ಕಾವುದಾನತಜನವ ಗದುಗಿನ ವೀರನಾರಯಣ

ಕಾವುದಾನತಜನವ ಗದುಗಿನ ವೀರನಾರಯಣ
ಚಿತ್ರ ಕೃಪೆ: ಅಚ್ಚುತರಾವ್

Friday, January 8, 2010

ಆದಿಪರ್ವ: ೦೧. ಪೀಠಿಕಾ ಸಂಧಿ

ಶ್ರೀವನಿತೆಯರಸನೆ ವಿಮಲ ರಾ
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನನಿಕರ ದಾತಾರ
ರಾವಾಣಾಸುರ ಮಥನ ಶ್ರವಣ ಸು
ಧಾ ವಿನೂತನ ಕಥನ ಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ ೧

ಶರಣಸಂಗವ್ಯಸನ ಭುಜಗಾ
ಭರಣನಮರ ಕಿರೀಟ ಮಂಡಿತ
ಚರಣ ಚಾರುಚರಿತ್ರ ನಿರುಪಮ ಭಾಳಶಿಖಿನೇತ್ರ
ಕರಣನಿರ್ಮಲ ಭಜಕರಘ ಸಂ
ಹರಣ ದಂತಿ ಚಮೂರು ಚರ್ಮಾಂ
ಬರನೆ ಸಲಹುಗೆ ಭಕುತ ಜನರನು ಪಾರ್ವತೀರಮಣ ೨

ವರಮಣಿಗಳಿಂದೆಸೆವ ಮೌಳಿಯ
ಸರಸಿಜಾರಿಯ ಕಿರಣದೋಳಿಯ
ವಿರಚಿಸಿದ ಸಿಂಧೂರಭಾಳದಿ ಕುಣಿವ ಕುಂತಳದ
ಕರಿ ನಿಭಾಕೃತಿಯೆನಿಪ ವದನದ
ಕರದ ಪಾಶದ ಮೋದಕದ ವಿ
ಸ್ತರದ ಗಣಪತಿ ಮಾಡೆಮಗೆ ನಿರ್ವಿಘ್ನದಾಯಕವ ೩

ಗಜಮುಖನೆ ಮೆರೆವೇಕದಂತನೆ
ನಿಜಗುಣಾನ್ವಿತ ಪರಶುಧಾರನೆ
ರಜತಗಿರಿಗೊಡೆಯನ ಕುಮಾರನೆ ವಿದ್ಯೆವಾರಿಧಿಯೆ
ಅಜನು ಹರಿ ರುದ್ರಾದಿಗಳು ನೆರೆ
ಭಜಿಸುತಿಹರನವರತ ನಿನ್ನನು
ತ್ರಿಜಗವಂದಿತ ಗಣಪ ಮಾಳ್ಪುದು ಮತಿಗೆ ಮಂಗಳವ ೪

ವಾರಿಜಾಸನೆ ಸಕಲಶಾಸ್ತ್ರ ವಿ
ಚಾರದುದ್ಭವೆ ವಚನರಚನೋ
ದ್ಧಾರೆ ಶ್ರುತಿ ಪೌರಾಣದಾಗಮ ಸಿದ್ದಿದಾಯಕಿಯೆ
ಶೌರಿ ಸುರಪತಿ ಸಕಲ ಮುನಿಜನ
ಸೂರಿಗಳಿಗನುಪಮದ ಯುಕುತಿಯೆ
ಶಾರದೆಯೆ ನರ್ತಿಸುಗೆ ನಲಿನೊಲಿದೆನ್ನ ಜಿಹ್ವೆಯಲಿ ೫

ಆದಿ ನಾರಾಯಣಿ ಪರಾಯಣಿ
ನಾದಮಯೆ ಗಜಲಕ್ಷ್ಮಿ ಸತ್ವಗು
ಣಾಧಿದೇವತೆ ಅಮರ ವಂದಿತ ಪಾದಪಂಕರುಹೆ
ವೇದಮಾತೆಯೆ ವಿಶ್ವತೋಮುಖೆ
ಯೈದು ಭೂತಾಧಾರಿಯೆನಿಪೀ
ದ್ವಾದಶಾತ್ಮ ಜ್ಯೋತಿರೂಪಿಯೆ ನಾದೆ ಶಾರದೆಯೆ ೬

