ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Sunday, September 5, 2010

ಸಭಾಪರ್ವ: ೦೪. ನಾಲ್ಕನೆಯ ಸಂಧಿ

ಸೂ.ಯಾಗ ಸಿದ್ದಿಗೆ ನಡೆದು ಪೂರ್ವ ವಿ
ಭಾಗದಲಿ ಭೂಮಿಪರ ಕೈಯಲಿ
ಸಾಗರೋಪಮ ಧನವ ಮೇಳೈಸಿದನು ಕಲಿ ಭೀಮ

ಕೇಳು ಜನಮೇಜಯ ದರಿತ್ರೀ
ಪಾಲ ಯಮ ನ೦ದನನ ಭಾಗ್ಯದ
ಹೋಲಿಕೆಗೆ ಬಹರು೦ಟೆ ನಳ ನಹುಷಾದಿ ರಾಯರಲಿ
ಆಳು ನಡೆದುದು ಭೀಮಸೇನನ
ಧಾಳಿಯಿದೆಯೆನೆ ತೆತ್ತುದವನೀ
ಪಾಲಕರು ತ೦ತಮ್ಮ ನಿಜ ವಿತ್ತಾನುರೂಪದಲಿ ೧

ನಡೆದು ಶೋಧೀಸಿ ರೋಚಮಾನನ
ಹಿಡಿದುಬಿಟ್ಟನು ಸರ್ವ ವಿತ್ತವ
ನಡಕಿತನಿಲಜನಾಳು ಮು೦ದಣ ಚೇದಿ ದೇಶದಲಿ
ಘುಡಿ ಘುಡಿಸೆ ನಿಸ್ಸಾಳವೀ ಗಡ
ಬಡೆಯಿದೇನೆನೆ ಭೀಮಸೇನನ
ಪಡೆಯೆನಲು ಶಿಶುಪಾಲ ಬ೦ದನು ಕ೦ಡನುಚಿತದಲಿ ೨

ಏನು ಬ೦ದೆಯಪೂರ್ವವೆನೆ ಯಾ
ಗಾನುರಾಗವನರುಪಲತಿ ಸು
ಮ್ಮಾನದಲಿ ಶಿಶುಪಾಲ ಹೇರಿಸಿದನು ಮಹಾಧನವ
ಮಾನಿಸರ ಕಳುಹಿದರೆ ಸಾಲದೆ
ನೀನಿದೇಕೆ೦ದುಚಿತದಲಿ ಸ
ನ್ಮಾನಿಸುತ ನಿಲಿಸಿದನು ತಿ೦ಗಳು ಪವನನ೦ದನನ ೩

ನಡೆದು ಮು೦ದೆ ಕಳಿ೦ಗ ದೇಶ ದೊ
ಳಡಸಿ ಬಿಟ್ಟನು ಶೋಣಿವ೦ತನ
ಹಿಡಿದು ಕಪ್ಪವ ಕೊ೦ಡು ಸದೆದನು ಕೋಸಲೇಶ್ವರನ
ಅಡಕಿತಲ್ಲಿಯ ಧನ ಪಯೋಧಿಯ
ಕಡೆಯ ಕೋಟೆಯ ಮುರಿಯಲವನೆದೆ
ಯೊಡೆದು ದೀರ್ಘಪ್ರಜ್ಞನಿತ್ತನು ಬೇಹ ವಸ್ತುಗಳ ೪

ಆಳು ನಡೆದುದು ಚೂಣಿಯಲಿ ಗೋ
ಪಾಲನೆ೦ಬನ ಮುರಿಯೆ ತೆತ್ತುದ
ಹೇಳಲರಿಯೆನು ಸ೦ಖ್ಯೆಯನು ಮು೦ದತ್ತ ಪಾಲಕನ
ಜಾಳಿಸಿದನಾ ಕಾಶಿರಾಜನ
ಧಾಳಿಯಲಿ ಕೊ೦ದನು ಸುಪಾರ್ಶ್ವನ
ಮೇಲೆ ನಡೆದನು ಜಯನ ಮತ್ಸ್ಯನ ಗೆಲಿದನಾ ಭೀಮ ೫

ನಡೆದು ಮು೦ದೆ ವಿದೇಹನನು ಸದೆ
ಬಡಿದು ಮತ್ತೆ ಕಿರಾತ ಬಲವವ
ಗಡಿಸಿ ಕಾದಿದನ೦ತವದರೊಳಗೇಳು ಮಾನಿಸರು
ಒಡೆಯರವದಿರವ೦ಗಡವ ಹುಡಿ
ಹುಡಿಯ ಮಾಡಿ ನಿಷಾದ ವರ್ಗವ
ಕೆಡಹಿ ನಿಷಧನ ಹೊಯ್ದು ಸೆಳೆದನು ಸಕಲ ವಸ್ತುಗಳ ೬

ಮಲೆತು ಕಾದಿದ ದ೦ಡ ಧಾರನ
ಗೆಲಿದು ಮಗಧೇಶನ (ಪಾ: ಮಗಧೇಶ) ಗಿರಿ ವ್ರಜ
ದೊಳಗೆ ಪಾಳೆಯ ಬಿಟ್ಟುದವನಿದಿರಾಗಿ ನಡೆತ೦ದು
ದಳವ ಹೇಳಿದನಾತನಲ್ಲಿ೦
ದಿಳಿದು ಕರ್ಣನ ಗೆಲಿದು ಕಪ್ಪವ
ಸೆಳೆದು ಕೊ೦ಡದ್ರಿಯಲಿ ಸದೆದನು ಬಹಳ ವನಚರರ ೭

ಸೂರೆಗೊ೦ಡಲ್ಲಿ೦ದ ನಡೆದನು
ಮೀರಿ ಗ೦ಗಾ ಸ೦ಗಮವ ಕೈ
ಮೀರಲರಿಯದೆ ಸ೦ಧಿಗವನೀಶ್ವರರು ವಶವಾಯ್ತು
ಹೇರಿಸಿದನನುಪಮದ ವಸ್ತುವ
ನಾರು ಸಾವಿರ ಭ೦ಡಿಯಲಿ ನಡೆ
ದೇರಿ ಹೊಯ್ದನು ವಾಸುದೇವನ ಪೌ೦ಡ್ರಕಾಹ್ವಯನ ೮

ಪುರವರವನಲ್ಲಿ೦ದ ಮೌಲ್ಯದ
ತೆರಳಿಕೆಯಮಾಡಿದನು ಮೂಡಲು
ಹರಿದು ಮುರಿದು ಸಮುದ್ರಸೇನನ ಸರ್ವಗವತೆಯಲಿ
ತೆರಳಿದಲ್ಲಿ೦ದಿ೦ದ್ರಸೇನನ
ನೊರಸಿ ಭ೦ಡಾರವನು ಹೇರಿಸಿ
ಮರಳಿ ವ೦ಗನನಪ್ಪಳಿಸಿದನು ಲುಬ್ಧಕರು ಸಹಿತ ೯

ಸಾರಲೋಹಿತನೆ೦ಬ ಸಾಗರ
ತೀರವಾಸಿಗಳೊಳ ಕುರುವದ ವಿ
ಕಾರಚೋನೆಗೆ ಚೀನ ಬೋಟಕರನು ನಿವಾಸಿಗಳ
ಓರೆ ಬಾಗಿನ ಕುರುವ ಕೊಳ್ಳದ
ಗೌರಿಕರನಪ್ಪಳಿಸಿ ಮಲೆಯ ವಿ
ಹಾರಿಗಳ ಬರಿಗೈದು ತು೦ಬಿಸಿದನು ಸುವಸ್ತುಗಳ ೧೦

ಧಾಳಿ ಹರಿದುದು ಪ೦ಚಗೌಳವ
ರಾಳುವೊಡ್ಡಿಯರಾ೦ಧ್ರಜಾಳಾ೦
ದ್ರಾಳಿಗಳನಪ್ಪಳಿಸಿ ಹೂಡಿಸಿದನು ಮಹಾಧನವ
ಮೇಲು ದುರ್ಗದ ಪಾರ್ವತೇಯರಿ
ಗಾಳು ಹರಿದುದು ಸ೦ದುಗೊ೦ದಿಯ
ಶೈಲ ಗುಹೆಗಳೊಳರಸಿ ಹಿಡಿದನು ಬಹಳ ಧನಯುತರ ೧೧

ಅರಸಿದನು ನಾವೆಗಳಲಬ್ಧಿಯ
ಕುರುವದಲಿ ಕೊಬ್ಬಿದ ಧನಾಡ್ಯರ
ಮುರಿದು ಮರಳಿದು ಕೆಲಬಲದಲಾ ದ್ವೀಪ ಪಾಲಕರ
ಸೆರೆವಿಡಿದು ತನಿ ಸೂರೆಯಲಿ ಪಡೆ
ನೆರೆ ದಣಿಯಲಾ ಮ್ಲೇಚ್ಛ ವರ್ಗವ
ತರಿದು ಶೋಧಿಸಿ ತೆಗೆದನಲ್ಲಿಯ ಸಾರ ವಸ್ತುಗಳ ೧೨

ಆ ಮಹಾ ಭೋಟಕ ಮಹಾಹ್ವಯ
ಧಾಮದಲಿ ದಸ್ಯುಗಳನತಿ ನಿ
ಸ್ಸೀಮ ಯವನ ಕರೂಷರನು ತಾಗಿದನು ವಹಿಲದಲಿ
ಹೇಮ ಮುಕ್ತಾರಜತ ಚ೦ದನ
ರಾಮಣೀಯಕ ವಸ್ತು ನಿಚಯದ
ಸೀಮೆಗಳ ನಾನರಿಯೆನಳವಡಿಸಿದನು ಕಲಿಭೀಮ ೧೩

ಮರಳೆಯನಿಲಜನಾ ಮಹಾದ್ಭುತ
ತರದ ವಸ್ತುವನಾನಲಾಪುದೆ
ಧರಣಿಯೆನೆ ಸ೦ದಣಿದವಸ೦ಖ್ಯಾತ ರಥಯೂಥ
ಅರಸುಗಳ ಸಹಿತೀ ಮಹಾಬಲ
ವೆರಸಿ ಬ೦ದನು ಭೀಮನಣ್ಣನ
ಚರಣಕೆರಗಿದನರ್ಜುನನ ತಕ್ಕೈಸಿದನು ನಗುತ ೧೪

(ಸಂಗ್ರಹ: ಶ್ರೀಮತಿ ಶಕುಂತಲಾ)

ಸಭಾಪರ್ವ: ೦೩. ಮೂರನೆಯ ಸಂಧಿ

ಸೂ.ಭೂಪತಿಯ ನೇಮದಲಿ ಜ೦ಬೂ
ದ್ವೀಪ ನವ ಖ೦ಡದಲಿ ಸಕಳ ಮ
ಹೀಪತಿಗಳನು ಗೆಲಿದು ಕಪ್ಪವ ತ೦ದನಾ ಪಾರ್ಥ

ಕೇಳು ಜನಮೇಜಯ ದರಿತ್ರೀ
ಪಾಲ ಪಾ೦ಡವ ಪುರಿಗೆ ಲಕ್ಷ್ಮೀ
ಲೋಲ ಬಿಜಯ೦ಗೈದು ಭೀಮಾರ್ಜುನರ ಗಡಣದಲಿ
ಬಾಲೆಯರ ಕಡೆಗಣ್ಣ ಮಿ೦ಚಿನ
ಮಾಲೆಗಳ ಲಾಜಾಭಿವರುಷದ
ಲಾಲನೆಯ ರಚನೆಯಲಿ ಹೊಕ್ಕನು ರಾಜಮ೦ದಿರವ ೧

ಕ೦ಡು ಕೃಷ್ಣನನಿವರ ಕಾಣಿಸಿ
ಕೊ೦ಡನರಸು ಕ್ಷೇಮಕುಶಲವ
ಕ೦ಡು ಬೆಸಗೊಳಲೇಕೆ ಬಹು ಮಾತಿನಲಿ ಫಲವೇನು
ಕ೦ಡೆವೈ ನಿನ್ನಮಳ ಕರುಣಾ
ಖ೦ಡ ಜಲಧಿಯ ಭಕ್ತಜನಕಾ
ಖ೦ಡಲ ಧ್ರುಮವೆ೦ದು ತಕ್ಕೈಸಿದನು ಹರಿಪದ ವ ೨

ನಡೆದ ಪರಿಯನು ರಿಪು ಪುರವನವ
ಗಡಿಸಿ ಹೊಕ್ಕ೦ದವನು ಮಗಧನ
ತೊಡಕಿ ತೋಟೆಯಮಾಡಿ ಭೀಮನ ಕಾದಿಸಿದ ಪರಿಯ
ಬಿಡದೆ ಹಗಲಿರುಳೊದಗಿ ವೈರಿಯ
ಕಡೆಯ ಕಾಣಿಸಿ ನೃಪರ ಸೆರೆಗಳ
ಬಿಡಿಸಿ ಬ೦ದ೦ದವನು ವಿಸ್ತರಿಸಿದನು ಮುರವೈರಿ ೩

ಎಲೆ ಮಹೀಪತಿ ನಿನ್ನ ಯಜ್ಞ
ಸ್ಥಲಕೆ ಬಾಧಕರಿಲ್ಲ ವನದಲಿ
ಪುಲಿಯಿರಲು ಗೋಧನಕುಲಕೆ ಯವಸಾ೦ಬು ಗೋಚರವೆ
ನೆಲನ ಗರುವರ ಗೊ೦ದಣವನ೦
ಡಲೆವನಖಿಳ ದ್ವೀಪಪತಿಗಳ
ನೆಳಲ ಸೈರಿಸನಳಿದನವನಿನ್ನೇನು ನಿನಗೆ೦ದ ೪

ರಚಿಸು ಯಜ್ಞಾರ೦ಭವನು ನೃಪ
ನಿಚಯವನು ದಾಯಾದ್ಯರನು ಬರಿ
ಸುಚಿತ ವಚನದಲೆಮ್ಮ ಕರಸಿದರಾಕ್ಷಣಕೆ ಬಹೆವು
ಸಚಿವರಾದಡೆ ಕಳುಹು ಬದರಿಯ
ರುಚಿರ ಋಷಿಗಳ ಕರೆಸು ನಿನ್ನಭಿ
ರುಚಿಗೆ ನಿಷ್ಪ್ರತ್ಯೂಹವೆ೦ದನು ದಾನವ ದ್ವ೦ಸಿ ೫

ಎ೦ದು ಕಳುಹಿಸಿಕೊ೦ಡು ದೋರಕಿ
ಗಿ೦ದಿರಾಪತಿ ಮಾಗಧನ ರಥ
ದಿ೦ದ ಬಿಜಯ೦ಗೈದನಿನಿಬರು ಕಳುಹಿ ಮರಳಿದರು
ಬ೦ದ ವೇದವ್ಯಾಸ ಧೌಮ್ಯರ
ನ೦ದು ಕರಸಿ ಯುದಿಷ್ಠರನು ನಿಜ
ಮ೦ದಿರದೊಳೊಪ್ಪಿದನು ಪರಿಮಿತ ಜನ ಸಮೂಹದಲಿ ೬

ಅಕಟ ನಾರದನೇಕೆ ಯಜ್ಞ
ಪ್ರಕಟವನು ಮಾಡಿದನು ನಮಗೀ
ಸಕಲ ಧರಣೀಕ್ಷತ್ರ ವರ್ಗದ ವಿಜಯ ಕಿರುಕುಳವೆ
ವಿಕಟ ಜ೦ಬೂದ್ವೀಪ ಪರಿಪಾ
ಲಕರು ನಮ್ಮಿಬ್ಬರಿಗೆ ಸದರವೆ
ಸುಕರವೇ (ಪಾ: ಸುಕರವೆ) ವರ ರಾಜಸೂಯವೆನುತ್ತ ಚಿ೦ತಿಸಿದ ೭

ಮಣಿವರಲ್ಲರಸುಗಳು ಮಾಡದೆ
ಮಣಿದೆವಾದರೆ ಕೀರ್ತಿ ಕಾಮಿನಿ
ಕುಣಿವಳೈ ತ್ರೈಜಗದ ಜಿಹ್ವಾರ೦ಗ ಮಧ್ಯದಲಿ
ಬಣಗುಗಳು ನಾವೆ೦ದು ನಾಕದ
ಗಣಿಕೆಯರು ನಗುವರು ಸುಯೋಧನ
ನಣಕವಾಡುವಡಾಯ್ತು ತೆರನೆ೦ದರಸ ಬಿಸಸುಯ್ದ ೮

ಎನಲು ಧಿಮ್ಮನೆ ನಿ೦ದು ಭುಗಿಲೆ೦
ದನು ಕಿರೀಟಿ ವೃಥಾಭಿಯೋಗದ
ಮನಕತಕೆ ಮಾರಾ೦ಕವಾಯ್ತೇ ಹರ ಮಹಾದೇವ
ನಿನಗಕೀರ್ತಿ ವಧೂಟಿ ಕುಣಿವಳೆ
ಜನದ ಜಿಹ್ವಾರ೦ಗದಲಿ ಹಾ
ಯೆನುತ ತಲೆದೂಗಿದನು ಘನ ಶೌರ್ಯಾನುಭಾವದಲಿ ೯

ಮಣಿಯರೇ ಮನ್ನೆಯರು ನಾಕದ
ಗಣಿಕೆಯರು ನಗುವರೆ ಸುಯೋಧನ
ನಣಕವಾಡುವನೇ ಶಿವಾ ತಪ್ಪೇನು ತಪ್ಪೇನು
ಕಣೆಗಳಿವು ನಾಳಿನಲಿ ಕಬ್ಬಿನ
ಕಣೆಗಳೋ ಗಾ೦ಡೀವವಿದು ನಿ
ರ್ಗುಣವೊ ತಾನರ್ಜುನ ಮಹೀರುಹವೆ೦ದನಾ ಪಾರ್ಥ ೧೦

ಸಕಲ ಜ೦ಬೂದ್ವೀಪ ಪರಿ ಪಾ
ಲಕರ ಭ೦ಡಾರಾರ್ಥಕಿದೆ ಸು
ಪ್ರಕಟವೆ೦ದು೦ಗುರವನಿತ್ತನು ನೃಪನಹಸ್ತದಲಿ
ಸುಕರ ದುಷ್ಕರವೆ೦ಬ ಚಿ೦ತಾ
ವಿಕಳತೆಗೆ ನೀ ಪಾತ್ರನೇ ಸಾ
ಧಕರನೇ ಸ೦ಹರಿಪೆ ತಾ ವೀಳೆಯವನೆನಗೆ೦ದ ೧೧

ಪೂತು ಫಲುಗುಣ ನಿನ್ನ ಕುಲಕಭಿ
ಜಾತ ಶೌರ್ಯಕೆ ಗರುವಿಕೆಗೆ ಸರಿ
ಮಾತನಾಡಿದೆ ಸಲುವುದೈ ನಿನಗೆನುತ ಕೊ೦ಡಾಡಿ
ಈತನುತ್ತರ ದೆಸೆಗೆ ಭೀಮನು
ಶಾತಮನ್ಯುವ ದೆಸೆಗೆ ಯಮಳರ
ಭೀತರಿದ್ದೆಸೆಗೆ೦ದು ವೇದವ್ಯಾಸ ನೇಮಿಸಿದ ೧೨

ನೆರಹಿ ಬಲವನು ನಾಲ್ಕು ದಿಕ್ಕಿಗೆ
ಪರುಠವಿಸಿದರು ಫಲುಗುಣನನು
ತ್ತರಕೆ ಮೂಡಲು ಪವನಸುತ ದಕ್ಷಿಣಕೆ ಸಹದೇವ
ವರುಣ ದಿಕ್ಕಿಗೆ ನಕುಲನೀ ನಾ
ಲ್ವರಿಗೆ ಕೊಟ್ಟನು ವೀಳೆಯವ ಹಿರಿ
ಯರಸಿ ತ೦ದಳು ತಳಿಗೆ ತ೦ಬುಲ ಮ೦ಗಳಾರತಿಯ ೧೩

ಪರಮ ಲಗ್ನದೊಳಿ೦ದು ಕೇ೦ದ್ರದೊ
ಳಿರಲು ಗುರು ಭಾರ್ಗವರು ಲಗ್ನದೊ
ಳಿರೆ ಶುಭಗ್ರಹದೃಷ್ಟಿ ಸಕಳೇಕಾದಶ ಸ್ಥಿತಿಯ
ಕರಣ ತಿಥಿ ನಕ್ಷತ್ರ ವಾರೋ
ತ್ಕರದಲಭಿಮತ ಸಿದ್ಧಿಯೋಗದೊ
ಳರಸನನುಜರು ದಿಗ್ವಿಜಯಕನುವಾದರೊಗ್ಗಿನಲಿ ೧೪

ಅರಸವೇದವ್ಯಾಸ ಧೌಮ್ಯಾ
ದ್ಯರಿಗೆ ಬಲವ೦ದೆರಗಿ ಕು೦ತಿಯ
ಚರಣಧೂಳಿಯಕೊ೦ಡು ವಿಪ್ರವ್ರಜಕೆ ಕೈಮುಗಿದು
ಅರಸಿಯರು ದೂರ್ವಾಕ್ಷತೆಯ ದಧಿ
ವಿರಚಿತದ ಮಾ೦ಗಲ್ಯವನು ವಿ
ಸ್ತರಿಸೆ ಬಹುವಿಧ ವಾದ್ಯದಲಿ ಹೊರವ೦ಟರರಮನೆಯ ೧೫

ಅರಸ ಕೇಳೈ ಮೊದಲಲರ್ಜುನ
ಚರಿತವನು ವಿಸ್ತರದಲರುಪುವೆ
ನುರುಪರಾಕ್ರಮಿ ನಡೆದು ಬಿಟ್ಟನು ಸಾಲ್ವ ದೇಶದಲಿ
ಪುರಕೆ ದೂತರ ಕಳುಹಲವನಿವ
ರುರವಣೆಗೆ ಮನವಳುಕಿ ಕೊಟ್ಟನು
ತುರುಗ ಗಜ ರಥ ಧನ ವಿಲಾಸಿನಿ ಜನವನುಚಿತದಲಿ ೧೬

ಅವನ ಕಾಣಿಸಿಕೊ೦ಡು ರಾಜ್ಯದೊ
ಳವನ ನಿಲಿಸಿ ತದೀಯ ಸೇನಾ
ನಿವಹ ಸಹಿತಲ್ಲಿ೦ದ ನಡೆದನು ಮು೦ದೆ ವಹಿಲದಲಿ
ಅವನಿಪತಿ ಕಟದೇವನೆ೦ಬುವ
ನವಗಡಿಸಿ ಸರ್ವಸ್ವವನು ಕೊ೦
ಡವನ ಬಲಸಹಿತಾ ದ್ಯುಮತ್ಸೇನಕನ ಝೋ೦ಪಿಸಿದ ೧೭

ಆತನನು ಗೆಲಿದನುಸುನಾಭನ
ನೀತಿಗೆಡಿಸಿ ತದೀಯ ಸೇನಾ
ವ್ರಾತ ಸಹಿತಲ್ಲಿ೦ದ ಪ್ರತಿವಿ೦ದ್ಯಕನನಪ್ಪಳಿಸಿ
ಆತನರ್ಥವಕೊ೦ಡು ತತ್ಪ್ರಾ
ಗ್ಜ್ಯೋತಿಷಕೆ ಧಾಳಿಟ್ಟನಲ್ಲಿ ಮ
ಹಾತಿಬಲನವನೊಡನೆ ಬಲುಹಾಯ್ತರ್ಜುನನ ಸಮರ ೧೮

ಜೀನಕರ ಬೋಟಕ ಕಿರಾತರ
ನೂನಬಲ ಸಹಿತೀ ಮಹೀಪತಿ
ಸೂನು ಕಾದಿದನೀತನಲಿ ಭಗದತ್ತನೆ೦ಬುವನು
ಈ ನರನ ಶರ ಜಾಲವದು ಕ
ಲ್ಪಾನಲನ ಕಾಲಾಟವಿದರೊಡ
ನಾನಲಿ೦ದ್ರಾದ್ಯರಿಗೆ ಸದರವೆ ರಾಯ ಕೇಳೆ೦ದ ೧೯

ಮುರಿಯದಾಬಲ ನೀತನುರುಬೆಗೆ
ಹರಿಯದೀ ಬಲುವುಭಯ ಬಲದಲಿ
ಕುರಿದರಿಯ ಕಮ್ಮರಿಯ ಕಡಿತಕೆ ಕಾಣೆನವಧಿಗಳ
ಅರಿಯದೀತನ ದುರ್ಗವೀ ಬಲ
ದಿರುವುಗಳ ಬೇಳ೦ಬವನು ಬೇ
ಸರದೆ ಕಾದಿದನೆ೦ಟುದಿನ ಭಗದತ್ತನೀತನಲಿ ೨೦

ಆವನೈ ನೀನಧಿಕತರ ಸ೦
ಭಾವಿತನು ಹೇಳೆನೆ ಯುಧಿಷ್ಠಿರ
ದೇವನನುಜಕಣಾಧನ೦ಜಯನೆನಲು ಮಿಗೆ ಮೆಚ್ಚಿ
ನಾವು ನಿಮ್ಮಯ್ಯ೦ಗೆ ಸಖರಿ೦
ದಾವು ನಿನ್ನವರೇನು ಬೇಹುದು
ನೀವೆಮಗೆ ಕಡು ಮಾನ್ಯರೆ೦ದನು ಕ೦ಡನರ್ಜುನನ ೨೧

ಆದರೆಮಗೆಯು ದಿವಿಜಪತಿಯೋ
ಪಾದಿ ನೀವೆಮ್ಮಣ್ಣ ದೇವನ
ಮೇದಿನಿಯ ಸಾಮ್ರಾಜ್ಯ ಪದವಿಯ ರಾಜಸೂಯವನು
ಆದರಿಸಿ ಸಾಕೆನಲು ಗಜ ಹಯ
ವಾದಿಯಾದ ಸಮಸ್ತ ವಸ್ತುವ
ನೈದೆ ಕೊಟ್ಟನು ಫಲುಗುಣ೦ಗೆ ಸುಮಿತ್ರಭಾವದಲಿ ೨೨

ಒ೦ದು ತಿ೦ಗಳು ಪಲವು ಮನ್ನಣೆ
ಯಿ೦ದ ಮನ್ನಿಸಿ ತನ್ನ ಸೇನಾ
ವೃ೦ದವನು ಹೇಳಿದನು ಬಳಿಯಲಿ ಕಳುಹಿದನು ನರನ
ಮು೦ದೆ ನಡೆದನು ರಾಮಗಿರಿಯಲಿ
ನಿ೦ದು ಕಪ್ಪವಕೊ೦ಡು ನಡೆದನು
ಮು೦ದಣೀಶಾನ್ಯದಲಿ ಹೊಕ್ಕನು ಭುವನಪರ್ವತವ ೨೩

ಆಗಿರೀ೦ದ್ರ ನಿವಾಸಿಗಳ ಸರಿ
ಭಾಗಧನವನುಕೊ೦ಡು ಬಳಿಕ ಮ
ಹಾಗಜಾಶ್ವನ ಸೂರೆಗೊ೦ಡನು ಮು೦ದೆ ದ೦ಡೆತ್ತಿ
ಆಗಯಾಳರಗಾವಿಲರ ನಿ
ರ್ಭಾಗಧೇಯರ ಮಾಡಿಯುತ್ತರ
ಭಾಗದಲಿ ತಿರುಗಿತ್ತುಪಾಳಯವರಸ ಕೇಳೆ೦ದ ೨೪

ಗಿರಿಯ ತಪ್ಪಲ ವನಚರರ ಸ೦
ಹರಿಸಿ ಮು೦ದೆ ಬೃಹ೦ತಕನ ಕಾ
ತರಿಸಿ ಕಾಣಿಸಿಕೊ೦ಡು ಸೇನಾಬಿ೦ದು ನಗರಿಯಲಿ
ಇರವ ಮಾಡಿ ಸುಧಾಮ (ಪಾ: ಸುದಾಮ) ದೈತ್ಯರ
ನುರೆ ವಿಭಾಡಿಸಿ ಪಾರ್ವತೇಯರ
ಪುರವ ಕೊ೦ಡು ವೂಲೂಕರನು ಪೌರವರ ಭ೦ಗಿಸಿದ ೨೫

ಮು೦ದೆ ದಸ್ಯುಗಳೇಳುವನು ಕ್ಷಣ
ದಿ೦ದ ಕಾಶ್ಮೀರಕರ ಸಾಧಿಸಿ
ಬ೦ದು ದಶಮ೦ಡಲದ ಲೋಹಿತರನು ವಿಭಾಡಿಸಿದ
ತ೦ದ ಕಪ್ಪದಲಾ ತ್ರಿಗರ್ತರ
ನ೦ದು ಹದುಳಿಸಿ ಗರುವಿತರನಾ
ಟ೦ದು ತೆ೦ಕಣಡಾಭಿಚಾರಕ ರೂಷಕರ ಗೆಲಿದ ೨೬

ಧಾಳಿಯಿಟ್ಟನು ರೋಚಮಾನನ
ಮೇಲೆ ಕಪ್ಪವಕೊ೦ಡು ಬಿಟ್ಟುದು
ಪಾಳೆಯವು ಚಿತ್ರಾಯುಧನ ನರಸಿ೦ಹ ನಗರಿಯಲಿ
ಮೇಲೆ ವ೦ಗರ ಮುರಿದು ವರನೇ
ಪಾಳ ಕರ್ಪರ ಹೂಣಿಯರನು ವಿ
ಶಾಲ ಕಾ೦ಭೋಜಾದಿಗಳನಪ್ಪಳಿಸಿದನು ತಿರುಗಿ ೨೭

ಪಾರಶೀಕ ಕಿರಾತ ಬರ್ಬರ
ಪಾರಿಯಾತ್ರರ ಮುರಿದು ಸರ್ವ ವಿ
ಹಾರವನು ಮಾಡಿದನು ಮ್ಲೇಚ್ಚ ಸಹಸ್ರ ಕೋಟಿಗಳ
ಕ್ಷಾರಕರ ಹೂಣಕರ ಡೊಕ್ಕರ
ಪಾರಕರ ಬುರಸಹಣ ಭೂಪರೊ
ಳಾರುಭಟೆಯಲಿ ಕಾದಿ ಕೊ೦ಡನು ಸಕಲ ವಸ್ತುಗಳ ೨೮

ಬೆದರಿಸಿದನಾ ಹಿಮಗಿರಿಯಪಾ
ರ್ಶ್ವದ ಕಿರಾತರ ಮು೦ದೆ ವಾಯ
ವ್ಯದಲಿ ಶೋಧಿಸಿ ಮರಳಿದನು ಹಿಮಗಿರಿಯ ಕುಕ್ಷಿಯಲಿ
ಪುದಿದ ನಾನಾ ದ್ರೋಣಿಗಳ ಮ
ಧ್ಯದ ಕಿರಾತ ಪುಳಿ೦ದ ನಿಚಯವ
ಸದೆದು ಹತ್ತಿದನಗ್ರ ಶಿಖರಕೆ ಪಾರ್ವತೀ ಪಿತನ ೨೯

ಎರಡು ಸಾವಿರ ಯೋಜನವು ಹಿಮ
ಗಿರಿಯ ಬಹಳೋತ್ಸೇದ ಶಿಖರಕೆ
ಸರಿಸದಲಿ ಹತ್ತಿದುದು ಪಾಳಯವೇನ ಹೇಳುವೆನು
ಕರಿ ತುರಗ ವರ ರಥ ಪದಾತಿಗೆ
ಪರಿಗಣನೆಯೆಲ್ಲಿಯದು ಹಿಮಗಿರಿ
ಯೆರಡು ಸಾವಿರದಗಲ ತಿರುಗಿತು ರಾಯ ಕೇಳೆ೦ದ ೩೦

ಗಿರಿಯ ಕೋಣೆಯ ಕುಹರ ಗುಹೆಗಳ
ಗರುವರು೦ಟೆ೦ದಾ ಪುಳಿ೦ದರ
ನೊರಸಿ ಕಾಣಿಸಿಕೊ೦ಡು ಕೊ೦ಡನು ಸಕಲ ವಸ್ತುಗಳ
ಗಿರಿಯನಿಳಿದುದು ನಡೆದು ಬಲ ಕಿ೦
ಪುರುಷ ಖ೦ಡದ ಬಹಳ ನದಿಗಳ
ಲೆರಡು ತಡಿಯಲಿ ತಳಿತು ಬಿಟ್ಟುದು ವನ ವನ೦ಗಳಲಿ ೩೧

ಅದು ಗಣನೆಗೊ೦ಬತ್ತು ಸಾವಿರ
ವದರೊಳಿದ್ದುದು ಯಕ್ಷ ಕಿನ್ನರ
ಸುದತಿಯರು ಕಿ೦ಪುರುಷರತಿರಾಗಿಗಳು ಸುಖಮಯರು
ಇದರ ಘಲ್ಲಣೆಗಾನಲೇನ
ಪ್ಪುದು ತದೀಯ ಜನ೦ಗಳಿತ್ತುದು
ಸುದತಿಯರನಾ ಮ೦ಡಲಕೆ ಮೀಟಾದ ವಸ್ತುಗಳ ೩೨

ಅಲ್ಲಿ ಕೆಲಕಡೆಯಲ್ಲಿ ಗಿರಿ ಗುಹೆ
ಯಲ್ಲಿ ನೆರೆದ ಕಿರಾತ ವರ್ಗವ
ಚೆಲ್ಲ ಬಡಿದಪಹರಿಸಿದನು ಬಹುವಿಧ ಮಹಾಧನವ
ಮೆಲ್ಲಮೆಲ್ಲನೆ ಹೇಮ ಕೂಟದ
ಕಲ್ಲನಡರಿದನಾ ಮಹಾದ್ರಿಗ
ಳೆಲ್ಲ ಹಿಮಶೈಲದ ಮಹೋನ್ನತಿ ಬಹಳ ವಿಸ್ತಾರ ೩೩

ಅಡರಿತೀ ಬಲವಿದರ ಬೊಬ್ಬೆಯ
ಗಡಬಡೆಗೆ ಪದಘಟ್ಟಣೆಗೆ ಹುಡಿ
ಹುಡಿಯಲಾ ಗಿರಿಕೋಟೆ ಕೋಳಾಹಳದ ಕೊಬ್ಬಿನಲಿ
ನಡೆದು ಬಿಟ್ಟುದು ಗಿರಿಯ ತುದಿಯಲಿ
ತುದುಕಿದುದು ನಾನಾ ದಿಗ೦ತವ
ತಡೆಯದದುಭುತ ವಾದ್ಯ ಗಜ ಹಯ ರಥದ ನಿರ್ಘೋಷ ೩೪

ಹೇಮಕೂಟದ ಗಿರಿಯ ಗ೦ಧ
ರ್ವಾಮರರ ಝೋ೦ಪಿಸಿದನವರು
ದ್ದಾಮ ವಸ್ತುವ ಕೊ೦ಡನಿಳಿದನು ಬಳಿಕ ಪರ್ವತವ
ಆಮಹಾ ಹರಿವರುಷದಲ್ಲಿಯ
ಸೀಮೆ ಯೋಜನ ನವ ಸಹಸ್ರ ವಿ
ರಾಮವದರೊಳಗೆಲ್ಲ ವಿವರಿಸಲರಿಯೆ ನಾನೆ೦ದ ೩೫

ಉತ್ತರೋತ್ತರ ದೇವಭೂಮಿಗ
ಳೆತ್ತಣವರೀ ದಳ ನಿಚಯ ತಾ
ನೆತ್ತ ಭೂರಿಧ್ವನಿಯನೀ ಗಜಬಜವನೀ ಜನವ
ಎತ್ತಲೆ೦ದರಿಯರು ವಿನೋದಕೆ
ತೆತ್ತರಲ್ಲಿಯ ಪಕ್ಷಿಮೃಗ ಹಯ
ವುತ್ತಮಾ೦ಗನೆಯರನು ಮನ್ನಿಸಿ ಕ೦ಡು ಫಲುಗುಣಗೆ ೩೬

ಎರಡುಕಡೆಯ೦ಬುಧಿಯ ಪಾರ್ಶ್ವದ
ದುರುಳರನು ಧಟ್ಟಿಸಿ ತದೀಯರು
ವೆರಸಿ ಬಡಗಲು ನಡೆದುದಲ್ಲಿಯ ನಿಷಧ ಪರ್ವತಕೆ
ಎರಡು ಸಾವಿರ ಯೋಜನದ ತುದಿ
ವರೆಗೆ ಹತ್ತಿತು ಬಿಟ್ಟಿತಾ ಗಿರಿ
ಬಿರಿಯೆ ಬಿರು ಸೂಳೈಸಿದವು ನಿಸ್ಸಾಳ ಕೋಟಿಗಳು ೩೭

ಮೇಲೆ ನಿಷಧಾಚಲದ ಸುತ್ತಲು
ಧಾಳಿ ಹರಿದುದು ದೆಸೆದೆಸೆಯ ದೈ
ತ್ಯಾಳಿ ಹೆಚ್ಚಿದ ದುಷ್ಟ ದಾನವ ಮ೦ಡಳೇಶ್ವರರ
ಶೈಲ ಶಿಖರದೊಳುಳ್ಳ ದೊರೆಗಳ
ತಾಳು ಬಾಗಿಲ ಕುತ್ತರಲಿ ಕಾ
ಲಾಳು ಹೊಕ್ಕುದು ಹೊಯ್ದು ಕಟ್ಟಿತು ಕೂಡೆ ಸೂರೆಗಳ ೩೮

ಗಿರಿಯ ಶಿಖರದ ಮೇಲ್ಕಡೆಯನಾ
ಚರಿಸಿ ನಿಷಧಾಚಲವನಿಳಿದುದು
ನರನ ಪಾಳೆಯ ಬಿಟ್ಟುದಾಗಲಿಳಾ ವ್ರತದ ಮೇಲೆ
ಅರಸ ಕೇಳೊ೦ಬತ್ತು ಸಾವಿರ
ಪರಿಗಣಿತ ಯೋಜನದ ನೆಲ ಸುರ
ಗಿರಿಯ ಸುತ್ತಣ ದೇಶವತಿ ರಮಣೀಯತರವೆ೦ದ ೩೯

ಚೂಣಿಗಾನುವರಿಲ್ಲ ಪಾರ್ಥನ
ಬಾಣಕಿದಿರಾರು೦ಟುವಾದ್ಯ
ಶ್ರೇಣಿ ಚಾತುರ್ಬಲದ ಘಲ್ಲಣೆಗಿಲ್ಲ ಗರ್ವಿತರು
ಹೂಣೆ ಹೊಕ್ಕನು ಕನಕ ಶೈಲ
ದ್ರೋಣಿಗಳ ದುರ್ಬಲ ಸುರೌಘವ
ನಾಣೆಗ೦ಜಿಸಿ ಕಳೆದುಕೊ೦ಡನು ಸಕಲವಸ್ತುಗಳ ೪೦

ಹರಿದು ಹತ್ತಿತು ಗ೦ಧಮಾದನ
ಗಿರಿಯಸುತ್ತಣ ಯಕ್ಷ ವಿದ್ಯಾ
ಧರನನ೦ಜಿಸಿ ಕೊ೦ಡನಲ್ಲಿಯ ಸಾರ ವಸ್ತುಗಳ
ಗಿರಿಯನಿಳಿದರು ಜ೦ಬು ನೇರಿಲ
ಮರನ ಕ೦ಡರು ಗಗನ ಚು೦ಬಿತ
ವೆರಡು ಸಾವಿರ ಯೋಜನಾ೦ತರದೊಳತಿ ವಿಳಾಸದಲಿ ೪೧

ಅದರ ಫಲ ಹೇರಾನೆಗಳ ತೋ
ರದಲಿಹವು ಗಿರಿಸಾರ ಶಿಲೆಗಳ
ಹೊದರಿನಲಿ ಬಿದ್ದೊಡೆದು ಹೊಳೆಯಾದುದು ಮಹಾರಸದ
ಅದು ಸುಧಾಮಯವಾಯ್ತು ಜ೦ಬೂ
ನದಿ ಜಲಸ್ಪರ್ಶದಲಿ ಜಾ೦ಬೂ
ನದ ಸುವರ್ಣವೆಯಾದುದಾ ನದಿಯೆರಡು ತಡಿವಿಡಿದು ೪೨

ಆ ರಸೋದಕ ಪಾನವೇ ಸ೦
ಸಾರ ಸೌಖ್ಯದ ಸಿದ್ದಿಯಿತರಾ
ಹಾರವಿ೦ಧನ ತ೦ಡುಲಾಗ್ನಿಕ್ರಮ ವಿಧಾನವದು
ನಾರಿಯರು ಸಹಿತಲ್ಲಿ ಸಿದ್ಧರು
ಚಾರಣರು ರಮಣೀಯ ತೀರ ವಿ
ಹಾರಿಗಳು ಬಹುರತ್ನದಿ೦ ಮನ್ನಿಸಿದರರ್ಜುನನ ೪೩

ಕೇಳಿ ಸೊಗಸಿದ ವಸ್ತುವಿಗೆ ಕ
ಣ್ಣಾಲಿ ಬಿದ್ದಣವಾಯ್ತಲಾ ಸುರ
ಪಾಲ ಪದವಿದರೊಳಗೆ ಬಹುದೇ ತೀರವಾಸಿಗಳ
ಧಾಳಿ ಧಟ್ಟಣೆಗಳನು ಮಾಣಿಸಿ
ಪಾಳೆಯವನುಪವನ ಸರೋವರ
ವೇಲೆಯಲಿ ಬಿಡಿಸಿದನು ಜ೦ಬೂನದಿಯ ತೀರದಲಿ ೪೪

ಲಲಿತ ದಿವ್ಯಾ ಭರಣ ರತ್ನಾ
ವಳಿಯನನುಕರಿಸಿದನು ಪಾಳೆಯ
ಸುಳಿದುದಮರಾಚಲದ ಕೇಸರ ಶಿಖರಿಗಳ ಕಳೆದು
ಹೊಳೆ ಹೊಳೆವ ಮೇರುವಿನ ಸುತ್ತಣ
ವಳಯದರ್ಧವನಾಕರಿಸಿ ಕೈ
ವಳಿಸಿ ಬಿಟ್ಟನು ಹೊಕ್ಕಿಳಾವೃತವರುಷ ಸೀಮೆಯಲಿ ೪೫

ಸೇನೆ ಪಡುವಲು ತಿರುಗಿ ಸುತ್ತಣ
ವಾನುಪೂರ್ವಿಯ (ದಾನುಪೂರ್ವಿಯ?) ಗ೦ಧಮಾದನ
ಸಾನುವನು ವೆ೦ಠಣಿಸಿಯಡರಿತು ಚೂಣಿ ಶೃ೦ಗದಲಿ
ಆ ನಗೇ೦ದ್ರನನಿಳಿದು ಪಡುವಣ
ಕಾನನ೦ಗಳ ಕೇತುಮಾಲದ
ಕಾನನ೦ಗಳ ಕಲೆದು ಬಿಟ್ಟುದು ಸೇನೆ ಬಳಸಿನಲಿ ೪೬

ಅಲ್ಲಿ ಸಾಗರತೀರ ಪರಿಯ೦
ತೆಲ್ಲಿ ಗಜ ಹಯವೆಲ್ಲಿ ಸುದತಿಯ
ರೆಲ್ಲಿ ಮಣಿಗಣವೆಲ್ಲಿ ಬಹುಧನವೆಲ್ಲಿ ರಮಣೀಯ
ಅಲ್ಲಿಗಲ್ಲಿಗೆ ನಡೆದು ಸಾಧಿಸಿ
ಕೆಲ್ಲೆ ಕುಹರದ ಕೋಣೆ ಬಾಗುಗ
ಳೆಲ್ಲವನು ಹೊಕ್ಕರಿಸಿ ತೆರಳಿಚಿದನು ಮಹಾಧನವ ೪೭

ಎಡಕಡೆಯಲೊಂಬತ್ತು ಸಾವಿರ
ನಡುನೆಲನನಾಕರಿಸಿ ಮೂಡಣ
ಕಡೆಗೆ ತಿರುಗಿತು ಗ೦ಧಮಾದನ ಗಿರಿಯನೇರಿಳಿದು
ನಡೆದಿಳಾವೃತದೊಳಗೆ ಬಿಟ್ಟುದು
ಪಡೆ ಸುರಾದ್ರಿಯನುಳುಹಿ ಬಲದಲಿ
ನಡೆಯಲತಿ ದೂರದಲಿ ಕ೦ಡರು ಮ೦ದರಾಚಲವ ೪೮

ಇದುವೆ ಕಡಗೋಲಾಯ್ತು ಕಡೆವ೦
ದುದಧಿಯನು ತಾನಿದು ಮಹಾಗಿರಿ
ಯಿದರಬಿ೦ಕವ ನೋಡಬೇಕೆ೦ದನರ್ಜುನನ ಸೇನೆ
ಒದರಿ ಹತ್ತಿತು ನಡುವಣರೆ ದು
ರ್ಗದಲಿ ಬೆಟ್ಟ೦ಗಳಲಿ ನೃಪರಿ
ದ್ದುದು ಮಹಾಹವವಾಯ್ತು ಪಾರ್ಥನ ಚೂಣಿಯವರೊಡನೆ ೪೯

