ ಸಮಗ್ರ ಮಾಹಿತಿ ಒಂದೆಡೆಯಲ್ಲಿ ದೊರೆಯುವಂತೆ ಮಾಡುವುದು. ಯೋಜನೆಯ ಈ ಪ್ರಾಥಮಿಕ ಹಂತದಲ್ಲಿ ಅದರ ತಾಂತ್ರಿಕತೆಯನ್ನೂ ಒಳಗೊಂಡಂತೆ ವಿವಿಧ ಆಯಾಮಗಳನ್ನು ಚರ್ಚಿಸುವುದು, ಕಾರ್ಯಕ್ರಮ ರೂಪಿಸುವುದು ಅತ್ಯಗತ್ಯ. ಮೊದಲೇ ಹೇಳಿದಂತೆ ಇದು ಒಂದು ಇಡೀ ತಂಡದ ಕೆಲಸ. ಆದ್ದರಿಂದ ನಾವೆಲ್ಲರೂ ಸರಾಗವಾಗಿ ಚರ್ಚಿಸಲು/ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ಅನುವಾಗುವಂತೆ ಅನುವಾಗುವಂತೆ ಒಂದು google group ಸೃಷ್ಟಿಸಿದ್ದೇವೆ. ಅದು ಇಲ್ಲಿದೆ:

http://groups.google.com/group/gaduginabharata

ದಯವಿಟ್ಟು ಈ-ಗುಂಪಿಗೆ ಸೇರಿ. ನಿಮ್ಮ ಸಕ್ರಿಯ ಭಾಗವಹಿಸುವಿಕೆ ಯೋಜನೆಯ ಯಶಸ್ಸಿಗೆ ಅತ್ಯಗತ್ಯ.