ವೀರನಾರಾಯಣನೆ ಕವಿ ಲಿಪಿ
ಕಾರ ಕುವರವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ದನರು
ಚಾರುಕವಿತೆಯ ಬಳಕೆಯಲ್ಲ ವಿ
ಚಾರಿಸುವೊಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ ೭

ಶ್ರೀಮದಮರಾಧೀಶ ನತಪದ
ತಾಮರಸ ಘನವಿಪುಳ ನಿರ್ಮಲ
ರಾಮನುಪಮ ಮಹಿಮ ಸನ್ಮುನಿ ವಿನುತ ಜಗಭರಿತ
ಶ್ರೀಮದೂರ್ಜಿತ ಧಾಮ ಸುದಯಾ
ನಾಮನಾಹವ ಭೀಮ ರಘುಕುಲ
ರಾಮ ರಕ್ಷಿಸುವೂಲಿದು ಗದುಗಿನ ವೀರನಾರಯಣ ೮

ಶರಧಿಸುತೆ ಸನಕಾದಿ ವಂದಿತೆ
ಸುರನರೋರಗ ಮಾತೆ ಸುಜನರ
ಪೂರೆವ ದಾತೆ ಸುರಾಗ್ರಗಣ್ಯಸುಮೌನಿ ವರಸ್ತುತ್ಯೆ
ಪರಮ ಕರುಣಾ ಸಿಂಧು ಪಾವನ
ಚರಿತೆ ಪದ್ಮಜ ಮುಖ್ಯ ಸಕಲಾ
ಮರ ಸುಪೂಜಿತೆ ಲಕ್ಷ್ಮಿ ಕೊಡುಗೆಮಗಧಿಕ ಸಂಪದವ ೯

ಗಜಮುಖನ ವರಮಾತೆ ಗೌರಿಯೆ
ತ್ರಿಜಗದರ್ಚಿತ ಚಾರು ಚರಣಾಂ
ಭುಜೆಯೆ ಪಾವನಮೂರ್ತಿ ಪದ್ಮಜಮುಖ್ಯ ಸುರಪೂಜ್ಯೆ
ಭಜಕರಘ ಸಂಹರಣೆ ಸುಜನ
ವ್ರಜ ಸುಸೇವಿತೆ ಮಹಿಷ ಮರ್ದಿನಿ
ಭುಜಗ ಭೂಷಣನರಸಿ ಕೊಡು ಕಾರುಣ್ಯದಲಿ ಮತಿಯ ೧೦

ದುರಿತಕುಲಗಿರಿ ವಜ್ರದಂಡನು
ಧರೆಯ ಜಂಗಮ ಮೂರ್ತಿ ಕವಿ ವಾ
ರಿರುಹ ದಿನಮಣಿ ನಿಖಿಲ ಯತಿಪತಿ ದಿವಿಜವಂದಿತನು
ತರಳನನು ತನ್ನವನೆನುತ ಪತಿ
ಕರಿಸಿ ಮಗನೆಂದೊಲಿದು ಕರುಣದಿ
ವರವನಿತ್ತನು ದೇವ ವೇದವ್ಯಾಸ ಗುರುರಾಯ ೧೧

ವಂದಿತಾಮಳ ಚರಿತನಮರಾ
ನಂದ ಯದುಕುಲ ಚಕ್ರವರ್ತಿಯ
ಕಂದ ನತಸಂಸಾರ ಕಾನನ ಘನ ದವಾನಳನು
ನಂದನಂದನ ಸನ್ನಿಭನು ಸಾ
ನಂದದಿಂದಲೆ ನಮ್ಮುವನು ಕೃಪೆ
ಯಿಂದ ಸಲಹುಗೆ ದೇವ ಜಗದಾರಾಧ್ಯ ಗುರುರಾಯ ೧೨

ತಿಳಿಯ ಹೇಳುವೆ ಕೃಷ್ಣಕಥೆಯನು
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ
ಹಲವು ಜನ್ಮದ ಪಾಪ ರಾಶಿಯ
ತೊಳೆವ ಜಲವಿದು ಶ್ರೀಮದಾಗಮ
ಕುಲಕೆ ನಾಯಕ ಭಾರತಾಕೃತಿ ಪಂಚಮ ಶ್ರುತಿಯ ೧೩