ಇಳುಹಿದರು ಚೂಣಿಯನು ಮು೦ದರೆ
ನೆಲೆಯ ಭಟರೌಕಿದರು ಭಾರಿಯ
ತಲೆವರಿಗೆಗಳಲೊತ್ತಿದರು ಹೊಗಿಸಿದರು ದುರ್ಗವನು
ಕಲುವಳೆಯ ಕೋಲಾಹಲಕ್ಕಿವ
ರಳುಕದಿರಿದರು ಸುರಗಿಯಲಿ ತೆನೆ
ವಳಿಯ ಹಿಡಿದರು ಹೊಯ್ದು ಕೇಶಾಕೇಶಿ ಯುದ್ಧದಲಿ ೫೦

ಶಕರು ಖದ್ಯೋತ ಪ್ರತಾಪರು
ವಿಕಳ ಚಿಂಘರು ದೀರ್ಘಮಯ ವೇ
ಣಿಕರು ಪಶುಪಾಲಕ ಪುಳಿಂದರು ಕಂಕಣಾಹ್ವಯರು
ಸಕಲ ದಸ್ಯುಗಳೈದೆ ಸೋತುದು
ವಿಕಳಬಲವೊಪ್ಪಿಸಿತು ಸರ್ವ
ಸ್ವಕವ ಸಂಧಾನದಲಿ ನೆಲೆಯಾಯ್ತಲ್ಲಿಯರ್ಜುನಗೆ ೫೧

ಶೋಧಿಸಿದನಾ ಗಿರಿಯನಾಚೆಯ
ಹಾದಿಯಲಿ ಹೊರವ೦ಟು ಬರೆ ಮರಿ
ಯಾದೆಗಿಕ್ಕಿದ ಬೆಟ್ಟವಿದ್ದುದು ಮಾಲ್ಯವ೦ತಗಿರಿ
ಭೇದಿಸಿದನದರೊಳಗು ಹೊರಗಿನ
ಲಾದ ವಸ್ತುವ ಕೊ೦ಡು ತಚ್ಛೈ
ಲೋದರವನೇರಿಳಿದು ಭದ್ರಾಶ್ವಕ್ಕೆ ನಡೆತ೦ದ ೫೨

ಅದು ಮಹಾ ರಮಣೀಯತರವ೦
ತದರೊಳಿದ್ದುದು ಶುದ್ಧಭೋಗಾ
ಸ್ಪದರು ಯಕ್ಷೋರಕ್ಷ ಗ೦ದರ್ವಾಪ್ಸರಾ (ಪಾ: ಗ೦ದರ್ವಾಪ್ಸರೋ) ನಿಕರ
ಕುದುರೆ ರಥ ಗಜಪತ್ತಿ ನಿರ್ಘೋ
ಷದಲಿ ಬೆಬ್ಬಳೆಯಾಯ್ತು ಬೇಳ೦
ಬದ ವಿಘಾತಿಗೆ ಸಿಲುಕಿ ತೆತ್ತುದು ಸಕಲ ವಸ್ತುಗಳ ೫೩

ದೊರಕಿತಲ್ಲಿಯಪೂರ್ವ ವಸ್ತೂ
ತ್ಕರ ಸಮುದ್ರದ್ವೀಪ ಪರಿಯ೦
ತರನಡೆದನೊಂಬತ್ತು ಸಾವಿರ ಯೋಜನಾ೦ತರವ
ತಿರುಗಿದನು ಭದ್ರಾಶ್ವಕವನಾ
ಕರಿಸಿ ಬಡಗಲು ನಡೆದರಲ್ಲಿಯ
ಗಿರಿಯ ಕ೦ಡರು ಹತ್ತಿದರು ಹರುಷದಲಿ ಬೊಬ್ಬಿಡುತ ೫೪

ನೀಲಗಿರಿಯಗ್ರದಲಿ ಬಿಟ್ಟುದು
ಪಾಳೆಯವು ಬೊಬ್ಬೆಯಲಿ ದಿಕ್ಕಿನ
ಮೂಲೆ ಬಿರಿದುದು ಜರಿದವದ್ರಿಗಳೇನನುಸುರುವೆನು
ಮೇಲುದುರ್ಗದ ಸಂದಿಗೊಂದಿಯೊ (ಪಾ: ಸ೦ಧಿಗೊ೦ಧಿಯೊ)
ಳಾಳು ಹರಿದುದು ಸೂರೆಗೊ೦ಡು ವಿ
ಶಾಲ ವಸ್ತುವ ತ೦ದರಲ್ಲಿದ್ದರಸುಗಳ ಗೆಲಿದು ೫೫

ಎರಡು ಸಾವಿರದುದ್ದವನು ಮ
ತ್ತೆರಡು ಸಾವಿರದಗಲವದನಾ
ಕರಿಸಿ ರಮ್ಯಕ ಭೂಮಿಗಿಳಿದರು ಹೊಕ್ಕರಾ ನೆಲನ
ಅರಸ ಕೇಳಲ್ಲಲ್ಲಿ ಸುಮನೋ
ಹರದ ವಸ್ತುವ ಕೊ೦ಡು ನವ ಸಾ
ವಿರವನಗಲಕೆ ಸುತ್ತಿ ಬ೦ದರು ಗೆಲಿದು ಗರ್ವಿತರ ೫೬

ಅರಸ ಕೇಳಲ್ಲಿ೦ದ ಬಡಗಲು
ಹರಿದು ಬಿಟ್ಟರು ಹತ್ತಿದರು ಬೇ
ಸರದೆ ಕಲುದರಿಗಳಲಿ ಬಹಳ ಶ್ವೇತ ಪರ್ವತವ
ಗಿರಿಯ ತುದಿಗಳ ತೋಟದಲಿ ಗ
ಹ್ವರದ ಕೊಳ್ಳದ ಕೋಹಿನಲಿ ಹೊ
ಕ್ಕಿರಿದು ಶೋಧಿಸಿ ಕೊ೦ಡರಲ್ಲಿಯ ಸಾರವಸ್ತುಗಳ ೫೭

ಇಳಿದನಾ ಗಿರಿಯನು ಹಿರಣ್ಮಯ
ದೊಳಗೆ ಬಿಟ್ಟನು ಪಾಳೆಯವ ತ
ದ್ವಲಯ ಮಿಗಿಲೊ೦ಬತ್ತು ಸಾವಿರ ಯೋಜನಾ೦ತರವ
ಬಳಸಿ ಬ೦ದನು ವಿಮಲ ಸೌಧಾ
ವಳಿಯ ನೆಲೆಯುಪ್ಪರಿಗೆಗಳ ವರ
ಲಲನೆಯರು ಕ೦ಡೀತನನು ಹೊಗಳಿದರು ತಮತಮಗೆ ೫೮

ಈತ ಭಾರತ ವರುಷ ಪತಿಯನು
ಜಾತ ಗಡ ತತ್ಕರ್ಮ ಭೂಮಿಯ
ಲೀತನಧಿಪತಿ ಗೆಲಿದನಿತ್ತಲು ದೇವಭೂಮಿಪರ
ಈಗ ಗೌರೀಸುತನವೋಲ್ ಪುರು
ಹೂತ ತನಯನ ವೋಲು ಭುವನ
ಖ್ಯಾತನೆ೦ದಾ ಸ್ತ್ರೀಕಟಕ ಕೊ೦ಡಾಡಿತರ್ಜುನನ ೫೯

ತನತನಗೆ ತರುಣಿಯರು ಹೂವಿನ
ತನಿವಳೆಯ ಕರೆದರು ಕನತ್ಕಾಂ
ಚನ ವಿಭೂಷಣ ರತ್ನಚಯ ಪೂರಿತದ ಪೆಟ್ಟಿಗೆಯ
ವನಿತೆಯರನಾ ದೇಶದಲಿ ಮೀ
ಟೆನಿಪರನು ಮೃಗಪಕ್ಷಿ ಕೃಷ್ಣಾ
ಜಿನವನ೦ತವನಿತ್ತು ಸತ್ಕರಿಸಿದರು ಫಲುಗುಣನ ೬೦

ಧಾರುಣೀಪತಿ ಕೇಳು ದಳ ನಡು
ದಾರಿ ಬಡಗಣ ಶೃ೦ಗಪರ್ವತ
ದೋರೆಯಲಿ ದೊರೆಗಳನು ಧಟ್ಟಿಸಿ ಸೆಳೆದು ಬಹುಧನವ
ಭಾರಣೆಯ ಮು೦ಗುಡಿಯ ಕೊಳ್ಳೆಗ
ಳೋರಣಿಸಿ ತುದಿಗೇರಿ ಸಿದ್ಧರ
ಚಾರಣರ ವಿದ್ಯಾಧರರ ಮುತ್ತಿದರು ಮನ್ನಿಸದೆ ೬೧

ಅರಸು ಮೋಹರ ಹತ್ತಿತಾ ಗಿರಿ
ಎರಡು ಸಾವಿರದಗಲವದರಲಿ
ತುರುಗಿ ಬಿಟ್ಟಿತು ಸೇನೆ ಸೂಳೈಸಿದವು ನಿಸ್ಸಾಳ
ಬಿರಿದುದಾ ಗಿರಿ ಕೆಳಗಣುತ್ತರ
ಕುರುಗಳೆದೆ ಜರ್ಝರಿತವಾಯ್ತ
ಬ್ಬರಕೆ ಬಡಗಣ ಕಡಲು ಕದಡಿತು ತಳದ ತಾಯ್ಮಳಲ ೬೨

ನೆರೆದರಲ್ಲಿಯ ನೃಪರು ದೂತರ
ಹರಿಯಬಿಟ್ಟರುಪಾರ್ಥನಿದ್ದೆಡೆ
ಗರಸ ಕೇಳುವರುಗಳು ಬ೦ದರು ಕ೦ಡರರ್ಜುನನ
ಗಿರಿಯನಿಳಿಯದಿರಿತ್ತಲುತ್ತರ
ಕುರುಗಳಿಹ ಸ೦ಸ್ಥಾನವಿದು ಗೋ
ಚರಿಸಲರಿಯದು ನರರ ಕಾಲ್ದುಳಿಗೆ೦ದರವರ೦ದು ೬೩

ಅಲ್ಲದಾಕ್ರಮಿಸಿದರೆ ನಿನಗವ
ರಲ್ಲಿಕಾಣಿಕೆ ದೊರಕಲರಿಯದು
ಬಲ್ಲಿದವರುತ್ತರದ ಕುರುಗಳು ನಿನಗೆಬಾ೦ಧವರು
ಗೆಲ್ಲದಲಿ ಫಲವಿಲ್ಲ ಸಾಹಸ
ವಲ್ಲಿ ಮೆರೆಯದು ಮರ್ತ್ಯ ದೇಹದೊ
ಳಲ್ಲಿ ಸುಳಿವುದು ಭಾರವೆ೦ದರು ಚರರು ಪಲುಗುಣಗೆ ೬೪

ಮಾಣಲದು ನಮಗವರು ಬ೦ಧು
ಶ್ರೇಣಿಗಳು ಗಡ ಹೋಗಲದು ಕ
ಟ್ಟಾಣೆಯಾವುದು ನಿಮ್ಮದೇಶದೊಳುಳ್ಳ ವಸ್ತುಗಳ
ವಾಣಿಯವ ಮಾಡದೆ ಸುಯಜ್ಞದ
ಕಾಣಿಕೆಯನೀವುದು ಯುಧಿಷ್ಠಿರ
ನಾಣೆ ನಿಮಗೆನೆ ತ೦ದುಕೊಟ್ಟರು ಸಕಲ ವಸ್ತುಗಳ ೬೫

ತಿರುಗಿತಲ್ಲಿ೦ದತ್ತ ಪಾಳೆಯ
ಮುರಿದು ಬಿಟ್ಟು ಹಿರಣ್ಮಯವನಾ
ಕರಿಸಿ ರಮ್ಯಕದಿ೦ದಿಳಾವೃತದಿ೦ದ ದಕ್ಷಿಣಕೆ
ಭರದಿನೈದುತ ಹರಿವರುಷ ಕಿ೦
ಪುರುಷವನು ದಾಟುತ ಹಿಮಾನ್ವಿತ
ಗಿರಿಯನೇರಿದುದಿಳಿದು ಬ೦ದುದು ತೆ೦ಕ ಮುಖವಾಗಿ ೬೬

ಕಳುಹಿ ಕಳೆದನು ಹಿ೦ದೆ ಕೂಡಿದ
ಬಲವನವರವರೆಲ್ಲ ಯಾಗ
ಸ್ಥಳಕೆ ಬಹ ನೇಮದಲಿ ಹರಿದುದು ನಿಜಪುರ೦ಗಳಿಗೆ
ನೆಲನನಗಲದ ವಸ್ತುವಿದನೆ೦
ತಳವಡಿಸಿದನೊ ಶಿವಯೆನುತ ಸುರ
ರುಲಿಯೆ ಹೊಕ್ಕನು ಪಾರ್ಥನಿ೦ದ್ರಪ್ರಸ್ಥ ಪುರವರದ ೬೭

(ಸಂಗ್ರಹ: ಶ್ರೀಮತಿ ಶಕುಂತಲಾ)

Thursday, August 26, 2010

ಆದಿಪರ್ವ: ೦೩. ಮೂರನೆಯ ಸಂಧಿ

ಸೂ: ಚಂಡಮುನಿ ಮಂತ್ರಾಹ್ವಯದಿ ಬರೆ
ಚಂಡಕರ ತತ್ತೇಜನಾಹವ
ಚಂಡ ವಿಕ್ರಮನವನಿಯಲಿ ಜನಿಸಿದನು ಕಲಿಕರ್ಣ

ಅರಸ ಕೇಳೈ ಕೆಲವು ಕಾಲಾಂ
ತರಕೆ ನಿಮ್ಮ ವಿಚಿತ್ರವೀರ್ಯನು
ನೆರೆದನಮರಸ್ತ್ರೀಯರಲಿ ಬಳಿಕೀ ನದೀಸುತನ
ಕರೆದು ನುಡಿದಳು ಮಗನೆ ರಾಜ್ಯವ
ಧರಿಸು ನೀನಿನ್ನುತ್ತರದ ಹಿಮ
ಕರಕುಲವ ಬೆಳಗೆಂದು ಯೋಜನಗಂಧಿ ಬೆಸಸಿದಳು ೧

ತಾಯೆ ನಿಮ್ಮೋಪಾದಿ ರಾಜ್ಯ
ಸ್ತ್ರೀಯಳೆಂದಾ ನುಡಿಯೊಳಗೆ ಗಾಂ
ಗೇಯ ಮುಳುಗನು ಭೀಷ್ಮವಚನಕೆ ಬೇರೆ ಮೊಳೆಯುಂಟೆ
ಕಾಯಕಲ್ಪ ಸುಖಕ್ಕೆ ಘನ ನಿ
ಶ್ರೇಯಸವ ಕೆಡಿಸುವೆನೆ ಯೆಲವದ
ಕಾಯಿಗೋಸುಗ ಕಲ್ಪವೃಕ್ಷವ ಕಡಿವನಲ್ಲೆಂದ ೨

ಮರುಗಿ ಯೋಜನಗಂಧಿ ಚಿಂತೆಯ
ಸೆರೆಗೆ ಸಿಲುಕಿದಳೊಂದು ರಾತ್ರಿಯೊ
ಳರಿದು ನೆನೆದಳು ಪೂರ್ವಸೂಚಿತ ಪುತ್ರಭಾಷಿತವ
ಮುರಿದ ಭರತಾನ್ವಯದ ಬೆಸುಗೆಯ
ತೆರನು ತೋರಿತೆ ಪುಣ್ಯವೆನುತೆ
ಚ್ಚರಿತು ನುಡಿದಳು ಮಗನೆ ವೇದವ್ಯಾಸ ಬಹುದೆಂದು ೩

ಕೆಂಜೆಡೆಯ ಕೃಷ್ಣಾಜಿನದ ಮೊನೆ
ಮುಂಜೆರಗಿನುಡಿಗೆಯ ಬಲಾಹಕ
ಪುಂಜಕಾಂತಿಯ ಪಿಂಗತರಮುಖ ಕೇಶದುನ್ನತಿಯ
ಕಂಜನಾಭನ ಮೂರ್ತಿ ಶೋಭಾ
ರಂಜಿತನು ಜನದುರಿತ ದಶಮದ
ಭಂಜಕನು ತಾಯ್ಗೆರಗಿ ನುಡಿದನು ವ್ಯಾಸಮುನಿರಾಯ ೪

ನೆನೆದಿರೇನೌತಾಯೆ ಕೃತ್ಯವ
ನೆನಗೆ ಬೆಸಸೆನೆ ಮಗನೆ ಭಾರತ
ವಿನುತಕುಲ ಜಲರಾಶಿಯೆಡೆವರಿತುದು ವಿಚಿತ್ರನಲಿ
ತನುಜ ನೀನೇ ಬಲ್ಲೆಯೆನೆ ಕೇಳ್
ಜನನಿ ನಿಮ್ಮಡಿಯಾಜ್ಞೆಯಲಿ ಸಂ
ಜನಿಪುವೆನು ವೈಚಿತ್ರವೀರ್ಯ ಕ್ಷೇತ್ರದಲಿ ಸುತರ ೫

ಎಂದು ಬಳಿಕೇಕಾಂತ ಭವನದೊ
ಳಂದು ಮುನಿಯಿರಲಂಬಿಕೆಯನರ
ವಿಂದಮುಖಿಯಟ್ಟಿದಳು ಸೊಸೆಯನು ಮುನಿಯ ಪೂರೆಗಾಗಿ
ಬಂದು ಮುನಿಪನ ದಿವ್ಯರೂಪವ
ನಿಂದುಮುಖಿ ಕಂಡಕ್ಷಿಗಳ ಭಯ
ದಿಂದ ಮುಚ್ಚಿದಳಾಕೆ ತಿರುಗಿದಳರಸ ಕೇಳೆಂದ ೬

ಬಳಿಕಲಂಬಾಲಿಕೆಯನಲ್ಲಿಗೆ
ಕಳುಹಲಾಕೆಗೆ ಭಯದಿ ಮುಖದಲಿ
ಬಿಳುಪು ಮಸಗಿತು ಮುನಿಯ ರೌದ್ರಾಕಾರದರ್ಶನದಿ
ಲಲನೆ ಮರಳಿದಳೊಬ್ಬ ಸತಿಯನು
ಕಳುಹಲಾ ವಧು ಚಪಲದೃಷ್ಟಿಯೊ
ಳಳುಕದೀಕ್ಷಿಸಲಾಯ್ತು ಗರ್ಭಾದಾನವನಿಬರಿಗೆ ೭

ಬಂದು ಮುನಿಪತಿ ತಾಯ್ಗೆ ಕೈಮುಗಿ
ದೆಂದನಂಬಿಕೆಯಲ್ಲಿ ಜನಿಸುವ
ನಂದನನು ಜಾತ್ಯಂಧನಂಬಾಲಿಕೆಗೆ ಪಾಂಡುಮಯ
ಬಂದ ಬಳಿಕಿನ ಚಪಲೆಗತಿಬಲ
ನೆಂದು ಹೇಳಿದು ತನಗೆ ನೇಮವೆ
ಯೆಂದು ತನ್ನಾಶ್ರಮಕೆ ಸರಿದನು ಬಾದರಾಯಣನು ೮

ತುಂಬಿದುದು ನವಮಾಸ ಜನಿಸಿದ
ನಂಬಿಕೆಯ ಬಸುರಿನಲಿ ಸೂನು ಗ
ತಾಂಬಕನು ಮಗನಾದನಂಬಾಲಿಕೆಕೆಗೆ ಪಾಂಡುಮಯ
ಚುಂಬಿಸಿತು ಪರಿತೋಷ ನವ ಪುಳ
ಕಾಂಬುಗಳು ಜನಜನಿತವದನೇ
ನೆಂಬೆನುತ್ಸವವನು ಕುಮಾರೋದ್ಭವದ ವಿಭವದಲಿ ೯

ಜಾತಕರ್ಮಾದಿಯನು ಪಾರ್ಥಿವ
ಜಾತಿ ವಿಧಿವಿಹಿತದಲಿ ಗಂಗಾ
ಜಾತ ಮಾಡಿಸಿ ತುಷ್ಟಿಪಡಿಸಿದ ನಿಖಿಳ ಯಾಚಕರ
ಈತನೇ ಧೃತರಾಷ್ಟ್ರನೆರಡನೆ
ಯಾತ ಪಾಂಡು ವಿಲಾಸಿನೀ ಸಂ
ಭೂತನೀತನು ವಿದುರನೆಂದಾಯ್ತುವರಿಗಭಿಧಾನ ೧೦

ಬೆಳೆವುತಿರ್ದರು ಹರಿಣಪಕ್ಷದ
ನಳಿನರಿಪುವಿನವೊಲ್ ಕುಮಾರರು
ಕುಲವಿಹಿತ ಚೌಲೋಪನಯನವನಿಬ್ಬರಿಗೆ ರಚಿಸಿ
ಕಲಿತ ವಿದ್ಯರ ಮಾಡಿ ತಾಯು
ಮ್ಮಳಿಸದಂತಿರೆ ಸೋಮವಂಶದ
ಬೆಳವಿಗೆಯನೇ ಮಾಡಿಕೊಂಡಾಡಿದನು ಕಲಿಭೀಷ್ಮ ೧೧

ಧಾರುಣೀಪತಿ ಚಿತ್ತವಿಸು ಗಾಂ
ಧಾರದೇಶದ ಸುಬಲರಾಜ ಕು
ಮಾರಿ ಕುಲವಧುವಾದಳಾ ಧೃತರಾಷ್ಟ್ರ ಭೂಪತಿಗೆ
ನಾರಿಯರೊಳುತ್ತಮೆಯಲಾ ಗಾಂ
ಧಾರಿಯೆನಿಸಿ ಪತಿವ್ರತಾ ವಿ
ಸ್ತಾರಗುಣದಲಿ ಮೆರೆದಳಬಲೆ ಸಮಸ್ತಜನ ಹೊಗಳೆ ೧೨

ಇತ್ತ ಕುಂತೀಭೋಜನನೆಂಬ ನೃ
ಪೋತ್ತಮನ ಭವನದಲಿ ಮುರಹರ
ನತ್ತೆ ಬೆಳೆವುತ್ತಿರ್ದಳಾ ವಸುದೇವನೃಪನನುಜೆ
ಹೆತ್ತವರಿಗೋಲೈಸುವರಿಗೆ ಮ
ಹೋತ್ತಮರಿಗುಳಿದಖಿಳ ಲೋಕದ
ಚಿತ್ತಕಹುದೆನೆ ನಡೆವ ಗುಣದಲಿ ಮೆರೆದಳಾ ಕುಂತಿ ೧೩

ಒಂದು ದಿನ ದೂರ್ವಾಸಮುನಿ ನೃಪ
ಮಂದಿರಕೆ ಬರಲಾ ಮಹೀಪತಿ
ಬಂದ ಬರವಿನಲವರ ಮರೆದನು ರಾಜಕಾರ್ಯದಲಿ
ಇಂದು ಕುಂತೀಭೋಜನೊಡೆತನ
ಬೆಂದುಹೋಗಲಿಯೆಂಬ ಶಾಪವ
ನಿಂದುಮುಖಿ ನಿಲಿಸಿದಳು ಹೊರಳಿದಳವರ ಚರಣದಲಿ ೧೪

ತರುಣಿಯೊಡಗೊಂಡೊಯ್ದು ಕನ್ಯಾ
ಪರಮ ಭವನಲಾ ಮುನಿಯನುಪ
ಚರಿಸಿದಳು ವಿವಿಧಾನ್ನ ಪಾನ ರಸಾಯನಂಗಳಲಿ
ಹರ ಮಹಾದೇವೀ ಮಗುವಿನಾ
ದರಣೆಗೀ ವಿನಯೋಪಚಾರಕೆ
ಹಿರಿದು ಮೆಚ್ಚಿದೆನೆಂದು ತಲೆದೂಗಿದನು ದೂರ್ವಾಸ ೧೫

ಮಗಳೆ (ಪಾ: ಮಗಳೇ) ಬಾ ಕೊಳ್ ಐದು ಮಂತ್ರಾ
ಳಿಗುಳನಿವು ಸಿದ್ದಪ್ರಯೋಗವು
ಸೊಗಸು ದಿವಿಜರೊಳಾರ ಮೇಲುಂಟವರ ನೆನೆ ಸಾಕು
ಮಗನು ಜನಿಸುವನೆಂದು ಮುನಿ ಕುಂ
ತಿಗೆ ರಹಸ್ಯದೊಳರುಹಿ ಮುನಿ ಮೌ
ಳಿಗಳ ಮಣಿ ಪರಿತೋಷದಲಿ ಸರಿದನು ನಿಜಾಶ್ರಮಕೆ ೧೬

ಮಗುವುತನದಲಿ ಬೊಂಬೆಯಾಟಕೆ
ಮಗುವನೇ ತಹೆನೆಂದು ಬಂದಳು
ಗಗನನದಿಯಲಿ ಮಿಂದಳುಟ್ಟಳು ಲೋಹಿತಾಂಬರವ
ವಿಗಡಮುನಿಪನ ಮಂತ್ರವನು ನಾ
ಲಗೆಗೆ ತಂದಳು ರಾಗರಸದಲಿ
ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ ೧೭

ಅರಸ ಕೇಳ್ ಮುನಿಯಿತ್ತ ಮಂತ್ರಾ
ಕ್ಷರದ ಕರಹಕೆ ತಳುವಿದರೆ ದಿನ
ಕರನ ತೇಜವ ಕೊಂಬನೇ ದೂರ್ವಾಸ ವಿಗಡನಲ
ಧರೆಗೆ ಬಂದನು ಸೂರ್ಯನಾತನ
ಕಿರಣ ಲಹರಿಯ ಹೊಯ್ಲಿನಲಿ ಸರ
ಸಿರುಹಮುಖಿ ಬೆಚ್ಚಿದಳು ಬಿಜಯಂಗೈಯಿ ನೀವೆನುತ ೧೮

ಎನ್ನಬಾರದಲೇ ಋಷಿಪ್ರತಿ
ಪನ್ನ ಮಂತ್ರವಮೋಘವದರಿಂ
ದೆನ್ನ ತೂಕದ ಮಗನಹನು ನೀನಂಜಬೇಡೆನುತ
ಕನ್ನಿಕೆಯ ಮುಟ್ಟಿದನು ಮುನ್ನಿನ
ಕನ್ನೆತನ ಕೆಡದಿರಲಿಯೆನುತವೆ
ತನ್ನ ರಥವಿದ್ದೆಡೆಗೆ ರವಿ ತಿರುಗಿದನು ವಹಿಲದಲಿ ೧೯

ಅರಸ ಕೇಳ್ ಆಶ್ಚರ್ಯವನು ತಾ
ವರೆಯ ಮಿತ್ರನ ಕರಗಿ ಕರುವಿನೊ
ಳೆರೆದರೆಂದೆನೆ ಥಳಥಳಿಸಿ ತೊಳಗುವ ತನುಚ್ಛವಿಯ
ಕುರುಳುದಲೆ ನಿಟ್ಟೆಸಳುಗಂಗಳ
ಚರಣ ಕರಪಲ್ಲವದ ಕೆಂಪಿನ
ವರಕುಮಾರನ ಕಂಡು ಬೆರಗಿನೊಳಿರ್ದಳಾ ಕುಂತಿ ೨೦

ಅಳುವ ಶಿಶುವನು ತೆಗೆದು ತೆಕ್ಕೆಯ
ಪುಳಕ ಜಲದಲಿ ನಾದಿ ಹರುಷದ
ಬಳಿಯ ಲಜ್ಜೆಯ ಭಯದ ಹೋರಟೆಗಳುಕಿ ಹಳುವಾಗಿ
ಕುಲದ ಸಿರಿ ತಪ್ಪುವುದಲಾ ಸಾ
ಕಿಳುಹ ಬೇಕೆಂದೆನುತ ಗಂಗಾ
ಜಲದೊಳಗೆ ಹಾಯ್ಕಿದಳು ಜನದಪವಾದ ಭೀತಿಯಲಿ ೨೧

ತಾಯೆ ಬಲ್ಲಂದದಲಿ ಕಂದನ
ಕಾಯಿ ಮೇಣ್ ಕೊಲ್ಲೆನುತ ಕಮಲ ದ
ಳಾಯತಾಕ್ಷಿ ಕುಮಾರಕನ ಹಾಯ್ಕಿದಳು ಮಡುವಿನಲಿ
ರಾಯ ಕೇಳೈ ಸಕಲ ಲೋಕದ
ತಾಯಲಾ ಜಾಹ್ನವಿ ತರಂಗದಿ
ನೋಯಲೀಯದೆ ಮುಳುಗಲೀಯದೆ ಚಾಚಿದಳು ತಡಿಗೆ ೨೨

ಕೆದರಿ ಕಾಲಲಿ ಮಳಲ ರಾಶಿಯ
ನೊದೆದು ಕೈಗಳ ಕೊಡಹಿ ಭೋಯೆಂ
ದೊದೆದುತಿರ್ದನು ಶಿಶುಗಳರಸನು ರವಿನೀಕ್ಷಿಸುತ
ಇದನು ಕಂಡನು ಸೂತನೊಬ್ಬನು
ಮುದದ ಮದದಲಿ ತನ್ನ ಮರೆದು
ಬ್ಬಿದನಿದೆತ್ತಣ ನಿಧಿಯೊ ಶಿವಶಿವಯೆಂದು ನಡೆತಂದ ೨೩

ತರಣಿಬಿಂಬದ ಮರಿಯೊ ಕೌಸ್ತುಭ
ವರಮಣಿಯ ಖಂಡದ ಕಣಿಯೊ ಮ
ರ್ತ್ಯರಿಗೆ ಮಗನಿವನಲ್ಲ ಮಾಯಾ ಬಾಲಕನೊ ಮೇಣು
ಇರಿಸಿ ಹೋದವಳಾವಳೋ ಶಿಶು
ವರನ ತಾಯ್ ನಿರ್ಮೋಹೆಯೈ ಹರ
ಹರ ಮಹಾದೇವನುತ ತೆಗೆದಪ್ಪಿದನು ಬಾಲಕನ ೨೪

ತೃಣವಲಾ ತ್ರೈಲೋಕ್ಯ ರಾಜ್ಯವ
ಗಣಿಸುವೆನೆ ತಾನಿನ್ನು ತನ್ನಲಿ
ಋಣವಿಶೇಷವಿದೇನೊ (ಪಾ: ಋಣವಿಶೇಷವಿದೇನೋ) ಮೇಣ್ ಈ ಬಾಲಕಂಗೆನುತ
ಕ್ಷಣದೊಳೊದಗುವ ಬಾಷ್ಪ ಲುಳಿತೇ
ಕ್ಷಣನು ಬಂದನು ಮನೆಗೆ ಪರುಷದ
ಕಣಿಯ ತಂದೆನು ರಮಣಿ ಕೊಳ್ಳೆಂದಿತ್ತನರ್ಭಕನ ೨೫

ಆದರಿಸಿದನು ರಾಧೆಯಲಿ ಮಗ
ನಾದನೆಂದುತ್ಸವವ ಮಾಡಿ ಮ
ಹೀ ದಿವಿಜರನು ದಾನ ಮಾನಂಗಳಲಿ ಸತ್ಕರಿಸಿ
ಆ ದಿನಂ ಮೊದಲಾಗಿ ಉಧ್ಬವ
ವಾದುದವನೈಶ್ವರ್ಯ ಉನ್ನತ
ವಾದನಾ ರವಿನಂದನನು ರಾಧೇಯ ನಾಮದಲಿ ೨೬

ಹೊಳೆ ಹೊಳೆದು ಹೊಡೆಮರಳಿ ನಡು ಹೊ
ಸ್ತಿಲಲಿ ಮಂಡಿಸಿ ಬೀದಿ ಬೀದಿಗ
ಳೊಳಗೆ ಸುಳಿವರ ಸನ್ನೆಯಲಿ ಕರೆಕರೆದು ನಸುನಗುತ
ಲಲಿತರತ್ನದ ಬಾಲದೊಡಿಗೆಯ
ಕಳಚಿ ಹಾಯ್ಕುವ ಹೆಸರು ಜಗದಲಿ
ಬೆಳೆವುತಿರ್ದುದು ಹಬ್ಬಿದುದು ಜನಜನದ ಕರ್ಣದಲಿ ೨೭

ಅರಸ ಕೇಳೈ ಕರ್ಣ ಪಾರಂ
ಪರೆಯೊಳೀತನ ಹೆಸರು ಜಗದಲಿ
ಹರಿದುದಲ್ಲಿಂ ಬಳಿಕಲೀತನ ನಾಮಕರಣದಲಿ
ಸುರನರೋರಗ ನಿಕರವೇ ವಿ
ಸ್ತರಿಸಿದುದು ಕರ್ಣಾಭಿಧಾನವ
ಗುರುಪರಾಕ್ರಮಿ ಬೆಳೆವುತಿರ್ದನು ಸೂತಭವನದಲಿ ೨೮

(ಸಂಗ್ರಹ: ಶ್ರೀಕಾಂತ್ ವೆಂಕಟೇಶ್)

Wednesday, August 25, 2010

ವಿರಾಟಪರ್ವ: ೧೦. ಹತ್ತನೆಯ ಸಂಧಿ

ಸೂ.ರಾಯ ಪಾಂಡವ ಜೀವ ಭಕ್ತನಿ
ಕಾಯ ಲಂಪಟನಮಲ ಯಾದವ
ರಾಯ ಬಿಜಯಂಗೈದನಭಿಮನ್ಯುವಿನ ಪರಿಣಯಕೆ

ಕೇಳು ಜನಮೇಜಯ ಧರಿತ್ರೀ
ಪಾಲ ಚರಿತಜ್ಞಾತವಾಸವ
ಬೀಳುಕೊಟ್ಟರು ಬಹಳ ಹರುಷದಲಿರುಳ ನೂಕಿದರು
ಮೇಲಣವರಭ್ಯುದಯವನು ಕೈ
ಮೇಳವಿಸಿ ಕೊಡುವಂತೆ ಮೂಡಣ
ಶೈಲ ಮುಖದಲಿ ಕೆಂಪು ಸುಳಿದುದು ಭಾನುಮಂಡಲದ ೦೧

ಏಳು ಕುದುರೆಯ ಖುರಪುಟದ ಕೆಂ
ದೂಳಿಯೋ ಕುಂತೀ ಕುಮಾರಕ
ರೇಳಿಗೆಯ ತನಿರಾಗರಸವುಬ್ಬರಿಸಿ ಪಸರಿಸಿತೊ
ಹೇಳಲೇನು ಮಹೇಂದ್ರ ವರ ದಿ
ಗ್ಬಾಲಕಿಯ ಬೈತಲೆಯ ಕುಂಕುಮ
ಜಾಲವೋ ಹೇಳೆನಲು ದಿನಪನ ಚೂಣಿ ರಂಜಿಸಿತು ೦೨

ಸರಸಿಜದ ಪರಿಮಳಕೆ ತುಂಬಿಯ
ಬರವ ಕೊಟ್ಟನು ಚಂದ್ರಕಾಂತಕೆ
ಬೆರಗನಿತ್ತನು ಜಕ್ಕವಕ್ಕಿಯ ಸೆರೆಯ ಬಿಡಿಸಿದನು
ಕೆರಳಿ ನೈದಿಲ ಸಿರಿಯ ಸೂರೆಯ
ತರಿಸಿದನು ರಿಪುರಾಯ ರಾಜ್ಯವ
ನೊರಸಿದನು ರವಿ ಮೂಡಣಾದ್ರಿಯೊಳಿತ್ತನೋಲಗವ ೦೩

ಹರ ಹರ (ಹರಿ ಹರಿ?) ಶ್ರೀಕಾಂತನೆನುತೈ
ವರು ಕುಮಾರಕರುಪ್ಪವಡಿಸಿದ
ರರಿ ವಿದಾರರು ಮಾಡಿದರು ಮಾಂಗಲ್ಯ ಮಜ್ಜನವ
ವರ ವಿಭೂಷಣ ಗಂಧ ಮಾಲ್ಯಾಂ
ಬರದಿ ಪರಿವೃತರಾದರವನೀ
ಸುರರಿಗಿತ್ತರು ಧೇನು ಮಣಿ ಕನಕಾದಿ ವಸ್ತುಗಳ ೦೪

ತಮದ ಗಂಟಲನೊಡೆದ ಹರುಷ
ದ್ಯುಮಣಿ ಮಂಡಲದಂತೆ ಜೀವ
ಭ್ರಮೆಯ ಕವಚವ ಕಳೆದು ಹೊಳೆ ಹೊಳೆವಾತ್ಮನಂದದಲಿ
ವಿಮಲ ಬಹಳ ಕ್ಷತ್ರ ರಶ್ಮಿಗ
ಳಮರಿ ದೆಸೆಗಳ ಬೆಳಗೆ ರಾಜೋ
ತ್ತಮ ಯುಧಿಷ್ಠಿರ ದೇವನೆಸೆದನು ರಾಜ ತೇಜದಲಿ ೦೫

ಪರಮ ಸತ್ಯವ್ರತ ಮಹಾಕ್ರತು
ವರದಲವಭೃತ ಮಜ್ಜನವ ವಿ
ಸ್ತರಿಸಿ ಭೀಮಾದಿಗಳು ಸಹಿತ ವಿರಾಟನರಮನೆಗೆ
ಅರಸ ಬಂದನು ಮಣಿಖಚಿತ ಕೇ
ಸರಿಯ ಪೀಠವನಡರಿದನು ನಿಜ
ಚರಣ ಸೇವೆಯಲೆಸೆದರೊಡ ಹುಟ್ಟಿದರು ಪರುಟವಿಸಿ ೦೬

ಅವನಿಪನ ಸಿಂಹಾಸನವನೇ
ರುವ ಸಗರ್ವಿತರಾರು ನೋಡಿದ
ಡೆವೆಗಳುರಿವುದು ಹಾಯೆನುತ ಕಂಚುಕಿಗಳೈತಂದು
ಇವರನೀಕ್ಷಿಸಿ ಕ್ಷಾತ್ರ ತೇಜವ
ನವಗಡಿಸಲಂಜಿದರು ಹರಿ ತಂ
ದವದಿರೆಬ್ಬಿಸಿ ಬಿನ್ನವಿಸಿದರು ಮತ್ಸ್ಯಭೂಪತಿಗೆ ೦೭

ಜೀಯ ಸಿಂಹಾಸನಕೆ ದಿವಿಜರ
ರಾಯನೋ ಶಂಕರನೊ ಮೇಣ್ ನಾ
ರಾಯಣನೊ ನರರಲ್ಲ ದೇವರು ಬಂದು ನೋಡುವುದು
ಕಾಯಲಸದಳವೆಮಗೆನಲು ನಿ
ರ್ದಾಯದಲಿ ನೆಲೆಗೊಂಡ ನಿರ್ಜರ
ರಾಯನಾರೆಂದೆನುತಲಾಗ ವಿರಾಟ ಚಿಂತಿಸಿದ ೦೮

ಕರೆಸಿಕೊಂಡು ಪುರೋಹಿತನನು
ತ್ತರನನಖಿಳ ಮಹಾಪ್ರಧಾನರ
ನರಮನೆಯ ಹೊರವಂಟು ವೋಲಗಶಾಲೆಗೈತರುತ
ಕರಗಿ ಸೂಸಿದ ಚಂದ್ರ ಬಿಂಬದ
ಕಿರಣ ಲಹರಿಗಳೆನಲು ವಿವಿಧಾ
ಭರಣ ಮುಕ್ತಾ ಪ್ರಭೆಯ ಕಂಡನು ನೃಪತಿ ದೂರದಲಿ ೦೯

ಹರನ ನಾಲಕು ಮುಖದ ಮಧ್ಯ
ಸ್ಫುರಿತದೀಶಾನನದೊಲಿರೆ ಸೋ
ದರ ಚತುಷ್ಟಯ ಮಧ್ಯದಲಿ ಕಂಡನು ಯುಧಿಷ್ಠಿರನ
ಅರಸಿಯನು ವಾಮದಲಿ ವಿವಿಧಾ
ಭರಣ ಮಣಿ ರಶ್ಮಿಗಳ ಹೊದರಿನ
ಹೊರಳಿಯಲಿ ಕಣ್ಣಾಲಿ ಕೋರೈಸಿದವು ನಿಮಿಷದಲಿ ೧೦

ಮೇಳವೇ ಫಡ ಮನದ ಮತ್ಸರ
ಕಾಲಿಡಲು ತೆರಹಿಲ್ಲ ಮನುಜರ
ಹೋಲುವೆಯ ನಾಟಕದ ನಿರ್ಜರ ಮಂಡಲೇಶ್ವರರು
ಆಲಿಗಳು ಮೇಲಿಕ್ಕಲಮ್ಮವು
ಶೂಲಪಾಣಿಯ ಪರಮ ತೇಜದ
ಚೂಳಿಯೋ ಶಿವ ಶಿವ ಎನ್ನುತ್ತ ವಿರಾಟ ಬೆರಗಾದ ೧೧

ವಲಲ ಕಂಕ ಬೃಹನ್ನಳೆಯ ಮೈ
ಸುಳಿವ ಹೋಲುವರೆಂದು ಕೆಲಬರು
ಕೆಲರಿದೆತ್ತಣ ನರರು ತೆಗೆ ಸುರಲೋಕ ಪಾಲಕರು
ತಿಳಿಯಲರಿದೆಮಗೆಂದು ಕೆಲಬರು
ತಳವೆಳಗುಗೊಳುತಿರಲು ಮಂದಿಯ
ಕೆಲಕೆ ನೂಕಿಯೆ ತಂದೆಗುತ್ತರ ನಗುತ ಕೈಮುಗಿದ ೧೨

ತಾತ ಬಿನ್ನಹ ನಿನ್ನೆ ವೈರಿ
ವ್ರಾತವನು ಗೆಲಿದಾತನೀ ತೋ
ರ್ಪಾತನೀತನ ಮುಂದೆ ಮೆರೆವವ ಕೀಚಕಾಂತಕನು
ಈತ ನಕುಲನು ವಾಮದಲಿ ನಿಂ
ದಾತ ಸಹದೇವಾಂಕನನಿಬರಿ
ಗೀತ ಹಿರಿಯನು ಧರ್ಮನಂದನನೆಂದು ತೋರಿಸಿದ ೧೩

ರಮಣಿಯೈವರಿಗೀಕೆ ಕೆಲದಲಿ
ಕಮಲಮುಖಿಯನು ನೋಡು ತಾವಿವ
ರಮಳ ಗುಣ ಗಂಭೀರ ರಾಯರು ಪಾಂಡು ನಂದನರು
ನಮಗೆ ಭಾರಿಯ ಭಾಗ್ಯಲಕ್ಷ್ಮಿಯ
ಮಮತೆಯಾಯ್ತಿನ್ನೇನು ನೃಪಪದ
ಕಮಲದಲಿ ಬೀಳುವೆವು ನಡೆ ನಡೆ ಧನ್ಯರಹೆವೆಂದ ೧೪

ಈತನೇ ಧರ್ಮಜನು ದಿಟ ತಾ
ನೀತನೇ ಪವನಜನು ನಿಶ್ಚಯ
ವೀತನೇ ಫಲುಗುಣನು ಮಾದ್ರೀತನುಜರೇ ಇವರು
ಈ ತಳೋದರಿ ದ್ರುಪದ ಸುತೆಯೇ
ಕೌತುಕವಲೇ ಭುವನಜನ ವಿ
ಖ್ಯಾತರೆಲ್ಲಿಂದೆಲ್ಲಿ ಮೂಡಿದರೆನುತ ಬೆರಗಾದ ೧೫

ವರುಷವೊಂದಜ್ಞಾತ ವಾಸವ
ನಿರದೆ ನೂಕಿದರಿಲ್ಲಿ ಬಳಕೆಯ
ಹೊರೆಯ ಹೆಸರವು ಬೇರೆ ನಡವಳಿಯಂಗವದು ಬೇರೆ
ಮರುಳನಂತಿರೆ ಜಗಕೆ ತೋರನೆ
ಪರಮ ತತ್ವಜ್ಞಾನಿ ನಮ್ಮೀ
ಯರಸುತನ ಫಲವಾಯ್ತು ನಡೆಯೆಂದನು ಕುಮಾರಕನು ೧೬

ದರುಶನಕೆ ಮಣಿ ರತುನ ಕನಕವ
ತರಿಸಿ ಮುದದಲಿ ಮುಳುಗಿ ನಿಜ ಪರಿ
ಕರ ಸಹಿತ ಮೈಯಿಕ್ಕಿದನು ಕಾಣಿಕೆಯನೊಪ್ಪಿಸಿದ
ವರ ನೃಪಾಲ ತ್ರಾಹಿ ಭುವನೇ
ಶ್ವರ ಪರಿತ್ರಾಯಸ್ವ ಕರುಣಿಸು
ಕರುಣಿಸೆಂದಂಘ್ರಿಗಳ ಹಿಡಿದನು ಮತ್ಸ್ಯ ಭೂಪಾಲ ೧೭

ಬಗೆದೆನಪರಾಧವನು ಕರುಣಾ
ಳುಗಳ ಬಲ್ಲಹ ನೀನು ನಿನ್ನಂ
ಘ್ರಿಗಳಿಗೀ ತಲೆ ಬಂಟ ನೀನಿದ ಕಾಯಬೇಕೆನುತ
ಮಿಗೆ ಭಕುತಿ ಭಾವದಲಿ ನಿಜ ಮಂ
ತ್ರಿಗಳು ಮಕ್ಕಳು ಸಹಿತ ಮನ ನಂ
ಬುಗೆಯ ಮೆರೆದನು ಮತ್ಸ್ಯ ಭೂಪ ಮಹೀಶರಿದಿರಿನಲಿ ೧೮

ಆ ಸುದೇಷ್ಣೆ ಕುಮಾರಿಯೊಡನೆ ವಿ
ಳಾಸಿನೀಜನ ಸಹಿತ ರಾಣೀ
ವಾಸದಲ್ಲಿಗೆ ಬಂದು ಕಾಣಿಕೆ ಕೊಟ್ಟು ಪೊಡವಂಟು
ಆ ಸಕಲ ಪರಿವಾರ ಪುರಜನ
ದೇಶಜನ ಕಾಣಿಕೆಯನಿತ್ತು ಮ
ಹೀಶನಿಗೆ ಮೈಯಿಕ್ಕಿ ಕಂಡುದು ಬಹಳ ಹರುಷದಲಿ ೧೯

ಮುಗುಳು ನಗೆಯಲಿ ಭೀಮ ಪಾರ್ಥರ
ಮೊಗವ ನೋಡಿದನವನಿಪತಿ ಕೈ
ಮುಗಿದು ತಲೆವಾಗಿದರು ತಮ್ಮಂದಿರು ಮಹಿಪತಿಗೆ
ತೆಗೆಸಿದರು ಕಾಣಿಕೆಯನಾ ಮಂ
ತ್ರಿಗಳನಾ ಪರಿವಾರವನು ದೃಗು
ಯುಗದ ಕರುಣಾ ರಸದಲನಿಬರ ಹೊರೆದು ಮನ್ನಿಸಿದ ೨೦

ಶಿರವನೆತ್ತಿ ವಿರಾಟ ಭೂಪನ
ಕರೆದು ಹತ್ತಿರ ಪೀಠದಲಿ ಕು
ಳ್ಳಿರಿಸಲೊಡೆ ಮುರಿಚಿದನು ಕೆಲದಲಿ ಗದ್ದುಗೆಯ ಸರಿದು
ಪರಮ ಸುಕೃತವಲಾ ಧರಾಧೀ
ಶ್ವರನ ದರುಶನವಾಯ್ತು ಧನ್ಯರು
ಧರೆಯೊಳೆಮಗಿನ್ನಾರು ಸರಿಯೆಂದನು ವಿರಾಟ ನೃಪ ೨೧

ದೇಶ ನಿಮ್ಮದು ನಗರ ಹೆಚ್ಚಿದ
ಕೋಶ ನಿಮ್ಮದು ನನ್ನ ಜೀವ ವಿ
ಳಾಸ ನಿಮ್ಮದು ಸಲಹಬೇಹುದು ಬಿನ್ನಹದ ಹದನ
ಈ ಸಮಂಜಸ ದಿವಸದಲಿ ಸಿಂ
ಹಾಸನದಲಭಿಷೇಕವನು ಭೂ
ಮೀಶ ವಿಸ್ತರಿಸುವೆನು ಚಿತ್ತೈಸೆಂದನಾ ಭೂಪ ೨೨

ಎನಲು ನಗುತೆಂದನು ಮಹೀಪತಿ
ವಿನಯ ಮಧುರ ರಸಾಭಿಷೇಕವ
ನೆನಗೆ ಮಾಡಿದೆ ಸಾಕು ಪುನರುಕ್ತಾಭಿಷೇಕವದು
ಜನವಿದೆಮ್ಮದು ನೀನು ನಮ್ಮಾ
ತನು ಧರಿತ್ರಿಯಿದೆಮ್ಮದೆಂಬೀ
ನೆನಹು ತಾನುಪಚಾರ ನಮಗೇಕೆಂದನಾ ಭೂಪ ೨೩

ನೊಂದವರು ಭೀಮಾರ್ಜುನರು ಹಗೆ
ಯಿಂದ ಹಳುವವ ಹೊಕ್ಕು ಮನಸಿನ
ಕಂದು ಕಸರಿಕೆ ಹೋಗದಾ ದುರ್ಯೋಧನಾದಿಗಳ
ಕೊಂದು ಕಳದಲಿ ಮತ್ತೆ ಗಜ ಪುರಿ
ಗೆಂದು ಗಮಿಸುವೆವೆಂಬ ತವಕಿಗ
ರಿಂದು ತಾನೇ ಬಲ್ಲರೆಂದನು ಧರ್ಮನಂದನನು ೨೪

ಎಂದನುತ್ತರನರಸನಂಘ್ರಿಯೊ
ಳಂದು ಮಕುಟವ ಚಾಚಿ ಬಿನ್ನಹ
ವಿಂದು ನೇಮವ ಕೊಡಿ ಕುಮಾರಿಯನೀವೆನರ್ಜುನಗೆ
ಎಂದಡೇಳೇಳೆಂದು ನಸು ನಗೆ
ಯಿಂದ ಪಾರ್ಥನ ನೋಡೆ ಕೈ ಮುಗಿ
ದೆಂದನಾತನು ಮನದ ನಿಶ್ಚಯವನು ಯುಧಿಷ್ಠಿರಗೆ ೨೫

ವರುಷವಿವಳಲಿ ನಾಟ್ಯ ವಿದ್ಯೆಯ
ಪರುಟವಿಸಿದೆನು ತಂದೆಯಂತೀ
ತರುಣಿ ಭಜಿಸಿದಳಾ ಪ್ರಕಾರ ರಹಸ್ಯ ದೇಶದಲಿ
ಗುರುತನದ ಗರುವಾಯಿಯೆತ್ತಲು
ಅರಸಿಯೆಂಬುದಿದಾವ ಮತವೀ
ವರ ಕುಮಾರಿಯನೀವಡಭಿಮನ್ಯುವಿಗೆ ಕೊಡಲೆಂದ ೨೬

ಎವಗೆ ನೀವೇನಾತನೇನು
ತ್ಸವದೊಳಾಗಲಿಯೆನೆ ವಿರಾಟನ
ನವನಿಪತಿ ಮನ್ನಿಸಿದನಿತ್ತನು ನಗುತ ವೀಳೆಯವ
ಎವಗೆ ಪರಮಸ್ವಾಮಿಯೆಮ್ಮು
ತ್ಸವದ ನೆಲೆಯೆಮ್ಮೈವರಸು ಯಾ
ದವ ಶಿರೋಮಣಿ ಕೃಷ್ಣನಭಿಮತವೆಮ್ಮ ಮತವೆಂದ ೨೭

ಪೊಡವಿಯೊಡೆತನವೆಮಗೆ <ಮಿಗೆ? - ಮೂಲದಲ್ಲಿ ಎರಡಕ್ಷರ ಬಿಟ್ಟಿದೆ> ಕ
ಟ್ಟೊಡೆಯ ಕೃಷ್ಣನು ಕೃಷ್ಣನೊಡಬ
ಟ್ಟೊಡೆ ವಿವಾಹ ನಿರಂತರಾಯವು ಚಿಂತೆ ಬೇಡೆನಲು
ಒಡಬಡಲಿ ಮೇಣಿರಲಿ ಗುರು ನಿ
ಮ್ಮಡಿ ಮುರಾರಿಯ ತೋರಿಸುವಿರಾ
ದೊಡೆ ಕೃತಾರ್ಥನು ತಾನೆನುತ ಹಿಗ್ಗಿದನು ಮತ್ಸ್ಯ ನೃಪ ೨೮

ಪರಿಪರಿಯ ಪಾವುಡವ ಕಟ್ಟಿಸಿ
ಹರುಷದಲಿ ಬಿನ್ನಹದ ವೋಲೆಯ
ಬರೆಸಿದನು ವೇಗಾಯ್ಲ ದೂತರನಟ್ಟಿದನು ಭೂಪ
ಚರರು ಪಯಣದ ಮೇಲೆ ಪಯಣದ
ಭರದಿ ಬಂದರು ಕೃಷ್ಣರಾಯನ
ಪುರಕೆ ಪರಿತೋಷದಲಿ ಹೊಕ್ಕರು ರಾಜ ಮಂದಿರವ ೨೯

ಬರವ ಬಿನ್ನಹ ಮಾಡೆ ಪಡಿಹಾ
ರರು ಮುರಾರಿಯ ನೇಮದಲಿ ಚಾ
ರರನು ಹೊಗಿಸಲು ಬಂದು ಹೊಕ್ಕರು ಕೃಷ್ಣನೋಲಗವ
ದರುಶನವ ಮಾಡುತ್ತ ಚರಣಾಂ
ಬುರುಹದಲಿ ಮೈಯಿಕ್ಕಿ ದೇವನ
ಹೊರೆಯಲಿಳುಹಿದರಿವರು ಕಳುಹಿದ ಬಿನ್ನವತ್ತಳೆಯ ೩೦

ನಸುನಗುತ ಮುರವೈರಿ ಮಿಗೆ ಮ
ನ್ನಿಸಿದನವರನು ಪಾಂಡು ತನಯರ
ಕುಶಲವನು ದುರುಪದಿಯ ಸುಕ್ಷೇಮವನು ಬೆಸಗೊಳಲು
ಕುಶಲರನಿಬರು ಜೀಯ ಭಕ್ತ
ವ್ಯಸನ ಭಾರವು ನಿಮ್ಮಲಿರೆ ಜೀ
ವಿಸುವುದರಿದೇ ಪಾಂಡು ನಂದನರೆಂದರಾ ಚರರು ೩೧

ಕಳುಹಿದುಡುಗೊರೆ ಜೀಯ ನಿಮ್ಮಡಿ
ಗಳಿಗೆ ರಾಣೀವಾಸ ವರ್ಗಕೆ
ಬಲಗೆ ವಸುದೇವರಿಗೆ ದೇವಕಿಯುಗ್ರಸೇನರಿಗೆ
ಕುಲ ಗುರುಗಳಕ್ರೂರನುದ್ಧವ
ಬಲುಭುಜನು ಕೃತವರ್ಮ ಸಾತ್ಯಕಿ
ಲಲಿತ ಸಾಂಬ ಕುಮಾರ ಕಂದರ್ಪಾನಿರುದ್ಧರಿಗೆ ೩೨

ಎನಲು ನಸುನಗೆಯಿಂದ ಕುಂತಿಯ
ತನುಜರಟ್ಟಿದ ಪಾವುಡಂಗಳ
ನನಿತುವನು ತೆಗೆಸಿದನು ಕೆಲದಲಿ ಸಂಧಿ ವಿಗ್ರಹಿಯ
ದನುಜಹರನೀಕ್ಷಿಸಲು ಲಿಖಿತವ
ನನುನಯದೊಳಳವಡಿಸಿ ಬಿನ್ನಹ
ವೆನುತ ನೇಮವ ಕೊಂಡು ಕಳಕಳವಡಗೆ ವಾಚಿಸಿದ ೩೩

ಸ್ವಸ್ತಿ ದಾನವರಾಯಕುಂಜರ
ಮಸ್ತಕಾಂಕುಶ ಖೇಲನಾ ಪರಿ
ಯಸ್ತ ಯದುಕುಲ ಸಿಂಹ ಸಂಹೃತ ಜನ್ಮದುರಿತಭಯ
ಹಸ್ತಕಲಿತ ಸುದರುಶನೋರ್ಧ್ವಗ
ಭಸ್ತಿಲವಶಮಿತಾರ್ಕ ಪರಿವೃಢ
ವಿಸ್ತರಣ ಚಿತ್ತೈಸು ಕುಂತಿಯ ಸುತರ ಬಿನ್ನಪವ ೩೪

ದೇವ ನಿಮ್ಮಡಿಗಳ ಕೃಪಾ ಸಂ
ಜೀವನಿಯಲೆಮ್ಮಸುಗಳೊಡಲಿನ
ಠಾವ ಮೆಚ್ಚಿದವೊದೆದು ಹಾಯ್ದವು ವಿಪಿನ ಮಂದಿರವ
ಈ ವರುಷದಜ್ಞಾತವಾಸ ಗ
ತಾವಶೇಷಣವಾಯ್ತು ಕಂಗಳಿ
ಗೀವುದವಯವ ದರುಶನಾಮೃತಪಾನ ಸಂಪದವ ೩೫

ದಾಟಿದೆವು ನುಡಿದವಧಿಯನು ವೈ
ರಾಟ ಪುರದಲಿ ತುರುವಿಡಿದು ಮೈ
ನೋಟಕೋಸುಗ ಬಂದು ನುಗ್ಗಾಯಿತ್ತು ಕುರುಸೇನೆ
ತೋಟಿ ಜಯಿಸಿದೊಡೆಮ್ಮನರಿದು ವಿ
ರಾಟ ಮನ್ನಿಸಿ ತನ್ನ ಮಗಳ ಕಿ
ರೀಟಿ ತನಯಂಗೀವ ಭರವಿದೆ ದೇವರವಧರಿಸಿ ೩೬

ಮದುವೆಯೆಂಬುದು ನೆವ ನಿಜ ಶ್ರೀ
ಪದವ ತೋರಿಸಬೇಕು ವನ ವಾ
ಸದ ಪರಿಕ್ಲೇಶಾನು ಸಂತಾಪವನು ಬೀಳ್ಕೊಡಿಸಿ
ಕದಡು ಹೋಗಲು ಕಾಣಬೇಹುದು
ಹದುಳವಿಟ್ಟೆಮಗುಚಿತ ವಚನದ
ಹದವಳೆಯಲುತ್ಸಾಹಸಸಿಯನು ದೇವ ಸಲಹುವುದು ೩೭

ಕರುಣಿ ಬಿಜಯಂಗೈದು ಭಕ್ತರ
ಹೊರೆಯ ಬೇಹುದು ಬೇಡಿಕೊಂಬೆನು
ಅರಸಲೇಕೆಳೆಗಂದಿ ತಾಯ್ತಾನರಸುವಂದದಲಿ
ಚರಣಭಜಕ ಕುಟುಂಬನೆಂಬೀ
ಬಿರುದ ಪಾಲಿಸಿ ಬಿನ್ನಹವನವ
ಧರಿಸಿ ಕಾಣಿಸಿ ಕೊಡುವುದೆಮಗೆ ಮಹಾ ಪ್ರಸಾದವನು ೩೮

ಕೇಳಿ ಹರುಷಿತನಾಗಿ ಕಡು ಕರು
ಣಾಳು ಹೊಂಪುಳಿಯೋಗಿ ಭಕ್ತರ
ಮೇಲಣೊಲವಿನ ಬಹಳ ಪರಮ ಸ್ನೇಹ ಪಸರಿಸಿತು
ಕೇಳಿದೆವೆ ಹರ ಹರ ಯುಧಿಷ್ಠಿರ
ನೇಳಿಗೆಯನಾ ಕೌರವೇಶ್ವರ
ನೂಳಿಗವನೆನುತಸುರರಿಪು ನೋಡಿದನು ಕೆಲಬಲನ ೩೯

ಚಿಂತೆ ಬೀತುದು ಪಾಂಡು ಮಾವನ
ಸಂತತಿಗಳಜ್ಞಾತ ವಾಸವ
ನೆಂತು ಪಂಥದ ಮೇಲೆ ಕಳೆದರೊ ನಮ್ಮ ಪುಣ್ಯವಿದು
ಕುಂತಿ ದೇವಿಯರುಮ್ಮಳಿಸೆ ನಾ
ವೆಂತು ಬದುಕುವೆವಕಟೆನುತ್ತ ನಿ
ರಂತರವು ಮರುಗುವನು ಬೊಪ್ಪನು ಶಿವ ಶಿವಾಯೆಂದ ೪೦

ಭವಣಿಗೆಯ ಬಂದಡವಿಯಲಿ ಪಾಂ
ಡವರು ನವೆದರು ರಾಜ್ಯವನು ಯಾ
ದವರು ನಾವನುಭವಿಸುತಿದ್ದೆವು ನವೆದರಿನ್ನಬರ
ಅವರ ಸೊಗಸೇ ನಮ್ಮ ಸೊಗಸುಗ
ಳವರ ದುಗುಡವೆ ನಮ್ಮದದರಿಂ
ದವರ ವಿಮಳಾಭ್ಯುದಯ ನಮಗೆಂದಸುರರಿಪು ನುಡಿದ ೪೧

ಕಾಲ ಕೈಗೂಡುವೊಡೆ ಲೇಸಿನ
ಮೇಲೆ ಲೇಸುಗಳೊದಗುವವು ಭೂ
ಪಾಲ ಕುಂತಿಯ ಸುತರ ಬೆಳವಿಗೆ ಮೊದಲ ಮಂಗಳವು
ಮೇಲೆ ತಂಗಿಯ ಮಗನ ಮದುವೆ ವಿ
ಶಾಲ ಸುಖವದು ನಿಖಿಳ ಯಾದವ
ಜಾಲ ಪಯಣವ ಮಾಡಲೆಂದಸುರಾರಿ ನೇಮಿಸಿದ ೪೨

ಚರರಿಗುಡುಗೊರೆ ಗಂಧ ನಿಖಿಲಾ
ಭರಣ ಕತ್ತುರಿ ಕರ್ಪುರವನಿ
ತ್ತರಿದಿಶಾಪಟ ಬೀಳುಗೊಟ್ಟನು ರಾಯಸವ ಬರೆಸಿ
ಮರಳಿ ದೂತರು ಬಂದು ಮತ್ಸ್ಯನ
ಪುರವ ಹೊಕ್ಕರು ಕೃಷ್ಣರಾಯನ
ಕರುಣದಳತೆಯ ಬಿನ್ನವಿಸಿದರು ಪಾಂಡು ತನಯರಿಗೆ ೪೩

ಬಳಿಕ ಸುಮುಹೂರ್ತದಲಿ ಮತ್ಸ್ಯನ
ಹೊಳಲ ಹೊರವಂಟುತ್ತರ ದಿಶಾ
ವಳಯದಲಿ ರಚಿಸಿದರುಪಪ್ಲವ್ಯಾಖ್ಯ ಪುರವರವ
ನೆಲನಗಲದಲಿ ಕಟ್ಟಿ ಕೇರಿಯ
ನಳವಡಿಸಿದರು ನಿಖಿಳ ನೃಪರಿಗೆ
ಬಳಿಯನಟ್ಟಿದನುತ್ತರೋತ್ತರವಾದುದಿವರುದಯ ೪೪

ಜೋಳಿ ಹರಿದವು ನಿಖಿಳ ರಾಯರಿ
ಗೋಲೆಯುಡುಗೊರೆಯಿಕ್ಕಿದವು ಪಾಂ
ಚಾಲಪತಿ ಹೊರವಂಟ ಮೂರಕ್ಷೋಣಿ ಬಲ ಸಹಿತ
ನೀಲನು ಯುಧಾಮನ್ಯು ಸಮರ ಕ
ರಾಳ ಧೃಷ್ಟದ್ಯುಮ್ನ ಕೀರ್ತಿ ವಿ
ಶಾಲ ಧೀರ ಶಿಖಂಡಿ ಸಹಿತಾ ದ್ರುಪದನೈತಂದ ೪೫

ಇದಿರುಗೊಂಡರು ಹರುಷದಲಿ ದುರು
ಪದಿಯ ಬಾಂಧವ ಪೈಕವನು ಮಿಗೆ
ಮುದದಿ ಕಾಣಿಸಿಕೊಂಡರಖಿಳ ಮಹಾ ಮಹೀಶ್ವರರ
ಒದಗಿತಖಿಳಕ್ಷೋಹಿಣಿ ಬಲ ಸಂ
ಪದವನುನ್ನತ ವಸ್ತುಗಳ ಸೊಂ
ಪೊದವಿದವು ಕೈಗೈದು ಮದುವೆಯ ಮಂಗಳಾಭ್ಯುದಯ ೪೬

ದೇವನೀ ಬಹನೆಂದು ಬಂದರು
ದಾವಣಿಯ ಹವಣರಿದು ಬಳಿಕ ಮ
ಹಾ ವಿಳಾಸದಳೊಪ್ಪವಿಟ್ಟರು ತಮ್ಮ ನಗರಿಗಳ
ಹೂವಲಿಯ ವೀಧಿಗಳ ನವ ರ
ತ್ನಾವಳಿಯ ಸೂಸಕದ ಭದ್ರದ
ಲೋವೆಗಳ ಲಂಬಳದಲೆಸೆದವು ಕೇರಿ ಕೇರಿಗಳು ೪೭

ಚಾರುತರ ಕತ್ತುರಿಯ ಸಾದಿನ
ಸಾರಣೆಯ ಕುಂಕುಮದ ರಸಗಳ
ಕಾರಣೆಯ ನವಚಿತ್ರಪತ್ರದ ಬಹಳ ಭಿತ್ತಿಗಳ
ಓರಣದ ಬೀದಿಗಳ ತಳಿಗೆಯ
ತೋರಣದ ಹೊಂಜಗುಲಿಗಳ ಪ
ನ್ನೀರ ಚಳೆಯದ ರಚನೆಯಲಿ ಮನೆ ಮನೆಗಳೊಪ್ಪಿದವು ೪೮

ಕಟ್ಟಿದವು ಗುಡಿ ಮನೆಗಳಲಿ ಮೇ
ಲ್ಕಟ್ಟು ಬಿಗಿದವು ಪುರದ ನಾರಿಯ
ರುಟ್ಟು ತೊಟ್ಟರು ಕಳಶ ಕನ್ನಡಿ ಸಹಿತ ದೇಶಿಯಲಿ
ಇಟ್ಟಣಿಸಿ ಗಜ ವಾಜಿ ರಥ ಸಾ
ಲಿಟ್ಟು ತೋರುವ ದನುಜರಾಯ ಘ
ರಟ್ಟನನು ನಡೆದಿದಿರುಗೊಂಡರು ಪಾಂಡು ನಂದನರು ೪೯

ಕಳಶ ಕನ್ನಡಿ ವಾದ್ಯರವ ಮಂ
ಗಳ ಮಹಾಂಬುಧಿ ಮಸಗಿದವೊಲು
ಜ್ವಲ ಪತಾಕಾವಳಿಯ ವಿಮಳಚ್ಛತ್ರ ಚಾಮರದ
ಹೊಳೆವ ಕಂಗಳ ಮುಖದ ಕಾಂತಿಯ
ಮೊಲೆಗಳೊಡ್ಡಿನ ಮಂದ ಗಮನದ
ತಳಿದ ಮುಸುಕಿನ ಮೌಳಿಕಾತಿಯರೈದಿತೊಗ್ಗಿನಲಿ ೫೦

ಹೊಳಹು ಮಿಗೆ ದೂರದಲಿ ಗರುಡನ
ಹಳವಿಗೆಯ ಕಂಡಂದಣಂಗಳ
ನಿಳಿದು ಮೈಯಿಕ್ಕಿದರು ದ್ರುಪದ ವಿರಾಟ ಪಾಂಡವರು
ಬಳಿಕ ಭೂಪರು ಕಾಲು ನಡೆಯಲಿ
ನಲಿದು ಬರುತಿರಲಾನೆಯಿಂದಿಳೆ
ಗಿಳಿದು ಬಿಜಯಂಗೈದನಸುರಾರಾತಿ ಕರುಣದಲಿ ೫೧

ಇತ್ತನವರಿಗೆ ಸಮಯವನು ದೇ
ವೋತ್ತಮನು ನಿಗಮೌಘವರಸಿದ
ಡತ್ತಲಿತ್ತಲು ಸರಿವ ಮುನಿಗಳ ಮನಕೆ ಮೈಗೊಡದ
ಹೆತ್ತ ಮಕ್ಕಳು ನಿಲಲಿ ಭಕ್ತರ
ನಿತ್ತ ಕರೆ ನೆನೆವರಿಗೆ ತನ್ನನು
ತೆತ್ತು ಬದುಕುವೆನೆಂಬ ಬೋಳೆಯರರಸ ನಡೆತಂದ ೫೨

ಬಲದ ಪದಘಟ್ಟಣೆಯ ರಜದಿಂ
ಬೆಳುಪಡಗಿದಂಬರದ ಮಾರ್ಗದ
ಝಳದ ಕಿರುಬೆಮರುಗಳ ಲಲಿತ ಕಪೋಲ ಮಂಡಲವ
ಕೆಲದ ಪಾಯವಧಾರುಗಳ ಕಳ
ಕಳದ ಕರುಣಾರಸವ ಸೂಸುವ
ಮೆಲುನಗೆಯ ಸಿರಿಮೊಗದ ಕೃಷ್ಣನ ಕಂಡುದಾ ಸೇನೆ ೫೩

ಬಾಗಿದವು ಬರಿಕೈಗಳನು ಹಣೆ
ಗಾಗಿ ಮುರುಹಿದವಾನೆಗಳು ತಲೆ
ವಾಗಿ ಗುಡಿಗಟ್ಟಿದವು ಹೇಷಾರವದ ತೇಜಿಗಳು
ತೂಗಿ ತನುವನು ಪುಳಕದಲಿ ಮನ
ಲಾಗು ಮಿಗೆ ಮೈಮರೆದು ಹರುಷದ
ಸಾಗರದಲೋಲಾಡುತಿರ್ದುದು ಕೂಡೆ ತಳತಂತ್ರ ೫೪

ಅಂಗನೆಯರರವಿಂದನಾಭನ
ಮಂಗಳ ಶ್ರೀಮೂರ್ತಿ ಸುಧೆಯನು
ಕಂಗಳಲಿ ಕುಡಿಕುಡಿದು ಪಡೆಯರು ಮತ್ತೆ ದಣಿವುಗಳ
ಅಂಗಜನ ಪೆತ್ತಯ್ಯ ನೀ ರೂ
ಹಿಂಗೆ ಬಡವನೆಯೆನುತ ಮುರಹರ
ನಂಗ ಶೋಭೆಯ ಬಂದಿಯಲಿ ಸಿಲುಕಿತ್ತು ಸತಿನಿವಹ ೫೫

ಎರಡು ಸೇರೆಯ ತುಂಬಿ ರತ್ನವ
ಸುರಿದು ಮೈಯಿಕ್ಕಿದನು ಭೂಪತಿ
ಚರಣದಲಿ ಚತುರಾಸ್ಯಜನಕನ ವಿಮಳಭಕ್ತಿಯಲಿ
ನರ ವೃಕೋದರ ನಕುಲ ಸಹದೇ
ವರು ವಿರಾಟ ದ್ರುಪದ ಮೊದಲಾ
ಗಿರೆ ಸಮಸ್ತ ನೃಪಾಲಕರು ಮೈಯಿಕ್ಕಿತೊಗ್ಗಿನಲಿ ೫೬

ಶಿರವ ನೆಗಹಿ ಯುಧಿಷ್ಠಿರನ ಮೈ
ಮುರಿಯಲೀಯದೆ ಕೃಷ್ಣನಪ್ಪಿದ
ನುರುತರ ಪ್ರೇಮದಲಿ ಭೀಮಾರ್ಜುನರ ಯಮಳರನು
ಹರುಷದಲಿ ತೆಗೆದಪ್ಪಿ ಭೂಮೀ
ಶ್ವರರ ಮನ್ನಿಸಿದನು ವಿಳಾಸಿನಿ
ಯರ ವಿಡಾಯಿಯಲರಸಿ ಕಂಡಳು ಬಂದು ಮುರಹರನ ೫೭

ಕಾಣಿಕೆಯ ಕೈಕೊಂಡು ರಾಯನ
ರಾಣಿಯನು ಮನ್ನಿಸಿದ ತನ್ನಯ
ರಾಣಿವಾಸದ ಹೊರಗೆ ನೇಮವ ಕೊಟ್ಟು ಕಳುಹಿದನು
ರಾಣಿ ರುಕುಮಿಣಿಯಾದಿಯಾದ
ಕ್ಷೋಣಿಧರನರಸಿಯರನನಿಬರ
ಕಾಣಿಕೆಯ ಕೊಟ್ಟೆರಗಿ ದುರುಪದಿ ಕಂಡಳೊಲವಿನಲಿ ೫೮

ದರುಶನವನೊಲಿದಿತ್ತು ವಸುದೇ
ವರನು ದೇವಕಿ ದೇವಿಯರ (ಪಾ: ದೇವಕಿಯರ) ಸಂ
ಕರುಷಣನ ಮಹದುಗ್ರಸೇನನ ಕಂಡನವನೀಶ
ವರ ಸುಭದ್ರಾದೇವಿ ಭಾವಂ
ದಿರಿಗೆ ವಂದಿಸಿದಳು ಕುಮಾರನು
ಹರುಷದಲಿ ಬಿಗಿಯಪ್ಪಿದನು ಅಭಿಮನ್ಯು ಪಾಂಡವರ ೫೯

ಕೈದಣಿಯೆ ವಸುದೇವನಳಿಯನ
ಮೈದಡವಿದನು ಮಗನೆ ಬನದೊಳ
ಗೊಯ್ದು ವಿಧಿ ಬಂಧಿಸಿತಲಾ ಸಾಕಿನ್ನು ದೈವವನು
ಬೈದು ಮಾಡುವುದೇನು ದುರುಪದಿ
ಯೈದೆತನವುಂಟಾಗಿ ದುರಿತವ
ಕೊಯ್ದು ನರಲೋಕಕ್ಕೆ ಬಂದಿರಿ ನಮ್ಮ ಪುಣ್ಯದಲಿ ೬೦

ಅರಸಿಯೈದೆತನಕ್ಕೆ ನಮ್ಮೈ
ವರ ನಿಜಾಯುಷ್ಯಕ್ಕೆ ರಾಜ್ಯದ
ಸಿರಿಯ ಸೊಂಪಿಗೆ ನಿಮ್ಮ ಮಗನೀ ಕೃಷ್ಣ ಹೊಣೆ ನಮಗೆ
ಸುರರು ಸರಿಯಿಲ್ಲೆಮಗೆ ಮಿಕ್ಕಿನ
ನರರು ಗಣ್ಯವೆ ಮಾವ ಕೇಳೆಂ
ದರಸ ವಸುದೇವನನು ಮಧುರೋಕ್ತಿಯಲಿ ಮನ್ನಿಸಿದ ೬೧

ತಂದೆ ಬೇಡೆಮಗವ್ವೆ ಬೇಡೆಮ
ಗಿಂದುಮುಖಿಯರನೊಲ್ಲೆವಾವ್ ಮನ
ಸಂದು ಮೆಚ್ಚಿಹೆವೆಮ್ಮ ಭಕ್ತರಿಗೆಂಬನನವರತ
ನೊಂದೆನೆಂಬನು ತನ್ನವರು ಮನ
ನೊಂದರಾದೊಡೆ ತನ್ನವರ ಸುಖ
ವಿಂದು ತನ್ನದದೆಂಬುದೇ ಸಿರಿಕೃಷ್ಣ ಮತವೆಂದ ೬೨

ಅರಸಿಯರ ಬಗೆಗೊಳ್ಳ ಮಕ್ಕಳ
ಸರಕು ಮಾಡನು ದೇಶ ಕೋಶದ
ಸಿರಿಯ ಗಣಿಸನು ಖಡ್ಡಿಗೊಳ್ಳನು ಗಾಢಗರ್ವಿತರ
ಹರಿ ಪರಾಯಣರೆಂದೊಡವರಿಗೆ
ಹರಹಿಕೊಂಬನು ಮಗನ ಶೀಲವು
ನರರ ಪರಿಯಲ್ಲೆಂದನಾ ವಸುದೇವನಳಿಯಂಗೆ ೬೩

ಲೋಗರೇ ನೀವೆಮಗೆ ನಿವಗರ
ಗಾಗಿ ಕರಗುವನದು ನಿಲಲಿ ತನ
ಗಾಗದವರಿಗೆ ತನ್ನ ತೆರುವನು ಕೊಲುವ ಹಗೆಗೊಲಿವ
ಲೋಗರೆನ್ನವರೆಂದು ಲೋಗರಿ
ಗಾಗಿ ಬದುಕುವೆನೆಂಬ ಬಲುಗೈ
ಚಾಗಿ ಕೃಷ್ಣನನೇನ ಹೇಳುವೆನೆಂದನರಸಂಗೆ ೬೪

ಬೊಪ್ಪನವರೇಯೆಮ್ಮ ದೂರದೆ
ಯಿಪ್ಪವರು ತಾವಲ್ಲ ಸಾಕಿ
ನ್ನೊಪ್ಪದಲಿ ಬಾಯೆಂದು ಮುರರಿಪು ಕರೆದನವನಿಪನ
ಚಪ್ಪರಿಸಿ ಕೌರವರು ತುರುಗಳ
ತಪ್ಪಿಸಿದುದೇನಾಯ್ತು ಪಾರ್ಥನ
ದರ್ಪದನುವೆಂತೆಂದು ಬೆಸಗೊಂಡನು ಮುರಧ್ವಂಸಿ ೬೫

ಹೂಹೆಗೆಲ್ಲಿಯ ದರ್ಪ ಮನುಜನ
ಸಾಹಸವು ಬೇರೇನು ಯಂತ್ರದ
ಹಾಹೆ ಯಂತ್ರವನುಳಿದು ಜೀವಿಸಲರಿವುದೇ ಬೇರೆ
ದೇಹಿ ನೀ ನಾವೆಲ್ಲ ನಿನ್ನಯ
ದೇಹವಿದರೊಳಗೆಮಗೆ ಗರ್ವದ
ಗಾಹಿದೆಲ್ಲಿಯದೆಂದು ಬಿನ್ನವಿಸಿದನು ಯಮಸೂನು ೬೬

ಎಸಳು ಮೊನೆಯೊಂದಾಗಿ ತಾವರೆ
ಮುಸುಕುತಿದೆ ನೈದಿಲೆಯ ನೆತ್ತಿಯ
ಬೆಸುಗೆ ಬಿಡುತಿದೆ ಜಕ್ಕವಕ್ಕಿಯ ತೆಕ್ಕೆ ಸಡಿಲುತಿದೆ
ದೆಸೆದೆಸೆಯ ತಾಣಾಂತರದ ಹೊಂ
ಬಿಸಿಲು ಬೀತುದು ಜೀಯ ಬಿನ್ನಹ
ವಸುಧೆ ತಂಪೇರಿತ್ತು ಸಂಧ್ಯಾ ಸಮಯವಾಯ್ತೆಂದ ೬೭

ನಗುತ ಹರಿ ನಿಂದಿರಲು ಕೈ ದಂ
ಡಿಗೆಯವರು ಹೊದ್ದಿದರು ರೂವಾ
ರಿಗೆಗೆ ಬಿಜಯಂಗೈದನುಘೆಯೆಂದುದು (ಪಾ: ಬಿಜಯಂಗೈದನುಘೇಯೆಂದುದು) ಸುರಸ್ತೋಮ
ಬಿಗಿದ ದಡ್ಡಿಯ ಬದ್ದರದ ಬೀ
ಯಗದ ರಾಣೀವಾಸದಂದಣ
ತೆಗೆದು ನಡೆದುದು ಮುಂದೆ ಸಂತೋಷದಲಿ ಯದುಸೇನೆ ೬೮

ಹೊಕ್ಕನಸುರಾರಾತಿ ಪಾಂಡವ
ರಿಕ್ಕೆಲದಿ ಬರೆ ನಗರಜನ ಮೈ
ಯಿಕ್ಕಿ ಬೀದಿಯ ಧೂಳು ಕವಿದುದು ಮುಂದೆ ಸಂದಣಿಸಿ
ಹೊಕ್ಕು ಹೊಗಳುವ ಸುತಿಗಳಿಗೆ (ಸ್ತುತಿಗಳಿಗೆ?) ಕೈ
ಮಿಕ್ಕ ಕಳ್ಳನು ಪಾಂಡು ಸುತರಿಗೆ
ಸಿಕ್ಕಿದನು ಶಿವಯೆನುತಲಿರ್ದುದು ಸೂರಿ ಸಂದೋಹ ೬೯

ಮೇಲೆ ಬೀಳುವ ಮಂದಿಯನು ಕೈ
ಗೋಲಿನವರಪ್ಪಳಿಸೆ ಲಕ್ಷ್ಮೀ
ಲೋಲನವದಿರ ಜರೆದು ಕಾಣಿಸಿಕೊಳುತ ಪುರಜನವ
ಮೇಲು ನೆಲೆಯುಪ್ಪರಿಗೆಗಳ ವರ
ಬಾಲೆಯರ ಕಡೆಗಂಗಳೆಸೆವ ನಿ
ವಾಳಿಗಳ ಕೈಕೊಳುತ ಹೊಕ್ಕನು ರಾಜಮಂದಿರವ ೭೦

ಹಿಡಿದರಾರತಿಗಳನು ಬಣ್ಣದ
ಸೊಡರು ಸುಳಿದವು ಮುಂದೆ ನೆಲನು
ಗ್ಗಡಿಪ ಭೀಮಾರ್ಜುನರ ಮೇಳಾಪದಲಿ ಹರುಷದಲಿ
ಹಿಡಿದ ಕೈದೀವಿಗೆಗಳನು ಕೈ
ದುಡುಕಿ ತಿವಿದಾಡುತ್ತ ಕಾಂತಿಯ
ಕಡಲ ಮಣಿಮಯ ಪೀಠದಲಿ ಮಂಡಿಸಿದನಸುರಾರಿ ೭೧

ಬೀಳುಗೊಟ್ಟನು ಸಕಲ ಭೂಮೀ
ಪಾಲರನು ಕುಂತಿಯ ಕುಮಾರರ
ಮೇಳದಲಿ ಪರಿಮಿತದಲಸುರಾರಾತಿ ನಸು ನಗುತ
ಸೋಲದಲಿ ಮೈದಣಿದು ಕುರು ಭೂ
ಪಾಲನುಚಿತವ ಮಾಡಿ ರಾಜ್ಯವ
ನಾಳಿಸುವ ಹದನುಂಟೆ ನಿಮ್ಮಾಳಾಪವೇನೆಂದ ೭೨

ಮರಳಿದವು ತುರುವಿತ್ತಲಹಿತರು
ಸರಿದರತ್ತಲು ಮತ್ಸ್ಯನೆಮ್ಮೈ
ವರನು ನಾವೆಂದರಿದು ಕೊಂಡಾಡಿದನು ವಿನಯದಲಿ
ವರ ಸುಭದ್ರಾ ನಂದನಂಗು
ತ್ತರೆಯನೀವರ್ಥಿಯಲಿಯಿರಲಾ
ಕರೆಯಲಟ್ಟಿದೆವೆಂದು ಬಿನ್ನವಿಸಿದನು ಭೂಪಾಲ ೭೩

ಕೊಳುಗೊಡೆಗೆ ಸೇರುವರೆ ಮದುವೆಯ
ನೊಲಿದು ದೇವರು ಮಾಡುವುದು ಮೇ
ಲಿಳೆಯ ಕಾರ್ಯವ ಬುದ್ಧಿಗಲಿಸುವದೆಮ್ಮನುದ್ಧರಿಸಿ
ಬಳಿಕ ಬಿಜಯಂಗೈವುದಿದು ಹದ
ನೆಲೆ ದಯಾಂಬುಧಿ ಕೇಳೆನಲು ನೃಪ
ತಿಲಕನುಚಿತದ ಬಿನ್ನಹಕೆ ಮನವೊಲಿದು ಹರಿ ನುಡಿದ ೭೪

ಕೊಳುಗೊಡೆಗೆ ತಪ್ಪೇನು ವಸುವಿನ
ಕುಲ ವಿರಾಟನು ಇಂದು ವಂಶಾ
ವಳಿಯವರು ನೀವಾಭಿಜಾತ್ಯದೊಳಿಲ್ಲ ಹಳಿವುಗಳು
ಒಳನುಡಿಗಳಲಿ ದೈವ ಶಕುನಾ
ವಳಿಗಳಾದೊಡೆ ಹರುಷದಲಿ ಮಂ
ಗಳ ಮುಹೂರ್ತವ ಮಾಡಿಯೆಂದನು ಕೃಷ್ಣ ನಸುನಗುತ ೭೫

ಒಸಗೆಯಲಿ ನಿಸ್ಸಾಳ ತತಿ ಗ
ರ್ಜಿಸಿದವಖಿಳ ಜನಂಗಳುತ್ಸಾ
ಹಿಸಿತು ಕನ್ಯಾವರಣವಾಯಿತು ವೈದಿಕೋಕ್ತಿಯಲಿ
ಎಸೆಯಲಭಿಮನ್ಯುವನು ಸಿಂಗಾ
ರಿಸಿತು ಯದು ಪಾಂಚಾಲ ಮತ್ಸ್ಯ
ಪ್ರಸರದಲಿ ಮೆಟ್ಟಕ್ಕಿ ಜೀರಿಗೆ ಬೆಲ್ಲವನುವಾಯ್ತು ೭೬

ವರ ಮುಹೂರ್ತದ ಘಳಿಗೆವಟ್ಟಲ
ಭರಿತದೊಳು ಪುಣ್ಯಾಹವದ ವಿ
ಸ್ತರದಲಕ್ಷತೆ ತಳಿದು ತಂದರು ವಿಮಲ ಮಂಟಪಕೆ
ಪರಮ ಋಷಿಗಳ ಹೋಮದಲಿ ಶಿಖಿ
ವರನ ಬಲಗೊಂಡರು ಕುಮಾರಿಯ
ವರಿಸೆ ವೈದಿಕದಿಂದ ಬಂದಳು ವರನ ವಾಮದಲಿ ೭೭

ವಿಭವವೈವಡಿಯಾಗೆ ಸದ್ವಿಜ
ಸಭೆಯನಾರಾಧಿಸಿದನವನೀ
ವಿಭುಗಳಿತ್ತರು ಮುಯ್ಗಳುಡುಗೊರೆ ರತ್ನ ಭೂಷಣವ
ಅಭವ ಸನ್ನಿಭ ವೀರನಾಗೆಂ
ದಿಭಗಮನೆಯರು ಕೃಷ್ಣನರಸಿಯ
ರಭಿಜನಾಮಲ ತಿಲಕನನು ಹರಸಿದರು ಹರುಷದಲಿ ೭೮

ಇದು ಶುಭೌಘದ ಗರುಡಿ ಬಹು ಸಂ
ಪದದ ನೆಲೆಮನೆ ಸೊಂಪಿನಾಗರ
ವಿದು ಪರಾನಂದ ಪ್ರವಾಹದ ಜನ್ಮಭೂಮಿಯಿದು
ಮುದದ ಕೇಳೀಸ್ಥಾನ ವಿಮಲಾ
ಭ್ಯುದಯದೋಲಗಶಾಲೆ ಲಕ್ಷ್ಮೀ
ಸದನವೆನೆ ರಂಜಿಸಿದುದಭಿಮನ್ಯುವಿನ ವೈವಾಹ ೭೯

ಯಾದವರು ಪಾಂಚಾಲ ಮತ್ಸ್ಯರು
ಮೇದಿನೀಪತಿ ಪಾಂಡು ಸೋಮಕ
ರಾದಿಯಾದನ್ವಯವನಗಣಿತ ಬಂಧು ಬಳಗವನು
ಆದರಿಸಿದನು ವಿನಯದಲಿ ವಿ
ತ್ತಾದಿ ಸತ್ಕಾರದಲಿ ದಣಿದುದು
ಮೇದಿನೀಜನವವನಿಪನ ಸನ್ಮಾನ ದಾನದಲಿ ೮೦

ವರ ಚತುರ್ಥಿಯೊಳಿರುಳು ಮೆರೆದರು
ಪುರದಲುತ್ಸಾಹದಲಿ ದಂಪತಿ
ವರರು ಭೂಮೀಚಾರ ಚಮರದ ಚಾತುರಂಗದಲಿ
ಮರುದಿವಸವವಭೃತವ ನೆರೆ ವಿ
ಸ್ತರಿಸಿದರು ಪನ್ನೀರ ಹೊಂಗೊ
ಪ್ಪರಿಗೆಗಳ ಕುಂಕುಮದ ಘಟವಾಸಕದ ರಚನೆಯಲಿ ೮೧

ಕನಕ ಮಣಿಗಳ ತೊಟ್ಟು ಜಾಜಿಯ
ನನೆಯ ಆದಳಿಕೆಯಲಿ ಮದನನ
ಮೊನೆಯ ಖಾಡಾಖಾಡಿ ಖಾತಿಯರೈದೆ ಹೊಯ್ ಹೊಯ್ದು
ದನುಜಹರನರಸಿಯರು ಕುಂತಿಯ
ತನಯರರಸಿಯರೊಡನೆ ಮತ್ಸ್ಯನ
ವನಿತೆಯರು ಪಾಂಚಾಲಿನಿಯರೋಕುಳಿಯನಾಡಿದರು ೮೨

ಧರಣಿ ನೆನೆದುದು ಗಂಧ ರಸ ಕ
ತ್ತುರಿಯ ಪನ್ನೀರುಗಳ ಹೊನಲೊಡೆ
ವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ
ತರಣಿ ಪರಿಮಳಿಸಿದನು ಪವನನ
ಸುರಭಿತನವಚ್ಚರಿಯೆ ಗಗನದ
ಪರಮ ಸೌರಭಕಲಸಿ ಕೊಂಡುದು ಸಕಲ ಸುರಕುಲವ ೮೩

ಬಳುವಳಿಯ ನಿಖಿಳಾವನೀ ಮಂ
ಡಲವನನುಪಮ ಕೋಶ ವರ್ಗದ
ಲಲನೆಯರ ಗಜ ವಾಜಿ ರಥ ಪಾದಾತಿ ಗೋವ್ರಜವ
ಅಳಿಯಗಿತ್ತು ವಿರಾಟ ನೃಪ ಯದು
ಕುಲವನಾ ಪಾಂಚಾಲ ಚೈದ್ಯಾ
ವಳಿಯನುತ್ತಮ ವಸ್ತು ವಾಹನದಿಂದ ಮನ್ನಿಸಿದ ೮೪