ಪದದಪ್ರೌಢಿಯ ನವರಸಂಗಳ
ವುದಿತವೆನುವಭಿಧಾನ ಭಾವವ
ಬೆದಕಲಾಗದು ಬಲ್ಲ ಪ್ರೌಢರುಮಾ ಕಥಾಂತರಕೆ
ಇದ ವಿಚಾರಿಸೆ ಬರಿಯ ತೊಳಸಿಯ
ವುದಕದಂತಿರೆಯಲ್ಲಿ ನೋಳ್ಪುದು
ಪದುಮನಾಭನ ಮಹಿಮೆ ಧರ್ಮವಿಚಾರ ಮಾತ್ರವನು ೧೪

ಹಲಗೆ ಬಳಪವ ಪಿಡಿಯದೊಂದ
ಗ್ಗಳಿಕೆ ಪದವಿಟ್ಟಳುಪದೊಂದ
ಗ್ಗಳಿಕೆ ಪರರೊಡ್ಡವದ ರೀತಿಯ ಕೊಳ್ಳದಗ್ಗಳಿಕೆ
ಬಳಸಿ ಬರೆಯಲು ಕಂಠಪತ್ರದ
ವುಲುಹುಗೆಡದಗ್ಗಳಿಕೆಯೆಂಬೀ
ಬಲುಹು ಗದುಗಿನ ವೀರನಾರಾಯಣನ ಕಿಂಕರಗೆ ೧೫

ಕೃತಿಯನವಧರಿಸುವುದು ಸುಕವಿಯ
ಮತಿಗೆ ಮಂಗಳವೀವುದಧಿಕರು
ಮಥಿಸುವುದು ತಿದ್ದುವುದು ಮೆರೆವುದು ಲೇಸ ಸಂಚಿಪುದು
ನುತಗುಣರು ಭಾವುಕರು ವರಪಂ
ಡಿತರು ಸುಜನರು ಸೂಕ್ತಿಕಾರರು
ಮತಿಯನೀವುದು ವೀರನಾರಯಣನ ಕಿಂಕರಗೆ ೧೬

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಿಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ ೧೭

ಹರಿಯ ಬಸುರೊಳಗಖಿಲ ಲೋಕದ
ವಿರಡವಡಗಿಹವೋಲು ಭಾರತ
ಶರಧಿಯೊಳಗಡಗಿಹವನೇಕ ಪುರಾಣ ಶಾಸ್ತ್ರಗಳು
ಪರಮ ಭಕ್ತಿಯಲೀ ಕೃತಿಯನವ
ಧರಿಸಿ ಕೇಳ್ದಾನರರ ದುರಿತಾಂ
ಕುರದ ಬೇರಿನ ಬೇಗೆಯೆಂದರುಹಿದನು ಮುನಿನಾಥ ೧೮

ಅರಸುಗಳಿಗಿದು ವೀರ ದ್ವಿಜರಿಗೆ
ಪರಮ ವೇದದ ಸಾರ ಯೋಗೀ
ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ
ವಿರಹಿಗಳ ಶೃಂಗಾರ ವಿದ್ಯಾ
ಪರಿಣತರಲಂಕಾರ ಕಾವ್ಯಕೆ
ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ ೧೯

ವೇದ ಪಾರಾಯಣದ ಫಲ ಗಂ
ಗಾದಿ ತೀರ್ಥಸ್ನಾನ ಫಲ ಕೃ
ಚ್ಛ್ರಾದಿ ತಪಸಿನ ಫಲವು ಜ್ಯೋತಿಷ್ಟೋಮಯಾಗ ಫಲ
ಮೇದಿನಿಯನೊಲಿದಿತ್ತ ಫಲ ವ
ಸ್ತ್ರಾದಿ ಕನ್ಯಾದಾನ ಫಲವಹು
ದಾದರಿಸಿ ಭಾರತದೊಳೊಂದಕ್ಷರವ ಕೇಳ್ದರಿಗೆ ೨೦

ಹೇಮ ಖುರ ಶೃಂಗಾಭರಣದಲಿ
ಕಾಮಧೇನು ಸಹಸ್ರ ಕಪಿಲೆಯ
ಸೋಮ ಸೂರ್ಯ ಗ್ರಹಣದಲಿ ಸುರನದಿಯ ತೀರದಲಿ
ಶ್ರೀಮುಕುಂದಾರ್ಪಣವೆನಿಸಿ ಶತ
ಭೂಮಿದೇವರಿಗಿತ್ತ ಫಲವಹು
ದೀ ಮಹಾಭಾರತದೊಳೊಂದಕ್ಷರವ ಕೇಳ್ದರಿಗೆ ೨೧