ಆದುದಭಿಮನ್ಯುವಿನ ಮದುವೆ ಮ
ಹಾ ದಯಾಂಬುಧಿ ಕೃಷ್ಣ ರಾಯನ
ಪಾದ ದರುಶನವಾಗಲಿಮ್ಮಡಿಸಿತ್ತು ನಮ್ಮುದಯ
ಮೇದಿನಿಯ ನಾವೊತ್ತೆಯಿಟ್ಟೆವು
ಕಾದುಕೊಂಡೆವು ಸತ್ಯವನು ಮೇ
ಲಾದುದನು ನೀ ಕರುಣಿಸೆಂದರು ವೀರ ನರಯಣನ ೮೫

ಇತಿ ಶ್ರೀಮದಚಿಂತ್ಯ ಮಹಿಮ ಗದುಗಿನ ವೀರನಾರಾಯಣ ಚರಣಾರವಿಂದ
ಮಕರಂದ ಮಧುಪಾನ ಪರಿಪುಷ್ಟ ವಚಃ ಷಟ್ಪದೀ ನಿಕಾಯ
ಶ್ರೀಮತ್ಕುಮಾರವ್ಯಾಸ ಯೋಗೀಂದ್ರ ವಿರಚಿತಮಪ್ಪ
ಕರ್ಣಾಟ ಭಾರತ ಕಥಾಮಂಜರಿಯೊಳ್
ವಿರಾಟಪರ್ವಂ ಸಮಾಪ್ತಮಾದುದು

(ಸಂಗ್ರಹ: ಸುನಾಥ/ಸುಪ್ತದೀಪ್ತಿ (ಜ್ಯೋತಿ ಮಹದೇವ)

Sunday, August 22, 2010

ಸಭಾಪರ್ವ: ೦೨. ಎರಡನೆಯ ಸಂಧಿ

ಸೂ. ಬಲಿಮಥನ ಫಲುಗುಣರು ಸಹಿತ
ಗ್ಗಳೆಯನೇಕಾ೦ಗದಲಿ ರಣದಲಿ
ಕಲಿ ಜರಾಸ೦ಧನನು ಸೀಳಿದು ಬಿಸುಟನಾ ಭೀಮ

ಕೇಳು ಜನಮೇಜಯ ದರಿತ್ರೀ
ಪಾಲಮ೦ತ್ರಾಳೋಚನೆಗೆ ಭೂ
ಪಾಲ ಕರಸಿದನನುಜರನು ಧೌಮ್ಯಾದಿ ಮ೦ತ್ರಿಗಳ
ಮೇಳವದ ತನಿವೆಳಗುಗಳ ಮಣಿ
ಮೌಳಿಮ೦ಡಿತರುಪ್ಪರದ ಪಡಿ
ಸೂಳು ಪಾಯವಧಾರಿನಲಿ ಹೊಕ್ಕರು ಸಭಾ ಸ್ಥಳವ ೧

ದ್ರುಪದ ಧೃಷ್ಟದ್ಯುಮ್ನ ಮತ್ಸ್ಯಾ
ಧಿಪತಿ ಕೇಕಯ ಪಾ೦ಡವಾತ್ಮಜ
ರು ಪತಿಕಾರ್ಯ ವಿಚಾರನಿಷ್ಠರು ಬ೦ದರೋಲಗಕೆ
ನೃಪತಿ ಹದನೇನಮರ ಮುನಿವರ
ನುಪಚರಿತ ಮ೦ತ್ರಾರ್ಥ ಸಿದ್ದಿಗೆ
ರಪಣ ನಮಗು೦ಟೀಗ ಬೆಸಸೆ೦ದರು ಯುಧಿಷ್ಠಿರಗೆ ೨

ಧರೆ ನಮಗೆ ವಶವರ್ತಿ ಖ೦ಡೆಯ
ಸಿರಿ ನಮಗೆ ಮೈವಳಿ ಯುಧಿಷ್ಠಿರ
ನರಸುತನ ನಳ ನಹುಷ ನೃಗ ಭರತಾದಿ ಭೂಮಿಪರ
ಮರೆಸಿತೆ೦ಬುದು ಲೋಕವೀ ನೀ
ಬ್ಬರದ ಹೆಸರೆಮಗಿ೦ದು ಬೊಪ್ಪನ
ಸಿರಿಯನೇವಣ್ಣಿಸುವೆನೆ೦ದನು ಸುಯ್ದು ಯಮಸೂನು ೩

ಅಲ್ಲಿಸುರರಲಿ ಸುಪ್ರತಿಷ್ಠಿತ
ನಲ್ಲ ಗಡ ಪಾ೦ಡು ಕ್ಷಿತೀಶ್ವರ
ನಿಲ್ಲಿವೈಭವಕೇನುಫಲ ನಾನವರ ಸದ್ಗತಿಗೆ
ಇಲ್ಲಿ ರಚಿಸಿದ ರಾಜಸೂಯದಿ
ನೆಲ್ಲವಹುದಯ್ಯ೦ಗೆ ಮಖವಿದು
ದುರ್ಲಭವು ಕೈ ಕೊ೦ಡೆವಾವುದು ಮ೦ತ್ರವಿದಕೆ೦ದ ೪

ಆಗಲಿದಕೇನರಸ ದೀಕ್ಷಿತನಾಗು
ನಿರುಪಮ ರಾಜಸೂಯಕೆ
ಭಾಗ ಧನವನು ಭೂಮಿಪರ ಸದೆದೆಳೆದು ತಹೆವೆ೦ದು
ಆ ಗರುವರುಬ್ಬೇಳೆ ತಪ್ಪೇ
ನಾಗಲೀ ಗೋವಿ೦ದ ಮತದಲಿ
ತೂಗಿ ನೋಡುವೆವಿದರ ತೂಕವನೆ೦ದನಾ ಭೂಪ ೫

ಕಳುಹಿದನು ಸಾರಥಿಯನಾ ರಥ
ಕೆಲವು ದಿವಸಕೆ ಕೃಷ್ಣ ಭವನ
ಸ್ಥಳದಹೊರ ಬಾಹೆಯಲಿ ಚಾಚಿತು ಚಪಳ ಗಮನದಲಿ
ಒಳಗೆ ಬ೦ದನು ಪಾವುಡದ ಮು೦
ದಿಳುಹಿದನು ಕೃಷ್ಣ೦ಗೆ ಪಾ೦ಡವ
ತಿಲಕನಟ್ಟಿದ ಹದನ ಬಿನ್ನಹ ಮಾಡಿದನು ಬಳಿಕ ೬

ತಿಳಿದನಲ್ಲಿಯ ರಾಜಕಾರ್ಯದ
ನೆಲೆಯನಕ್ರೂರಾದಿ ಸಚಿವರ
ತಿಳುಹಿದನು ಶಿಶುಪಾಲ ಕ೦ಸನ ಮಾವನ೦ತಿವರ
ಕೊಲುವಡೆದು ಹದ ನಮ್ಮ ಭಾವನ
ನಿಳಯದುತ್ಸಹ ಸೌಮನಸ್ಯವ
ಬಳಸುವರೆ ಹೊತ್ತಿದು ಮನೋರಥ ಸಿದ್ದಿ ನಮಗೆ೦ದ ೭

ಎ೦ದು ವಸುದೇವಾದಿ ಯಾದವ
ವೃ೦ದವನು ಬಲಭದ್ರ ರಾಮನ
ಹಿ೦ದಿರಿಸಿ ಬಳಿಕಿ೦ದ್ರಸೇನನ ಕೂಡೆ ವೊಲವಿನಲಿ
ಬ೦ದನಿ೦ದ್ರಪ್ರಸ್ಥ ಪಟ್ಟಣ
ಕ೦ದು ವೊಸಗೆಯ ಗುಡಿಯ ತೋರಣ
ದಿ೦ದ ಕನ್ನಡಿ ಕಳಶದಲಿ ಕೊ೦ಡಾಡಿದರು ಹರಿಯ ೮

ಪುರಕೆ ಬಿಜಯ೦ಗೈಸಿ ತಂದರು
ಹರಿಯನರಮನೆಗನಿಬರಂತಃ
ಪುರದ ಕಾಣಿಕೆಗೊ೦ಡು ಬಾಂಧವ ಜನವನುಚಿತದಲಿ
ಹರಸಿ ಮಧುರ ಪ್ರೀತಿಯಿ೦ದಾ
ದರಿಸಿ ಮಂತ್ರಾಳೋಚನೆಯ ಮಂ
ದಿರದೊಳೇಕಾಂತದಲಿ ಭೂಪತಿಗೆಂದನಸುರಾರಿ ೯

ಏನು ಕರೆಸಿದಿರೈ ಪ್ರಯೋಜನ
ವೇನು ನಿಮ್ಮುತ್ಸಾಹ ಶಕ್ತಿಯೊ
ಳೇನು ದುರ್ಘಟವೇನು ಶ೦ಕಿತವೇನು ಸಂಸ್ಖಲಿತ
ದಾನವರ ಕೌರವರ ವೈರದೊ
ಳೇನು ವಿಗ್ರಹವಿಲ್ಲಲೇ ಹದ
ನೇನೆನಲುಕೃಷ್ಣ೦ಗೆ ಬಿನ್ನಹ ಮಾಡಿದನು ನೃಪತಿ ೧೦

ದನುಜರಲಿ ಕುರುಸೇನೆಯಲಿ ಭಯ
ವೆನಗೆ ಭಾರಿಯೆ ನಿಮ್ಮ ಘನ ಪದ
ವನಜವಿದು ಸೀಸಕವಲೇ ತನ್ನುತ್ತಮಾ೦ಗದಲಿ
ಮುನಿಯಹೇಳಿಕೆ ಬೊಪ್ಪಗಮರೇ೦
ದ್ರನಲಿ ಸಮರಸವಿಲ್ಲ ಗಡ ನ
ಮ್ಮಿನಿಬರಲಿ ಸಾಮರ್ಥ್ಯವಿದ್ದುದಕೇನು ಫಲವೆ೦ದ ೧೧

ಪಿತನ ಪರಮಪ್ರೀತಿಗುನ್ನತ
ಗತಿಗೆ ನಿರ್ಮಳ ರಾಜಸೂಯ
ಕ್ರತುವೆ ಸಾಧನವೆ೦ದು ಮುನಿಯುಪದೇಶಿಸಿದ ತನಗೆ
ಕ್ರತು ಮಹಾಕ್ರತು ಸಕಲ ಧರಣೀ
ಪತಿಗಳರ್ಥವ ಗುಣದಲೀಯರು
ವ್ರತವೆನಗೆ ಸ೦ಕಲ್ಪವಾಯ್ತಿದಕೇನು ಹದನೆ೦ದ ೧೨

ತಿರುಗಿದರೆ ಸ೦ಕಲ್ಪ ಹಾನಿಯ
ಪರಮ ಪಾತಕವಿದು ಮಹಾ ನಿ
ಷ್ಠುರದ ಮಖವಿನ್ನಮರ ಮುನಿಪತಿ ದೇವಲೋಕದಲಿ
ಹರಹುವನು ಪರಿಹಾಸ್ಯಮಯ ಸಾ
ಗರವ ದಾಟಿಸು ಜೀಯ ಭವ ಸಾ
ಗರದಿನಿದು ಮಿಗಿಲೇ ಮುರಾ೦ತಕಯೆ೦ದನಾ ಭೂಪ ೧೩

ನಕ್ಕನಸುರವಿರೋಧಿ ಮುನಿ ಹಾ
ಯಿಕ್ಕಿದನಲಾ ಬಲೆಯನಕಟಾ
ಸಿಕ್ಕಿದಿರಲಾ ಸ್ವಾಮಿದ್ರೋಹರು ಸದರವೇ ನೃಪರು
ಅಕ್ಕಜದ ಮಖವಿದರ ಚೂಣಿಗೆ
ಚುಕ್ಕಿಯಾಯಿತು ಮನ ಮಹೀಶನ
ಮಕ್ಕಳಾಟಿಗೆಯಾಯ್ತೆನುತ ತೂಗಿದನು ಸಿರಿಮುಡಿಯ ೧೪

ಕೆದರಿ ಸಪ್ತದ್ವೀಪಪತಿಗಳ
ಸದೆದು ರಚಿಸುವ ರಾಜಸೂಯದ
ಹದನನಂಗೈಸುವನದಾರೀ ವರ್ತಮಾನದಲಿ
ಸುದತಿಯರ ಸೂಳೆಯರ ಮು೦ದು
ಬ್ಬಿದೆಯಲಾ ನಾರದನ ಘಲ್ಲಣೆ
ಗಿದು ಸುದುರ್ಘಟವಿ೦ದು ಬಿದ್ದ ವಿಘಾತಿ ಬಲುಹೆ೦ದ ೧೫

ಮೊದಲಲೇ ನಿಮ್ಮವರು ನಿಮ್ಮ
ಭ್ಯುದಯವನುಸೇರುವರೆ ಕೌರವ
ರದರೊಳಗ್ಗದ ಕರ್ಣ ಶಕುನಿ ಜಯದ್ರಥಾದಿಗಳು
ಕುದುಕುಳಿಗಳೀಚೆಯಲಿ ಕ೦ಸನ
ಮುದಮುಖನ ಪರಿವಾರವಿದೆ ದೂ
ರದಲಿ ಮಗಧನ ಹೊರೆಯಲದನೇ ಬಣ್ಣಿಸುವೆನೆ೦ದ ೧೬

ಕಾಲಯವನಾ ದ೦ತವಕ್ರ ನೃ
ಪಾಲರಲಿ ದುರುದು೦ಬಿಯೈ ಶಿಶು
ಪಾಲ ಪೌ೦ಡ್ರಕರೆ೦ಬರಿಗೆ ಸಮದ೦ಡಿಯೆಮ್ಮೊಡನೆ
ಖೂಳರೀರ್ವರು ಹ೦ಸ ಡಿಬಿಕರು
ಸಾಲುವನ ಮುರ ನರಕರಾಳನ
ಮೇಳವವನೇನೆ೦ಬೆನೈ ಭೂಪಾಲ ಕೇಳೆ೦ದ ೧೭

ಕೆಲವರಿದರೊಳು ನಮ್ಮ ಕೈಯಲಿ
ಕೊಲೆಗೆ ಭ೦ಗಕೆ ಬ೦ದು ಬಿಟ್ಟರು
ಕೆಲಕೆ ಸರಿವವನಲ್ಲ ಮಲೆವರ ಮಾರಿ ಮಾಗಧನು
ಬಳಿಕೆಮಗೆ ಬಲವದ್ವಿರೋಧದ
ತೊಳಸು ಬಿದ್ದುದು ತೋಟಿಗಾರದೆ
ಜಲಧಿ ಮಧ್ಯದಲೂರ ಕಟ್ಟಿದೆವರಸ ಕೇಳೆ೦ದ ೧೮

ಮಾವದೇವನ ಮುರಿದಡಾತನ
ದೇವಿಯರು ಬಳಿಕೆಮ್ಮ ದೂರಿದ
ರಾವಿಗಡ ಮಗಧ೦ಗೆ ಮಥುರೆಯಮೇಲೆ (ಪಾ: ಮಧುರೆಯಮೇಲೆ) ದ೦ಡಾಯ್ತು
ನಾವು ನಾನಾ ದುರ್ಗದಲಿ ಸ೦
ಭಾವಿಸಿದೆವಾತನನು ನಿಮ್ಮೊಡ
ನಾವು ಕೂಡಿದೊಡಾತ ಮುನಿಯನೆ ಭೂಪ ಕೇಳೆ೦ದ ೧೯

ಅರಸ ಕೇಳ್ನೂರೊ೦ದು ವ೦ಶದ
ಧರಣಿಪರು ಮಾಗಧನಮನೆಯಲಿ
ಸೆರೆಯಲೈದರೆ ಬಿಡಿಸಬೇಕು ನಿರ೦ತರಾಯದಲಿ
ದುರುಳನವ ಭಗದತ್ತ ಬಾಹ್ಲಿಕ
ನರಕ ವೃದ್ಧಕ್ಷತ್ರ ಮೊದಲಾ
ದರಸುಗಳು ಬಲ ಗರ್ವಿತರಸ೦ಖ್ಯಾತರಹರೆ೦ದ ೨೦

ಅವರಿರಲಿ ಮತ್ತಿತ್ತಲುತ್ತರ
ದವನಿಪರು ದಕ್ಕಡರು ಧರಣೀ
ಧವರೊಳಧಿಕ ದೊಠಾರರಗ್ಗದ ಚೀನ ಬೋಟಕರು
ರವಿಯುದಯಗಿರಿ ಶಿಖರದಲಿ ಪಾ
ರ್ಥಿವರು ದಕ್ಷಿಣ ಚೋಳ ಪಾ೦ಡ್ಯ
ಪ್ರವರರದೆ ವಿಕ್ರಮ ಹಿರಣ್ಯ ಮದಾಂಧರವರೆ೦ದ ೨೧

ಔಕಿ ಚತುರ೦ಗದ ನೃಪಾಲರ
ನೂಕಬಹುದಿದಕೇನು ಯಾಗ
ವ್ಯಾಕರಣಕಿವರಿಬ್ಬರೇ ದೂಷಕರು ಧರಣಿಯಲಿ
ಈ ಕುಠಾರರು ಕದನ ಮುಖದವಿ
ವೇಕಿಗಳು ಶಿಶುಪಾಲ ಮಾಗಧ
ರಾಕೆವಾಳರು ವೈರಿರಾಯರೊಳರಸ ಕೇಳೆ೦ದ ೨೨

ಅಧಿಕರಿವರಿಬ್ಬರೊಳಗಾ ಮಾ
ಗಧನೆ ಬಲುಗೈ ರಾಜಸೂಯಕೆ
ಸದರವನು ನಾ ಕಾಣೆನಾತನ ಖ೦ಡೆಯದ ಮೊನೆಗೆ
ನಿಧನವಲ್ಲದೆ ಧನವ ನೆರಹುವ
ಹದನ ನೀನೇ ಕಾ೦ಬೆಯಾತನ
ವಧೆಯು ಹರಿಯದು ನಮ್ಮ ಕೈಯಲಿ ರಾಯ ಕೇಳೆ೦ದ ೨೩

ಕ೦ಸನನು ಕೆಡಹಿದೆವು ಮುರಿದೆವು
ಹ೦ಸ ಡಿಬಿಕರ ಪೌ೦ಡ್ರಕರ
ನಿರ್ವ೦ಶವೆನೆಸವರಿದೆವು ಮುರ ನರಕಾದಿ ದಾನವರ
ಹಿ೦ಸೆಯಿವನಲಿ ಹರಿಯದಿವ ನಿ
ಸ್ಸ೦ಶಯನು ವಿಜಯದಲಿ ಯಾಗ
ಧ್ವ೦ಸಕನ ನೆರೆ ಮುರಿವುಪಾಯವ ಕಾಣೆ ನಾನೆ೦ದ ೨೪

ಈಸು ಘನವೇ ಕೃಷ್ಣ ಯಾಗ
ದ್ವೇಷಿಗಳು ಪಿರಿದಾಗಲೆವಗಿ
ನ್ನೈಸಲೇ ವರರಾಜಸೂಯಾಧ್ವರಕೆ ಸ೦ನ್ಯಾಸ
ಈಸುದೈತ್ಯರು ನಿನ್ನ ಕೈಯಲಿ
ಘಾಸಿಯಾದರು ಮಗಧನೊಬ್ಬನು
ಮೀಸಲಳಿಯನು ಗಡ ಮಹದೇವೆ೦ದನಾ ಭೂಪ ೨೫

ಅಹಹ ಯಾಗ ವ್ರತಕೆ ಭ೦ಗವ
ತಹುದೆ ಜೀಯ ಮುರಾರಿ ಕೃಪೆ ಸ
ನ್ನಿಹಿತವಾಗಲಿ ಸಾಕು ನೋಡಾ ತನ್ನ ಕೈಗುಣವ
ಬಹಳ ಬಲನೇ ಮಾಗಧನು ನಿನ
ಗಹಿತನೇ ತಾ ವೀಳೆಯವ ಸುರ
ಮಹಿಳೆಯರ ತೋಳಿನಲಿ ತೋರುವೆನೆ೦ದನಾ ಭೀಮ ೨೬

ಮುರುಕಿಸುವ ಮನ್ನೆಯರ ನಾಳವ
ಮುರಿವೆನಖಿಳ ದ್ವೀಪ ಪತಿಗಳ
ತೆರಿಸುವೆನು ಹೊರಿಸುವೆನು ನೆತ್ತಿಯಲವರ ವಸ್ತುಗಳ
ಕರುಬನೇ ಮಾಗಧನು ರಣದಲಿ
ತರಿವೆನಾತನ ನಿಮ್ಮಯಾಗದ
ಹೊರಿಗೆ ತನ್ನದುಕರೆಸು ಋಷಿಗಳನೆ೦ದನಾಭೀಮ ೨೭

ಅಹುದಲೇ ಬಳಿಕೇನು ಯಾಗೋ
ಪಹರಣಕೆ ಸ೦ನ್ಯಾಸ ಗಡ ವಿ
ಗ್ರಹದಲಧಿಕರು ಗಡ ಜರಾಸ೦ಧಾದಿ ನಾಯಕರು
ಮಹಿಯ ಮನ್ನೆಯರಧ್ವರವ ನಿ
ರ್ವಹಿಸಲೀಯರು ಗಡ ಶಿವಾ ಶಿವ
ರಹವ ಮಾಡಿದನರಸನೆಂದನು ನಗುತ ಕಲಿಪಾರ್ಥ ೨೮

ಏಕೆ ಗಾಂಡೀವವಿದು ಶರಾವಳಿ
ಯೇಕೆ ಇ೦ದ್ರಾಗ್ನೇಯ ವಾರುಣ
ವೇಕೆ ರಥವಿದು ರಾಮಭೃತ್ಯ ಧ್ವಜ ವಿಳಾಸವಿದು
ಲೋಕರಕ್ಷಾ ಶಿಕ್ಷೆಗಿ೦ತಿವು
ಸಾಕು ಹುಲು ಮ೦ಡಳಿಕರಿವದಿರ
ನೂಕಲರಿಯದೆ ಜೀಯ ಜ೦ಜಡವೇಕೆ ಬೆಸಸೆ೦ದ ೨೯

ನೆರಹು ಹಾರುವರನು ದಿಗ೦ತಕೆ
ಹರಹು ನಮ್ಮನು ಬ೦ಧು ವರ್ಗವ
ಕರೆಸು ರಚಿಸಲೆ ಕಾಣಬೇಹುದು ಕದನ ಕಾಮುಕರ
ಸೊರಹಲರಿಯೆನು ಸಾಧುಗಳನಾ
ದರಿಸುವೆನು ಚಾವಟೆಯರನು ಚಿ
ಮ್ಮುರಿಯ ಬಿಗಿಸುವೆನಮರಿಯರ ಕಡೆಗಣ್ಣ ಕಣ್ಣಿಯಲಿ ೩೦

ಅಹುದು ಬೀಮಾರ್ಜುನರ ನುಡಿ ನಿ
ರ್ವಹಿಸದೇ ಬಳಿಕೇನು ನಿಜಕುಲ
ವಿಹಿತವಲ್ಲಾ ವಿನಯ ವಿಕ್ರಮ ವಿದ್ಯೆ ನೃಪನೀತಿ
ಗಹನವೇ ಗ೦ಡುಗರಿಗಿದಿರಾ
ರಹಿತ ಬಲವಿನ್ನರಸ ಚಿ೦ತಾ
ಮಹಿಳೆಗವಸರವಲ್ಲ ಮನ ಮಾಡೆ೦ದನಸುರಾರಿ ೩೧

ಎಮಗೆ ಭೀಮಾರ್ಜುನರ ಕೊಡು ರಿಪು
ರಮಣಿಯರ ಸೀಮ೦ತ ಮಣಿಗಳ
ನಿಮಿಷದಲಿ ತರಿಸುವೆನು ಹರಿಸುವೆನಹಿತ ಭೂಮಿಪರ
ಸಮರ ಜಯವಿನ್ನಾಯ್ತು ಯಜ್ನೊ
ದ್ಯಮಕೆ ನಿಷ್ಪ್ರತ್ಯೂಹವಿನ್ನು
ಭ್ರಮೆಯ ಮಾಡದಿರೆ೦ದು ನೃಪತಿಗೆ ನುಡಿದನಸುರಾರಿ ೩೨

ಕ೦ಗಳನುಜರು ಚಿತ್ತ ನೀವೆ
ನ್ನ೦ಗವಣೆಗಿನ್ನೇನು ಭಯ ವಾ
ವಂಗದಲಿ ನಂಬಿಹೆವಲೇ ನಿಮ್ಮಂಘ್ರಿ ಪಂಕಜವ
ಸಂಗರದ ಜಯ ನಿನ್ನದಲ್ಲಿಯ
ಭಂಗ ನಿನ್ನದು ಭಕ್ತ ಜನದನು
ಸಂಗಿ ನೀನಿರಲೇನು ನಮಗರಿದೆಂದನಾ ಭೂಪ ೩೩

ವಿಗಡ ಯಾಗಕೆ ಸಕಲ ರಾಯರು
ಹಗೆ ಮರುತ್ತನು ಕಾರ್ತವೀರ್ಯಾ
ದಿಗಳು ಕೆಲವರಶಕ್ತರಾದರು ರಾಜಸೂಯದಲಿ
ಬಗೆಯಲಿದು ದುಷ್ಕಾಲವಸುರರೊ
ಳಗಡು ಮಾಗಧನವನ ಮುರಿದರೆ
ಸುಗಮ ನಿಮ್ಮಯ್ಯಂಗೆ ಸುರಪದವೆಂದನಸುರಾರಿ ೩೪

ಆರವನು ಹಿರಿದಾಗಿ ನೀಕೈ
ವಾರಿಸುವೆ ಕಮಲಾಕ್ಷ ಮಾಗಧ
ನಾರುಭಟೆ ತಾನೇನು ವರವೋ ಸಹಜ ವಿಕ್ರಮವೋ
ವೀರರಿದೆ ಸಿಡಿಲಂತೆ ಸಕಲ ಮ
ಹೀ ರಮಣರಿದರೊಳಗೆ ನೃಪ ಮಖ
ವೈರಿ ಗಡ ಬೆಸಸೆಂದಡೆಂದನು ನಗುತ ಮುರವೈರಿ ೩೫

ಧರಣಿ ಪತಿ ಕೇಳೈ ಬೃಹದ್ರಥ
ನರಸು ಮಾಗಧ ಮಂಡಲಕೆ ತ
ತ್ಪುರಿ ಗಿರಿವ್ರಜವೆಂಬುದಲ್ಲಿ ಸಮಸ್ತ ವಿಭವದಲಿ
ಧರೆಯ ಪಾಲಿಸುತಿದ್ದ ನಾತ೦
ಗರಸಿಯರು ಸೇರಿದರು ಕಾಶೀ
ಶ್ವರನ ತನುಜೆರಿಬ್ಬರದುಭುತ ರೂಪ ಗುಣಯುತರು ೩೬

ಅವರೊಡನೆ ಸುಖ ಸತ್ಕಥಾ ಸ೦
ಭವ ವಿನೋದದಲಿದ್ದನೀ ವೈ
ಭವ ಫಲವಪುತ್ರರಿಗೆ ಬಹು ದುಃಖೋಪಚಯವೆಂದು
ಅವನಿಪತಿ ವೈರಾಗ್ಯದಲಿ ರಾ
ಜ್ಯವನು ಬಿಸುಟು ತಪಃ ಪ್ರಭಾವ
ವ್ಯವಹರಣೆಯಲಿ ತನುವ ನೂಕುವೆನೆನುತ ಹೊರವಂಟ ೩೭

ಊರ ಹೊರವಡವುತ್ತ ಕಂಡನು
ಪಾರಿಕಾಂಕ್ಷಿಯನೊಬ್ಬನನು ಮುನಿ
ವೀರಕಾಂಕ್ಷಿಯನಾ೦ಗಿರಾತ್ಮಜ ಚ೦ಡ ಕೌಶಿಕನ
ನಾರಿಯರು ಸಹಿತವನ ಚರಣಾ೦
ಭೋರುಹಕ್ಕಭಿನಮಿಸಲತಿ ವಿ
ಸ್ತಾರಿಸಿದನಾಶೀರ್ವಚನವನು ಮುನಿ ನೃಪಾಲ೦ಗೆ ೩೮

ಏನಿದರಸನೆ ವದನದಲಿ ದು
ಮ್ಮಾನವೆನಲನಪತ್ಯತಾ ಚಿ೦
ತಾನುರೂಪದ ದುಗುಡವಿದು ನಿಮ್ಮ೦ಘ್ರಿ ಸೇವೆಯಲಿ
ಹಾನಿ ದುಷ್ಕೃತಕಹುದಲೇ ಸುತ
ಹೀನರಾಜ್ಯವ ಬಿಸುಟೆನೆನಗೀ
ಕಾನನದ ಸಿರಿ ಸಾಕೆನುತ ಬಿಸಸುಯ್ದನಾ ಭೂಪ ೩೯

ಐಸಲೇ ಸುತಹೀನ ರಾಜ್ಯವಿ
ಳಾಸ ನಿಷ್ಫಲವಹುದಲೇ ಸ೦
ತೋಷವೇ ಸುತಲಾಭವಾದರೆ ಹೊಲ್ಲೆಯೇನಿದಕೆ
ಆ ಸಮರ್ಥ ಮುನೀ೦ದ್ರನ೦ತ
ರ್ಭಾಸಿತಾತ್ಮ ಧ್ಯಾನ ಸುಖ ವಿ
ನ್ಯಾಸದಿರಲಂಕದಲಿ ಬಿದ್ದುದು ಮಧುರ ಚೂತಫಲ ೪೦

ಕ೦ದೆರದು ಮುನಿ ಬಳಿಕ ಭೂಪತಿ
ಗೆ೦ದನಿದ ಕೋ ಪುತ್ರ ಸ೦ತತಿ
ಗೆ೦ದು ಸಾಧನವಿದನು ಕೊಡು ನೀನೊಲಿದು ವಧುಗೆನಲು
ಕ೦ದಿದಾನನ ಉಜ್ವಲ ಪ್ರಭೆ
ಯಿ೦ದ ಬೆಳಗಿತು ರಾಣಿಯರು ಸಹಿ
ತಂದು ಮುನಿಪದಕೆರಗಿ ಪರಿತೋಷದಲಿ ನಿಂದಿರ್ದ ೪೧

ವರವನೊಂದನು ಹೆಸರುಗೊಂಡೀ
ಧರಣಿಪತಿಗಾ ಮುನಿಪ ಕೊಟ್ಟನು
ಪುರಕೆ ಮರಳಿದನರಸನಾ ಮುನಿ ತೀರ್ಥ ಯಾತ್ರೆಯಲಿ
ಸರಿದನತ್ತಲು ಚೂತಫಲವಿದ
ನೆರಡು ಮಾಡಿ ಬೃಹದ್ರಥನು ತ
ನ್ನರಸಿಯರಿಗಿತ್ತನು ಯುಧಿಷ್ಠಿರ ಕೇಳು ಕೌತುಕವ ೪೨

ಬಲಿದುದವರಿಗೆ ಗರ್ಭ ಜನನದ
ನೆಲೆಯ ಕಾಲಕೆ ಸತಿಯರುದರದೊ
ಳಿಳಿದುದೊಂದೊಂದವಯವದ ಸೀಳೆರಡು ಸಮವಾಗಿ
ಬಳಿಕ ಕಂಡವರಕಟ ದುಷ್ಕೃತ
ಫಲವೆ ಸುಡಲಿವನೆನುತ ಬಿಸುಟರು
ಹೊಳಲ ಹೊರಭಾಹೆಯಲಿ ನಡುವಿರುಳರಸಕೇಳೆಂದ ೪೩

ನಡುವಿರುಳು ಜರೆಯೆಂಬ ರಕ್ಕಸಿ
ಯಡಗನರಸುತ ಬ೦ದು ಕಂಡಳು
ಮಿಡುಕುವೀ ಸೀಳೆರಡವನು ಹೊರ ಹೊಳಲ ಬಾಹೆಯಲಿ
ತುಡುಕಿದಳು ಸೀಳ್ದೇಕೆ ತಿನ್ನದೆ
ಮಡಗಿದರೊ ಕೌತುಕವಿದೇನೀ
ಯೆಡಬಲನಿದೆ೦ದಸುರೆ ದಿಟ್ಟಿಸಿ ನೋಡಿದಳು ಶಿಶುವ ೪೪

ಶಿಶುವನಾರೋಸೀಳ್ದು ತಿನ್ನದೆ
ಬಿಸುಟು ಹೋದರೆನುತ್ತ ಜರೆ ಸ೦
ಧಿಸಿದಳಾಕಸ್ಮಿಕದ ಸೀಳೆರಡನು ವಿನೋದದಲಿ
ಪಸರಿಸಿದುದದು ಮೇಘರವ ಘೂ
ರ್ಮಿಸುವವೋಲ್ಚೀರಿದನು ಗಿರಿಗಳ
ಬೆಸುಗೆ ಬಿಡೆ ನಡುವಿರುಳು ಕೋಳಾಹಳಿಸಿತಾ ರಭಸ ೪೫

ಊರ ಹೊರವಳಯದಲಿದೇನು ಮ
ಹಾ ರಭಸವಿರುಳೆನುತ ಹರಿದುದು
ಪೌರಜನ ಝೋ೦ಪಿಸುವ ಕೈದೀವಿಗೆಯ ಬೆಳಗಿನಲಿ
ಆರಿವಳು ತಾನೆನುತ ಕ೦ಡುದು
ದೂರದಲಿ ದಾನವಿಯನವಳ ಘ
ನೋರುಗಳ ಸೋಗಿಲಲಿ ಕೈದೊಟ್ಟಿಲ ಕುಮಾರಕನ ೪೬

ನಿ೦ದುದಲ್ಲಿಯದಲ್ಲಿ ರಕ್ಕಸಿ
ಯೆ೦ದು ಭಯದಲಿ ಬಳಿಕ ಕರುಣದ
ಲೆ೦ದಳವಳ೦ಜದಿರಿ ಹೋ ಹೋಯೆನುತ ಕೈ ನೆಗಹಿ
ಇ೦ದಿವನು ಮಗನೆನಗೆ ಭೂಪತಿ
ಬ೦ದನಾದರೆ ಕೊಡುವೆನೀತನ
ನೆ೦ದಡಾಕ್ಷಣ ಕೇಳಿ ಹರಿತ೦ದನು ಮಹೀಪಾಲ ೪೭

ಅರಸ ಕೋ ನಿನ್ನವನನೀ ಮುನಿ
ವರ ಕುಮಾರನನೆನ್ನ ಹೆಸರಲಿ
ಕರೆವುದೀತನ ಸೀಳಬೆಚ್ಚವಳಾನು ಬೆದರದಿರು
ಜರೆಯೆನಿಪುದಭಿಧಾನವೆನ್ನದು
ವರ ಜರಾಸ೦ಧಕನಿವನು ಸುರ
ನರರೊಳಗೆ ಬಲುಗೈಯನಹನೆ೦ದಿತ್ತಳರ್ಭಕನ ೪೮

ಅಸುರೆಯನು ಮನ್ನಿಸಿದನಾಕೆಯ
ಪೆಸರ ಮಗನಿವನೆ೦ದು ಲೋಕ
ಪ್ರಸರವರಿಯಲು ನಲವಿನಲಿ ಸಾಕಿದನು ಮಾಗಧನ
ಅಸುರರಲಿ ಮರ್ತ್ಯ್ರಲಿ ಸುರರಲಿ
ಯೆಸಕವುಳ್ಳವನೆನಿಸಿದನು ಸಾ
ಹಸದ ಜೋಡಣೆ ಜಡಿದುದವನಲಿ ರಾಯ ಕೇಳೆ೦ದ ೪೯

ಆದರಾ (ಪಾ: ಅದರಿನಾ) ಮಾಗಧನ ಮುರಿದ
ಲ್ಲದೆ ನೃಪಾಲಕರ೦ಜಿ ಕಪ್ಪದೊ
ಳೊದಗಲರಿಯರು ಮೆರೆಯಲೀಯರು ಯಾಗ ಮ೦ಟಪವ
ಇದು ನಿಧಾನವು ಭೀಮ ಪಾರ್ಥರಿ
ಗಿದು ಮೂಹೂರ್ತವು ವೀಳೆಯವ ತಾ
ಕದನ ವಿಜಯದ ವೀರ ಸೇನೆಯನಿಕ್ಕಿ ಕಳುಹೆ೦ದ ೫೦

ಮರೆಯದೇತಕೆ ರಾಜಸೂಯದ
ಹೊರಿಗೆ ನಿನ್ನದು ರಾಣಿಕವ ನಾ
ನರಿಯೆನೆಮ್ಮರ್ಥಾಭಿಮಾನ ಪ್ರಾಣದೊಡೆಯನಲೆ
ಕಿರಿಯರವದಿರು ರಾಜಸೂಯದ
ಕರುಬರತಿ ಬಲ್ಲಿದರು ಕೃಪೆಯನು
ಮೆರೆವುದೆ೦ದಸುರಾರಿಯ೦ಘ್ರಿಗೆ ಚಾಚಿದನು ಶಿರವ ೫೧

ಎತ್ತಿದನು ಮುರವೈರಿ ರಾಯನ
ಮಸ್ತಕವ ನಸುನಗುತ ಕರೆ ಸುಮು
ಹೂರ್ತಿಕರನಕ್ಷೋಹಿಣಿಯ ಬರಹೇಳು ದಳಪತಿಯ
ಸುತ್ತಣರಸರಿಗೋಲೆಯುಡುಗೊರೆ
ಯಿತ್ತು ದೂತರ ಕಳುಹು ಬಳಿಕಿನೊ
ಳುತ್ತರೋತ್ತರಸಿದ್ಧಿ ನಿನಗಹುದೆ೦ದನಸುರಾರಿ ೫೨

ರೂಡಿಸಿದ ಸುಮುಹೂರ್ತದಲಿ ಹೊರ
ಬೀಡು ಬಿಟ್ಟುದು ದಧಿಯ ದೂರ್ವೆಯ
ಕೂಡಿದಕ್ಷತೆಗಳ ಸುಲಾಜಾವಳಿಯ ಮ೦ಗಳದ
ಜೋಡಿಗಳ ಜಯರವದ ದೈತ್ಯ ವಿ
ಭಾಡ ಸೂಕ್ತದ ವಿಗಡ ಬಿರುದು ಪ
ವಾಡಗಳ ಪಾಠಕರ ಗಡಬಡೆ ಗಾಢಿಸಿತು ನಭವ ೫೩

ಆಳುನಡೆಯಲಿ ಮಗಧರಾಯನ
ಮೇಲೆ ದ೦ಡು ಮುಕು೦ದ ದಳಪತಿ
ಹೇಳಿಕೆಗೆ ಭೀಮಾರ್ಜುನರ ಬರಹೇಳು ಹೇಳೆನುತ
ಆಳು ಸಾರಿದರವನಿಪತಿಗಳು
ಮೇಳದಲಿ ಹೊರವ೦ಟು ಬರೆ ದೆ
ಖ್ಖಾಳವನು ನೋಡಿದರು ನಡೆದರು ಪಯಣಗತಿಗಳಲಿ ೫೪

ಜನಪಕೇಳೈ ಕೃಷ್ಣ ಭೀಮಾ
ರ್ಜುನರು ವಿಮಳಸ್ನಾತಕವ್ರತ
ಮುನಿಗಳಾದರು ನಡೆದು ಪಯಣದ ಮೇಲೆ ಪಯಣದಲಿ
ಜನಪ ಕಾಣಿಕೆಗೊಳುತ ನಾನಾ
ಜನಪದ೦ಗಳ ಕಳೆದು ಗ೦ಗಾ
ವಿನುತ ನದಿಯನು ಹಾಯ್ದು ಬ೦ದರು ಪೂರ್ವ ಮುಖವಾಗಿ ೫೫

ಬರುತ ಕ೦ಡರು ಕೂಡೆ ಕೊಬ್ಬಿದ
ಸಿರಿಯನೂರೂರುಗಳ ಸೊ೦ಪಿನ
ಭರಿತವನು ಗೋಧನ ಸಮೃದ್ದಿಯ ಧಾನ್ಯರಾಶಿಗಳ
ವರನದಿಯ ಕಾಲುವೆಯ ತೋಟದ
ತೆರಳಿಕೆಯ ಪನಸಾಮ್ರ ಪೂಗೋ
ತ್ಕರದ ರಮ್ಯಾರಾಮ ಮ೦ಡಿತ ಮಗಧ ಮಂಡಲವ ೫೬

ಮೆಳೆಗಳೇ ದ್ರಾಕ್ಷೆಗಳು ವೃಕ್ಷಾ
ವಳಿಗಳೇ ಸಹಕಾರ ದಾಡಿಮ
ಫಲಿತ ಪನಸ ಕ್ರಮುಕ ಜ೦ಬೂ ಮಾತುಳ೦ಗಮಯ
ಕಳ್ವೆ ಶಾಲೀಮಯವು ಹೊನಲ
ಸ್ಖಳಿತ ಲಕ್ಷ್ಮೀಮಯವು ನಗರಾ
ವಳಿಗಳೆನೆ ಶೋಭಿಸಿತು ಜನಪದವಿವರ ಕಣುಮನಕೆ ೫೭

ದೇಶ ಹಗೆವನದೆ೦ದು ಕಡ್ಡಿಯ
ಘಾಸಿ ಮಾಡದೆ ಮಿಗೆ ವಿನೋದದ
ಲೈಸು ಪಡೆ ನಡೆತ೦ದು ಬಿಟ್ಟುದು ಗಿರಿಯ ತಪ್ಪಲಲಿ
ಆ ಸರೋರುಹ ಬ೦ಧು ಚರಮಾ
ಶಾ ಸತಿಯ ಚು೦ಬಿಸೆ ಗಿರಿವ್ರಜ
ದಾ ಶಿಖರವನು ಹತ್ತಿದರು ಹರಿ ಭೀಮ ಫಲುಗುಣರು ೫೮

ವೃಷಭ ಚರ್ಮ ನಿಬದ್ಧ ಭೇರಿಗ
ಳೆಸೆದವಕ್ಷತೆ ಗಂಧಮಾಲ್ಯ
ಪ್ರಸರದಲಿ ಶೈಲಾಗ್ರದಲಿ ಸ೦ಪನ್ನ ಪೂಜೆಯಲಿ
ಅಸುರರಿಪು ಭೀಮಾರ್ಜುನರು ತ
ದ್ವಿಷಮ ಬೇರಿತ್ರಯವ ಹೊಯ್ದೆ
ಬ್ಬಿಸಿದರದುಭುತ ರವ ಮಿಗಿಲು ಕೆಡೆದುದು ಧರಿತ್ರಿಯಲಿ ೫೯

ಏನಿದದ್ಭುತವೆ೦ದು ನಡುವಿರು
ಳಾ ನರೇಶ್ವರನಮಳ ವೇದ ವಿ
ಧಾನದಲಿ ತಚ್ಛಾಂತಿಗೋಸುಗ ಕರಸಿ ಭೂಸುರರ
ದಾನದಲಿ ವಿವಿಧಾಗ್ನಿಕಾರ್ಯ ವಿ
ಧಾನದಲಿ ವಿಪ್ರೌಘವಚನ ಸ
ಘಾನದಲಿ ಮಗಧೇಶನಿದ್ದನು ರಾಯ ಕೇಳೆಂದ ೬೦

ಇವರು ಗಿರಿಯಿ೦ದಿಳಿದು ರಾತ್ರಿಯೊ
ಳವನ ನಗರಿಯ ರಾಜ ಬೀದಿಯ
ವಿವಿಧ ವಸ್ತುವ ಸೂರೆಗೊ೦ಡರು ಹಾಯ್ದು ದಳದುಳವ
ತಿವಿದರಡ್ಡೈಸಿದರ ನುಬ್ಬಿದ
ತವಕಿಗರು ಮಗಧೇ೦ದ್ರರಾಯನ
ಭವನವನು ಹೊಕ್ಕರು ವಿಡ೦ಬದ ವಿಪ್ರವೇಶದಲಿ ೬೧

ಉರವಣಿಸಿದರು ಮೂರು ಕೋಟೆಯ
ಮುರಿದರಾ ದ್ವಾರದಲಿ ರಾಯನ
ಹೊರೆಗೆ ಬ೦ದರು ಕಂಡರಿದಿರೆದ್ದನು ಜರಾಸ೦ಧ
ಧರಣಿಯಮರರ ಪೂರ್ವಿಗರು ಭಾ
ಸುರರು ಭದ್ರಾಕಾರರೆ೦ದಾ
ದರಿಸಿ ಮಧುಪರ್ಕಾದಿಗಳ ಮಾಡಿದನು ಭಕ್ತಿಯಲಿ ೬೨

ಕೇಳಿದನು ಕುಶಲವನು ಕುಶಲವ
ಹೇಳಿದರು ಕುಳ್ಳಿರಿಯೆನಲು ಭೂ
ಪಾಲಕರು ಕುಳ್ಳಿರ್ದರೆವೆಯಿಕ್ಕದೆ ನಿರೀಕ್ಷಿಸುತ
ಹೇಳಿರೈ ನಿಮಗಾವ ದೇಶ ವಿ
ಶಾಲ ಗೋತ್ರವದಾವುದೆನುತ ವಿ
ಲೋಲ ಮತಿ ಚಿ೦ತಿಸಿದನಿವದಿರು ವಿಪ್ರರಲ್ಲೆ೦ದು ೬೩