ಚೋರ ನಿಂದಿಸಿ ಶಶಿಯ ಬೈದಡೆ
ಕ್ಷೀರವನು ಕ್ಷಯರೋಗಿ ಹಳಿದರೆ
ವಾರಣಾಸಿಯ ಹೆಳವ ನಿಂದಿಸಿ ನಕ್ಕರೇನಹುದು
ಭಾರತದ ಕಥನ ಪ್ರಸಂಗವ
ಕ್ರೂರ ಕರ್ಮಿಗಳೆತ್ತ ಬಲ್ಲರು
ಘೋರತರ ರೌರವವ ಕೆಡಿಸುಗು ಕೇಳ್ದ ಸಜ್ಜನರ ೨೨

ವೇದಪುರುಷನ ಸುತನ ಸುತನ ಸ
ಹೋದರನ ಮೊಮ್ಮಗನ (ಪಾ: ಹೆಮ್ಮಗನ) ಮಗನ ತ
ಳೋದರಿಯ ಮಾತುಳನ ರೂಪ (ಮಾವ)ನನತುಳ ಭುಜಬಲದಿ
ಕಾದಿ ಗೆಲಿದವನಣ್ಣನವ್ವೆಯ
ನಾದಿನಿಯ ಜಠರದಲಿ ಜನಿಸಿದ
ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ ೨೩

(ಸಂಗ್ರಹ: ಶ್ರೀಕಾಂತ್)

16 comments:

sunaath said...

೧೫ನೆಯ ನುಡಿಯ ಕೊನೆಯ ಸಾಲಿನಲ್ಲಿ ’ಕಿಂಕರಗೆ’ಬದಲಾಗಿ, ’ಕಿಂಕರಿಗೆ‘ ಆಗಿದೆ. ದಯವಿಟ್ಟು ಸರಿಪಡಿಸಿ.

gadugina bharata said...

ಗಮನಕ್ಕೆ ತಂದದ್ದಕ್ಕೆ ವಂದನೆಗಳು. ತಿದ್ದಲಾಗಿದೆ.

ಶಿವರಾಮ ಭಟ್ said...

tappu saripadisida saalugalu

ವೇದಪುರುಷನ ಸುತನ ಸುತನ ಸ



ಹೋದರನ ಮೊಮ್ಮಗನ ಮಗನ ತ


ಳೋದರಿಯ ಮಾತುಳನ ಮಾವನನತುಳ ಭುಜಬಲದಿ


ಕಾದಿ ಗೆಲಿದವನಣ್ಣನವ್ವೆಯ


ನಾದಿನಿಯ ಜಠರದಲಿ ಜನಿಸಿದ


ಆದಿ ಮೂರುತಿ ಸಲಹೊ ಗದುಗಿನ ವೀರನಾರಯಣ ೨೩




ವೇದಪುರುಷ - ಮಹಾವಿಷ್ಣು


ಸುತನ - ಬ್ರಹ್ಮ ಸುತ - ನಾರದ ಸಹೋದರ- ಮರೀಚಿ

ಮೊಮ್ಮಗ - ಇಂದ್ರ [ಮರೀಚಿಯ ಮಗ ಕಶ್ಯಪನ ಮಗ ]

ಮಗ - ಅರ್ಜುನ - ಅರ್ಜುನನನ ತಳೋದರಿ - ಸುಭದ್ರೆ

ಸುಭದ್ರೆಯ ಮಾತುಳ - ಕಂಸ

ಕಂಸನ ಮಾವ - ಜರಾಸಂಧ

ಜರಾಸಂಧನ ಕಾದಿ ಗೆಲಿದವ - ಭೀಮ

ಭೀಮನ ಅಣ್ಣ- ಧರ್ಮರಾಜ

ಧರ್ಮಜನ ಅವ್ವೆ - ಕುಂತಿ

ಕುಂತಿಯ ನಾದಿನಿ - ದೇವಕಿ

ದೇವಕಿಯ ಹೊಟ್ಟೆಯಲ್ಲಿ ಹುಟ್ಟಿದ ಆದಿ ಮೂರುತಿ - ಕೃಷ್ಣ = ಗದುಗಿನ ವೀರನಾರಾಯಣ

gadugina bharata said...