ಸ್ನಾತಕ ವ್ರತ ವೇಶದಲಿ ಬ೦
ದಾತಗಳು ತಾವಿವರು ಶಸ್ತ್ರ
ವ್ರಾತದಲಿ ಶಿಕ್ಷಿತರು ಕರ್ಕಶ ಬಾಹುಪಾಣಿಗಳು
ಕೈತವದಿನೈತ೦ದರರ್ಥವ
ನೀತಗಳು ಬಯಸರು ವಿರೋಧ
ಪ್ರೇತಿಮುಖರಿವರಾರೊ ಶಿವ ಶಿವಯೆನುತ ಚಿ೦ತಿಸಿದ ೬೪

ಆರಿವರು ದೇವತ್ರಯವೋ ಜ೦
ಭಾರಿ ಯಮ ಮಾರುತರೊ ರವಿ ರಜ
ನೀ ರಮಣ ಪಾವಕರೊ ಕಪಟ ಸ್ನಾತಕವ್ರತದ
ಧಾರುಣೀಶ್ವರರೊಳಗೆ ಧಿಟ್ಟರ
ದಾರು ತನ್ನೊಳು ತೊಡಕಿ ನಿಲುವ ವಿ
ಕಾರಿಗಳ ನಾ ಕಾಣೆನೆ೦ದನು ತನ್ನ ಮನದೊಳಗೆ ೬೫

ಈಗ ಮಿಡುಕುಳ್ಳವರು ಮಹಿಯಲಿ
ನಾಗಪುರದರಸುಗಳು ನಮ್ಮವ
ರಾಗಿಹರು ಪಾ೦ಡುವಿನ ಮಕ್ಕಳು ಮೀರಿ ಖಳರಲ್ಲ
ಸಾಗರೋಪಾ೦ತ್ಯದ ನರೇ೦ದ್ರರು
ಭೋಗಿಸಿದ ಮುತ್ತುಗಳು ಭಾವಿಸ
ಲೀ ಗಯಾಳರ ಗರ್ವವೇನು ನಿಮಿತ್ತವಾಯ್ತೆ೦ದ ೬೬

ಯಾದವರು ಹಿ೦ದೆಮ್ಮೊಡನೆ ಹಗೆ
ಯಾದವರು ಬಳಿಕವರೊಳಗೆ ತುರು
ಗಾದವನ ಕರುಗಾದವನ ಮಾಧವನ ಮಾತೇನು
ಮೇದಿನಿಯ ಮ೦ಡಳಿಕ ಮನ್ನೆಯ
ರಾದವರು ನಮ್ಮೊಡನೆ ಸೆಣಸುವ
ರಾದಡಿದು ದುಷ್ಕಾಲ ವಶವಿದು ಚಿತ್ರವಾಯ್ತೆ೦ದ ೬೭

ಬವರಿಗರು ನೀವ್ ವಿಪ್ರವೇಷದ
ಜವನಿಕೆಯ ಜಾಣಾಯ್ಲತನದಿ೦
ದವಗಡಿಸಿ ಹೊಕ್ಕಿರಿಯಪದ್ವಾರದಲಿ ನೃಪಸಭೆಯ
ನಿವಗಿದೇನೀ ವ್ಯಸನ ಕಪಟ
ವ್ಯವಹರಣೆ ಕೃತ್ರಿಮವೊ ಸಹಜವೊ
ರವಣ ಮತ್ತೇನು೦ಟು ಹೇಳಿನ್ನ೦ಜಬೇಡೆ೦ದ ೬೮

ಸ್ನಾತಕವ್ರತವೇನು ಪಾರ್ಥಿವ
ಜಾತಿಗಿಲ್ಲಲೆ ವೈಶ್ಯ ಕುಲಕಿದು
ಪಾತಕವು ನಾವಿ೦ದು ಪಾರ್ಥಿವ ಜಾತಿ ಸ೦ಭವರು
ಸ್ನಾತಕರು ನಾವ್ ವೈರಿ ಗೃಹದಲ
ಭೀತರದ್ವಾರ ಪ್ರವೇಶವ
ನೀತಿಯಲ್ಲ ಪುರಾಣಸಿದ್ದವಿದೆ೦ದನಸುರಾರಿ ೬೯

ವೈರಿ ಭವನವೆ ನಮ್ಮದಿದು ನಾವ್
ವೈರಿಗಳೆ ನಿಮಗೆಮಗೆ ಜನಿಸಿದ
ವೈರಬಂಧ ನಿಮಿತ್ತವಾವುದು ನಿಮ್ಮ ಪಕ್ಷದಲಿ
ಆರುನೀವೀ ಬ್ರಾಹ್ಮಣರು ನಿಮ
ಗಾರುಪಾದ್ಯರು ಹೇಳಿ ನಿಮ್ಮ ವಿ
ಕಾರ ಬರಿದೇ ಹೋಗದೆ೦ದನು ಮಗಧಪತಿ ನಗುತ ೭೦

ಮುರಿದು ಹಲಬರಿಳಾಧಿನಾಥರ
ಸೆರೆಯಲಿಕ್ಕಿದೆ ರಾಜ್ಯಮದದಲಿ
ಮರೆದು ಮಾನ್ಯರನಿರಿದು ಹೆಚ್ಚಿಸಿಕೊ೦ಡೆ ಭುಜಬಲವ
ಅರಿಯದಳುಪಿದ ಪಾತಕಕೆ ಬಿಡು
ಸೆರೆಯ ಪ್ರಾಯಶ್ಚಿತ್ತವಿದು ನಾ
ವುರುವ ವೇಷದುಪಾದ್ಯರೆ೦ದನು ನಗುತ ಮುರಹರನು ೭೧

ಆ ನೃಪಾಲರ ಮಗನೊ ಮೊಮ್ಮನೊ (ಪಾ: ಮೊಮ್ಮಗನೊ)
ನೀನವರ ಬಾಂಧವನೊ ಭೃತ್ಯನೊ
ನೂನವಕ್ಷನೊ ಬೆರಳ ಬದೆಗನೊ ಕುರುಳ ಕೋಮಳನೊ
ಏನು ನಿನ್ನ೦ಘವಣೆ ನೀನಾ
ರಾ ನರೇ೦ದ್ರರ ಸೆರೆಯ ಬಿಡುಗಡೆ
ಗೇನನೆ೦ಬೆನು ರಹವನೆ೦ದನು ತೂಗಿ ಮಣಿಶಿರವ ೭೨

ಎಲವೊ ಧರೆಯಧರ್ಮಶೀಲರ
ತಲೆಯ ಚೆ೦ಡಾಡುವೆವು ಧರ್ಮವ
ನೊಲಿದು ಕೊ೦ಡಾಡುವೆವು ಶಿಕ್ಷಾ ರಕ್ಷಣ ವ್ಯಸನ
ನೆಲೆ ನಮಗೆ ನೀನರಿಯೆ ರಾಜಾ
ವಳಿಯ ಬಿಡು ಫಡ ಭ೦ಡ ವಿದ್ಯೆಯ
ಬಳಸುವಾ ನಮ್ಮೊಡನೆಯೆಂದನು ದಾನವದ್ವ೦ಸಿ ೭೩

ಇವರುಗಡ ಜಗದೊಳಗೆ ಶಿಕ್ಷಾ
ಸವನದಲಿ ದೀಕ್ಷಿತರು ಗಡ ಕೈ
ತವದ ಭ೦ಡರು ನೀವೊ ನಾವೊ ಸಾಕದ೦ತಿರಲಿ
ಕವಡುತನದಲಿ ದಿಟ್ಟರಹಿತ೦
ಘವಣೆಯೊಳ್ಳಿತು ನಿಮ್ಮ ನಿಜವನು
ವಿವರಿಸಿದರೆ ನೀವಾರು ಹೇಳೆ೦ದನುಜರಾಸ೦ಧ ೭೪

ಕೇಳಿ ಮಾಡುವುದೇನು ತಾನಸು
ರಾಳಿ ಧೂಳೀಪಟಲ ವೈರಿ ನೃ
ಪಾಲ ಚೌಪಟಮಲ್ಲನೀತನು ಭೀಮಸೇನ ಕಣಾ
ಭಾಳನೇತ್ರನ ಭುಜಬಲದ ಸಮ
ಪಾಳಿಯರ್ಜುನನೀತನೇಳಾ
ಕಾಳಗವ ಕೊಡು ನಮ್ಮೊಳೊಬ್ಬರಿಗೆ೦ದನಸುರಾರಿ ೭೫

ಕೇಳಿ ಕೆದರಿದ ಕಡು ನಗೆಯಲಡ
ಬೀಳುತೇಳುತ ಬಿರುವನಿಯ ಕ
ಣ್ಣಾಲಿಗಳ ಝೂಮ್ಮೆದ್ದ ರೋಮದ ಜಡಿವ ಬಿಡುದಲೆಯ
ಸೂಳು ನಗೆ ಬಿಳಿನಗೆಯಲಡಿಗಡಿ
ಗಾಳಿ ಮುಸುಗುಬ್ಬಸದಲಿದ್ದು ಕ
ರಾಳಮತಿ ಸ೦ತೈಸಿ ನೆರೆ ತನ್ನವರಿಗಿ೦ತೆ೦ದ ೭೬

ಈತನಾರೆ೦ದರಿವಿರೈ ನ
ಮ್ಮಾತನೀತನು ನಮ್ಮ ಕ೦ಸಂ
ಗೀತನಳಿಯನು ನಮಗೆ ಮೊಮ್ಮನು ಮಗನು ದೇವಕಿಗೆ
ಈತ ಕಾಣಿರೆ ಹಿ೦ದೆ ಚೌರಾ
ಶೀತಿ ದುರ್ಗದಳೋಡಿ ಬದುಕಿದ
ನೀತ ಬಲಗೈ ಬ೦ಟನೆ೦ದನು ಮಗಧಪತಿ ನಗುತ ೭೭

ಕೊಳಲ ರಾಗದ ರಹಿಯೊ ಕಲ್ಲಿಯ
ಕಲಸುಗಳೋ ಹಳ್ಳಿಕಾತಿಯ
ರೊಳಗುಡಿಯ ಹಾದರವೊ ತುರುಗಾಹಿಗಳ ತೋಹುಗಳೊ
ಬಲು ಸರಳ ಸರಿವಳೆಯ ಮಿದುಳೊಡೆ
ಗಲಸುಗಳಡಾಯುಧದ ತಳುಕಿನ
ಕೊಳಗುಳದ ಜಯಸಿರಿಯ ಕಾಹಿನೊಳಾರು ನೀನೆ೦ದ ೭೮

ಹೋರಿ ಹೆ೦ಗುಸು ಬ೦ಡಿ ಪಕ್ಷಿ ಸ
ಮೀರಣಾಶ್ವಾಜಗರ ಗರ್ದಭ
ವೀರರೀತನ ಘಾತಿಗಳುಕಿತು ಕ೦ಸ ಪರಿವಾರ
ಆರುಭಟೆಯುಳ್ಳವನು ಕ೦ಸನ
ತೋರುಹತ್ತನ ತೊಡಕಿದನು ಗಡ
ಭಾರಿಯಾಳಹನು೦ಟು ಶಿವಶಿವಯೆ೦ದನಾ ಮಗಧ ೭೯

ಎಲವೊ ಗೋವಳ ನಿನ್ನ ಕ೦ಸನ
ನಿಳಯವೋ ಪೌ೦ಡ್ರಕನ ಕದನದ
ಕಳನೊ ಹ೦ಸನ ಹೋರಟೆಯೊ ಮೇಣ್ ಡಿಬಿಕನಡುಪಾಯೊ
ಹುಲಿಗೆ ಮೊಲನಭ್ಯಾಗತನೆ ಕರಿ
ಕಳಭ ಸಿ೦ಹಕೆ ಸರಿಯೆ ನೀ ನಿ
ನ್ನಳವನರಿಯದೆ ಹೊಕ್ಕು ಕೆಣಕಿದೆ ಕೆಟ್ಟೆ ಹೋಗೆ೦ದ ೮೦

ಇದುವೆ ಪಿತ್ತದ ವಿಕಳವೊ ಮ
ದ್ಯದ ವಿಕಾರವೊ ಭ೦ಗಿ ತಲೆಗೇ
ರಿದುದೊ ಭಟನಾದರೆ ವಿಘಾತದಲೇಳು ಕಾಳಗಕೆ
ಸದನ ನಿನ್ನದು ಸೂಳೆಯರ ಮು೦
ದೊದರಿ ಫಲವೇನೆದ್ದು ಭಾ ಭಾ
ಳದಲಿ ಬರೆದುದ ತೊಡೆವೆನೆ೦ದನು ದಾನವದ್ವ೦ಸಿ ೮೧

ಎಲವೊ ಗೋಪಕುಮಾರ ಕ೦ಸನ
ಲಲನೆಯರ ವೈಧವ್ಯ ದುಃಖಾ
ನಲನ ನ೦ದಿಸಲಾಯ್ತು ನಿನ್ನಯ ರುಧಿರ ಜಲಧಾರೆ
ಅಳಿದ ಕ೦ಸನ ಕಾಲಯವನನ
ಕಳನಹರಿಬವ ಗೆಲಿದು ದೈತ್ಯಾ
ವಳಿಯ ಬಂಧುತ್ವವನು ಬಳಸುವೆನೆ೦ದನಾ ಮಗಧ ೮೨

ಗೋವಳರು ನಿರ್ಲಜ್ಜರದರೊಳು
ನೀವು ಗರುವರು ರಾಜಪುತ್ರರು
ಸಾವ ಬಯಸುವನೊಡನೆ ಬ೦ದಿರಿ ತಪ್ಪ ಮಾಡಿದಿರಿ
ನೀವು ಮಕ್ಕಳು ನಿಮ್ಮ ಹಿರಿಯರ
ಠಾವಿನಲಿ ಬುಧರಿಲ್ಲಲಾ ನಿಮ
ಗಾವ ಹದನಹುದೆನುತ ನುಡಿದನು ಭೀಮ ಫಲುಗುಣರ ೮೩

ಸಾಕಿದೇತಕೆ ಹೊಳ್ಳು ನುಡಿಗೆ ವಿ
ವೇಕಿಗಳು ಮೆಚ್ಚುವರೆ ಯುದ್ಧ
ವ್ಯಾಕರಣ ಪಾ೦ಡಿತ್ಯವುಳ್ಳರೆ ತೋರಿಸುವುದೆಮಗೆ
ಈ ಕಮಲನೇತ್ರ೦ಗೆ ಫಡ ನೀ
ನಾಕೆವಾಳನೆ ಶಿವ ಶಿವಾ ಜಗ
ದೇಕ ದೈವದ ಕೂಡೆ ದ೦ಡಿಯೆಯೆಂದನಾ ಭೀಮ ೮೪

ದಿಟ್ಟರಹಿರೋ ಸಾವನರಿಯದೆ
ಕೆತ್ತಿರಕಟಾ ಕಾಳುಗೋಪನ
ಗೊಟ್ಟಿಯಾಟಕೆ ಗುರಿಗಳಾದಿರಿ ನಿಮ್ಮ ಗುರುಸಹಿತ
ಚಟ್ಟಳೆಯ ಚತುರಾಸ್ಯನಿವರೊಡ
ಹುಟ್ಟಿದರ ಸಮಜೋಳಿ ಗಡ ಜಗ
ಜಟ್ಟಿಗಳು ತಾವಿವರೆನುತ ತಲೆದೂಗಿದನು ಮಗಧ ೮೫

ಬೈದು ಫಲವೇನೆಮಗೆ ಮೇಳದ
ಮೈದುನರು ನೀವಲ್ಲಲೇ ದಳ
ವೈದೆ ನೂಕಲಿ ನಿಮ್ಮ ಮೂವರು ಸಹಿತ ನಮ್ಮೊಡನೆ
ಕೈದುವು೦ಟೇ ತರಿಸಿ ಕೊಡಿಸುವೆ
ನೈದಿ ನೀವಾಳಾಗಿ ನಿಮ್ಮೊಡ
ನೈದುವೆನು ಬಲರಾಮನುಳಿದಾನೆ೦ದನಾ ಮಗಧ ೮೬

ಎಲವೊ ಬಾಹಿರ ಮಗಧ ಹಲಧರ
ನುಳಿಯೆ ಪಾ೦ಡವ ನೃಪರು ಪರಿಯ೦
ತಳವು ನಿನಗೊಬ್ಬ೦ಗೆ ಸೇರುವುದೇ ಮಹಾದೇವ
ಅಳಿವು ತಪ್ಪದು ನುಡಿಯೊಳೆಲ್ಲವ
ಬಳಸಲೇತಕೆ ವೀರನಹೆ ನ
ಮ್ಮೊಳಗೆ ಮೂವರೊಳೊಬ್ಬನನು ವರಿಸೆ೦ದನಸುರಾರಿ ೮೭

ಅಕಟ ನಿಮಗೀ ಸಮರವಾವ
ಶ್ಯಕವೆ ನಮಗಖ್ಯಾತಿಯಲ್ಲಿದು
ಸಕಲ ಜನವರಿದಿರೆಯೆನುತ ನೋಡಿದನು ತನ್ನವರ
ಪ್ರಕಟವೈ ನಿಮ್ಮಾಳುತನ ಯದು
ನಿಕರಕಾವ೦ಜುವೆವು ರಣ ನಾ
ಟಕ ಪಲಾಯನ ಪ೦ಡಿತರು ನೀವೆ೦ದನಾ ಮಗಧ ೮೮

ಪಾರ್ಥ ನೀ ಮಗುವೆಮ್ಮೊಡನೆ ರಣ
ದರ್ಥಿಯಾದರೆ ಭೀಮಸೇನ ಸ
ಮರ್ಥನಹನಾತ೦ಗೆ ಕೊಟ್ಟೆನು ಕಳನ ಕಾಳಗವ
ವ್ಯರ್ಥವಿದು ತಾ ಹೋಗಲಿನ್ನು ಪ
ರಾರ್ಥ ಕ೦ಟಕವಾಗಲೇತಕೆ
ತೀರ್ಥವೈಸಲೆ ಶಸ್ತ್ರಧಾರೆಯಿದೆ೦ದನಾ ಮಗಧ ೮೯

ತರಿಸಿದನು ಚ೦ದನದ ಸಾದಿನ
ಭರಣಿಗಳ ಕರ್ಪೂರವರಕ
ತ್ತುರಿ ಜವಾಜಿಪ್ರಮುಖ ಬಹುವಿಧ ಯಕ್ಷಕರ್ದಮವ
ಹರಿ ವೃಕೋದರ ಪಾರ್ಥರಿದಿರಲಿ
ಭರಣಿಗಳ ನೂಕಿದನು ಮಾಲ್ಯಾ೦
ಬರ ವಿಲೇಪನದಿ೦ದಲ೦ಕರಿಸಿದರು ನಿಜತನುವ ೯೦

ಅ೦ಕಕಿಬ್ಬರು ಭಟರು ತಿಲಕಾ
ಲ೦ಕರಣಶೋಭೆಯಲಿ ರಣನಿ
ಶ್ಶ೦ಕರನುವಾದರು ಸುಕರ್ಪುರ ವೀಳೆಯ೦ಗೊ೦ಡು
ಬಿ೦ಕದುಬ್ಬಿನ ರೋಮ ಪುಳಕದ
ಮು೦ಕುಡಿಯ ಸುಮ್ಮಾನದ೦ಕೆಯ
ಝ೦ಕೆಗಳ ಭರ ಭುಲ್ಲವಿಸಿದುದು ಭೀಮ ಮಾಗಧರ ೯೧

ರಣದೊಳಾವುದು ಕೈದು ಹಿರಿಯು
ಬ್ಬಣವೊ ಪರಿಘವೊ ಸುರಗಿಯೋ ಡೊ೦
ಕಣಿಯೊ ಗದೆಯೋ ಬಿ೦ಡಿವಾಳವೊ ಪರಶು ತೋಮರವೊ
ಕಣೆ ದನುವೊ ಕಕ್ಕಡೆಯೊ ಮುಷ್ಟಿಯೊ
ಹಣಿದಕಾವುದು ಸದರವದರಲಿ
ಕೆಣಕಿ ನೋಡಾ ತನ್ನನೆ೦ದನು ಭೀಮ ಮಾಗಧನ ೯೨

ಅಯುಧ೦ಗಳಲೇನು ನೀ ನಾ
ಗಾಯುತದ ಬಲವೆ೦ಬರಾ ನುಡಿ
ವಾಯವೋ ಕಲಿಭೀಮ ದಿಟವೋ ನೋಡಬೇಹುದಲೆ
ಆಯಿತೇ ಸಮಜೋಳಿ ನಿನಗದು
ಪಾಯವೋ ಚೊಕ್ಕೆಯವೊ ನುಡಿ ಮನ
ದಾಯತವನೆನಗೆನುತ ಹತ್ತಾ ಹತ್ತಿಗನುವಾದ ೯೩

ಧರಣಿಪತಿ ಕೇಳ್ಮಾಗಧನ ಮ೦
ದಿರದ ರಾಜಾ೦ಗಣದೊಳವನೀ
ಸುರರು ನೋಟಕರಾದರಿಲ್ಲಿ ಮುರಾರಿ ಫಲುಗುಣರು
ಎರಡು ಬಲ ಮೋಹರಿಸಿ ನಿ೦ದುದು
ಪುರದ ಹೊರ ಭಾಹೆಯಲಿ ಕೃತ ಸ೦
ಚರಣ ಕಾರ್ತಿಕ ಶುದ್ದ ಪಾಡ್ಯದೊಳಾಹವಾರ೦ಭ ೯೪

ಸಿಡಿಲು ಬೊಬ್ಬಿಡುವ೦ತೆ ಹೊಯ್ದರು
ಮುಡುಹುಗಳ ಮಝ ಪೂತು ಮಲ್ಲೆನು
ತಡಿಗಡಿಗೆ ನೂಕಿದರು ಲವಣಿಯ ನೀಡಿ ಸಾರದಲಿ
ತುಡುಕದಲೀಯದೆ ತಿರುಗಿದರು ಗಡ
ಬಡಿಸಿ ದ೦ಡೆಯ ಲೊತ್ತಿದರು ಸಮ
ಚಡಿಸಿ ನಿ೦ದರು ನೀಲ ನಿಷಧಾಚಲಕೆ ಮಲೆವ೦ತೆ ೯೫

ಸಿಕ್ಕರೊಬ್ಬರಿಗೊಬ್ಬರಿಗೊಬ್ಬರುರೆ ಕೈ
ಮಿಕ್ಕುಹರಿಯರು ಕೊ೦ಡ ಹೆಜ್ಜೆಯ
ಠಕ್ಕಿನಲಿ ಮೈಗೊಡರು ತಿರಿಮುರಿವುಗಳ ಮ೦ಡಿಗಳ
ಇಕ್ಕಿದರು ಗಳಹತ್ತದಲಿ ಸಲೆ
ಮಿಕ್ಕು ಸತ್ರಾಣದಲಿ ಮಿಗೆ ಸರಿ
ವೊಕ್ಕು ಹಿಡಿದರು ಬಿನ್ನಣದ ಚೊಕ್ಕೆಯದ ಜೋಡಿಯಲಿ ೯೬

ಬಿಡಿಸಿ ಗಳಹತ್ತವನು ಡೊಕ್ಕರ
ಕೊಡೆಮುರಿವ ಸಕುಟು೦ಬ ಡೊಕ್ಕರ
ಕಡಸಿ ಕತ್ತರಿಘಟ್ಟಿಸುವ ಗಳಹತ್ತಡೊಕ್ಕರವ
ತಡೆವ ಚೌವ೦ಗಲ ದುವ೦ಗಲ
ಕೊಡೆಮುರಿವ ಪಟ್ಟಸಕೆ ಚಾಚುವ
ಝಡಿತೆಗೊದಗುವ ಭಟರು ಹೆಣಗಿದರರಸ ಕೇಳೆ೦ದ ೯೭

ಎಳೆದು ದಣುವಟ್ಟೆಯಲಿ ಬೊಪ್ಪರ
ದೊಳಗೆ ಜಾಳಿಸಿ ಚಿಮ್ಮಿ ಝಡಿತೆಯ
ಸೆಳೆದು ಮುಡುಹಿನಲೌಕಿ ಬಿಗಿದರು ಪಟ್ಟ ಮುಡುಹಿನಲಿ
ಸುಳಿದು ಮರ್ಕಟ ಬ೦ಧದಲಿ ಕರ
ವಳಯದಲಿ ಕೈದುಡುಕಿ ಶಿರವ
ಟ್ಟಳೆಯ ಚಲ್ಲಣ ಪಟ್ಟಿಯವರೊದಗಿದರು ಪಟುಭಟರು ೯೮

ಅಗಡಿಯಲಿ ಲೋಟಿಸಿ ನಿರ೦ತರ
ಲಗಡಿಯಲಿ ಲಾಗಿಸಿ ನಿಬಂಧದ
ಬಿಗುಹುಗಳ ಕುಮ್ಮರಿಯ ಕುಹರದ ನಾಗಬ೦ಧಗಳ
ತೆಗಹುಗಳ ತೊಡಕುಗಳ ತುಳುಕಿನ
ಜಗಳುಗಳ ಜೋಡಣೆಯ ನಿಡು ಸು
ಯ್ಲುಗಳ ಸೌರ೦ಭದ ಸಗಾಡರು ಹೊಕ್ಕು ಹೆಣಗಿದರು ೯೯

ಧೂಳಿ ಕುಡಿದುದು ಬೆಮರನಾ ಕೆ೦
ಧೂಳಿನೆನೆದುದು ಬೆವರಿನಲಿ ತಳ
ಮೇಲು ನಿಮಿಷಕೆ ಮೇಲು ತಳ ಬಿಡುಹುಗಳ ಬಿಗುಹುಗಳ
ಸೂಳು ನಾಸಾ ಪುಟದ ಪವನನ
ತಾಳಿಗೆಯ ಕರ್ಪುರದ ಕವಳದ
ತೋಳತೆಕ್ಕೆಯ ತವಕಿಗರು ಹೆಣಗಿದರು ಪಟುಭಟರು ೧೦೦

ತೀರದಿಬ್ಬರ ಸತ್ವವವನಿಯ
ಸಾರದಿಬ್ಬರ ಬಲುಹುಗಾಣದು
ಪಾರುಖಾಣೆಯವದಟರಿಬ್ಬರ ಭುಜ ಬಲಾಟೋಪ
ಸಾರವಳಿಯದು ಮುಳಿಸು ದರ್ಪದ
ಧಾರೆ ಮುರಿಯದು ಜಯದ ತೃಷ್ಣೆಯ
ತೋರಹತ್ತರು ಹೆಣಗಿದರು ಕಲಿಭೀಮ ಮಾಗಧರು ೧೦೧

ಪೂತು ಮಝ ಜಗಜಟ್ಟಿ ದಣು ಧಣು
ವಾತಸುತ ಪರಬಲ ಭಯ೦ಕರ
ಸೋತನೋ ಪ್ರತಿಮಲ್ಲನೆ೦ದರು ಕೃಷ್ಣ ಫಲುಗುಣರು
ಭೀತನಾದನು ಭೀಮನಹಿತ ವಿ
ಘಾತಿ ಮಾಗಧರಾಯ ಮಲ್ಲ
ವ್ರಾತ ಕುಲಗಿರಿ ವಜ್ರನೆ೦ದುದು ಮಗಧ ಪರಿವಾರ ೧೦೨

ಅಲಸಿದರು ಬಿನ್ನಣಕೆ ಬಿಗುಹಿನ
ಕಳಿವುಗಳ ಬೇಸರಿಕೆಯಲಿ ಕಡು
ಲುಳಿ ಮಸಗಿ ಡಾವರಿಸಿ ಮನವನುಪಾಯ ಡಾವರಕೆ
ತೊಲಗಿ ನಿ೦ದರು ಕರ್ಪುರದ ತನಿ
ಹಳುಕನಣಲೊಳಗಡಿಸಿ ದ೦ಡೆಯ
ಬಲಿದು ಬರಸಿಡಿಲೆರಕವೆನೆ ತಾಗಿದರು ಬಳಸಿನಲಿ ೧೦೩

ಬಾಳ ಹೋಯ್ಲೋ ಸಿಡಿಲ ತೊಡರಿನ
ಸೂಳುಗಳೊ ಸಿಡಿದಲೆಯ ಗಿರಿಗಳ
ಬೀಳುಗಳೋ ಬಿರು ಹೊಯ್ಲ ಧಾರೆಯ ಕಿಡಿಯ ತು೦ಡುಗಳೊ
ತೋಳನೆಗಹಿನ ಮುಷ್ಟಿ ಘಾತದ
ಮೇಲು ಘಾಯದ ಲುಳಿಯ ಘೋಳಾ
ಘೋಳಿಗಳನಾರೆಣಿಸುವರು ಕಲಿಭೀಮ ಮಾಗಧರ ೧೦೪

ಕುಸಿದು ಘಾಯವ ಕಳೆದು ವಕ್ಷದ
ಬೆಸುಗೆ ಬಿಡೆ ಸಿಡಿದೆದ್ದು ಹೋಯ್ಲಿಗೆ
ಮುಸುಡ ತಿರುಹುವ ಮೈಯನೊಡ್ಡಿದಡೌಕಿ ಥಟ್ಟಿಸುವ
ಅಸಮಸೆಗೆ ಮೈಯಳುಕದೆರಗುವ
ಹುಸಿವ ಜಾರುವ ಹೊಳೆವ ಹಣುಗುವ
ಬೆಸುವ ಬಿಡಿಸುವ ದಿಷ್ಟಿವಾಳರು ಹೊಕ್ಕು ಹೆಣಗಿದರು ೧೦೫

ಪವನಜನ ರಾವಣನ ಝಾಡಿಯ
ತಿವಿತಗಳು ಚಾಣೂರ ಕೃಷ್ಣರ
ಜವಳಿ ಹೋಯ್ಲಿವರೊಳಗೆ ಜೋಡಿಸವೇನ ಹೇಳುವೆನು
ಶಿವನ ಡಮರುಗದಾಟವೊ ಭೈ
ರವನ ಫಣೆಗಣ್ಣಾಟವೊಬಿರು
ದಿವಿಗುಳಿನ ದೆಖ್ಖಾಳ ಮಸಗಿತು ಭೀಮ ಮಾಗಧರ ೧೦೬

ಕುಣಿದವಿಬ್ಬರ ಮುಷ್ಟಿಯಿಬ್ಬರ
ಹಣೆಯಲೆದೆಯಲಿ ಮೋರೆಯಲಿ ಭುಜ
ದಣಸಿನಲಿ ಕ೦ದದಲಿ <ಬಲುಹಿನ? - ಮೂಲದಲ್ಲಿ ನಾಲ್ಕಕ್ಷರ ಬಿಟ್ಟಿದೆ> ಬದಿಯಲುದರದಲಿ
ಝಣು ವಿರೋಧಿ ವಿಭಾಡ ಝುಣು ಝುಣು
ಝುಣು ಜಗತ್ರಯ ಜಟ್ಟಿ ಝುಣು ಝುಣು
ಝುಣು ಝುಣೆ೦ಬಬ್ಬರಣೆ ಮಸಗಿದುದೆರಡು ಭಾಹೆಯಲಿ ೧೦೭

ಹೊಯ್ಲ ಹೊದರೆದ್ದವು ವಿಘಾತದ
ಕಯ್ಲುಳಿಯ ಕಡುಘಾಯ ಘಾಯಕೆ
ಮೆಯ್ಲವಣೆ ಲ೦ಬಿಸಿತು ಕಡುಹಿನ ಖತಿಯ ಕೈ ಮಸಕ
ಹೊಯ್ಲ ಹೊಗೆಗಳ ಹೋರಟೆಯ ವೇ
ಗಾಯ್ಲ ಮುಷ್ಟಾ ಮುಷ್ಟಿ ಗತಿಯ ದೃ
ಡಾಯ್ಲರಪ್ಪಳಿಸಿದರು ಪದ ಘಟ್ಟಣೆಗೆ ನೆಲ ಕುಸಿಯೆ ೧೦೮

ಆವ ಸಾಧನೆಯೊ ವಿಘಾತಿಯ
ಲಾವಣಿಗೆಗದ್ರಿಗಳು ಬಿರಿದವು
ಮೈ ವಳಿಯಲುಕ್ಕಿದುದು ಕಡುಹಿನ ಖತಿಯ ಕೈ ಮಸಕ
ತಾವರೆಯ ತೆತ್ತಿಗನ ಕುಮುದದ
ಜೀವಿಗನ ಮಿಗೆ ಮೇಲುನೋಟದೊ
ಳಾ ವಿಗಡರುಗಳಡಸಿ ತಿವಿದಾಡಿದರು ಬೇಸರದೆ ೧೦೯

ತೆಗೆದರರ್ಜುನ ಕೃಷ್ಣರೀತನ
ನುಗಿಯರವನವರವನನಿರುಳಿನ
ಹಗಲ ವಿವರಣೆಯಲ್ಲ ಮಜ್ಜನ ಭೋಜನಾದಿಗಳ
ಬಗೆಗೆ ತಾರರು ಬಾಹುಸತ್ವದ
ಹೊಗರು ಹೋಗದು ಮನದ ಖಾತಿಯ
ತೆಗಹು ತಗ್ಗದು ಹೊಕ್ಕು ತಿವಿದಾಡಿದರು ಬೇಸರದೆ ೧೧೦

ಸತ್ವ ಸವೆಯದು ಮನದ ಮುಳಿಸಿನ
ಬಿತ್ತು ಬೀಯದು ಜಯದ ಬಯಕೆಯ
ಸುತ್ತು ಸಡಿಲದು ಬಿ೦ಕ ಬೀಯದು ನೋಯದಾಟೋಪ
ತೆತ್ತ ಕೈ ಕ೦ಪಿಸದು ಮುಷ್ಟಿಯ
ಹತ್ತುಗೆಗೆ ಮನ ಝೋ೦ಪಿಸದು ಮದ
ವೆತ್ತಿ ಮೆಟ್ಟಿದರೊಬ್ಬರೊಬ್ಬರ ಮರ್ಮಘಾತದಲಿ ೧೧೧

ಅರಸ ಕೇಳೈದನೆಯ ದಿವಸದೊ
ಳುರು ಭಯ೦ಕರವಾಯ್ತು ಕದನದ
ಭರದೊಳೆಡೆದೆರಹಿಲ್ಲ ವಿಶ್ರಮವಿಲ್ಲ ನಿಮಿಷದಲಿ
ಎರಡು ದೆಸೆಯಲಿ ವೀಳೆಯದ ಕ
ರ್ಪುರದ ಕವಳದ ಕೈಚಳಕದಲಿ
ತೆರಹನಲ್ಲದೆ ಮತ್ತೆ ಕಾಣೆನು ಯುದ್ಧರ೦ಗದಲಿ ೧೧೨

ಭರದ ಭಾರಣೆಯಲಿ ಚತುರ್ದಶಿ
ಯಿರುಳು ಮಗಧನ ಬಾಹುಸತ್ವದ
ಮುರಿವು ಮೊಳೆತುದು ಶೌರ್ಯ ಸೆಡೆದುದು ಭಯದ ಬಿಗುಹಿನಲಿ
ಉರು ಪರಾಕ್ರಮ ತೇಜ ಪಡುವಣ
ತರಣಿಯಾದುದು ಧಟ್ಟಣೆಯ ಧರ
ಧುರಕೆ ನಿರ್ದ್ರವ ಜಿಹ್ವೆಯಾದುದು ನಿಮಿಷ ನಿಮಿಷದಲಿ ೧೧೩

ಬೇಸರಿಕೆ ಬೇರೂರಿದುದು ಜಯ
ದಾಸೆ ಜಾರಿತು ದಿಟ್ಟತನದ ವಿ
ಳಾಸ ಹಾರಿತು ಸುಪ್ರತಾಪದ ಕೆ೦ಪು ಕರಿದಾಯ್ತು
ಮೀಸಲಳಿದುದು ಮುಳಿಸು ಶೌರ್ಯದ
ವಾಸಿ ಪೈಸರವಾಯ್ತು ರಣದಾ
ವೇಶವಿಳಿದುದು ಮಗಧಪತಿಗಿದನರಿದನಸುರಾರಿ ೧೧೪

ಹೊರಗೆ ಬಲಿದೊಳಡಿಳ್ಳವನು ಪರ
ರರಿಯದ೦ತಿರೆ ತಿವಿದ ಮಗಧನ
ಪರಿಯನರಿದನು ದನುಜರಿಪುಪರರಿ೦ಗಿತಜ್ಞನಲೆ
ಅರಿವುದರಿದೆ ಚರಾಚರ೦ಗಳ
ಹೊರಗೊಳಗು ತಾನಲ್ಲದಿಲ್ಲಿದ
ನರಿಯನೇ ಶಿವಯೆ೦ದನಾ ಜನಮೇಜಯನು ನಗುತ ೧೧೫

ಎಲೆಲೆ ಪವನಜ ಮಾಗಧೇಶ್ವರ
ನಳವನರಿದಾ ನಿನ್ನತ೦ದೆಯ
ಬಲುಹುಗೊ೦ಡೀ ರಿಪುವ ಮುರಿ ನೆನೆ ನೆನೆ ಸಮೀರಣನ
ಬಲುಮುಗಿಲು ಬಿರುಗಾಳಿಯೊಡ್ಡಿನೊ (ಪಾ: ಬಿರುಗಾಳಿಯೊಡ್ದಿನೊ)
ಳಳುಕದೇ ಫಡ ಬೇಗ ಮಾಡೆನೆ
ಕಲಿವೃಕೋದರನನಿಲರೂಪಧ್ಯಾನಪರನಾದ ೧೧೬

ಧ್ಯಾನದಲಿ ತನ್ಮಯತೆಯಾಗಲ
ನೂನ ಸಾಹಸನಾಗಿ ಮಗಧ ಮ
ಹಾ ನರೇ೦ದ್ರನ ತುಡುಕಿ ಹಿಡಿದನು ಮಲ್ಲಗ೦ಟಿನಲಿ
ಆ ನಗೆಯನೇವಣ್ಣಿಸುವೆನನು
ಮಾನಿಸದೆ ಬೀಸಿದನು ಬವಣೆಯ
ಭಾನುಮ೦ಡಲದ೦ತೆ ತಿರುಗಿದನಾ ಜರಾಸ೦ಧ ೧೧೭

ಬರಸೆಳೆದು ಕರದಿ೦ದ ಮಾಗಧ
ನೆರಡು ಕಾಲನು ಹಿಡಿದು ಸೀಳಿದು
ಧರೆಗೆ ಬಿಸುಟನು ಸ೦ಧಿಸಿದುವಾಸೀಳು ತತುಕ್ಷಣಕೆ
ಮರಳಿ ಪವನಜ ಹಿಡಿದು ಸೀಳುವ
ನಿರದೆ ಮಗುಳವು ಸ೦ಧಿಸುವವೀ
ಪರಿ ಹಲವು ಸೂಳಿನಲಿ ಭೀಮನೊಳೊದಗಿದನು ಮಗಧ ೧೧೮

ಮುರಮಥನನದನರಿತು ನಿಜಕರ
ವೆರಡ ಪಲ್ಲಟವಾಗಿ ಸ೦ಧಿಸ
ಲರಿ ವಿದಾರಣ ಭೀಮ ನೋಡುತ ಮರಳಿ ಮಾಗಧನ
ಎರಡು ಸೀಳನುಮಾಡಿ ಹೊಯ್ದ
ಬ್ಬರಿಸಿ ಪಲ್ಲಟವಾಗಿ ಸೇರಿಸಿ
ತಿರುಗಿಸಿದನೇನ೦ಬೆನುನ್ನತ ಬಾಹುಸತ್ವದಲಿ ೧೧೯

ತಿರುಹಿದನು ನೂರೆ೦ಟು ಸೂಳನು
ಧರೆಯೊಳಪ್ಪಳಿಸಿದನುಬಳಿಕಾ
ಪುರ ಜನದ ಪರಿಜನದ ಹಾ ಹಾ ರವದ ರಹಿ ಮಸಗೆ
ತೆರಳಿತಲ್ಲಿಯದಲ್ಲಿ ಮಾಗಧ
ನರಸಿಯರು ಬಿಡುಮುಡಿಯ ಜಠರದ
ಕರದ ಬಿರು ಹೊಯ್ಲಿನಲಿ ಹೊರವ೦ಟರು ನಿಜಾಲಯವ ೧೨೦

ಮನೆಮನೆಯ ಕದವಿಕ್ಕಿದವು ನೃಪ
ವನಿತೆಯರು ಹೊರವ೦ಟರಲ್ಲಿಯ
ಮನುಜರಡಗಿದರದ್ರಿ ಗುಹೆಯಲಿ ಬೇಹ ಬೇಹವರು
ಜನದ ಕೊಲಾಹಲವನಾತನ
ತನುಜರೋಟವನವನ ಸತಿಯರ
ನಿನದವನು ಕ೦ಡಸುರಹರ ಸಾರಿದನು ಕೈ ನೆಗಹಿ ೧೨೧

ಅ೦ಜದಿರಿ ಪುರದವರು ವನಿತೆಯ
ರ೦ಜದಿರಿ ಮಾಗಧನ ಪರಿಜನ
ವ೦ಜದಿರಿ ಮ೦ತ್ರಿ ಪ್ರಧಾನ ಪಸಾಯ್ತರಾದವರು
ಅ೦ಜದಿರಿ ಕರೆಯಿವನ ಮಗನನು
ಭ೦ಜಿಸುವುದಿಲ್ಲಕಟಭೀಮ ಧ
ನ೦ಜಯರು ಕೊಟ್ಟಭಯವೆ೦ದನುನಗುತ ಮುರವೈರಿ ೧೨೨

ಮುರಿದು ಕೆಡಹಿದರರಿಯನಲ್ಲಿಯ
ಸೆರೆಯ ಮನೆಗಳ ಹೊಕ್ಕು ರಾಯರ
ಸೆರೆಗಳನು ಬಿಡಿಸಿದನು ನಾನಾ ದ್ವೀಪ ಪಾಲಕರ
ಮೆರೆವ ಮಣಿಮಯ ರಶ್ಮಿವಳಯದ
ಮಿರುಪ ರಥವನು ಕೊ೦ಡು ನಗರದ
ಹೊರವಳಯದಲಿ ಬ೦ದುಹೊಕ್ಕರು ತಮ್ಮ ಪಾಳೆಯವ ೧೨೩

ಪೌರಜನ ಕಾಣಿಕೆಗಳಲಿ ಕ೦
ಸಾರಿ ಭೀಮಾರ್ಜುನರ ಕ೦ಡುದು
ಧಾರುಣೀಪಾಲಕರು ಬ೦ದರು ಬೆನ್ನಲಿವರುಗಳ
ಘೋರವಡಗಿದುದೆಮ್ಮ ಕಾರಾ
ಗಾರ ಬ೦ಧವಿಮುಕ್ತವಾಯ್ತುಪ
ಕಾರವೆಮ್ಮಿ೦ದಾವುದೆ೦ದರು ನೃಪರು ಕೈಮುಗಿದು ೧೨೪

ನವೆದಿರತಿ ದುಃಖದಲಿ ಬಿಡುಗಡೆ
ಪವನಸುತನಿ೦ದಾಯ್ತು ನಿಜ ರಾ
ಜ್ಯವನು ಹೊಗುವುದು ಪೌರಜನ ಪರಿಜನವ ಸಲಹುವುದು
ಎಮಗೆ ಮಾಳ್ಪುಪಕಾರ ಬೇರಿ
ಲ್ಲವನಿಪನ ವರ ರಾಜಸೂಯಕೆ
ನಿವನಿವಗೆ ಮು೦ಕೊ೦ಡು ಬಹುದೆ೦ದನು ಮುರಾ೦ತಕನು ೧೨೫

ನಗರಜನ ಮ೦ತ್ರಿ ಪ್ರಧಾನಾ
ದಿಗಳುಸಹಿತ ಕುಮಾರನೈತ೦
ದಗಧರನ ಪದಕೆರಗಿದನು ಭೀಮಾರ್ಜುನಾ೦ಘ್ರಿಯಲಿ
ಮಗಗೆ ತ೦ದೆಯ ಮಾರ್ಗದಲಿ ನ೦
ಬುಗೆಯೊ ಕರುಣಾ ರಕ್ಷಣದ ನ೦
ಬುಗೆಯೊ ಚಿತ್ತವಿಸೆ೦ದರಾ ಮ೦ತ್ರಿಗಳು ಕೈಮುಗಿದು ೧೨೬

ಶವವ ಸ೦ಸ್ಕರಿಸುವುದು ಮಾಗಧ
ನವನಿಯಲಿ ಸಹದೇವಗಭಿಷೇ
ಕವನು ಮಾಡಿಸಿದಲ್ಲದೆತ್ತಲು ಮುರಿವುದಿಲ್ಲೆ೦ದು
ಅವರಿಗಭಯವನಿತ್ತು ಪರಿವಾ
ರವನು ಕಳುಹಿದರಿತ್ತಲಾತನ
ಯುವತಿಯರು ಬೇಡಿದರು ವಹ್ನಿಯ ಪಡೆದು ಮರಳಿದರು ೧೨೭

ಅವನ ಸ೦ಸ್ಕಾರದಲಿ ನಾರೀ
ನಿವಹ ಸಹಗತವಾಯ್ತು ವೈದಿಕ
ವಿವಿಧ ವಿಧಿಯಲಿ ಮಾಡಿದರು ಶೇಷಕ್ರಿಯಾದಿಗಳ
ಅವನ ಮಗ ಸಹದೇವನಾತ೦
ಗವನಿಯಲಿ ಪಟ್ಟಾಭಿಷೇಕೋ
ತ್ಸವವ ಮಾಡಿಸಿ ಕೊಟ್ಟನಭಯವನಾ ಪರಿಗ್ರಹಕೆ ೧೨೮

ತೇರುಗಳ ತೇಜಿಗಳನಾ ಭ೦
ಡಾರವನು ಗಜಘಟೆ ಸಹಿತ ವಿ
ಸ್ತಾರ ವಿಭವವನೊಪ್ಪುಗೊ೦ಡರು ಮಗಧ ನ೦ದನನ
ಧಾರುಣಿಯನವಗಿತ್ತು ಸಕಳ ಮ
ಹೀ ರಮಣರನುಕಳುಹಿ ಬ೦ದನು
ವೀರ ನಾರಾಯಣನು ಶಕ್ರಪ್ರಸ್ಥ ಪುರವರಕೆ ೧೨೯

(ಸಂಗ್ರಹ: ಶ್ರೀಮತಿ ಶಕುಂತಲಾ)

Monday, August 16, 2010

ಕರ್ಣಪರ್ವ: ೦೫. ಐದನೆಯ ಸಂಧಿ

ಸೂ :ವೈರಿ ವಿಜಯಕೆ ತ್ರಿಪುರ ದಹನದ
ಚಾರು ಕಥನವನರುಹಿ ಶಲ್ಯನ
ಸಾರಥಿಯ ಮಾಡಿದನು ಕರ್ಣಗೆ ಕೌರವರರಾಯ

ಕೇಳು ಜನಮೇಜಯ ಧರಿತ್ರೀ
ಪಾಲ ದಿನವೊಂದಾಯ್ತು ಕರ್ಣನ
ಕಾಳೆಗದೊಳಲ್ಲಿಂದ ಮೇಲಣ ವರ ಕಥಾಮೃತವ
ಕೇಳಲಿಚ್ಛೈಸಿದ ಗತಾಕ್ಷ ನೃ
ಪಾಲಕಗೆ ವಿಸ್ತರಿಸಿ ಸಂಜಯ
ಹೇಳಿದನು ಬಳಿಕೆರಡನೆಯ ದಿವಸದ ರಣೋತ್ಸವದ ೧

ಹೊಗಳಿ ಕೆಲವರ ಹೊಳ್ಳುಗಳೆವುತ
ನಗುತ ಕೆಲವರನವರ ಮೋಹರ
ತೆಗೆದು ಹೋಯಿತು ಬಂದುದಿದು ತಂತಮ್ಮ ಪಾಳಯಕೆ
ಹೊಗಳುಭಟ್ಟರ ಸಾಲ ಕೈದೀ
ವಿಗೆಯ ಕಹಳಾರವದ ಲಗ್ಗೆಯ
ಬಿಗುಹಿನಲಿ ಕುರುರಾಯ ಬಂದನು ರಾಜಮಂದಿರಕೆ ೨

ಗುಳವನಿಳುಹಿದವಾನೆಗಳು ಹ
ಲ್ಲಳವ ಬಿಡೆ ಭುಲ್ಲೈಸಿದವು ಹಯ
ಕುಳ ವರೂಥವನಿಳಿದು ಸೂತರು ನಿಲಿಸಿದರು ರಥವ
ಕಳಚಿ ಸೀಸಕ ಜೋಡು ಕೈದುವ
ನಿಳುಹಿ ಸಮರ ಶ್ರಮವ ನಿಮಿಷಕೆ
ನಿಳಯ ವೇದಿಯಲಿದ್ದು ಕಳೆದುದು ಕೂಡೆ ಪರಿವಾರ ೩

ಘಾಯವಡೆದಾನೆಗಳು ಗುಳವನು
ಹಾಯಿಕಲು ನೆಲಕುರುಳಿದವು ವಾ
ನಾಯುಜಂಗಳು ಬಿಗುಹ ಬಿಡೆ ದೊಪ್ಪೆಂದವಾಚೆಯಲಿ
ಘಾಯದಲಿ ಮುರಿದಂಬನುಗುಳಿದು
ಸಾಯದಿಹರೇ ಭಟರು ಗಜ ಹಯ
ಲಾಯ ಹತ್ತೊಂದಾಗಿ ಹೆಚ್ಚಿತು ಕೌರವೇಶ್ವರನ ೪

ಬಂದುದಿರುಳೋಲಗಕೆ ರಾಯನ
ಮಂದಿ ದಳಪತಿ ಶಕುನಿ ಕೃಪ ಗುರು
ನಂದನಾದಿ ಪ್ರತತಿ ಸಚಿವ ಪಸಾಯಿತರು ಸಹಿತ
ಇಂದಿನಾಹವದೊಳಗೆ ಕುಂತೀ
ನಂದನರ ಬೊಬ್ಬಾಟ ಬಲುಹಾ
ಯ್ತೆಂದು ಮೆಲ್ಲನೆ ಮಾತ ತೆಗೆದನು ಕೌರವರ ರಾಯ ೫

ಬಲುಹಲೇ ಬಳಿಕೇನು ಹಗೆಯ
ಗ್ಗಳಿಕೆ ಮೆರೆಯದೆ ಮುರವಿರೋಧಿಯ
ಬಲುಹ ಹೇಳಾ ಪಾರ್ಥನೆಂಬವನಾವ ಮಾನಿಸನು
ಬಲುಹು ಸಾರಥಿಯಿಂದ ರಿಪುಗಳ
ಗೆಲುವು ಸಾರಥಿಯಿಂದ ಸಾರಥಿ
ಯೊಲಿದಡೇನೇನಾಗದೆಂದನು ಭೂಪತಿಗೆ ಕರ್ಣ ೬

ಭಾರಿ ಧನುವಿದ್ದೇನು ತೋಳಿನ
ತೋರದಲಿ ಫಲವೇನು ಕೈದುಗ
ಳಾರನಂಜಿಸಲಾಪವಾಹವರಂಗ ಮಧ್ಯದಲಿ
ಸಾರಥಿಯ ಬಲುಹಿಲ್ಲದಿರ್ದಡೆ
ಭೂರಿ ಸಾಧನವಿವು ನಿರರ್ಥಕ
ವಾರಿಗುಸುರುವೆ ತನ್ನ ಕೊರತೆಯನೆಂದನಾ ಕರ್ಣ ೭

ತೃಣಕೆ ಕೊಂಬೆನೆ ಫಲುಗುಣನ ಕಣೆ
ಗಿಣೆಯನಾ ಸಾರಥಿಯ ಕೈ ಮೈ
ಗುಣವಲೇ ಗರುವಾಯಿಗೆಡಿಸಿತು ನಮ್ಮ ಮೋಹರವ
ರಣದೊಳೆನಗತಿಶಯದ ಸಾರಥಿ
ಮಣಿದನಾದಡೆ ನಾಳೆ ಹೆಣದೌ
ತಣದಲುಣ ಬಡಿಸುವೆನು ಜಂಬುಕ ಕಾಕ ಸಂತತಿಗೆ ೮

ಲೇಸನಾಡಿದೆ ಕರ್ಣ ನಿನಗಿ
ನ್ನೈಸಲೇ ಸಾರಥಿಯ ಕೊರತೆ ಸು
ರಾಸುರರ ಥಟ್ಟಿನಲಿ ತೊಡಕುವವರಾರು ನಿನ್ನೊಡನೆ
ಈ ಸಮಸ್ತ ನೃಪಾಲ ವರ್ಗದೊ
ಳಾಸೆ ಯಾರಲಿ ಸೂತ ಕರ್ಮಾ
ಭ್ಯಾಸಿಯನು ಜೋಡಿಸುವೆನೆಂದನು ಕೌರವರ ರಾಯ ೯

ಹಲವು ಮಾತೇನರಸ ನುಡಿದುದು
ಫಲಿಸಲರಿಯದು ದೈವಗತಿಯಲಿ
ಫಲಿಸಿತಾದಡೆ ರಾಜ್ಯಲಕ್ಷ್ಮಿಗೆ ಸೂಳೆತನವಹುದೆ
ಸುಲಭವಾದಡೆ ಮಾದ್ರರಾಜನ
ತಿಳುಹಿ ಸೈರಿಸು ರಿಪುಗಳೈವರ
ತಲೆಗೆ ಹಾಯಿಕು ಸಂಚಕಾರವನೆಂದೆನಾ ಕರ್ಣ ೧೦

ಉಬ್ಬಿದನು ರೋಮಾಂಚ ಮೈಯಲಿ
ಹಬ್ಬಿದುದು ಹೊರೆಯೇರಿ ಮರವೆಯ
ಮಬ್ಬು ಕವಿದುದು ಕರ್ಣನಾಡಿದ ಮಾತ ಸವಿಸವಿದು
ಟೆಬ್ಬರಿಸುವಿಂದ್ರಿಯ ತುರಂಗದ
ಕಬ್ಬಿ ಕಳಚಿತು ಕೌರವೇಂದ್ರನು
ಸರ್ಬಲಗ್ಗೆಯ ಹರುಷದಲಿ ಹೊರವಂಟನರಮನೆಯ ೧೧

ಹರಿದರರಸಾಳುಗಳು ರಾಯನ
ಬರವನೀತಂಗರುಹಿದರು ಕಡು
ಹರುಷದಲಿ ಕಲಿ ಶಲ್ಯ ಹೊರವಂಟನು ನಿಜಾಲಯವ
ಅರಸುಮಕ್ಕಳ ವಜ್ರಮಣಿಯಾ
ಭರಣ ಕಿರಣಸ್ತೋಮ ದೀಪ
ಸ್ಫುರಿತ ಜನಮಧ್ಯದಲಿ ಕಂಡನು ಕೌರವೇಶ್ವರನ ೧೨

ಅಂದಣವನಿಳಿದರಸನಾತಗೆ
ವಂದಿಸಿದನಾ ಮಾದ್ರಪತಿ ಸಾ
ನಂದದಲಿ ತೆಗೆದಪ್ಪಿ ತಂದನು ರಾಜಮಂದಿರಕೆ
ಇಂದಿದೇನಿದ್ದಿದ್ದು ನೀನೇ
ಬಂದ ಕಾರ್ಯ ವಿಶೇಷವೇನುಂ
ಟೆಂದು ಕೌರವರಾಯನನು ಬೆಸಗೊಂಡನಾ ಶಲ್ಯ ೧೩

ಏನ ಹೇಳುವೆ ನಮ್ಮ ಪುಣ್ಯದ
ಹಾನಿಯನು ನುಗ್ಗಾಯ್ತು ಬಲ ಸು
ಮ್ಮಾನ ಬೀತುದು ಬಿರುದರಿಗೆ ಕಾಲೂರಿತಪಮಾನ
ಜೈನ ದೀಕ್ಷೆಯ ಹಿಡಿದುದೆನ್ನ ಸ
ಮಾನ ಸುಭಟರು ಜಯಸಿರಿಯ ಸಂ
ಧಾನ ಮುರಿದುದು ಮಾವ ನಿಮಗಜ್ಞಾತವೇನೆಂದ ೧೪

ಸಮರಜಯ ಸಾಧಕರು ಮಂತ್ರ
ಭ್ರಮಿತರಾಯ್ತಪಜಯವಧೂ ವಿ
ಭ್ರಮ ಕಟಾಕ್ಷದ ಘಾಯದಲಿ ಕಳವಳಿಸದವರಾರು
ಸಮತೆಯಾಯಿತು ತವಕಿಗಳಿಗು
ದ್ಭ್ರಮಿಗಳಿಗೆ ತಿಳಿವಾಯ್ತು ವಾಸಿಯ
ಮಮತೆಯವರು ವಿರಕ್ತರಾದರು ಮಾವ ಕೇಳೆಂದ ೧೫

ಮುರಿವಡೆದು ಕಲಿ ಭೀಷ್ಮನೇ ಕು
ಕ್ಕರಿಸಿದನು ದ್ರೋಣಂಗೆ ಬಂದುದ
ನರುಹಲೇತಕೆ ಬಳಿಕ ಕರ್ಣನ ವೀರಪಟ್ಟದಲಿ
ನೆರವಣಿಗೆಯುಂಟಾದಡೊಂದೇ
ಕೊರತೆಯಿದು ನಿಮ್ಮಿಂದ ಕಡೆಯಲಿ
ನೆರತೆಯಹುದಿನ್ನುತ್ತರೋತ್ತರ ಸಿದ್ಧಿ ಬಳಿಕೆಂದ ೧೬

ದ್ರೋಣ ಭೀಷ್ಮರವೋಲು ನೆಟ್ಟನೆ
ಹೂಣಿಗರು ರಾಧೇಯ ಮಾದ್ರ
ಕ್ಷೋಣಿಪತಿಯೆಂದೆಂಬ ನುಡಿಯುಂಟೆರೆಡು ಥಟ್ಟಿನಲಿ
ಕೇಣವಿಲ್ಲದ ರಥಗತಿಯ ಬಿ
ನ್ನಾಣವನು ತೋರಿದಡೆ ತನ್ನಯ
ಗೋಣಿಗೊಡ್ಡಿದ ಕೈದುವನು ನೀ ತೆಗೆಸಿದವನೆಂದ ೧೭

ಬರಿದೆ ಬೋಳೈಸದಿರು ಕಾರ್ಯದ
ಹೊರಿಗೆಯೇನದ ಹೇಳು ಮೇಗಡೆ
ಮೆರೆವವರು ನಾವಲ್ಲ ನುಡಿಯಾ ಬಯಲ ಡೊಂಬೇಕೆ
ಅರುಹು ಕೇಳುವೆನೆನಲು ಶಲ್ಯನ
ಬಿರುನುಡಿಗೆ ಬೆಚ್ಚದೆ ಮಹೀಪತಿ
ಯರಿವು ತಪ್ಪದೆ ಬಿನ್ನವಿಸಿದನು ಮಾದ್ರರಾಜಂಗೆ ೧೮

ಮಾವ ಸಾರಥಿಯಾಗಿ ಕರ್ಣನ
ನೀವು ಕೋಡಾಡಿದರೆ ಫಲುಗುಣ
ನಾವ ಪಾಡು ಸುರಾಸುರರ ಕೈಕೊಂಬೆನೇ ಬಳಿಕ
ಆವುದೆಮಗಭ್ಯುದಯವದ ನೀ
ನಾವ ಪರಿಯಲಿ ಮನ್ನಿಸಿದಡರೆ
ಜೀವ ಕೌರವ ವಂಶವೇ ಸಪ್ರಾಣಿಸುವುದೆಂದ ೧೯

ಕೇಳಿದನು ಕುರುಪತಿಯ ಮಾತಿನ
ಗಾಳಿ ತುಡುಕಿತು ಮನದ ರೋಷ
ಜ್ವಾಲೆಯನು ಮೀಸೆಗಳು ಕುಣಿದವು ಕಾಯ ಕಂಪಿಸಿತು
ಮೇಲು ಮೂಗಿನ ಬೆರಳ ಕಡುಗಾ
ದಾಲಿಗಳ ಮಣಿಮಕುಟದೊಲಹಿನ
ನಾಲಗೆಯ ನಿರ್ದ್ರವದ ಮಾದ್ರಾಧೀಶನಿಂತೆಂದ ೨೦

ಖೂಳನೆಂಬೆನೆ ನೀ ಸಮಸ್ತ ಕ
ಳಾಳಿ ನಿಪುಣನು ಬಾಲನೆಂಬೆನೆ
ಮೇಲೆ ಪಲಿತದ ಬೀಡು ಬಿಟ್ಟಿದೆ ತಳಿತ ತನುವಿನಲಿ
ಹೇಳು ಹೇಳಿನ್ನೊಮ್ಮೆ ನುಡಿ ನುಡಿ
ಕೇಳುವೆನು ಕಿವಿಯಾರೆ ಕರ್ಣನ
ಕಾಳೆಗಕೆ ನಾವ್ ಸಾರಥಿಗಳೇ ಶಿವಶಿವಾ ಎಂದ ೨೧

ತಾರ ತಮತೆಯ ಬಲ್ಲೆ ಪುರುಷರ
ಚಾರು ಚರಿತವನರಿವೆ ಸುಭಟರ
ವೀರ ವೃತ್ತಿಯ ಬಲ್ಲೆ ಮಾನ್ಯರ ಮೈಸಿರಿಯ ತಿಳಿವೆ
ಆರವನು ರಾಧೇಯ ದಿಟ ನಾ
ವಾರವರು ನಮ್ಮಂತರವ ನೀ
ನಾರ ಕೈಯಲಿ ಕೇಳಿದರಿಯಾ ಶಿವಶಿವಾ ಎಂದ ೨೨

ಖೂಳನನು ಹಿಡಿತಂದು ಧರಣೀ
ಪಾಲರಲಿ ಸರಿಮಾಡಿ ರಾಜ್ಯದ
ಮೇಲೆ ನಿಲಿಸಿದೆ ಬಳಿಕ ಬಂದುದು ಖೂಳತನ ನಿನಗೆ
ಕೀಳು ಮೇಲಿನ ಸೀಮೆ ನಿನ್ನಲಿ
ಬೀಳುಕೊಂಡುದು ಸಾಕು ನಮಗಿ
ನ್ನಾಳುತನವೇಕೆನುತ ಧಿಮ್ಮನೆ ನಿಂದನಾ ಶಲ್ಯ ೨೩

ಒಡನೆ ನಿಂದನು ಸೆರಗ ಹಿಡಿದವ
ಗಡಿಸಲೇಕಿನ್ನೆನುತ ಗುಣದಲಿ
ನುಡಿದು ಕುಳ್ಳಿರಿಸಿದನು ಸಂತೈಸಿದನು ವಿನಯದಲಿ
ನುಡಿಗೆ ಕೋಪಿಸಲೇಕೆ ಮನವೊಡ
ಬಡುವುದೇ ಕೈಕೊಂಬುದಲ್ಲದ
ಡೊಡೆಯರುಂಟೇ ನಿಮಗೆ ಎಂದನು ಕೌರವರ ರಾಯ ೨೪

ಅರುಣ ಸಾರಥಿ ಭುವನ ಕಾರ್ಯದ
ಧುರವ ಹೊರನೇ ಕೃಷ್ಣನಲ್ಲಾ
ನರನ ಸಾರಥಿಯಾಗನೇ ಪರಕಾರ್ಯದನುವರಿದು
ಹರನ ಸಾರಥಿ ಕಮಲಸಂಭವ
ಸುರರ ಕಾರ್ಯಕ್ಕೊದಗನೇ ಸ
ತ್ಪುರುಷರೇ ಪರಕಾರ್ಯನಿಷ್ಠರು ಕೋಪವೇಕೆಂದ ೨೫

ಸವರಿದರು ಕುರುವಂಶವನು ಪಾಂ
ಡವರು ಸಕಲ ಮಹಾರಥರು ಸಲೆ
ಸವೆದುದಿಲ್ಲಿ ನದೀಸುತ ದ್ರೋಣಾದಿಗಳು ಸಹಿತ
ಅವರೊಳಳಿದವರಿಬ್ಬರೇ ನೀ
ವವಸರಕೆ ಸಾರಥ್ಯವನು ನಿ
ಮ್ಮವರ ಮೇಲನುರಾಗವುಳ್ಳಡೆ ಮಾಡು ಮಾಣೆಂದ ೨೬

ನಿನ್ನ ಕೈಯಲಿ ಬರಲಿ ಸತ್ತಿಗೆ
ಯೆನ್ನ ಕೈಯಲಿ ಹೊಡೆಸು ಬಂಡಿಯ
ನಿನ್ನ ತಮ್ಮನ ಹೆಗಲಲಾತನ ಹಡಪ ಹಾಯ್ಕಿರಲಿ
ನಿನ್ನ ಬಂಧುಗಳವನ ಬೇಂಟೆಯ
ಕುನ್ನಿಗಳ ಹಿಡಿಯಲಿ ಸುಯೋಧನ
ನಿನ್ನ ಭಾಗ್ಯವನೊದೆದು ಕಳೆ ಕೇಡಾವುದೆಮಗೆಂದ ೨೭

ಗೆಲುವೆನವದಿರನೆಂಬ ಬರಿಕ
ಕ್ಕುಲಿತೆಯಲ್ಲದೆ ದ್ರೋಣಭೀಷ್ಮರಿ
ಗಳುಕದರಿಭಟರಿವನ ಕೊಂಬರೆ ಕಂಡು ಮರುಳಾದೈ
ಬಲುಬಿದಿರನುಚ್ಚಳಿಸುವಳಿಮುಖ
ಕೆಳೆಯ ಕಬ್ಬಾನುವುದೆ ಕೌರವ
ಕುಲವನದ್ದಿದೆ ಪಾಪಿ ಕಷ್ಟವ ನೆನೆದೆ ಹೋಗೆಂದ ೨೮

ಅರಿಶಿರವ ಸೆಂಡಾಡಿ ಎನ್ನೀ
ಕರವು ವಂದಿ ವ್ರಾತದೆಡರನು
ಪರಿಹರಿಸಿತೀ ಹದನು ನಾವ್ ಹಿಂದೀಸು ಕಾಲದಲಿ
ಧರಣಿಪತಿ ನಿನ್ನಿಂದ ಕರ್ಣನ
ತುರಗ ವಾಘೆಯ ಚಮ್ಮಟಿಗೆಗೀ
ಕರವು ಹೂಡುವುದಾಯ್ತು ಹರಹರ ಧನ್ಯರಾವೆಂದ ೨೯

ಜಾತಿಹೀನರ ಕರ್ಮವುತ್ತಮ
ಜಾತಿಗಳ ಕರ್ತವ್ಯ ತಿರ್ಯ
ಗ್ಜಾತಿಗಳ ಗತಿ ಧರ್ಮವೃತ್ತಿಯ ಸೇರುವೆಯನರಿದು
ಆತನಳವಡಿಸಿದನು ವಿಧಿ ನಿಮ
ಗಾತ ಮಾಡಿದನಳಿದ ಸಾಮ
ರ್ಥ್ಯಾತಿಶಯವುಂಟೈಸಲೇ ಶಿವಯೆನುತ ಖತಿಗೊಂಡ ೩೦

ಆಸುರದ ಬೆರಗೇಕೆ ನಮ್ಮೊಡ
ನೀಸು ಮಾತೇಕೆಮ್ಮ ರಕ್ಷಿಸು
ವಾಸೆಯುಂಟೇ ಮಾಡಿ ಮಾಣ್ಪುದು ಕರುಣವಿಲ್ಲದಡೆ
ವಾಸಿವಟ್ಟವ ನೋಡಿದನೆ ಲ
ಕ್ಷ್ಮೀಶನವರಲಿ ಸೂತ ಕರ್ಮಾ
ಭ್ಯಾಸಿಯೇ ಮುರವೈರಿ ಮುನ್ನೆಂದನು ಸುಯೋಧನನು ೩೧

ಮುರಹರನ ಸಮಜೋಳಿ ನೀವಾ
ನರನ ಸಮಗೈ ಕರ್ಣನಿಂತಿ
ಬ್ಬರನು ನೀವಿಬ್ಬರು ವಿಭಾಡಿಸಿ ಗೆಲುವುದೇನರಿದು
ಸುರರ ಕಾರ್ಯದಲಂದು ಸಾರಥಿ
ಸರಜಿಜೋದ್ಭವನಾಗನೇ ಎ
ನ್ನರಸುತನವಿಂದಳಿದುದಿದ ನೀನುಳುಹಬೇಕೆಂದ ೩೨

ಒಣಗುತಿದೆ ಕುರುವಂಶಲತೆ ಫಲು
ಗುಣನ ಕೋಪಾನಳನ ನಾಲಗೆ
ಕೆಣಕುತಿದೆ ಕಕ್ಕುಲಿತೆಬಟ್ಟರೆ ಕಾಣೆ ಕಾವವರ
ಅಣಕಿಸದೆ ಕಾರುಣ್ಯ ವರ್ಷವ
ನೊಣಗಲಲಿ ಸುರಿ ಪಾಪಿ ಮಕ್ಕಳ
ಹೆಣನ ಕಾಣುತ ದುಃಖವಿಲ್ಲ ದುರಾತ್ಮ ನೀನೆಂದ ೩೩

ದೇವಕಿಸುತನೇನು ಬಂಡಿಯ
ಬೋವಗುಲದಲಿ ಜನಿಸಿದನೆ ಮೇ
ಣಾ ವಿರಿಂಚಿಯದಾವ ಸಾರಥಿಕುಲದ ಪೀಳಿಗೆಯೊ
ಕಾವುದೊಬ್ಬರನೊಬ್ಬರಿದರೊಳ
ಗಾವ ಹಾನಿ ಪರ ಪ್ರಯೋಜನ
ಭಾವಕರು ಸತ್ಪುರುಷರಿದಕೆ ವಿಚಾರವೇನೆಂದ ೩೪

ಗುರು ಪಿತಾಮಹರಿಂದ ಮೋರೆಯ
ಮುರಿದ ವಿಜಯ ವಧೂ ಕಟಾಕ್ಷವ
ತಿರುಹಿ ಹಾಯ್ಕುವ ಗಂಡನಾವನು ನೀವು ತಪ್ಪಿದಡೆ
ಕುರು ಕುಲೋದ್ಧಾರಕನು ಮಾದ್ರೇ
ಶ್ವರನೆನಿಪ ವಿಖ್ಯಾತಿ ಬಂದುದು
ಪರಿಹರಿಸದಿರು ಮಾವ ಎಂದೆರಗಿದನು ಚರಣದಲಿ ೩೫

ಶಿವ ಶಿವಾ ನಿರ್ಬಂಧವಿದು ಕೌ
ರವನಲಾಯಿತೆ ಮದ್ಯಮಯ ಗಂ
ಧವನು ಕುಡಿಸುವ ಪರಿಯಲಾ ತುಂಬಿಗಳ ಸೆರೆವಿಡಿದು
ಅವನಿಪತಿಗಳ ಸೇವೆಯಿದು ಕ
ಷ್ಟವಲೆ ಮೊದಲಲಿ ಬಳಿಕ ನಾವಿ
ನ್ನವಗಡಿಸಲೇನಹುದು ಸಾರಥಿಯಾದೆವೇಳೆಂದ ೩೬

ಆಯಿತೇ ಸಂತೋಷ ಕಮಲವ
ಳಾಯತೇಕ್ಷಣನೊಡನೆ ಬಂಡಿಯ
ಬೋಯಿಕೆಗೆ ವೀಳೆಯವ ಹಿಡಿದೆವು ಹಲವು ಮಾತೇನು
ದಾಯ ಬಂದುದೆ ನಿನಗೆ ಬೊಮ್ಮಂ
ಗಾಯಿತೇ ಸೂತತ್ವವಾದಡೆ
ರಾಯ ಹೇಳೈ ತ್ರಿಪುರ ದಹನದ ಕಥೆಯ ನೀನೆಂದ ೩೭

(ಸಂಗ್ರಹ : ಸುಬ್ರಹ್ಮಣ್ಯ)

Sunday, August 15, 2010

ಶಲ್ಯಪರ್ವ: ೦೧. ಮೊದಲನೆಯ ಸಂಧಿ

ಸೂ.ರಾಯಕೇಳೈ ಕದನದಲಿ ರಾ
ಧೇಯನವಸಾನದಲಿ ಕೌರವ
ರಾಯ ದಳಪತಿಯಾಗಿ ಹೊಕ್ಕನು ಶಲ್ಯನಾಹವವ

ಹೇಳರೇ ಭೀಷ್ಮಾದಿ ಹಿರಿಯರು
ಮೇಲುದಾಯವ ಬಲ್ಲವರು ಹೆ
ಚ್ಚಾಳುತನದಲಿ ಹಿಗ್ಗಿಕಂಡಿರೆ ಜಯದ ಜಾರುಗಳ
ಮೇಲಣಾಹವದೊಳಗೆ ದೇಹವ
ಬೀಳುಕೊಂಡನು ಶಲ್ಯನಲ್ಲಿಂ
ಮೇಲೆ ದೊರೆಗೇನಾದುದೆಂಬುದನರಿಯೆ ನಾನೆಂದ ೧

ಮರುಳೆ ಸಂಜಯ ಗಾಳಿಯಲಿ ಕುಲ
ಗಿರಿಯ ಬೈಸಿಕೆ ಬಿಚ್ಚಿದಡೆ ಹುಲು
ಮೊರಡಿಗಳ ಬಿಗುಹೇನು ಬೀತುದು ಕರ್ಣನೊಡ್ಡವಣೆ
ಕುರುಪತಿಯ ಪಾಡೇನು ಮಾದ್ರೇ
ಶ್ವರನ ಮತ್ಸರವೇನು ಸಾಕಂ
ತಿರಲಿ ಸವರಿತೆ ಕೌರವಾನ್ವಯವೆಂದನಂಧನೃಪ ೨

ಬೇಯದೆನ್ನೆದೆ ಶೋಕವಹ್ನಿಯ
ಬಾಯಲಕಟಾ ಕರ್ಣ ಕೌರವ
ರಾಯನಳಿವಿನಲುಳಿವ ಪುತ್ರದ್ರೋಹಿಯಾರಿನ್ನು
ಸಾಯಿಸುವ ಸಾವಂಜಿತೆನಗೆ ಚಿ
ರಾಯು ತೊಡರಿಕ್ಕಿದೆನು ಮಾರ್ಕಂ
ಡೇಯ ಮುನಿಗೆಂದರಸ ಧೊಪ್ಪನೆ ಕೆಡೆದನವನಿಯಲಿ ೩

ಹದುಳಿಸೈ ರಾಜೇಂದ್ರ ನೀ ಬಿ
ತ್ತಿದ ವಿಷದ್ರುಮ ಫಲಿತವಾಯಿತು
ಬೆದರಲೇಕಿನ್ನನುಭವಿಸು ಸಾಕುಳಿದ ಮಾತೇನು
ಕದನದಲಿ ಸುತೆ(ಸುತ?)ನಿಧಿಯ ಹೋಗಾ
ಡಿದೆ ನಿಜಾನ್ವಯ ಕಲ್ಪತರುವನು
ಮದಕರಿಗೆಮಾರಿದೆಯೆನುತ ನೆಗಹಿದನು ಭೂಪತಿಯ ೪

ಮಲಗಿಸಿದನೊರವೇಳ್ವ ನಯನ
ಸ್ಥಳವ ನೇವರಿಸಿದನು ಶೋಕಾ
ನಲನ ತಾಪಕೆ ತಂಪನೆರೆದನು ನೀತಿಮಯರಸದ
ಅಳಲಶ್ರವಮಾಡಿದೆ ನದೀಸುತ
ನಳಿವಿನಲಿ ಗುರು ಕರ್ಣ ಶಲ್ಯರ
ಕಳವಿನಲಿ ಕಟ್ಟಳಲ ಬಹಳಾಭ್ಯಾಸಿ ನೀನೆಂದ ೫

ಅಹುದು ಸಂಜಯ ಶೋಕಶಿಖಿ ನೆರೆ
ದಹಿಸಿತೆನ್ನನು ಬೆಂದ ವಸ್ತುಗೆ
ದಹನವುಂಟೇ ಎಂಬ ನಾಣ್ಣುಡಿ ನಮ್ಮೊಳಾದುದಲಾ
ಮಿಹಿರಸುತ ಪರಿಯಂತ ಕಥೆ ನಿ
ರ್ವಹಿಸಿ ಬಂದುದು ಶಲ್ಯಕೌರವ
ರೆಹಗೆ ನೆಗಳಿದರದನು ವಿಸ್ತರವಾಗಿ ಹೇಳೆಂದ ೬

ತೆಗೆದುದಾಚೆಯಲವರ ಬಲ ಜಗ
ದಗಲದುಬ್ಬಿನ ಬೊಬ್ಬೆಯಲಿ ಮೊರೆ
ಮುಗಿಲಮದದಂದದಲಿ ಮೊಳಗುವ ವಾದ್ಯರಭಸದಲಿ
ಬಿಗಿದಮೋನದ ಬೀತ ಹರುಷದ
ಹೊಗೆಯ ಮೋರೆಯ ಹೊತ್ತುವೆದೆಗಳ
ದುಗುಡದೊಗ್ಗಿನ ನಮ್ಮ ಮೋಹರ ತೆಗೆದುದೀಚೆಯಲಿ ೭

ಸಿಡಿದು ಕರ್ಣನ ತಲೆ ಧರಿತ್ರಿಗೆ
ಕೆಡೆಯೆ ಧೊಪ್ಪನೆ ಮೂರ್ಛೆಯಲಿ ನೃಪ
ಕೆಡೆದು ಕಣ್ಮುಚ್ಚಿದನು ಶೋಕಜ್ವರದ ಢಗೆ ಜಡಿಯೆ
ಹಡಪಿಗರು ಚಾಮರದ ಚಾಹಿಯ
ರೊಡನೆ ನೆಲಕುರುಳಿದರು ಸಾರಥಿ
ಕಡಿಯಣದ ಕುಡಿನೇಣ ಕೊಂಡನು ತಿರುಹಿದನು ರಥವ ೮

ಬಂದು ಕರ್ಣನ ಹಾನಿ ಕೌರವ
ವೃಂದವನು ವೇಢೈಸಿತೇ ಹಾ
ಯೆಂದು ಕೃಪಗುರುಸುತರು ರಥವನು ಬಿಟ್ಟು ಸೂಠಿಯಲಿ
ತಂದು ಬಾಚಿಸಿದರಸನಿರವೆಂ
ತೆಂದುಸುರನಾರೈದು ವಿಧಿಯನು
ನಿಂದಿಸಿದರವಧಾನ ಜೀಯವಧಾನ ಜೀಯೆನುತ ೯

ತಳಿತಳಿದು ಪನ್ನೀರನಕ್ಷಿಗೆ
ಚಳೆಯವನು ಹಿಡಿದೆತ್ತಿ ಗುರುಸುತ
ಮಲಗಿಸಿದಡೇನಯ್ಯ ಕರ್ಣ ಎನುತ್ತ ಕಂದೆರೆದು
ಘಳಿಲನೆದ್ದನು ಕರ್ಣ ತೆಗೆಸೈ
ದಳವನಿರುಳಾಯ್ತೆಂದು ಶೋಕದ
ಕಳವಳದಲರೆಮುಚ್ಚುಗಣ್ಣಲಿ ಮತ್ತೆ ಮೈಮರೆದ ೧೦

ರಾಯ ಹದುಳಿಸು ಹದುಳಿಸಕಟಾ
ದಾಯಿಗರಿಗೆಡೆಗೊಟ್ಟಲಾ ನಿ
ರ್ದಾಯದಲಿ ನೆಲ ಹೋಯ್ತು ಭೀಮನ ಭಾಷೆ ಸಂದುದಲಾ
ವಾಯುಜನ ಜಠರದಲಿ ತೆಗೆಯಾ
ಜೀಯ ನಿನ್ನನುಜರನು ಪಾರ್ಥನ
ಬಾಯಲುಗಿ ಸೂತಜನನೆಂದರು ಜರೆದು ಕುರುಪತಿಯ ೧೧

ಏನು ಗುರುಸುತ ಮಡಿದನೇ ತ
ನ್ನಾನೆ ಬವರದಲಕಟ ಕುಂತೀ
ಸೂನುವೇಕೈ ತಪ್ಪು ಮಾಡಿದನೇ ಮಹಾದೇವ
ಭಾನುಸನ್ನಿಭ ಸರಿದನೇ ತ
ಪ್ಪೇನು ಪಾರ್ಥನ ಬಸುರಲೆನ್ನ ನಿ
ಧಾನವಿದ್ದುದು ತೆಗೆವೆನೈಸಲೆಯೆಂದು ಕಂದೆರೆದ ೧೨

ತಾಪವಡಗಿತು ಮನದ ಕಡುಹಿನ
ಕೋಪ ತಳಿತುದು ಭೀಮ ಪಾರ್ಥರ
ರೂಪು ಮುಖದಲಿ ಕರ್ಣ ದುಶ್ಯಾಸನರ ಕಲ್ಪಿಸಿದ
ಭೂಪ ಕೇಳೈ ಪಾಳಯಕೆ ಕುರು
ಭೂಪ ಬಂದನು ನಾಳೆ ಕರ್ಣೋ
ತ್ಥಾಪನವಲಾ ಎನುತ ಹೂಕ್ಕನು ಭದ್ರಮಂಟಪವ ೧೩

ಶಕುನಿ ಕೃಪ ಗುರುಸೂನು ಕೃತವ
ರ್ಮಕ ಸುಕೇತು ಸುಶರ್ಮ ಸಮಸ
ಪ್ತಕರು ಮಾದ್ರೇಶ್ವರ ಸುಬಾಹು ಸುನಂದ ಚಿತ್ರರಥ
ಸಕಲ ಸುಭಟರು ಸಹಿತ ದಳನಾ
ಯಕರು ಬಂದರು ಕರ್ಣಹಾನಿ
ಪ್ರಕಟ ಕಳಿತ ಶಿರೋವಕುಂಠನ ವೈಮನಸ್ಯದಲಿ ೧೪

ಹಿಮದ ಹೊಯ್ಲಲಿ ಸೀದು ಸಿಕ್ಕಿದ
ಕಮಲವನದಂದದಲಿ ಹತವಿ
ಕ್ರಮದ ಕೀರ್ತಿಯ ಬಹಳಭಾರಕೆ ಬಳುಕಿದಾನನದ
ಸುಮುಖತಾವಿಚ್ಚೇದ ಕಲುಷ
ಸ್ತಿಮಿತರಿರವನು ಕಂಡು ನಾಳಿನ
ಸಮರಕೇನುದ್ಯೋಗವೆಂದನು ಕೃಪನ ಗುರುಸುತನ ೧೫

ಅರಸ ಕರ್ಣಚ್ಛೇದವೇ ಜಯ
ಸಿರಿಯ ನಾಸಾಚ್ಛೇದವಿನ್ನರ
ವರಿಸದಿರು ಹೊಯ್ದಾಡಿ ಹೊಗಳಿಸು ಬಾಹುವಿಕ್ರಮವ
ಗುರುನದೀಸುತರಳಿದ ಬಳಿಕೀ
ಧರೆಗೆ ನಿನಗಸ್ವಾಮ್ಯ ಕರ್ಣನ
ಮರಣದಲಿ ನೀನರ್ಧದೇಹನು ಭೂಪ ಕೇಳೆಂದ ೧೬

ಆ ವೃಕೋದರ ನರರೊಳಂತ
ರ್ಭಾವ ದುಶ್ಯಾಸನಗೆ ತನ್ಮಯ
ಜೀವಸಖಗಾ ಭೀಮ ಪಾರ್ಥರ ಮರಣಸಿದ್ಧಿಯಲಿ
ಕೈವಿಡಿಯಲೇ ಕರ್ಣನಿಹನೆಂ
ದಾವು ನಿಶ್ಚಯಿಸಿದೆವು ಕರ್ಣನ
ಸಾವ ನಾಳಿನೊಳರಿವೆನೆಂದನು ನಿನ್ನ ಮಗ ನಗುತ ೧೭

ನಾವು ಹೊಯ್ದಾಡುವೆವು ಭುಜಸ
ತ್ವಾವಲಂಬವ ತೋರುವೆವು ಕ
ರ್ಣಾವಸಾನವ ಕಂಡು ಬಳಿಕುಗುಳುವೆವು ತಂಬುಲವ
ನೀವು ಸೇನಾಪತ್ಯವನು ಸಂ
ಭಾವಿಸಿರೆ ಸಾಕಿನ್ನು ಮಿಗಿಲಾ
ದೈವಕೃತ ಪೌರುಷವ ನಾಳಿನೊಳರಿಯಬಹುದೆಂದು ೧೮

ಧರಣಿಪತಿ ಚಿತ್ತೈಸು ಸೇನಾ
ಧುರವನೀವುದು ಮದ್ರಭೂಪತಿ
ಗೆರವಲಾ ಜಯಲಕ್ಶ್ಮಿ ಬಳಿಕಾ ಪಾಂಡುತನಯರಿಗೆ
ಸುರನದೀಜ ದ್ರೋಣ ರಾಧೇ
ಯರಿಗೆ ಸರಿಮಿಗಿಲಿಂದು ಮಾದ್ರೇ
ಶ್ವರನುಳಿಯೆ ದೊರೆಯಾರು ದಿಟ್ಟರು ನಮ್ಮಥಟ್ಟಿನಲಿ ೧೯

ನೀವು ಕಟಕಾಚಾರ್ಯಪುತ್ರರು
ನೀವಿರಲು ಕೃಪನಿರಲು ದಳವಾಯ್
ನಾವಹೆವೆ ನೀವಿಂದು ತೇಜೊದ್ವಯದಲಧಿಕರಲೆ
ನಾವು ತರುವಾಯವರೆನಲು ಜಯ
ಜೀವಿಗಳು ನೀವನ್ಯಗುಣಸಂ
ಭಾವಕರಲಾ ಎಂದನಶ್ವತ್ಥಾಮ ಶಲ್ಯಂಗೆ ೨೦

ಉಚಿತವಿತರೇತರಗುಣಸ್ತುತಿ
ರಚನೆ ಗುಣಯುಕ್ತರಿಗೆ ವಿಜಯೋ
ಪಚಿತ ರಣನಾಟಕಕೆ ಜವನಿಕೆಯಾಯ್ತಲೇ ರಜನಿ
ಅಚಲ ಮೂರರ ಪೈಸರದ ಬಲ
ನಿಚಯ ನಮ್ಮದು ವೀರ ಸುಭಟ
ಪ್ರಚಯ ಮುಖ್ಯರ ಮಾಡಿಯೆಂದನು ಕೃಪನು ಕುರುಪತಿಗೆ ೨೧

ಸುರನದೀಜ ದ್ರೋಣ ಕೃಪರೀ
ಕುರುಬಲಕೆ ಕಟ್ಟೊಡೆಯರವರಿ
ಬ್ಬರ ಪರೋಕ್ಷದಲಾರವಿಲ್ಲಿಯ ಹಾನಿವೃದ್ಧಿಗಳು
ಗುರುಸುತನೊ ಶಲ್ಯನೊ ಚಮೊಮು
ಖ್ಯರನು ನೀವೇ ಬೆಸಸಿಯೆಂದನು
ಧರಣಿಪತಿ ಕೇಳೈ ಕೃಪಾಚಾರ್ಯಂಗೆ ಕುರುರಾಯ ೨೨

ಆದಡಾ ಭೀಷ್ಮಾದಿ ಸುಭಟರು
ಕಾದಿ ನೆಗ್ಗಿದ ಕಳನ ಹೊಗುವಡೆ
ಕೈದುಕಾರರ ಕಾಣೆನೀ ಮಾದ್ರೇಶ ಹೊರಗಾಗಿ
ಈ ದುರಂತದ ಸಮರಜಯ ನಿನ
ಗಾದಡೊಳ್ಳಿತು ಶಲ್ಯನಲಿ ಸಂ
ಪಾದಿಸಿರೆ ಸೇನಾಧಿಪತ್ಯವನರಸ ಕೇಳೆಂದ ೨೩

ತರಸಿ ಮಂಗಳವಸ್ತುಗಳನಾ
ದರಿಸಿ ಭದ್ರಾಸನದಲೀತನ
ನಿರಿಸಿ ನೃಪ ವಿಸ್ತರಿಸಿದನು ಮೂರ್ಧಾಭಿಷೇಚನವ
ಮೊರೆವ ವಾದ್ಯದ ಸಿಡಿಲ ಧರಣೀ
ಸುರರ ಮಂತ್ರಾಕ್ಷತೆಯ ಮಳೆಗಳೊ
ಳಿರುಳನುಗಿದವು ಮುಕುಟಮಣಿರಾಜಿಗಳ ಮಿಂಚುಗಳು ೨೪

ಆದುದುತ್ಸವ ಕರ್ಣಮರಣದ
ಖೇದವುಕ್ಕಿತು ಹಗೆಗೆ ಕಾಲ್ದೊಳೆ
ಯಾದ ವೀರರಸಾಬ್ಧಿ ನೆಲೆದಪ್ಪಿತ್ತು ನಿಮಿಷದಲಿ
ಬೀದಿವರಿದುದು ಬಿಂಕ ನನೆಕೊನೆ
ವೋದುದಾಶಾಬೀಜ ಲಜ್ಜೆಯ
ಹೋದ ಮೊಗಿಗೆ ಕದಪ ಹೊಯ್ದನು ನಿನ್ನ ಮಗನೆಂದ ೨೫

ಕಾಣಿಕೆಯನಿತ್ತಖಿಳ ಸುಭಟ
ಶ್ರೇಣಿ ಕಂಡದು ನುಡಿಯ ಹಾಣಾ
ಹಾಣಿಗಳ ಭಾಷೆಗಳ ಹಕ್ಕಲು ವೀರರುಕ್ಕುಗಳ
ಪ್ರಾಣಚುಳಕೋದಕದ ಚೇಷ್ಟೆಯ
ಹೂಣಿಗರು ವಿಜಯಾಂಗನೋಪ
ಕ್ಷೀಣಮಾನಸರೊಪ್ಪಿದರು ಕುರುಪತಿಯ ಪರಿವಾರ ೨೬

ಪತಿಕರಿಸಿದೈ ವೀರಸುಭಟ
ಪ್ರತಿತ (ಪ್ರತತಿ?) ಮಧ್ಯದಲೆಮ್ಮನಹಿತ
ಚ್ಯುತಿಗೆ ಸಾಧನವೆಂದು ನಿಜಸೇನಾಧಿಪತ್ಯದಲಿ
ಕೃತಕವಿಲ್ಲದೆ ಕಾದುವೆನು ಯಮ
ಸುತರೊಡನೆ ಜಯಸಿರಿಗೆ ನೀನೇ
ಪತಿಯೆನಿಸಿ ತೋರಿಸುವೆನೆಂದನು ಶಲ್ಯ ಕುರುಪತಿಗೆ ೨೭