ಶಿವರಾಮ ಭಟ್ಟರೇ, ತಿದ್ದುಪಡಿಗೆ ಧನ್ಯವಾದ. ತಮ್ಮ ಪಾಠ, ಅನ್ವಯ ಬಹಳ ಸರಿಯಾಗಿದೆ. ಈ ಪಾಠಾಂತರದ ಬಗ್ಗೆ ಬಹಳಷ್ಟು ಚರ್ಚೆಗಳಾಗಿವೆ. ಸಧ್ಯಕ್ಕೆ ನಾವು ಮೈಸೂರು ವಿಶ್ವವಿದ್ಯಾಲಯದ ಪ್ರಕಟಣೆಯನ್ನು ಆಧಾರವಾಗಿ ಬಳಸುತ್ತಿದ್ದೇವೆ. ಈ ಪಾಠಾಂತರವನ್ನೂ ಇಲ್ಲಿ ನಮೂದಿಸಿದ್ದೇವೆ.

Ragu Kattinakere said...

"ಹರಣ ದಂತಿ ಚಮೂರು ಚರ್ಮಾಂ" ಇದು "ಹರಣ ದಂತಿಚಮೂರು ಚರ್ಮಾಂ" ಆಗಬೇಕೆನಿಸುತ್ತದೆ. ಆಗ - ದ೦ತಿಚ೦ ಊರು ಚರ್ಮಾ೦ಬರನೆ - ಎ೦ದು ವಿಭಜಿಸಬಹುದು ಎನಿಸುತ್ತದೆ.

Manjunatha Kollegala said...

ರಘು ಅವರೇ, "ದಂತಿ ಚಮೂರು ಚರ್ಮಾಂಬರನೆ" ಎನ್ನುವುದು ಸರಿಯಾದ ಪಾಠ. ಚಮೂರು ಎಂದರೆ ಒಂದುಜಾತಿಯ ಜಿಂಕೆ. ಶಿವನು ಆನೆ ಮತ್ತು ಜಿಂಕೆಗಳ ಚರ್ಮವನ್ನು ಧರಿಸುತ್ತಾನೆ ಎಂದರ್ಥ. "ದಂತಿಚಂ ಊರು ಚರ್ಮಾಂಬರನೆ" ಎನ್ನುವದು ಸಂದರ್ಭಕ್ಕೆ ಸರಿಹೊಂದುವುದಿಲ್ಲ, ಏಕೆಂದರೆ ದಂತಿಚಂ ಎಂಬುದಕ್ಕೆ ಅರ್ಥವಿಲ್ಲ, ಮತ್ತು ಊರು (ತೊಡೆ) ಎನ್ನುವ ಅರ್ಥ ಈ ಸಂದರ್ಭಕ್ಕೆ ಸರಿಹೊಂದುವುದಿಲ್ಲ.

Ragu Kattinakere said...

ಹೌದು ತಪ್ಪಾಗಿ ಬಿಡಿಸಿ ಓದುತ್ತಿದ್ದೆ. ವಿವರಿಸಿ ಸರಿಪಡಿಸಿದ್ದಕ್ಕೆ ತುಂಬಾ ಧನ್ಯವಾದಗಳು.

Subramanya Sastry.M.R said...

ishtondu shrama vahisi I uttma kaaryavannu maaDiruva nimage mttu nimma geleyarige nanna hrutpuurvaka dhanyavaadgalu.
-subramanya sastry

VENKATRAMAN MARATHI said...

I appreciate this job...Thanks all of you..

Unknown said...

ಅದ್ಭುತ ಪ್ರಯತ್ನ. ಬಹಳ ಧನ್ಯವಾದಗಳು.

vidya said...

ಮಾನ್ಯರೇ ಮೇಲೆ ತಲೆಬರಹದಲ್ಲಿ ವೀರನಾರಾಯಣನ ಚಿತ್ರದ ಕೆಳಗೆ((ಕಾವುದಾನತಜನವ ಗದುಗಿನ ವೀರನಾರಯಣ))ಎಂದಿದೆ. ಇದು ಕಾವುದಾತನಜನವ ವೀರನಾರಾಯಣ ಎಂದರೆ ಸೂಕ್ತವಲ್ಲವೆ? ವಿವರಿಸುತ್ತೀರಾ?

Manjunatha Kollegala said...

ವಿದ್ಯಾ ಅವರೇ,

ಕಾವುದು ಆ ನತ ಜನವ = ಕಾವುದಾನತಜನವ ಎಂಬುದು ಸರಿ. ನತ = ಬಾಗಿರುವ, ತಲೆವಾಗಿರುವ, ನಮಸ್ಕರಿಸಿರುವ. ನಿನ್ನ ಮುಂದೆ ತಲೆವಾಗಿರುವ ಜನವನ್ನು ಕಾಪಾಡು ಎಂಬುದು ಈ ಸಾಲಿನ ಭಾವಾರ್ಥ.