ಉಬ್ಬಿದನಲೈ ಮಧುರವಚನದ
ಹಬ್ಬದಲಿ ನಿನ್ನಾತನಿತ್ತಲು
ತುಬ್ಬಿನವದಿರು ತಂದು ಬಿಸುಟರು ನಿಮ್ಮ ಪಾಳೆಯದ
ಸರ್ಬ (ಸಬ್ಬ?) ವೃತ್ತಾಂತವನು ಗಾಢದ
ಗರ್ಭ (ಗಬ್ಬ?) ಮುರಿದುದು ಕೃಷ್ಣರಾಯನ
ನೆಬ್ಬಿಸಿದನಿರುಳವನಿಪತಿ ಬಿನ್ನೈಸಿದನು ಹದನ ೨೮

ದೇವ ಚಿತ್ತೈಸಿದಿರೆ ಬೊಪ್ಪನ
ಭಾವನನು ಸೇನಾಧಿಪತ್ಯದ
ಲೋವಿದರಲೇ ಶಲ್ಯ ಮಾಡಿದ ಭಾಷೆಯವರೊಡನೆ
ಆವನಂಘೈಸುವನೊ ಪಾರ್ಥನೊ
ಪಾವಮಾನಿಯೊ ನಕುಲನೋ ಸಹ
ದೇವನೋ ತಾನೋ ನಿದಾನಿಸಲರಿಯೆ ನಾನೆಂದ ೨೯

ಕಲಹವೆನ್ನದು ದಳಪತಿಗೆ ತಾ
ನಿಲುವೆನೆಂದನು ಭೀಮನೆನ್ನನು
ಕಳುಹಿ ನೋಡೆಂದನು ಧನಂಜಯನೆಮ್ಮ ಮಾವನಲಿ
ಸಲುಗೆಯೆನಗೆಂದನು ನಕುಲನೆ
ನ್ನೊಲವಿನರ್ತಿಯಿದೆನ್ನ ಕಳುಹಿದ
ಡುಳುಹಿದವರೆಂದೆರಗಿದನು ಸಹದೇವನಾ ಹರಿಗೆ ೩೦

ಹರಿಯದರ್ಜುನನಿಂದ ಭೀಮನ
ನೆರವಣಿಗೆ ನೋಯಿಸದು ನಕುಲನ
ಹೊರಿಗೆಯೊದಗದು ಸೈರಿಸದು ಸಹದೇವನಾಟೊಪ
ಇರಿವಡಾ ಮಾದ್ರೇಶನನು ನೆರೆ
ಮುರಿವಡೆಯು ನಿನಗಹುದು ನಿನ್ನನು
ತರುಬಿದವರೇ ಕಷ್ಟರೆಂದನು ನಗುತ ಮುರವೈರಿ ೩೧

ಲೇಸನಾಡಿದೆ ಕೃಷ್ಣ ಶಲ್ಯಂ
ಗೀಸು ಬಲುಹುಂಟಾದಡನುಜರು
ಘಾಸಿಯಾದರು ಹಿಂದೆ ಭೀಷ್ಮಾದಿಗಳ ಬವರದಲಿ
ಈ ಸಮರಜಯವೆನಗೆ ನಾಳಿನೊ
ಳೈಸಲೇ ನಳ ನಹುಷ ಭರತ ಮ
ಹೀಶ ವಂಶೋತ್ಪನ್ನ ತಾನೆಂದನು ಮಹೀಪಾಲ ೩೨

ತಾಯಿ ಹೆರಳೇ ಮಗನ ನಿನ್ನನು
ನಾಯಕನೆ ಲೋಕೈಕವೀರರ
ತಾಯಲಾ ನಿಮ್ಮವ್ವೆಯಾ ಮೊಲೆವಾಲ ಬಲುಹಿನಲಿ
ರಾಯ ನೀ ಕ್ಷತ್ರಿಯನು ಸೇಸೆಯ
ತಾಯೆನುತ ತೂಪಿರಿದು ಕಮಲದ
ಳಾಯತಾಂಬಕನಪ್ಪಿಕೊಂಡನು ಧರ್ಮನಂದನನ ೩೩

ಸಂದವೈ ಹದಿನೇಳು ರಾತ್ರಿಗ
ಳಿಂದಿನಿರುಳಾ ಸೇನೆ ನಿರ್ಭಯ
ದಿಂದ ನಿದ್ರಾವ್ಯಸನನಿರ್ಭರ ಪೂರ್ಣ ಹರುಷದಲಿ
ಸಂದುದೀ ನಿನ್ನವರು ರಾಧಾ
ನಂದನವ್ಯಪಗಮನನಷ್ಟಾ
ನಂದವಿಹ್ವಲಕರಣರಿದ್ದರು ಭೂಪ ಕೇಳೆಂದ ೩೪

ಆ ಶಿಖಂಡಿಯ ತೋರಿ ಸರಳಿನ
ಹಾಸಿಕೆಯಲೊಬ್ಬನನು ಮಾತಿನ
ವಾಸಿಯಿಂದೊಬ್ಬನನು ಮುನ್ನಿನ ಕುಲವನೆಚ್ಚರಿಸಿ
ಘಾಸಿ ಮಾಡಿದನೊಬ್ಬನನು ಧರ
ಣೀಶ ಚೇಷ್ಟೆಯಲೊಬ್ಬನನು ಕೃಪೆ
ಯೇಸು ಘನವೋ ವೀರನಾರಾಯಣಗೆ ಭಕ್ತರಲಿ ೩೫

(ಸಂಗ್ರಹ: ಪಾರ್ಥಸಾರಥಿ.ಎಚ್.ವಿ)

Tuesday, June 22, 2010

ದ್ರೋಣಪರ್ವ: ೦೫. ಐದನೆಯ ಸಂಧಿ

ಸೂ: ವೀರ ರಿಪುಕದಳೀವನಕೆ ಮದ
ವಾರಣನು ಫಲಗುಣನ ತನಯನು
ದಾರ ಪದ್ಮವ್ಯೂಹದಲಿ ಗೆಲಿದನು ಕುಮಾರಕರ

ಅವಧರಿಸು ಧೃತರಾಷ್ಟ್ರ ನೃಪ ಸ್ಶೆಂ
ಧವನ ಗೆಲಿದಾ ವ್ಯೊಹ ಭೇದಾ
ಹವವಿಜಯ ವಿಜಯಾತ್ಮಕನ ಕೌತುಕ ರಣೋದಯವ
ತಿವಿದನುರುಬುವ ರಥ ಪದಾತಿಯ
ಕವಿವ ಗರುವ ತುರಂಗಗಳ ಬಲು
ಜವದ ರಥ ಕೋಟ್ಯಾನುಕೋಟಿಯ ಹೊದರ ಹೊಸ ಮೆಳೆಯ ೧

ಹರಿಯ ಚಕ್ರ ವರೂಥ ಚಕ್ರದೊ
ಳುರವಣಿಪ ತೇಜಿಗಳ ಕಡುಹಿನ
ಖುರದ ಹೊಯ್ಲಲಿ ವಿಲಯ ಪವನನ ಗರಿಯ ಗಾಳಿಯಲಿ
ಹರನ ನಯನಜ್ವಾಲೆ ಪಾರ್ಥಿಯ
ಸರಳ ಕಿಡಿಯಲಿ ಪಲ್ಲಟಿಸೆ ಸಂ
ಗರದೊಳಗೆ ಸೈವರಿದು ಸದೆದನು ಸಕಲ ಸೈನಿಕರ ೨

ಮಿಕ್ಕು ನೂಕುವ ಕುದುರೆಕಾರರು
ತೆಕ್ಕೆಗೆಡೆದರು ಸಂದಣಿಸಿ ಕೈ
ಯಿಕ್ಕಿದಾನೆಯನೇನನೆಂಬೆನು ಕಾಣೆನಳವಿಯಲಿ
ಹೊಕ್ಕು ಹರಿಸುವ ರಥ ಪದಾತಿಯ
ನೊಕ್ಕಲಿಕ್ಕಿದನಮಮ ಮಗುವಿನ
ಮಕ್ಕಳಾಟಿಕೆ ಮಾರಿಯಾಯಿತು ವೈರಿ ರಾಯರಿಗೆ ೩

ಕದಳಿಯೊಳು ಮದದಾನೆ ಹೊಕ್ಕಂ
ದದಲಿ ಹೆಚ್ಚಿದ ಚಾತುರಂಗದ
ಮೆದೆಯನೊಟ್ಟಿದು ಹೂಣೆ ಹೊಕ್ಕನು ಥಟ್ಟನೊಡೆತುಳಿದು
ಇದಿರೊಳೆಚ್ಚನು ಕೆಲಬಲದೊಳಿಹ
ಕದನಗಲಿಗಳ ಸೀಳಿದನು ಕಾ
ದಿದನು ಕಾಲನ ಲೀಲೆಯಾದುದು ವಿಷಮ ಸಮರಂಗ ೪

ಜೋಡೊಡೆದು ಥಟ್ಟುಗಿದು ಬೆನ್ನಲಿ
ಮೂಡಲದಟರ ಸೀಳಿದನು ಖುರ
ಜೋಡು ಹುಡಿಹುಡಿಯಾಗೆ ತೇಜಿಯ ಥಟ್ಟ ಖಂಡಿಸಿದ
ನೋಡಲಮ್ಮುವರಿಲ್ಲ ಮಿಗೆ ಕೈ
ಮಾಡಲಮ್ಮುವರಿಲ್ಲ ಬಲದ
ಲ್ಲಾಡಿತೊಬ್ಬನೆ ಹಸುಳೆ ಹೊಕ್ಕನು ವೈರಿ ಮೋಹರವ ೫

ಆವ ವಹಿಲದೊಳಂಬ ತೊಡಚುವ
ನಾವ ವೇಗದೊಳಿದಿರಲೆಸುವನ
ದಾವ ನಿರುತದಲೊಡ್ದುವನು ಕೊರಳಿಂಗೆ ಕೋಲುಗಳ
ಆವ ದೃಢತೆಯೊ ದೃಷ್ಟಿವಾಳವಿ
ದಾವ ಗರುಡಿಶ್ರಮವೆನುತ ದಿವಿ
ಜಾವಳಿಗಳುಲಿಯಲು ವಿಭಾಡಿಸಿದನು ರಿಪುವ್ರಜವ ೬

ಎಡದಲೌಕುವ ರಾವುತರ ವಂ
ಗಡವನೆಚ್ಚನು ಸಮ್ಮುಖದೊಳವ
ಗಡಿಸುವಿಭ ಕೋಟಿಗಳ ಕೊಂದನು ಸರಳ ಸಾರದಲಿ
ಕಡುಗಿ ಬಲದಲಿ ಕವಿವ ರಥಿಕರ
ಕೆಡಹಿದನು ಕಾಲಾಳು ತೇರಿನ
ಗಡಣ ಹುಡಿಹುಡಿಯಾಯ್ತೆನಲು ಸವರಿದನು ಪರಬಲವ ೭

ಉರವಣಿಸಿದರು ಮತ್ತೆ ಭಟರ
ಬ್ಬರವ ಖತಿಯಲಿ ನಿಖಿಳ ಮನ್ವಂ
ತರದ ಕಡೆಯಲಿ ನೆಲನನದ್ದುವ ಕಡಲ ಕಡುಹಿನಲಿ
ಸರಳು ಕಡಿದವು ಸಕುತಿ ಸೆಲ್ಲೆಹ
ಪರಶು ಕವಿದವು ಖಡ್ಗ ತೋಮರ
ಸುರಗಿ ಹೊಳೆದವು ಕೈದು ಹೇರಿದವಖಿಳ ದೆಸೆಗಳಲಿ ೮

ತೊಲಗಿರೈ ಕಾಲಾಳು ಮೇಲಾ
ಳಳವಿಗೊಡಲಿ ಮಹಾರಥರು ಮುಂ
ಕೊಳಲಿ ಜೋದರು ದಿಟ್ಟರಾದರೆ ಕವಿಸಿ ಕರಿಘಟೆಯ
ಕೆಲದ ದೊರೆಗಳು ಬರಲಿ ಮಾರಿದ
ತಲೆಯ ಭಂಡವ ಹೊತ್ತಿರದೆ ಕೈ
ಕೊಳಲಿ ಕರ್ಣಾದಿಗಳೆನುತ ಹೊಕ್ಕೆಚ್ಚನಭಿಮನ್ಯು ೯

ಕಾರಗಲಿಸಿದನಮಮ ರಾಜ ಕು
ಮಾರ ಕಂಠೀರವನು ರಿಪು ಪರಿ
ವಾರವನು ನಡೆಗೊಳಿಸಿದನು ಯಮರಾಜನಾಲಯಕೆ
ಮಾರಿ ಮೊಗವಡದೆರೆದಳೋ ಕೈ
ವಾರವೋ ತರುವಲಿಗಿದೆತ್ತಣ
ವೀರವೋ ಶಿವ ಎನುತ ಬೆರಗಾಯಿತ್ತು ಸುರಕಟಕ ೧೦

ಕೊಡೆನೆಗೆದವಟ್ಟೆಗಳು ರಕುತದ
ಕಡಲೊಳರೆಜೀವದ ಭಟರು ಬಾ
ಯ್ವಿಡುತ ತೇಕಾಡಿದರು ಮುಂಡದ ಹಿಂಡು ಮುಳುಗಾಡೆ
ಅಡಸಿ ನೆಗೆವಾನೆಗಳ ತಲೆಗಳ
ಗಡಣ ಮೆರೆದವು ಮಿಕ್ಕ ತೇಜಿಯ
ಕಡಿಕುಗಳು ಕುಣಿದಾಡಿದವು ಕಿಗ್ಗಡಲ ರಕುತದಲಿ ೧೧

ಕರಿಭಟೆಯ ಕಲಕಿದನು ಹಯ ಮೋ
ಹರವ ಜರುಹಿದನೌಕಿ ಹರಿತಹ
ವರ ರಥವ ಹುಡಿಮಾಡಿದನು ಕೆಡಹಿದನು ಕಾಲಾಳ
ಹುರಿಯೊಡೆದು ಮೈದೆಗೆದು ಸಲೆ ಕೈ
ಮರೆದು ಕೈದುವ ಹಾಯ್ಕಿ ಪಡೆ ಮೊಗ
ದಿರುಹಲೆಚ್ಚನು ಕೊಚ್ಚಿದನು ಕೌರವ ಚತುರ್ಬಲವ ೧೨

ತಳಿತ ಹೊಗರಿನ ಬಾಯಿ ಧಾರೆಯ
ಹೊಳಹುಗಳ ಹೊಸ ಮಸೆಯ ತಳಪದ
ಬೆಳಗುಗಳ ಬಲಿದಿಂಗಲೀಕ ಸುವರ್ಣ ರೇಖೆಗಳ
ಲುಳಿಯ ಹಂಗನ ಗರಿಯ ಬಿಗುಹಿನ
ಹಿಳುಕುಗಳ ಹೊಗರಂಬು ಕವಿದವು
ತುಳುಕಿದವು ತೂರಿದವು ಕೆದರಿದವಹಿತ ಬಲದಸುವ ೧೩

ಅಳವಿಗೆಡೆ ಧುಮ್ಮಿಕ್ಕಿ ರಥದವ
ರಿಳಿಯ ಬಿದ್ದರು ಭಯದಿ ತೇಜಿಯ
ನಿಳಿದು ರಾವ್ತರು ಕರವ ಮುಗಿದರು ಕೊರಳ ಸಲಹೆನುತ
ಗುಳವ ಸಡಿಲಿಸಿ ಹಾಯ್ಕಿ ಜೋದಾ
ವಳಿಗಳಿಳಿದುದು ಕೈಯ ಕೈದುವ
ನಿಳುವ ಬಾಯಲಿ ಬೆರಳನಿಟ್ಟುದು ವೈರಿ ಪಾಯದಳ ೧೪

ಎಸಳ ಮೊನೆ ಮೋಹರದ ಸಂದಣಿ
ಯಸಿರನುಳಿದುದು ಕೇಸರಾಕೃತಿ
ಯಸಮ ವೀರರು ಪಥಿಕರಾದರು ಗಗನ ಮಾರ್ಗದಲಿ
ನುಸುಳಿದರು ಕರ್ಣಿಕೆಯ ಕಾಹಿನ
ವಸುಮತೀಶರು ರಾಯನರನೆಲೆ
ದೆಸೆಗೆಡಲು ಮೊಳಗಿದನು ಪಾರ್ಥಕುಮಾರನಳವಿಯಲಿ ೧೫

ಜರಿದುದಬ್ಜವ್ಯೂಹ ನೂಕಿದ
ಕರಿ ತುರಗ ಕಾಲಾಳು ತೇರಿನ
ಮರಳುದಲೆ ತಾನಿಲ್ಲ ನೆರೆ ನುಗ್ಗಾಯ್ತು ಕುರುಸೇನೆ
ದೊರೆಗಳಹ ದ್ರೋಣಾದಿಗಳು ಕೈ
ಮರೆದು ಕಳೆದರು ಪಾರ್ಥತನಯನ
ಸರಿಯೊರೆಗೆ ಭಟನಾವನೆಂದನು ಕೌರವರ ರಾಯ ೧೬

ತಂದೆ ಹಡೆಯನೆ ಮಗನನಹುದೋ
ಕಂದ ಕಲ್ಪ ಸಹಸ್ರ ನೋಂತಳೊ
ಇಂದುಧರನನು ನಿನ್ನ ತಾಯಿ ಸುಭದ್ರೆಯಲ್ಲದಡೆ
ಇಂದಿನೀ ಬಲವೀ ಸಮರ ಜಯ
ದಂದವೀ ಸೌರಂಭವೀ ಸರ
ಳಂದವೀ ತೆರಳಿಕೆಯದಾವಂಗೆಂದನವನೀಶ ೧೭

ಹುರುಡ ಮರೆದೆನು ಮಗನೆ ಸಾಲದೆ
ಭರತಕುಲದಲಿ ನಿನ್ನ ಬೆಳವಿಗೆ
ಯೆರಡು ಕವಲನ್ವಯಕೆ ಕೊಡದೇ ಸುಗತಿ ಸಂಪದವ
ಕರುಳು ಬೀಳವೆ ತನ್ನ ಬಸುರಿಂ
ದುರುಳಿದವದಿರಲೇನು ಫಲ ಮ
ತ್ಸರವೆ ಪಾರ್ಥ ಕೃತಾರ್ಥನೆಂದನು ಕೌರವರ ರಾಯ ೧೮

ಎನುತ ಬಿಲುದುಡುಕಿದನು ಸೇನಾ
ವನಧಿಗಭಯವನಿತ್ತು ಮರಳುವ
ಜನಪರನು ಜರೆದೆಡಬಲದ ಮನ್ನೆಯರ ಮೂದಲಿಸಿ
ಮೊನೆಗಣೆಯ ತೂಗುತ್ತ ನರ ನಂ
ದನನ ರಥವನು ತರುಬಿ ನಿನ್ನಯ
ತನಯನಡ್ಡೈಸಿದನು ಕೌರವ ರಾಯ ಖಾತಿಯಲಿ ೧೯

ಮಗುವು ನೀ ಕೆಡಬೇಡ ಹೋಗೆನು
ತಗಣಿತಾಸ್ತ್ರವ ಸುರಿವುತೈತರೆ
ನಗುತ ನಿಂದಭಿಮನ್ಯು ನುಡಿದನು ಕೌರವೇಶ್ವರನ
ಮಗುವು ತಾನಹೆ ತನ್ನ ಬಾಣಕೆ
ಮಗುವುತನ ಬೇರಿಲ್ಲ ನೋಡೆಂ
ದಗಲದಲಿ ಕೂರಂಬ ಸುರಿದನು ಪಾರ್ಥನಂದನನು ೨೦

ಎಸಲು ಕಣೆ ಮುಕ್ಕುರುಕಿದವು ಹೊಸ
ಮಸೆಯ ಧಾರೆಯ ತೋರ ಕಿಡಿಯಲಿ
ಮುಸುಕಿತರಸನ ತೇರು ತಳಿತವು ಮೆಯ್ಯೊಳಂಬುಗಳು
ಬಸಿವ ರಕುತವ ಜರಿವ ಜೋಡಿನ
ನಸಿದ ಗರ್ವದ ನೆಗ್ಗಿದಾಳ್ತನ
ದೆಸಕದೊಣಗಿಲ ಬಾಯ ಭೂಪನ ಕಂಡನಾ ದ್ರೋಣ ೨೧

ರಾಯಸಿಲುಕಿದನಕಟಕಟ ರಾ
ಧೇಯ ನಡೆ ಕೃಪ ಹೋಗು ಮಗನೆ ನಿ
ಜಾಯುಧವ ಹಿಡಿ ಶಲ್ಯ ತಡೆಯದಿರೇಳು ಕೃತವರ್ಮ
ರಾಯನನುಜರು ಕೈದುಗೊಳಿ ರಣ
ದಾಯ ತಪ್ಪಿತು ನೃಪತಿ ಮಾರಿಯ
ಬಾಯ ತುತ್ತಾದನು ಶಿವಾ ಎಂದೊರಲಿದನು ದ್ರೋಣ ೨೨

ಮಾತು ಹಿಂಚಿತು ಮುಂಚಿ ಸುಭಟ
ವ್ರಾತ ಹೊಕ್ಕುದು ಸಿಕ್ಕಿದರಸನ
ಭೀತಿಯನು ಬಿಡಿಸಿದರು ಬೀರಿದರಂಬುಗಳ ಮಳೆಯ
ಸೋತೆವಾವ್ ನೀ ಗೆಲಿದೆ ನಿ
ಮ್ಮಾತಗಳನೀ ಭ್ರೂಣಹತ್ಯಾ
ಪಾತಕಕ್ಕಂಜುವೆನೆನುತ ಕೈಕೊಂಡನಾ ದ್ರೋಣ ೨೩

ರಾಯನನು ತೊಲಗಿಸಿದರಾ ಕ
ರ್ಣಾಯತಾಸ್ತ್ರರು ರಾಹುವಿನ ಕಟ
ವಾಯ ಚಂದ್ರನ ಸೆಳೆವವೋಲರಿದಾಯ್ತು ಸುಭುಟರಿಗೆ
ಸಾಯಕವ ಸರಿಗೊಳಿಸಿದರು ವ
ಜ್ರಾಯುಧನ ಮೊಮ್ಮನ ರಥವ ನಿ
ರ್ದಾಯದಲಿ ಮುತ್ತಿದರು ಕುರುಸೇನಾ ಮಹಾರಥರು ೨೪

ಹಸುಳೆತನದಲಿ ಹರನ ಮಗನಾ
ವಿಷಮ ದೈತ್ಯನ ಸೀಳಿ ಬಿಸುಡನೆ
ಶಿಶುವಲಾ ಪ್ರದ್ಯುಮ್ನ ಮುರಿಯನೆ ಶಂಬರಾಸುರನ
ಶಿಶುವೆ ನೋಡಭಿಮನ್ಯು ಸುಭಟ
ಪ್ರಸರದಿನಿಬರನೊಂದು ಘಾಯದೊ
ಳುಸಿರ ತೆಗೆಬಗೆ ಮಾಡಿದನು ಧೃತರಾಷ್ಟ್ರ ಕೇಳೆಂದ ೨೫

ಗುರುಸುತನನೊಟ್ಟೈಸಿ ಶಲ್ಯನ
ಭರವಸವ ನಿಲಿಸಿದನು ಕೃಪನು
ಬ್ಬರದ ಗರ್ವವ ಮುರಿದು ಕೃತವರ್ಮಕನ ನೋಯಿಸಿದ
ಅರಸನನುಜರ ಸದೆದು ಬಾಹ್ಲಿಕ
ದುರುಳ ಸೌಬಲ ಸೋಮದತ್ತರ
ಹುರುಳುಗೆಡಿಸಿದನೊಬ್ಬ ಶಿಶು ಗೆಲಿದನು ಮಹಾರಥರ ೨೬

ಮುಳುಗಿದಂಬಿನ ಮರುಮೊನೆಯ ಮೈ
ಗಳ ಮಹಾರಥರಾಜಿ ಕದನದ
ನೆಲನ ಬಿಡೆ ಖತಿಗೊಂಡು ಮುರಿದೋಡುವರ ಮೂದಲಿಸಿ
ಬಿಲುದುಡುಕಿ ಸಾರಥಿಗೆ ಸೂಚಿಸಿ
ಮಲೆತ ನೋಡೈ ಮಗುವು ಫಡ ಫಡ
ತೊಲಗು ತೊಲಗೆಂದೆನುತ ರಿಪುವನು ತರುಬಿದನು ಕರ್ಣ ೨೭

ಗಾರುಗೆಡೆದರೆ ಮೆರೆಯದೋಲೆಯ
ಕಾರತನವೆಮ್ಮೊಡನೆ ನೀ ಮೈ
ದೋರಿ ಮಡಮುರಿವಿಲ್ಲದೆಚ್ಚಾಡಿದರೆ ಸಫಲವಿದು
ತೋರುವೆನು ಕೈಗುಣವನೆನುತೈ
ದಾರು ಶರದಲಿ ಕರ್ಣನೆದೆಯನು
ಡೋರುಗಳೆಯಲು ಬಳಲಿದನು ಪೂರಾಯ ಘಾಯದಲಿ ೨೮

ಬೆದರಿ ಭೂಕಂಪದಲಿ ಕುಲಗಿರಿ
ಯದಿರುವಂತಿರೆ ಚರಿಸಿ ಕಾಯುವ
ಬಿದಿರಿ ಮರಳುವ ಕಂಗಳಲಿ ಕಲಿಕರ್ಣ ಮೈಮರೆಯೆ
ಕೆದರಿತೀ ಬಲವಕಟ ಕರ್ಣನ
ಸದೆದನೋ ಸಾಹಸಿಕ ಶಿಶು ಕಾ
ದಿದೆವು ನಾವಿನ್ನೆನುತಲಿರೆ ಕಲಿ ಶಲ್ಯನಿದಿರಾದ ೨೯

ಬಾಲಕನೆ ಹಿಮ್ಮೆಟ್ಟು ಹಿಮ್ಮೆ
ಟ್ಟಾಳುತನವೆಮ್ಮೊಡನೆಯೇ ಮರು
ಳೇಳಿಗೆಯಲುಬ್ಬೆದ್ದು ಕರ್ಣನ ಸದೆದ ಗರ್ವದಲಿ
ಮೇಲನರಿಯಾ ಶಲ್ಯನೊಡನೆಯು
ಕಾಳೆಗವೆ ನಿಮ್ಮಯ್ಯನಿಂದಿನ
ಲೂಳಿಗವ ತಹುದೆನುತ ಸುರಿದನು ಸರಳ ಸರಿವಳೆಯ ೩೦

ಬಾಲತನವೇನೂಣಯವೆ ಕ
ಟ್ಟಾಳುತನವಾಭರಣವವನೀ
ಪಾಲ ಸುತರಿಗೆ ವಿದ್ಯವೇ ವಿಪ್ರರಿಗಲಂಕಾರ
ಆಳಿನಂಗವನೆತ್ತ ಬಲ್ಲೆ ಶ
ರಾಳಿಯಲಿ ನಿನ್ನಂಘವಣೆಯ ಛ
ಡಾಳತನವನು ಮುದ್ರಿಸುವೆನೆನುತೆಚ್ಚನಭಿಮನ್ಯು ೩೧

ಸರಳ ಸರಳಲಿ ಕಡಿದು ಸವೆಯದೆ
ಸರಿ ಮಿಗಿಲ ಕಾದಿದರೆ ಶಲ್ಯನ
ಧರಧುರದ ದೆಖ್ಖಾಳತನವನು ಕಂಡು ಖಾತಿಯಲಿ
ಸರಳ ಹದಿನೈದರಲಿ ಶಲ್ಯನ
ಬರಿಯ ಕೆತ್ತಿದನೈದು ಬಾಣದೊ
ಳುರವ ತೋಡಿದನೊಂದು ನಿಮಿಷಕೆ ಶಲ್ಯ ಸೈಗೆಡೆದ ೩೨

ತಲೆ ತಿರುಗಿ ತುಟಿಯೊಣಗಿ ಕಂಗಳ
ಬಳೆ ಮರಳಿ ಬಸವಳಿಯೆ ಸಾರಥಿ
ತೊಲಗಿಸಿದನಾ ರಥವನೊಡಹುಟ್ಟಿದನ ವೇದನೆಯ
ನಿಲುಕಿ ಕಂಡನು ಶಲ್ಯನನುಜನು
ಹಿಳುಕು ಹಿಳುಕಿನ ಮೇಲೆ ಸಂಧಿಸಿ
ಮುಳಿದೆಸುತ ತಾಗಿದನು ಖತಿಯಲಿ ಪಾರ್ಥನಂದನನ ೩೩

ಪೂತು ಶಲ್ಯನ ತಮ್ಮನೇ ಮಾ
ರಾಂತನಣ್ಣನ ಹರಿಬವನು ದಿಟ
ಸೂತ ನೋಡೈ ಸಾಹಸಿಕನೈ ಲೇಸು ಲೇಸೆನುತ
ಆತನಂಬೈದಾರ ಮನ್ನಿಸಿ
ಸೋತುವೊಲು ಮನಗೆಲವ ಮಾಡಿ ನಿ
ಶಾತ ಶರದಿಂದಿಳುಹಿದನು ಶಲ್ಯಾನುಜನ ಶಿರವ ೩೪

ದೊರೆ ಮಡಿಯೆ ಮದ್ರಾನುಜನ ಬಲ
ತಿರುಗಿತಭಿಮನ್ಯುವಿನ ಹೊಯ್ಲಲಿ
ಹುರುಳುಗೆಟ್ಟುದು ಹೆಸರ ನಾಯಕವಾಡಿ ದುಗುಡದಲಿ
ತರಹರವ ನಾ ಕಾಣೆನೀ ಮೋ
ಹರಕೆ ಗತಿಯೇನೆನುತ ಭರದಲಿ
ಕರೆದು ತೋರಿದನಾ ಕೃಪಾಚಾರ್ಯಂಗೆ ಕಲಿ ದ್ರೋಣ ೩೫

ಮಗುವೆ ನೋಡಭಿಮನ್ಯು ನಮಗಿದು
ಹೊಗುವಡಳವೇ ಕಾಲರುದ್ರನ
ತಗಹು ನಿಟ್ಟಂತಿದೆ ಕುಮಾರನ ಕೋಪದಾಟೋಪ
ಮೊಗಸಲರಿದು ಭುಜಪ್ರತಾಪದ
ಹೊಗರು ಹೊಸಪರಿಯೆನುತ ರಿಪುಗಳ
ಹೊಗಳುತಿರೆ ಕೇಳಿದನು ಕೌರವ ರಾಯನೀ ನುಡಿಯ ೩೬

ಕೇಳುತಿರ್ದೈ ಕರ್ಣ ಸೆಲೆ ನ
ಮ್ಮಾಳ ಬೆದರಿಸಿ ನುಡಿದು ರಿಪು ಭಟ
ನಾಳನೇರಿಸಿ ನುಡಿವ ಬಾಹಿರರೇನ ಹೇಳುವೆನು
ಖೂಳರೆಂಬೆವೆ ಗುರುಗಳಿಂದು ವಿ
ಶಾಲಮತಿಗಳು ತಮ್ಮ ಭಾಗ್ಯದ
ಮೇಲೆ ದೈವವನೆಂದು ಫಲವೇನೆನುತ ಬಿಸುಸುಯ್ದ ೩೭

ವೀರರಂಗವನೆತ್ತ ಬಲ್ಲರು
ಹಾರುವರು ಬೆಳುದಿಂಗಳಿನ ಬಿರು
ಸಾರ ಸುಡುವುದು ಕೈದು ಹಿಡಿದರೆ ಕಲಿಗಳೇ ದ್ವಿಜರು
ವೈರಿಭಟನಿವ ಮಗುವಲಾ ಮನ
ವಾರೆ ಕಾದಲು ಲಕ್ಷ್ಯವಿಲ್ಲೀ
ಯೂರುಗರ ಬೈದೇನು ಫಲವೆಂದರಸ ಹೊರವಂಟ ೩೮

ಎನಲು ದುಶ್ಯಾಸನನು ರಾಯನ
ಕನಲಿದನು ಖತಿಯೇಕೆ ಜೀಯಿಂ
ದೆನಗೆ ಬೆಸಸಾ ಸಾಕು ಭಂಡರ ಬೈದು ಫಲವೇನು
ದಿನಪ ದೀವಿಗೆಯಾಗಲುಳಿದೀ
ಬಿನಗು ಬೆಳಗಿನ ಹಂಗು ಬೇಹುದೆ
ದನುಜ ದಿವಿಜರ ದಳಕೆ ತನ್ನನು ಬಿಟ್ಟು ನೋಡೆಂದ ೩೯

ತಳಿತುದೆಡಬಲವಂಕದಲಿ ಹೆ
ಬ್ಬಲ ಛಡಾಳಿಸಿ ಮೊರೆವ ಭೇರಿಯ
ಘುಳುಘುಳು ಧ್ವನಿ ಕೂಡೆ ಜಡಿದುದು ಕಮಲಜಾಂಡಘಟ
ಹಳವಿಗೆಯ ಸೀಗುರಿಯ ಚಮರಾ
ವಳಿಯ ವಿಮಳಚ್ಛತ್ರ ಪಙ್ತೆಯ
ವಳಯದಲಿ ನಭ ಮುಳುಗೆ ಮುತ್ತಿತು (ಪಾ: ಮೂತ್ತಿತು) ಸೇನೆ ರಿಪುಭಟನ ೪೦

ತಿರುಹು ತೇಜಿಯನಿತ್ತಲಿವದಿರ
ನೊರಸಿ ದುಶ್ಯಾಸನನ ಬೆನ್ನಲಿ
ಕರುಳು ತೆಗೆವೆನು ನೋಡು ಸಾರಥಿ ಬೆಚ್ಚಬೇಡೆನುತ
ಅರಗಿನರಸನ ಬಾಗಿಲಲಿ ದ
ಳ್ಳುರಿಗೆ ತಡವೇ ಹೊಕ್ಕು ನಿಮಿಷದೊ
ಳೊರಸಿದನು ಚತುರಂಗ ಬಲವನು ಕೌರವಾನುಜನ ೪೧

ಎಲವೊ ಕೌರವ ಕೊಬ್ಬಿ ನರಿ ಹೆ
ಬ್ಬುಲಿಯ ಕೂಸನು ಬೇಡುವಂದದಿ
ಅಳವನರಿಯದೆ ಅಧಮ ರಥಿಕರ ಕೂಡೆ ತೊಡಕುವರೆ
ಮಲೆತು ನೀನೆನ್ನೊಡನೆ ರಣದಲಿ
ಹಳಚಿ ನೀ ತಲೆವೆರಸಿ ಮರಳಿದ
ಡಿಳುಹುವೆನು ಕೈದುವನು ಶರಸನ್ಯಾಸ ನನಗೆಂದ ೪೨

ಸಾಕು ತರುವಲಿತನದ ಮಾತುಗ
ಳೇಕೆ ಗರುವರ ಮುಂದೆ ವೀರೋ
ದ್ರೇಕದಲಿ ಮೈಮರೆದು ರಣದಲಿ ಹೊಯ್ದು ಹೊಟ್ಟುಗರ
ಆ ಕಿರೀಟಿ ವೃಕೋದರರು ಮೈ
ಸೋಕಿದರೆ ಸಂತೋಷ ನೀನವಿ
ವೇಕಿ ಬಾಲಕನೇನ ಮಾಡುವೆನೆಂದನವ ನಗುತ ೪೩

ಕೊಳಚೆ ನೀರೊಳಗಾಳುತೇಳುತ
ಜಲಧಿ ಕಾಲ್ದೊಳೆಯೆಂಬ ಭಂಡರ
ಮುಳಿದು ಮಾಡುವುದೇನು ಮೊದಲಲಿ ನಮ್ಮ ನೀ ಗೆಲಿದು
ಬಳಿಕ ಭೀಮಾರ್ಜುನರ ಬಯಸುವು
ದೆಲೆ ಮರುಳೆ ನಿನ್ನೊಡಲ ಸೀಳಿಯೆ
ತಿಳಿ ರಕುತದಲಿ ತಾಯ ತುರುಬನು ನಾದಿಸುವೆನೆಂದ ೪೪

ಕಾತರಿಸದಿರು ಬಾಲ ಭಾಷೆಗ
ಳೇತಕೀವು ನೀ ಕಲಿತ ಬಿಲು ವಿ
ದ್ಯಾತಿಶಯವುಂಟಾದಡೆಮ್ಮೊಳು ತೋರು ಕೈಗುಣವ
ಭೀತ ಭಟರನು ಹೊಳ್ಳುಗಳೆದ ಮ
ದಾತಿರೇಕದ ಠಾವಿದಲ್ಲೆಂ
ದೀತನೆಚ್ಚನು ನೂರು ಬಾಣದಲಿಂದ್ರಸುತ ಸುತನ ೪೫

ಬಿಲ್ಲ ಹಿಡಿಯಲು ಕೌರವಾನುಜ
ಬಲ್ಲ ನೋಡೈ ಸೂತ ಮಿಗೆ ತ
ಪ್ಪಲ್ಲ ತಪ್ಪಲ್ಲಂಬು ಬಿದ್ದವು ಗುರಿಯ ಸರಿಸದಲಿ
ನಿಲ್ಲು ನಿಲ್ಲಾದರೆಯೆನುತ ಬಲು
ಬಿಲ್ಲನುಗುಳಿಸಿದನು ಶರೌಘವ
ನೆಲ್ಲಿ ನಭ ದೆಸೆಯೆತ್ತಲೆನೆ ಘಾಡಿಸಿದವಂಬುಗಳು ೪೬

ಅವನ ನೂರಂಬುಗಳ ಕಡಿದವ
ನವಯವವ ಕೀಲಿಸಿದಡಾಕ್ಷಣ
ವವನಿಯಲಿ ಬಲುಗರುಳು ಬಿದ್ದವು ಭಟನ ಕಿಬ್ಬರಿಯ
ಅವಗಡಿಸಿ ಖಾತಿಯಲಿ ಖಳ ಶರ
ನಿವಹವನು ತುಡುಕಿದನು ಕೊಡಹಿದ
ವವನ ನಿಮಿಷದೊಳರ್ಜುನಾತ್ಮಕನಗಣಿತಾಸ್ತ್ರಗಳು ೪೭

ತಾಯ ತುರುಬಿಗೆ ಹಾಯ್ದು ಪಾತಕಿ
ನಾಯ ಕೊಂಡಾಡುವರೆ ಕೊಬ್ಬಿದ
ಕಾಯವನು ಕದುಕಿರಿದು ನೆತ್ತರ ನೊರೆಯ ಬಾಸಣಿಸಿ
ತಾಯ ಕರಸುವೆನೆನುತ ಕಮಳ ದ
ಳಾಯತಾಂಬಕನಳಿಯನನುಪಮ
ಸಾಯಕವ ಹೂಡಿದನು ನೋಡಿದನೊಂದು ಚಿತ್ತದಲಿ ೪೮

ಇವನ ಕೊಂದರೆ ತಂದೆ ಮಿಗೆ ಮೆ
ಚ್ಚುವನೊ ಮುನಿನನೊ ತನ್ನ ನುಡಿ ಸಂ
ಭವಿಸದೆಂಬನೊ ಭೀಮಸೇನನ ಭಾಷೆಗಂಜುವೆನು
ಇವನ ತಾನೇ ಕೊಲಲಿ ನಮಗಿ
ನ್ನಿವನ ತೊಡಕೇ ಬೇಡ ಕದನದೊ
ಳಿವನ ಭಂಗಿಸಿ ಬಿಡುವೆನೆಂದನು ತನ್ನ ಮನದೊಳಗೆ ೪೯

ಕಾಯ್ದುಕೊಳ್ಳೈ ಕೌರಾವಾನುಜ
ಹೊಯ್ದು ಹೋಗಲು ಬಹುದೆ ಹರನಡ
ಹಾಯ್ದೆಡೆಯು ಗೆಲುವೆನು ಕಣಾ ನಿಲ್ಲೆನುತ ತೆಗೆದೆಸಲು
ಬಾಯ್ದೆಗೆದು ಕೇಸುರಿಯ ಕಾರುತ
ಕೈದುವೆದೆಯಲಿ ಕೊಂಡು ಬೆನ್ನಲಿ
ಹಾಯ್ದಡವನೋರ್ಗುಡಿಸಿದನು ಕುರುಸೇನೆ ಕಳವಳಿಸೆ ೫೦

ಅಹಹ ಕೈತಪ್ಪಾಯ್ತು ರಾಯನ
ಸಹಭವನು ನೊಂದನು ಶಿವಾ ಎನು
ತಹಿತ ಸುಭಟರು ಸರಿಯೆ ಸಾರಥಿ ತಿರುಹಿದನು ರಥವ
ಬಹಳ ಬಲ ನುಗ್ಗಾಯ್ತು ಶಿಶುವಿನ
ಸಹಸ ಕುಂದದೆನುತ್ತ ಖತಿಯಲಿ
ಮಿಹಿರಸುತನಡಹಾಯ್ದು ತಡೆದನು ಮತ್ತೆ ಬಾಲಕನ ೫೧

ಸಾರು ಸಾರಭಿಮನ್ಯು ಫಡ ಇ
ನ್ನಾರ ಬಸುರನು ಹೊಗುವೆ ನಿನ್ನವ
ರಾರ ಸಂತತಿ ಮಾಡಿಕೊಳಲಿ ಭವತ್ ಪರೋಕ್ಷದಲಿ
ಭೂರಿ ಬಲವನು ಸದೆವ ಗರ್ವವಿ
ದಾರ ಕೂಡೆ ಧನುರ್ಧರಾಗ್ರಣಿ
ವೀರ ಕರ್ಣ ಕಣಾ ಎನುತ ತೆಗೆದೆಚ್ಚನತಿರಥನ ೫೨

ಬಲ್ಲೆನುಂಟುಂಟಖಿಳ ವೀರರೊ
ಳಿಲ್ಲ ಸರಿದೊರೆ ನಿನಗೆ ಬಾಯಲಿ
ಬಲ್ಲಿದನು ನೀನಹೆ ಭಟಾಂಗದ ಮಾತದಂತಿರಲಿ
ಒಳ್ಳೆ ಗಡ ಪಾವುಡವ ವಾಸುಗಿ
ಯಲ್ಲಿಗಟ್ಟಿತು ಗಡ ಮಹಾಹವ
ಮಲ್ಲ ಮಡ ಮುರಿಯದಿರೆನುತ ಹೊಕ್ಕೆಚ್ಚನಭಿಮನ್ಯು ೫೩

ಇರುಳುರಾಯನ ಮನೆಗೆ ಕಪ್ಪವ
ತೆರುವುದೋ ಹಗಲೆಲವೊ ಕೆಲಬರ
ನಿರಿದ ದರ್ಪವದಾರೊಡನೆ ಫಡ ಮರಳು ಮರಳೆನುತ
ಕಿರುಮೊನೆಯ ಮುಗುಳಂಬುಗಳ ಸೈ
ಗರೆದನಭಿಮನ್ಯುವಿನ ಮೆಯ್ಯಲಿ
ತುರುಗಿದವು ಮರಿದುಂಬಿ ಕೆಂದಾವರೆಗೆ ಕವಿವಂತೆ ೫೪

ಸುರಪನಂಕುಶವೌಕಿದರೆ ಮೆ
ಯ್ಯರಿಯದೈರಾವತಕೆ ಕಬ್ಬಿನ
ಲಿರಿದರಂಜಿಕೆಯುಂಟೆ ನಿನ್ನಯ ಕಣೆಗಳೌಕಿದರೆ
ತರಳುವನೆ ಅಭಿಮನ್ಯುವೆನುತ
ಬ್ಬರಿಸಿ ಕರ್ಣನ ಕಾಯವನು ಹುಗಿ
ಲಿರಿದನೆಂಟಂಬಿನಲಿ ತೋದುದು ತೇರು ರಕ್ತದಲಿ ೫೫

ಮಳೆಗೆ ಮೊಗದಿರುಹುವುದೆ ಬಡಬಾ
ನಳನೆಲವೊ ನಿನ್ನಂಬು ತಾಕಿದ
ರಳುಕುವೆನೆ ತಾನೆನುತ ರವಿಸುತನೆಚ್ಚನತಿರಥನ
ಹಿಳುಕು ಕವಿದವು ಭಟನ ಕೈ ಮೈ
ಗಳಲಿ ಮಿನುಗಿದವಿರುಳು ಮರನಲಿ
ಹೊಳೆದು ಮುತ್ತಿದ ಮಿಂಚುಬುಳುವಿನ ಮಿನುಗಿನಂದದಲಿ ೫೬

ಹೂಣಿಗರು ಕೆಲರಿವರು ಇವದಿರ
ಗೋಣನರಿವರೆ ಇವರ ಜೀವದ
ಕೇಣಿಕಾರರು ಖಾತಿಗೊಂಬರು ಭೀಮ ಫಲಗುಣರು
ಮಾಣದಿವದಿರು ಮತ್ತೆ ರಣದಲಿ
ಕಾಣೆನಿದಕಿನ್ನನುವನೆನುತ
ಕ್ಷೀಣಭುಜಬಲನೆಚ್ಚು ಕಡಿದನು ಸೂತಜನ ಧನುವ ೫೭

ಕೈದು ಮುರಿಯಲು ಮುಂದೆ ನೂಕದೆ
ಹಾಯ್ದನಾ ರವಿಸೂನು ಬಳಿಕಡ
ಹಾಯ್ದು ತಡೆದನು ಬವರವನು ಕರ್ಣಾತ್ಮಜನು ಕಡುಗಿ
ಐದು ಬಾಣದಲವನ ಕೊರಳನು
ಕೊಯ್ದನರ್ಜುನ ಸೂನುವಾತನ
ನೊಯ್ದರಂತಕದೂತರದ್ಬುತವಾಯ್ತು ಸಂಗ್ರಾಮ ೫೮