Mala H N said...

ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ, ಅಲ್ಲವೇ ?

Mala H N said...

ಶಾರದೆಯೆ ನರ್ತಿಸುಗೆ ನಲಿದೊಲಿದೆನ್ನ ಜಿಹ್ವೆಯಲಿ, ಅಲ್ಲವೇ ?

Unknown said...

ಮಾನ್ಯರೆ,
ಈ ಮಹಾಕಾವ್ಯವನ್ನು ಡಿಜಿಟೈಜ಼್ ಮಾಡಿರುವ ತಮ್ಮೆಲ್ಲರ ಶ್ರಮ ಅಗಾಧವಾದುದು. ತಮಗೆ ಅನ೦ತ ವ೦ದನೆಗಳು. ಪಾಠದಲ್ಲಿ ಇನ್ನೂ ಅನೇಕ ಕಾಗುಣಿತದ ತಪ್ಪುಗಳು ಉಳಿದುಹೋಗಿವೆ. ಉದಾ: ಸಿದ್ದಿದಾಯಕಿಯೆ - ಸಿದ್ಧಿದಾಯಕಿಯೆ ಎ೦ದಿರಬೇಕು (ಆದಿಪರ್ವ-ಪೀಠಿಕಾಸ೦ಧಿ-೫ನೆಯ ಪದ್ಯದ ಮೂರನೆಯ ಸಾಲು); ಚರಣಾ೦ಭುಜೆಯೆ - ಚರಣಾ೦ಬುಜೆಯೆ ಎ೦ದಿರಬೇಕು (ಆದಿಪರ್ವ-ಪೀಠಿಕಾಸ೦ಧಿ-೧೦ನೆಯ ಪದ್ಯದ ಮೂರನೆಯ ಮತ್ತು ನಾಲ್ಕನೆಯ ಸಾಲುಗಳು). ನಾನು ಈಗತಾನೇ ಈ ಕಾವ್ಯನಿಧಿಯನ್ನು ಓದಲು ಪ್ರಾರ೦ಭಿಸಿದ್ದೇನೆ. ಮೇಲಿನ ಎರಡು ತಪ್ಪುಗಳನ್ನು ತಿದ್ದಿ ಸೇವ್ ಮಾಡಿದ್ದೇನೆ. ಮು೦ದೆ ಓದುತ್ತಾ ಹೋದ೦ತೆ ಕಾಣಸಿಗುವ ತಪ್ಪುಗಳನ್ನೂ ತಿದ್ದಿ ಸೇವ್ ಮಾಡುತ್ತೇನೆ.
ಈ ಕೆಲಸ ಪೂರ್ಣ ಮುಗಿದಮೇಲೆ ತಾವು ಬಯಸಿದರೆ (ನನ್ನದು ಉದ್ಧಟತನವೆ೦ದು ಭಾವಿಸದಿದ್ದರೆ) ತಮಗೆ ಆ ಪ್ರತಿಯನ್ನು ಕಳುಹಿಸಬಲ್ಲೆ.
ಎಸ್ ಆರ್ ಶಾ೦ತಾರಾಮ್ ಭಟ್ (ಸ೦. ದೂರವಾಣಿ: ೯೪೪೮೨೩೭೪೭೪)
Email: srsbhat@gmail.com

Ajayakumara K said...

‘ತಿಣುಕಿದನು ಫಣಿರಾಯ‘ ಪದ್ಯದಲ್ಲಿ ‘ಬಣಗು ಕವಿಗಳ ಲೆಕ್ಕಿಪನೆ‘ ಎ೦ದಿದೆ. ‘ಬಣಗು ಕವಿಗಳ ಬಗೆವನೇ‘ ಎ೦ದು ನಾನು ಒ೦ದು ಪಾಠಾ೦ತರದಲ್ಲಿ ಓದಿದ್ದೇನೆ. ನನಗೆ ‘ಬಗೆವನೇ‘ ಎ೦ಬುದು ‘ಲೆಕ್ಕಿಪನೆ‘ ಎ೦ಬುದಕ್ಕಿ೦ತ ಓದಲು ಸುಲಲಿತ ಎ೦ದು ಅನಿಸುತ್ತದೆ.