ಘಾಯವಡೆದನು ಶಲ್ಯ ರವಿಸುತ
ನಾಯುಧವ ಬಿಟ್ಟೋಡಿದನು ಕುರು
ರಾಯನನುಜನು ಬದುಕುವರೆ ಮೆಯ್ಯೆಲ್ಲ ಬಾದಣವು
ಸಾಯದುಳಿದವರಿಲ್ಲ ಮಿಕ್ಕಿನ
ನಾಯಕರೊಳಕಟೆನಲು ಕುರುಬಲ
ಬಾಯ ಬಿಡೆ ಶಲ್ಯನ ಕುಮಾರಕ ಹೊಕ್ಕನಾಹವವ ೫೯

ಆ ಕುಮಾರನ ಸೇನೆ ಗಡಣಿಸಿ
ನೂಕಿತುರವಣಿಸಿದುದು ತುರಗಾ
ನೀಕವಿಭತತಿ ತೂಳಿದವು ತುಡುಕಿದವು ರಥಿನಿಕರ
ತೋಕಿದವು ಕೈದುಗಳ ಮಳೆ ರಣ
ದಾಕೆವಾಳರ ಸನ್ನೆಯಲಿ ಸಮ
ರಾಕುಳರು ಕೆಣಕಿದರು ರಿಪುಕಲ್ಪಾಂತ ಭೈರವನ ೬೦

ಭಟ ಛಡಾಳಿಸಿದನು ಘೃತಾಹುತಿ
ಘಟಿಸಿದಗ್ನಿಯವೋಲು ರಣ ಚೌ
ಪಟ ಚತುರ್ಬಲದೊಳಗೆ ಹೊಕ್ಕನು ಸಿಂಹ ನಾದದಲಿ
ನಿಟಿಲ ನೇತ್ರನ ಕೋಪಶಿಖಿ ಲಟ
ಕಟಿಸುವಂತಿರೆ ಹೆಚ್ಚಿದತಿ ಬಲ
ದಟವಿಯನು ಸವರಿದುದು ಪಾರ್ಥಕುಮಾರ ಶರಜಾಲ ೬೧

ಧರೆ ಬಿರಿಯೆ ಬೊಬ್ಬೆಯಲಿ ಬಲದ
ಬ್ಬರಣೆ ದೆಖ್ಖಾದೆಖ್ಖೆಯಾಗಲು
ಧರಣಿಪತಿ ಮರುಗಿದನು ಮಗನೇನಾದನೋ ಎನುತ
ಕರೆದು ಭೀಮನ ನಕುಳನನು ಸಂ
ಗರಕೆ ಧೃಷ್ಟದ್ಯುಮ್ನ ದ್ರುಪದರ
ಪರಠವಿಸಿ ಕಳುಹಿದನು ಸೌಭದ್ರಂಗೆ ಪಡಿಬಲವ ೬೨

ಗದೆಯ ತಿರುಹುತ ಸಿಂಹನಾದದ
ಲೊದರಿ ಮಗನಾವಡೆಯೆನುತ ನೂ
ಕಿದನು ರಥವನು ತನ್ನ ಸೇನೆಗೆ ಸೀಗುರಿಯ ಬೀಸಿ
ಅದಟನೈತರೆ ಹೋಗಲೀಯದೆ
ಮೊದಲ ಬಾಗಿಲ ಕಟ್ಟಿಕೊಂಡ
ಗ್ಗದ ಜಯದ್ರಥ ಭೀಮನೊಳು ಬಲುಗಾಳೆಗವ ಹಿಡಿದ ೬೩

ತೆರಹುಗೊಡು ಫಡ ಫಡ ಜಯದ್ರಥ
ಹೆರತೆಗೆದು ಸಾರೆನುತ ಹೂಣಿಗ
ನುರುಬಿದರೆ ಮಾರಾಂತು ಭೀಮನ ಕಡುಹ ನಿಲಿಸಿದನು
ಮರೆದು ಕಳೆಯಭಿಮನ್ಯುವನು ಮೈ
ಮರೆಯದೆನ್ನಲಿ ಕಾದು ಮಾತಿನ
ಬಿರುಬಿನಲಿ ಫಲವಿಲ್ಲೆನುತ ಕೆಂಗೋಲ ತೊಡಚಿದನು ೬೪

ಬವರದಲಿ ಕಲಿಪಾರ್ಥನಲ್ಲದೆ
ಪವನತನಯಾದಿಗಳ ಗೆಲುವರೆ
ಶಿವನ ಕೃಪೆಯೆನಗುಂಟು ಮುನ್ನೆನುತಾ ಜಯದ್ರಥನು
ಕವಲುಗೋಲಲಿ ಭೀಮನನು ಪರಿ
ಭವಿಸಿದನು ಸಹದೇವನಕುಳರ
ತಿವಿದು ಧೃಷ್ಟದ್ಯುಮ್ನ ಮೊದಲಾದಗಣಿತರ ಗೆಲಿದ ೬೫

ಪಡಿಬಲವ ಬರಲೀಯದನಿಲಜ
ನೊಡನೆ ಸೈಂಧವ ಕಾದುತಿರಲಿ
ಮ್ಮಡಿಸಿತಾಹವವಿತ್ತ ಮೋಹರ ಮಧ್ಯ ರಂಗದಲಿ
ಕಡುಗಿ ನೂಕುವ ಕದನ ರಾಗಿಗ
ಳೊಡನೆ ಕಾದುವ ಪಾರ್ಥತನಯನ
ಬಿಡಿ ಸರಳು ಬೀರಿದವು ರಮಣರನಮರ ವಧುಗಳಿಗೆ ೬೬

ತರಿದನಾನೆಯ ಥಟ್ಟುಗಳ ಮು
ಕ್ಕುರಿಕಿದನು ಕಾಂಭೋಜ ತೇಜಿಯ
ನುರುಬಿ ಹೊಯ್ದನು ಸೂನಿಗೆಯ ತೇರುಗಳ ತಿಂತಿಣಿಯ
ಮುರಿದನೊಗ್ಗಿನ ಪಾಯ್ದಳವನ
ಳ್ಳಿರಿವ ಹೆಣ ಕುಣಿದಾಡೆ ಭಟ ಬೇ
ಸರದೆ ಕೊಂದನು ವೈರಿಸೇನೆಯನರಸ ಕೇಳೆಂದ ೬೭

ಒರಸಿದನು ಹದಿನೆಂಟು ಸಾವಿರ
ಕರಿ ಘಟೆಯನೈವತ್ತು ಸಾವಿರ
ತುರುಗವನು ಮೂವತ್ತು ಸಾವಿರ ವರ ಮಹಾರಥರ
ಧುರದಿ ಲಕ್ಷ ಪದಾತಿಯನು ಸಂ
ಹರಿಸಿ ಶಲ್ಯ ಕುಮಾರಕನ ಕ
ತ್ತರಿಸಿದನು ಗೋನಾಳಿಯನು ದಿವ್ಯಾಸ್ತ್ರಧಾರೆಯಲಿ ೬೮

ಮಡಿದನಕಟಾ ತಮ್ಮ ಸಖನೆಂ
ದಡಸಿದಳಲಿನೊಳೆದ್ದು ಕೋಪದ
ಕಡುಝಳದ ಕಾಲಾಗ್ನಿ ರುದ್ರನ ಕಣ್ಣ ಹೋಲುವೆಯ
ಸಿಡಿದ ಮೀಸೆಯ ಬಿಗಿದ ಹುಬ್ಬಿನ
ಜಡಿವ ರೋಮಾಂಚನದ ಖಾತಿಯ
ಕಡುಹುಕಾರರು ಮಸಗಿದರು ದುರ್ಯೋಧನಾತ್ಮಕರು ೬೯

ಚಂಡ ಭುಜಬಲನೊಡನೆ ಮಕ್ಕಳ
ತಂಡವೆದ್ದುದು ಬಿಗಿದ ಬಿಲ್ಲಿನ
ದಂಡವಲಗೆಯ ಮುಸುಡಿ ಮುದ್ಗ ಕಠಾರಿಯುಬ್ಬಣದ
ಗಂಡುಗಲಿಗಳು ಕವಿದರದಿರುವ
ಖಂಡಯದ ಮುಡುಹುಗಳ ಗಂಧದ
ಮಂಡನದ ಮೈಸಿರಿಯ ಪರಿಮಳ ಪೂರರೊಗ್ಗಿನಲಿ ೭೦

ತಳಿತ ಸತ್ತಿಗೆಗಳ ವಿಡಾಯಿಯ
ಲೊಲೆವ ಚಮರಿಯ ವಜ್ರ ಮಕುಟದ
ಹೊಳಹುಗಳ ಹೊಗೆ ಮೀಸೆಗೆದರಿನ ಬಿರುದಿನುಬ್ಬಟೆಯ
ಕೆಲಬಲದ ವೇಲಾಯತರ ವೆ
ಗ್ಗಳದ ರಾವ್ತರ ಗಡಣ ನಾಲಗೆ
ದಳೆದುದೆನೆ ಹೊಳೆಹೊಳೆವಡಾಯುಧ ಭಟರು ನೂಕಿದರು ೭೧

ಭಾಪುರೇ ಕೌರವನ ಸುತರಾ
ಟೋಪವೊಳ್ಳಿತು ಬಂದ ಬರವಿನ
ಚಾಪಲದಲೊದಗಿದರೆ ಲೇಸಲ್ಲಿದರ ಫಲವೇನು
ಕಾಪುರುಷರೇ ಕಾಣಬಹುದೆಂ
ದಾ ಪುರಂದರ ಸುತನ ಸುತ ನಿಜ
ಚಾಪವನು ನೇವರಿಸುತ್ತಿದ್ದನು ಬಗೆಯದರಿಬಲವ ೭೨

ಮುಗುಳದಿರು ಶಲ್ಯಾತ್ಮಕನನುಗು
ಳುಗುಳು ನಿನ್ನಯ ಬಸಿರ ಸೀಳಿಯೆ
ತೆಗೆವೆವೆಮ್ಮಯ ಸಖನನೆನುತಾ (ಪಾ: ಸಖನೆನುತಾ) ಲಕ್ಷಣಾದಿಗಳು
ತೆಗೆದೆಸುತ ಮೇಲಿಕ್ಕಿದರು ತಾ
ರೆಗಳು ನೆಣಗೊಬ್ಬಿನಲಿ ರಾಹುವ
ತೆಗೆದು ಬದುಕುಲು ಬಲ್ಲವೇ ಧೃತರಾಷ್ಟ್ರ ಕೇಳೆಂಡ ೭೩

ದಿಟ್ಟರೋ ಲಕ್ಷಣನವರು ಜಗ
ಜಟ್ಟಿಗಳಲಾ ರಾಜಕುಲದಲಿ
ಹುಟ್ಟಿದರೆ ಕೆಲರೀಸು ಚಪಳತೆ ಯಾರಿಗುಂಟೆನುತ
ಕಟ್ಟಿದನು ಕಣೆಗಳಲಿ ಸುತ್ತಲು
ತಟ್ಟಿವಲೆಗಳ ಸೋಹಿನಲಿ ಬೆ
ನ್ನಟ್ಟಿ ಪಾರ್ಥಕುಮಾರ ಸದೆದನು ವೈರಿಮೃಗ ಕುಲವ ೭೪

ಆ ಸುಯೋಧನ ಸುತರ ಸರಳ ವಿ
ಳಾಸವನು ಖಂಡಿಸಿದನವದಿರ
ಬೀಸರಕೆ ಬಂದಡ್ಡ ಬೀಳುವ ಭಟರ ಕೆಡೆಯೆಚ್ಚ
ರೋಷವಹ್ನಿಯ ಕೆದರೆ ಕವಿವ ಮ
ಹೀಶರನು ಮಾಣಿಸಿದನವನೀ
ವಾಸವನು ವಾಸವನ ಮೊಮ್ಮನುದಾರ ಸಮರದಲಿ ೭೫

ಫಡ ಕುಮಾರಕ ದೊದ್ದೆಗರ ಸದೆ
ಬಡಿದ ಗರ್ವಿತತನವಕಟ ನ
ಮ್ಮೊಡನೆಯೇ ನೋಡಿಲ್ಲಿ ಮೇಳವೆ ಸಾರು ಸಾರೆನುತ
ಒಡನೊಡನೆ ನಾರಾಚ ನಿಚಯವ
ಗಡಣಿಸಿದರೇನೆಂಬೆನವರು
ಗ್ಗಡದ ಬಿಲು ವಿದ್ಯಾತಿಶಯವನು ಸಮರಭೂಮಿಯಲಿ ೭೬

ಸರಳ ಮೊನೆಯಲಿ ವೈರಿ ಸುಭಟರ
ಕರುಳ ತೆಗೆದನು ರಣದೊಳಾಡುವ
ಮರುಳ ಬಳಗವ ತಣಿಸಿದನು ಕಡಲಾದುದರುಣಜಲ
ತರಳನರೆಯಟ್ಟಿದನು ಧುರದಲಿ
ದುರುಳ ದುರಿಯೋಧನನ ಮಕ್ಕಳ
ಮರಳಲೀಯದೆ ಭಟರ ಕೇಣಿಯ ಕೊಂಡನಭಿಮನ್ಯು ೭೭

ಉರುಗನಿಕ್ಕಡಿಗಾರ ಹುಲ್ಲಿನ
ಸರವಿಗಂಜುವುದುಂಟೆ ಕರ್ಣಾ
ದ್ಯರನು ಕಡ್ಡಿಗೆ ಬಗೆಯನೀ ಹೂಹೆಗಳ ಗಣಿಸುವನೆ
ಎರಡು ಶರದಲಿ ಲಕ್ಷಣನ ಸಂ
ಹರಿಸಿದನು ಹದಿನೈದು ಬಾಣದ
ಲರಿದನುಳಿದ ಕುಮಾರಕರನಭಿಮನ್ಯು ನಿಮಿಷದಲಿ ೭೮

ತಳಿತ ಚೂತದ ಸಸಿಗಳವನಿಗೆ
ಮಲಗುವಂತಿರೆ ರಾಜಪುತ್ರರು
ಹೊಳೆವ ಪದಕದ ಕೊರಳ ತಲೆಗಿಂಬಾದ ತೋಳುಗಳ
ಬಳಿರಕುತದಲಿ ನನೆದ ಸೀರೆಯ
ತಳಿತ ಖಂಡದ ಬಿಗಿದ ಹುಬ್ಬಿನ
ದಳಿತ ದಂಷ್ಟ್ರಾನನದಲೆಸೆದರು ಸಾಲ ಶಯನದಲಿ ೭೯

ಇಕ್ಕಿದಿರಲಾ ರಾಜಪುತ್ರರ
ನಕ್ಕಟಕಟಾ ಸ್ವಾಮಿದ್ರೋಹರು
ಹೊಕ್ಕಮನೆ ಹಾಳಹುದಲಾ ದ್ರೋಣಾದಿ ನಾಯಕರು
ಹಕ್ಕಲಾದುದು ನಮ್ಮ ಬಲ ಶಿಶು
ಸಿಕ್ಕನಿನ್ನೂ ಪಾಂಡವರ ಪು
ಣ್ಯಕ್ಕೆ ಸರಿಯಿಲ್ಲೆನುತ ಕೌರವರಾಯ ಗರ್ಜಿಸಿದ ೮೦

ಕುಲವ ನೋಡಿದಡಿಲ್ಲ ತನ್ನಯ
ಬಲಹು ನೋಡಿದಡಿಲ್ಲ ಕದನದೊ
ಳುಳಿವ ನೋಡಿದರಿಲ್ಲಲಾ ಪತಿಯೆಂಬ ಪಾತಕಿಯ
ಇಳೆಯೊಳೋಲೆಯಕಾರರೆಂಬರ
ತಲೆಗೆ ತಂದನು ತೃಣವನೆಂದ
ಗ್ಗಳೆಯರನು ಮೂದಲಿಸಿ ಬಯ್ದನು ಸುಯ್ದು ಕುರುರಾಯ ೮೧

ಕೇಳುತಿದ್ದರು ಪತಿಯ ಮೂದಲೆ
ಗಾಳಿಯಲೆ ದಳ್ಳಿಸುವ ಶೌರ್ಯ
ಜ್ವಾಲೆ ಜಡಿದುದು ಖಾತಿಯಲಿ ಹೊಗರೇರಿದಾನನದ
ಆಳುತನವುಬ್ಬೆದ್ದು ಕಡು ಹೀ
ಹಾಳಿಕಾರರು ಕೈದು ಕೊಂಡರು
ಬಾಲಕನ ತರುಬಿದರು ದೊರೆಗಳು ಕೇಳು ಧೃತರಾಷ್ಟ್ರ ೮೨

(ಸಂಗ್ರಹ: ಸತ್ಯ,ಶೈಲ,ಮೋಹನ ಮತ್ತು ಪ್ರಿಯ - ಹಾಸನ)

Wednesday, May 19, 2010

ವಿರಾಟಪರ್ವ: ೦೯. ಒಂಬತ್ತನೆಯ ಸಂಧಿ

ಸೂ.ರಾಯ ಕೌರವ ಸೈನ್ಯ ಕದಳೀ
ವಾಯುವುತ್ತರ ಸಹಿತ ನಿಜಪರ
ರಾಯ ನಂದನ ಬಂದು ಹೊಕ್ಕನು ಮತ್ಸ್ಯಪುರವರವ

ಕೇಳು ಜನಮೇಜಯ ಧರಿತ್ರೀ
ಪಾಲ ಭಂಗದಲಖಿಳ ಕೌರವ
ಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು
ಮೇಲು ಮುಸುಕಿನ ಮೊಗದ ವಾದ್ಯದ
ಮೇಳ ಮೋನದಲಖಿಳ ನೃಪರು ನಿ
ಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ ೦೧

ಬಳಿಕ ಫಲುಗುಣನತ್ತಲಾ ಮರ
ದೊಳಗೆ ಕೈದುವನಿರಿಸಿ ಮುನ್ನಿನ
ಹುಲು ರಥವ ಮೇಳೈಸಿ ಸಾರಥಿತನವನಳವಡಿಸೆ
ಇಳಿದು ಪಾರ್ಥನ ಮೈದಡವಿ ಕಪಿ
ಕುಲಲಲಾಮನು ವನಕೆ ಹಾಯ್ದನು
ಹೊಳಲ ಹೊರೆಯಲಿ ನಿಂದು ನಗುತುತ್ತರನೊಳಿಂತೆಂದ ೦೨

ಕರೆದು ದೂತರಿಗರುಹು ನೀನೇ
ಧುರವ ಜಯಿಸಿದೆನೆನ್ನು ನಾವಿ
ದ್ದಿರವನರುಹದಿರಿಂದು ಪಸರಿಸು ನಿನ್ನ ವಿಕ್ರಮವ
ಅರಸ ನಿನ್ನನೆ ಮನ್ನಿಸಲಿ ಪುರ
ಪರಿಜನಂಗಳು ನಿನ್ನ ವಿಜಯದ
ಹರುಷದಲಿ ಹೆಚ್ಚಿರಲಿ ನೇಮಿಸಿದಂತೆ ಮಾಡೆಂದ ೦೩

ಎನಲು ನೀನೇ ಬಲ್ಲ ಕರ ಲೇ
ಸೆನುತ ದೂತರ ಕರೆದು ಮತ್ಸ್ಯನ
ತನಯ ಕೌರವ ಬಲವ ಜಯಿಸಿದನೆಂದು ಪೇಳುವುದು
ಜನಕನಲ್ಲಿಗೆ ಪೋಗಿಯೆಂದಾ
ತನು ನಿಯಾಮಿಸುತಿರ್ದನತ್ತಲು
ಜನಪ ಕುಂತೀಸುತನು ಸಹಿತೈತಂದನರಮನೆಗೆ ೦೪

ಅರಮನೆಯ ಹೊಕ್ಕವನಿಪತಿಯು
ತ್ತರನ ಕಾಣದೆ ಕಂದನೆತ್ತಲು
ಸರಿದನೆನೆ ರಾಣಿಯರು ಬಿನ್ನವಿಸಿದರು ಭೂಪತಿಗೆ
ಕುರು ಬಲವನಂಗೈಸೆ ಮಿಗೆಯು
ತ್ತರೆಯ ಗುರು ಸಾರಥಿತನವನನು
ಕರಿಸಿದನು ಕೆಲಬಲನ ಹಾರದೆ ಕದನಕೈದಿದನು ೦೫

ಎಂದರೊಡಲೊಳು ಕೂರಲಗು ಮುರಿ
ದಂದದಲಿ ಕಳವಳಿಸಿದನು ಮನ
ನೊಂದನಕಟ ಕುಮಾರನೆತ್ತಲು ರಾಯ ದಳವೆತ್ತ
ಬಂದವರು ಭೀಷ್ಮಾದಿಗಳು ತಾ
ನಿಂದು ತರಹರಿಸುವೊಡೆ ತಾನೇ
ನಿಂದುಧರನೇ ಮರುಳಲಾ ಮಗನೆನುತ ಚಿಂತಿಸಿದ ೦೬

ಮಗಗೆ ಪಡಿಬಲವಾಗಿ ಬಲು ಮಂ
ತ್ರಿಗಳನವನಿಪ ಬೀಳುಗೊಟ್ಟನು
ದುಗುಡದಿಂದಿರೆ ಹೊಳಲ ಕೈಸೂರೆಗಳ ಕಳಕಳದ
ಮೊಗದ ಹರುಷದಲಖಿಳ ದೂತಾ
ಳಿಗಳು ಬಂದುದು ಗುಡಿಯ ಕಟ್ಟಿಸು
ನಗರಿಯಲಿ ಕಳುಹಿದಿರುಗೊಳಿಸು ಕುಮಾರಕನನೆನುತ ೦೭

ರಾಯ ಕುವರ ಪಿತಾಮಹನು ರಿಪು
ರಾಯ ಕುವರ ಕುಠಾರ ಕೌರವ
ರಾಯ ಥಟ್ಟು ವಿಭಾಡ ಕುರುಕುಲ ಗಜಕೆ ಪಂಚಾಸ್ಯ
ಜೀಯ ಬಿನ್ನಹ ಕರ್ಣ ಗುರು ಗಾಂ
ಗೇಯ ಮೊದಲಾದಖಿಳ ಕೌರವ
ರಾಯ ದಳವನು ಗೆಲಿದು ಉತ್ತರ ತುರುವ ಮರಳಿಚಿದ ೦೮

ಕೇಳಿ ಮಿಗೆ ಹಿಗ್ಗಿದನು ತನು ಪುಳ
ಕಾಳಿ ತಳಿತುದು ಬಹಳ ಹರುಷದ
ದಾಳಿಯಲಿ ಮನ ಮುಂದುಗೆಟ್ಟುದು ಕಂಗಳರಳಿದವು
ಲಾಲಿಸುತ ಸರ್ವಾಂಗ ಹರುಷದೊ
ಳಾಳೆ ಜನಪ ಪಸಾಯಿತವ ದೂ
ತಾಳಿಗಿತ್ತನು ಸುಲಿದರವದಿರು ರಾಯನೋಲಗವ ೦೯

ಇದಿರುಗೊಳ ಹೇಳೆನಲು ಸರ್ವಾಂ
ಗದಲಿ ಮಣಿ ಮೌಕ್ತಿಕದ ಸಿಂಗಾ
ರದ ಸುರೇಖೆಯ ಲಲಿತ ಚಿತ್ರಾವಳಿಯ ಮುಸುಕುಗಳ
ಸುದತಿಯರು ಹೊರವಂಟರೊಗ್ಗಿನ
ಮೃದು ಮೃದಂಗದ ಕಹಳೆಗಳು ಸಂ
ಪದದ ಸೊಂಪಿನಲೆಸೆಯೆ ರಾಜಾಂಗನೆಯರನುವಾಯ್ತು ೧೦

ಕವಿದು ನೂಕುವ ಹರುಷವನು ಸಂ
ತವಿಸಲರಿಯೆನು ಕಂಕ ನಿನ್ನೊಡ
ನೆವಗೆ ವಿಮಳ ದ್ಯೂತಕೇಳಿಗೆ ಚಿತ್ತವಾಯ್ತೆನಲು
ಅವನಿಪತಿ ಕೇಳ್ ಜೂಜಿನಲಿ ಪಾಂ
ಡವರು ಸಿಲುಕಿದರವರ ವಿಧಿಯನು
ಭುವನದಲಿ ಬಲ್ಲವರದಾರೆಂದನು ವಿರಾಟಂಗೆ ೧೧

ಅವರು ರಾಜ್ಯವನೊಡ್ಡಿ ಸೋತವೊ
ಲೆವಗೆ ಪಣ ಬೇರಿಲ್ಲ ಹರ್ಷೋ
ತ್ಸವ ಕುಮಾರಾಭ್ಯುದಯ ವಿಜಯಶ್ರವಣ ಸುಖ ಮಿಗಲು
ಎವಗೆ ಮನವಾಯ್ತೊಡ್ಡು ಸಾರಿಯ
ನಿವಹವನು ಹೂಡೆನಲು ಹೂಡಿದ
ನವನಿಪತಿ ನಸುನಗುತ ಹಾಸಂಗಿಯನು ಹಾಯ್ಕಿದನು ೧೨

ಕೇಳಿ ಸಮತಳಿಸಿತ್ತು ಮತ್ಸ್ಯ ನೃ
ಪಾಲನೆಂದನು ಕಂಕ ನೋಡೈ
ಕಾಳಗವನುತ್ತರನು ಗೆಲಿದನು ರಾಯ ಥಟ್ಟಿನಲಿ
ಶೂಲಪಾಣಿಗೆ ಸೆಡೆಯದಹಿತ ಭ
ಟಾಳಿ ಸೋತುದು ದಿವಿಜ ನರರೊಳು
ಹೋಲುವವರುಂಟೇ ಕುಮಾರನನೇನ ಹೇಳೆಂದ ೧೩

ಸೋತುದುಂಟರಿ ಸೇನೆ ಸುರಭಿ
ವ್ರಾತ ಮರಳಿದುದುಂಟು ಗೆಲವಿದು
ಕೌತುಕವಲೇ ಬಗೆಯಲದ್ಭುತವೆಮ್ಮ ಚಿತ್ತದಲಿ
ಮಾತು ಹೋಲುವೆಯಹುದು ಜಗ ವಿ
ಖ್ಯಾತ ಸಾರಥಿಯಿರೆ ಕುಮಾರಗೆ
ಭೀತಿ ಬಳಿಕೆಲ್ಲಿಯದು ತಪ್ಪೇನೆಂದನಾ ಕಂಕ ೧೪

ಎಲೆ ಮರುಳೆ ಸನ್ಯಾಸಿ ಮತ್ಸರ
ದೊಳಗೆ ಮುಳುಗಿದ ಚಿತ್ತ ನಿನ್ನದು
ಗೆಲವಿನಲಿ ಸಂದೇಹವೇ ಹೇಳಾವುದದ್ಭುತವು
ಅಳುಕುವನೆ ಸುಕುಮಾರ ಸಾರಥಿ
ಬಲುಹನುಳ್ಳವನೇ ನಪುಂಸಕ
ನಲಿ ನಿರಂತರ ಪಕ್ಷವೆಂದು ವಿರಾಟ ಖತಿಗೊಂಡ ೧೫

ನಾರಿಯರ ಮೈಗುರುಹು ಪುರುಷರ
ಚಾರು ಚಿಹ್ನವ ಕೂಡಿಕೊಂಡಿಹ
ಸಾರಥಿಯ ದೆಸೆಯಿಂದ ಕುವರನು ಗೆಲಿದನೆಂಬುದನು
ಸೈರಿಸಿದೆ ನಾನಿನ್ನವರೆ ಮ
ತ್ತಾರೊಡನೆ ಮಾತಾಡದಿರು ನಿ
ಸ್ಸಾರ ಹೃದಯನು ಕಂಕ ನೀ ದುಷ್ಟಾತ್ಮ ಹೋಗೆಂದ ೧೬

ಖತಿಯ ಹಿಡಿಯದಿರರಸ ದಿಟ ನೀ
ನತಿಶಯವ ಬಯಸುವರೆ ಜನ ಸ
ಮ್ಮತವು ಸಾರಥಿ ಗೆಲಿದನೆಂದೇ ಹೊಯಿಸು ಡಂಗುರವ
ಸುತನು ಸಾರಥಿಯೆಂದು ಸಾರಿಸು
ವಿತಥವಲ್ಲಿದು ಪಕ್ಷಪಾತ
ಸ್ಥಿತಿಯನಾಡೆವು ಕವಲು ನಾಲಗೆಯಿಲ್ಲ ತನಗೆಂದ ೧೭

ನಿನ್ನ ಮೋಹದ ಕಂಗಳಿಗೆ ಮಗ
ನುನ್ನತೋನ್ನತ ಸತ್ವನೆಂದೇ
ಮುನ್ನ ತೋರಿತು ಹೊಲ್ಲೆಹವೆ ಸಂಸಾರಕ ಭ್ರಮೆಗೆ
ಇನ್ನು ಗೆಲಿದವನಾ ಬೃಹನ್ನಳೆ
ನಿನ್ನ ಮಗಗಳುಕುವರೆ ಭೀಷ್ಮನು
ಕರ್ಣ ಕೃಪ ಗುರು ಗುರುತನೂಭವರೆಂದನಾ ಕಂಕ ೧೮

ಎನಲು ಖತಿ ಬಿಗುಹೇರಿ ಹಲು ಹಲು
ದಿನುತೆ ಕಂಗಳಲುರಿಯನುಗುಳುತ
ಕನಲಿ ಬಿಗಿದೌಡೊತ್ತಿ ಕನಕದ ಸಾರಿಯನು ನೆಗಹಿ
ಜನಪತಿಯ ಹಣೆಯೊಡೆಯಲಿಡೆ ಜಾ
ಜಿನ ಗಿರಿಯ ನಿರ್ಜರದವೊಲು ಭೋಂ
ಕೆನಲು ರುಧಿರದ ಧಾರೆ ಸಿಡಿದುದು ಶಿರದ ಸೆಲೆಯೊಡೆದು ೧೯

ಸೈರಿಸುತ ಕೈಯೊಡ್ಡಿ ರಕುತದ
ಧಾರೆಯನು ಕೈತುಂಬ ಹಿಡಿದತಿ
ಧೀರನೋರೆಯ ನೋಟದಲಿ ಸೈರಂಧ್ರಿಯನು ಕರೆಯೆ
ನಾರಿ ಹರಿತಂದಕಟ ನೊಂದನು
ಕಾರುಣಿಕ ಸನ್ಯಾಸಿಯೆನುತ ವಿ
ಕಾರಿಸದೆ ಸೆರಗಿನಲಿ ತೋದಳು ಬಹಳ ಶೋಣಿತವ ೨೦

ಮಡದಿ ಕರಪಲ್ಲವದಲೊರೆಸಿದ
ಳಡಿಗಡಿಗೆ ಹಣೆಯನು ಕಪೋಲವ
ತೊಡೆದು ತೊಳೆದಳು ಮುಖವನದನವ ಕಂಡು ಬೆರಗಾಗಿ
ಹಿಡಿದೆ ರಕುತವನೇಕೆ ಕಾಮಿನಿ
ನುಡಿ ನಿಧಾನವನಿವರು ನೊಂದರೆ
ಮಿಡುಕಲೇತಕೆ ನೀನೆನುತ ದುರುಪದಿಯ ಬೆಸಗೊಂಡ ೨೧

ಉರಿದು ಹೋಹುದು ನಿನ್ನ ರಾಜ್ಯದ
ಸಿರಿಯು ಬದುಕಿದೆಯೊಂದು ಕಣೆಯಕೆ
ಪರಮ ಯತಿ ಕಾಯಿದನು ಕೈಯಲಿ ತುಂಬಿ ಶೋಣಿತವ
ಅರಸ ಕೇಳೀ ಮುನಿಯ ನೆತ್ತರು
ಧರೆಯೊಳೊಕ್ಕೊಡೆಯಾ ಪ್ರದೇಶವ
ನೊರಸಿ ಕಳೆವುದು ದಿಟ ಬೃಹನ್ನಳೆಗೇರಿಸಿದ ಬಿರುದು ೨೨

ಈಕೆ ಯಾರಿವರಾರು ನಾಟ್ಯ
ವ್ಯಾಕರಣ ಪಂಡಿತ ಬೃಹನ್ನಳೆ
ಯೀಕೆಗೇನಹನರಿಯ ಬಾರದು ಕಾಲು ಕೀಲುಗಳ
ಏಕೆ ನನಗದರರಿತವೆಂದವಿ
ವೇಕಿಯಿರೆ ಬಳಿಕಿತ್ತ ಪುರದಲಿ
ನೂಕು ನೂಕಾಯಿತ್ತು ನೋಡುವ ನೆರವಿಯುತ್ತರನ ೨೩

ಇದಿರು ಬಂದರು ಮಂತ್ರಿಗಳು ವರ
ಸುದತಿಯರು ಸೂಸಿದರು ಸೇಸೆಯ
ನುದಿತ ಮಂಗಳ ಘೋಷ ವಾದ್ಯ ವಿತಾನ ರಭಸದಲಿ
ವದನವಿದೆ ಕಳೆಗುಂದಿ ಜಯದ
ಭ್ಯುದಯ ತಾನೆಂತೆನುತ ವರ ಕೋ
ವಿದರು ತಮ್ಮೊಳಗಾಡುತಿರ್ದರು ಕೂಡೆ ಗುಜುಗುಜಿಸಿ ೨೪

ಎಂದಿನವನುತ್ತರನು ಗಂಗಾ
ನಂದನನನೀ (ಪಾ: ನಂದನನೀ) ಹೂಹೆ ಗೆಲಿದನು
ಸಂದ ಸುಭಟ ದ್ರೋಣ ಕರ್ಣಾದಿಗಳನೋಡಿಸಿದ
ಎಂದು ಕೆಲಬರು ಕೆಲಬರಿವ ಗೆಲಿ
ದಂದವಾಗಿರದೀ ಬೃಹನ್ನಳೆ
ಯಿಂದ ಸಂಭಾವಿಸುವುದೆಂದುದು ಮಂದಿ ತಮತಮಗೆ ೨೫

ಲೀಲೆ ಮಿಗಲುತ್ತರನು ಪುರಜನ
ಜಾಲ ಜೀಯೆನಲಿದಿರು ಬಂದ ನಿ
ವಾಳಿಗಳ ನೂಕಿದನು ಕೈವಾರಿಗಳ ಕೋಪಿಸುತ
ಆಲಿಯವನಿಯ ಬರೆಯೆ ಮುಸುಕಿನ
ಮೇಲು ದುಗುಡದ ಭಾರದಲಿ ರಾ
ಜಾಲಯಕೆ ಬರಲಿದಿರು ಬಂದಪ್ಪಿದನು ನಂದನನ ೨೬

ಬಾ ಮಗನೆ ವಸುಕುಲದ ನೃಪ ಚಿಂ
ತಾಮಣಿಯೆ ಕುರುರಾಯ ಮೋಹರ
ಧೂಮಕೇತುವೆ ಕಂದ ಬಾಯೆಂದಪ್ಪಿ ಕುಳ್ಳಿರಿಸೆ
ಕಾಮಿನಿಯರುಪ್ಪಾರತಿಗಳಭಿ
ರಾಮ ವಸ್ತ್ರ ನಿವಾಳಿ ರತ್ನ
ಸ್ತೋಮ ಬಣ್ಣದ ಸೊಡರು ಸುಳಿದವು ಹರುಷದೊಗ್ಗಿನಲಿ ೨೭

ಬೊಪ್ಪ ಸಾಕೀ ಬಯಲ ಡೊಂಬೆನ
ಗೊಪ್ಪುವುದೆ ವೀರೋಪಚಾರವಿ
ದೊಪ್ಪುವರಿಗೊಪ್ಪುವುದು ತೆಗೆಸೆನಲರಸ ನಸುನಗುತ
ದರ್ಪವುಳ್ಳಂಗೀಸು ಮಂಗಳ
ವೊಪ್ಪದೇನೈ ಜಗದೊಳಾವಂ
ಗಪ್ಪುದೀ ಬಲವೀ ನಿಗರ್ವಿತೆಯೆಂದನಾ ಮತ್ಸ್ಯ ೨೮

ಮಗನೆ ಕರ್ಣ ದ್ರೋಣ ಭೀಷ್ಮಾ
ದಿಗಳನೊಬ್ಬನೆ ಗೆಲಿದೆಯೀ ಕಾ
ಳಗದ ಕಡುಗಲಿತನಗಳುಂಟೇ ಪೂರ್ವ ಪುರುಷರಲಿ
ದುಗುಡವೇಕೆನ್ನಾಣೆ ಹೆತ್ತರ
ಮೊಗಕೆ ಹರುಷವ ತಂದೆಲಾ ಹಂ
ಗಿಗನೆ ನೀ ತಲೆ ಗುತ್ತಲೇಕೆಂದೆತ್ತಿದನು ಮುಖವ ೨೯

ಕಾದಿ ಗೆಲಿದವ ಬೇರೆ ಸಾರಥಿ
ಯಾದ ತನಗೀಸೇಕೆ ನಿಮ್ಮಡಿ
ಯಾದರಿಸಲೊಡೆಮುರಿಚ ಬಲ್ಲನೆ ನಾಚಿಸದಿರೆನಲು
ಕಾದಿದಾತನು ನೀನು ಸಾರಥಿ
ಯಾದವನು ತಂಗಿಯ ಬೃಹನ್ನಳೆ
ವಾದ ಬೇಡಲೆ ಮಗನೆ ಬಲ್ಲೆನು ನಿನ್ನ ವಿಕ್ರಮವ ೩೦

ಅದಟುತನವೆನಗುಂಟೆ ಬೆಂದುದ
ಬೆದಕಿ ನೋಯಿಸಬೇಡ ಹಗಲಿನ
ಕದನವನು ಗೆಲಿದಾತ ಬೇರಿಹ ಬೊಪ್ಪ ನುಡಿಯದಿರು
ಉದಯದಲಿ ಗೆಲಿದಾತನನು ನಿ
ಮ್ಮಿದಿರಿನಲಿ ತೋರುವೆನು ಬೀಳ್ಕೊಡಿ
ಸದನಕೆಂದು ಕುಮಾರ ಕಳುಹಿಸಿಕೊಂಡನರಮನೆಗೆ ೩೧

ಇತ್ತಲರ್ಜುನ ದೇವ ಸಾರಿದ
ನುತ್ತರೆಯ ಭವನವನು ತಾ ತಂ
ದುತ್ತಮಾಂಬರ ವಿವಿಧ ರತ್ನಾಭರಣ ವಸ್ತುಗಳ
ಇತ್ತನಾ ಕನ್ನಿಕೆಗೆ ಮುದ ಮಿಗ
ಲುತ್ತರೆಯ ಮನೆಯಿಂದ ಶಶಿಕುಲ
ಮತ್ತವಾರಣ ಬಂದನಾ ಭೀಮಾಗ್ರಜನ ಹೊರೆಗೆ ೩೨

ಬಳಿಕ ಸಂಕೇತದಲಿ ಭೂಪನ
ನಿಳಯವನು ಕಲಿಭೀಮ ಹೊಕ್ಕನು
ನಳಿನಮುಖಿ ಸಹದೇವ ನಕುಲರು ಬಂದರಾ ಕ್ಷಣಕೆ
ಫಲುಗುಣನು ಹೊಡವಂಟನಿಬ್ಬರಿ
ಗುಳಿದವರು ಪಾರ್ಥಂಗೆ ವಂದಿಸ
ಲೊಲಿದು ಬಿಗಿಯಪ್ಪಿದನು ಪರಿತೋಷದಲಿ ಸಮಬಲರ ೩೩

ಉಳಿದ ನಾಲ್ವರು ಕಲಿ ತ್ರಿಗರ್ತರ
ಗೆಲಿದ ಪರಿಯನು ಪಾರ್ಥ ಕೌರವ
ಬಲವ ಭಂಗಕೆ ತಂದ ಪರಿಯನು ಹೇಳುತಿರುತಿರಲು
ನಿಲುಕಿ ರಾಯನ ಹಣೆಯ ಗಾಯವ
ಬಳಿಕ ಕಂಡನಿದೇನು ನೊಸಲಿಂ
ದಿಳಿವುತಿದೆ ನಸು ರಕ್ತಬಿಂದುಗಳೆಂದನಾ ಪಾರ್ಥ ೩೪

ಅನವಧಾನದೊಳಾಯ್ತು ಸಾಕದ
ನೆನೆಯಲೇತಕೆ ಮಾಣೆನಲು ಮಿಗೆ
ಕನಲುತರ್ಜುನನರಿದನಾ ದ್ರೌಪದಿಯ ಸೂರುಳಿಸಿ
ಮನದಲುರಿದೆದ್ದನು ವಿರಾಟನ
ತನುವ ಹೊಳ್ಳಿಸಿ ರಕುತವನು ಶಾ
ಕಿನಿಯರಿಗೆ ಹೊಯಿಸುವೆನು ಹೊಲ್ಲೆಹವೇನು ಹೇಳೆಂದ ೩೫

ಕಳುಹಬೇಕೇ ಕೀಚಕೇಂದ್ರನ
ಬಳಗವಿದ್ದಲ್ಲಿಗೆ ವಿರಾಟನ
ತಲೆಯ ಋಣ ಸಾಲಿಗನಲೇ ಶಿವ ಶಿವ ಮಹಾದೇವ
ನೆಲದೊಳೊಕ್ಕುದೆ ರಕ್ತವವದಿರ
ಕುಲವ ಸವರುವೆನಿವನ ಸೀಳಿದು
ಬಲಿಯ ಕೊಡುವೆನು ಭೂತಗಣಕೆನುತೆದ್ದನಾ ಭೀಮ ೩೬

ಕಾಕ ಬಳಸಲು ಬೇಡ ಹೋ ಹೋ
ಸಾಕು ಸಾಕೈ ತಮ್ಮ ಮಾಣು
ದ್ರೇಕವನು ನೆಲ ರಕ್ತ ಕಂಡರೆ ನನ್ನ ಮೇಲಾಣೆ
ಈ ಕಮಲಲೋಚನೆಯ ಸೆರಗಿಗೆ
ಸೇಕವಾಯಿತು ರಕುತವತಿ ಸ
ವ್ಯಾಕುಲತೆ ಬೇಡೆಂದು ಗಲ್ಲವ ಹಿಡಿದನನಿಲಜನ ೩೭

ಕೊಂಬೆನಾತನ ಜೀವವನು ಪತಿ
ಯೆಂಬ ಗರ್ವವನವನ ನೆತ್ತಿಯ
ತುಂಬಿ ಬಿಡಲೆರಗುವೆನು ತರಿವೆನು ಮತ್ಸ್ಯಸಂತತಿಯ
ಅಂಬುಜಾಕ್ಷಿಯ ಕೀಚಕನ ಬೇ
ಳಂಬವೀತನ ಕೂಟ ಭೂತ ಕ
ದಂಬ ತುಷ್ಟಿಯ ಮಾಡಬೇಹುದು ಸೆರಗ ಬಿಡಿಯೆಂದ ೩೮

ಇವನ ನಾವೋಲೈಸಿ ಕೈಯೊಡ
ನಿವಗೆ ಮುನಿದೊಡೆಯೇನನೆಂಬುದು
ಭುವನ ಜನವು ಭ್ರಮಿಸದಿರು ಸೈರಣೆಗೆ ಮನ ಮಾಡು
ಎವಗೆ ನೋವಿನ ಹೊತ್ತು ದುಷ್ಕೃತ
ವಿವರಣದ ಫಲವಿದಕೆ ಲೋಗರ
ನವಗಡಿಸಿದೊಡೆ ಹಾನಿಯೆಮಗೆನೆ ಭೀಮನಿಂತೆಂದ ೩೯

ಬರಿಯ ಧರ್ಮದ ಜಾಡ್ಯದಲಿ ಮೈ
ಮರೆದು ವನದಲಿ ಬೇವು ಬಿಕ್ಕೆಯ
ನರಸಿ ತೊಳಲಿದು ಸಾಲದೇ ಹದಿಮೂರು ವತ್ಸರದಿ
ಉರುಕುಗೊಂಡೊಡೆ ರಾಜ ತೇಜವ
ಮೆರೆವ ದಿನವೆಂದಿಹುದು ನೀವಿ
ನ್ನರಿಯಿರೆಮ್ಮನು ಹರಿಯ ಬಿಡಿ ಸಾಕೆಂದನಾ ಭೀಮ ೪೦

ಉದಯದಲಿ ನಾವಿನಿಬರಾತನ
ಸದನದಲಿ ನೃಪಪೀಠವನು ಗ
ರ್ವದಲಿ ನೆಮ್ಮುವೆವಾತ ನಮ್ಮಲಿ ಖೋಡಿಯನು ಹಿಡಿಯೆ
ಮದಮುಖನನೊರಸುವೆವು ಹರುಷದ
ಲಿದಿರುಗೊಂಡೊಡೆ ಮನ್ನಿಸುವ ಮಾ
ತಿದುವೆ ಸನ್ಮತವೆಂದು ಸಂತೈಸಿದನು ಪವನಜನ ೪೧

(ಸಂಗ್ರಹ: ಸುನಾಥ ಮತ್ತು ಜ್ಯೋತಿ ಮಹದೇವ್)
(ಕರಡು ತಿದ್ದಿದ್ದು: ಸಂದೀಪ ನಡಹಳ್ಳಿ)